Homeಕರ್ನಾಟಕಕೇಂದ್ರೀಯ ವಿವಿ ಪ್ರವೇಶಕ್ಕೆ ಏಕರೂಪದ ಪರೀಕ್ಷೆ: ಆತಂಕ ಏಕೆ? ಮುಂದಿನ ದಾರಿ ಯಾವುದು?

ಕೇಂದ್ರೀಯ ವಿವಿ ಪ್ರವೇಶಕ್ಕೆ ಏಕರೂಪದ ಪರೀಕ್ಷೆ: ಆತಂಕ ಏಕೆ? ಮುಂದಿನ ದಾರಿ ಯಾವುದು?

- Advertisement -
- Advertisement -

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಮಂಗಳವಾರ ಹೊಸ ಆದೇಶ ಪ್ರಕಟಿಸಿದ್ದು, ಕೇಂದ್ರೀಯ ವಿಶ್ವವಿದ್ಯಾನಿಲಯಗಳ ಪ್ರವೇಶಕ್ಕಾಗಿ ಹನ್ನೆರಡನೇ ತರಗತಿ ಅಂಕಗಳನ್ನು ಪರಿಗಣಿಸಿದೆ ಮತ್ತೊಂದು ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ (CUET) ನಡೆಸಲು ಮುಂದಾಗಿದೆ.

ಜುಲೈ ವೇಳೆಗೆ ಪರೀಕ್ಷೆಗಳನ್ನು ಆರಂಭಿಸುವ ಗುರಿಯನ್ನು ಇಟ್ಟುಕೊಂಡಿದ್ದು ಏಪ್ರಿಲ್‌ನಲ್ಲಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭವಾಗಲಿದೆ ಎಂದು ಯುಜಿಸಿ ಅಧ್ಯಕ್ಷ ಎಂ.ಜಗದೇಶ್ ಕುಮಾರ್ ಹೇಳಿದ್ದಾರೆ. “ಒಂದು ರಾಷ್ಟ್ರ, ಒಂದು ಪ್ರವೇಶ ಪರೀಕ್ಷೆ” ಎಂಬ ಗುರಿಯನ್ನು ಸಾಧಿಸುವತ್ತ ಹೆಜ್ಜೆ ಇರಿಸಲಾಗುತ್ತಿದೆ ಎಂಬುದು ಯುಜಿಸಿ ಅಧ್ಯಕ್ಷರ ಅಭಿಪ್ರಾಯ.

ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಭಾಗವಾಗಿರುವ ಈ ಪ್ರಯೋಗವು ಶೈಕ್ಷಣಿಕ ಅಸಮಾನತೆಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ ಎಂಬ ಆತಂಕವನ್ನು ಶಿಕ್ಷಣ ತಜ್ಞರು ವ್ಯಕ್ತಪಡಿಸುತ್ತಿದ್ದಾರೆ.

ಸಾಮಾನ್ಯ ಪ್ರವೇಶ ಪರೀಕ್ಷೆ ಏಕೆ? ಯುಜಿಸಿ ಅಧ್ಯಕ್ಷರ ಅಭಿಪ್ರಾಯವೇನು?

ವಿದ್ಯಾರ್ಥಿಗಳ ಮೇಲಿನ ಹೊರೆ ಕಡಿಮೆ ಮಾಡುವುದಕ್ಕಾಗಿ ನಾವು ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಪರಿಚಯಿಸುತ್ತಿದ್ದೇವೆ ಎನ್ನುತ್ತಾರೆ ಯುಜಿಸಿ ಅಧ್ಯಕ್ಷರು.

“ವಿದ್ಯಾರ್ಥಿಗಳು ಇದೀಗ ವಿವಿಧ ವಿಶ್ವವಿದ್ಯಾಲಯಗಳಿಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ಪ್ರವೇಶಾತಿಗಾಗಿ ಹಲವು ಪ್ರವೇಶ ಪರೀಕ್ಷೆಗಳನ್ನು ಬರೆಯುತ್ತಾರೆ. ಎಲ್ಲಾ ಕೇಂದ್ರೀಯ ವಿಶ್ವವಿದ್ಯಾನಿಲಯಗಳು 12ನೇ ತರಗತಿಯ ಅಂಕಗಳ ಆಧಾರದ ಮೇಲೆ ಪ್ರವೇಶವನ್ನು ನಡೆಸುತ್ತಿವೆ ಎಂದು ನಾವು ಭಾವಿಸಬಾರದು. ಅನೇಕ ವಿಶ್ವವಿದ್ಯಾನಿಲಯಗಳು ಪ್ರವೇಶ ಪರೀಕ್ಷೆಗಳನ್ನು ನಡೆಸುತ್ತಿವೆ. ನಾವು ವಿವಿಧ ಪರೀಕ್ಷೆಗಳಿಂದಾಗಿ ಪೋಷಕರಲ್ಲಿ, ವಿದ್ಯಾರ್ಥಿಗಳಲ್ಲಿ ಆತಂಕ ಹೆಚ್ಚುತ್ತದೆ. ಹೀಗಾಗಿ ಏಕರೂಪದ ಪ್ರವೇಶ ಪರೀಕ್ಷೆ ಅಗತ್ಯ” ಎಂದಿದ್ದಾರೆ.

ಇದನ್ನೂ ಓದಿರಿ: ದಿಢೀರ್‌ ಪಠ್ಯ ಬದಲಾವಣೆ ಸುತ್ತೋಲೆ: ಎನ್‌ಇಪಿಯಿಂದ ವಿದ್ಯಾರ್ಥಿಗಳು ಹೈರಾಣು

ಶಿಕ್ಷಣ ತಜ್ಞರು ಏನಂತಾರೆ?

ರಾಷ್ಟ್ರೀಯ ಶಿಕ್ಷಣ ನೀತಿ ಇಡೀ ಶೈಕ್ಷಣಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತದೆ ಎಂದು ಎನ್‌ಇಪಿಯ ಆಳ, ಅಗಲ, ಉದ್ದೇಶ, ಗುರಿಯನ್ನು ಸೂಕ್ಷ್ಮವಾಗಿ ಗಮನಿಸಿದವರು ಹೇಳುತ್ತಿದ್ದಾರೆ. ಕೇಂದ್ರೀಯ ವಿಶ್ವವಿದ್ಯಾನಿಲಯಗಳಿಗೆ ಈಗ ಜಾರಿಗೆ ತರುತ್ತಿರುವ ಪರೀಕ್ಷೆಯು ಎನ್‌ಇಪಿಯ ಒಂದು ಭಾಗವಷ್ಟೇ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ನಾನುಗೌರಿ.ಕಾಂ ಜೊತೆ ಮಾತನಾಡಿದ ಶಿಕ್ಷಣ ತಜ್ಞರಾದ ಶ್ರೀಪಾದ್ ಭಟ್‌, “ಕೇಂದ್ರೀಯ ವಿಶ್ವವಿದ್ಯಾನಿಲಯಗಳ ಪ್ರವೇಶಾತಿಗೆ ಮೊದಲಿನಿಂದಲೂ ಪರೀಕ್ಷೆಗಳು ನಡೆಯುತ್ತಿದ್ದವು. ಆದರೆ ಏಕರೂಪದ ಪರೀಕ್ಷೆ ಇರಲಿಲ್ಲ. ಕೆಲವು ಕೇಂದ್ರೀಯ ವಿಶ್ವವಿದ್ಯಾನಿಲಯಗಳು ಒಟ್ಟುಗೂಡಿ ಪರೀಕ್ಷೆಯನ್ನು ಆಯೋಜಿಸುತ್ತಿದ್ದವು. ಈಗ ದೇಶದಲ್ಲಿರುವ ಎಲ್ಲಾ ಕೇಂದ್ರೀಯ ವಿಶ್ವವಿದ್ಯಾನಿಲಯಗಳ ಪ್ರವೇಶ ಪರೀಕ್ಷೆ ಏಕರೂಪವಾಗಿರುತ್ತದೆ. ಇದು ಕೇಂದ್ರೀಯ ವಿಶ್ವವಿದ್ಯಾನಿಲಯಕ್ಕಷ್ಟೇ ಅಲ್ಲದೆ, ಇತರ ವಿವಿಗಳಿಗೂ ಕಾಲಿಡುವ ಸಾಧ್ಯತೆಯನ್ನೂ ಅಲ್ಲಗಳೆಯಲಾಗದು” ಎಂದರು.

“ಎಲ್ಲ ಹಂತದಲ್ಲೂ ಸ್ಪರ್ಧಾತ್ಮಕ ಪರೀಕ್ಷೆ ನಡೆಸಬೇಕು ಎನ್ನುತ್ತದೆ ಎನ್‌ಇಪಿ. ಕಾಲೇಜು ಸೇರ್ಪಡೆಗೆ, ಹಾಸ್ಟೆಲ್‌ ಪ್ರವೇಶಾತಿಗೆ- ಹೀಗೆ ಎಲ್ಲೆಡೆಯೂ ಸ್ಪರ್ಧಾತ್ಮಕ ಪರೀಕ್ಷೆ ನಡೆಯಬೇಕು. ಸ್ಪರ್ಧೆ ಇರಬೇಕು ಅನ್ನುತ್ತದೆ. ನಾವು ಎಷ್ಟೇ ಅಸಮಾನ ಶಿಕ್ಷಣ ವ್ಯವಸ್ಥೆ, ಗ್ರಾಮೀಣ ಶಿಕ್ಷಣ ಪರಿಸ್ಥಿತಿ, ಶಾಲೆಗಳಲ್ಲಿ ಮೂಲಸೌಕರ್ಯದ ಕೊರತೆ ಎಂದರೂ, ಶೇ. 66ರಷ್ಟಿರುವ ಗ್ರಾಮೀಣ ವಿದ್ಯಾರ್ಥಿಗಳು, ಎಲ್ಲ ಸೌಲಭ್ಯಗಳನ್ನು ಹೊಂದಿರುವ ನಗರ ವಿದ್ಯಾರ್ಥಿಗಳೊಂದಿಗೆ ಸ್ಪರ್ಧಿಸಲು ಸಾಧ್ಯವಾಗದು ಎಂದು ಹೇಳುತ್ತಾ ಬಂದಿದ್ದರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಸಮಸ್ಯೆಗಳಿದ್ದರೆ ನಿಮ್ಮ ಹಣೆಬರಹ ಎನ್ನುತ್ತಾರೆ. ರಾಜ್ಯದ ಹಣೆಬರಹ ಎನ್ನುತ್ತಾರೆ. ಬಳ್ಳಾರಿಯಲ್ಲಿ, ಚಾಮರಾಜನಗರದಲ್ಲಿ ಶಾಲೆ ಸರಿ ಇಲ್ಲವೆಂದಾರೆ ಎನ್‌ಟಿಎ ಏನು ಮಾಡಲಾಗದು ಎಂದು ಪ್ರತಿಕ್ರಿಯಿಸುತ್ತಾರೆ” ಎಂಬ ಬೇಸರವನ್ನು ವ್ಯಕ್ತಪಡಿಸುತ್ತಾರೆ ಶ್ರೀಪಾದ್ ಭಟ್.

ಇದನ್ನೂ ಓದಿರಿ: ರಾಶ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) 2020: ಹಿಂದು-ಮುಂದು

“ಶಿಕ್ಷಣ ಎಂದರೆ ಪರೀಕ್ಷೆ ಎಂದಾಗಿದೆ. ಶಾಲಾ ಶಿಕ್ಷಕರಾಗಬೇಕಾದರೆ ಪದವಿ, ಬಿಎಡ್‌, ಟಿಇಟಿ, ಪ್ರವೇಶ ಪರೀಕ್ಷೆ ಈ ಎಲ್ಲದರಲ್ಲೂ ಅರ್ಹತೆ ಪಡೆದಿರಬೇಕು. ಇಷ್ಟೊಂದು ಪರೀಕ್ಷೆ ಯಾಕೆಂದು ಕೇಳಿದರೆ, ನಮಗೆ ಪ್ರತಿಭಾವಂತರು ಬೇಕು; ಹೀಗಾಗಿ ಫಿಲ್ಟರ್‌ ಮಾಡುತ್ತೇವೆ ಎನ್ನುತ್ತಾರೆ. ಅಂದರೆ ಪದವಿ ತರಗತಿ ನಡೆಸಿದ್ದು ಇವರೇ ಅಲ್ಲವೇ? ಇವರೇ ನಡೆಸುವ ಪದವಿ ತರಗತಿಯಲ್ಲಿ ಗುಣಮಟ್ಟ ಇಲ್ಲವೆಂದು ಅರ್ಥವೇ? ಈ ಮಾತು ಎಲ್ಲ ಅರ್ಹತಾ ಪರೀಕ್ಷೆಗೂ ಅನ್ವಯಿಸುತ್ತದೆ. ಎನ್‌ಇಪಿ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಮಾತನಾಡುತ್ತದೆ. ನಾವು ಆರಂಭದಲ್ಲಿಯೇ ಎನ್‌‌ಇಪಿಯನ್ನು ಹಿಮ್ಮೆಟ್ಟಿಸಬೇಕಿತ್ತು. ಈಗ ತಡವಾಗಿದೆ; ಆದರೆ ಕಾಲಮಿಂಚಿಲ್ಲ” ಎಂದರು.

“ಸ್ಪರ್ಧೆ ನಡೆಯದೆ ಇದ್ದರೆ ಪ್ರತಿಭೆ ಗೊತ್ತಾಗಲ್ಲ ಎನ್ನುತ್ತಾರೆ. ಇವರನ್ನು ಶಿಕ್ಷಣ ಪಾಲುದಾರರು ಹಿಮ್ಮೆಟ್ಟಿಸಬೇಕಿದೆ. ಶಿಕ್ಷಕರು, ಪೋಷಕರು, ವಿದ್ಯಾರ್ಥಿ ಸಂಘಟನೆಗಳು ಒಟ್ಟಿಗೆ ಸೇರಬೇಕು. ಎನ್‌ಇಪಿ ಜಾರಿಯಾದಾಗಿನಿಂದಲೂ ನೋಡುತ್ತಿದ್ದೇವೆ. ಶಿಕ್ಷಕರು, ವಿದ್ಯಾರ್ಥಿಗಳು ಮುಂದೆ ಬರುತ್ತಿಲ್ಲ. ಪೋಷಕರು ಗೊಂದಲದಲ್ಲಿದ್ದಾರೆ” ಎಂದು ತಿಳಿಸಿದರು.

“ಸ್ಕಾಲರ್‌ಶಿಪ್‌ಗೂ ಪರೀಕ್ಷೆ ಬರುವ ಸಮಯ ಬರುತ್ತದೆ. ಪ್ರಶ್ನಿಸಿದರೆ, ನವೋದಯ, ಮೊರಾರ್ಜಿ ಶಾಲೆಗಳ ಉದಾಹರಣೆಗಳನ್ನು ನೀಡುತ್ತಾರೆ. ನವೋದಯದಲ್ಲಿ 40 ಮಕ್ಕಳನ್ನು ತೆಗೆದುಕೊಳ್ಳುತ್ತಾರೆ. ಮಿಕ್ಕ ಲಕ್ಷಾಂತರ ಮಕ್ಕಳನ್ನು ಸೇರುವಂತೆಯೇ ಇಲ್ಲವಲ್ಲ” ಎಂದರು.

“ಕೇಂದ್ರದ ಸಂಪರ್ಕದಲ್ಲಿ ಸ್ಥಳೀಯತೆಯನ್ನು ಬೆಳೆಸಬೇಕೆಂದು ಕೇಂದ್ರೀಯ ವಿಶ್ವವಿದ್ಯಾನಿಲಯ ಆರಂಭಿಸಲಾಯಿತು. ಆದರೆ ಮುಂದೆ ಬದಲಾವಣೆಗಳಾದವು” ಎನ್ನುವ ಶ್ರೀಪಾದ್ ಭಟ್‌, “8ನೇ ತರಗತಿಯಿಂದಲೇ ಎನ್‌ಸಿಇಆರ್‌ಟಿ ಸಿಲಬಸ್ ಹೇಳಿಕೊಡುತ್ತಿದ್ದಾರೆ. ಅಂದರೆ ಕೆಳಮಟ್ಟದಿಂದ ಹೋರಾಟ ಮಾಡಬೇಕಿದೆ. ಸ್ಟೇಟ್‌ ಸಿಲಬಸ್ ಬರಬೇಕು. ಸ್ಥಳೀಯತೆಗಾಗಿ ಹೋರಾಡಬೇಕು. ವ್ಯಾಸಂಗ ಕ್ರಮವೇ ಇಲ್ಲವಾಗುತ್ತಿದೆ. ಎನ್‌ಇಪಿ ಉದ್ದೇಶವೇ ಶಿಕ್ಷಣದ ಕೇಂದ್ರೀಕರಣ. ಶಾಸನ ಸಭೆಯ ನಿರ್ಧಾರ ಕೋರ್ಟ್‌ನಲ್ಲಿ ನಿಲ್ಲಲ್ಲ. ಬಿಜೆಪಿ ಅಧಿಕಾರ ಇಲ್ಲದ ರಾಜ್ಯಗಳಲ್ಲಿ ಎನ್‌ಇಪಿಗೆ ವಿರೋಧ ಬಂದಿದೆ. ಕಾಂಗ್ರೆಸ್‌ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಎನ್‌ಇಪಿಯನ್ನು ವಿರೋಧಿಸಬೇಕಿದೆ. ಕೊನೆಯದಾಗಿ, ಎನ್‌ಇಪಿ ನಿಲ್ಲಬೇಕೆಂದರೆ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೆಸೆಯಬೇಕೆಂಬ ಉತ್ತರ ಬರುತ್ತದೆ” ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿರಿ: ಈ ಎನ್‌ಇಪಿ ಅಂದ್ರೆ ಏನು? ಅದರೊಳಗ ಏನೈತಿ, ಏನಿಲ್ಲ?

ಇದು ಮತ್ತೊಂದು ನೀಟ್ ಕಥೆಯಾಗುತ್ತದೆ: ವಿ.ಪಿ.ನಿರಂಜನಾರಾಧ್ಯ

‘ನಾನುಗೌರಿ.ಕಾಂ’ ಜೊತೆ ಮಾತನಾಡಿದ ಶಿಕ್ಷಣ ತಜ್ಞ ವಿ.ಪಿ.ನಿರಂಜನಾರಾಧ್ಯ ಅವರು, “ಕೇಂದ್ರೀಯ ವಿವಿ ಪ್ರವೇಶಾತಿ ಪರೀಕ್ಷೆ ಮತ್ತೊಂದು ನೀಟ್‌ನಂತಾಗುತ್ತದೆ” ಎಂದು ತಿಳಿಸಿದರು.

“ಕೇಂದ್ರೀಯ ವಿಶ್ವವಿದ್ಯಾನಿಲಯವಾದರೂ ಅಲ್ಲಿ ಓದುವವರು ರಾಜ್ಯದ ಮಕ್ಕಳೇ ಆಗಿರುತ್ತಿದ್ದರು. ಆದರೆ ಈ ರೀತಿಯ ಪರೀಕ್ಷೆಗಳನ್ನು ತಂದರೆ ಆಯಾ ರಾಜ್ಯಗಳ ವಿದ್ಯಾರ್ಥಿಗಳಿಗೆ ಅವಕಾಶಗಳು ತಪ್ಪಿ ಹೋಗುತ್ತವೆ. ಇದು ಮತ್ತೊಂದು ನೀಟ್‌ ಕಥೆಯಾಗುತ್ತದೆ. ನಮ್ಮ ಮಕ್ಕಳು ಹನ್ನೆರಡನೇ ತರಗತಿ ಪರೀಕ್ಷೆಯಲ್ಲಿ ಶೇ.90ರಷ್ಟು ಅಂಕ ಪಡೆದರೂ ನೀಟ್‌ ಪಾಸ್‌ ಆಗುತ್ತಿಲ್ಲ. ಉನ್ನತ ಶಿಕ್ಷಣದ ಸ್ವಾಯತ್ತತೆಯನ್ನು ಹಾಳು ಮಾಡಲಾಗುತ್ತಿದೆ. ಯಾವ ರೀತಿ ಪಠ್ಯಕ್ರಮ ಇರಬೇಕು, ಪ್ರವೇಶಾತಿ ಹೇಗಿರಬೇಕು, ಬೇರೆ ಬೇರೆ ವರ್ಗದ ಮಕ್ಕಳಿಗೆ ಹೇಗೆ ಅವಕಾಶ ಕಲ್ಪಿಸಬೇಕು ಎಂಬುದೆಲ್ಲ ವಿಶ್ವವಿದ್ಯಾನಿಲಯಕ್ಕೆ ಬಿಟ್ಟ ವಿಚಾರವಾಗಿತ್ತು. ಈಗ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸುತ್ತಿದೆ” ಎಂದು ಹೇಳಿದರು.

“ಪ್ರವೇಶಾತಿ ಪರೀಕ್ಷೆಗಳೇ ತಪ್ಪು. ಯಾಕೆಂದರೆ ಪ್ರವೇಶಾತಿ ಪರೀಕ್ಷೆಗಳನ್ನು ನಡೆಸಿದರೆ ಹತ್ತನೇ ತರಗತಿ, ಹನ್ನೆರಡನೇ ತರಗತಿಯ ಕ್ವಾಲಿಫೈ ಪರೀಕ್ಷೆಗಳಿಗೆ ಅರ್ಥವಿಲ್ಲದಂತಾಗುತ್ತದೆ. ಶಿಕ್ಷಣವನ್ನು ಕೇಂದ್ರೀಕೃತ ಮಾಡುವುದು ಸರಿಯಲ್ಲ. ಶಿಕ್ಷಣ ಸಮವರ್ತಿ ಪಟ್ಟಿಯಲ್ಲಿದೆ. ಅಂದರೆ ಆಯಾ ರಾಜ್ಯದ ತೀರ್ಮಾನಕ್ಕೆ ಬರುತ್ತದೆ. ಕೇಂದ್ರೀಯ ವಿಶ್ವವಿದ್ಯಾನಿಲಯವನ್ನು ಕೇಂದ್ರ ಸ್ಥಾಪಿಸಿರಬಹುದು, ಅನುದಾನ ಕೊಟ್ಟಿರಬಹುದು. ಆದರೆ ಆಯಾ ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ಮಧ್ಯೆ ಪ್ರವೇಶಿಸಲು ಅವಕಾಶ ಇರುವುದಿಲ್ಲ. ಅದರ ವಿರುದ್ಧ ರಾಜ್ಯ ಸರ್ಕಾರ ಧ್ವನಿ ಎತ್ತಬೇಕಾಗುತ್ತದೆ” ಎಂದರು.

“ನ್ಯಾಷನಲ್ ಟೆಸ್ಟಿಗ್ ಏಜೆನ್ಸಿಯನ್ನು ಪರೀಕ್ಷೆಗಳನ್ನು ನಡೆಸಲೆಂದೇ ರೂಪಿಸಲಾಗಿದೆ. ಎಲ್ಲ ಕೋರ್ಸ್‌ಗಳ ಪರೀಕ್ಷೆಗಳನ್ನು ಇದು ನಡೆಸುತ್ತಿದೆ. ಹೇಳಬೇಕೆಂದರೆ ಇದು ಸಂವಿಧಾನ ಬಾಹಿರ. ಸ್ವಾಯತ್ತತೆಗೆ ಧಕ್ಕೆ. ಮುಂದಿನ ದಿನಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳು ಎಲ್ಲ ವಿವಿಗಳ ಪ್ರವೇಶಾತಿಗೂ ಬರುವ ಸಾಧ್ಯತೆ ಅಲ್ಲಗಳೆಯಲಾಗದು. ಎನ್‌ಇಪಿಯ ಉದ್ದೇಶವೇ ಸ್ಪರ್ಧಾತ್ಮಕ ಪರೀಕ್ಷೆ” ಎಂದು ತಿಳಿಸಿದರು.

“ಮುಂದಿನ ದಿನಗಳಲ್ಲಿ ಗುಣಾತ್ಮಕ ಶಿಕ್ಷಣದ ಬದಲು ಕೋಚಿಂಗ್‌ ಸೆಂಟರ್‌ಗಳು ಪ್ರಾರಂಭವಾಗುತ್ತವೆ. ಪ್ರವೇಶಾತಿ ಪಡೆಯಲಿಕ್ಕಾಗಿ ಕೋಚಿಂಗ್ ಪಡೆಯಲು ವಿದ್ಯಾರ್ಥಿಗಳು ಹೋಗುತ್ತಾರೆ. ಇಡೀ ಶಿಕ್ಷಣ ವ್ಯವಸ್ಥೆಯನ್ನು ಕೋಚಿಂಗ್ ಕೇಂದ್ರೀತ ಮಾಡಲಾಗುತ್ತಿದೆ” ಎಂದು ಆತಂಕ ವ್ಯಕ್ತಪಡಿಸುತ್ತಾರೆ ವಿ.ಪಿ.ನಿರಂಜನಾರಾಧ್ಯ.


ಇದನ್ನೂ ಓದಿರಿ: ಉನ್ನತ ಶಿಕ್ಷಣದಲ್ಲಿ ಕನ್ನಡ ಕಡ್ಡಾಯಗೊಳಿಸಲು ಒತ್ತಾಯಿಸಬೇಡಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...