’ಭಾರತದ ಪರಿಕಲ್ಪನೆ’ ಎಂಬ ಕುರಿತು ಬಿಸಿಬಿಸಿ ಚರ್ಚೆಗಳು ನಡೆಯುತ್ತಿದ್ದರೂ ಈ ಪದಪುಂಜಕ್ಕೆ ಅದನ್ನು ಬಳಸುವವರು ಯಾರೂ ಹೆಚ್ಚಾಗಿ ವಿವರಣೆ ನೀಡಿಲ್ಲ. ಅದರ ಹಲವಾರು ಅರ್ಥಗಳ ಗ್ರಹಿಕೆಯನ್ನು- ಅದನ್ನು ಬಳಸಲಾದ ಸಂದರ್ಭದ ಮತ್ತು ಅದನ್ನು ಉದ್ದೇಶಿಸಲಾದವರ ಕಲ್ಪನೆಗೆ ಬಿಡಲಾಗಿದೆ.
ಕೆಲವೊಮ್ಮೆ ಅದು ಸಂವಿಧಾನದ ಮೇಲೆ ನಿಂತ ಭಾರತೀಯ ಗಣರಾಜ್ಯವೆಂದಾಗುತ್ತದೆ. ಮತ್ತೆ ಕೆಲವೊಮ್ಮೆ ಅದು ಅಗಣಿತ ಕಾಲದಿಂದಲೂ ಇರುವ ಹಿಂದಿನ ಕಾಲಘಟ್ಟಗಳ ಎಲ್ಲಾ ವೈವಿಧ್ಯಗಳನ್ನು ಒಳಗೊಂಡಿರುವ, ಭವ್ಯ ಪರಿಕಲ್ಪನೆಯನ್ನು ನೆನಪಿಸುತ್ತದೆ. ಅದು ಭಾರತದ ವೈವಿಧ್ಯಮಯ ಜನಸಂಖ್ಯೆಯ ಮೂಲಗಳು ಮತ್ತು ಸಂಸ್ಕೃತಿಗಳನ್ನು ಉಲ್ಲೇಖಿಸಬಹುದು; ಅಥವಾ ಭಾರತೀಯ ನಾಗರಿಕತೆಯು ಏನಾಗಿದೆಯೋ, ಅಥವಾ ಏನಾಗಿದೆಯೆಂದು ನಾವು ತಿಳಿದುಕೊಂಡಿದ್ದೇವೆಯೋ ಆದೂ ಆಗಬಹುದು.
ಒಂದು ನಾಗರಿಕತೆಯ ಬಗ್ಗೆ ಯೋಚಿಸುವುದು ಯಾವುದೇ ರೀತಿಯಿಂದ ಸುಲಭವಲ್ಲ. ಯಾರಾದರೂ ನಿರ್ದಿಷ್ಟವಾಗಿ ಪದಕೋಶದ ಹಾದಿ ಹಿಡಿದರೆ ’ನಾಗರಿಕತೆ’ ಅಥವಾ ’ಸಿವಿಲೈಸೇಶನ್’ ಎಂಬ ಪದವು ಲ್ಯಾಟಿನ್ ಭಾಷೆಯ ’ಸಿವಿಟಸ್’ ಅಥವ ಇಂಗ್ಲಿಷಿನ ’ಸಿವಿಲ್’ ಎಂಬ ಪದಗಳಿಗೆ ಸಂಬಂಧಿಸಿದ್ದು; ಇದು ನಾಗರಿಕತೆಯ ಮೂಲವು ’ನಗರ’ ಎಂದು ಸೂಚಿಸುತ್ತದೆ. ಭಾರತದಲ್ಲಿ ನಗರ ಅಥವಾ ನಗರ ಸಾಮಾಜಿಕ ಸಂರಚನೆಯು ಮೊದಲು ಸಿಂಧೂ ಕಣಿವೆಯ ನಾಗರಿಕತೆಯ ಕಾಲದಲ್ಲಿ ಅಸ್ತಿತ್ವಕ್ಕೆ ಬಂತು. ಅದು ಕ್ರಿ.ಪೂ. 24ನೇ ಶತಮಾನದಿಂದ ಕ್ರಿ.ಪೂ.19 ಶತಮಾನದವರೆಗಿನ ಸುಮಾರು ಆರು ಶತಮಾನಗಳ ಕಾಲ ಉತ್ತುಂಗದಲ್ಲಿದ್ದು, ನಂತರ ಅವನತಿ ಹೊಂದಿತು. ನಂತರದ ಅರ್ಧ ಸಹಸ್ರಮಾನದ ಕಾಲದ ಅವಧಿಯ ಕುರಿತ ನಮಗೆ ಹೆಚ್ಚೇನೂ ಗೊತ್ತಿಲ್ಲ.
ಭಾರತದ ನಂತರದ ಪೂರ್ವೇತಿಹಾಸದ ಹಂತವು ಋಗ್ವೇದದ ಕಾಲದಿಂದ ಆಂದರೆ, ಕ್ರಿ.ಪೂ. 14ನೇ ಶತಮಾನದಿಂದ ಆರಂಭವಾಗುತ್ತದೆ. ಆಗ ಭಾರತವು ಹೊಸ ವ್ಯವಸ್ಥೆಯನ್ನು ಪ್ರವೇಶಿಸಿ ನಗರಗಳು ಮೂಡಿಬಂದರೂ ಭಾರತದ ಬಹುಪಾಲು ಜನತೆಯು ಗ್ರಾಮ ವ್ಯವಸ್ಥೆಯನ್ನು ತನ್ನ ದೂರಗಾಮಿ ’ನಾಗರಿಕತೆ’ಯ ಆಯ್ಕೆಯನ್ನಾಗಿ ಮಾಡಿಕೊಂಡಿತು.
ಆಗಿನಿಂದ ವಸಾಹತುಶಾಹಿಯ ಕಾಲದವರೆಗೂ ಮತ್ತೊಮ್ಮೆ ನಗರಗಳಿಗೆ ಆದ್ಯತೆ ನೀಡುತ್ತಾ ಬರಲಾಗುತ್ತಿದೆ. ಸುಮಾರು 32 ಶತಮಾನಗಳಿಗಿಂತಲೂ ಹೆಚ್ಚಿನ ಕಾಲದಿಂದಲೂ ಹೆಚ್ಚಿನ ಜ್ಞಾನದ ಉತ್ಪಾದನೆ, ಕಲಾ ಅಭಿವ್ಯಕ್ತಿ ಮತ್ತು ಆಧ್ಯಾತ್ಮಿಕ ಧ್ಯಾನವು ನಗರಗಳಿಗಿಂತ ಹೆಚ್ಚಾಗಿ ದೂರದ, ಅಜ್ಞಾನವಾದ, ಏಕಾಂಗಿಯಾದ ಸ್ಥಳಗಳಲ್ಲೇ ಚಿಗುರೊಡೆಯುತ್ತಾ ಬಂದಿದೆ. ಈ ದೃಷ್ಟಿಕೋನದಿಂದ ನೋಡಿದಲ್ಲಿ ’ನಾಗರಿಕತೆ’ ಎಂಬ ಪದವು ಭಾರತದ ಇತಿಹಾಸವನ್ನು ಆವರಿಸಿ ವಿವರಿಸಲು ಸಾಕಾಗಲಾರದು.
ಹೀಗಿದ್ದರೂ, ’ನಾಗರಿಕತೆ’, ಕೆಲವು ಶ್ರೇಷ್ಠವಾದ, ಕೆಲವು ಅಷ್ಟೊಂದು ಶ್ರೇಷ್ಠವಲ್ಲದ, ಇದ್ದ ಸಂಗತಿಗಳನ್ನು ಜತೆಗೂಡಿಸುವ ಒಂದು ಸಾಂಸ್ಕೃತಿಕ ಎಳೆ ಎಂದು ಅರ್ಥೈಸಬಹುದು. ದಕ್ಷಿಣ ಏಷ್ಯಾದ ಸಂದರ್ಭದಲ್ಲಿ ಭಾಷೆಯು ಆ ಒಂದು ಮುಖ್ಯವಾದ ಆಂಶವಾಗಿದ್ದು, ಭಾರತ ಪರಿಕಲ್ಪನೆಗೆ ಆದುವೇ ಮೂಲ ಮತ್ತು ನಿರ್ಣಾಯಕ ಅಂಶವಾಗಿದೆ. ಭಾಷಾಶಾಸ್ತ್ರಜ್ಞರು ಈಗ ಭಾರತೀಯ ಭಾಷೆಗಳ ಬಗ್ಗೆ ಮಾತಾಡುವಾಗ ನಿರ್ದಿಷ್ಟ ಭಾಷಾ ಕುಟುಂಬಗಳಾಗಿ ಮಾತನಾಡುವುದಿಲ್ಲ. ಈಗ ಅವರು ಬಹಳ ವೈವಿಧ್ಯಮಯ ಭಾಷೆಗಳ – ಪ್ರಪಂಚದ ಇನ್ಯಾವುದೇ ಭಾಗಗಳಿಗಿಂತ ಒಂದು ಭಾಷೆ ಮತ್ತು ಅದರ ಸುತ್ತಲಿನ ಭಾಷೆಗಳ ನಡುವೆ ಅರ್ಥೈಸುವಿಕೆಯು ಹೆಚ್ಚು ಇರುವ – ಭಾಷಾ ಪ್ರದೇಶಗಳಾಗಿ ಪರಿಗಣಿಸುತ್ತಾರೆ.
ಭಾರತದಲ್ಲಿ ಭಾಷೆಗಳು
ಭಾರತದಲ್ಲಿ ಭಾಷೆಯು ತನ್ನ ಅದ್ಭುತವಾದ ವೈವಿಧ್ಯತೆಯಿಂದ ಮಾತ್ರವಲ್ಲದೆ, ಸಾಂಸ್ಕೃತಿಕ ಉದ್ವಿಗ್ನತೆಗೆ ಮತ್ತು ಸಮಾಜದ ಶ್ರೇಣೀಕರಣಕ್ಕೆ ಒಂದು ಬಹುಮುಖ್ಯ ಅಂಶವಾಗಿ ಎದ್ದುಕಾಣುತ್ತದೆ. ಯುನೆಸ್ಕೋ ಮತ್ತು ಎತ್ನೋಲಾಗ್ ಸಂಸ್ಥೆ ಮಾಡಿರುವ ಅಂದಾಜನ್ನು ಪರಿಗಣಿಸಿದರೆ ಜಗತ್ತಿನಲ್ಲಿ ಸುಮಾರು 7,000 ಜೀವಂತ ಭಾಷೆಗಳಿದ್ದು, ಅವುಗಳಲ್ಲಿ 12 ಶೇಕಡಾದಷ್ಟನ್ನು ಭಾರತದಲ್ಲಿಯೇ ಮಾತನಾಡಲಾಗುತ್ತದೆ. ಆದರೆ, ಭಾರತದಲ್ಲಿ ಇರುವ ಭಾಷೆಗಳ ಬಗ್ಗೆ ಇಂದಿಗೂ ನಿರ್ಣಾಯಕವಾದ ಅಂಕಿಅಂಶಗಳಿಲ್ಲ ಎಂಬುದನ್ನು ನಾನಿಲ್ಲಿ ಸೇರಿಸಬೇಕು.
2011ರ ಜನಗಣತಿಯ ಪ್ರಕಾರ 1,369 ಭಾಷೆಗಳನ್ನು ಮಾತೃಭಾಷೆ ಎಂದು ಜನರು ನೋಂದಾಯಿಸಿಕೊಂಡಂತೆ ಪಟ್ಟಿ ಮಾಡಲಾಗಿದೆ. ಆದರೆ, ಅವುಗಳನ್ನು ಒಂದು ಭಾಷೆ ಎಂಬುದಾಗಿ ಪರಿಗಣಿಸಬೇಕಾಗಿಲ್ಲ. ವಾಸ್ತವಿಕವಾಗಿ ಬೇರೆಬೇರೆ ಸರಕಾರಗಳು ಭಾಷೆಯ ಗಣತಿಗೆ ಅಸ್ಪಷ್ಟವಾದ ವಿಧಾನಗಳನ್ನು ಅನುಸರಿಸುತ್ತಾ ಅವುಗಳ ಸಂಖ್ಯೆಯನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಾ ಬಂದಿವೆ. ’ದಿ ಪೀಪಲ್ಸ್ ಲಿಂಗ್ವಿಸ್ಟಿಕ್’ ಸರ್ವೇ ಆಫ್ ಇಂಡಿಯಾದ (ಪಿಎಲ್‌ಎಸ್‌ಐ) 2010-2013ರ ವರದಿಯಂತೆ 780 ಭಾಷೆಗಳಿವೆ. ಅದು ಸುಮಾರು 70ರಷ್ಟು ಭಾಷೆಗಳನ್ನು ತಪ್ಪಿಸಿಕೊಂಡಿರಬಹುದು. ಆದುದರಿಂದ ದೇಶದಲ್ಲಿ ಸುಮಾರು 850 ಭಾಷೆಗಳಿವೆ ಎಂದು ಅಂದಾಜು ಮಾಡಬಹುದು.
ಈ ಬಹುದೊಡ್ಡ ವೈವಿಧ್ಯದಲ್ಲಿ ಗಮನಾರ್ಹವಾದ ಅಂಶವೆಂದರೆ, ನಾವು ಯಾವುದೇ ಹಿಂದಿನ ಕಾಲಘಟ್ಟವನ್ನು ನೋಡಿದರೂ ಇದೇ ರೀತಿಯ ವೈವಿಧ್ಯವನ್ನು ಹೊಂದಿದ್ದೆವು. 35 ಶತಮಾನಗಳ ಹಿಂದೆ ಸಂಸ್ಕೃತವು ಭಾರತಕ್ಕೆ ಬಂದಾಗ, ನಂತರ ಪಾಲಿ ಭಾಷಾ ಗುಂಪುಗಳೆಂದು ಗುರುತಿಸಲಾದ ಮತ್ತು ಪ್ರಾಕೃತ ಹಾಗೂ ಪುರಾತನ ದ್ರಾವಿಡ ಗುಂಪುಗಳಿಗೆ ಸೇರಿದ ಹಲವಾರು ಭಾಷೆಗಳಿದ್ದವು. ಇದಲ್ಲದೆ ಎಲ್ಲೆಲ್ಲಾ ನಮ್ಮ ಪೂರ್ವಜರು ಬೇರೂರಿದರೋ ಅಲ್ಲೆಲ್ಲಾ ಜನರ ನಂಟು ಸ್ಥಳೀಯವಾದ ಹೊಸ ಭಾಷೆಗಳನ್ನು ಹುಟ್ಟುಹಾಕಿತು.
ಪಾಣಿನಿಯು ನಮ್ಮ ಕಾಲಕ್ಕೂ ಸುಮಾರು 25 ಶತಮಾನಗಳಿಗೂ ಹಿಂದೆ ತನ್ನ ವ್ಯಾಕರಣ ವ್ಯವಸ್ಥೆಯನ್ನು ರೂಪಿಸಿದ. ಆತ ಒಂದಲ್ಲ, ಹಲವಾರು ಭಾಷಾ ವೈವಿಧ್ಯಗಳನ್ನು ಉಲ್ಲೇಖಿಸಿದ್ಧಾನೆ. ಮೊದಲ ಸಹಸ್ರಮಾನದ ಉದ್ದಕ್ಕೂ ಮಾತಂಗನ ’ಬೃಹದ್ ದೇಶಿ’, ಕುಂಟಕನ ’ವಕ್ರೋಕ್ತಿ ಜೀವಿತ’ ಎಲ್ಲವೂ ಬಹುಭಾಷೆಗಳ ಕಲ್ಪನೆಯ ಸುತ್ತಲೇ ರಚನೆಗೊಂಡವು. ಕಾಳಿದಾಸ ಮತ್ತು ಭವಭೂತಿಯ ನಾಟಕಗಳ ಪಾತ್ರಗಳು ಒಂದೇ ದೃಶ್ಯದಲ್ಲೇ ಹಲವಾರು ಭಾಷೆಗಳನ್ನು ಬಳಸುವುದನ್ನು ಕಾಣಬಹುದು. ಇನ್ನೊಮ್ಮೆ, ಮೊದಲ ಸಹಸ್ರಮಾನದಲ್ಲಿ ಅಲ್-ಬಿರೂನಿ ಮತ್ತು ಅಮೀರ್ ಖುಸ್ರೋ, ಭಾರತೀಯನಾಗಿರುವುದರ ಅರ್ಥವೆಂದರೆ ಹಲವು ಭಾಷೆಗಳನ್ನು ಮಾತನಾಡುವುದು ಎಂದು ಹೇಳಿದ್ದಾರೆ. ಈ ಹಿಂದೆ ಸಂಸ್ಕೃತ ಮತ್ತು ಪರ್ಶಿಯನ್ ಭಾಷೆಗಳಿಗೆ ತಮ್ಮ ಆಧ್ಯಾತ್ಮಿಕ ಮತ್ತು ಲೌಕಿಕ ಬಲದ ಹೊರತಾಗಿಯೂ ಪ್ರಾದೇಶಿಕ ಮತ್ತು ಉಪದೇಶಿಕ ಭಾಷೆಗಳ ಸ್ಥಾನಪಲ್ಲಟ ಮಾಡಲು ಆಗಲಿಲ್ಲ. ಸಂಸ್ಕೃತ ನಶಿಸುತ್ತಾಬಂದರೂ ಪ್ರಾಕೃತವು ಉಳಿದುಕೊಂಡು ಬಂದಿತು. ಪರ್ಶಿಯನ್ ಭಾಷೆ ಮಾತನಾಡುವ ಆಡಳಿತಗಾರರಿದ್ದ ಪ್ರದೇಶಗಳಲ್ಲಿ ಆಧುನಿಕ ಭಾರತೀಯ ಭಾಷೆಗಳು ಉಳಿದುಕೊಂಡರೂ ಪರ್ಶಿಯನ್ ಮಾಯವಾಯಿತು.
ವಸಾಹತುಶಾಹಿ ಆಡಳಿತವು ನಾವೀಗ ಭಾರತವೆಂದು ಕರೆಯುವ ಇಡೀ ಭೂಪ್ರದೇಶದಲ್ಲಿ ಸಮಾನವಾದ ಒಂದೇ ಕಾನೂನು ಚೌಕಟ್ಟು ತರಲು ಯಶಸ್ವಿಯಾಯಿತು. ಆದರೂ, ಟಿ.ಬಿ. ಮೆಕಾಲೆಯ ಶಿಕ್ಷಣ ನೀತಿಯ ಹೊರತಾಗಿಯೂ ಬ್ರಿಟಿಷರು ಭಾರತದಲ್ಲಿ ಒಂದೇ ಭಾಷೆಯನ್ನು ಹೇರುವ ಕನಸನ್ನೇನೂ ಕಾಣಲಿಲ್ಲ.
ಎಂಟನೇ ಪರಿಚ್ಛೇದ
ಸ್ವಾತಂತ್ರ್ಯದ ನಂತರದಲ್ಲಿ ಭಾಷಾವೈವಿಧ್ಯಕ್ಕೆ ಒಂದು ಸಾಂವಿಧಾನಿಕ ಮಾನ್ಯತೆ ಸಿಕ್ಕಿತು. ಸಂವಿಧಾನ ರಚನಾಸಭೆಯು ಬಹಳ ದೀರ್ಘಚರ್ಚೆಯ ಬಳಿಕ ಆರಂಭದಲ್ಲಿ 14 ಭಾಷೆಗಳನ್ನು ಒಳಗೊಂಡಿದ್ದ ಎಂಟನೇ ಪರಿಚ್ಛೇದವನ್ನು ರೂಪಿಸಿತು. ಈಗ ಆ ಯಾದಿಯು 22 ಭಾಷೆಗಳನ್ನು ಹೊಂದಿದ್ದು, ಇನ್ನೂ 30ರಷ್ಟು ಭಾಷೆಗಳು ಈ ಯಾದಿಯನ್ನು ಸೇರುವ ಆಶಾವಾದ ಹೊಂದಿವೆ. ಇದಕ್ಕೆ ಹಲವು ನೂರು ಆದಿವಾಸಿ, ಅಲೆಮಾರಿ ಸಮುದಾಯಗಳ ಮತ್ತು ಈಶಾನ್ಯ ಹಾಗೂ ಕರಾವಳಿಯ ಭಾಷೆಗಳನ್ನು ಸೇರಿಸಬಹುದು.
ಯುರೋಪಿನಲ್ಲಿ 19ನೇ ಶತಮಾನದಲ್ಲಿ ರಾಷ್ಟ್ರೀಯತೆಯನ್ನು ಭಾಷೆಯ ಆಧಾರದಲ್ಲಿ ವ್ಯಾಖ್ಯಾನಿಸಲಾದರೆ, ಭಾರತದಲ್ಲಿ ನೂರಾರು ಭಾಷೆಗಳು ಒಂದೇ ರಾಷ್ಟ್ರದ ಅಡಿಯಲ್ಲಿ ಜೊತೆ ಸೇರಿದವು ಏಕೆಂದರೆ, ಸಂವಿಧಾನವು ಜನರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಿರುವುದು ಮತ್ತು ಪ್ರಭುತ್ವವು ಬೇರೆ ಭಾಷೆಗಳಿಗೆ ಹಾನಿ ಮಾಡದೆ ಎಲ್ಲಾ ಭಾಷೆಗಳನ್ನು ಪ್ರೋತ್ಸಾಹಿಸಬೇಕು ಎಂಬುದನ್ನು ಕಡ್ಡಾಯ ಮಾಡಿರುವುದರಿಂದ.

ಭಾರತೀಯರು ಹಲವು ಸಹಸ್ರಮಾನಗಳಿಂದ ತಮ್ಮ ಚಿಂತನೆ, ಜೀವನ ಮತ್ತು ವಾಸಸ್ಥಳಗಳಿಗೆ ಸಂಬಂಧಿಸಿ ಬಹುಭಾಷಿಕರಾಗಿದ್ದಾರೆ. ಅವರು ಅಷ್ಟು ಗೌರವದಿಂದ ಹಾಡುವ ರಾಷ್ಟ್ರಗೀತೆಯು ಭಾರತವನ್ನು ಮುಖ್ಯವಾಗಿ ಪಂಜಾಬ, ಸಿಂಧು, ಗುಜರಾತ, ಮರಾಠ, ದ್ರಾವಿಡ, ಒಡಿಯಾ ಬಂಗಾಳಿ ಎಂದು ಭಾಷಾ ಸಮುದಾಯಗಳ ಆಧಾರದಲ್ಲಿ ಬಣ್ಣಿಸುತ್ತದೆ. ನಾವು ಒಂದು ರಾಷ್ಟ್ರವಾಗಿ ಇರುವುದು ನಾವು ಒಂದೇ ಭಾಷೆ ಮಾತನಾಡುತ್ತೇವೆ ಎಂಬ ಕಾರಣದಿಂದ ಅಲ್ಲ; ಬದಲಾಗಿ ನಾವು ಬಹುಭಾಷೆಗಳನ್ನು ಮಾತನಾಡುತ್ತೇವೆ ಎಂಬುದಕ್ಕಾಗೆಂದು ಭಾರತೀಯರಿಗೆ ಗೊತ್ತು. ಈ ಕಾರಣದಿಂದಲೇ ಸ್ವಾತಂತ್ರ್ಯದ ಬಳಿಕ ಕೇಂದ್ರ ಸರಕಾರವು ಭಾಷಾವಾರು ರಾಜ್ಯಗಳ ಪುನರ್‌ರಚನೆಗೆ ಸಮಿತಿ ರಚಿಸಿತು. ನಮ್ಮ ಭಾಷಾ ವೈವಿಧ್ಯವು ಒಂದು ತೊಡಕು ಎಂದು ಯಾವ ದೇಶಪ್ರೇಮಿ ಭಾರತೀಯನೂ ಯೋಚಿಸುವುದಿಲ್ಲ ಅಥವಾ ಭಾಷಾ ವೈವಿಧ್ಯವನ್ನು ಕಡೆಗಣಿಸುವುದಿಲ್ಲ. ಈ ವೈವಿಧ್ಯತೆ ನಮ್ಮನ್ನು ಹೆಮ್ಮೆಯ ಭಾರತೀಯರನ್ನಾಗಿಸುತ್ತದೆ, ಮತ್ತು ಆ ವೈವಿಧ್ಯತೆ ನಮ್ಮ ರಾಷ್ಟ್ರೀಯತೆಯ ಕಲ್ಪನೆಯ ಹೃದಯದಲ್ಲಿದೆ. ನಮ್ಮ ಭಾಷಾ ವೈವಿಧ್ಯತೆಯನ್ನು ಅನುಮಾನದ ಅಥವಾ ತಿರಸ್ಕಾರದ ದೃಷ್ಟಿಯಿಂದ ನೋಡುವುದು, ನಮ್ಮ ಒಕ್ಕೂಟ ವ್ಯವಸ್ಥೆಯ ಸಾಂವಿಧಾನಿಕ ಆಧಾರವನ್ನೇ ತಿರಸ್ಕರಿಸಿದಂತೆ.
ಕೇಂದ್ರ ಸರಕಾರದ ವ್ಯವಸ್ಥೆಯ ವೈರುಧ್ಯಗಳಲ್ಲಿ ಒಂದೆಂದರೆ, ಭಾಷೆಯ ವಿಷಯವನ್ನು ಗೃಹ ಖಾತೆ ಮತ್ತು ಮಾನವ ಸಂಪನ್ಮೂಲಾಭಿವೃದ್ಧಿ (ಇದನ್ನು 2020ರಲ್ಲಿ ಶಿಕ್ಷಣ ಇಲಾಖೆ ಎಂದು ಮರುನಾಮಕರಣ ಮಾಡಲಾಯಿತು) ಇಲಾಖೆಗಳ ನಡುವೆ ಹಂಚಿರುವುದು. ಐತಿಹಾಸಿಕವಾಗಿ ಗೃಹ ಖಾತೆಯು ಹಿಂದಿನಿಂದಲೂ ಭಾಷಾ ವೈವಿಧ್ಯ ವಿರೋಧಿ ನಿಲುವನ್ನು ತಳೆಯುತ್ತಾಬಂದಿದೆ. ಭಾಷೆಯ ಕಾರಣದಿಂದಾಗಿ ಬಾಂಗ್ಲಾದೇಶದ ಯುದ್ಧ ನಡೆದ ಬಳಿಗ ಗೃಹ ಸಚಿವಾಲಯವು ಬೇಕೆಂದೇ ಜನಗಣತಿಯಲ್ಲಿ ಭಾಷೆಯನ್ನು ಪರಿಗಣಿಸುವುದಕ್ಕೆ 10,000 ಜನಸಂಖ್ಯೆಯ ಕನಿಷ್ಟ ಮಿತಿ ವಿಧಿಸಿತು. ಇದರ ಅಸಂಬದ್ಧತೆ ಬಗ್ಗೆ ಬೇರೇನೂ ಹೇಳಬೇಕಾಗಿಲ್ಲ.
ಇತ್ತೀಚೆಗೆ ಗೃಹ ಸಚಿವ ಅಮಿತ್ ಶಾ ಅಂತರರಾಜ್ಯ ವ್ಯವಹಾರದ ಭಾಷೆಯನ್ನು ಹಿಂದಿಗೆ ಬದಲಿಸುವಂತೆ ಸೂಚಿಸಿದ್ದರು. ಒಂದು ರಾಜ್ಯವು ಯಾವ ಭಾಷೆಯನ್ನು ಬಳಸಬೇಕೆಂಬುದು ಆಯಾ ರಾಜ್ಯಕ್ಕೆ ಬಿಟ್ಟ ವಿಷಯ. ಆದುದರಿಂದ ಗೃಹಸಚಿವರು ಇದರ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಗೋಜಿಗೆ ಹೋಗಬಾರದಿತ್ತು. ಆದರೆ ಅವರ ಈ ಮಾತುಗಳು ಹಿಂದಿಯು ಬಹುಸಂಖ್ಯಾತರು ಮಾತನಾಡುವ ಭಾಷೆಯಾಗಿರುವುದರಿಂದ ಅದನ್ನು ಹೇರುವ ಬಿಜೆಪಿಯ ಬಹುಸಂಖ್ಯಾತ ಧೋರಣೆಯನ್ನು ಪ್ರತಿಫಲಿಸುತ್ತದೆ. ಆಲ್ಲದೆ ಇದು ಆರೆಸ್ಸೆಸ್‌ನ ಹಿಂದಿ-ಹಿಂದೂ-ಹಿಂದೂಸ್ದಾನ್ ಎಂಬ ಘೋಷಣೆ ಮಾತ್ರ ರಾಷ್ಟ್ರೀಯತೆಯಾಗಿದೆ ಎಂಬ ಪ್ರತಿಪಾದನೆಯ ಪ್ರತಿಫಲನವೂ ಆಗಿದೆ. ಇದು ಭಾರತೀಯ ನಾಗರಿಕತೆಯ ಮೂಲತತ್ವಕ್ಕೇ ವಿರುದ್ಧವಾದ ಹೇಳಿಕೆ ಎಂಬುದು ಅವರ ಮನಸ್ಸಿಗೆ ಬರಲಿಲ್ಲ. ಭಾರತವು ಏನಿಲ್ಲವೆಂದರೂ ಒಂದು ಭಾಷಾ ನಾಗರಿಕತೆ. ಅದರ ಅಂತಸ್ಸತ್ವ ಮತ್ತು ನಾಗರಿಕತೆಯ ಗುರುತೇ ಭಾಷಾ ವೈವಿಧ್ಯವಾಗಿದೆ.
ಕನ್ನಡಕ್ಕೆ: ನಿಖಿಲ್ ಕೋಲ್ಪೆ

ಪ್ರೊ ಜಿ ಎನ್ ದೇವಿ
ಭಾರತದ ಖ್ಯಾತ ಚಿಂತಕರಲ್ಲಿ ಒಬ್ಬರಾದ ದೇವಿ ಅವರು, ಪೀಪಲ್ ಲಿಂಗ್ವಿಸ್ಟಿಕ್ಸ್ ಸರ್ವೆ ಮೂಲಕ ಚಿರಪರಿಚಿತರು. ‘ಆಫ್ಟರ್ ಅಮ್ನೇಶಿಯಾ’ ಪುಸ್ತಕಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. ಚಳವಳಿಗಳ ಸಂಗಾತಿಯಾಗಿರುವ ದೇವಿ ಸದ್ಯಕ್ಕೆ ದಿ ಸೌತ್ ಫೋರಮ್‌ನ ಸಂಚಾಲಕರು.
ಇದನ್ನೂ ಓದಿ: ಜನಸಾಮಾನ್ಯರನ್ನು ಕೆರಳಿಸಿದ ಪಠ್ಯಪುಸ್ತಕ ಪರಿಷ್ಕರಣೆ


