ರಷ್ಯಾ ಮತ್ತು ಯುಕ್ರೇನಿನ ನಡುವೆ ನಡೆದಿದ್ದ ಮಾತುಕತೆಗಳ ಭೂಮಿಕೆಯನ್ನು ಮತ್ತು ಚದುರಂಗದಾಟದ ಹಾಸನ್ನೇ ಎಳೆದು ಕಿತ್ತೆಸೆದು ನೇರವಾಗಿ ಯುದ್ಧವನ್ನು ಹೇರಿದ್ದಾರೆ ಪುಟಿನ್. ನವನಾಜಿಗಳಿಂದ ಮತ್ತು ಅಮೆರಿಕೆಯು ಬೆಂಬಲಿಸಿ ಸುರಿದಿರುವ ಶಸ್ತ್ರಾಸ್ತ್ರಗಳಿಂದ ಯುಕ್ರೇನನ್ನು ಮುಕ್ತಗೊಳಿಸುವುದು ಈ ಯುದ್ಧದ ಉದ್ದೇಶವೆಂದು ಸಾರಿದ್ದಾರೆ.
ಭಾರತದ ಪಾಲಿಗೆ ಪಾಕಿಸ್ತಾನ ಹೇಗೋ, ರಷ್ಯಾದ ಪಾಲಿಗೆ ಯುಕ್ರೇನ್ ಹಾಗೆ. ಭಾರತದ ಪರ ಪಾಕಿಸ್ತಾನವನ್ನು ಭಾರತ ಬಯಸುವಂತೆ ರಷ್ಯಾ ಪರ ಯುಕ್ರೇನನ್ನು ನಾವು ಬಯಸುತ್ತೇವೆ ಎಂಬುದು ರಷ್ಯಾದ ಅನಧಿಕೃತ ಅಂಬೋಣ.
ರಷ್ಯಾ ಮತ್ತು ಪಶ್ಚಿಮ ಜಗತ್ತಿನ ನಡುವಣ ತಿಸ್ರದಲ್ಲಿ ಯುಕ್ರೇನ್ ಪ್ರಜೆಗಳು ಬಡವಾಗುತ್ತಿದ್ದಾರೆ. ಅನಗತ್ಯ ಯುದ್ಧದ ವಿನಾಶವನ್ನು ಅವರ ಮೇಲೆ ಹೇರಲಾಗಿದೆ. ತಿಸ್ರದ ಈ ಬೆಂಕಿ ಇಡೀ ವಿಶ್ವವನ್ನೇ ತನ್ನ ಒಡಲಿಗೆ ಸೆಳೆಯದಿರಲಿ.
ರಷ್ಯಾದ ದಾಳಿಯನ್ನು ಖಂಡಿಸುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಯ ಗೊತ್ತುವಳಿಯನ್ನು ತನ್ನ ವಿಟೋ ಅಧಿಕಾರ ಚಲಾಯಿಸಿ ನಿಷ್ಫಲಗೊಳಿಸಿದೆ ರಷ್ಯಾ. ಮುಂದಿನ ಹೆಜ್ಜೆಯಾಗಿ ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿ ಈ ಕುರಿತು ಸಭೆ ಸೇರಲಿದೆ. ರಷ್ಯಾದ ನಡೆಯನ್ನು ವಾಗ್ದಂಡನೆಗೆ ಗುರಿಪಡಿಸುವುದು ಈ ಸಭೆಯ ಉದ್ದೇಶ. ತನ್ನ ಈ ನಡೆಗೆ 80 ದೇಶಗಳ ಬೆಂಬಲವನ್ನು ಪಡೆದುಕೊಂಡಿದೆ.
ಈ ವಾಗ್ದಂಡನೆಯ ಗೊತ್ತುವಳಿ ಅಂಗೀಕಾರವಾಗದಂತೆ ವಿಟೋ ಅಧಿಕಾರ ಚಲಾಯಿಸುವ ಅವಕಾಶ ರಷ್ಯಾಕ್ಕೆ ಈ ಸಭೆಯಲ್ಲಿ ಇರುವುದಿಲ್ಲ. ಆಫ್ರಿಕನ್ ದೇಶಗಳೂ ಸೇರಿದಂತೆ ಅಭಿವೃದ್ಧಿಶೀಲ ದೇಶಗಳು ಈ ಹಿಂದಿನಂತೆ ರಷ್ಯಾದ ಪರವಾಗಿ ಮತ ಚಲಾಯಿಸುವ ಅಥವಾ ಮತದಾನದಲ್ಲಿ ಭಾಗವಹಿಸದಿರುವ ಸಾಧ್ಯತೆಯೂ ಈಗ ಇಲ್ಲ. ರಷ್ಯಾದ ನಡೆಯನ್ನು ಕೀನ್ಯಾ ಈಗಾಗಲೇ ಬಲವಾಗಿ ಖಂಡಿಸಿರುವುದೇ ಬದಲಾಗಿರುವ ಈ ನಿಲುವಿನ ನಿಚ್ಚಳ ಸೂಚನೆ. ಅಂತಾರಾಷ್ಟ್ರೀಯ ಅಭಿಮತ ರಷ್ಯಾದ ವಿರುದ್ಧವಾಗಿ ತಿರುಗತೊಡಗಿದೆ. ಈ ಹಿನ್ನೆಲೆಯಲ್ಲಿ ಚೀನಾ ಕೂಡ ರಷ್ಯಾದೆಡೆ ತೋರುತ್ತ ಬಂದಿರುವ ತನ್ನ ಮೆದು ನೀತಿಯನ್ನು ಕೈಬಿಡುವ ಒತ್ತಡ ಎದುರಿಸಲಿದೆ. ಭಾರತ ಕೂಡ ಇಂದಲ್ಲ ನಾಳೆ ಇದೇ ನೀತಿಯನ್ನು ತಳೆಯಬೇಕಾದೀತು.
ಅಮೆರಿಕ ಸಂಯುಕ್ತ ಸಂಸ್ಥಾನಗಳು ಮತ್ತು ಐರೋಪ್ಯ ಒಕ್ಕೂಟ ಒಟ್ಟಾಗಿ ರಷ್ಯಾದ ಮೇಲೆ ಏಕಪಕ್ಷೀಯ ನಿರ್ಬಂಧಗಳನ್ನು ಈಗಾಗಲೇ ಹೇರಿವೆ. ಯುಕ್ರೇನ್ ಮೇಲಿನ ರಷ್ಯಾ ದಾಳಿಯ ಮೊನಚನ್ನು ಈ ನಿರ್ಬಂಧಗಳು ಮೊಂಡುಮಾಡುವ ಮತ್ತು ದಾಳಿಯ ದೀರ್ಘಾವಧಿಯನ್ನು ಮೊಟಕಾಗಿಸುವ ನಿರೀಕ್ಷೆಯನ್ನು ಅಮೆರಿಕ ಮತ್ತು ಐರೋಪ್ಯ ಒಕ್ಕೂಟ ಹೊಂದಿದೆ. ಯುಕ್ರೇನಿಗೆ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡುವ ಭರವಸೆ ನೀಡಿವೆ ಅಮೆರಿಕ ಮತ್ತು ಜರ್ಮನಿ. ಆದರೆ ನೇರ ವಿದೇಶಿ ಸೇನಾ ನೆರವು ಹಾಗೂ ವಾಯದಾಳಿಯ ಬೆಂಬಲ ದೊರೆಯದೆ, ಕೇವಲ ತನ್ನ ಸ್ವಂತ ಬಲದಿಂದಲೇ ರಷ್ಯಾ ದಾಳಿಯನ್ನು ಯುಕ್ರೇನ್ ಹಿಮ್ಮೆಟ್ಟಿಸುವುದು ಅಸಾಧ್ಯ.
ರಷ್ಯಾದ ಈ ದಾಳಿಯನ್ನು ರಷ್ಯಾದ ಮಿತ್ರದೇಶಗಳು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಹೆಚ್ಚು ಕಾಲ ಸಮರ್ಥಿಸುವ ಸ್ಥಿತಿಯಲ್ಲಿ ಇಲ್ಲ. ರಷ್ಯಾ ಬೆನ್ನಿಗೆ ಬಲವಾಗಿ ನಿಲುತ್ತ ಬಂದಿರುವ ಚೀನಾ ದೇಶ ಕೂಡ ಈ ಮಾತಿಗೆ ಹೊರತಲ್ಲ.
ತಾನು ಗೆದ್ದೆನೆಂದು ಪುಟಿನ್ ಬೀಗಬಹುದು. ಆದರೆ ಅವರು ಗೆದ್ದು ಸೋಲಲಿದ್ದಾರೆ. ಯುಕ್ರೇನ್‌ನ ಜನ ಸೋತು ಗೆಲ್ಲಲಿದ್ದಾರೆ. ಈ ಗೆಲುವು ಸೋಲುಗಳ ನಡುವಣ ರಕ್ತಪಾತ, ಕಣ್ಣೀರು, ಸಾವುನೋವು, ವಿನಾಶದ ಬೆಲೆ ಕಟ್ಟಲಾದೀತೇ?
ರಷ್ಯಾದ ಮಿಲಿಟರಿ ಶಕ್ತಿಗೆ ಹೆದರಿ ದಂಗುಬಡಿದು ಆರಂಭದಲ್ಲೇ ಶರಣಾದೀತು ಎಂಬ ನಿರೀಕ್ಷೆಯನ್ನು ಯುಕ್ರೇನ್ ಹುಸಿಮಾಡಿದೆ. ದಿಟ್ಟ ಪ್ರತಿರೋಧ ತೋರಿರುವ ಯುಕ್ರೇನ್ ಸೇನೆ ಸುಲಭಕ್ಕೆ ಮಣಿಯುವುದಿಲ್ಲವೆಂದು ಸಾಬೀತುಮಾಡಿದೆ. ವಿಶ್ವಾದ್ಯಂತ ಬ್ರಹ್ಮಾಸ್ತ್ರವನ್ನು ಎದುರಿಸುತ್ತಿರುವ ಗುಬ್ಬಿ ಎಂಬ ಅನುಕಂಪ ಮೆಚ್ಚುಗೆಯನ್ನು ಗಳಿಸಿದೆ. ಜನಸಾಮಾನ್ಯರೂ ಸೇನೆಯ ಸಮವಸ್ತ್ರ ಧರಿಸಿ ಶಸ್ತ್ರಗಳನ್ನು ಕೈಗೆತ್ತಿಕೊಂಡು ಸೆಣಸುತ್ತಿದ್ದಾರೆ. ಯುಕ್ರೇನ್ ಅಧ್ಯಕ್ಷ ವೋಲೋಡಿಮಿರ್ ಝೆಲೆಸ್ಸ್ಕಿ ನಿಜ ನಾಯಕಮಣಿಯಂತೆ ತಮ್ಮ ಸೇನೆಯ ಮುಂಚೂಣಿಯಲ್ಲಿದ್ದು ಮುನ್ನಡೆಸುತ್ತಿದ್ದಾರೆ. ತಮ್ಮ ಜನರ ಜೊತೆ ಗಟ್ಟಿಯಾಗಿ ನಿಂತಿದ್ದಾರೆ. ಅಮೆರಿಕದ ಕೈಗೊಂಬೆಯಾಗಿರುವ ನವನಾಜೀವಾದಿ ಎಂಬ ರಷ್ಯಾದ ನಿಂದನೆ ಅವರಿಗೆ ಅಂಟಿದಂತಿಲ್ಲ.
ತನ್ನ ಅನುಗಾಲದ ಮಿತ್ರ ರಷ್ಯಾ ದೇಶ ತನ್ನ ನೆರೆಹೊರೆಯ ದುರ್ಬಲ ಸ್ವತಂತ್ರ ಸಾರ್ವಭೌಮ ದೇಶದ ಮೇಲೆ ನಡೆಸಿರುವ ಈ ಹಿಂಸಾತ್ಮಕ ಯುದ್ಧವನ್ನು ಖಚಿತವಾಗಿ ಖಂಡಿಸುವ ಸ್ಥಿತಿಯಲ್ಲಿ ಭಾರತ ಇಲ್ಲ. ಆದರೆ ಪುಟಿನ್ ದಾಳಿ ಮುಂಬರುವ ದಿನಗಳಲ್ಲಿ ಮತ್ತಷ್ಟು ವಿನಾಶಕಾರಿಯಾದರೆ ಭಾರತ ಮೌನ ಮುರಿಯಲೇಬೇಕಾಗುತ್ತದೆ.
ಯುದ್ಧ ನಡೆಸುತ್ತಿರುವ ಪುಟಿನ್ ತಮ್ಮ ದೇಶವಾಸಿಗಳಲ್ಲಿ ಅಸ್ಮಿತೆಯ ಸಂಕಟದೊಂದಿಗೆ ಆರ್ಥಿಕ ಸಂಕಟವನ್ನೂ ಹುಟ್ಟುಹಾಕಿದ್ದಾರೆ. ರಷ್ಯಾದ ನಾಗರಿಕರ ಹತ್ತಾರು ಲಕ್ಷ ಬಂಧು-ಮಿತ್ರರು ಯುಕ್ರೇನಿನಲ್ಲಿದ್ದಾರೆ. ಯುಕ್ರೇನಿನ ಮೇಲೆ ಯುದ್ಧ ಹೇರಿರುವ ರಷ್ಯಾದ ನಡೆಯನ್ನು ರಷ್ಯಾದ ನಾಗರಿಕರು ಬಲವಾಗಿ ವಿರೋಧಿಸಿದ್ದಾರೆ. ಯುಕ್ರೇನಿನೊಂದಿಗೆ ತಾವು ಸಾರಿರುವುದು ಪೂರ್ಣಪ್ರಮಾಣದ ಯುದ್ಧ ಎಂಬ ಸಂಗತಿಯನ್ನು ತಮ್ಮ ನಾಗರಿಕರಿಂದ ಮುಚ್ಚಿಡಲು ಪ್ರಯತ್ನಿಸಿದ್ದಾರೆ. ಈ ಯುದ್ಧವನ್ನು ಯುದ್ಧವೆಂದು ಕರೆಯದಂತೆ ರಷ್ಯನ್ ಸಮೂಹ ಮಾಧ್ಯಮಗಳಿಗೆ ತಾಕೀತು ಮಾಡಿದ್ದಾರೆ. ನಿಧಾನವಾಗಿ ಆದರೆ ನಿಶ್ಚಿತವಾಗಿ ಆರ್ಥಿಕ ತಳಮಳ ರಷ್ಯಾ ಜನಜೀವನಕ್ಕೆ ಬಿಸಿಮುಟ್ಟಿಸತೊಡಗಿದೆ. ಪಶ್ಚಿಮ ಜಗತ್ತು ಹೇರುತ್ತಿರುವ ನಿರ್ಬಂಧಗಳು ಮತ್ತು ಡಾಲರ್-ರೂಬಲ್ ವಿನಿಮಯ ದರ ಕುಸಿತದ ಬೆಳವಣಿಗೆಗಳು ಬೆಲೆ ಏರಿಕೆಯ ಝಳವನ್ನು ಹೆಚ್ಚಿಸುತ್ತಿವೆ. ಪುಟಿನ್‌ರನ್ನು ಮಹಾನ್ ಎಂದು ಗಟ್ಟಿಯಾಗಿ ಜಯಕಾರ ಹಾಕುತ್ತಿದ್ದ ಜನದನಿಗಳು ಕ್ಷೀಣಗೊಳ್ಳತೊಡಗಿವೆ. ಭಿನ್ನದನಿಗಳನ್ನು ಉಕ್ಕಿನ ಹಸ್ತದಿಂದ ಹಿಸುಕಿ ಹತ್ತಿಕ್ಕುವ ಸೂಚನೆಗಳು ನಿಚ್ಚಳವಾಗತೊಡಗಿವೆ. ಯುಕ್ರೇನ್ ಮೇಲಿನ ದಾಳಿ ದಟ್ಟ, ಹಿಂಸಾತ್ಮಕ ಹಾಗೂ ವಿನಾಶಕಾರಿಯಾದಷ್ಟೂ ರಷ್ಯಾದ ಜನಮಾನಸದಲ್ಲಿ ಪುಟಿನ್ ವರ್ಚಸ್ಸು ಕುಸಿಯಲಿದೆ. ಈ ಯಾವ ಕಾರಣಗಳೂ ಪುಟಿನ್ ಅವರನ್ನು ವಿಚಲಿತಗೊಳಿಸಿಲ್ಲ.
ರಷ್ಯಾ ಮತ್ತು ಯುಕ್ರೇನಿನ ನಡುವೆ ನಡೆದಿದ್ದ ಮಾತುಕತೆಗಳ ಭೂಮಿಕೆಯನ್ನು ಮತ್ತು ಚದುರಂಗದಾಟದ ಹಾಸನ್ನೇ ಎಳೆದು ಕಿತ್ತೆಸೆದು ನೇರವಾಗಿ ಅಲ್ಲಿನ ಜನರ ಮೇಲೆ ಯುದ್ಧವನ್ನು
ಹೇರಿದ್ದಾರೆ ಪುಟಿನ್. ನವನಾಜಿಗಳಿಂದ ಮತ್ತು ಅಮೆರಿಕೆಯು ಬೆಂಬಲಿಸಿ ಸುರಿದಿರುವ ಶಸ್ತ್ರಾಸ್ತ್ರಗಳಿಂದ ಯುಕ್ರೇನನ್ನು ಮುಕ್ತಗೊಳಿಸುವುದು ಈ ಯುದ್ಧದ ಉದ್ದೇಶವಂತೆ.
ಹಾಲಿ ಪ್ರಧಾನಿ ವೊಲೋಡೋಮಿರ್ ಝೆಲೆಸ್ಕಿ ಅವರ ಆಡಳಿತದಲ್ಲಿ ನ್ಯಾಟೋದತ್ತ ಹೆಚ್ಚುಹೆಚ್ಚು ನಿಶ್ಚಿತವಾಗಿ ವಾಲಿದ ಯುಕ್ರೇನ್ ರಷ್ಯಾದ ಜೊತೆಗಿನ ವಾಣಿಜ್ಯ ವ್ಯಾಪಾರವನ್ನೂ ತಗ್ಗಿಸಿದ್ದು ಪುಟಿನ್ ಅವರನ್ನು ಕೆರಳಿಸಿದೆ.
ರಷ್ಯಾ ಮತ್ತು ಪಶ್ಚಿಮ ಜಗತ್ತಿನ ನಡುವಣ ತಿಸ್ರದಲ್ಲಿ ಯುಕ್ರೇನ್ ಪ್ರಜೆಗಳು ಬಡವಾಗುತ್ತಿದ್ದಾರೆ. ಅನಗತ್ಯ ಯುದ್ಧದ ವಿನಾಶವನ್ನು ಅವರ ಮೇಲೆ ಹೇರಲಾಗಿದೆ. ಈ ದುರ್ಬಲ ದೇಶದ ಮೇಲೆ ಅಣ್ವಸ್ತ್ರಗಳನ್ನು ಪ್ರಯೋಗಿಸುವ ಬೆದರಿಕೆಯನ್ನು ಪುಟಿನ್ ಹಾಕಿದ್ದಾರೆ. ದುರ್ಬಲ ಯುಕ್ರೇನ್ ಮಾತುಕತೆಯ ಮೇಜಿಗೆ ಬರಲು ಒಪ್ಪಿದೆ. ಪುಟಿನ್ ಯುದ್ಧ ಗೆಲ್ಲಬಹುದೇ ವಿನಾ ಮನಸುಗಳನ್ನಲ್ಲ
ಇದನ್ನೂ ಓದಿ: ಯುದ್ಧಪಿಪಾಸು ಶಕ್ತಿಗಳ ಮತ್ತು ಪಾಪ್ಯುಲಿಸ್ಟ್ ಮುಖಂಡರ ನಡುವೆ ನಲುಗುತ್ತಿರವ ಮುಗ್ಧ ಜನರ ಪ್ರಾಣ
ಇದನ್ನೂ ಓದಿ: ರಷ್ಯಾ-ಉಕ್ರೇನ್ ಬಿಕ್ಕಟ್ಟು: 352 ಉಕ್ರೇನಿಯನ್ ನಾಗರಿಕರು ಸಾವು, 1,684 ಮಂದಿಗೆ ಗಾಯ


