ಕೊರೊನಾ ಸೋಂಕು ಯಾವುದೇ ವ್ಯಕ್ತಿ, ವಯಸ್ಸು, ಸಮಯ ಎಂದು ನೋಡುವುದಿಲ್ಲ. ಎಲ್ಲರಲ್ಲೂ ಹರಡುತ್ತಾ ಹೋಗುತ್ತದೆ. ಹೀಗೆ ಕೊರೊನಾ ಸೋಂಕಿಗೆ ಒಳಗಾದ ವರನನ್ನು, ಪಿಪಿಎ ಕಿಟ್ ಧರಿಸಿದ್ದ ವಧು, ಕೋವಿಡ್ ವಾರ್ಡ್ ಹೊರಗೆ ಮದುವೆಯಾಗಿರುವ ಘಟನೆ ಕೇರಳದಲ್ಲಿ ನಡೆದಿದೆ.
ಕೇರಳದ ಅಲಪ್ಪುಳ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಲಪ್ಪುಳ ಜಿಲ್ಲೆಯ ಕೈನಕರಿ ನಿವಾಸಿ ಶರತ್ ಮೂನ್ (28) ಮತ್ತು ತೆಕ್ಕಾನಾರ್ಯ ನಿವಾಸಿ ಅಭಿರಾಮಿ (20) ಕೋವಿಡ್ ವಾರ್ಡ್ ಹೊರಗೆ ಮದುವೆಯಾಗಿದ್ದಾರೆ.
ವರ ಶರತ್ ಮೂನ್ ಮತ್ತು ಅವರ ತಾಯಿಗೆ ಕೊರೊನಾ ಸೋಂಕು ತಗುಲಿದ್ದು, ಏಪ್ರಿಲ್ 21 ರಿಂದ ಆಸ್ಪತ್ರೆಯಲ್ಲಿದ್ದಾರೆ. ಮದುವೆಗೆ ಮತ್ತೆ ಯಾವುದೇ ಶುಭ ದಿನಾಂಕಗಳಿಲ್ಲ ಎಂದು ಎರಡು ಕುಟುಂಬಗಳು ಸೇರಿ ಕೊರೊನಾ ನಿಯಮಾವಳಿಗಳನ್ನು ಅನುಸರಿಸಿಕೊಂಡು, ಜಿಲ್ಲಾಧಿಕಾರಿ ಮತ್ತು ಆಸ್ಪತ್ರೆ ಅಧಿಕಾರಿಗಳ ಒಪ್ಪಿಗೆ ಪಡೆದು, ಆಸ್ಪತ್ರೆಯಲ್ಲಿ ಮದುವೆ ಮಾಡಿಸಿದ್ದಾರೆ.
ಇದನ್ನೂ ಓದಿ: ದೆಹಲಿ: ಕೊರೊನಾ ಸೋಂಕಿತರಿಗಾಗಿ ಆಕ್ಸಿಜನ್ ಲಂಗರ್ ಆರಂಭಿಸಿದ ಗುರುದ್ವಾರ
Kerala: A couple tied knots at Alappuzha medical college and hospital today, with the bride wearing a PPE kit as the bridegroom is #COVID19 positive. The wedding took place at the hospital with the permission of the District Collector. pic.twitter.com/2IdsRDvcHZ
— ANI (@ANI) April 25, 2021
ವಧು ಅಭಿರಾಮಿ ಪಿಪಿಇ ಕಿಟ್ ಧರಿಸಿ, ಸಂಬಂಧಿಕರೊಡನೆ ‘ಮುಹೂರ್ತಕ್ಕೆ ಸರಿಯಾಗಿ ಆಸ್ಪತ್ರೆಗೆ ತಲುಪಿದ್ದಾರೆ. ತುಳಸಿ ಎಲೆಗಳಿಂದ ಮಾಡಿದ ಹೂಮಾಲೆಗಳನ್ನು ಧರಿಸಿದ್, ವಧುವಿನ ತಾಯಿ ಮತ್ತು ಕೆಲವು ಆಸ್ಪತ್ರೆಯ ಸಿಬ್ಬಂದಿ ಸಮ್ಮುಖದಲ್ಲಿ ವಿವಾಹವಾಗಿದ್ದಾರೆ.
ಮನೆಯಲ್ಲಿ ಕ್ವಾರಂಟೈನ್‌ನಲ್ಲಿರುವ ವರನತಂದೆ ಎನ್. ಶಶಿಧರನ್, ತನ್ನ ಮಗನ ಮದುವೆಗೆ ಹಾಜರಾಗದಿರುವುದರ ಬಗ್ಗೆ ಬೇಸರವಾಗಿದ್ದರೂ, ನಿಗದಿ ಪಡಿಸಿದ್ದ ಮುಹೂರ್ತದಲ್ಲಿ ಮದುವೆ ನಡೆದಿರುವುದಕ್ಕೆ ಸಂತೋಷವಾಯಿತು ಎಂದು ಹೇಳಿದ್ದಾರೆ.
ಕೋವಿಡ್ ಪ್ರೋಟೋಕಾಲ್ ಅನುಸರಿಸಿ ವಿವಾಹವನ್ನು ನಡೆಸಲಾಗಿದೆ ಎಂದು ಎಂಸಿಎಚ್ ಅಧಿಕಾರಿಗಳು ತಿಳಿಸಿದ್ದಾರೆ. ಗಲ್ಫ್‌ನಲ್ಲಿ ಕೆಲಸ ಮಾಡುತ್ತಿರುವ ಶರತ್ ಮೂನ್ ಮತ್ತು ಅವರ ತಾಯಿ ಜಿಜಿಮೋಲ್ ಅವರು ಇತ್ತೀಚೆಗೆ ಕೊರೊನಾ ಸೋಂಕಿಗೆ ಒಳಗಾಗಿ ನಂತರ ಆಸ್ಪತ್ರೆಗೆ ದಾಖಲಾಗಿದ್ದರು.
ಒಂದು ವರ್ಷದ ಹಿಂದೆ ಮದುವೆ ನಡೆಸಲು ನಿಶ್ಚಯಿಸಲಾಗಿತ್ತು. ಕೊರೊನಾ ಕಾರಣದಿಂದ ಮುಂದೂಡಲಾಗಿತ್ತು. ಈಗ ಮತ್ತೆ ಮುಂದೂಡಿದರೆ ಒಳ್ಳೆಯ ಮುಹೂರ್ತ ದೊರೆಯುವುದಿಲ್ಲ ಎಂದು ಅಧಿಕಾರಿಗಳ ಅನುಮತಿ ಪಡೆದು ಮದುವೆ ನಡೆಸಲಾಗಿದೆ.
ಇದನ್ನೂ ಓದಿ: ಸಂಪಾದಕರ ವಿರುದ್ಧ ಪತ್ರ: ಟೈಮ್ಸ್ ನೌ ಚಾನೆಲ್‌ನ ಹಾಲಿ, ಮಾಜಿ ಪತ್ರಕರ್ತರ ಜೊತೆ ನಿಲ್ಲೋಣ


