Homeಕರ್ನಾಟಕಹಳತು-ವಿವೇಕ; ನಮ್ಮ ಸರ್ಕಾರಗಳು ಮಾಡುತ್ತಿರುವ ಸಾಂಸ್ಥಿಕ ಬದಲಾವಣೆಗಳು

ಹಳತು-ವಿವೇಕ; ನಮ್ಮ ಸರ್ಕಾರಗಳು ಮಾಡುತ್ತಿರುವ ಸಾಂಸ್ಥಿಕ ಬದಲಾವಣೆಗಳು

- Advertisement -
- Advertisement -

ರೈತ ಚಳವಳಿ ಎದುರಿಸಬೇಕಾಗಿರುವ ಸಮಸ್ಯೆಗಳು; ವಿಶ್ವ ವ್ಯಾಪಾರಿ ಸಂಸ್ಥೆ ಮತ್ತು ಹುನ್ನಾರಗಳು: ಕೊನೆಯ ಕಂತು

ಭೂಸುಧಾರಣೆ ನಿರ್ನಾಮ

ಮೊದಲನೆಯದಾಗಿ, ಐದು ಎಕರೆಗಿಂತ ಕಡಿಮೆ ಹಿಡುವಳಿ ಇರುವ ರೈತರೇ ನಮ್ಮ ದೇಶದಲ್ಲಿ ಮುಕ್ಕಾಲು ಭಾಗ ಇರುವುದರಿಂದ, ಇವರುಗಳು ಈಗಾಗಲೇ ಜಾರಿಗೆ ಬರುತ್ತಿರುವ ವಿಶ್ವವಾಣಿಜ್ಯ ಸಂಸ್ಥೆಯ ನೀತಿಗಳಿಂದಾಗಿ ಮತ್ತು ಕೋಟ್ಯಂತರ ರೂಪಾಯಿಗಳನ್ನು ಸಂಶೋಧನೆಗೆ ಖರ್ಚು ಮಾಡಿ ತಯಾರಿಸಿದ ವಂಶವಾಹಿ ವಿಕೃತ ಬೀಜ ಮತ್ತು ರಸಾಯನಿಕಗಳು ಅತ್ಯಂತ ದುಬಾರಿಯಾಗುವ ಕಾರಣದಿಂದಲೂ, ಈ ಸಣ್ಣ ರೈತರೆಲ್ಲ ಒಕ್ಕಲೇಳುವುದು ನಿಶ್ಚಿತ. ಸಣ್ಣ ಹಿಡುವಳಿಗಳಲ್ಲಿ ದೊಡ್ಡ ಹಿಡುವಳಿಗಳಿಗಿಂತ ಉತ್ಪಾದನೆ ಕಡಿಮೆ ಎನ್ನುವ ಆಧಾರರಹಿತ ನಂಬಿಕೆ ನಮ್ಮ ಸರ್ಕಾರಗಳಿಗಿರುವುದರಿಂದ, ರೈತರಲ್ಲದವರೂ ಕೃಷಿಭೂಮಿಯ ಮಾಲಿಕರಾಗಲೂ, ರೈತರಲ್ಲದವರೂ ಕೃಷಿ ಭೂಮಿಯನ್ನು ಗೇಣಿ ಪಡೆಯಲೂ ಅವಕಾಶವಾಗುವಂತೆ ಭೂಸುಧಾರಣೆ ಕಾನೂನುಗಳಿಗೆ ಹಾಗೂ ಭೂಮಿತಿ ಕಾನೂನುಗಳಿಗೆ ತಿದ್ದುಪಡಿ ಮಾಡುತ್ತಿವೆ. ಕರ್ನಾಟಕದ ತಿದ್ದುಪಡಿ ಇದಕ್ಕೆ ಪ್ರಪ್ರಥಮ ಉದಾಹರಣೆ.

ರೈತರಿಗೆ ಸ್ಥಾನಮಾನವೇ ಇಲ್ಲದ ತಳಿ ರಕ್ಷಣೆ ಮತ್ತು ಜೈವಿಕ ವೈವಿಧ್ಯತೆ ಕಾನೂನುಗಳು

ಶತಶತಮಾನಗಳಿಂದ ನಮ್ಮ ದೇಶದ ತಳಿಗಳನ್ನು ರಕ್ಷಣೆ ಮಾಡುವುದಲ್ಲದೆ, ಹೊಸಹೊಸ ತಳಿಗಳನ್ನು ಗುರುತಿಸಿ, ಜೈವಿಕ ವೈವಿಧ್ಯತೆಯನ್ನು ವೃದ್ಧಿಗೊಳಿಸುತ್ತಾ ಹಾಗೂ ರಕ್ಷಿಸುತ್ತಾ ಬಂದಿರುವ ರೈತರನ್ನು ದೇಶದ ಜೈವಿಕ ವೈವಿಧ್ಯತೆಯ ಮಾಲಿಕರು ಮತ್ತು ಹಕ್ಕುದಾರರು ಎಂದು ಗುರುತಿಸದೆ ಸರ್ಕಾರ ಕೇವಲ ಬೀಜದ ಕಂಪೆನಿಗಳಿಗೆ ಬೀಜೋತ್ಪಾದನೆಯ ಎಲ್ಲ ಹಕ್ಕುಗಳನ್ನು ಧಾರೆಯೆರೆಯುವ ತಳಿ ರಕ್ಷಣೆ (PLANT VARIETIES PROTECTION AND FARMERS’ RIGHTS ACT) ಕಾನೂನು ಮತ್ತು ಜೈವಿಕ ವೈವಿಧ್ಯತೆ ಕಾನೂನುಗಳನ್ನು ಮಾಡಲು ಹೊರಟಿದೆ.

ಈ ಕಾನೂನುಗಳನ್ನು ಜಾರಿಗೆ ತರಹೊರಟ ಉದ್ದಿಶ್ಯ ರೈತರೇ ತಯಾರುಮಾಡಿಕೊಳ್ಳುವ ಬಿತ್ತನೆ ಬೀಜಗಳ ಮೇಲೆ ನಿಯಂತ್ರಣಗಳನ್ನು ಹೇರುವುದು ಹಾಗೂ ಬೀಜದ ಕಂಪೆನಿಗಳ ಬೀಜಗಳಿಗೇ ಸಾರ್ವಭೌಮತ್ವ ಸ್ಥಾನ ಕೊಡುವುದೇ ಆಗಿದೆ.

ಕರಾರು ಕೃಷಿ ಮೂಲಕ ಹೊಸ ಜಮೀನ್ದಾರಿ ಜಾರಿಗೆ

ಹೊಸಹೊಸ ತಂತ್ರಜ್ಞಾನಗಳನ್ನು ಅಂದರೆ ಜೈವಿಕ ತಂತ್ರಜ್ಞಾನವನ್ನು ಹಾಗೂ ಹೊಸಹೊಸ ಕೃಷಿ ಸಲಕರಣೆಗಳನ್ನು ಕೃಷಿಗೆ ಅಳವಡಿಸುವ ಯೋಜನೆಯೊಂದು ಜಾರಿಗೆ ಬರುತ್ತಿದೆ. ಇಂತಹ ಕೃಷಿಗೆ ದೊಡ್ಡ ಬಂಡವಾಳದ ಅವಶ್ಯಕತೆಯಿದೆ ಎನ್ನುವ ಕಾರಣ ಕೊಟ್ಟು ಸಾವಿರಾರು ಎಕರೆ ಭೂಮಿಯನ್ನು ಕೈಗಾರಿಕಾ ಕ್ಷೇತ್ರದ ಬಂಡವಾಳಶಾಹಿಗಳಿಗಾಗಿ ಸ್ವಾಧೀನಪಡಿಸಿಕೊಂಡು ಧಾರೆಯೆರೆಯುವ ಕಾರ್ಯಕ್ರಮ ಇದು. ಇದರ ಜೊತೆಗೇ, ಸ್ವಲ್ಪ ದೊಡ್ಡ ಹಿಡುವಳಿಯಿರುವ “ಮಧ್ಯಮ” ಹಾಗೂ “ದೊಡ್ಡ” ರೈತರೊಂದಿಗೆ ಕೈಗಾರಿಕಾ ಕಂಪನಿಗಳು ಕರಾರುಗಳ ಮೂಲಕ ಈ ಹೊಸ ತಂತ್ರಜ್ಞಾನದ ಕೃಷಿಯನ್ನು ಪ್ರಾರಂಭಿಸುವ ಕಾರ್ಯಕ್ರಮವಿದು. ಇದಕ್ಕೆ “ಕರಾರು ಕೃಷಿ” ಎನ್ನುತ್ತಾರೆ.

ಪ್ರಾರಂಭಕ್ಕೆ ನಮ್ಮ ದೇಶದ ಕೈಗಾರಿಕಾ ಮಾಲಿಕರ ಮೂಲಕ ಈ ಕಾರ್ಯಕ್ರಮ ಆರಂಭಿಸಿ, ಕ್ರಮೇಣ ಪರಂಗಿ ಕಂಪೆನಿಗಳಿಗೂ ಅವಕಾಶ ಮಾಡಿಕೊಡುವ ಸಂಚು ಇದು.

ಬೇರೆ ದೇಶಗಳಲ್ಲಾದ ಅನುಭವಗಳ ಪ್ರಕಾರ, ಈ ಕರಾರುಗಳ ಕುತಂತ್ರಗಳು ಕರಾರುಗಳಿಗೊಳಪಟ್ಟು ರೈತರನ್ನೇ ಒಕ್ಕಲೆಬ್ಬಿಸುವಷ್ಟು ಶಕ್ತಿಯುಳ್ಳವು. ಜೊತೆಗೆ, ದೊಡ್ಡದೊಡ್ಡ ಕೃಷಿಯಂತ್ರಗಳ ಅಳವಡಿಕೆಯಿಂದಾಗಿ ಭೂಹೀನ ಕೃಷಿ ಕಾರ್ಮಿಕರ ಜೀವನಕ್ಕೆ ಕುತ್ತು ತರುವ ಕಾರ್ಯಕ್ರಮವಿದು.

ರೊಕ್ಕದ ಬೆಳೆಗಳನ್ನು ಬೆಂಬಲಿಸುವ ಕೃಷಿ ನೀತಿಯಿಂದ “ಅಹಾರ ಭದ್ರತೆ”ಗೆ ಧಕ್ಕೆ

ಈಗಾಗಲೇ ಜಾರಿಗೆ ಬರುತ್ತಿರುವ ಕೃಷಿ ನೀತಿಯು ಪರಂಗಿ ದೇಶಗಳ ಅನುಕೂಲಕ್ಕೆ ತಕ್ಕಂತೆ ರೂಪಿತವಾಗಿದೆ. ಪರಂಗಿಯವರಿಗೆ ಬೇಕಾದ ಆಹಾರ ಮತ್ತು ಅವರ ದನ, ಹಂದಿಗಳಿಗೆ ಬೇಕಾದ ಆಹಾರ ಬೆಳೆಯುವುದಕ್ಕೆ ನಮ್ಮ ದೇಶದ ಕೃಷಿ ನೀತಿ ಬೆಂಬಲ ಕೊಡುತ್ತಿದೆ.

ನಾವು ಈಗ ಬೆಳೆಯುತ್ತಿರುವ ಸೋಯಾ ಅವರೆ ಮತ್ತು ಹಲ್ಲಿನ ಜೋಳದಲ್ಲಿ (ಗೋವಿನ ಜೋಳ) ಬಹುಪಾಲು ಪರಂಗಿ ದೇಶದ ದನಗಳ ಆಹಾರದ ಕಾರ್ಖಾನೆಗಳಿಗೆ ರಫ್ತಾಗುತ್ತಿದೆ. ಇಲ್ಲವೆ, ದನದ ಆಹಾರವಾಗಿ ತಯಾರಿಸಲ್ಪಟ್ಟು ರಫ್ತಾಗುತ್ತಿದೆ. ಇದೇ ರೀತಿ, ಆಹಾರ ಧಾನ್ಯಗಳನ್ನು ದೊಡ್ಡ ಪ್ರಮಾಣದಲ್ಲಿ ಬಳಸುವ ಕೋಳಿ ಸಾಕಣೆ ಮತ್ತು ಹೈನುಗಾರಿಕೆಗೆ ಬೆಂಬಲ ಕೊಡಲಾಗುತ್ತಿದೆ. ಮಾಂಸದ ರಫ್ತಿನಿಂದಾಗಿ, ದೇಶದ ಜಾನುವಾರು ಸಂಖ್ಯೆ ಕಡಿಮೆಯಾಗುತ್ತಿವೆ.

ಇವುಗಳ ಜೊತೆಗೆ, ಪರಂಗಿಯವರಿಗೆ ಬೇಕಾದ ಮೀನು ಮತ್ತು ಸೀಗಡಿ ಬೇಸಾಯಕ್ಕೆ ಕೃಷಿಯ ಸ್ಥಾನಮಾನ ಕೊಡಲಾಗಿದೆ. ಕಡಲತೀರದ ಲಕ್ಷಾಂತರ ಎಕರೆ ಬತ್ತದ ಗದ್ದೆಗಳು ಶಾಶ್ವತವಾಗಿ ಹಾಳಾಗಲಿವೆ. ಇದೆಲ್ಲ ಸಾಲದೆಂಬಂತೆ, ಹೂವುಗಳನ್ನು ಬೆಳೆಯುವ ಪುಷ್ಪ ಕೃಷಿಗೂ ಬೆಂಬಲ ಕೊಡಲಾಗಿದೆ.

ಇವೆಲ್ಲ ನೀತಿಗಳಿಂದ ಆಹಾರ ಬೆಳೆಯುವ ಪ್ರದೇಶ ಕಡಿಮೆಯಾಗಿ, ಆಹಾರವನ್ನು ಬೇರೆ ದೇಶಗಳಿಂದ ಖರೀದಿ ಮಾಡಿ ತಿನ್ನಬೇಕಾದ ಸ್ಥಿತಿಗೆ ದೇಶ ಬರುತ್ತಿದೆ.

ದೇಶದ ಆಹಾರ ಭದ್ರತೆಗೆ ಉಂಟಾಗುತ್ತಿರುವ ಗಂಡಾಂತರವಿದು. ಇದನ್ನೂ ನಾವೆಲ್ಲ ತಡೆಯಬೇಕಾಗಿದೆ. ಇವಿಷ್ಟು ಇನ್ನು ಮುಂದೆ ನಾವು ನೋಡಬೇಕಾಗಿರುವ ಮತ್ತು ಎದುರಿಸಬೇಕಾಗಿರುವ ಕೆಟ್ಟ ಬೆಳವಣಿಗೆಗಳು.

ಪರಿಹಾರ ಏನು? ಹೋರಾಟ ಮತ್ತು ಪರ್ಯಾಯಗಳ ಸೃಷ್ಟಿ

ಇಷ್ಟೆಲ್ಲ ಗಂಡಾಂತರಗಳು ಗೊತ್ತಾದ ಮೇಲೆ, ನಮ್ಮ ಸರ್ಕಾರಗಳು ಈ ಹೊಸ ನೀತಿಗಳನ್ನು ಜಾರಿಗೆ ತರುತ್ತಿರುವಾಗ ನಮಗಿರುವ ಪರಿಹಾರ ಒಂದೇ: ಕೃಷಿ ಕ್ಷೇತ್ರಕ್ಕೆ ಮತ್ತು ರೈತರಿಗೆ ಮಾರಕವಾದ ನೀತಿಗಳನ್ನೇ ನಿಷ್ಕ್ರಿಯಗೊಳಿಸುವ ಸಂಘಟನೆ ಪ್ರಯತ್ನ ಹಾಗೂ ಈ ನೀತಿಗಳನ್ನು ಸೋಲಿಸುವ ಶಕ್ತಿಯುಳ್ಳ ಪರ್ಯಾಯ ವ್ಯವಸ್ಥೆಯ ಸೃಷ್ಟಿ. ಅಂದರೆ, ಒಂದು “ಪರ್ಯಾಯ ಸರ್ಕಾರ”ವನ್ನೇ ನಡೆಸುವಂತಹ ಸಂಘಟನೆ ಇಂದಿನ ಅವಶ್ಯಕತೆ.

ರೈತರ “ಪರ್ಯಾಯ ಸರ್ಕಾರ” ಮಾಡಬೇಕಾದ ಹೋರಾಟಗಳು

ಸಹಾಯಧನ ರದ್ದಿನಿಂದಾಗಿ (ಉದಾಹರಣೆಗೆ: ರಸಗೊಬ್ಬರ, ವಿದ್ಯುಚ್ಛಕ್ತಿ, ಪಡಿತರ ಆಹಾರ) ಹೆಚ್ಚುತ್ತಿರುವ ಒಕ್ಕಲುತನದ ವೆಚ್ಚ ಮತ್ತು ಹೊರದೇಶಗಳಿಂದ ಆಮದಾಗುತ್ತಿರುವ ಕೃಷಿ ವಸ್ತುಗಳಿಂದಾಗಿ ಆಗುತ್ತಿರುವ ಬೆಲೆ ಕುಸಿತ – ಈ ಕಾರಣ ದಿನೇದಿನೇ ಉಲ್ಬಣವಾಗುತ್ತಿರುವ ಸಾಲದ ಹೊರೆ; ಇವುಗಳ ವಿರುದ್ಧ ಹೋರಾಟ, ವೈಜ್ಞಾನಿಕ ಬೆಲೆಗಾಗಿ ಹೋರಾಟ, ಬೆಲೆ ರಕ್ಷಣೆಗಾಗಿ ಹೋರಾಟ, ಅಮೆರಿಕ ಮತ್ತು ಯುರೋಪಿನಂತೆ ಕೊರತೆಯ ಪಾವತಿಗಾಗಿ ಹೋರಾಟ, ಸಾಲ ರದ್ದಿಗಾಗಿ ಹೋರಾಟ, ಸಾಲ ನಿರಾಕರಣೆ ಚಳವಳಿ, ಕರ ನಿರಾಕರಣೆ ಚಳವಳಿ, ಜಪ್ತಿ ವಿರೋಧಿ ಚಳವಳಿ, ಮರು ಜಪ್ತಿ ಚಳವಳಿ, ಹಾಗೂ ಆಮದುಗಳ ವಿರುದ್ಧ ಚಳವಳಿ, ಬಂದರುಗಳ ಮುತ್ತಿಗೆ ಮೂಲಕ ಈ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರಕ್ಕೆ ಅಡ್ಡಿಯಾಗಿರುವ ವಿಶ್ವವಾಣಿಜ್ಯ ಸಂಸ್ಥೆಯಿಂದ ಸರ್ಕಾರ ಹೊರಬರುವಂತೆ ಒತ್ತಾಯ.

ಜೈವಿಕ ತಂತ್ರಜ್ಞಾನದ ವಂಶವಾಹಿ ವಿಕೃತ ಬೀಜಗಳ ಬಹಿಷ್ಕಾರ ಚಳವಳಿ; ಪರಂಗಿ ಬೀಜದ ಕಂಪೆನಿಗಳ ಪ್ರವೇಶದ ವಿರುದ್ಧ ಚಳವಳಿ.

ಭೂಸುಧಾರಣೆ ತಿದ್ದುಪಡಿಗಳ ವಿರುದ್ಧ ಹೋರಾಟ; ವಲಸೆ ಬಂದಿರುವ ರೈತರ ಸಂಘಟನೆ ಹಾಗೂ ಕೃಷಿ ಕಾರ್ಮಿಕರನ್ನು ಪ್ರತಿನಿಧಿಸುವ ದಲಿತ ಸಂಘಟನೆಗಳೊಂದಿಗೆ ಭೂಮಿಗಾಗಿ ಜಂಟಿ ಹೋರಾಟ; ಕರಾರು ಕೃಷಿಗಾಗಿ ಕೊಡುವ ’ಭೂಮಿ ಅಕ್ರಮಣ’ ಚಳವಳಿ.

ರೈತರ “ಪರ್ಯಾಯ ಸರ್ಕಾರ” ಸೃಷ್ಟಿಸಬೇಕಾದ ಬದಲಿ ವ್ಯವಸ್ಥೆಯೇನು?

ಸಾಲ ಬೇಕಿಲ್ಲದ ಕೃಷಿಯ ಬಗ್ಗೆ ವ್ಯವಸ್ಥೆ, ರೈತರೇ ತಯಾರುಮಾಡಿಕೊಳ್ಳಬಲ್ಲ ಬೀಜ, ಗೊಬ್ಬರದಿಂದ ಜೈವಿಕ ಸಾವಯವ ಕೃಷಿಯ ಆಂದೋಲನ, ದೇಶೀಯ ಬೀಜಗಳ ಸಂಗ್ರಹಣೆ, ಗ್ರಾಮಮಟ್ಟದಿಂದ ರಾಜ್ಯಮಟ್ಟದವರೆಗೂ ಬೀಜದ ಬ್ಯಾಂಕುಗಳು, ಈ ಬೀಜಗಳ ವೃದ್ಧಿ ಮತ್ತು ವ್ಯಾಪಕ ಹಂಚಿಕೆ, ಈ ಬಗ್ಗೆ ರೈತರಿಗೆ ಮನವರಿಕೆ ಮೂಡಿಸುವ ಕಾರ್ಯಕ್ರಮ.

“ಕುಟುಂಬ ಆಹಾರ ಭದ್ರತೆ” ಕಾಪಾಡಿಕೊಳ್ಳುವ ಒಕ್ಕಲುತನ, ಇಡೀ ಭೂಮಿಯಲ್ಲಿ ಆಹಾರದ ಬೆಳೆಯಲ್ಲದ ರೊಕ್ಕದ ಬೆಳೆ ಬೆಳೆಯುವುದರಿಂದ ಕುಟುಂಬಕ್ಕೆ ಮತ್ತು ದೇಶಕ್ಕೆ ಆಗುವ ಆಪಾಯಗಳ ಬಗ್ಗೆ ಮನವರಿಕೆ, ಕುಟುಂಬಕ್ಕೆ ಬೇಕಾಗುವಷ್ಟು ಆಹಾರವನ್ನು ಕಡ್ಡಾಯವಾಗಿ ಬೆಳೆಯುವ ಕಾರ್ಯಕ್ರಮಕ್ಕೆ ಒತ್ತು ಮತ್ತು ಪ್ರಚಾರ.

ಎಲ್ಲಕ್ಕಿಂತ ದೊಡ್ಡ ಹೋರಾಟ- ರೊಕ್ಕವಿಲ್ಲದ ಕೃಷಿ ಮಾರುಕಟ್ಟೆ ಸೃಷ್ಟಿ

ಅಮೆರಿಕ ಮತ್ತು ಯುರೋಪು ಒಕ್ಕೂಟದ ದೇಶಗಳ ಹುನ್ನಾರದಿಂದ ವಿಚಲಿತವಾಗುತ್ತಿರುವ ವಿಶ್ವ ಮಾರುಕಟ್ಟೆ ಬೆಲೆಗಳಿಂದಾಗಿ ಹಾಗೂ ಎಲ್ಲ ಬೆಳೆಗಳ ಬೆಲೆಗಳು ದೇಶೀಯ ಮಾರುಕಟ್ಟೆಯಲ್ಲೂ ಕುಸಿಯುತ್ತಿರುವುದರಿಂದ ಈ ಬೆಲೆ ನಷ್ಟದಿಂದ ತಪ್ಪಿಸಿಕೊಳ್ಳಲು ನಾವು ಮಾರ್ಗಗಳನ್ನು ಕಂಡುಕೊಳ್ಳಲೇಬೇಕಾಗಿದೆ.

ನಾವು ಬೆಳೆಯುವ ಎಲ್ಲ ಬೆಳೆಗಳಿಗೂ ನ್ಯಾಯವಾದ ಬೆಲೆ ಇದ್ದೇಇದೆ. ಆದರೆ, ಬೇರೆಲ್ಲರೂ ಸೇರಿ ವಂಚಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರೈತರೇನು ಮಾಡಬೇಕು.

ನಮ್ಮ ದೇಶದಲ್ಲಿ ಸಣ್ಣ ರೈತರೇ ಮುಕ್ಕಾಲು ಭಾಗ. ಇವರೇ ಬಹುಸಂಖ್ಯಾತರು. ಇವರೇ ಅತ್ಯಂತ ಹೆಚ್ಚಿನ ಪ್ರಮಾಣದ ಆಹಾರ ಉತ್ಪಾದಕರು. ಇದರಿಂದಲೇ ಸರ್ಕಾರಕ್ಕೆ ಅಧಿಕ ತೆರಿಗೆ ಆದಾಯ ಇರುವುದು.

ಈ ಕಾರಣ, ಸರ್ಕಾರವನ್ನು ಮಣಿಸುವುದು ಹಾಗೂ ಸಣ್ಣ ರೈತರ ಬೆಳೆಗಳಿಗೆ ನ್ಯಾಯವಾದ “ಬೆಲೆ” ದೊರಕಿಸುವುದು ಎರಡೂ ಕೆಲಸವನ್ನು “ರೊಕ್ಕವಿಲ್ಲದ ಕೃಷಿ ಮಾರುಕಟ್ಟೆ” ಸೃಷ್ಟಿಸುವ ಮೂಲಕ ಮಾಡಬಹುದೇನೋ? ಇದನ್ನು ರೈತ ಚಳವಳಿ ಚಿಂತಿಸಿ ರೂಪಿಸಬೇಕಾಗಿದೆ.

ರೈತರು ಬೆಳೆಯುವ ಎಲ್ಲ ಬೆಳೆಗಳಿಗೆ ರೈತ ಚಳವಳಿಯೇ ಪ್ರಾಮಾಣಿಕವಾಗಿ ವೈಜ್ಞಾನಿಕ ಬೆಲೆಗಳನ್ನು ನಿಗದಿಪಡಿಸಿ, ಈ ಬೆಲೆಗಳ ಪ್ರಮಾಣಕ್ಕನುಗುಣವಾಗಿ ರೈತರು ಪರಸ್ಪರ ದಾಸ್ತಾನುಗಳನ್ನು ವಿನಿಮಯ ಮಾಡಿಕೊಳ್ಳುವ “ಸಂತೆ”ಗಳ ನಿರ್ಮಾಣದ ಮೂಲಕ ರೊಕ್ಕದ ಬಲೆಯಿಂದ ತಪ್ಪಿಸಿಕೊಳ್ಳಬಹುದೇನೋ?

ರೈತರು ಸಂಘಟಿತರಾಗಿ ಕೇವಲ ಒಂದು ವರ್ಷ ಈ ಕಾರ್ಯಕ್ರಮವನ್ನು ಚಳವಳಿ ರೂಪದಲ್ಲಿ ನಡೆಸಿದರೆ ಇಡೀ ದೇಶವನ್ನೇ ಹತೋಟಿಗೆ ತೆಗೆದುಕೊಳ್ಳಬಹುದು ಎನ್ನುವುದರಲ್ಲಿ ಸಂಶಯವಿಲ್ಲ.ಈ ಚಳವಳಿಯನ್ನು ಹಂತಹಂತವಾಗಿಯಾದರೂ ಪ್ರಯೋಗ ಮಾಡಬೇಕಾದ ಅವಶ್ಯಕತೆ ಇದ್ದೇ ಇದೆ. ಸರ್ಕಾರ ಮಾಡಬೇಕಾದ ಕೆಲಸ ಮಾಡದಿದ್ದಾಗ, ಅದನ್ನು ನಾವೇ ನೆರವೇರಿಸುವುದು; ಮಾಡಬಾರದ ಕೆಲಸ ಮಾಡಿದಾಗ ಅದನ್ನು ಉಲ್ಲಂಘಿಸುವುದು (Direct action) ಹೀಗೆ ನಾವು ಹಿಂದೆ ಮಾಡುತ್ತಿದ್ದ ಕಾರ್ಯಕ್ರಮಗಳನ್ನು ಮುಂದುವರಿಸುವ ಅವಶ್ಯಕತೆ ಬಗ್ಗೆ ಹೇಳಬೇಕಾಗಿಲ್ಲ.

ಜಾಗತಿಕ ಹೋರಾಟದ ಆವಶ್ಯಕತೆ

ಇವೆಲ್ಲದರ ನಡುವೆ, ಹೆಚ್ಚುವರಿ ಬೆಳೆ ಬೆಳೆಯುವ ದೇಶಗಳ ನಡುವಿನ ಪೈಪೋಟಿ, ಕೊರತೆ ದೇಶಗಳಿಗಿರುವ ಹೆಚ್ಚಿನ ಉದಾರೀಕರಣದ ಬಗ್ಗೆ ಇರುವ ಆತಂಕ, ತಮ್ಮತಮ್ಮ ಕೃಷಿ ಮಾರುಕಟ್ಟೆಯನ್ನು ರಕ್ಷಿಸಿಕೊಳ್ಳಲು ವಿವಿಧ ದೇಶಗಳು ತಳೆಯುತ್ತಿರುವ ನಿಲುವುಗಳು, ಅಮೆರಿಕ ದೇಶವು ತನ್ನ ಸಬ್ಸಿಡಿಗಳನ್ನು ಇನ್ನೂ ಹೆಚ್ಚಿಸುವ ಬೆದರಿಕೆ, ಇವೆಲ್ಲದರ ಕಾರಣ ವಿಶ್ವ ವ್ಯಾಪಾರಿ ಸಂಸ್ಥೆಯ ಕೃಷಿ ಒಪ್ಪಂದದ ಮೂಲಕ್ಕೆ ಪೆಟ್ಟಾಗುವ ಸಾಧ್ಯತೆಗಳಿವೆ.

ಯೂರೋಪಿನ ಒಕ್ಕೂಟ, ಜಪಾನ್ ಮತ್ತು ಕೊರಿಯಾದ ಜೊತೆಗೆ ಸೇರಿಕೊಂಡು ಉದಾರೀಕರಣಕ್ಕೆ, ಇನ್ನೂ ಹೆಚ್ಚಿನ ಸಬ್ಸಿಡ ಕಡಿತಕ್ಕೆ ಕಡಿವಾಣ ಹಾಕುವ ಪ್ರಯತ್ನ ನಡೆಸಿದ ಜಪಾನ್ ಮತ್ತು ಕೊರಿಯಾ ತಮ್ಮ ರೈತರು ನಶಿಸಿಹೋಗುವುದನ್ನು ತಪ್ಪಿಸಲು ಹೆಣಗುತ್ತಿವೆ.

ವಿಯಾ ಕ್ಯಾಂಪೆಸೀನಾ

ರಫ್ತು ಶಕ್ತಿಯಿರುವ ದೇಶಗಳಾದ ಕೆನಡಾ, ಆಸ್ಟ್ರೇಲಿಯಾ, ಅರ್ಜೆಂಟೈನಾ, ಬ್ರೆಜಿಲ್, ಚಿಲಿ, ಕೊಲಂಬಿಯಾ, ಫಿಜಿ, ಇಂಡೋನೇಶಿಯಾ, ಮಲೇಶಿಯಾ, ನ್ಯೂಜಿಲೆಂಡ್, ಪೆರಗ್ವೆ, ಫಿಲಿಪ್ಪಿನ್ಸ್, ದಕ್ಷಿಣ ಆಫ್ರಿಕ, ಥೈಲ್ಯಾಂಡ್ ಮತ್ತು ಉರುಗ್ವೆ (Cairns Group) ದೇಶಗಳು ರಫ್ತು ಸಬ್ಸಿಡಿ ಮತ್ತು “ನೇರ ಆದಾಯ ಪಾವತಿ”ಗಳನ್ನು ಅಮೆರಿಕ ಮತ್ತು ಯುರೋಪು ಒಕ್ಕೂಟ ದೇಶಗಳು ರದ್ದುಮಾಡಬೇಕೆಂದು ಒತ್ತಾಯಿಸುತ್ತಿವೆ. ಅಮೆರಿಕ ಕೂಡ, ತನ್ನ ಸಬ್ಸಿಡಿ ಕಾರ್ಯಕ್ರಮವನ್ನು ಹಾಗೆಯೇ ಇಟ್ಟುಕೊಂಡಿದ್ದರೂ, ಮೇಲ್ಕಂಡ ಒತ್ತಾಯಕ್ಕೆ ಬೆಂಬಲ ವ್ಯಕ್ತಪಡಿಸಿದೆ.

ಮಿಕ್ಕ ಹಿಂದುಳಿದ ದೇಶಗಳು ತಮ್ಮ ಕೃಷಿ ಮಾರುಕಟ್ಟೆಯನ್ನು ಮತ್ತೂ ಮುಕ್ತಗೊಳಿಸಬೇಕಾಗಬಹುದೇನೋ ಎಂಬ ಆತಂಕದಲ್ಲಿವೆ. ತಮ್ಮ ತಮ್ಮ ದೇಶಗಳ “ಆಹಾರ ಭದ್ರತೆ” ಬಗ್ಗೆ ಬಹಳಷ್ಟು ದೇಶಗಳು ಆತಂಕಗೊಂಡಿವೆ.

ಅಂತಾರಾಷ್ಟ್ರೀಯ ರೈತ ಚಳವಳಿಯಾದ “ವಿಯಾ ಕ್ಯಾಂಪೆಸೀನಾ” ಇಡೀ ಕೃಷಿ ಕ್ಷೇತ್ರವನ್ನೇ ವಿಶ್ವ ವ್ಯಾಪಾರಿ ಸಂಸ್ಥೆಯ ವ್ಯಾಪ್ತಿಯಿಂದ ಹೊರಗಿಡಲು ಒತ್ತಾಯಿಸುತ್ತಿದೆ.

ಯೂರೋಪ್ ಒಕ್ಕೂಟದ ಕೃಷಿ ನೀತಿಯನ್ನು ಯುರೋಪ್ ರೈತ ಒಕ್ಕೂಟವೇ ವಿರೋಧಿಸುತ್ತಿದೆ.
ಈ ಎಲ್ಲ ಕಾರಣಗಳಿಂದ, ಕೃಷಿ ಕ್ಷೇತ್ರವನ್ನು ಜಾಗತಿಕ ಉದಾರೀಕರಣದಿಂದ ರಕ್ಷಿಸಲು ನಾವೂ ಜಾಗತಿಕವಾಗಿ ಮೇಲ್ಕಂಡ ಶಕ್ತಿಗಳೊಂದಿಗೆ ಕೈಜೋಡಿಸಲೇಬೇಕಾಗಿದೆ. ಹಿಂದುಳಿದ ದೇಶಗಳ ರೈತರ ಒಗ್ಗಟ್ಟಿಗಾಗಿ ಶ್ರಮಿಸಲೇಬೇಕಾಗಿದೆ.

ರೈತ ಚಳವಳಿಗೆ ಜಯವಾಗಲಿ
ಕರ್ನಾಟಕ ರಾಜ್ಯ ರೈತ ಸಂಘಕ್ಕೆ ಜಯವಾಗಲಿ!

(ಇದು ಪ್ರೊ. ಎಂಡಿಎನ್ ಅವರ ಹಳೆಯ ಲೇಖನವೊಂದರ ಕೊನೆಯ ಕಂತು. ಭಾರತದ ಕೃಷಿ ಸಮಸ್ಯೆಗಳಿಗೆ ಅಂತಾರಾಷ್ಟ್ರೀಯ ಒಪ್ಪಂದಗಳು ಹೇಗೆ ಕಾರಣವಾದವು ಮತ್ತು ಆ ಸಮಸ್ಯೆ ಇಂದಿಗೂ ಹೇಗೆ ಮುಂದುವರೆದಿದೆ ಎಂಬುದನ್ನು ಈ ಲೇಖನ ಸರಣಿ ಚರ್ಚಿಸಿದೆ)


ಇದನ್ನೂ ಓದಿ: ಹಳತು-ವಿವೇಕ; ರೈತ ಚಳವಳಿ ಎದುರಿಸಬೇಕಾಗಿರುವ ಸಮಸ್ಯೆಗಳು; ವಿಶ್ವ ವ್ಯಾಪಾರಿ ಸಂಸ್ಥೆ ಮತ್ತು ಹುನ್ನಾರಗಳು: ಭಾಗ-3

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಪರಾಧದ ಸ್ವರೂಪ ಏನೇ ಇರಲಿ, ತ್ವರಿತ ವಿಚಾರಣೆಯ ಹಕ್ಕು ಅನ್ವಯಿಸುತ್ತದೆ: ಸುಪ್ರೀಂ ಕೋರ್ಟ್

ಸಂವಿಧಾನದ 21 ನೇ ವಿಧಿಯ ಅಡಿಯಲ್ಲಿ ತ್ವರಿತ ವಿಚಾರಣೆಯ ಹಕ್ಕು ಅಪರಾಧದ ಗಂಭೀರತೆ ಅಥವಾ ಸ್ವರೂಪವನ್ನು ಲೆಕ್ಕಿಸದೆ ಅನ್ವಯಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಪುನರುಚ್ಚರಿಸಿದೆ. 2002 ರ ಹಣ ವರ್ಗಾವಣೆ ತಡೆ ಕಾಯ್ದೆಯ...

ಬಾಂಗ್ಲಾದೇಶ: ಗುಂಪು ದಾಳಿಯಿಂದ ತಪ್ಪಿಸಿಕೊಳ್ಳಲು ಕಾಲುವೆಗೆ ಹಾರಿದ ಹಿಂದೂ ವ್ಯಕ್ತಿ ಸಾವು

ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ವಿರುದ್ಧ ಹಿಂಸಾಚಾರ ಸುದ್ದಿಗಳು ನಿರಂತರವಾಗಿ ವರದಿಯಾಗುತ್ತಿರುವ ನಡುವೆಯೇ, ನೌಗಾಂವ್ ಜಿಲ್ಲೆಯ ಮೊಹದೇವ್‌ಪುರ ಉಪಜಿಲ್ಲಾದಲ್ಲಿ ದರೋಡೆ ಆರೋಪ ಹೊರಿಸಿದ ಗುಂಪಿನಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ 25 ವರ್ಷದ ಹಿಂದೂ ವ್ಯಕ್ತಿ ಕಾಲುವೆಗೆ ಹಾರಿ...

ಹೋರಾಟಗಾರ್ತಿ ಕಾಮ್ರೇಡ್ ಪದ್ಮಕ್ಕ ಶ್ರದ್ಧಾಂಜಲಿ ಸಭೆ

ಬೆಂಗಳೂರಿನ ಆಶೀರ್ವಾದ್ ಸೆಂಟರ್ ನಲ್ಲಿ ಶ್ರದ್ಧಾಂಜಲಿ ಸಭೆ ಆಯೋಜಿಸಲಾಗಿತ್ತು. ಪದ್ಮಾರವರ ಕುಟುಂಬ, ಸಹ ಹೋರಾಟಗಾರು, ಚಿಂತಕರು, ಸಾಹಿತಿಗಳು ಪಾಲ್ಗೊಂಡಿದ್ದರು. ಸಭೆಯಲ್ಲಿ ಪದ್ಮಾರವರ ಜೊತೆಗಿನ ಒಡನಾಟವನ್ನು ನೆನೆಯಲಾಯಿತು. ಡಿಸೆಂಬರ್ 25 ರಂದು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ...

‘ನಾಯಿಗಳ ಮನಸ್ಸನ್ನು ಯಾರೂ ಓದಲು ಸಾಧ್ಯವಿಲ್ಲ’: ರಸ್ತೆಗಳು, ನಾಯಿಗಳಿಂದ ಮುಕ್ತವಾಗಿರಬೇಕು: ಸುಪ್ರೀಂ ಕೋರ್ಟ್

ನವದೆಹಲಿ: ನಾಯಿ ಕಚ್ಚುವ ಮನಸ್ಥಿತಿಯಲ್ಲಿರುವಾಗ ಅದರ ಮನಸ್ಸನ್ನು ಯಾರೂ ಓದಲು ಸಾಧ್ಯವಿಲ್ಲವಾದ್ದರಿಂದ, ರಸ್ತೆಗಳು ಅಥವಾ ಬೀದಿಗಳು ನಾಯಿಗಳಿಂದ ಮುಕ್ತವಾಗುವಂತೆ ನೋಡಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ.  ಬೀದಿ ನಾಯಿಗಳಿಗೆ ಸಂಬಂಧಿಸಿದ ಸ್ವಯಂಪ್ರೇರಿತ ಪ್ರಕರಣವನ್ನು...

‘ಮಜಾ ನಾ ಕರಾಯಾ ತೋ..ಪೈಸೆ ವಾಪಸ್’: ಭಾರತಕ್ಕೆ ನೇರ ಬೆದರಿಕೆ ಹಾಕಿದ ಪಾಕಿಸ್ತಾನ ಸೇನಾಧಿಕಾರಿ ಅಹ್ಮದ್ ಷರೀಫ್ ಚೌಧರಿ

ಪಾಕಿಸ್ತಾನದ ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ (ISPR) ನ ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್ ಅಹ್ಮದ್ ಷರೀಫ್ ಚೌಧರಿ, ಕಾಬೂಲ್ ಜೊತೆಗಿನ ಇಸ್ಲಾಮಾಬಾದ್‌ನ ನಡೆಯುತ್ತಿರುವ ಸಂಘರ್ಷದೊಂದಿಗೆ ಭಾರತವನ್ನು ಜೋಡಿಸುವ ಮೂಲಕ ಮತ್ತೊಮ್ಮೆ ವಿವಾದವನ್ನು ಹುಟ್ಟುಹಾಕಿದ್ದಾರೆ.  ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ...

‘ಸೋಮನಾಥನನ್ನು ಹೆಚ್ಚು ದ್ವೇಷಿಸುತ್ತಿದ್ದ ನೆಹರು, ಮೊಘಲ್ ಆಕ್ರಮಣಕಾರರನ್ನು ವೈಭವೀಕರಿಸುತ್ತಿದ್ದರು’: ಬಿಜೆಪಿ ಆರೋಪ

ನವದೆಹಲಿ: ಸೋಮನಾಥ ದೇವಾಲಯವನ್ನು ಹಿಂದೆ ಘಜ್ನಿ ಮಹಮ್ಮದ್ ಮತ್ತು ಅಲಾವುದ್ದೀನ್ ಖಿಲ್ಜಿ ಲೂಟಿ ಮಾಡಿದ್ದರು ಆದರೆ ಸ್ವತಂತ್ರ ಭಾರತದಲ್ಲಿ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಭಗವಾನ್ ಸೋಮನಾಥನನ್ನು ಹೆಚ್ಚು ದ್ವೇಷಿಸುತ್ತಿದ್ದರು ಎಂದು...

ಬಿಜೆಪಿ ಕಾರ್ಯಕರ್ತೆಯನ್ನು ವಿವಸ್ತ್ರಗೊಳಿಸಿರುವುದಾಗಿ ಆರೋಪ: ಆಕೆ ತನ್ನನ್ನು ತಾನು ವಿವಸ್ತ್ರಗೊಳಿಸಿಕೊಂಡಿದ್ದಾಳೆ ಎಂದ ಪೊಲೀಸ್ ಕಮಿಷನರ್

ಹುಬ್ಬಳ್ಳಿ: ಪೊಲೀಸ್ ವ್ಯಾನ್ ಒಳಗೆ ಪೂರ್ಣ ಬಟ್ಟೆಯಿಲ್ಲದೆ ಮಹಿಳೆಯೊಬ್ಬರ ವಿಡಿಯೋ ವೈರಲ್ ಆದ ನಂತರ, ಬಿಜೆಪಿ ನಾಯಕರು ಪೊಲೀಸರು ಅವಳನ್ನು ಬಂಧಿಸುವಾಗ ಆಕೆಯ ಬಟ್ಟೆಗಳನ್ನು ಬಿಚ್ಚಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಜನವರಿ 5...

ಬಿಜೆಪಿಯೊಂದಿಗೆ ಕೈಜೋಡಿಸಿದ ಗೌಡರೊಂದಿಗಿನ ಸಂಬಂಧ ಕಡಿದುಕೊಳ್ಳಲು ನಿರ್ಧರಿಸಿದ ಕೇರಳ ಜೆಡಿಎಸ್; ಹೊಸ ಪಕ್ಷದೊಂದಿಗೆ ವಿಲೀನ

ಜನತಾ ದಳ (ಜಾತ್ಯತೀತ) ದ ಕೇರಳ ಘಟಕವು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ನೇತೃತ್ವದ ರಾಷ್ಟ್ರೀಯ ನಾಯಕತ್ವದೊಂದಿಗೆ ಸಂಬಂಧವನ್ನು ಕಡಿದುಕೊಂಡು ಹೊಸ ರಾಜಕೀಯ ಪಕ್ಷದೊಂದಿಗೆ ವಿಲೀನಗೊಳ್ಳಲು ನಿರ್ಧರಿಸಿದೆ. ಈ ನಿರ್ಧಾರದ ಕುರಿತು ಶೀಘ್ರದಲ್ಲೇ ಅಧಿಕೃತ...

‘ಚೀನಾ, ರಷ್ಯಾ, ಕ್ಯೂಬಾ, ಇರಾನ್‌ಗಳನ್ನು ಹೊರಗಿಡಿ’: ವೆನೆಜುವೆಲಾಗೆ ಟ್ರಂಪ್ ತಂಡದ ಹೊಸ ತೈಲ ಎಚ್ಚರಿಕೆ

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ವೆನೆಜುವೆಲಾದ ಮಧ್ಯಂತರ ಅಧ್ಯಕ್ಷ ಡೆಲ್ಸಿ ರೊಡ್ರಿಗಸ್ ನೇತೃತ್ವದ ಹೊಸ ಆಡಳಿತಕ್ಕೆ ಚೀನಾ, ರಷ್ಯಾ, ಇರಾನ್ ಮತ್ತು ಕ್ಯೂಬಾ ಜೊತೆಗಿನ ಆರ್ಥಿಕ ಸಂಬಂಧಗಳನ್ನು "ಕಿತ್ತುಹಾಕಬೇಕು" ಮತ್ತು "ಕಡಿತಗೊಳಿಸಬೇಕು" ಎಂದು...

ದೆಹಲಿ ಫೈಜ್-ಎ-ಇಲಾಹಿ ಮಸೀದಿ ಬಳಿ ತೆರವು ಕಾರ್ಯಾಚರಣೆಗೆ ಸ್ಥಳೀಯರಿಂದ ವಿರೋಧ, ಉದ್ವಿಗ್ನತೆ; ಅಶ್ರುವಾಯು ಪ್ರಯೋಗ, 10 ಜನರ ಬಂಧನ

ದೆಹಲಿಯ ತುರ್ಕಮನ್ ಗೇಟ್-ರಾಮ್ಲೀಲಾ ಮೈದಾನ ಪ್ರದೇಶದಲ್ಲಿರುವ ಶತಮಾನಗಳಷ್ಟು ಹಳೆಯದಾದ ಫೈಜ್-ಎ-ಇಲಾಹಿ ಮಸೀದಿಯ ಬಳಿ ಬುಧವಾರ ಮುಂಜಾನೆ ನಡೆದ ತೆರವು ಕಾರ್ಯಾಚರಣೆಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದು, ಆ ನಂತರ ಸ್ಥಳದಲ್ಲಿ ಉದ್ವಿಗ್ನತೆ ಉಂಟಾಗಿದೆ, ಇದು...