Homeರಾಜಕೀಯಇಟ್ಸ್ me....ರಜನಿಕಾಂತ್! ಸೂಪರ್ ಸ್ಟಾರ್ ಹೊಣೆಗೇಡಿಯಾದಾಗ....

ಇಟ್ಸ್ me….ರಜನಿಕಾಂತ್! ಸೂಪರ್ ಸ್ಟಾರ್ ಹೊಣೆಗೇಡಿಯಾದಾಗ….

- Advertisement -
- Advertisement -

ದೊಡ್ಡಿಪಾಳ್ಯ ನರಸಿಂಹಮೂರ್ತಿ |

ಸೂಪರ್ ಸ್ಟಾರ್ ರಜನಿಕಾಂತ್ ಬಗ್ಗೆ ತಮಿಳರಿಗೆ ಎಂಥಾ ಅಭಿಮಾನ, ಭಕ್ತಿಯಿದೆ ಎಂಬುದು ತಿಳಿದ ಸಂಗತಿ. ಇಂಥಾ ತಮಿಳುನಾಡಿನಲ್ಲಿ ಈಗ ರಜನಿಕಾಂತ್ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಇದ್ದಕ್ಕಿದ್ದಂತೆ ರಜನಿ ಬಗ್ಗೆ ತಮಿಳರು ಆಕ್ರೋಶ ವ್ಯಕ್ತಪಡಿಸಿದ್ದೇಕೆಂದು ನೋಡಿದರೆ ಅದಕ್ಕೆ ಸ್ವತಃ ರಜನಿಯವರ ಜನವಿರೋಧಿ ರಾಜಕೀಯ ಧೋರಣೆಯೇ ಕಾರಣ ಎಂಬುದು ಬೆಳಕಿಗೆ ಬಂದಿದೆ. ನಡೆದದ್ದಿಷ್ಟು. ಮೊನ್ನೆ ತುತ್ತುಕುಡಿಯಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಜನರ ಮೇಲೆ ಪೊಲೀಸರು ಗೋಲಿಬಾರ್ ನಡೆಸಿ 13 ಜನರನ್ನು ಕೊಂದ ಘಟನೆಯ ಬಗ್ಗೆ ಇಡೀ ತಮಿಳುನಾಡು ಕುದಿಯುತ್ತಿದೆ. ಹೀಗಿರುವಾಗ ತೂತ್ತುಕುಡಿಗೆ ಭೇಟಿ ಕೊಟ್ಟ ಸೂಪರ್‍ಸ್ಟಾರ್ ಮಾಧ್ಯಮದವರನ್ನುದ್ದೇಶಿಸಿ ಮಾತಾಡಿ “ಈ ಘಟನೆಗೆ ಸಮಾಜಘಾತುಕ ಶಕ್ತಿಗಳೇ ಕಾರಣ. ಅವರು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದರಿಂದಲೇ ಫೈರಿಂಗ್ ನಡೆಸಬೇಕಾಯ್ತು…” ಎಂದು ಅಪ್ಪಟ ಪೊಲೀಸ್ ಏಜೆಂಟರಂತೆ ಮಾತಾಡಿದ್ದಾರೆ. ಈ ಭೀಕರ ಮಾರಣಹೋಮವನ್ನು ಕಣ್ಣಾರೆ ಕಂಡಿರುವ ಅಭಿಮಾನಿಗಳಿಗೆ ರಜನಿ ಹೇಳಿಕೆಯಿಂದ ಶಾಕ್ ಆಗಿರುವುದಂತೂ ನಿಜ. ಇಡೀ ತಮಿಳುನಾಡಿನಲ್ಲಿ ರಜನಿಯ ಈ ನಿಲುವಿಗೆ ವ್ಯಾಪಕ ಖಂಡನೆ ವ್ಯಕ್ರವಾಗಿದೆ. ವಿವಿಧ ಸಂಘಟನೆಗಳು, ರಾಜಕೀಯ ಪಕ್ಷಗಳು ಹಾಗೂ ನಾಗರಿಕರು ರಜನಿಯವರ ಹೇಳಿಕೆಯನ್ನು ಖಂಡಿಸುತ್ತಿದ್ದಾರೆ. ‘ಫೈರಿಂಗ್‍ನಲ್ಲಿ ಜೀವತೆತ್ತ 11 ವರ್ಷದ ಬಾಲಕಿ ಸಮಾಜಘಾತುಕ ಶಕ್ತಿಯೇ? ರಜನಿ ಯಾರ ಪರವಾಗಿ ಮಾತಾಡುತ್ತಿದ್ದಾರೆ? ಯಾರೋ ಹೇಳಿಕೊಟ್ಟ ಮಾತುಗಳನ್ನು ಹೇಳುತ್ತಿದ್ದಾರೆ’ ಎಂದು ಜನರು ತಿರುಗೇಟು ನೀಡಿದ್ದಾರೆ.

‘ಸ್ಟೆರ್‍ಲೈಟ್ ಕಂಪನಿಯ ಮಾಲಿನ್ಯದಿಂದ ತೂತ್ತುಕುಡಿಯ ಜನರ ಜೀವನವೇ ದುಸ್ತರವಾಗಿತ್ತಲ್ಲಾ, ಅದಕ್ಕಾಗಿ ಜನರು ಹೋರಾಟ ಮಾಡಿದ್ದನ್ನು ತಪ್ಪು ಎನ್ನುತ್ತೀರಾ?’ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸ್ಟಾರ್ “ಏನ್ ಹೋರಾಟ? ಎಲ್ಲದಕ್ಕೂ ಹೋರಾಟ ಹೋರಾಟ ಅಂತ ಹೋಗ್ತಾ ಇದ್ದರೆ ತಮಿಳುನಾಡು ಸುಡುಗಾಡು ಆಗೋಗುತ್ತೆ” ಎಂದು ಪ್ರಶ್ನೆ ಕೇಳಿದವರ ಮೇಲೆಯೇ ಜೋರು ಮಾಡಿದ್ದಾರೆ. ಮತ್ತೂ ಮುಂದುವರೆದು “ಹೀಗಾದರೆ ತಮಿಳುನಾಡಿಗೆ ವಿದೇಶಿ ಬಂಡವಾಳ ಹೂಡಲು ಯಾರೂ ಬರೋದಿಲ್ಲ” ಎಂದು ತಮ್ಮ ಆರ್ಥಿಕ ನೀತಿಯನ್ನೂ ಹೊರಗೆಡವಿದ್ದಾರೆ.

ವಿಪರ್ಯಾಸ ನೋಡಿ ಹೇಗಿದೆ. ಇನ್ನೇನು ರಿಲೀಸ್ ಆಗಬೇಕಿರುವ ‘ಕಾಲಾ’ ಸಿನಿಮಾದಲ್ಲಿ ಬಡಜನರ ಮೇಲೆ ನಡೆದ ದೌರ್ಜನ್ಯಗಳ ವಿರುದ್ಧ ಕೆಂಡಕಾರುವ ಹೀರೋ ರಜನಿಕಾಂತ್ ‘ಎಲ್ಲ ಜನರನ್ನು ಕರೆತನ್ನಿ, ಹೋರಾಟ ಮಾಡೋಣ’ ಅಂತ ಕರೆಕೊಡುತ್ತಾನೆ. ದುಷ್ಟಶಕ್ತಿಗಳ ವಿರುದ್ಧ ಹೋರಾಟ ಮಾಡಿಯೇ ಗೆಲ್ಲುತ್ತಾನೆ. ಆದರೆ ನಿಜಜೀವನದಲ್ಲಿ ಎಲ್ಲಾ ಉಲ್ಟಾಪಲ್ಟಾ.

ತೂತ್ತುಕುಡಿಯ ಭೇಟಿಯ ನಂತರ ಅವರು ಆಸ್ಪತ್ರೆಯಲ್ಲಿರುವ ಗಾಯಾಳುಗಳನ್ನು ಭೇಟಿ ಮಾಡಲು ಹೊರಟರು. ಅಲ್ಲಿ ಅವರಿಗೆ ಭಾರೀ ಮುಖಭಂಗ ಕಾದಿತ್ತು.

ತೀವ್ರ ಗಾಯಗೊಂಡು ಚಿಕಿತ್ಸೆಯಲ್ಲಿರುವ ಸಂತೋಷ್ ರಾಜ್ ಎಂಬ 21 ವರ್ಷದ ಯುವಕನ ಹಾಸಿಗೆಯ ಬಳಿಗೆ ಸೂಪರ್‍ಸ್ಟಾರ್ ಬರುತ್ತಿದ್ದಂತೆ ಸಂತೋಷ್ ಹಾಸಿಗೆಯಿಂದ ಎದ್ದು ಕೂತ. ಸಂತೋಷ್‍ನ ಹೆಗಲ ಮೇಲೆ ಕೈಹಾಕಿ ಮಾತಾಡಿಸಲು ರಾಜಕಾರಣಿಯ ಶೈಲಿಯಲ್ಲಿ ಸೂಪರ್‍ಸ್ಟಾರ್ ಮುಂದಾಗುತ್ತಿದ್ದಂತೆ “ಯಾರು ನೀವು? ಎಲ್ಲಿಂದ ಬಂದಿದ್ದೀರಿ?” ಎಂದು ಖಾರವಾಗಿ ಪ್ರಶ್ನೆ ಎಸೆದ ಗಾಯಾಳು ಯುವಕ. ಇಂಥಾ ಪ್ರಶ್ನೆಯನ್ನು ನಿರೀಕ್ಷಿಸಿರದಿದ್ದ ಸ್ಟಾರ್ ಸಾವರಿಸಿಕೊಂಡು “ನಾನು ರಜನಿಕಾಂತ್, ಚೆನ್ನೈಯಿಂದ ಬಂದಿದ್ದೇನೆ.” ಎಂದು ಉತ್ತರಿಸಿದರು. ನಂತರ ಪ್ರಶ್ನೆಗಳ ಸುರಿಮಳೆಯನ್ನೇ ಆರಂಭಿಸಿದ ಸಂತೋಷ್‍ನ ಕಡೆಗೆ ಕೇಳಿಸಿಕೊಳ್ಳದಂತೆ ಮುಂದೆ ಹೆಜ್ಜೆಹಾಕಿ ಮತ್ತಷ್ಟು ಮುಖಭಂಗದಿಂದ ತಪ್ಪಿಸಿಕೊಂಡರು. ಸೂಪರ್ ಸ್ಟಾರ್ ಆಸ್ಪತ್ರೆಯ ಆವರಣದಲ್ಲಿ ಕರೆದಿದ್ದ ಪ್ರೆಸ್‍ಮೀಟ್ ಅನ್ನು ಖಾಸಗಿ ರೆಸಾರ್ಟ್‍ಗೆ ಸ್ಥಳಾಂತರಿಸಿ ,ತನ್ನ ಪಟಾಲಂ ಸಮೇತ ಕೂಡಲೇ ಅಲ್ಲಿಂದ ಕಾಲ್ಕಿತ್ತರು.

“ಪೊಲೀಸ್ ಫೈರಿಂಗ್‍ನಲ್ಲಿ 13 ಜನ ಸತ್ತು ಒಂದು ವಾರವಾಯ್ತು. ಆಸ್ಪತ್ರೆಯಲ್ಲಿರುವ ಎಷ್ಟೋ ಜನರ ಸ್ಥಿತಿ ಗಂಭೀರವಾಗಿದೆ… ನೂರು ದಿನಗಳಿಂದ ನಾವು ಹೋರಾಟ ಮಾಡುತ್ತಿದ್ದೇವೆ, ಈ ಸ್ಟಾರ್ ಒಮ್ಮೆಯೂ ಬಾಯಿಬಿಚ್ಚಿಲ್ಲ. ಒಮ್ಮೆಯೂ ನಮ್ಮ ಕಡೆಗೆ ತಿರುಗಿ ನೋಡಿಲ್ಲ. ಒಂದು ವೇಳೆ ಸ್ಟೆರ್‍ಲೈಟ್ ಕಂಪನಿ ಮುಚ್ಚಬೇಕೆಂಬ ಆದೇಶ ಹೊರಬೀಳದೆ ಇದ್ದಿದ್ದರೆ ಬಹುಶಃ ಇವರು ಇಲ್ಲಿಗೆ ಬರುತ್ತಿರಲಿಲ್ಲ. ಇದ್ದಕ್ಕಿದ್ದಂತೆ ಈಗ ಬಂದಿರೋದು ಯಾಕೆ? ಇದಕ್ಕೂ ಬಲವಾದ ಕಾರಣ ಇದೆ. ಕೆಲದಿನಗಳಲ್ಲಿ ‘ಕಾಲಾ’ ರಿಲೀಸ್ ಆಗ್ತಾ ಇದೆ. ಈಗಲೂ ತೂತ್ತುಕುಡಿ ಜನರನ್ನು ಮಾತಾಡಿಸದೆ ಹೋದರೆ ತಮಿಳುನಾಡಿನಲ್ಲಿ ಅವರ ಸಿನಿಮಾ ಓಡೋದಿಲ್ಲ ಅಂತ ಅವರಿಗೆ ಚನ್ನಾಗಿ ಗೊತ್ತು. ಅದಕ್ಕೆ ಈ ವರಸೆ ಶುರು ಮಾಡಿದ್ದಾರೆ…” ಎಂದು ನಂತರ ಮಾಧ್ಯಮದವರ ಜೊತೆ ಮಾತಾಡಿದ ಸಂತೋಷ್ ಈ ಸೂಪರ್‍ಸ್ಟಾರ್ ಗುಟ್ಟನ್ನು ಬಿಚ್ಚಿಟ್ಟಿದ್ದಾನೆ. ಇಷ್ಟೆಲ್ಲಾ ಅನಾಹುತಕ್ಕೆ ಸಮಾಜಘಾತುಕ ಶಕ್ತಿಗಳೇ ಕಾರಣ ಎಂದ ರಜನಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಂತೋಷ್ “ಜನರ ಹೋರಾಟದ ಬಗ್ಗೆ ಮಾತಾಡಲಿಕ್ಕೆ ಅವರಿಗೆ ಯಾವ ಹಕ್ಕಿದೆ? ಕನಿಷ್ಟ ಒಂದು ದಿನವಾದರೂ ತೂತ್ತುಕುಡಿ ಜನರ ಸಂಕಷ್ಟಗಳ ಬಗ್ಗೆ ಮಾತಾಡದೆ ಮೌನ ವಹಿಸಿದ್ದ ಇವರು ಈಗ ಎಂಟ್ರಿ ಕೊಟ್ಟಿರೋದೇ ಅನುಮಾನಾಸ್ಪದ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೂಪರ್‍ಸ್ಟಾರ್ ‘ನಾನು ರಜನಿಕಾಂತ್’ ಎಂದು ಹೇಳಿಕೊಂಡ ಘಟನೆ ‘ಇಟ್ಸ್ ಮಿ ರನಿಕಾಂತ್’ ಎಂಬ ಹ್ಯಾಷ್‍ಟ್ಯಾಗ್ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗಿದೆ. ರಜನಿಕಾಂತ್ ಅವರ ನಿಲುವನ್ನು ಸಾವಿರಾರು ಜನರು ಪ್ರಶ್ನಿಸಿದ್ದಾರೆ.

ಜನಪ್ರಿಯ ಸ್ಟಾರ್ ರಜನಿಕಾಂತ್ ರಾಜಕಾರಣಿಯಾಗಲು ಹೊರಟಿರುವ ಈ ಸಂದರ್ಭದಲ್ಲಿ, ಆಡಳಿತಾರೂಡ ಎಐಡಿಎಂಕೆ ಪರ ಬ್ಯಾಟಿಂಗ್ ಶುರುವಿಟ್ಟುಕೊಂಡಿರುವುದು ಆಶ್ಚರ್ಯಕರ ಸಂಗತಿ. ಜನರ ಜೀವಗಳ ಬಗ್ಗೆ ಕಾಳಜಿ ತೋರದೆ ಆಡಳಿತ ಪಕ್ಷ ಹಾಗೂ ಸ್ಟೆರ್‍ಲೈಟ್ ಕಾಪರ್ ಕಂಪನಿಯ ವಕ್ತಾರನಂತೆ ರಜನಿ ಮಾತಾಡುತ್ತಿರುವುದು ತಮಿಳು ಚಿತ್ರರಂಗದಲ್ಲಿ ಮಾತ್ರವಲ್ಲದೆ, ತಮಿಳುನಾಡಿನ ಸಾಮಾಜಿಕ, ರಾಜಕೀಯ ವಲಯದಲ್ಲೂ ಚರ್ಚೆಗೆ ಗ್ರಾಸವಾಗಿದೆ. ಅಂದಹಾಗೆ ನಿಜಬಣ್ಣಗಳು ಹೊರಬರುವುದೇ ಇಂಥಾ ಸಂದರ್ಭದಲ್ಲಿ ಅಲ್ಲವೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...