ಸ್ವಾತಂತ್ರ್ಯ ದಿನದಂದು ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ (ಜೆಎನ್‌ಯು) ಹಿಂಸಾಚಾರ ನಡೆಸುವ ಬೆದರಿಕೆ ಹಾಕಿದ ಇಬ್ಬರು ಆರೋಪಿಗಳನ್ನು ಜೆಎನ್‌ಯು ವಿದ್ಯಾರ್ಥಿ ಸಂಘದ ದೂರಿನ ಮೇರೆಗೆ ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಭಾನುವಾರ ಬೆಳಿಗ್ಗೆ ಮಹಾಕಾಲ್ ಯೂತ್ ಬ್ರಿಗೇಡ್‌ನ ಫೇಸ್‌ಬುಕ್ ಪುಟದಲ್ಲಿ ಪೋಸ್ಟ್ ಮಾಡಿದ ವಿಡಿಯೊದಲ್ಲಿ ಬೆದರಿಕೆ ಹಾಕಲಾಗಿದೆ ಎಂದು ಜೆಎನ್‌ಯು ವಿದ್ಯಾರ್ಥಿ ಸಂಘದ ಸದಸ್ಯರು ಆರೋಪಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153 ಎ (ದ್ವೇಷವನ್ನು ಉತ್ತೇಜಿಸುವುದು), 295 ಎ (ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವುದು), 505 ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಫೇಸ್‌ಬುಕ್ ವಿಡಿಯೋದಲ್ಲಿ ಹಿಂಸೆಗೆ ಕರೆ ನೀಡಿದ ಉತ್ತಮ್ ನಗರ ನಿವಾಸಿ ವಿಕಾಸ್ ಸೆಹ್ರಾವತ್ (30) ಮತ್ತು ವಿಡಿಯೊ ಅಪ್ಲೋಡ್ ಮಾಡಲು ಬಳಸಿದ ಫೋನಿನ ಮಾಲೀಕ ರಾಜ ಕುಮಾರ್ (19) ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ಜೆಎನ್‌ಯು ಹಿಂಸಾಚಾರ ಪ್ರಕರಣದಲ್ಲಿ ಯಾರನ್ನೂ ಬಂಧಿಸಿಲ್ಲ ಎಂದ ಒಕ್ಕೂಟ ಸರ್ಕಾರ
“ಆಗಸ್ಟ್ 9 ಮತ್ತು 14 ರಂದು ಮಹಾಕಾಲ್ ಯೂತ್ ಬ್ರಿಗೇಡ್‌ನ ಫೇಸ್‌ಬುಕ್ ಪುಟದಲ್ಲಿ ಪೋಸ್ಟ್ ಮಾಡಲಾದ ಎರಡು ವಿಡಿಯೊಗಳಲ್ಲಿ ಆಗಸ್ಟ್ 15 ರಂದು ಮಧ್ಯಾಹ್ನ 2 ರಿಂದ 6 ಗಂಟೆಯ ನಡುವೆ ಜೆಎನ್‌ಯು ಕ್ಯಾಂಪಸ್‌ನಲ್ಲಿ ಕೇಸರಿ ಧ್ವಜವನ್ನು ಹಾರಿಸಲು ಮತ್ತು ಮೆರವಣಿಗೆಗೆ ನಡೆಸಲಿ ಕರೆ ನೀಡಲಾಗಿದೆ. ಎರಡೂ ವಿಡಿಯೊಗಳಲ್ಲಿ, ಮುಸ್ಲಿಮರ ವಿರುದ್ಧ ದ್ವೇಷ ಭಾಷಣಗಳನ್ನು ಮಾಡಲಾಗಿದೆ. ಜೊತೆಗೆ ಇದನ್ನು ತಡೆಯಲು ಎದುರಾಗುವ ಯಾವುದೇ ವಿದ್ಯಾರ್ಥಿಗಳ ವಿರುದ್ಧ ಹಿಂಸೆಗೆ ಮುಕ್ತ ಕರೆ ನೀಡಲಾಗಿದೆ” ಎಂದು ಜೆಎನ್‌ಯು ವಿದ್ಯಾರ್ಥಿ ಸಂಘ ತಮ್ಮ ಪೊಲೀಸ್ ದೂರಿನಲ್ಲಿ ತಿಳಿಸಿದೆ.
ಕಳೆದ ಜನವರಿ 5, 2020 ರಂದು, ಸುಮಾರು 50 ಮಂದಿ ಮುಖವಾಡ ಧರಿಸಿದ ಯುವಕರು ಮತ್ತು ಮಹಿಳೆಯರು, ಕಬ್ಬಿಣದ ರಾಡ್‌ಗಳು ಮತ್ತು ಸುತ್ತಿಗೆಗಗಳನ್ನು ಹಿಡಿದು ಶಸ್ತ್ರಸಜ್ಜಿತರಾಗಿ, ಜೆಎನ್‌ಯು ಕ್ಯಾಂಪಸ್‌ನಲ್ಲಿ ನುಗ್ಗಿದ್ದರು. ವಿದ್ಯಾರ್ಥಿಗಳು ಎಚ್ಚರಗೊಳ್ಳುವ ಮೊದಲೇ ಹಾಸ್ಟೆಲ್‌ಗಳು ಮತ್ತು ಇತರ ಕಟ್ಟಡಗಳಿಗೆ ನುಗ್ಗಿ ವಿದ್ಯಾರ್ಥಿಗಳ ಮೇಲೆ ಮಾರಣಾಂತಿಕ ದಾಳಿ ನಡೆಸಿದ್ದರು.
ಆದರೆ, 2020 ರ ಜೆಎನ್‌ಯು ಕ್ಯಾಂಪಸ್ ಹಿಂಸಾಚಾರ ಪ್ರಕರಣದಲ್ಲಿ ಯಾರನ್ನೂ ಬಂಧಿಸಿಲ್ಲ ಎಂದು ಗೃಹ ವ್ಯವಹಾರಗಳ ಸಚಿವಾಲಯ (MHA) ಲೋಕಸಭೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಜೆಎನ್‌ಯು ಮರುನಾಮಕರಣವಾಗಲಿ ಎಂದ ಸಿ.ಟಿ. ರವಿಯನ್ನು ತರಾಟೆಗೆ ಪಡೆದ ನೆಟ್ಟಿಗರು!


