ಅಂತಾರಾಷ್ಟ್ರೀಯ ಖ್ಯಾತಿಯ ಫ್ಯಾಕ್ಟ್‌ಚೆಕ್ಕರ್, ಪತ್ರಕರ್ತ ಮೊಹಮ್ಮದ್ ಜುಬೇರ್ ವಿರುದ್ಧ ಉತ್ತರ ಪ್ರದೇಶದಲ್ಲಿ ದಾಖಲಾದ ಐದು ಎಫ್‌ಐಆರ್‌ಗಳಿಗೆ ಸಂಬಂಧಿಸಿದಂತೆ ಪೊಲೀಸರು ಯಾವುದೇ ಆತುರದ ಕ್ರಮ ಕೈಗೊಳ್ಳದಂತೆ ಸೋಮವಾರದಂದು ಸುಪ್ರೀಂಕೋರ್ಟ್ ಜುಲೈ 20 ರವರೆಗೆ ರಕ್ಷಣೆ ಒದಗಿಸಿದೆ. ಜೊತೆಗೆ ಅವರು ಅನೇಕ ಪ್ರಕರಣಗಳ ‘ವಿಷ ವರ್ತುಲ’ ದಲ್ಲಿ ಸಿಕ್ಕಿಬಿದ್ದಿದ್ದಾರೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಸುಪ್ರೀಂ ಕೋರ್ಟ್ ಯುಪಿ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ್ದು, ಐದು ಎಫ್‌ಐಆರ್‌ಗಳನ್ನು ರದ್ದುಗೊಳಿಸುವಂತೆ ಕೋರಿದ್ದ ಜುಬೈರ್ ಅವರ ಮನವಿಯನ್ನು ಬುಧವಾರ ವಿಚಾರಣೆಗೆ ಮುಂದೂಡಿದೆ. ಜುಬೈರ್ ವಿರುದ್ಧ ದಾಖಲಾಗಿರುವ ಐದು ಎಫ್‌ಐಆರ್‌ಗಳ ಅಡಿಯಲ್ಲಿ ಜುಲೈ 20ರ ವರೆಗೆ ಯುಪಿ ಪೊಲೀಸರು ಬಂಧಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶದ ಅರ್ಥ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಜುಬೈರ್ ಪರ ವಕೀಲರಾದ ವೃಂದಾ ಗ್ರೋವರ್ ಅವರು ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ಎ ಎಸ್ ಬೋಪಣ್ಣ ಅವರ ಪೀಠಕ್ಕೆ ಎಫ್‌ಐಆರ್‌ಗಳ ವಿಷಯವು ದೆಹಲಿ ಪೊಲೀಸರು ದಾಖಲಿಸಿದಂತೆಯೇ ಇದೆ ಎಂದು ಹೇಳಿದ್ದಾರೆ. ದೆಹಲಿ ಪೊಲೀಸರು ಜಬೇರ್ ಅವರ ಟ್ವೀಟ್‌ಗಳಲ್ಲಿ ಹಿಂದೂ ದೇವರು ಮತ್ತು ದೇವತೆಗಳನ್ನು ನಿಂದಿಸಲಾಗಿದೆ ಮತ್ತು ವಿದೇಶದಿಂದ ಅನಧಿಕೃತ ಹಣವನ್ನು ಪಡೆದಿವೆ ಎಂದು ಆರೋಪಿಸಲಾಗಿತ್ತು.
ಇದನ್ನೂ ಓದಿ: ಜುಬೇರ್ ಬಂಧನ: ಬರವಣಿಗೆ, ಟ್ವೀಟ್ ಆಧಾರದಲ್ಲಿ ಪತ್ರಕರ್ತರನ್ನು ಜೈಲಿಗೆ ಹಾಕಬಾರದು- ವಿಶ್ವಸಂಸ್ಥೆ
“ಐದು ಎಫ್‌ಐಆರ್‌ಗಳಿಗೆ ಸಂಬಂಧಿಸಿದಂತೆ ಜುಬೈರ್ ವಿರುದ್ಧ ಆತುರದ ಕ್ರಮವನ್ನು ತಡೆಹಿಡಿಯಲಾಗಿದೆ. ಯಾಕೆಂದರೆ ಅವರು ಒಂದು ಪ್ರಕರಣದಲ್ಲಿ ಜಾಮೀನು ಪಡೆದ ತಕ್ಷಣ ಹೊಸ ಎಫ್‌ಐಆರ್‌ನಲ್ಲಿ ಅವರನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗುತ್ತಿದೆ. ಆದರೆ ಈ ಹೊಸ ಪ್ರಕರಣಗಳ ವಿಷಯವು ಹಳೆಯ ಎಫ್‌ಐಆರ್ ಅನ್ನು ಹೋಲುತ್ತದೆ ಎಂದು ತೋರುತ್ತಿದೆ” ಎಂದು ಸುಪ್ರೀಂಕೋರ್ಟ್ ಹೇಳಿದೆ.
ಧಾರ್ಮಿಕ ಭಾವನೆಗಳಿಗೆ ನೋವು ಮಾಡಿರುವ ಆರೋಪದ ಮೇಲೆ ಉತ್ತರ ಪ್ರದೇಶದ ಹಲವು ಜಿಲ್ಲೆಗಳಲ್ಲಿ ತನ್ನ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗಳನ್ನು ರದ್ದುಗೊಳಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿಯ ತುರ್ತು ಪಟ್ಟಿ ಮಾಡಬೇಕು ಎಂದು ಸೋಮವಾರ ಜುಬೇರ್ ಕೋರಿದ್ದರು.
ಅರ್ಜಿದಾರರು, ಫ್ಯಾಕ್ಟ್‌ಚೆಕ್ಕರ್ ಮತ್ತು ಪತ್ರಕರ್ತರಾಗಿದ್ದು ಹಲವಾರು ಎಫ್‌ಐಆರ್‌ಗಳನ್ನು ಎದುರಿಸುತ್ತಿದ್ದಾರೆ. ಅವರ ಮನವಿಯನ್ನು ತುರ್ತು ವಿಚಾರಣೆಯ ಅಗತ್ಯವಿದೆ ಎಂದು ಜುಬೇರ್ ಪರವಾಗಿ ಹಾಜರಾದ ವಕೀಲೆ ವೃಂದಾ ಗ್ರೋವರ್ ಅವರ ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ನೇತೃತ್ವದ ಪೀಠವು ಗಮನಿಸಿದೆ. “ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರ ಮುಂದೆ ಪಟ್ಟಿ ಮಾಡಿ. ಆ ಪೀಠದ ಮುಂದೆ ನೀವು ಪ್ರಕರಣಗಳನ್ನು ಪ್ರಸ್ತಾಪಿಸಬಹುದು” ಎಂದು ಸಿಜೆಐ ಪೀಠ ಹೇಳಿದೆ.
ಇದನ್ನೂ ಓದಿ: ಜುಬೇರ್ ಪ್ರಕರಣ: ಜಾಮೀನು ನೀಡಲು ನ್ಯಾಯಾಧೀಶರು ಹೆದರುತ್ತಿದ್ದಾರೆ- ಜಸ್ಟೀಸ್ ದೀಪಕ್ ಗುಪ್ತಾ
ಜುಬೇರ್‌ನ ಹೊಸ ಮನವಿಯು ಆರು ಪ್ರಕರಣಗಳ ತನಿಖೆಗಾಗಿ ಉತ್ತರ ಪ್ರದೇಶ ಸರ್ಕಾರದಿಂದ ವಿಶೇಷ ತನಿಖಾ ತಂಡದ (ಎಸ್‌ಐಟಿ) ರಚನೆಯನ್ನು ಪ್ರಶ್ನಿಸಿದೆ. ರಾಜ್ಯದಲ್ಲಿ ದಾಖಲಾಗಿರುವ ಎಲ್ಲಾ ಆರು ಎಫ್‌ಐಆರ್‌ಗಳನ್ನು ತನಿಖೆಗಾಗಿ ಎಸ್‌ಐಟಿಗೆ ವರ್ಗಾಯಿಸಲಾಗಿದ್ದು, ದೆಹಲಿ ಪೊಲೀಸ್ ವಿಶೇಷ ಸೆಲ್ ಕೂಡಾ ಅದೇ ಎಫ್‌ಐಆರ್‌ನ ವಿಷಯದ ಮೇಲೆ ತನಿಖೆ ನಡೆಸುತ್ತಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.


