Homeಅಂಕಣಗಳುಬೊಲ್ಸೊನಾರೊ ಪತನ; ಸರ್ವಾಧಿಕಾರಿ ಆಡಳಿತದ ಕೊನೆ ಭಾರತಕ್ಕೂ ಸ್ಫೂರ್ತಿಯಾಗುವುದೇ?

ಬೊಲ್ಸೊನಾರೊ ಪತನ; ಸರ್ವಾಧಿಕಾರಿ ಆಡಳಿತದ ಕೊನೆ ಭಾರತಕ್ಕೂ ಸ್ಫೂರ್ತಿಯಾಗುವುದೇ?

- Advertisement -
- Advertisement -

ಭಾರತದಲ್ಲಿ ಕೋವಿಡ್ ನಿರ್ವಹಣೆಯ ಅದಕ್ಷತೆಗೆ ಮತ್ತು ವೈಫಲ್ಯತೆಗೆ ಗಂಗಾ ನದಿಯಲ್ಲಿ ತೇಲಿದ ಹೆಣಗಳಿಂದ ಹಿಡಿದು, ತುರ್ತಿನಲ್ಲಿ ಆಮ್ಲಜನಕ ಸಿಗದೆ ಒದ್ದಾಡಿ ಮಡಿದ ಘಟನೆಗಳ ಅಸಂಖ್ಯಾತ ವರದಿಗಳವರೆಗೆ ಹಲವು ಸಂಗತಿಗಳು ಸಾಕ್ಷ್ಯ ನುಡಿದಿದ್ದವು. ಸರ್ಕಾರದ ಅವೈಚಾರಿಕ-ಅತಾರ್ಕಿಕ ನಿರ್ಧಾರಗಳು ಜನರನ್ನು ಹೈರಾಣುಗೊಳಿಸಿದ್ದವು. ಅಷ್ಟು ಸಾಲದೆಂಬಂತೆ ಮೊದಲ ಅಲೆಯ ಸಮಯದಲ್ಲಿ ಕೋವಿಡ್ ವೈರಾಣುವನ್ನು ಓಡಿಸಲು, ಮನೆಯ ಹೊರಗೆ ನಿಂತು ತಟ್ಟೆ ಮತ್ತು ಪಾತ್ರೆಗಳನ್ನು ಜೋರಾಗಿ ಬಡಿಯಿರಿ ಎಂಬ ಪ್ರಧಾನಿ ಮೋದಿಯವರ ಕರೆ ತಮಾಷೆಯಾಗಿ ಕಂಡರೂ ಅದನ್ನು ಪರಿಪಾಲಿಸಿದ ಕೋಟ್ಯಂತರ ನಾಗರಿಕರಿದ್ದರು. ಬಹುಶಃ ಇಲ್ಲಿಗಿಂತಲೂ ಕೋವಿಡ್‌ಅನ್ನು ಕೆಟ್ಟದಾಗಿ ನಿರ್ವಹಿಸಿದವರಲ್ಲಿ ಯುಕೆಯ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್, ಯುಎಸ್‌ಎ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಬ್ರೆಜಿಲ್‌ನ ಜೈರ್ ಬೊಲ್ಸೊನಾರೊ ಅಗ್ರ ಸ್ಥಾನಗಳಲ್ಲಿ ನಿಲ್ಲುತ್ತಾರೆ. ಮೂವರಲ್ಲಿ ಮೊದಲ ಇಬ್ಬರು ಆಗಲೇ ಮಾಜಿಗಳಾಗಿದ್ದರೆ, ಕೋವಿಡ್‌ಅನ್ನು ’ಒಂದು ಸಣ್ಣ ಜ್ವರ’ ಎಂದು, ಐಸೋಲೇಷನ್ ಪ್ರೊಟೋಕಾಲ್‌ಅನ್ನು ಅನುಸರಿಸಿದವರನ್ನು ಮೂರ್ಖರೆಂದು, ಸ್ವತಃ ಕೋವಿಡ್ ಲಸಿಕೆಯನ್ನು ತೆಗೆದುಕೊಳ್ಳಲು ನಿರಾಕರಿಸಿದ ಬೊಲ್ಸೊನಾರೊ ಕೂಡ ಮಾಜಿಯಾಗುತ್ತಿದ್ದಾರೆ. ದಕ್ಷಿಣ ಅಮೆರಿಕದ ಮತ್ತೊಂದು ರಾಷ್ಟ್ರ ತೀವ್ರ ಬಲಪಂಥೀಯ ಸರ್ವಾಧಿಕಾರಿ ಧೋರಣೆಯ ನಾಯಕನಿಗೆ ಹೊರದಾರಿ ತೋರಿಸಿದೆ. ಜನಪರ ನೀತಿಗಳ ಚಾಂಪಿಯನ್ ಎಂದು ಬಣ್ಣಿಸಲಾಗುವ, ಯೂನಿಯನ್ ಲೀಡರ್ ಆಗಿದ್ದು ನಂತರ ಎರಡು ಅವಧಿಗಳ ಕಾಲ ಬ್ರೆಜಿಲ್ ಅಧ್ಯಕ್ಷರಾಗಿ, ಬಲಪಂಥೀಯ ದ್ವೇಷ ರಾಜಕಾರಣದ ಬಲಿಪಶುವಾಗಿ ಜೈಲುವಾಸ ಅನುಭವಿಸಿ ಹೊರಬಂದು ಈಗ ಬೊಲ್ಸೊನಾರೊರನ್ನ ಸಣ್ಣ ಅಂತರದಲ್ಲಿ ಮಣಿಸಿ ಮತ್ತೆ ಅಧ್ಯಕ್ಷರಾಗುವತ್ತ ಲೂಯಿಜ್ ಇನಾಷಿಯೊ ’ಲೂಲಾ’ ಡಾ ಸಿಲ್ವ ಮುನ್ನಡೆದಿದ್ದಾರೆ. ಇದು ಲ್ಯಾಟಿನ್ ಅಮೆರಿಕದಲ್ಲಿ ಎಡಪಂಥೀಯ ಚಿಂತನೆಯ ಸರ್ಕಾರಗಳು ಜನಮನ್ನಣೆ ಪಡೆಯುತ್ತಿರುವ ವಿದ್ಯಮಾನಕ್ಕೆ ಒಂದೆಡೆ ಸಾಕ್ಷಿಯಾದರೆ, ಜಾಗತಿಕವಾಗಿ ಸರ್ವಾಧಿಕಾರಿ ಧೋರಣೆಯ ಬಲಪಂಥೀಯ ನಾಯಕರ ಪತನದ ಮುಂದುವರಿಕೆಯಾಗಿಯೂ ಮಹತ್ವ ಪಡೆದುಕೊಂಡಿದೆ.

ಬೊಲ್ಸೊನಾರೊ

ತುಸು ಭಿನ್ನವೆನಿಸಿದರೂ ಭಾರತದ ಸದ್ಯದ ಸರ್ಕಾರ ಮತ್ತು ಬ್ರೆಜಿಲ್‌ನ ಬೊಲ್ಸೊನಾರೊ ಆಡಳಿತಕ್ಕೂ ಕಣ್ಣಿಗೆ ಕುಕ್ಕುವಂತ ಮತ್ತೊಂದು ಹೋಲಿಕೆಯಿದೆ. ಲೂಲಾ ಅಧಿಕಾರಾವಧಿಯಲ್ಲಿ ನಡೆದಿದೆ ಎನ್ನಲಾದ ’ಕಾರ್ ವಾಷ್’ ಎಂಬ ಭ್ರಷ್ಟಾಚಾರ ಪ್ರಕರಣ ಬೆಳಕಿಗೆ ಬಂದಿತ್ತು. ಇದರ ವಿಚಾರಣೆ ಬ್ರೆಜಿಲ್ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿತ್ತು. ಇದರ ವಿಚಾರಣೆಯನ್ನು ನಿಷ್ಪಕ್ಷಪಾತವಾಗಿ ನಡೆಸದ ನ್ಯಾಯಾಧೀಶ ಸೆರ್ಗಿಯೋ ಮೋರೊ ಜುಲೈ 2017ರಲ್ಲಿ ತರಾತುರಿಯಲ್ಲಿ ಲೂಲಾ ಅವರನ್ನು ತಪ್ಪಿತಸ್ಥ ಎಂದು ಷರಾ ಬರೆಯುತ್ತಾರೆ. 10 ವರ್ಷಕ್ಕಿಂತಲೂ ಹೆಚ್ಚಿನ ಅವಧಿಯ ಜೈಲು ಶಿಕ್ಷೆಗೆ ಗುರಿಯಾಗಿಸಿ ಲೂಲಾ ಅವರನ್ನು ಬಂಧಿಸಲಾಗುತ್ತದೆ. ಇದರಿಂದ 2018ರಲ್ಲಿ ನಡೆದ ಚುನಾವಣೆಯಲ್ಲಿ ಲೂಲಾ ಸ್ಪರ್ಧಿಸದಂತೆ ನೋಡಿಕೊಳ್ಳಲಾಗುತ್ತದೆ. ಇದು ಮಿಲಿಟರಿ ದಂಗೆಯನ್ನು ಆರಾಧಿಸುವ ಬೊಲ್ಸೊನಾರೊನ ಗೆಲುವಿಗೆ ದಾರಿ ಸುಗಮ ಮಾಡಿಕೊಡುತ್ತದೆ. ಆದರೆ, ಲೂಲಾ ವಿರುದ್ಧ ನಡೆದದ್ದು ಬೋಗಸ್ ವಿಚಾರಣೆ ಎಂಬ ಆರೋಪಕ್ಕೆ ಪುರಾವೆಯೆಂಬಂತೆ ನ್ಯಾಯಾಧೀಶ ಮೋರೊ ಅವರನ್ನು ಬೊಲ್ಸೊನೊರಾ ತನ್ನ ಸಂಪುಟದಲ್ಲಿ ಜಸ್ಟಿಸ್ ಮತ್ತು ಸಾರ್ವಜನಿಕ ರಕ್ಷಣಾ ಸಚಿವರಾಗಿ ನೇಮಿಸುತ್ತಾರೆ. ತಾನೆಂದಿಗೂ ರಾಜಕೀಯ ಸೇರುವುದಿಲ್ಲ ಎಂದು ಮಾಧ್ಯಮದವರೊಂದಿಗೆ ಮಾತನಾಡಿದ್ದ ನ್ಯಾಯಾಧೀಶರ ಬಣ್ಣ ಬಯಲಾಗುತ್ತದೆ. ಮುಂದೆ ಹಲವು ತಿಂಗಳುಗಳ ಬಳಿಕ ಈ ವಿಚಾರಣೆ ಸರಿಯಾಗಿ ನಡೆದಿಲ್ಲ ಎಂದು ತೀರ್ಮಾನಿಸುವ ಸುಪ್ರೀಂ ಕೋರ್ಟ್ ಲೂಲಾ ಅವರ ಬಿಡುಗಡೆಗೆ ಆದೇಶಿಸುತ್ತದೆ. ಇಲ್ಲಿ, ಭಾರತದಲ್ಲಿ ರಂಜನ್ ಗೊಗೊಯ್ ಅವರು ರಾಮಮಂದಿರ ವಿವಾದದ ತೀರ್ಪಿನಲ್ಲಿ ಕೇಂದ್ರದಲ್ಲಿ ಸರ್ಕಾರ ರಚಿಸಿರುವ ಬಿಜೆಪಿಯ ಬಲಪಂಥೀಯ ರಾಜಕಾರಣಕ್ಕೆ ಅನುವಾಗುವಂತೆ ತೀರ್ಪು ನೀಡಿ, ನಿವೃತ್ತಿಯ ನಂತರ ರಾಜ್ಯಸಭಾ ಸದಸ್ಯರಾದದ್ದು ತೀವ್ರ ಟೀಕೆಗೆ ಗುರಿಯಾಗಿತ್ತು. ರಾಜಕೀಯ ಮತ್ತು ನ್ಯಾಯಾಂಗದ ಒಳಒಪ್ಪಂದ ಹಾಗೂ ಸರ್ವಾಧಿಕಾರಿ ಪ್ರಭುತ್ವಗಳು ಎಲ್ಲ ಸ್ವತಂತ್ರ ಸಂಸ್ಥೆಗಳನ್ನು ಆಪೋಶನ ತೆಗೆದುಕೊಳ್ಳುವ ಜಾಗತಿಕ ಬಲಪಂಥೀಯ ಬೆಳವಣಿಗೆಯ ವಿದ್ಯಮಾನಕ್ಕೆ ಇವೆಲ್ಲಾ ಒಂದಕ್ಕೊಂದು ಬೆಸೆದುಕೊಂಡಂತೆ ಕಾಣುತ್ತವೆ.

ಇನ್ನು ಮಾಧ್ಯಮಗಳ ಕತ್ತು ಹಿಸುಕುವ ಭಾರತ ಮತ್ತು ಬ್ರೆಜಿಲ್ ಪ್ರಭುತ್ವಗಳ ವರ್ತನೆ ಹೆಚ್ಚುಕಡಿಮೆ ಒಂದೇ ತೆರನಾಗಿತ್ತು. ತನ್ನ ವಿರುದ್ಧದ ಟೀಕೆಯನ್ನೆಲ್ಲಾ ಫೇಕ್ ನ್ಯೂಸ್ ಎಂದು ತಳ್ಳಿಹಾಕುತ್ತಿದ್ದ ಬೊಲ್ಸೊನಾರೊ, ಮಾಧ್ಯಮದ ಸ್ವಾತಂತ್ರ್ಯಕ್ಕೆ ಕಂಟಕಪ್ರಾಯವಾಗಿದ್ದರು. ಸಾಮಾಜಿಕ ಮಾಧ್ಯಮಗಳು ಯಾವುದನ್ನಾದರೂ ಫೇಕ್ ನ್ಯೂಸ್ ಎಂದು ಕಂಡುಹಿಡಿದರೆ, ಅದನ್ನು ತೆಗೆದುಹಾಕದಂತೆ ನಿಷೇಧ ಹೇರುವ ನೀತಿಯನ್ನು ಬೊಲ್ಸೊನಾರೊ ಹೊರಡಿಸಿದ್ದರು. ಆದರೆ ಈ ಸರ್ವಾಧಿಕಾರದಿಂದ ತನ್ನ ಸುತ್ತಮುತ್ತಲಿನವರೇ ಎಷ್ಟು ರೋಸಿಹೋಗಿದ್ದರೆಂದರೆ, ಬ್ರೆಜಿಲ್ ಕಾಂಗ್ರೆಸ್ ಮತ್ತು ಸುಪ್ರೀಂ ಕೋರ್ಟ್ ಎರಡೂ ಈ ನೀತಿಯನ್ನು ವಜಾ ಆಗುವಂತೆ ನೋಡಿಕೊಂಡಿದ್ದವು. ಒಂದು ಕಡೆಗೆ ತನ್ನ ಚುನಾವಣಾ ರ್‍ಯಾಲಿಗಳಲ್ಲಿ ಅತ್ಯಧಿಕ ಜನಗಳನ್ನು ಸೆಳೆದು ತನ್ನ ವಿರುದ್ಧ ಗೆಲ್ಲಲು ಈ ಚುನಾವಣೆಯನ್ನು ಫಿಕ್ಸ್ ಮಾಡಲಾಗುತ್ತಿದೆ ಎಂದು ಆರೋಪಿಸುತ್ತಿದ್ದ ಬೊಲ್ಸೊನಾರೊ ಅತಿ ಸಣ್ಣ ಅಂತರದಿಂದ ಸೋತಿರುವುದನ್ನು ಈ ವೈರುಧ್ಯಗಳು ವಿವರಿಸುತ್ತವೆ. ಹೆಚ್ಚುಕಡಿಮೆ, ಯುಎಸ್‌ಎನಲ್ಲಿ ತನ್ನ ಜನಪ್ರಿಯತೆಯನ್ನು ಅಷ್ಟೇನು ಕಳೆದುಕೊಳ್ಳದೆಯೇ, ತನ್ನ ವಿರುದ್ಧ ಹೆಚ್ಚು ಜನ ಮತ ಚಲಾಯಿಸಬಹುದೆಂದು ಊಹಿಸಿ ಚುನಾವಣೆಗಳನ್ನು ಕದಿಯಲಾಗುತ್ತಿದೆ ಎಂದು ಪ್ರಚಾರ ಮಾಡಿದ ಡೊನಾಲ್ಡ್ ಟ್ರಂಪ್‌ನ ಪ್ರಚಾರದಂತೆಯೇ ಇದೂ ಇತ್ತು! ಬ್ರೆಜಿಲ್‌ನ ’ಮೆಟ್ರೋಪೊಲೀಸ್’ ಆನ್‌ಲೈನ್ ಸುದ್ದಿಜಾಲದ ರಾಜಕೀಯ ವರದಿಗಾರ ಫೇಬಿಯೋ ಲೆಯ್ಟೆ ’ನ್ಯಾಯಪಥ’ದೊಂದಿಗೆ ಮಾತನಾಡಿ ಈ ಸಣ್ಣ ಅಂತರದ ಗೆಲುವನ್ನು ಹೀಗೆ ಬಣ್ಣಿಸುತ್ತಾರೆ:

“ಇದು ಬ್ರೆಜಿಲ್‌ನ ಭವಿಷ್ಯದ ಪ್ರಶ್ನೆಯಾಗಿತ್ತು. ಆದರೆ ಮುಂದಿನ ವರ್ಷಗಳಲ್ಲಿ ಆರ್ಥಿಕವಾಗಿ ಅಥವಾ ಸಾಮಾಜಿಕವಾಗಿ ಏನು ಮಾಡುತ್ತೇವೆ ಎಂಬ ಯೋಜನೆಗಳೊಂದಿಗೆ ಈ ಅಧ್ಯಕ್ಷೀಯ ಚುನಾವಣೆ ನಡೆಯಲಿಲ್ಲ. ಹಿಂದೆಂದೂ ಕಾಣದಂತಹ ರಾಜಕೀಯ ಧ್ರುವೀಕರಣದ ನಡುವೆ ತೀವ್ರ ಬಲಪಂಥೀಯ ಮುಖಂಡ ಬೊಲ್ಸೊನಾರೊ ಆಯ್ಕೆ ಅಥವಾ ಎಡಪಂಥೀಯ ಆಯ್ಕೆ ಲೂಲಾ ನಡುವೆ ನಡೆದ ಚುನಾವಣೆಯಷ್ಟೇ ಇದು. ಆ ಕಾರಣಕ್ಕಾಗಿಯೇ ಇಷ್ಟು ಜಿದ್ದಾಜಿದ್ದಿಯ ಹೋರಾಟ ನಡೆದಿದೆ” ಎನ್ನುತ್ತಾರೆ.

ಇದನ್ನೂ ಓದಿ: ಇಂಟರ್‌ನ್ಯಾಷನಲ್ ಫೋಕಸ್; ಇದು ಬ್ರೆಜಿಲ್‌ನ ಕೊನೆಯ ಚುನಾವಣೆಯಾಗಲಿದೆಯೇ?

ಚುನಾವಣಾ ಸಮಯದಲ್ಲಿ ಮಾಧ್ಯಮಗಳ ಪಾತ್ರವೇನಾಗಿತ್ತು ಎಂಬ ಪ್ರಶ್ನೆಗೆ “ಹಲವು ಮುಖ್ಯವಾಹಿನಿ ಮಾಧ್ಯಮಗಳು, ಬೊಲ್ಸೊನಾರೊ ತಮ್ಮ ವಿರುದ್ಧ ನಡೆಸಿದ ದಾಳಿಯಿಂದ ರೋಸಿಹೋಗಿದ್ದವು. ಆದುದರಿಂದ ಅವುಗಳಲ್ಲಿ ಬಹುತೇಕ ಮಾಧ್ಯಮಗಳು ಈ ಚುನಾವಣೆಯಲ್ಲಿ ಬೊಲ್ಸೊನಾರೊನ ಆಡಳಿತ ಅವಧಿಯ ವೈಫಲ್ಯಗಳನ್ನು ಬಹಿರಂಗಗೊಳಿಸುವುದರಲ್ಲಿ ನಿರತವಾದವು. ಅವು ಲೂಲಾನ ನೀತಿಗಳ, ಸಿದ್ಧಾಂತದ ಪರವಾಗಿಲ್ಲದೆ ಹೋದರೂ, ಬೊಲ್ಸೊನಾರೊನ ತಪ್ಪುಗಳನ್ನು ತೋರಿಸುವುದರಲ್ಲಿ ಯಶಸ್ವಿಯಾದುದರಿಂದ ಲೂಲಾ ಗೆಲುವಿಗೆ ಅದು ಸಹಕಾರಿಯಾಯಿತು” ಎನ್ನುತ್ತಾರೆ ಫೇಬಿಯೋ.

ಚುನಾವಣಾ ಫಲಿತಾಂಶ ಬಂದು 24 ತಾಸು ಕಳೆದರೂ ಲೂಲಾ ಅವರಿಗೆ ಕನಿಷ್ಠ ಒಂದು ಅಭಿನಂದನೆಯನ್ನೂ ಬೊಲ್ಸೊನಾರೊ ತಿಳಿಸಿಲ್ಲ. ಇದು ಯಾವುದಾದರೂ ಅಪ್ರಜಾಸತ್ತಾತ್ಮಕ ಕ್ರಮಕ್ಕೆ ಮುಂದಾಗುವ ಮುನ್ಸೂಚನೆಯೇ ಎಂಬ ಆತಂಕಗಳೂ ಮನೆಮಾಡಿವೆ. ಈ ಆತಂಕಕ್ಕೆ ಪುಷ್ಠಿ ನೀಡುವಂತೆ ಬ್ರೆಜಿಲ್‌ನ ಹಲವು ಹೈವೇಗಳಲ್ಲಿ ಟ್ರಕ್‌ಗಳಲ್ಲಿ ಬಂದಿಳಿದ ಬೊಲ್ಸೊನಾರೊ ಬೆಂಬಲಿಗರು ರಸ್ತೆ ತಡೆ ನಡೆಸಿದ ಘಟನೆಗಳೂ ಜರುಗಿವೆ. (ಒಂದು ದಿನದ ನಂತರ ರಸ್ತೆಗಳನ್ನು ಬ್ರೆಜಿಲ್ ಅಧಿಕಾರಿಗಳು ತೆರವುಗೊಳಿಸುತ್ತಿರುವ ವರದಿಗಳು ಬಂದಿವೆ.) ಅದೂಅಲ್ಲದೆ, ಅಧ್ಯಕ್ಷ ಬೊಲ್ಸೊನಾರೊ ಅವರ ಮಗ ಫ್ಲೇವಿಯೋ ಬೊಲ್ಸೊನಾರೊ ಚುನಾವಣಾ ಫಲಿತಾಂಶದ ನಂತರ ಮಾಡಿದ ಟ್ವೀಟ್‌ಗಳು ಅಸ್ಪಷ್ಟವಾಗಿವೆ: “ನಾವು ನಮ್ಮ ತಲೆಗಳನ್ನು ಎತ್ತಿ ನಿಲ್ಲೋಣ ಮತ್ತು ಬ್ರೆಜಿಲ್‌ಅನ್ನು ಕೈಬಿಡುವುದು ಬೇಡ” ಎಂದಿದ್ದು “ದೇವರು ಇನ್‌ಚಾರ್ಜ್ ಆಗಿದ್ದಾರೆ” ಎಂಬ ಕ್ರಿಪ್ಟಿಕ್ ಸಂದೇಶಗಳನ್ನು ರವಾನಿಸಿದ್ದಾರೆ. ಟ್ರಂಪ್ ಅವರ ಸಹಾಯಕ ಸ್ಟೀವ್ ಬ್ಯಾನನ್ ಅವರಿಗೆ ಫ್ಲೇವಿಯೋ ಆಪ್ತರು ಎನ್ನಲಾಗುತ್ತದೆ. ಟ್ರಂಪ್ ಸೋಲಿನ ನಂತರದ ಕ್ಯಾಪಿಟೊಲ್ ಕಟ್ಟಡದ ಮೇಲೆ ನಡೆದ ಹಿಂಸಾತ್ಮಕ ದಾಳಿಯಲ್ಲಿ ಬ್ಯಾನನ್ ಅವರ ಕೈವಾಡವಿತ್ತೆಂಬ ಆರೋಪದಲ್ಲಿ ಅವರು ವಿಚಾರಣೆಯನ್ನು ಎದುರಿಸುತ್ತಿದ್ದಾರೆ.

ಈ ಎಲ್ಲಾ ಅಡೆತಡೆಗಳನ್ನು ದಾಟಿ ಲೂಲಾ ಅಧ್ಯಕ್ಷರಾಗಿ ಮತ್ತೆ ಅಧಿಕಾರ ಸ್ವೀಕರಿಸಿದರೆ ಎಡಪಕ್ಷಗಳ ಗುಲಾಬಿ ಕ್ರಾಂತಿಗೆ ಇದು ಮತ್ತೊಂದು ಸೇರ್ಪಡೆಯಾಗಲಿದೆ. ಯುಎಸ್‌ಎ ರಾಜಕೀಯದಿಂದ ಪ್ರೇರಿತರಾದ ಮತ್ತು ಅದನ್ನೇ ಪ್ರತಿಪಾದಿಸುವ ’ಕ್ಲಾಸಿಕಲ್ ಲಿಬರಲ್’ಗಳು ಹಲವು ಬಾರಿ ಎಷ್ಟೋ ಎಡಪಂಥೀಯ ಮುಖಂಡರನ್ನೂ, ಟ್ರಂಪ್, ಬೋರಿಸ್ ಜಾನ್ಸನ್ ಹಾಗೂ ಬೊಲ್ಸೊನಾರೊರಂತವರ ಸಾಲಿಗೆ ಸೇರಿಸಿ, ’ಪಾಪ್ಯುಲಿಸ್ಟ್’ ನಾಯಕರು ಎಂದು ವರ್ಗೀಕರಿಸುವ ಚಾಳಿಯನ್ನು ಮುಂದುವರಿಸುತ್ತಾರೆ. ಅವರಿಗೆ ಧಾರ್ಮಿಕವಾಗಿ ’ಲಿಬರಲ್’ ಆಗಿದ್ದುಕೊಂಡು, ಆರ್ಥಿಕವಾಗಿ ಕಾರ್ಪೊರೆಟ್‌ಗಳು ಮಾತ್ರ ಬೆಳೆಯುವ ಮತ್ತು ಅವು ಶೋಷಿಸುವ ವಾತಾವರಣಕ್ಕೆ ಯಾವ ಅಡೆತಡೆಯೂ ಒಡ್ಡದ ನಾಯಕನಿರಬೇಕು. ಆರ್ಥಿಕ ಸಮಾನತೆ, ಅತಿ ಶ್ರೀಮಂತರಿಗೆ ಹೆಚ್ಚಿನ ತೆರಿಗೆ, ಬಡವರಿಗೆ ಸಮನಾಗಿ ಸಂಪನ್ಮೂಲಗಳನ್ನು ಹಂಚುವ ಕಾರ್ಯಕ್ರಮಗಳು ಇಂತಹ ಕ್ಲಾಸಿಕಲ್ ಲಿಬರಲ್‌ಗಳಿಗೆ ಅವಾಸ್ತವ ಮತ್ತು ಪಾಪ್ಯುಲಿಸ್ಟ್ ಯೋಜನೆಗಳಂತೆ ಕಾಣುತ್ತವೆ. ಹೀಗಾಗಿ ಚಿಲಿಯಲ್ಲಿನ ಅಧ್ಯಕ್ಷ ಗೇಬ್ರಿಯಲ್ ಬೋರಿಚ್ ಅವರನ್ನೂ ಪಾಪ್ಯುಲಿಸ್ಟ್ ಎಂದು ಬಗೆದು ಬದಿಗೆ ಸರಿಸಬಲ್ಲರು. ಬೋರಿಚ್ ಸರ್ಕಾರ ನೀಡಿದ ಸಮಾನತೆಯ ಸಂವಿಧಾನವನ್ನು ಜನಾಭಿಮತದಲ್ಲಿ ಸೋಲುವಂತೆ ಮಾಡಬಲ್ಲರು. ಇಂತಹ ಕ್ಲಾಸಿಕಲ್ ಲಿಬರಲ್‌ಗಳನ್ನು ಕೂಡ ಮೋಡಿ ಮಾಡಬಲ್ಲ ಮುಖಂಡ ಲೂಲಾ ಎಂಬ ಜನಪ್ರಿಯತೆ ಅವರಿಗಿದೆ. ಒಟ್ಟಿನಲ್ಲಿ ಪತ್ರಕರ್ತ ಫ್ಲೇವಿಯೋ ಹೇಳುವಂತೆ ಒಡೆದ ಬ್ರೆಜಿಲ್ ಮನೆಯನ್ನು ಒಂದುಗೂಡಿಸುವ ಕೆಲಸ ಎಲ್ಲಕ್ಕಿಂತ ತುರ್ತಾಗಿ ಮತ್ತು ಪ್ರಮುಖವಾಗಿ ಲೂಲಾ ಅವರ ಮುಂದಿದೆ. ಉಳಿದ ಸುಧಾರಣೆಗಳು ಅದನ್ನು ಅನುಸರಿಸುತ್ತವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಹಲ್ಗಾಮ್ ದಾಳಿ ಕುರಿತ ಪೋಸ್ಟ್‌: ಜಾನಪದ ಗಾಯಕಿ ನೇಹಾ ಸಿಂಗ್ ರಾಥೋಡ್‌ಗೆ ನಿರೀಕ್ಷಣಾ ಜಾಮೀನು ನೀಡಿದ ಸುಪ್ರೀಂ ಕೋರ್ಟ್

ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಕುರಿತು ಸಾಮಾಜಿಕ ಮಾಧ್ಯಮ ಪೋಸ್ಟ್‌ಗೆ ಸಂಬಂಧಿಸಿದಂತೆ ಜಾನಪದ ಗಾಯಕಿ ನೇಹಾ ಸಿಂಗ್ ರಾಥೋಡ್ ಅವರ ವಿರುದ್ಧ ದಾಖಲಾಗಿದ್ದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಂಗಳವಾರ ಅವರಿಗೆ ನಿರೀಕ್ಷಣಾ ಜಾಮೀನು...

ಮಧ್ಯಪ್ರಾಚ್ಯ ಉದ್ವಿಗ್ನತೆ: ಎಲ್‌ಪಿಜಿ ಕೊರತೆಗೆ ಮುಂಬೈನಲ್ಲಿ ಶೇ. 20 ರಷ್ಟು ಹೋಟೆಲ್‌, ರೆಸ್ಟೋರೆಂಟ್‌ ಬಂದ್: ಬೆಂಗಳೂರು, ಚೆನ್ನೈನಲ್ಲೂ ಸಮಸ್ಯೆ

ಪಶ್ಚಿಮ ಏಷ್ಯಾ ಸಂಘರ್ಷ ಹತ್ತು ದಿನಗಳಿಗೂ ಹೆಚ್ಚು ಕಾಲ ಮುಂದುವರಿದಿರುವುದರಿಂದ, ಭಾರತದ ಹೋಟೆಲ್‌ಗಳು ಮತ್ತು ಇತರ ಉಧ್ಯಮಗಳು ಎಲ್‌ಪಿಜಿ ಪೂರೈಕೆ ಬಿಕ್ಕಟ್ಟನ್ನು ಎದುರಿಸುತ್ತಿವೆ. ಬೆಂಗಳೂರಿನ ನಂತರ, ಚೆನ್ನೈ ಮತ್ತು ಮುಂಬೈನಂತಹ ಇತರ ನಗರಗಳು ಸಹ...

‘ಕೋವಿಡ್ ಲಸಿಕೆ ಪೀಡಿತರಿಗಾಗಿ ಪರಿಹಾರ ನೀತಿ ಅಳವಡಿಸಿಕೊಳ್ಳಿ..’; ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಸೂಚನೆ

ಕೋವಿಡ್ ವಿರುದ್ಧ ರೋಗನಿರೋಧಕ ಶಕ್ತಿಯಾಗಿ ಲಸಿಕೆ ನೀಡಿದ ನಂತರ ಉಂಟಾಗುವ ಪ್ರತಿಕೂಲ ಪರಿಣಾಮಗಳ ವೈಜ್ಞಾನಿಕ ಮೌಲ್ಯಮಾಪನಕ್ಕಾಗಿ ಅಸ್ತಿತ್ವದಲ್ಲಿರುವ ಕಾರ್ಯವಿಧಾನವನ್ನು ಮುಂದುವರಿಸಬೇಕೆಂದು ಸುಪ್ರೀಂ ಕೋರ್ಟ್ ಮಂಗಳವಾರ ಆದೇಶಿಸಿದೆ. ಅದೇ ಸಮಯದಲ್ಲಿ, ಕೋವಿಡ್ -19 ವ್ಯಾಕ್ಸಿನೇಷನ್ ನಂತರದ...

ಮೇಘಾಲಯ|ಜಿಲ್ಲಾ ಪರಿಷತ್ ಚುನಾವಣೆಯಲ್ಲಿ ವಿವಾದಾತ್ಮಕ ಅಧಿಸೂಚನೆ: ಪಶ್ಚಿಮ ಗಾರೋ ಬೆಟ್ಟಗಳಲ್ಲಿ ಭುಗಿಲೆದ್ದ ಹಿಂಸಾಚಾರ; ಇಬ್ಬರ ಸಾವು

ಗುವಾಹಟಿ: ಏಪ್ರಿಲ್ 10 ರಂದು ನಡೆಯಲಿರುವ ಗಾರೋ ಹಿಲ್ಸ್ ಸ್ವಾಯತ್ತ ಜಿಲ್ಲಾ ಮಂಡಳಿ (ಜಿಎಚ್‌ಎಡಿಸಿ) ಚುನಾವಣೆಯಲ್ಲಿ ಬುಡಕಟ್ಟು ಜನಾಂಗದವರಲ್ಲದವರು ಸ್ಪರ್ಧಿಸುವುದನ್ನು ನಿಷೇಧಿಸುವ ವಿವಾದಾತ್ಮಕ ಅಧಿಸೂಚನೆಯನ್ನು ವಿರೋಧಿಸಿ ಮೇಘಾಲಯದ ಪಶ್ಚಿಮ ಗಾರೋ ಹಿಲ್ಸ್ ಜಿಲ್ಲೆಯಲ್ಲಿ...

ಸಂವಿಧಾನ, ಸದನದ ಘನತೆ ಉಳಿಸಲು ಲೋಕಸಭಾ ಸ್ಪೀಕರ್ ವಿರುದ್ಧ ನಿರ್ಣಯ: ಕಾಂಗ್ರೆಸ್ ಸಂಸದ ಗೊಗೊಯ್

ಸ್ಪೀಕರ್ ಓಂ ಬಿರ್ಲಾ ಪಕ್ಷಪಾತಿ ವರ್ತನೆ ಹೊಂದಿದ್ದಾರೆ. ಹಾಗಾಗಿ, ಸಂವಿಧಾನ ಉಳಿಸಲು ವಿರೋಧ ಪಕ್ಷವು ಅವರನ್ನು ಪದಚ್ಯುತಗೊಳಿಸುವ ನಿರ್ಣಯ ತರಬೇಕಾಯಿತು ಎಂದು ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಮಂಗಳವಾರ (ಮಾ.10) ಲೋಕಸಭೆಯಲ್ಲಿ ಹೇಳಿದರು....

ನಿರಂತರ ಎಲ್‌ಪಿಜಿ ಪೂರೈಕೆ ಖಚಿತಪಡಿಸಿಕೊಳ್ಳಲು ‘ಅಗತ್ಯ ಸರಕು ಕಾಯ್ದೆ’ ಜಾರಿಗೆ ತಂದ ಕೇಂದ್ರ

ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆ ಕುರಿತು ದೂರು ನೀಡಿದ ನಂತರ, ದೇಶೀಯ ಅಡುಗೆ ಅನಿಲದ ನಿರಂತರ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು 'ಅಗತ್ಯ ಸರಕು ಕಾಯ್ದೆ'ಯನ್ನು ಜಾರಿಗೆ ತಂದಿದೆ ಎಂದು...

‘ಯುದ್ಧ ಯಾವಾಗ ಕೊನೆಗೊಳ್ಳುತ್ತದೆ ಎಂಬುದನ್ನು ಇರಾನ್ ನಿರ್ಧರಿಸುತ್ತದೆ’: ಟ್ರಂಪ್ ‘ಅಲ್ಪಾವಧಿಯ ಸಂಘರ್ಷ’ ಹೇಳಿಕೆಗೆ ಇರಾನ್ ತಿರುಗೇಟು 

ಟೆಹ್ರಾನ್: ಇರಾನ್‌ನಲ್ಲಿ ಯುದ್ಧವನ್ನು ಕೊನೆಗೊಳಿಸುವ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ ಟೆಹ್ರಾನ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಅಮೆರಿಕ ಮತ್ತು ಇಸ್ರೇಲಿ ಗುರಿಗಳ ವಿರುದ್ಧದ ಮಿಲಿಟರಿ ಕ್ರಮಗಳು ಯಾವಾಗ ನಿಂತವು ಎಂಬುದನ್ನು...

ಮಹಿಳಾ ಮೀಸಲಾತಿ ಮಸೂದೆ; ತ್ವರಿತ ಅನುಷ್ಠಾನಕ್ಕೆ ವಿಪಕ್ಷಗಳ ಅಭಿಪ್ರಾಯ ಕೇಳಿದ ಕೇಂದ್ರ ಸರ್ಕಾರ

ನವದೆಹಲಿ: ಮಹಿಳಾ ಮೀಸಲಾತಿ ಕಾನೂನಿನ ಅನುಷ್ಠಾನವನ್ನು ತ್ವರಿತಗೊಳಿಸುವ ಪ್ರಯತ್ನದಲ್ಲಿ, ಲೋಕಸಭೆ ಮತ್ತು ರಾಜ್ಯ ಶಾಸಕಾಂಗ ಸಭೆಗಳಲ್ಲಿ ಮಹಿಳೆಯರಿಗೆ ಶೇ 33 ರಷ್ಟು ಮೀಸಲಾತಿ ನೀಡುವ ಶಾಸನವನ್ನು ತಿದ್ದುಪಡಿ ಮಾಡುವ ಪ್ರಸ್ತಾಪದ ಕುರಿತು ಅಭಿಪ್ರಾಯಗಳನ್ನು...

ಕೋಲ್ಕತ್ತಾ : ಕಾಳಿಘಾಟ್ ಬಳಿಕ ದಕ್ಷಿಣೇಶ್ವರದಲ್ಲೂ ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ‘ಗೋ ಬ್ಯಾಕ್ ಘೋಷಣೆ’

ಕಾಳಿಘಾಟ್ ಬಳಿಕ ಕೋಲ್ಕತ್ತಾದ ದಕ್ಷಿಣೇಶ್ವರ ದೇವಸ್ಥಾನದಲ್ಲೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ದ 'ಗೋ ಬ್ಯಾಕ್ ಘೋಷಣೆಗಳು' ಕೇಳಿ ಬಂದಿವೆ. ಮಂಗಳವಾರ (ಮಾ.10) ಬೆಳಿಗ್ಗೆ ಜ್ಞಾನೇಶ್ ಕುಮಾರ್ ದಕ್ಷಿಣೇಶ್ವರ ಕಾಳಿ ದೇವಸ್ಥಾನಕ್ಕೆ ಭೇಟಿ...

ಉತ್ತರ ಪ್ರದೇಶ| ಹೋಳಿ ಹಬ್ಬದ ಶುಭ ಕೋರಿದ ದಲಿತ ಯುವಕನನ್ನು ಕೊಂದ ಪ್ರಬಲಜಾತಿ ಕುಟುಂಬ

ಉತ್ತರ ಪ್ರದೇಶದ ಲಕ್ನೋದ ದುಬಗ್ಗಾ ಪ್ರದೇಶದಲ್ಲಿ, ಹೋಳಿ ಹಬ್ಬದ ಸಂದರ್ಭದಲ್ಲಿ ಶುಭಕೋರಿದ 22 ವರ್ಷದ ದಲಿತ ವ್ಯಕ್ತಿಯನ್ನು ಬ್ರಾಹ್ಮಣ ಕುಟುಂಬದ ಸದಸ್ಯರು ಇರಿದು ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ. ಈ ಘಟನೆ ಮಾರ್ಚ್ 4...