||ನಾನು ಗೌರಿ ಡೆಸ್ಕ್||
ಕೇಂದ್ರದಲ್ಲಿ ಮೈತ್ರಿ ಕೂಟದ ಸರ್ಕಾರವೊಂದನ್ನು ರಚಿಸಬೇಕೆಂದು ಬೇರೆ ಇನ್ನಾವುದೇ ಪಕ್ಷ ಅಥವಾ ನಾಯಕರಿಗಿಂತ ಹೆಚ್ಚಾಗಿ ಓಡಾಡುತ್ತಿರುವುದು ತೆಲುಗುದೇಶಂ ಪಕ್ಷದ ನಾಯಕ ಚಂದ್ರಬಾಬು ನಾಯ್ಡು. ಸಾಮಾನ್ಯವಾಗಿ ಕಾಂಗ್ರೆಸ್‍ನ ಕೆಲವು ನಾಯಕರು ಅಥವಾ ಎನ್‍ಸಿಪಿಯ ಶರದ್‍ಪವಾರ್ ಈ ಪಾತ್ರವನ್ನು ವಹಿಸುತ್ತಿದ್ದರು. ಆದರೆ, ಅದನ್ನೀಗ ನಾಯ್ಡು ಏಕೆ ಮಾಡುತ್ತಿದ್ದಾರೆ?

ಹಾಗೆ ನೋಡಿದರೆ ಇದು ಅವರಿಗೇನೂ ಹೊಸದಲ್ಲ. ಕಾಂಗ್ರೆಸ್ ಮತ್ತು ಬಿಜೆಪಿಗಳೆರಡನ್ನೂ ಸರ್ಕಾರದಿಂದ ಹೊರಗಿಟ್ಟು ಸರ್ಕಾರ ನಡೆಸಿದ್ದು 1996ರಲ್ಲಿ ಸಂಯುಕ್ತ ರಂಗದ ಮೂಲಕ. ಆಗಲೂ ಅದರ ಸಂಚಾಲಕರಾಗಿದ್ದು ಚಂದ್ರಬಾಬು ನಾಯ್ಡುವೇ. ಆ ನಂತರ ನಾಯ್ಡು ಎನ್‍ಡಿಎ ಸೇರುವ ಹೊತ್ತಿಗೆ ಅದರ ಸಂಚಾಲಕರಾಗಿದ್ದು ಸಮತಾ ಪಕ್ಷದ ಜಾರ್ಜ್ ಫರ್ನಾಂಡೀಸ್. ಸಮತಾ ಪಕ್ಷವು ಜೆಡಿಯು ಆದ ಮೇಲೂ ಜಾರ್ಜ್ ಅದರ ಸಂಚಾಲಕರಾಗಿದ್ದರು. 2008ರಲ್ಲಿ ಅನಾರೋಗ್ಯದಿಂದ ಅವರು ಹಿಂದೆ ಸರಿದಾಗ ಜೆಡಿಯುನ ಶರದ್ ಯಾದವ್ ಸಂಚಾಲಕರಾದರು.
ಇದನ್ನೂ ಓದಿ: ರಾಜಕಾರಣಿಗಳ ಎಕ್ಸಿಟ್ ಪೋಲ್ ಏನು ಹೇಳುತ್ತದೆ?
ಜೆಡಿಯು ಎನ್‍ಡಿಎದಿಂದ ಹೊರಹೋದ ಮೇಲೆ ಎನ್‍ಡಿಎ ಸಂಚಾಲಕರಾಗಿದ್ದು ಇದೇ ಚಂದ್ರಬಾಬು ನಾಯ್ಡು. ಅವರು ಸಂಚಾಲಕರಾಗಿದ್ದಾಗಲೇ ಮತ್ತೆ ಎನ್‍ಡಿಎ ಅಧಿಕಾರವನ್ನು ಹಿಡಿದರೂ, ಬಿಜೆಪಿ ಜೊತೆಗಿನ ಅವರ ಸಂಬಂಧ ಉಳಿದುಕೊಳ್ಳಲಿಲ್ಲ. ಅದರಲ್ಲೂ ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ಕೊಡುವುದೂ ಸೇರಿದಂತೆ ಹಲವು ವಿಚಾರಗಳಲ್ಲಿ ಮೋದಿ ನಾಯ್ಡು ಅವರನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ. ಹಾಗಾಗಿ ಅವರು ಎನ್‍ಡಿಎ ತೊರೆದರಲ್ಲದೇ ಮೋದಿಯನ್ನು ಕೆಳಗಿಳಿಸುವ ಶಪಥ ತೊಟ್ಟರು.

ಹೊಸ ರಾಜ್ಯವಾಗಿ ಆಂಧ್ರಪ್ರದೇಶ ಮತ್ತೊಮ್ಮೆ ಉದಯವಾದ ಮೇಲೆ ನಾಯ್ಡು ಅವರಿಗೆ ದೊಡ್ಡ ಸವಾಲು ಎದುರಾಯಿತು. ಆದಾಯ ತಂದುಕೊಡುವ ಮೆಟ್ರೋ ನಗರ ಹೈದರಾಬಾದ್ ಇಲ್ಲದೇ ರಾಜ್ಯವನ್ನು ನಡೆಸಬೇಕು ಮತ್ತು ಹೊಸ ರಾಜಧಾನಿಯನ್ನೂ ಕಟ್ಟಿಕೊಳ್ಳಬೇಕು. ಅದನ್ನು ಯಶಸ್ವಿಯಾಗಿಯೇ ನಡೆಸಿದ ಅವರು, ಕೇಂದ್ರದ ನೆರವನ್ನು ಕೇಳಿದರು. ಅಂತಹ ನೆರವನ್ನು ಉದಾರವಾಗಿ ನೀಡುವ ಇರಾದೆ ಮೋದಿಯವರದ್ದಾಗಿರಲಿಲ್ಲ. ಇಂತಹ ಸಂದರ್ಭದಲ್ಲಿ ವಿಶೇಷ ಸ್ಥಾನಮಾನಕ್ಕೆ ಆಗ್ರಹಿಸಿ ವಿರೋಧ ಪಕ್ಷ ವೈಎಸ್‍ಆರ್‍ಸಿಪಿಯ ಜಗನ್ ದೆಹಲಿಯಲ್ಲೂ ಧರಣಿ ಹೂಡಿದ್ದರು. ಹೀಗಾಗಿ ಕೇಂದ್ರದ ವಿರುದ್ಧ ತೊಡೆ ತಟ್ಟುವು ಅನಿವಾರ್ಯತೆ ಚಂದ್ರಬಾಬು ನಾಯ್ಡು ಅವರಿಗೆ ಉಂಟಾಯಿತು.

ಲೋಕಸಭೆಯ ಜೊತೆ ಜೊತೆಗೇ ವಿಧಾನಸಭಾ ಚುನಾವಣೆಯನ್ನೂ ಎದುರಿಸುತ್ತಿರುವ ಆಂಧ್ರದಲ್ಲಿ, ಈ ಸಾರಿ ಜಗನ್ ಅಧಿಕಾರಕ್ಕೆ ಬರುತ್ತಾರೆ ಎಂದು ಸಮೀಕ್ಷೆಗಳು ಹೇಳುತ್ತಿವೆ. ಆದರೆ, ನಾಯ್ಡು ಅವರ ವಿಶ್ವಾಸ ಅಲುಗಾಡಿಲ್ಲ. ಒಂದು ವೇಳೆ, ಅಧಿಕಾರಕ್ಕೆ ಬರದೇ ಹೋದರೂ, ತನಗೊಂದು ವಿಶೇಷ ಸ್ಥಾನ ಕಲ್ಪಿಸಿಕೊಳ್ಳಲು ಅವರು ದೆಹಲಿಯ ದಾರಿ ತುಳಿದಿದ್ದಾರೆ.

ಯುಪಿಎ ಸರ್ಕಾರವೂ ಆಗದು, ತೃತೀಯ ರಂಗ ಮಾತ್ರವೇ ಅಧಿಕಾರಕ್ಕೆ ಬರುವುದೂ ಸಾಧ್ಯವಿಲ್ಲ. ಅಂತಹ ಸಂದರ್ಭದಲ್ಲಿ ಹುಟ್ಟಿಕೊಳ್ಳಬಹುದಾದ ಹೊಸ ರಂಗಕ್ಕೆ ಸಂಚಾಲಕರಾಗಿ ಚಂದ್ರಬಾಬು ನಾಯ್ಡು ಸಹಜ ಆಯ್ಕೆಯಾಗಿರುತ್ತಾರೆ. ಅದಕ್ಕೆ ಬೇಕಾದಷ್ಟು ಕೆಲಸವನ್ನು ಅವರೀಗಾಗಲೇ ಮಾಡಿದ್ದಾರೆ. ಮುಖ್ಯಮಂತ್ರಿಯಾಗದೇ ಇದ್ದರೂ ಅಂತಹ ರಂಗವೊಂದರ ಸಂಚಾಲಕರಾಗಿ, ಅಮರಾವತಿ (ಆಂಧ್ರದ ಹೊಸ ರಾಜಧಾನಿ)ಯಲ್ಲೋ ಅಥವಾ ದೆಹಲಿಯಲ್ಲೋ ಕೂತು ಪತ್ರಿಕಾಗೋಷ್ಠಿ ಮಾಡಿ, ಆಂಧ್ರಕ್ಕೆ ವಿಶೇಷ ಸ್ಥಾನಮಾನವನ್ನು ಘೋಷಿಸುವ ಅವಕಾಶ ಅವರದ್ದಾಗಿರುತ್ತದೆ.

ಈ ಮೂಲಕ ಮುಖ್ಯಮಂತ್ರಿಯಾಗದೇ ಹೋದರೂ ಆಂಧ್ರದ ಉದ್ಧಾರಕನಾಗಿ ನಾಯ್ಡುವೇ ಇರುತ್ತಾರೆ. ನಿಧಾನಕ್ಕೆ ಜಗನ್‍ರನ್ನು ಹಣಿದು, ತನಗೋ ಅಥವಾ ತನ್ನ ಮಗ ನಾರಾ ಲೋಕೇಶ್‍ಗೋ ಮುಂದಿನ ಅವಧಿಯಲ್ಲಿ ಸ್ಥಾನ ಮಾಡಿಕೊಳ್ಳಲು ಅನುಕೂಲವಾಗುತ್ತದೆ. ಚಂದ್ರಬಾಬು ನಾಯ್ಡು ಅವರಿಗೆ ಈ ಲೆಕ್ಕಾಚಾರವೂ ಇರುವುದರಲ್ಲಿ ಸಂದೇಹವೇನಿಲ್ಲ. ಮೋದಿಯನ್ನು ಪ್ರಧಾನಿಯಾಗದಂತೆ ತಡೆಯಬೇಕು ಮತ್ತು ದೇಶದ ಪ್ರಜಾತಂತ್ರವು ಬಹಳ ಕೆಟ್ಟ ಪರಿಸ್ಥಿತಿಯಲ್ಲಿರುವುದರಿಂದ ಇದು ತನ್ನ ಕರ್ತವ್ಯ ಎಂದು ಹೇಳುತ್ತಿರುವ ಅವರ ಮಾತುಗಳು ಸಂಪೂರ್ಣ ಸುಳ್ಳಲ್ಲದಿರಬಹುದು. ಆದರೆ, ಈ ಲೆಕ್ಕಾಚಾರ ಇಲ್ಲವೇ ಇಲ್ಲ ಎಂದೂ ಹೇಳಲಾಗದು.
ಇದನ್ನೂ ಓದಿ: ಚಂದ್ರಬಾಬು ನಾಯ್ಡು ಅವರ ಅಭ್ಯರ್ಥಿ ಪ್ರಣಬ್ ಮುಖರ್ಜಿ
ಆದರೆ, ಯಾವ ಸಾಧ್ಯತೆ ಎಷ್ಟು ಎಂಬುದನ್ನು ಖಚಿತವಾಗಿ ಹೇಳಲು ಸಾಧ್ಯವಾಗುವುದು ಮೇ 23ರ ಸಂಜೆಯೇ.


