72 ವರ್ಷದ ಬ್ರಿಟಿಷ್ ವೃದ್ಧರೊಬ್ಬರು ಸತತ 10 ತಿಂಗಳ ಕಾಲ ಕೊರೊನಾ ಸೋಂಕಿಗೆ ತುತ್ತಾಗಿದ್ದ ಘಟನೆ ವರದಿಯಾಗಿದೆ. ಇದು ಕೊರೊನಾ ಸೋಂಕಿನ ದಾಖಲೆಯ ಪ್ರಕರಣವಾಗಿದ್ದು, ’ಅತಿ ದೀರ್ಘಾವಧಿಯ ಪ್ರಕರಣ’ವೆಂದು ಸಂಶೋಧಕರು ತಿಳಿಸಿದ್ದಾರೆ.
ಪಶ್ಚಿಮ ಇಂಗ್ಲೆಂಡ್‌ನ ಬ್ರಿಸ್ಟಲ್‌ನ ನಿವೃತ್ತ ಚಾಲನಾ ತರಬೇತುದಾರ ಡೇವ್ ಸ್ಮಿತ್, 43 ಬಾರಿ ಕೊರೊನಾ ಪಾಸಿಟಿವ್‌ಗೆ ಒಳಗಾಗಿದ್ದಾರೆ. ಏಳು ಬಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಇಷ್ಟೇ ಅಲ್ಲದೇ, ತಮ್ಮ ಅಂತ್ಯಕ್ರಿಯೆಯ ಯೋಜನೆಗಳನ್ನು ರೂಪಿಸಿದ್ದರು ಎಂದು ಹೇಳಿದ್ದಾರೆ.
“ಕೊರೊನಾ ಸೋಂಕು ಕಾಣಿಸಿಕೊಂಡ ಬಳಿಕ ನಾನು ಕೆಲಸಕ್ಕೆ ರಾಜೀನಾಮೆ ನೀಡಿದೆ. ಕುಟುಂಬ ಸದಸ್ಯರನ್ನೆಲ್ಲಾ ಕರೆಸಿಕೊಂಡು, ಎಲ್ಲರೊಂದಿಗೆ ಮಾತನಾಡಿ, ವಿದಾಯ ಹೇಳಿದ್ದೆ” ಎಂದು ಡೇವ್ ಸ್ಮಿತ್ ಹೇಳಿದ್ದಾರೆ ಎಂದು ಬಿಬಿಸಿ ಉಲ್ಲೇಖಿಸಿದೆ.
ಇದನ್ನೂ ಓದಿ: ಯುಪಿ ವಿಧಾನಸಭಾ ಚುನಾವಣೆಯಲ್ಲಿ ಮಾಯಾವತಿ, ಕಾಂಗ್ರೆಸ್ ಜೊತೆ ಮೈತ್ರಿಯಿಲ್ಲ: ಅಖಿಲೇಶ್ ಯಾದವ್
ಡೆವ್ ಸ್ಮಿತ್ ಅವರೊಂದಿಗೆ ಕ್ವಾರಂಟೈನ್‌ನಲ್ಲಿದ್ದ ಅವರ ಪತ್ನಿ ಲಿಂಡಾ, “ಅವರು ಈ ಸೋಂಕಿನಿಂದ ಉಳಿಯುತ್ತಾರೆ ಎಂದು ನಾವು ಅಂದಾಜಿಸಿರಲು ಇಲ್ಲ. ಒಂದು ವರ್ಷ ನಮಗೆ ನರಕ ದರ್ಶನವಾಗಿದೆ” ಎಂದಿದ್ದಾರೆ.
ಬ್ರಿಸ್ಟಲ್ ವಿಶ್ವವಿದ್ಯಾಲಯ ಮತ್ತು ನಾರ್ತ್ ಬ್ರಿಸ್ಟಲ್ ಎನ್‌ಎಚ್‌ಎಸ್ ಟ್ರಸ್ಟ್‌ನ ಸಾಂಕ್ರಾಮಿಕ ರೋಗಗಳ ಸಲಹೆಗಾರ ಎಡ್ ಮೊರಾನ್, ”ಡೇವ್ ಸ್ಮಿತ್ ದೇಹದಲ್ಲಿ ಸತತ 10 ತಿಂಗಳು ಸಕ್ರಿಯ ವೈರಸ್ ಇತ್ತು. ಅದು ಕೇವಲ ಬಂದು ಹೋಗುವ ವೈರಸ್ ಆಲ್ಲ. ಸಕ್ರಿಯ ವೈರಸ್ ಎಂಬುದು ನಮಗೆ ವೈರಸ್ ಮಾದರಿಗಳನ್ನು ಪರೀಕ್ಷಿಸಿದ ಬಳಿಕ ತಿಳಿಯಿತು” ಎಂದು ಮಾಹಿತಿ ನೀಡಿದ್ದಾರೆ.
ಯುಎಸ್ ಬಯೋಟೆಕ್ ಸಂಸ್ಥೆ ರೆಜೆನೆರಾನ್ ಅಭಿವೃದ್ಧಿಪಡಿಸಿದ synthetic antibodies ಬಳಸಿ ನೀಡಿದ ಚಿಕಿತ್ಸೆಯ ನಂತರ ಡೇವ್ ಸ್ಮಿತ್ ಚೇತರಿಸಿಕೊಂಡಿದ್ದಾರೆ. ಆದರೆ ಈ ಚಿಕಿತ್ಸೆಯನ್ನು ಬಳಸಲು ಬ್ರಿಟಿಷ್ ಆಡಳಿತ ಅನುಮತ ನೀಡಿಲ್ಲ. ಸಹಾನುಭೂತಿಯ ಆಧಾರದಲ್ಲಿ ಡೇವ್ ಸ್ಮಿತ್ ಮೇಲೆ ಬಳಸಲು ಅನುಮತಿ ನೀಡಲಾಗಿದೆ ಎಂದು ಬಿಬಿಸಿ ವರದಿ ಮಾಡಿದೆ.
ರೆಜೆನೆರಾನ್ ಔಷಧಿಯನ್ನು ಪಡೆದ 45 ದಿನಗಳ ನಂತರ, ಒಟ್ಟು 305 ದಿನಗಳ ನಂತರ ಕೊರೊನಾ ನೆಗೆಟಿವ್ ವರದಿ ಬಂದಾಗ ಪತಿ ಮತ್ತು ಪತ್ನಿ ಇಬ್ಬರು ನಿಟ್ಟುಸಿರು ಬಿಟ್ಟಿದ್ದಾರೆ.
ಇದನ್ನೂ ಓದಿ: ಡೆಲ್ಟಾ ಪ್ಲಸ್ 3ನೇ ಅಲೆ ಸೃಷ್ಟಿಸುತ್ತೆ ಎನ್ನಲು ಆಧಾರವಿಲ್ಲ- ಐಜಿಐಬಿ ನಿರ್ದೇಶಕ


