Homeಕರ್ನಾಟಕದಕ್ಷಿಣ ಕನ್ನಡ ಡಿಸಿ ಸಿಂಧೂ ಅವರಿಗೆ ಕೊಲ್ಲುವ ಬೆದರಿಕೆ ಹಾಕಿದ್ದೇಕೆ?

ದಕ್ಷಿಣ ಕನ್ನಡ ಡಿಸಿ ಸಿಂಧೂ ಅವರಿಗೆ ಕೊಲ್ಲುವ ಬೆದರಿಕೆ ಹಾಕಿದ್ದೇಕೆ?

- Advertisement -
- Advertisement -

ದಕ್ಷಿಣ ಕನ್ನಡ ಯಾವ ಮೂಲೆಯಲ್ಲಿ ನಿಂತು ಎಂಥ ತಾಳೆಹಾಕಿ ಲೆಕ್ಕಮಾಡಿದರೂ ಇದೊಂದು ಸಂಘಪರಿವಾರದ ರಿಪಬ್ಲಿಕ್ ಎಂಬುದು ಪಕ್ಕಾ ಆಗುತ್ತದೆ! ಸಂಸ್ಕೃತಿ ಹಾಗೂ ಗೋರಕ್ಷಣೆ ಮುಖವಾಡ ಹೊದ್ದ ಕ್ರಿಮಿನಲ್‍ಗಳ – ಹಫ್ತಾ ವಸೂಲಿಗಾರ ಅನೈತಿಕ ಪೊಲೀಸ್ ಪಡೆಯ ಹಾವಳಿ ಜಿಲ್ಲೆಯಲ್ಲಿ ಮಿತಿಮೀರಿದೆ!

ಜಾನುವಾರು ಸಾಗಾಟಗಾರರನ್ನು ತಡೆದು ಹೊಡೆದು ಬಡಿದು ಲೂಟಿ ಮಾಡಿ ಆ ಜಾನುವಾರುಗಳನ್ನು ಗೋಶಾಲೆಗೆ ಸಾಗಿಸುವ ಪ್ರಹಸನ ನಡೆಸುತ್ತಲೇ ಗುಟ್ಟಾಗಿ ಕಸಾಯಿಖಾನೆಗೆ ಮಾರುವ ನಕಲಿ ಗೋರಕ್ಷಕರ ಆಟ ಕರಾವಳಿಯಲ್ಲಿ ಬಹಿರಂಗ ರಹಸ್ಯ. ತಮ್ಮ ಬೆನ್ನ ಹಿಂದೆ ಸಂಘಪರಿವಾರದ ಡಾನ್‍ಗಳು ಮತ್ತು ಪರಿವಾರದ ಮಂತ್ರಿ, ಎಂ.ಪಿ. ಎಮ್ಮೆಲ್ಲೆಗಳಂಥ ಬಲಾಢ್ಯರಿದ್ದಾರೆಂಬ ಸೊಕ್ಕಿನ ಅನೈತಿಕ ಪೊಲೀಸ್ ಬೆಟಾಲಿಯನ್ ಅಧಿಕೃತ ಪೊಲೀಸ್ ಇಲಾಖೆಯನ್ನೇ ನಿಯಂತ್ರಿಸುವಷ್ಟು ಭೀಭತ್ಸವಾಗಿ ಬೆಳೆದುಬಿಟ್ಟಿದೆ!

ಅಧಿಕಾರಸ್ಥರ ಕೃಪಾಶೀರ್ವಾದದ ಕೌಬ್ರಿಗೇಡ್ ಡಿಸಿ, ಎಸ್ಪಿಯಂಥ ಉನ್ನತ ಅಧಿಕಾರಿಗಳಿಗೂ ಕೇರ್ ಮಾಡದೆ ಕಾನೂನು ಕೈಗೆತ್ತಿಕೊಳ್ಳುವಷ್ಟು ಕೊಬ್ಬಿದ್ದಾರೆಂಬುದಕ್ಕೆ ಕಳೆದ ವಾರ ನಡೆದ ‘ಕೊಲೆಬೆದರಿಕೆ’ ಪ್ರಕರಣ ನಿಸ್ಸಂಶಯವಾಗಿ ಸಾಬೀತುಪಡಿಸಿದೆ. ಬಕ್ರೀದ್ ಹೊತ್ತಲ್ಲಿ ಅಕ್ರಮ ಗೋಸಾಗಾಟ-ಅನಧಿಕೃತ ಕಸಾಯಿಖಾನೆ ನಡೆಯದಂತೆ ನೋಡಿಕೊಳ್ಳಿ; ಅಕ್ರಮ ಜಾನುವಾರು ಸಾಗಾಟಗಾರರ ಮೇಲೆ ಹಲ್ಲೆ ಮಾಡುವವರನ್ನು ಕಠಿಣವಾಗಿ ನಿಭಾಯಿಸಿ ಎಂಬ ಎರಡು ಆದೇಶ ಜಿಲ್ಲಾಧಿಕಾರಿಣಿ ಸಿಂಧೂ ರೂಪೇಶ್ ಪೊಲೀಸ್ ಅಧಿಕಾರಿಗಳಿಗೆ ನೀಡಿದ್ದರು.

ಇದರಲ್ಲಿ ಎರಡನೇ ನಿರ್ದೇಶನ ಕೌಬಾಯ್‍ಗಳ ಕೆರಳಿಸಿದೆ. ಸಂಘಪರಿವಾರದ ವಾಟ್ಸಾಪ್ ಗ್ರೂಪ್‍ಗಳಲ್ಲಿ ಜಿಲ್ಲಾಧಿಕಾರಿಣಿಯನ್ನು ಟೀಕಿಸುವ, ನಿಂದಿಸುವ, ಕೊಂದೇಹಾಕುವ ಸಂದೇಶಗಳ ವಿನಿಮಯ ಬಿರುಸಾಗಿ ನಡೆದಿದೆ!

ದಕಿಣ ಕನ್ನಡದಲ್ಲಿ ದಿನಗಳೆದಂತೆ ಜಾನುವಾರು ದಂಧೆ ಮಾಡುವ ಮುಸ್ಲಿಮರನ್ನು ಅಟ್ಟಾಡಿಸಿ ಹಿಂಸಿಸುವ, ದರೋಡೆ ಮಾಡಿ ದಾಂಧಲೆ ಎಬ್ಬಿಸುವ ‘ಸಂಸ್ಕೃತಿವಂತರ’ ಉಪಟಳ ಜೋರಾಗುತ್ತಿರುವುದು ಸಹಜವಾಗೇ ಕರ್ತವ್ಯನಿಷ್ಠ ಜಿಲ್ಲಾಧಿಕಾರಿ ಸಿಂಧೂ ಅವರ ತಲೆಬಿಸಿ ಮಾಡಿತ್ತು.

ಇದು ಬಕ್ರೀದ್ ಹಬ್ಬದ ಹೊತ್ತಲ್ಲಿ ಹೆಚ್ಚಾಗುವ ಆತಂಕವೂ ಆಕೆಯಲ್ಲಿತ್ತು. ಹಾಗಾಗಿ ಪೊಲೀಸ್ ಅಧಿಕಾರಿಗಳ ಸಭೆ ಕರೆದಿದ್ದ ಸಿಂಧೂ ಮೇಡಮ್ ‘ಅಕ್ರಮ ಗೋಸಾಗಾಟಗಾರರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಬೇಕು; ಪೊಲೀಸರೇ ಅಂಥವರ ವಿರುದ್ಧ ಕೇಸು ಹಾಕುತ್ತಾರೆ; ಗೋಸಾಗಾಟಗಾರರ ಮೇಲೆ ಗೂಂಡಾಗಿರಿ, ಥಳಿತ ನಡೆಸಿದರೆ ಅಂಥವರನ್ನು ಕಠಿಣ ಕಾನೂನು ಕ್ರಮಕ್ಕೆ ಒಳಪಡಿಸಲಾಗುತ್ತದೆ..’ ಎಂದು ಎಚ್ಚರಿಕೆ ನೀಡಿದ್ದರು.

ಮಾಧ್ಯಮದಲ್ಲಿ ಬಂದಿದ್ದ ಈ ಹೇಳಿಕೆ ಸಂಘಪರಿವಾರದ ‘ರಾಮ್‍ಸೇನಾ ಅಭಿಯಾನ್’ ಎಂಬ ವಾಟ್ಸಾಪ್ ಗ್ರೂಪಿನಲ್ಲಿ ಪೋಸ್ಟ್ ಆಗಿದೆ. ಇದರ ಸುತ್ತ ಚರ್ಚೆ ನಡೆದು ಡಿಸಿ ಸಿಂಧೂ ಅವರನ್ನ ಮೂದಲಿಸಲಾಗಿದೆ. +919632188546 ಮೊಬೈಲ್ ಸಂಖ್ಯೆಯ ತೆಂಕಮಿಜಾರಿನ ರಂಜಿತ್ ಎಂಬ ಹರೆಯದ ಹುಡುಗ ‘ಫಸ್ಟ್ ಮೊಲೆನ್ ಕರ್ತೆ ಕೆರೊಡು’ ಎಂದು ತುಳು ಭಾಷೆಯ ಸಂದೇಶ ಪೋಸ್ಟ್ ಮಾಡಿದ್ದಾನೆ. ಇದರರ್ಥ ‘ಮೊದಲು ಇವಳನ್ನು (ಡಿಸಿಯನ್ನು) ಕಡಿದು ಕೊಲ್ಲಬೇಕು’ ಎಂಬುದಾಗಿದೆ.

ಈ ಕೊಲ್ಲುವ ಕ್ರೌರ್ಯದ ಚರ್ಚೆ ದಕ್ಷಿಣ ಕನ್ನಡದ ಮಾನವೀಯ ಮಂದಿಯನ್ನು ಬೆಚ್ಚಿಬೀಳಿಸಿದೆ. ಡಿಸಿಯನ್ನೇ ಬಿಡದವರು ಸಾಮಾನ್ಯರನ್ನು ಬಿಡುವರಾ? ಇಂಥವರ ಮೇಲೆ ಕಾನೂನು ಕ್ರಮ ತಕ್ಷಣ ಜರುಗಬೇಕೆಂಬ ಒತ್ತಾಯ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ನಡೆದಿದೆ. ಪೊಲೀಸರು ಸ್ವಯಂಪ್ರೇರಿತ ಕೇಸು ದಾಖಲಿಸಿಕೊಂಡು ರಂಜಿತ್‍ನನ್ನು ಬಂಧಿಸಿದ್ದಾರೆ.

ಇಷ್ಟು ದೊಡ್ಡ ಗಲಾಟೆಯಾದರೂ ದಕ್ಷಿಣ ಕನ್ನಡದಲ್ಲಿ ತುಂಬಿ ತುಳುಕುವ ಬಿಜೆಪಿ ಎಂಪಿ, ಎಮ್ಮೆಲ್ಲೆ, ಎಮ್ಮೆಲ್ಸಿಗಳಲ್ಲಿ ಒಬ್ಬೇ ಒಬ್ಬ ಪ್ರತಿಕ್ರಿಯಿಸುವುದಿಲ್ಲ; ಶಾಂತಿ ಸುವ್ಯವಸ್ಥೆ ಕಾಪಾಡುವ ಕರ್ತವ್ಯ ಬದ್ಧತೆ ತೋರಿದ ಜಿಲ್ಲಾಧಿಕಾರಿ ಸಿಂಧೂಗೆ ನೈತಿಕ ಬೆಂಬಲ ನೀಡಬೇಕಿದ್ದ ಜಿಲ್ಲಾ ಉಸ್ತುವಾರಿ ಮಂತ್ರಿ ಕೋಟಾ ಶ್ರೀನಿವಾಸ ಪೂಜಾರಿ, ಉಳಿದ ಶಾಸಕ, ಸಂಸದರು ಬುದ್ಧಿಪೂರ್ವಕವಾಗೇ ಸುಮ್ಮನಿದ್ದರು.

ಜಿಲ್ಲೆಯ ನೆಮ್ಮದಿ ಕಾಪಾಡುವುದು ತಮ್ಮದೂ ಕರ್ತವ್ಯವೆಂಬುದು ಈ ಹೊಣೆಗೇಡಿ ರಾಜಕಾರಣಿಗಳಿಗೆ ಅನ್ನಿಸಲಿಲ್ಲ. ಮೌನ ಪ್ರದರ್ಶಿಸಿ ಗೂಂಡಾಗಳಿಗೆ ‘ಧೈರ್ಯ’ ತುಂಬಿದ್ದಾರೆ. ಇದಾದ ಎರಡೇ ದಿನಕ್ಕೆ ಮುಖ್ಯಮಂತ್ರಿ ಯಡ್ಡಿಯೂರಪ್ಪ ಸರ್ಕಾರ ಸಿಂಧೂ ಅವರನ್ನು ಬೆಂಗಳೂರಿಗೆ ವರ್ಗಾಯಿಸಿ ಖೋಟಾ ಗೋ ಸಂರಕ್ಷಕರ ತಂಟೆಗೆ ಹೋದವರಿಗೆ ದಕ್ಷಿಣ ಕನ್ನಡದಲ್ಲಿ ಉಳಿಗಾಲವಿಲ್ಲ ಎಂಬುದು ಖಾತ್ರಿಗೊಳಿಸಿದ್ದಾರೆ!

ದಕ್ಷಿಣ ಕನ್ನಡದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಕೆಲಸ ಮಾಡಬೇಕಿದ್ದ ಪೊಲೀಸ್ ಇಲಾಖೆ, ಅದನ್ನು ಸಂಘ ಪರಿವಾರದ ತರಹೇವಾರಿ ತಂಡಗಳ ಪುಂಡರ ಕೈಗೊಪ್ಪಿಸಿ ಆ ಗ್ಯಾಂಗುಗಳು ಹೇಳಿದಂತೆ ಕೇಳುತ್ತಿದೆಯೇನೋ ಎಂಬ ಅನುಮಾನ ಬಲವಾಗಲು ಕಾರಣವಿದೆ. ಜಾನುವಾರು ವ್ಯಾಪಾರಿ ಮುಸ್ಲಿಮರ ರಕ್ತ ಹರಿಸಿ ಅವರ ಮೊಬೈಲ್, ಹಣ ಕೊಳ್ಳೆಹೊಡೆಯುವ ನಕಲಿ ಗೋರಕ್ಷಕರು ನಂತರ ‘ಆರೋಪಿ’ಗಳನ್ನು ಠಾಣೆಗೊಯ್ದು ತಾವು ಹೇಳಿದಂತೆ ಪೊಲೀಸರಿಂದ ಎಫ್‍ಐಆರ್ ಬರೆಸುತ್ತಾರೆ. ಹೀಗಾಗಿ ಅಧಿಕೃತ ಪರವಾನಗಿಯೊಂದಿಗೆ ದನ, ಎಮ್ಮೆ ಸಾಗಿಸಿದರೂ ಜಾಮೀನುರಹಿತ ಕೇಸು ಬೀಳುತ್ತದೆ.

ಮಾರಣಾಂತಿಕ ದಾಳಿ ಮಾಡಿದ ಸಂಘ ಸದಸ್ಯರ ಮೇಲೆ ಪೆಟ್ಟಿಕೇಸ್ ಹಾಕಿ ಗೌರವದೊಂದಿಗೆ ಬೀಳ್ಕೊಡಲಾಗುತ್ತದೆ. ಅನೈತಿಕ ಪೊಲೀಸರು ಧರ್ಮ, ಸಂಸ್ಕೃತಿ ದೇವರು ತೋರಿಸಿ ಬ್ಲಾಕ್‍ಮೇಲ್ ಮಾಡಿ ಪಾರಾಗುತ್ತಿದ್ದಾರೆ. ಹೀಗಾಗಿ ದಕ್ಷಿಣ ಕನ್ನಡದಲ್ಲಿ ಕಾನೂನು ಸುವ್ಯವಸ್ಥೆ ಹಳ್ಳ ಹಿಡಿದಿದೆ. ಪೊಲೀಸರು ಮತ್ತು ಗೋಗೂಂಡಾಗಳ ಅನೈತಿಕ ಮೈತ್ರಿಯಿಂದಾಗಿ ರೌಡಿಗಳೆಂದು ಸಮಾಜದಿಂದ ತಿರಸ್ಕರಿಸಲ್ಪಟ್ಟವರು ಇಂದು ಧರ್ಮರಕ್ಷಕ ಗೆಟಪ್ಪಿನಲ್ಲಿ ಮೆರೆದಾಡುತ್ತಿದ್ದಾರೆ.

ದಕ್ಷಿಣಕನ್ನಡದ ಕಾನೂನು ಮತ್ತು ಸುವ್ಯವಸ್ಥೆ ಅದೆಂಥ ಮಟ್ಟಕ್ಕೆ ತಲುಪಿದೆಯೆಂದರೆ ಬಿಜೆಪಿ ಶಾಸಕರು ಕರೆಯುವ ಅಧಿಕಾರಿಗಳ ಸಭೆಯಲ್ಲಿ ಹತ್ತಾರು ಕ್ರಿಮಿನಲ್ ಕೇಸ್ ರೂವಾರಿಗಳು ಪೊಲೀಸರಿಗೆ, ಅಧಿಕಾರಿಗಳಿಗೆ ಸಲಹೆ, ಸೂಚನೆ ಕೊಡುತ್ತಿದ್ದಾರೆ. ಡಿಸಿ ಸಿಂಧೂ ಮೇಡಮ್‍ಗೆ ಬಂದ ಕೊಲೆ ಬೆದರಿಕೆ ಪ್ರಕರಣದ ಬೆನ್ನಲ್ಲೇ ಬೆಳ್ತಗಂಡಿ ಶಾಸಕ ಹರೀಶ್‍ಪೂಂಜಾ ಕರೆದಿದ್ದ ಸಭೆಯಲ್ಲಿ ಪೊಲೀಸ್ ಅಧಿಕಾರಿಗಳ ಸರಿಸಮನಾಗಿ ಗೋ-ಗೂಂಡಾಗಳು ಕುಳಿತಿದ್ದರು.

ಅಕ್ರಮ ಗೋಸಾಗಾಟ ತಡೆಯುವ ಕುರಿತು ಶಾಸಕ ಪೂಂಜಾ ನಡೆಸಿದ್ದ ಮೀಟಿಂಗ್ ಇದು. ಇಲ್ಲಿ ಸಂಘಪರಿವಾರದ ಗೋ-ಗೂಂಡಾಗಳು ಪೊಲೀಸ್ ಅಧಿಕಾರಿಗಳಿಗೆ ಅಧಿಕಾರ ವಾಣಿಯಲ್ಲಿ ‘ಸಲಹೆ, ಮಾರ್ಗದರ್ಶನ’ ಕೊಡುತ್ತಿದ್ದರು. ಪೊಲೀಸರ ನೈತಿಕ ಸ್ಥೈರ್ಯವನ್ನೇ ಕುಗ್ಗಿಸುವ ಸಭೆಗಳನ್ನು ನಡೆಸುವ ಶಾಸಕ ಪೂಂಜಾರಿಂದ ಬೆಳ್ತಗಂಡಿಯಲ್ಲಿ ನೆಮ್ಮದಿ ನಿರೀಕ್ಷಿಸಲು ಸಾಧ್ಯವಾ?

‘ದಕ್ಷಿಣ ಕನ್ನಡಕ್ಕೆ ಬೆಂಕಿ ಹಾಕೋದು ಹೇಗೆಂದು ನಂಗೆ ಗೊತ್ತಿದೆ’ ಎಂದು ಬಹಿರಂಗವಾಗೇ ಹೇಳುವ ಸಂಸದ ನಳಿನ್ ಕುಮಾರ್ ಕಟೀಲ್ ಈಗ ಆಳುವ ಬಿಜೆಪಿಯ ರಾಜ್ಯಾಧ್ಯಕ್ಷ. ಗೋರಕ್ಷಕ ತಂಡಗಳ ಅನಭಿಷಕ್ತ ದೊರೆಯಂತಿರುವ ನಳಿನ್‍ನ ಮನದಿಚ್ಛೆಯಂತೆ ಜಿಲ್ಲಾಡಳಿತ ನಡೆಯುತ್ತಿದೆ. ಜಿಲ್ಲಾ ಉಸ್ತುವಾರಿ ಮಂತ್ರಿ ಕೋಟಾ ಶ್ರೀನಿವಾಸ ಪೂಜಾರಿ “ಪಾಪ ಪೂಜಾರಿ” ಅನ್ನಿಸಿಕೊಳ್ಳುತ್ತಿದ್ದಾರೆ ಬಿಜೆಪಿ ಕಾರ್ಯಕರ್ತರಿಂದ! ಇಂಥ ಕಾನೂನು ಸುವ್ಯವಸ್ಥೆಯ ಸಮಸ್ಯೆಯ ಜಿಲ್ಲೆಗೆ ಜಿಲ್ಲಾಧಿಕಾರಿಯಾಗಿ ಡಾ|| ರಾಜೇಂದ್ರ ಬಂದಿದ್ದಾರೆ. ಹೊಸ ಡಿಸಿ ಸಾಹೇಬರಿಂದ ಜಿಲ್ಲೆಯ ಜನರು ನೆಮ್ಮದಿಯ ನಾಳೆಗಳ ನಿರೀಕ್ಷಿಸುತ್ತಿದ್ದಾರಷ್ಟೇ!!

-ಶುದ್ದೋಧನ


ಇದನ್ನು ಓದಿ: ಮಂದಿರ ಭವ್ಯವಾಗಬಹುದು; ಪವಿತ್ರವಾಗಿರುವುದಿಲ್ಲ: ಜಿ ರಾಜಶೇಖರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...