ಇತ್ತೀಚಿಗೆ ನಡೆದ ಐದು ರಾಜ್ಯಗಳ ಚುನಾವಣೆಗಳು ಮತ್ತು ಆ ಚುನಾವಣೆಗಳ ಫಲಿತಾಂಶಗಳು ದೇಶಕ್ಕೆ ಹಲವಾರು ಸೂಚ್ಯವಾದ ಸಂದೇಶಗಳನ್ನು ನೀಡಬಯಸುತ್ತಿವೆ.
ಸದ್ಯ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಗೆ ಸಂದೇಶವೇನೆಂದರೆ- ಐದು ರಾಜ್ಯಗಳಲ್ಲಿ ಬಿಜೆಪಿ ಟಿಕೆಟ್ ಅಡಿಯಲ್ಲಿ ಗೆದ್ದಿರುವ ಶಾಸಕರ ಸಂಖ್ಯೆಯಲ್ಲಿ ಕುಸಿತವಾಗಿದೆ. ಎಲ್ಲಾ ಐದು ರಾಜ್ಯಗಳನ್ನು ಪರಿಗಣಿಸಿದಾಗ, ಈ ವರ್ಷ 356 ಶಾಸಕರು ಬಿಜೆಪಿ ಟಿಕೆಟ್‌ನಲ್ಲಿ ಆಯ್ಕೆಯಾದರೆ 2017ರ ಚುನಾವಣೆಗಳಲ್ಲಿ ಆ ಸಂಖ್ಯೆ 406 ಆಗಿತ್ತು. ಅಂದರೆ ಕಳೆದ ಚುನಾವಣೆಗಿಂತ 50 ಶಾಸಕರು ಈ ಬಾರಿ ಕಡಿಮೆಯಾಗಿದ್ದಾರೆ. ಶುದ್ಧ ಸಂಖ್ಯಾತ್ಮಕ ಪರಿಭಾಷೆಯಲ್ಲಿ ಹೇಳುವುದಾದರೆ ಉತ್ತರ ಪ್ರದೇಶ (312 ರಿಂದ 255), ಉತ್ತರಾ ಖಂಡ (57 ರಿಂದ 47), ಪಂಜಾಬ್ (03 ರಿಂದ 02) ರಾಜ್ಯಗಳಲ್ಲಿ ಬಿಜೆಪಿ ಶಾಸಕರ ಸಂಖ್ಯೆ ಕುಸಿದಿದೆ. ಇದೇ ಸಂದರ್ಭದಲ್ಲಿ ಮಣಿಪುರ (21 ರಿಂದ 32) ಮತ್ತು ಗೋವಾದಲ್ಲಿ (13 ರಿಂದ 20) ಬಿಜೆಪಿ ಶಾಸಕರ ಸಂಖ್ಯೆ ಏರಿಕೆಯಾಗಿದೆ. ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಶಾಸಕರ ಸಂಖ್ಯೆ 2017ರಲ್ಲಿ 47 ಇದ್ದಿದ್ದು ಈಗ 111 ಆಗಿದೆ. ಬಿಜೆಪಿಯ ರ್‍ಯಾಲಿಗಳು ಮತ್ತು ಪ್ರಧಾನ ಮಂತ್ರಿಗಳ ಕೋಮು ಧ್ರುವೀಕರಣವು 2014 ಮತ್ತು 2017ರಲ್ಲಿ ಕೆಲಸ ಮಾಡಿದಂತೆ ಇನ್ನು ಮುಂದೆ ಚುನಾವಣಾ ಲಾಭ ತಂದುಕೊಡುವುದಿಲ್ಲ ಎಂಬುದು ಬಿಜೆಪಿಗೆ ಸಂದೇಶವಾಗಿದೆ.

ಹಿಂದೂಯೇತರರು ಪ್ರಧಾನವಾಗಿರುವ ರಾಜ್ಯಗಳಲ್ಲಿ ಹೊಸಬರು ಸಹ ಹಿಂದುತ್ವ ಸಿದ್ಧಾಂತವನ್ನು ಸೋಲಿಸಬಹುದು ಎಂಬುದು ಆಪ್‌ನಂತಹ ಪಕ್ಷಗಳಿಗೆ ಸಂದೇಶವಾಗಿದೆ. ರಾಷ್ಟ್ರೀಯ ಪಕ್ಷವಾಗಬೇಕೆಂಬ ಆಕಾಂಕ್ಷೆಯೊಂದಿಗೆ ಹಾತೊರೆಯುತ್ತಿರುವ ಟಿಎಂಸಿಯಂತಹ ಪಕ್ಷಗಳು ಇನ್ನೂ ಸ್ವಲ್ಪ ಸಮಯದವರೆಗೆ ಕಾಯಬೇಕು ಎಂಬುದು ಆ ಸಂದೇಶವಾಗಿದೆ. ಕಾಂಗ್ರೆಸ್‌ಗೆ ಪಂಜಾಬ್, ಮಣಿಪುರ, ಗೋವಾ ಮತ್ತು ಉತ್ತರಾಖಂಡ ಚುನಾವಣೆಗಳ ಸಂದೇಶವೆಂದರೆ, ಆ ಪಕ್ಷದ ಸಂಪೂರ್ಣ ರೂಪಾಂತರಕ್ಕೆ ನಿರ್ಧರಿಸಿದರೆ ಅದು ಈ ಕ್ಷಣದಿಂದಲೇ ಶುರುವಾಗಬೇಕು ಮತ್ತು ಒಂದು ನಿಮಿಷವನ್ನೂ ವ್ಯರ್ಥ ಮಾಡಬಾರದೆಂಬುದು. ಇದನ್ನು ಮಾಡದೆ ಹೋದರೆ, ಪಕ್ಷದೊಳಗಿನ ಬಂಡಾಯ ಮತ್ತು ಅಲ್ಲಿಂದ ದೂರವಾಗುವ ಪ್ರಕ್ರಿಯೆಗಳು ಹೆಚ್ಚಾಗಲಿವೆ. ಅಲ್ಲದೆ ಕಾಂಗ್ರೆಸ್ ಪಕ್ಷಕ್ಕೆ ಗಾಂಧಿ ಕುಟುಂಬದ ನಾಯಕತ್ವ ಅತ್ಯಗತ್ಯವಾಗಿರಬಹುದು, ಆದರೆ ಅದನ್ನು ಮತದಾರರು ಬಯಸುತ್ತಿಲ್ಲ ಎಂದು ಈ ಚುನಾವಣೆಗಳು ಸ್ಪಷ್ಟಪಡಿಸಿವೆ. ಕಾಂಗ್ರೆಸ್ ತನ್ನ ಅಸ್ತಿತ್ವ ಮತ್ತು ಕಾರ್ಯನಿರ್ವಹಣೆಯ ಎಲ್ಲಾ ಅಂಶಗಳ ಬಗ್ಗೆ ಹೊಸದಾಗಿ ಯೋಚಿಸಬೇಕಾಗಿದೆ.
ಗೋವಾ, ಉತ್ತರ ಪ್ರದೇಶ ಮತ್ತು ಪಂಜಾಬ್ ರಾಜ್ಯಗಳಲ್ಲಿ ಸ್ಪರ್ಧೆಯಲ್ಲಿದ್ದ ಹಲವು ಸಣ್ಣ ಮತ್ತು ಪ್ರಾದೇಶಿಕ ಪಕ್ಷಗಳಿಗೆ ಸಂದೇಶವೆಂದರೆ, ಅವರು ಅತಂತ್ರ ವಿಧಾನಸಭೆಯ ಪರಿಸ್ಥಿತಿ ಏರ್ಪಟ್ಟು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದವರೊಂದಿಗೆ ಮೈತ್ರಿ ಮಾಡಿಕೊಳ್ಳೋಣ ಎಂದು ಕಾಯುವುದಕ್ಕಿಂತ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳುವುದು ಅವರ ಬೆಳವಣಿಗೆಗೆ ಸಹಾಯ ಮಾಡುತ್ತದೆ ಎಂಬುದಾಗಿದೆ. ದೊಡ್ಡ ಪಕ್ಷಗಳಿಗೆ ಬಿ ಟೀಮ್‌ಗಳಾಗಿ ಕೆಲಸ ಮಾಡುವ ಪಕ್ಷಗಳಿಗೂ ಇದೇ ಅನ್ವಯಿಸುತ್ತದೆ. ತಮ್ಮ ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯಲು ಪ್ರಾಣವನ್ನೇ ಪಣಕ್ಕಿಡುವ ಸಾಹಸಿ ಪಕ್ಷಗಳಂತೆ ಬಿಂಬಿಸಿಕೊಳ್ಳುವುದಕ್ಕಿಂತ ಒಂದು ದೊಡ್ಡ ಪಕ್ಷದ ಜೊತೆ ಬಹಿರಂಗವಾಗಿ ಹೊಂದಾಣಿಕೆ ಮಾಡಿಕೊಳ್ಳುವ ಮೂಲಕ ಹೆಚ್ಚಿನ ಬಲ ಪಡೆಯಬಹುದು ಎಂಬ ಸಂದೇಶವಿದೆ.
ಚುನಾವಣಾ ರಾಜಕೀಯದಿಂದ ದೂರ ಇರುವವರು, ಚಳವಳಿಗಳು, ನಾಗರಿಕ ಸಮಾಜ ಮತ್ತು ಎನ್‌ಜಿಒಗಳಿಗೆ ಸಂದೇಶವೆಂದರೆ ಪ್ರತ್ಯೇಕವಾದ ಸಾಮಾಜಿಕ ಅಥವಾ ಆರ್ಥಿಕ ಸಮಸ್ಯೆಗಳಿಂದ ಅಥವಾ ಅಮೂರ್ತ ತತ್ವಗಳ ಪರಿಗಣನೆಯಿಂದ ಮತದಾರರು ಪ್ರಭಾವಿತರಾಗುವುದಿಲ್ಲ ಎಂಬುದಾಗಿದೆ. ಅವರು ನೆನಪಿಡಬೇಕಾದ ಸಂಗತಿಯೆಂದರೆ ಪರೋಕ್ಷ ರಾಜಕೀಯ ಎಂಬುದು ಇಂದು ವೇಗವಾಗಿ ನೆಲೆ ಕಳೆದುಕೊಳ್ಳುತ್ತಿದೆ ಮತ್ತು ಚುನಾವಣೆಗಳಲ್ಲಿ ಪ್ರಭಾವ ಬೀರಲು ಬಯಸುವವರು ಯಾವ ಪಕ್ಷದೊಂದಿಗೆ ಮೈತ್ರಿ ಹೊಂದಿದ್ದಾರೆ ಎಂಬುದರ ಬಗ್ಗೆ ಸ್ಪಷ್ಟವಾಗಿ ಹೇಳಬೇಕಾಗುತ್ತದೆ. 2021ರ ರೈತ ಹೋರಾಟ ಮತ್ತು 2020ರ ಸಿಎಎ ವಿರೋಧಿ ಹೋರಾಟವು ಪಂಜಾಬ್ ಮತ್ತು ಉತ್ತರ ಪ್ರದೇಶದ ಚುನಾವಣೆಯ ಫಲಿತಾಂಶವನ್ನು ಪ್ರಭಾವಿಸುತ್ತದೆ ಎಂಬ ದೊಡ್ಡ ಭರವಸೆ ಇತ್ತು. ಆದರೆ ಆ ಭರವಸೆ ಫಲ ಕೊಟ್ಟಿಲ್ಲ.
ಈ ಎಲ್ಲಾ ವಾಸ್ತವ ಅಂಶಗಳನ್ನು ಒಟ್ಟು ಮಾಡಿ ನೋಡಿದರೆ ದೇಶಕ್ಕೆ ಯಾವ ಸಂದೇಶವಿದೆ? 2024ರ ಸಾರ್ವತ್ರಿಕ ಚುನಾವಣೆಯ ಫಲಿತಾಂಶ ಈಗಲೇ ನಿರ್ಧರಿತವಾಗಿಲ್ಲ ಎಂಬುದು ಸ್ಪಷ್ಟವಾಗಿದೆ. ಮುಂಚಿತವಾಗಿ ಮತ್ತು ಸೂಕ್ತ ರೀತಿಯಲ್ಲಿ ಮೈತ್ರಿ ಮಾಡಿಕೊಂಡಲ್ಲಿ ಅಂತಹ ಪಕ್ಷಗಳು ಮೈತ್ರಿ ಸಂಸತ್ ಚುನಾವಣೆಯನ್ನು ಎದುರಿಸಬಹುದು ಮತ್ತು ಗೆಲುವು ಸಾಧಿಸಬಹುದಾಗಿದೆ. ನಾಗರಿಕ ಸಮಾಜ ಮತ್ತು ರಾಜಕೀಯ ಕಾರ್ಯಕರ್ತರು ಇದುವರೆಗಿನ ತೆರೆಮರೆಯಲ್ಲಿರುವ ಅಭ್ಯಾಸ ತೊರೆದರೆ ಮತ್ತು ಆಯಾ ರಾಜ್ಯಗಳಲ್ಲಿ ತಮ್ಮ ಆಯ್ಕೆಯ ಪಕ್ಷದ ಹಿಂದೆ ಬಹಿರಂಗವಾಗಿ ನಿಂತರೆ ಬಿಜೆಪಿಯನ್ನು ಸೋಲಿಸಲು ಆಶಿಸಬಹುದು. 2022ರ ಚುನಾವಣೆಯ ಫಲಿತಾಂಶಗಳು
ತೋರಿಸುವುದೇನೆಂದರೆ ದಕ್ಷಿಣ ಭಾರತವು ಹಿಂದುತ್ವ ಸಿದ್ಧಾಂತಕ್ಕೆ ಭೇದಿಸಲಾಗದ ಚಕ್ರವ್ಯೂಹವಾಗಿಯೇ ಉಳಿದಿದೆ. ಇಲ್ಲಿ ಹಿಂದುತ್ವ ತನ್ನ ಹೊಳಪನ್ನು ಕಳೆದುಕೊಂಡಿದೆ.
ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕವಾಗಿ ಹೊಸದಾದ, ತರ್ಕಬದ್ದವಾದ (ವೈಚಾರಿಕವಾದ), ಅದೇ ರೀತಿ ಭಾವನಾತ್ಮಕವಾದ ಹೊಸ ನಿರೂಪಣೆಯನ್ನು ಮತದಾರರು ಬಯಸುತ್ತಿದ್ದಾರೆ ಎಂಬುದು ಎಲ್ಲಾ ಪಕ್ಷಗಳಿಗೆ ಈ ಚುನಾವಣೆಯ ಸಂದೇಶವಾಗಿದೆ. ಕಳೆದ ಏಳು ವರ್ಷಗಳಲ್ಲಿ ತೆವಳುವುದನ್ನು ಕಲಿತ ಮಾಧ್ಯಮಗಳು ಹೇಗೆ ನಿಲುವು ತಳೆಯಬೇಕು ಎಂಬುದನ್ನು ಮರೆತಿವೆ, ಹಾಗಾಗಿಯೇ ಚುನಾವಣಾ ಫಲಿತಾಂಶವನ್ನು ಬಿಜೆಪಿಗೆ ಅಭೂತಪೂರ್ವ ಜಯ ಎಂದು ಬಿಂಬಿಸುತ್ತಿವೆ. ಬಿಜೆಪಿ ನಾಯಕರು ಕೂಡ ಈ ಕ್ಷಣವನ್ನು ವಿಜಯೋತ್ಸವದ ಕ್ಷಣವನ್ನಾಗಿ
ಆಚರಿಸಿದರು. ಖಂಡಿತವಾಗಿ 2024 ಕೇಕ್-ವಾಕ್ ಅಲ್ಲ ಎಂದು ಅವರಿಬ್ಬರಿಗೂ ತಿಳಿದಿದೆ. ನಾಗರಿಕ
ಸಮಾಜವು ತಕ್ಷಣವೇ ನಿರುತ್ಸಾಹಗೊಂಡಿದೆ ಮತ್ತು ಪಕ್ಷಪಾತವಿಲ್ಲದ ವಿಶ್ಲೇಷಣೆ ಮತ್ತು ಹೊಸ ಸಂಕಲ್ಪಗಳಿಗೆ ಇದು ಕ್ಷಣವಾಗಿದೆ ಎಂಬುದನ್ನು ಮರೆತಿದೆ. ಹಳೆಯ ತರ್ಕ ಮತ್ತು ಚಿಂತನೆಯ ಅಭ್ಯಾಸದ ಮುಖವಾಡಗಳನ್ನು ಕಿತ್ತೆಸೆಯದ ಹೊರತು ಹಳೆಯ ಘೋಷಣೆಗಳು ಇನ್ನು ಮುಂದೆ ಕೆಲಸ ಮಾಡುವುದಿಲ್ಲ ಎಂಬುದನ್ನು ಅದು ಮರೆತಿದೆ. ನಾವೆಲ್ಲರೂ ನಮ್ಮನ್ನು ಪರಿವರ್ತಿಸಿಕೊಳ್ಳುವ, ಸಂಕುಚಿತ ಉದ್ದೇಶಗಳನ್ನು ಬದಿಗಿಟ್ಟು ಪ್ರಜಾಪ್ರಭುತ್ವವನ್ನು ಬಲಪಡಿಸುವ ಕೆಲಸ ಮಾಡುವ ಕ್ಷಣ ಇದು. ಅದಕ್ಕೆ ಮತದಾರರು ಸ್ಪಷ್ಟ ಕರೆ ನೀಡಿದ್ದಾರೆ. ಅವರ ಮಾತನ್ನು ಕೇಳಲು ನಾವು ಸಿದ್ಧರಿದ್ದೇವೆಯೇ?
ಕನ್ನಡಕ್ಕೆ: ಮುತ್ತುರಾಜ್

ಪ್ರೊ ಜಿ ಎನ್ ದೇವಿ
ಭಾರತದ ಖ್ಯಾತ ಚಿಂತಕರಲ್ಲಿ ಒಬ್ಬರಾದ ದೇವಿ ಅವರು, ಪೀಪಲ್ ಲಿಂಗ್ವಿಸ್ಟಿಕ್ಸ್ ಸರ್ವೆ ಮೂಲಕ ಚಿರಪರಿಚಿತರು. ‘ಆಫ್ಟರ್ ಅಮ್ನೇಶಿಯಾ’ ಪುಸ್ತಕಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. ಚಳವಳಿಗಳ ಸಂಗಾತಿಯಾಗಿರುವ ದೇವಿ ಸದ್ಯಕ್ಕೆ ದಿ ಸೌತ್ ಫೋರಮ್‌ನ ಸಂಚಾಲಕರು.
ಇದನ್ನೂ ಓದಿ: ಮತೀಯ ಗೂಂಡಾಗಿರಿಯಿಂದ ಮುಸ್ಲಿಮರ ವ್ಯಾಪಾರ ನಿಷೇಧದವರೆಗೆ: ಬೊಮ್ಮಾಯಿ ಸರ್ಕಾರದ ಮತಾಂಧತೆಯ ಹೆಜ್ಜೆಗಳು


