Homeಕರ್ನಾಟಕ8 ತಿಂಗಳ ಅವಧಿಯ ಬೊಮ್ಮಾಯಿ ಆಡಳಿತದಲ್ಲಿ ಕರ್ನಾಟಕ ಕಂಡ 7 ಕೋಮುದ್ವೇಷ ಪ್ರಕರಣಗಳು

8 ತಿಂಗಳ ಅವಧಿಯ ಬೊಮ್ಮಾಯಿ ಆಡಳಿತದಲ್ಲಿ ಕರ್ನಾಟಕ ಕಂಡ 7 ಕೋಮುದ್ವೇಷ ಪ್ರಕರಣಗಳು

ಕರ್ನಾಟಕದಲ್ಲಿ ಬಸವರಾಜ ಬೊಮ್ಮಾಯಿಯವರು ಅಧಿಕಾರಕ್ಕೆ ಬಂದ ಬಳಿಕ ರಾಜ್ಯ ಕಂಡ ಪ್ರಮುಖ ಏಳು ಕೋಮುವಾದಿ ಪ್ರಕರಣಗಳಿವು...

- Advertisement -
- Advertisement -

ಬಿ.ಎಸ್ ಯಡಿಯೂರಪ್ಪನವರ ರಾಜೀನಾಮೆ ನಂತರ ಜುಲೈ 28, 2021ರಂದು ಬಸವರಾಜ ಬೊಮ್ಮಾಯಿಯವರು ಪ್ರಮಾಣ ವಚನ ಸ್ವೀಕರಿಸಿ ಕರ್ನಾಟಕ ರಾಜ್ಯದ 23ನೇ ಮುಖ್ಯಮಂತ್ರಿಯಾದರು. ಆಗ ಸಮಾಜವಾದಿ ಹಿನ್ನಲೆಯ ಬೊಮ್ಮಾಯಿಯವರು ಯಡಿಯೂರಪ್ಪನವರ ಮತ್ತೊಂದು ಮುಖವೇ ಹೊರತು, ನಿಜವಾದ ಸಿಎಂ ಯಡಿಯೂರಪ್ಪನವರೇ ಎಂಬ ವಿಶ್ಲೇಷಣೆಗಳು ಬಂದವು.‌

ಬೊಮ್ಮಾಯಿಯವರ ಎಂಟು ತಿಂಗಳ ಅಧಿಕಾರವಧಿಯನ್ನು ಹಿಂತಿರುಗಿ ನೋಡಿದರೆ, “ಯಡಿಯೂರಪ್ಪನವರೇ ಪರವಾಗಿರಲಿಲ್ಲ ಎನ್ನುವಂತೆ ಕನ್ನಡಿಗರು ಹೇಳುವಂತಾಗಿರುವುದು ಬೊಮ್ಮಾಯಿಯವರ ನಿಜವಾದ ಸಾಧನೆ” ಎನ್ನದೆ ವಿಧಿಯಿಲ್ಲ.‌ ಈ ಎಂಟು ತಿಂಗಳ ಅವಧಿಯಲ್ಲಿ ಬೊಮ್ಮಾಯಿಯವರ ಆಡಳಿತವನ್ನು ನೋಡುತ್ತಿದ್ದರೆ, ಕರ್ನಾಟಕ ರಾಜ್ಯ ಜೂನಿಯರ್ ಉತ್ತರ ಪ್ರದೇಶದಂತೆ ಭಾಸವಾಗುತ್ತಿದೆ. ಮತೀಯ ರಾಜಕಾರಣ ಎಲ್ಲೆ ಮೀರಿದೆ. ಬೊಮ್ಮಾಯಿಯವರು ಯಾರೂ ಊಹಿಸಲಾಗಷ್ಟು ಕೋಮು ರಾಜಕಾರಣ ಮಾಡುತ್ತಿರುವುದು‌ ಢಾಳಾಗಿ ಕಾಣುತ್ತಿದೆ.‌ “ನಮಗಿಂತ ಹೆಚ್ಚು ಬೊಮ್ಮಾಯಿ RSS ಆಗಿ ಬದಲಾಗಿದ್ದಾರೆ” ಎಂದು ಬಿಜೆಪಿಯ ನಾಯಕ, ಸಚಿವ ಆರ್.ಅಶೋಕ್ ಅವರೇ ಸದನದಲ್ಲಿ ಹೇಳಿದ್ದರು. ಅಂದರೆ ಬೊಮ್ಮಾಯಿಯವರು ತಮ್ಮ ಕುರ್ಚಿ ಉಳಿಸಿಕೊಳ್ಳುವುದಕ್ಕಾಗಿ ರಾಜ್ಯವನ್ನು ಕೋಮು ದಳ್ಳುರಿಗೆ ತಳ್ಳುತ್ತಿದ್ದಾರೆ ಎಂದು ಪ್ರಜ್ಞಾವಂತರು ಆರೋಪಿಸುತ್ತಿದ್ದಾರೆ.

ಬೊಮ್ಮಾಯಿಯವರು ಅಧಿಕಾರಕ್ಕೆ ಬಂದ ಮೇಲೆ ಮತೀಯವಾದಿ ಗೂಂಡಾಗಿರಿಗಳು ಎಲ್ಲೆ ಮೀರಿವೆ. ಕ್ರಿಯೆಗೆ ಪ್ರತಿಕ್ರಿಯೆ ಇದ್ದೆ ಇರುತ್ತದೆ ಎಂದು ಹೇಳಿಕೆ ನೀಡುವ ಮೂಲಕ ಬೊಮ್ಮಾಯಿಯವರು ಅದಕ್ಕೆ ಸಮರ್ಥನೆ ನೀಡಿದ್ದರು. ಆದಾದ ಈ ಎಂಟು ತಿಂಗಳ ಅವಧಿಯಲ್ಲಿ ರಾಜ್ಯ ಕ್ರಮಿಸಿರುವ ಹಾದಿಯನ್ನು ಅವಲೋಕಿಸಿದರೆ ಸಾಕು ನಾವು ಯಾವ ದಿಕ್ಕಿನಲ್ಲಿ‌ ಸಾಗುತ್ತಿದ್ದೇವೆ ಎಂಬುದು ಸ್ಪಷ್ಟವಾಗುತ್ತದೆ. ಅವುಗಳ ಪಟ್ಟಿ ಇಲ್ಲಿದೆ.

1. ಮತೀಯ ಗೂಂಡಾಗಿರಿಯ ಸಮರ್ಥನೆ

ಕರಾವಳಿ ಹಾಗೂ ರಾಜ್ಯದ ವಿವಿಧ ಭಾಗಗಳಲ್ಲಿ ಮತೀಯ ಗೂಂಡಾಗಿರಿ (ಮಾರಲ್ ಪೊಲೀಸಿಂಗ್) ಹೆಚ್ಚಾಗುತ್ತಿರುವಾಗ ರಾಜ್ಯದ ಸಿಎಂ ಅವುಗಳಿಗೆ ಕಡಿವಾಣ ಹಾಕಲು‌ ಯತ್ನಿಸಬೇಕಿತ್ತು.‌ ಆದರೆ ಅವರು ಮತೀಯ ಗೂಂಡಾಗಿರಿಯನ್ನು ಸಮರ್ಥಿಸಿ ಆತಂಕ ಮೂಡಿಸಿದರು.‌ “ನೈತಿಕತೆ ಇರಬೇಕು.‌ ಕ್ರಿಯೆಗೆ ಪ್ರತಿಕ್ರಿಯೆ ಇರುತ್ತದೆ” ಎಂದು ಹೇಳುವ ಮೂಲಕ ಮತೀಯ ಗೂಂಡಾಗಿರಿಗೆ ಒಪ್ಪಿಗೆಯ ಮುದ್ರೆಯೊತ್ತಿದರು.‌ ಬೊಮ್ಮಾಯಿ ಹೇಳಿಕೆಯನ್ನು ಸಂಘಪರಿವಾರದ ಮುಖಂಡರು ಪುನರುಚ್ಚರಿಸಿದರು. ಅಲ್ಲಿಂದ ಶುರುವಾದ ಮತಾಂಧತೆಯ ನಾಗಾಲೋಟ ಮುಂದುವರಿಯುತ್ತಲೇ ಇದೆ. ಈಗ ಟಾಪ್ ಗೇರ್ ನಲ್ಲಿ ಚಲಿಸುತ್ತಿದೆ.

ಬೆಂಗಳೂರಿನಲ್ಲಿ ಹಿಂದೂ ಹುಡುಗನೊಬ್ಬ ತನ್ನ ಮುಸ್ಲಿಂ ಸಹೋದ್ಯೋಗಿಗೆ ಬೈಕ್‌ನಲ್ಲಿ ಮನೆಗೆ ಡ್ರಾಪ್ ಕೊಡುತ್ತಿದ್ದ. ಆಗ ಕೆಲ ಮುಸ್ಲಿಂ ಕೋಮುವಾದಿಗಳು ಬೈಕ್ ತಡೆದು ಅಶ್ಲೀಲವಾಗಿ ನಿಂದಿಸಿ, ಹುಡುಗಿಯನ್ನು ಆಟೋ ಹತ್ತಿಸಿ ಮನಗೆ ಕಳಿಸಿದ್ದರು. ಅದರ ವಿಡಿಯೋ ಮಾಡಿ ಹರಿಯಬಿಟ್ಟಿದ್ದರು. ಇದನ್ನು ಉಗ್ರವಾಗಿ ಖಂಡಿಸಿದ ಸಿಎಂ ಬೊಮ್ಮಾಯಿಯವರು 24 ಗಂಟೆಗಳಲ್ಲಿ ಆರೋಪಿಗಳ ಬಂಧನವಾಗುವಂತೆ ಮಾಡಿದ್ದರು. ಇದಕ್ಕೆ ರಾಜ್ಯವೇ ಅವರಿಗೆ ಶಬ್ಭಾಸ್‌ಗಿರಿ ನೀಡಿತ್ತು. ಅದಾದ ನಂತರ ಬೆಳಗಾವಿಯಲ್ಲಿ ಪಾರ್ಕ್‌ಗೆ ಹೊರಟಿದ್ದ ಹುಡುಗ-ಹುಡುಗಿಗೆ ಥಳಿಸಲಾಯಿತು. ಮಂಗಳೂರಿನಲ್ಲಿ ಹೋಟೆಲ್‌ಗೆ ನುಗ್ಗಿ ಜೋಡಿಗೆ ಹಲ್ಲೆ ನಡೆಸಲಾಯಿತು. ಅದೇ ಮಂಗಳೂರಿನಲ್ಲಿ ಗೆಳತಿಯನ್ನು ಡ್ರಾಪ್ ಮಾಡುತ್ತಿದ್ದ ಯುವನಕ ಮೇಲೆ ಹಲ್ಲೆ ನಡೆಸಿ ಮತೀಯ ಗೂಂಡಾಗಿರಿ ಮೆರಯಲಾಯಿತು. ಪುತ್ತೂರಿನಲ್ಲಿ ಬಸ್‌ನಲ್ಲಿ ವಿಭಿನ್ನ ಧರ್ಮದ ಹುಡುಗ ಹುಡುಗಿ ತೆರಳುತ್ತಿದ್ದಾರೆ ಎಂದು ಆರೋಪಿಸಿ ಅವರಿಗೆ ಕಿರುಕುಳ ನೀಡಲಾಯಿತು.  ಒಂದೇ ಕಾರಿನಲ್ಲಿ ಹಿಂದೂ ಮುಸ್ಲಿಮರು ತೆರಳುತ್ತಿದ್ದಾಗ ಅದನ್ನು ತಡೆದು ಹಿಂಸೆ ನೀಡಲಾಗಿತ್ತು. ಮುಸ್ಲಿಂ ಸಹೋದ್ಯೋಗಿಯೊಂದಿಗೆ ಹೋಟೆಲ್‌ನಲ್ಲಿ ಆಹಾರ ಸೇವಿಸುತ್ತಿದ್ದ ಮಹಿಳೆಗೆ ಬೆದರಿಕೆ ಹಾಕಲಾಯ್ತು. ಈ ರೀತಿಯ ಹತ್ತಾರು ಮಾರೆಲ್ ಪೊಲೀಸಿಂಗ್ ಘಟನೆಗಳು ಎರಡು ತಿಂಗಳಲ್ಲಿ ವರದಿಯಾದವು. ಆದರೆ ಬೊಮ್ಮಾಯಿಯವರು ತುಟಿ ಬಿಚ್ಚಲಿಲ್ಲ. ಏಕೆಂದರೆ ಇಲ್ಲಿ ಆರೋಪಿಗಳು ಹಿಂದೂ ಬಹುಸಂಖ್ಯಾತರಾಗಿದ್ದರು.

2. ಮತಾಂತರ ನಿಷೇಧ ಮಸೂದೆ

ಅಲ್ಪಸಂಖ್ಯಾತ ಸಮುದಾಯವನ್ನು ಟಾರ್ಗೆಟ್ ಮಾಡುವುದು ಮುಂದುವರಿಯಿತು. ಕ್ರಿಶ್ಚಿಯನ್ನರ ಪ್ರಾರ್ಥನಾ ಮಂದಿರಗಳ ಮೇಲೆ ದಾಳಿಗಳಾಗುತ್ತಿರುವುದು ಕಂಡು ಬಂದರೂ ಸರ್ಕಾರ ನಿಷ್ಕ್ರಿಯವಾಗಿತ್ತು.‌‌ ಬಲವಂತವಾಗಿ, ಆಮಿಷವೊಡ್ಡಿ ದಲಿತರನ್ನು ಮತಾಂತರ ಮಾಡಲಾಗುತ್ತಿದೆ ಎಂಬ ವಾದವನ್ನು ತೇಲಿಬಿಡಲಾಯಿತು.‌ ದಲಿತರು ಅನುಭವಿಸುತ್ತಿರುವ ಅಸ್ಪೃಶ್ಯತೆಯ ನೋವು, ಸರ್ವರ್ಣೀಯರಿಂದ ಆಗುತ್ತಿರುವ ದೌರ್ಜನ್ಯಗಳ ಕುರಿತ ಪ್ರಶ್ನೆಗಳಿಗೆ ಈಗಲೂ ಬಿಜೆಪಿ ಹಾಗೂ ಸಂಘಪರಿವಾರದಿಂದ ಉತ್ತರವಿಲ್ಲ.‌‌ ಇದರ ನಡುವೆ ಮತಾಂತರ ನಿಷೇಧ ಮಸೂದೆಯನ್ನು ಜಾರಿಗೊಳಿಸಿ, ಶ್ರೇಣೀಕೃತ ಸಮಾಜದ‌ ಯಥಾಸ್ಥಿತಿಗೆ‌ ಸರ್ಕಾರ ಪ್ರಯತ್ನಿಸಿತು.‌ ಆದರೆ ಕೊನೆ ಕ್ಷಣದ ಹಿನ್ನಡೆಯಿಂದ ಮಸೂದೆ ವಾಪಸ್ ಪಡೆದರು. ಮುಂದಿನ‌ ದಿನಗಳಲ್ಲಿ ಮತಾಂತರ ನಿಷೇಧ ಚರ್ಚೆ ಮತ್ತೆ ಮುನ್ನಲೆಗೆ ಬರಬಹುದು!

3. ಈಶ್ವರಪ್ಪನವರ ‘ಭಗವಾದ್ವಜ’ ಪ್ರಕರಣ

ಕೆಂಪು ಕೋಟೆಯ ಮೇಲೆ ಕೇಸರಿ ಧ್ವಜ ಒಂದಲ್ಲ‌ ಒಂದು ದಿನ‌ ಹಾರಿಸುತ್ತೇವೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು. ರಾಷ್ಟ್ರಧ್ವಜಕ್ಕೆ ಅವಮಾನ ಮಾಡಲಾಗಿದೆ ಎಂದು ಕಾಂಗ್ರೆಸ್ ಧ್ವನಿ ಎತ್ತಿತು. ಸದನದಲ್ಲಿ‌ ತ್ರಿವರ್ಣ ಧ್ವಜ ಹಿಡಿದು ಕಾಂಗ್ರೆಸ್ ಶಾಸಕರು ಪ್ರತಿಭಟಿಸಿದರು.‌ ಈಶ್ವರಪ್ಪನವರ ಹೇಳಿಕೆಯನ್ನು ಸದನದಲ್ಲಿಯೇ ಬಿಜೆಪಿ ನಾಯಕರು ಸಮರ್ಥಿಸಲು ಯತ್ನಿಸಿದರು. ಇಷ್ಟೇ ಅಲ್ಲದೆ, ಇತ್ತೀಚೆಗೆ ಆರ್.ಎಸ್.ಎಸ್. ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ಟ ಅವರು ಕೇಸರಿ ಧ್ವಜವನ್ನು‌ ಕೆಂಪು ಕೋಟೆಯಲ್ಲಿ‌ ಹಾರಿಸುವ ಸಂಘ ಪರಿವಾರದ‌ ಇಂಗಿತವನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಮತ್ತೊಂದು ಗಮನಾರ್ಹ ಸಂಗತಿ ಏನೆಂದರೆ, 2021, ಜನವರಿ 26ರಂದು ದೆಹಲಿಯಲ್ಲಿ ರೈತರು ಟ್ರಾಕ್ಟರ್ ರ್ಯಾಲಿ ನಡೆಸಿದಾಗ ಕೆಲವು ಕಿಡಿಗೇಡಿಗಳು ಕೆಂಪುಕೋಟೆಗೆ ನುಗ್ಗಿ ಬೇರೊಂದು ಧ್ವಜ ಹಾರಿಸಿದ್ದನ್ನು ದೊಡ್ಡ ಮಟ್ಟದಲ್ಲಿ ಪ್ರಶ್ನಿಸಿದ್ದ ಮುಖ್ಯವಾಹಿನಿ ಮಾಧ್ಯಮಗಳೂ ಈಗ ಮೌನವಹಿಸಿವೆ. ರೈತರನ್ನು ಖಲಿಸ್ತಾನಿಗಳು, ಪ್ರತ್ಯೇಕತಾವಾದಿಗಳು ಎಂದಿದ್ದವರು ಇಂದು ತುಟಿಬಿಚ್ಚುತ್ತಿಲ್ಲ!

4. ಹಿಜಾಬ್ v/s ಕೇಸರಿ ಶಾಲು ವಿವಾದ

ಶಾಲಾ, ಕಾಲೇಜುಗಳಲ್ಲಿ ಧಾರ್ಮಿಕ ಸಂಕೇತಗಳನ್ನು‌ ಧರಿಸಬಾರದು, ಏಕರೂಪತೆ ಪಾಲಿಸಬೇಕೆಂದು‌ ಆರಂಭವಾದ ಪ್ರಕರಣ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದು, ಹೈಕೋರ್ಟ್ ಮೆಟ್ಟಿಲೇರಿ ಈಗ ಸುಪ್ರೀಂಕೋರ್ಟ್ ವರೆಗೆ ಹೋಗಿದೆ.‌ ಹಿಜಾಬ್ ಧರಿಸುವುದು ಇಸ್ಲಾಂನಲ್ಲಿ ಕಡ್ಡಾಯ‌‌ ಆಚರಣೆಯಲ್ಲ ಎಂದಿರುವ ಕರ್ನಾಟಕ ಹೈಕೋರ್ಟ್ ಸರ್ಕಾರದ ನಿರ್ಧಾರವನ್ನು ಎತ್ತಿ ಹಿಡಿದಿದೆ. ತಲೆಯ ಮೇಲೆ ಧರಿಸುವ ಬಟ್ಟೆಯೊಂದನ್ನು ವಿರೋಧಿಸಿ, ಅದಕ್ಕೆ ಪ್ರತಿಯಾಗಿ ಕೇಸರಿ ಶಾಲು ಧರಿಸುತ್ತೇವೆಂದು ಉಡುಪಿಯ ಕಾಲೇಜೊಂದರಲ್ಲಿ ಆರಂಭವಾದ ವಿವಾದ ಇಡೀ ರಾಜ್ಯವನ್ನು ವ್ಯಾಪಿಸಿದೆ.

ಹಿಜಾಬ್ ವಿಚಾರಣೆ ನಡೆಯುವಾಗ ಮಧ್ಯಂತರ ಆದೇಶವಿದ್ದಾಗಲಂತೂ ಮಕ್ಕಳ ಹಕ್ಕುಗಳ ಉಲ್ಲಂಘನೆಯಾದವು.‌ ಯಾವುದೇ ಸ್ಪಷ್ಟೀಕರಣ ನೀಡದೆ ಶಿಕ್ಷಣ ಇಲಾಖೆ ಮೌನವಹಿಸಿತ್ತು.‌ ಈಗ ಹಿಜಾಬ್ ನೆಪದಲ್ಲಿ ವಿದ್ಯಾರ್ಥಿನಿಯರ ಶಿಕ್ಷಣವನ್ನೇ ವಂಚಿಸಲಾಗುತ್ತಿದೆ. ಶಿಕ್ಷಣ ಮೂಲಭೂತ ಹಕ್ಕೆಂಬುದನ್ನು ಸರ್ಕಾರ ಮರೆತಿದೆ. ಹಿಜಾಬ್ ಪ್ರಕರಣ ಮುನ್ನಲೆಗೆ ಬಂದಾಗ ಹೊರಗಿನ ಶಕ್ತಿಗಳು ವಿದ್ಯಾರ್ಥಿಗಳನ್ನು ಪ್ರಚೋದಿಸಿ ಕೇಸರಿ ಶಾಲು ನೀಡಿದ್ದು ದಾಖಲೆ ಸಮೇತ ವರದಿಯಾದರೂ ಸರ್ಕಾರ‌ ಮೆಜಾರಿಟೇರಿಯನ್ ನಿಲುವಿಗೆ ಅಂಟಿ ಕುಳಿತಿದೆ. ಪ್ರಜೆಗಳೆಲ್ಲ ಒಂದೇ ಎಂಬುದನ್ನು ಸರ್ಕಾರ ಮರೆತಿದೆ. ಇಲ್ಲಿಯವರೆಗೆ ಇರದಿದ್ದ ಹಿಜಾಬ್ ಸಮಸ್ಯೆಯನ್ನು ಬೇಕಂತಲೇ ಸೃಷ್ಟಿಸಿದ್ದು ಬೊಮ್ಮಾಯಿ ಸರ್ಕಾರದ ಮಹಾನ್ ಸಾಧನೆ.

5. ಹರ್ಷ ಕೊಲೆ ಪ್ರಕರಣ

ಶಿವಮೊಗ್ಗದ ಬಜರಂಗದಳ ಕಾರ್ಯಕರ್ತ ಹರ್ಷ ಕೆಲವು ಮುಸ್ಲಿಂ ಯುವಕರಿಂದ ಕೊಲೆಯಾದ ಬಳಿಕ ಹೆಣದ ರಾಜಕಾರಣಕ್ಕೆ ರಾಜ್ಯ ಸಾಕ್ಷಿಯಾಯಿತು.‌ ಕೊಲೆಗೆ ಕಾರಣ ಬಹಿರಂಗವಾಗಿಲ್ಲ.‌ ಆದರೆ ಹೆಣವನ್ನು ಇಟ್ಟುಕೊಂಡು ಮಾಡಿದ ರಾಜಕಾರಣವನ್ನು ಮಾತ್ರ ಮರೆಯಲಾಗದು.‌ ಕೋಮುಸೂಕ್ಷ್ಮತೆ ಬಲ್ಲವರು ಸರ್ಕಾರದ ನಡೆಯನ್ನು ಕಟುವಾಗಿ ಟೀಕಿಸುತ್ತಿದ್ದಾರೆ. ಯಾರೂ ಇಂತಹ ಪ್ರಕರಣದ ಸಂದರ್ಭದಲ್ಲಿ ಹೆಣದ ಮೆರವಣಿಗೆಗೆ ಅವಕಾಶ ನೀಡುವುದಿಲ್ಲ. ಆದರೆ‌ ಸಚಿವ ಕೆ.ಎಸ್.ಈಶ್ವರಪ್ಪ, ಸಂಸದ ಬಿ.ವೈ. ವಿಜಯೇಂದ್ರ ಅವರೇ ಮೆರವಣಿಗೆಗೆ ನೇತೃತ್ವ ವಹಿಸಿದ್ದರು.‌ ಅದರಲ್ಲೂ ನಿಷೇದಾಜ್ಞೆಯ ನಡುವೆ ಮೆರವಣಿಗೆಯನ್ನು ಆಯೋಜಿಸಲಾಗಿತ್ತು. ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ತವರು ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿತ್ತು.‌‌ ಕೋಮು ಸೂಕ್ಷ್ಮ ಪ್ರದೇಶಗಳಲ್ಲಿ ಮೆರವಣಿಗೆ ಸಾಗಿತು.‌ ಮುಸ್ಲಿಂ ಮನೆಗಳನ್ನು, ಮದ್ರಾಸಾಗಳನ್ನು‌ ಗುರಿಯಾಗಿಸಿಕೊಂಡು ಕಲ್ಲು ತೂರಾಟ ನಡೆಸಿದರು.‌ ನಿರಪರಾಧಿ ಮುಸ್ಲಿಮರು ಗಾಯಗೊಂಡರು. ಸಾರ್ವಜನಿಕ ಆಸ್ತಿ ಹಾನಿ ಮಾಡಲಾಯಿತು. ಅಲ್ಲಲ್ಲಿ ಬೆಂಕಿ ಹಚ್ಚಲಾಯಿತು‌. ಪೊಲೀಸರ ಎದುರೇ ಈ ದೌರ್ಜನ್ಯಗಳು ನಡೆದವು. ಈಶ್ವರಪ್ಪ, ಸಿ.ಟಿ.ರವಿಯಂಥವರು ಎಂದಿನಂತೆ ವಿಷ ಉಗುಳುವ, ಮನಸ್ಸುಗಳನ್ನು ಒಡೆಯುವ ಮಾತುಗಳನ್ನು ಮುಂದುವರಿಸಿದ್ದರು.

ಹರ್ಷನ ಮೇಲೆಯೂ ಪ್ರಕರಣಗಳಿದ್ದವು.‌ ಆತನ ಕೊಲೆ ಪ್ರಕರಣ ತನಿಖೆಯಾಗುತ್ತಿದೆ. ಸ್ಥಿತಿ ಹೀಗಿರುವಾಗ ಮುಖ್ಯಮಂತ್ರಿ ಬೊಮ್ಮಾಯಿಯವರು‌ ಸಿಎಂ ನಿಧಿಯಿಂದ ಹರ್ಷ ಕುಟುಂಬಕ್ಕೆ 25 ಲಕ್ಷ ರೂ. ನೀಡಿದ್ದಾರೆ. ಇದೇ ಸಮಯದಲ್ಲಿ ಕೋಮು ಕಾರಣಕ್ಕೆ, ಬಜರಂಗದಳ ಯುವಕರಿಂದ ಕೊಲೆಯಾದ ನರಗುಂದದ ಸಮೀರ್ ಶಹಾಪುರನನ್ನು ಕಳೆದುಕೊಂಡ ಮುಸ್ಲಿಂ ಕುಟುಂಬ ದುಃಖಿಸುತ್ತಿದೆ.‌ ಸರ್ಕಾರ ಈ ಕುಟುಂಬದತ್ತ ಕಣ್ಣೆತ್ತಿಯೂ ನೋಡಲಿಲ್ಲ. ಅಷ್ಟೇ ಏಕೆ, ಧರ್ಮಸ್ಥಳದ ಕನ್ಯಾಡಿಯಲ್ಲಿ ದಲಿತ ಯುವಕ ದಿನೇಶ್ ಅವರನ್ನು ಬಜರಂಗದ ಮುಖಂಡ ಕೃಷ್ಣ ಎಂಬಾತ ಕೊಂದು ಹಾಕಿದ. ಆದರೆ ದಿನೇಶ್ ಜೀವಕ್ಕೆ ಯಾವ ಬೆಲೆಯೂ ಇಲ್ಲವಾಗಿತ್ತು.

6. ಕಾಶ್ಮೀರ್ ಫೈಲ್ಸ್ ಗೆ ತೆರಿಗೆ ವಿನಾಯಿತಿ

ಬಿಜೆಪಿ ಪ್ರೊಪಗಾಂಡಕ್ಕೆ ಅವಕಾಶ ನೀಡಿರುವ, ಕಾಶ್ಮೀರಿ ಪಂಡಿತರ ಕೊಲೆ ಹಾಗೂ ವಲಸೆಗೆ ಸಂಬಂಧಿಸಿದಂತೆ ಅರ್ಧ ಸತ್ಯವನ್ನು ಹೇಳುವ ‘ಕಾಶ್ಮೀರ್ ಫೈಲ್ಸ್’ ಸಿನಿಮಾಕ್ಕೆ ಆರು ತಿಂಗಳ ತೆರಿಗೆ ವಿನಾಯಿತಿಯನ್ನು ಬೊಮ್ಮಾಯಿ ಘೋಷಿಸಿದ್ದಾರೆ. ಇಡೀ ಮುಸ್ಲಿಂ ಸಮುದಾಯವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ, ಕಾಶ್ಮೀರಿಯತ್ (ಬಹುತ್ವವನ್ನು ಸಾರುವ ಕಾಶ್ಮೀರಿ ಅಸ್ಮಿತೆ) ನಿರ್ಲಕ್ಷಿಸುವ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಈ ಸಿನಿಮಾಕ್ಕೆ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ತೆರಿಗೆ ವಿನಾಯಿತಿ ನೀಡಲಾಗಿದೆ. ಬೊಮ್ಮಾಯಿ ಒಂದು ಹೆಜ್ಜೆ ಮುಂದೆ ಹೋಗಿ ಆರು ತಿಂಗಳ ವಿನಾಯಿತಿ ಘೋಷಿಸಿದ್ದಾರೆ.‌‌‌ ದ್ವೇಷ ಬಿತ್ತುವ ಸಿನಿಮಾಕ್ಕೆ ಈ ಪರಿಯ ಪ್ರಚಾರವನ್ನು ನೀಡಿದ್ದು ಏಕೆ ಎಂಬುದು‌ ಚರ್ಚೆಯ ವಿಷಯವಾಗಿದೆ.

7. ಮುಸ್ಲಿಂ ಸಮುದಾಯಗಳನ್ನು ವ್ಯಾಪಾರದಿಂದ ಹೊರಗಿಡುವ ಪ್ರವೃತ್ತಿ

ಹಿಜಾಬ್ ತೀರ್ಪು ವಿರೋಧಿಸಿ ಮುಸ್ಲಿಂ ವ್ಯಾಪಾರಿಗಳು ತಮ್ಮ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಒಂದು ದಿನದ ಬಂದ್ ಆಚರಿಸಿದರು.‌ ಕರಾವಳಿ ಭಾಗದಲ್ಲಿ ಯಶಸ್ವಿ ಕೂಡ ಆಗಿತ್ತು. ಪ್ರತಿಭಟನೆ ನಡೆಸುವುದು ಎಲ್ಲರ ಸಾಂವಿಧಾನಿಕ ಹಕ್ಕು ಕೂಡ. ಹಿಜಾಬ್ ಪ್ರಕರಣ ಸುಪ್ರೀಂನಲ್ಲಿದೆ.‌ ಹೀಗಾಗಿ‌ ಹೈಕೋರ್ಟ್ ತೀರ್ಪು ಅಂತಿಮವೇನಲ್ಲ.‌ ಸುಪ್ರೀಂ ಕೋರ್ಟ್ ಶಬರಿಮಲೆಗೆ ಮಹಿಳೆಯರ ಪ್ರವೇಶ ಸಂಬಂಧ ತೀರ್ಪು ನೀಡಿದಾಗ ಸಂಘ ಪರಿವಾರ ಪ್ರತಿಭಟಿಸಿತ್ತು. ಆದರೆ‌ ಹಿಜಾಬ್ ನಿಷೇಧ ವಿರೋಧಿಸಿ ಮುಸ್ಲಿಂ ವರ್ತಕರು ಪ್ರತಿಭಟನೆ ಮಾಡಿದರೆಂಬ ಒಂದೇ ಕಾರಣಕ್ಕೆ ಹಿಂದೂಗಳ ಜಾತ್ರೆ, ಉತ್ಸವಗಳಲ್ಲಿ ಮುಸ್ಲಿಂ ವರ್ತಕರು ಭಾಗವಹಿಸುವಂತಿಲ್ಲ‌ ಎಂದು ನಿರ್ಬಂಧ ಹೇರುತ್ತಿರುವುದು ಕಂಡುಬರುತ್ತಿವೆ.‌ ಇದನ್ನೂ ಬಿಜೆಪಿ ಸರ್ಕಾರ ಸಮರ್ಥನೆ ಮಾಡಿಕೊಂಡಿದೆ. ಹಿಂದೂ ದೇವಾಲಯಗಳ ಪ್ರಾಂಗಣದಲ್ಲಿ ಬೇರೆ ಧರ್ಮಿಯರ ವ್ಯಾಪಾರವನ್ನು ಈ ಹಿಂದೆಯೇ ನಿಷೇಧಿಸಲಾಗಿದೆ ಎಂದು ಬೊಮ್ಮಾಯಿ ಸರ್ಕಾರ ಹೇಳಿದೆ.‌ 2021 ಡಿಸೆಂಬರ್ ತಿಂಗಳಲ್ಲಿ ಸುಪ್ರೀಂ ಈ ವಿಚಾರವಾಗಿ ತೀರ್ಪು ನೀಡಿದ್ದು, ದೇವಾಲಯ ಸಮೀಪ ಇತರ ಧರ್ಮದವರಿಗೆ ಅವಕಾಶ ನಿರಾಕರಿಸಬಾರದು ಎಂದು‌ ಆದೇಶಿಸಿರುವುದು ಗಮನಾರ್ಹ.

**

ಇಷ್ಟೆಲ್ಲ‌ ದ್ವೇಷಕಾರುವ ಪ್ರವೃತ್ತಿ ಹೆಚ್ಚಾಗುತ್ತಿದ್ದರೂ ಪೊಲೀಸ್ ಇಲಾಖೆ ಮೌನ ವಹಿಸಿದೆ.‌ ಏಕೆಂದರೆ ಸರ್ಕಾರದ ನಿರ್ದೇಶನವಿದೆ. ಬೊಮ್ಮಾಯಿ ಮತ ರಾಜಕಾರಣದ ಲೆಕ್ಕಾಚಾರ ಹಾಕುತ್ತ ರಾಜ್ಯದ ಅಭಿವೃದ್ದಿಯನ್ನು ಮರೆತ್ತಿದ್ದಾರೆ. ಮುಸ್ಲಿಂ ದ್ವೇಷದ ರಾಜಕಾರಣಕ್ಕೆ ಗೊಬ್ಬರ, ನೀರು ಎರೆಯುತ್ತಿದ್ದಾರೆ…

ಇಲ್ಲಿ ಮುಖ್ಯವಾದ ಘಟನೆಗಳನ್ನು ಮಾತ್ರ ಪಟ್ಟಿ ಮಾಡಲಾಗಿದೆಯಷ್ಟೇ… ಸರ್ಕಾರದ ವಿವಿಧ ಕಾರ್ಯಕ್ರಮಗಳಲ್ಲಿ ‌ಹೇಗೆ ಕೋಮುದ್ವೇಷ ಹೊಗೆಯಾಡುತ್ತಿದೆ ಎಂಬುದನ್ನು ಬರೆಯುತ್ತಾ ಹೋದರೆ ಇದು ಮುಗಿಯದ ಪುರಾಣವಾಗುತ್ತದೆ…‌ ಇಷ್ಟು ಬರೆಯುವ ಹೊತ್ತಿಗೆ ‘ಭಗವದ್ಗೀತೆ’ಯು ಕೋಮು ರಾಜಕಾರಣದ ಅಂಕಕ್ಕೆ ಪ್ರವೇಶಿಸಿದೆ. ಬೆಲೆ ಏರಿಕೆ, ನೀಟ್, ಎನ್ಇಪಿಯಿಂದ ವಿದ್ಯಾರ್ಥಿಗಳ ಹೈರಾಣು, ಶಿಕ್ಷಣ, ನಿರುದ್ಯೋಗ, ಬಡತನ, ಹಸಿವು, ದಲಿತ, ರೈತ, ಅಲ್ಪಸಂಖ್ಯಾತ, ಹಿಂದುಳಿದ ಸಮುದಾಯದಗಳ ನಿಜದ ನೋವು- ಎಲ್ಲವೂ ಸಪ್ಪೆಸಪ್ಪೆಯಾದ ಸಂಗತಿಯಾಗಿಬಿಟ್ಟಿವೆ! ಸರ್ಕಾರಕ್ಕೆ ಅಂತಹ ಯಾವುದೇ ಕಾಳಜಿಯೂ ಇಲ್ಲ ಎಂಬುದು ಸ್ಪಷ್ಟವಾಗತೊಡಗಿದೆ.


ಇದನ್ನೂ ಓದಿ: ಹುಸಿ ಕಾಳಜಿಯ, ಪಕ್ಷಪಾತ ಧೋರಣೆಯ, ದ್ವೇಷದ ಅಜೆಂಡಾವುಳ್ಳ ’ದ ಕಾಶ್ಮೀರ್ ಫೈಲ್ಸ್’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಮತಾಂಧ ಕೋರರಿಗೆ ಇದು ಕೋಮು ದ್ವೇಷ ಆಗಲೇ ಬೇಕು ಬಿಡಿ,ಅದೇ ಈ ನೆಲದ ಕಾನೂನನ್ನು ಗೌರವಿಸದ ಅಯೋಗ್ಯರಿಗೆ ಬೊಮ್ಮಾಯಿ ಸರ್ಕಾರದಿಂದ ಎಚ್ಚರಿಕೆ ಸಂದೇಶ ರವಾನೆ ಆಗ್ತಿದೆ ,ನೆಲದ ಕಾನೂನು ಗೌರವಿಸದ ಯಾರೇ ಆಗಲಿ ಇಲ್ಲಿ ಜೀವಿಸಲು ಅನರ್ಹ ಅನ್ನೋದೆ ಈ ಸರಕಾರದ ಎಚ್ಚರಿಕೆ.

LEAVE A REPLY

Please enter your comment!
Please enter your name here

- Advertisment -

ದಾವಣಗೆರೆ ಉಪ ಚುನಾವಣೆ ಅಡ್ಡ ಪರಿಣಾಮ: ಮುಸ್ಲಿಮ್ ಮುಖಂಡರ ಮೇಲೆ ಖರ್ಗೆ-ಡಿಕೆಶಿ ಶಿಸ್ತು ಪ್ರಹಾರ ಕಾಂಗ್ರೆಸ್‌ನ ಆತ್ಮಹತ್ಯಾತ್ಮಕ ರಾಜಕಾರಣ!!

ದಾವಣಗೆರೆ ದಕ್ಷಿಣ ಉಪ ಚುನಾವಣೆ ರಾಜ್ಯದ ಆಡಳಿತಾರೂಢ ಕಾಂಗ್ರೆಸ್‌ನ ಗದ್ದುಗೆ ಗುದ್ದಾಟಕ್ಕೆ ರೋಚಕ ಆಯಾಮ ನೀಡಿಬಿಟ್ಟಿದೆ. ಅಹಿಂದ ಸಮುದಾಯವೇ ಬಹುಜನರಾಗಿರುವ ದಾವಣಗೆರೆ ದಕ್ಷಿಣ ಅಸೆಂಬ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ನ್ಯಾಯವಾಗಿ ಆ ವರ್ಗದ ಅರ್ಹರೊಬ್ಬರಿಗೆ...

ನೀಟ್ ವಿವಾದ: ಪ್ರಶ್ನೆ ಪತ್ರಿಕೆ ಸೋರಿಕೆ ಜೊತೆಗೆ ಹೆಚ್ಚುತ್ತಿರುವ ವಿದ್ಯಾರ್ಥಿಗಳ ಆತ್ಮಹತ್ಯೆ

ರಾಜಸ್ಥಾನದಲ್ಲಿ ನಡೆದ ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ (ಸಿಬಿಐ) ತನಿಖೆ ವೇಗ ಪಡೆದುಕೊಂಡಿದೆ. ದೇಶದಾದ್ಯಂತ ಹಲವು ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಆರೋಪದ ಮೇಲೆ...

ಎಸ್‌ಐಆರ್‌ನಲ್ಲಿ ಮತದಾನದ ಹಕ್ಕು ಹೋಯ್ತು..ಈಗ ಸರ್ಕಾರಿ ಸೌಲಭ್ಯದ ಸರದಿ..ಮುಂದೆ ನಾಗರಿಕತ್ವ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುವುದು ಚುನಾವಣಾ ಆಯೋಗ ಭಾರತದ ಕೋಟ್ಯಾಂತರ ನಾಗರಿಕ ಅಮೂಲ್ಯವಾದ ಮತದಾನದ ಹಕ್ಕನ್ನು ಕಿತ್ತುಕೊಂಡ ಒಂದು ವ್ಯವಸ್ಥಿತ ಸಂಚು ಎನ್ನಬಹುದು. ಬಿಹಾರ, ಪಶ್ಚಿಮ ಬಂಗಾಳ, ತಮಿಳುನಾಡು,...

ಜೋಸೆಫ್ ವಿಜಯ್‌ ಅವರ ಐತಿಹಾಸಿಕ ಗೆಲುವು: ರಾಜ್ಯಪಾಲರ ಸೋಲು ಮತ್ತು ದ್ರಾವಿಡ ನೆಲದ ರಾಜಕೀಯ: ಒಂದು ವಿಶ್ಲೇಷಣೆ

ತಮಿಳಗ ವೆಟ್ರಿ ಕಝಗಂ (TVK) ಪಕ್ಷವು ತಮಿಳುನಾಡು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಿ ಸರ್ಕಾರ ರಚಿಸುವ ಜವಾಬ್ದಾರಿ ತೆಗೆದುಕೊಂಡಿದೆ. ಮೇ 13, 2026ರ ಬುಧವಾರ ನಡೆದ ನಾಟಕೀಯ ವಿಶ್ವಾಸ ಮತಯಾಚನೆಯಲ್ಲಿ 144 ಮತಗಳ ಬೆಂಬಲ...

FACT CHECK: ಟಿವಿಕೆ ಪಕ್ಷ ಅಧಿಕಾರಕ್ಕೆ ಬರುತ್ತಿದಂತೆ ಹಿಂದಿ ಹೇರಿಕೆ ವಿರುದ್ದ ಪ್ರತಿಭಟನೆ ಎಂದು ಹಳೆಯ ವಿಡಿಯೋ ಹಂಚಿಕೆ

ಹಿಂದಿ ಹೇರಿಕೆ ವಿರುದ್ದದ ಹೋರಾಟವು ತಮಿಳುನಾಡಿಗೆ ಹೊಸದೇನು ಅಲ್ಲ. ಆದರೆ ಚೆನ್ನೈನ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ಅಧಿಕಾರ ವಹಿಸಿಕೊಂಡ ನಂತರ ...

ನೀಟ್: ಪ್ರಶ್ನೆಪತ್ರಿಕೆ ಸೋರಿಕೆಯ ಆತಂಕ ಮತ್ತು ಪ್ರಾದೇಶಿಕ ಹಿತಾಸಕ್ತಿಗಳ ಬಲಿ

ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಆರೋಪದ ಮೇಲೆ ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ...

ಕೇಂದ್ರ ಸಚಿವ ಬಂಡಿ ಸಂಜಯ್ ಮಗನ ವಿರುದ್ಧ ಪೋಕ್ಸೋ ಕೇಸ್ : ಕ್ರಮ ಕೈಗೊಳ್ಳದೆ ಕಥೆ ಹೇಳುತ್ತಿರುವ ಪೊಲೀಸರು, ಅಂತರ ಕಾಯ್ದುಕೊಂಡ ಬಿಜೆಪಿ

ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ, ತೆಲಂಗಾಣದ ಪ್ರಮುಖ ಬಿಜೆಪಿ ನಾಯಕ ಬಂಡಿ ಸಂಜಯ್ ಕುಮಾರ್ ಅವರ ಮಗ ಬಂಡಿ ಸಾಯಿ ಭಗೀರತ್ ವಿರುದ್ಧ 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಪೋಕ್ಸೋ...

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...