ಸ್ವರಾಜ್ ಇಂಡಿಯಾ ಅಧ್ಯಕ್ಷ ಯೋಗೇಂದ್ರ ಯಾದವ್ ಭಾನುವಾರ ಸಿಎಎ ವಿರೋಧಿ ಹೋರಾಟಗಾರ ಮತ್ತು ರೈಜೋರ್ ದಳ್ ಅಧ್ಯಕ್ಷ ಅಖಿಲ್ ಗೊಗೋಯ್ ಅವರನ್ನು ಭೇಟಿಯಾಗಿ ಅಸ್ಸಾಂನಲ್ಲಿರುವ ಆಡಳಿತಾರೂಢ ಬಿಜೆಪಿಯನ್ನು ಸೋಲಿಸುವಂತೆ ಜನರಲ್ಲಿ ಮನವಿ ಮಾಡಿದ್ದಾರೆ.
ಯೋಗೇಂದ್ರ ಯಾದವ್ ಮತ್ತು ಕಿಸಾನ್ ಸಂಘರ್ಷ ಸಮಿತಿ ನಾಯಕ ಸುನೀಲಂ ಅವರು ಆರ್‌ಟಿಐ ಕಾರ್ಯಕರ್ತ, ಸಿಎಎ ವಿರೋಧಿ ಹೋರಾಟಗಾರ, ಅಖಿಲ್ ಗೊಗೊಯ್ ಅವರನ್ನು ಗುವಾಹಟಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಭೇಟಿಯಾದರು.
ಅಖಿಲ್ ಗೋಗೋಯ್ ಸಿಎಎ ವಿರೋಧಿ ಹೋರಾಟದಲ್ಲಿ ಭಾಗಿಯಾಗಿ, ದೇಶದ್ರೋಹ ಪ್ರಕರಣದಲ್ಲಿ ಜೈಲಿನಲ್ಲಿದ್ದಾರೆ. ಅಲ್ಲದೇ ಅವರು ಅಸ್ಸಾಂನಲ್ಲಿ ಅಕ್ಟೋಬರ್ 2, 2020ರಲ್ಲಿ ತಮ್ಮದೆ ರೈಜೋರ್ ದಳ್ ಪಕ್ಷವನ್ನು ಸ್ಥಾಪಿಸಿದ್ದಾರೆ.
ಇದನ್ನೂ ಓದಿ: ಅಸ್ಸಾಂನ ಸಿಬ್ಸಾಗರ್‌ನಿಂದ ಸ್ಪರ್ಧಿಸಲಿರುವ ಸಿಎಎ ವಿರೋಧಿ ಹೋರಾಟಗಾರ ಅಖಿಲ್ ಗೊಗೊಯ್
ʼಕಳೆದ ವರ್ಷ ಫೆಬ್ರವರಿಯಲ್ಲಿ ಗೊಗೋಯ್ ಅವರನ್ನು ಜೈಲಿನಲ್ಲಿ ಭೇಟಿಯಾಗಿದ್ದೆ. ಅಂದಿನಿಂದ ಅವರ ಆರೋಗ್ಯ ಸ್ಥಿತಿ ಗಣನೀಯವಾಗಿ ಹದಗೆಟ್ಟಿದೆ ಎಂದು ಯೋಗೇಂದ್ರ ಯಾದವ್ ಆತಂಕ ವ್ಯಕ್ತಪಡಿಸಿದ್ದಾರೆ.
“ಅವರು ಸಾಕಷ್ಟು ಮಾನಸಿಕ ಹಿಂಸೆಗೆ ಒಳಗಾಗಿದ್ದಾರೆ. ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದೆ. ಆದರೆ, ಸೈದ್ಧಾಂತಿಕ ಸ್ಪಷ್ಟತೆ, ಮಾನಸಿಕ ಸಂಕಲ್ಪ ಮತ್ತು ಅವರು ತೋರಿಸಿದ ಧೈರ್ಯವು ಎಲ್ಲರಿಗೂ ಒಂದು ಮಾದರಿಯಾಗಿದೆ” ಎಂದು ಯಾದವ್ ಹೇಳಿದ್ದಾರೆ.
ಇದು ಕ್ರಿಮಿನಲ್ ವಿಚಾರಣೆಯಲ್ಲ ಬದಲಿಗೆ ರಾಜಕೀಯ ವಿಚಾರಣೆ ಎಂದು ಆರೋಪಿಸಿರುವ ಯೋಗೇಂದ್ರ ಯಾದವ್, ಅಸ್ಸಾಂ ಚುನಾವಣೆಯ ಸಮಯದಲ್ಲಿ ಜನರೊಂದಿಗೆ ಬೆರೆಯಬಾರದು ಎಂದು ಗೊಗೋಯ್ ಅವರನ್ನು ಜೈಲಿಗೆ ಹಾಕಲಾಗಿದೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಅಸ್ಸಾಂ ಹೋರಾಟಗಾರ ಅಖಿಲ್ ಗೊಗೋಯ್ ಚಿತ್ರ ಬಿಡಿಸಿದ ಕಲಾವಿದರ ಬಂಧನ!
“ಅವರು ಪ್ರತಿನಿಧಿಸುವ ಜನರ ಧ್ವನಿಯನ್ನು ಮೌನಗೊಳಿಸಲು ಅವರ ವಿರುದ್ಧ ಸುಳ್ಳು ಪ್ರಕರಣಗಳನ್ನು ಹಾಕಲಾಗಿದೆ ಎಂಬುದು ಸ್ಪಷ್ಟವಾಗಿದೆ, ಆದರೆ ಈಗ ಚುನಾವಣೆಗಳು ನಡೆಯುತ್ತಿರುವುದರಿಂದ ರಾಜ್ಯದ ಜನರು ನಿರ್ಧಾರ ತೆಗೆದುಕೊಳ್ಳಬೇಕು” ಎಂದಿದ್ದಾರೆ.
ಗೊಗೋಯ್ ಅವರು ರಾಜಕೀಯದ ಬಗ್ಗೆ ಚರ್ಚಿಸಲು ಹೋಗಲಿಲ್ಲ. ಆದರೆ, ರೈತ ಹೋರಾಟದ ಬಗ್ಗೆ, ಅದರ ಪ್ರಗತಿ ಬಗ್ಗೆ ತಿಳಿಯಲು ಹೆಚ್ಚು ಆಸಕ್ತಿ ಹೊಂದಿದ್ದರು. ಜೊತೆಗೆ ಬಿಜೆಪಿಯನ್ನು ಸೋಲಿಸುವ ಅಗತ್ಯದ ಬಗ್ಗೆ ಬಹಳ ಸ್ಪಷ್ಟವಾಗಿದ್ದರು ಎಂದು ಯೋಗೇಂದ್ರ ಯಾದವ್ ತಿಳಿಸಿದ್ದಾರೆ.
ಇದೇ ವೇಳೆ ಅಖಿಲ್ ಗೊಗೋಯ್ ವಿರುದ್ಧ ಅಭ್ಯರ್ಥಿಯನ್ನು ಕಣಕ್ಕಿಳಿಸುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಅವರು ಕಾಂಗ್ರೆಸ್ ಪಕ್ಷಕ್ಕೆ ಮನವಿ ಮಾಡಿದ್ದಾರೆ. ಸಿಬ್ಸಾಗರ್ ಕ್ಷೇತ್ರದಿಂದ ಕಣಕ್ಕಿಳಿಯುತ್ತಿರುವ ಗೊಗೋಯ್ ಪರ ಪ್ರಚಾರಕ್ಕಾಗಿ ಸಿಬ್ಸಾಗರ್‌ಗೆ ಹೋಗುವುದಾಗಿ ಸುನೀಲಂ ಹೇಳಿದ್ದಾರೆ.
2019 ರ ಡಿಸೆಂಬರ್‌ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ ಅಖಿಲ್ ಗೊಗೊಯ್ ವಿರುದ್ಧ ಕಠಿಣ ಯುಎಪಿಎ ವಿರುದ್ಧ ಪ್ರಕರಣ ದಾಖಲಾಗಿದ್ದು, ಅಂದಿನಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಹೋರಾಟಗಾರ ಅಖಿಲ್ ಗೊಗೋಯ್ ಕೆಲವು ತಿಂಗಳ ಹಿಂದೆ ಕೊರೊನಾ ಸೋಂಕಿಗೆ ಒಳಗಾಗಿದ್ದರು. ಹೀಗಾಗಿ ಅವರನ್ನು ಗುವಾಹಟಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ.
126 ಸದಸ್ಯರ ಅಸ್ಸಾಂ ವಿಧಾನಸಭೆಯ ಚುನಾವಣೆಗಳು ಮೂರು ಹಂತಗಳಲ್ಲಿ ನಡೆಯಲಿದೆ.
ಇದನ್ನೂ ಓದಿ: ‘ಭಾರತೀಯ ಸಂಪ್ರದಾಯಕ್ಕೆ ಸೆಕ್ಯುಲರಿಸಂ ಒಂದು ಬೆದರಿಕೆ’: ಯೋಗಿ ಆದಿತ್ಯನಾಥ್!


