ಇಂದಿನಿಂದ ರಾಜ್ಯದಲ್ಲಿ ಪ್ರೌಢಶಾಲೆಗಳು ಆರಂಭವಾಗಿದ್ದು, ಶಿವಮೊಗ್ಗದ ಶಾಲೆಯೊಂದರಲ್ಲಿ ಹಿಜಾಬ್ ಧರಿಸಿ ಬಂದಿದ್ದ ವಿದ್ಯಾರ್ಥಿನಿಯರಿಗೆ ಪ್ರವೇಶ ನೀಡದ ಹಿನ್ನೆಲೆ ಪರೀಕ್ಷೆ ಬರೆಯದೆ 13 ವಿದ್ಯಾರ್ಥಿನಿಯರು ವಾಪಸ್ ತೆರಳಿರುವ ಘಟನೆ ನಡೆದಿದೆ.
ಶಿವಮೊಗ್ಗದ ಬಿ.ಎಚ್.ರಸ್ತೆಯಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಪ್ರೌಢಶಾಲೆಯ 13 ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ (10 ನೇ ತರಗತಿ) ಪೂರ್ವಸಿದ್ಧತಾ ಪರೀಕ್ಷೆಯನ್ನು ಹಿಜಾಬ್ ಧರಿಸಿಯೇ ಬರೆಯುವುದಾಗಿ ತಿಳಿಸಿದ್ದಾರೆ. ಇದಕ್ಕೆ ಒಪ್ಪದ ಶಾಲೆಯವರು ಹಿಜಾಬ್ ತೆಗೆಯುವಂತೆ ತಿಳಿಸಿದ್ದಾರೆ. ಹಿಜಾಬ್ ತೆಗೆಯಲು ನಿರಾಕರಿಸಿದ 13 ವಿದ್ಯಾರ್ಥಿಗಳು ಪರೀಕ್ಷೆ ಬಹಿಷ್ಕರಿಸಿದ್ದಾರೆ.
ಕರ್ನಾಟಕ ಹೈಕೋರ್ಟಿನ ಮಧ್ಯಂತರ ಆದೇಶದಂತೆ ಸೋಮವಾರ ರಾಜ್ಯದ ಬಹುಪಾಲು ಮುಸ್ಲಿಂ ವಿದ್ಯಾರ್ಥಿಗಳು ಹಿಜಾಬ್ ಧರಿಸದೆ ತರಗತಿಗಳಿಗೆ ಹಾಜರಾಗಿದ್ದಾರೆ ಎಂದು ಶಿಕ್ಷಕರು ವಿದ್ಯಾರ್ಥಿಗಳ ಮನವೊಲಿಸಲು ಯತ್ನಿಸಿದ್ದಾರೆ. ಆದರೆ ಅದು ವಿಫಲವಾಗಿದೆ.
ಇದನ್ನೂ ಓದಿ: ’ಮಹಿಳೆಯರು ಹಿಜಾಬ್ ಧರಿಸದಿರುವುದು ಅತ್ಯಾಚಾರ ಹೆಚ್ಚಾಗಲು ಕಾರಣ’: ಶಾಸಕ ಜಮೀರ್ ಅಹ್ಮದ್
Some of the students at KPS school, #Shimoga #Karnataka refused to remove their #hijab.Education dept officials tried to convince them stating they are following HC orders. But students refused to remove hijab.Then they were asked to go home. #KarnatakaHijabRow #HijabControversy pic.twitter.com/pqp1QKq9UI
— Imran Khan (@KeypadGuerilla) February 14, 2022
ಹಿಜಾಬ್ ಧರಿಸದೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯುವಂತೆ ಶಿಕ್ಷಕರು ಮತ್ತು ಶಾಲಾ ಆಡಳಿತ ಮಂಡಳಿ ವಿದ್ಯಾರ್ಥಿಗಳಿಗೆ ತಿಳಿಸಿತ್ತು. ಆದರೆ, ವಿದ್ಯಾರ್ಥಿಗಳು ಈ ಪ್ರಸ್ತಾಪವನ್ನು ತಿರಸ್ಕರಿಸಿ ಪರೀಕ್ಷೆಯನ್ನು ಬಹಿಷ್ಕರಿಸಲು ನಿರ್ಧರಿಸಿ ವಾಪಸ್ ಹೊರಟಿದ್ದಾರೆ. ವಿದ್ಯಾರ್ಥಿನಿಯರ ಪೋಷಕರು ಕೂಡ ತಮ್ಮ ಮಕ್ಕಳನ್ನು ಬೆಂಬಲಿಸಿ ಹಿಜಾಬ್ ಇಲ್ಲದೆ ತರಗತಿಗಳಿಗೆ ಹಾಜರಾಗಲು ಸಾಧ್ಯವಿಲ್ಲ ಎಂದು ಹೇಳಿ ಮನೆಗೆ ಕರೆದೊಯ್ದರು.
“ನ್ಯಾಯಾಲಯವು ಇನ್ನೂ ಆದೇಶ ನೀಡಿಲ್ಲ, ಏನೇ ಇರಲಿ ನಾವು ಹಿಜಾಬ್ ಅನ್ನು ತೆಗೆಯುವುದಿಲ್ಲ, ಹಿಜಾಬ್ ಕಡ್ಡಾಯಗೊಳಿಸದಿದ್ದರೆ ನಾವು ಶಾಲೆಗೆ ಬರುವುದಿಲ್ಲ. ಹಿಜಾಬ್ ತೆಗೆಯುವಂತೆ ಕೇಳಿದರೆ ಮನೆಗೆ ಹಿಂತಿರುಗುವಂತೆ ನನ್ನ ಪೋಷಕರು ನನ್ನನ್ನು ಹೇಳಿದ್ದಾರೆ” ಎಂದು ಪರೀಕ್ಷೆಯನ್ನು ಬಹಿಷ್ಕರಿಸಿದ ವಿದ್ಯಾರ್ಥಿನಿ ಅಲಿಯಾ ಮೆಹತ್ ಹೇಳಿದ್ದಾರೆ.
ಕರ್ನಾಟಕ ಹೈಕೋರ್ಟ್ ಪೂರ್ಣ ಪೀಠವು ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ಮುಂದುವರೆಯುತ್ತಿದೆ. ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ, ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಮತ್ತು ನ್ಯಾಯಮೂರ್ತಿ ಜೆಎಂ ಖಾಜಿ ಅವರನ್ನೊಳಗೊಂಡ ಪೀಠದ ಮುಂದೆ ವಿದ್ಯಾರ್ಥಿಗಳನ್ನು ಪ್ರತಿನಿಧಿಸಿ ಹಿರಿಯ ವಕೀಲ ವಾದ ಮಂಡಿಸುತ್ತಿದ್ದಾರೆ.
ಇದನ್ನೂ ಓದಿ: ಮಂಡ್ಯದಲ್ಲಿ ಹಿಜಾಬ್ ಧರಿಸಿದ ಶಿಕ್ಷಕಿಯರಿಗೂ ಇಲ್ಲ ಪ್ರವೇಶ: ಗೇಟ್ ಬಳಿಯೇ ಹಿಜಾಬ್, ಬುರ್ಕಾ ತೆಗೆದ ಶಿಕ್ಷಕಿಯರು


