1973ರಲ್ಲಿ ಪ್ರಕಟವಾಗಿರುವ ಪಠ್ಯಪುಸ್ತಕವೊಂದು ಸಿಕ್ಕಿತು. ’ನ್ಯೂ ಮೆಥೆಡ್ ಕನ್ನಡ ಸಪ್ಲಿಮೆಂಟರಿ ರೀಡರ್ -5 ನೇ ತರಗತಿ’ ಎಂಬ ಶೀರ್ಷಿಕೆಯುಳ್ಳ ಅದರ ಹಿಂಬದಿ ಪುಟದಲ್ಲಿ ’ವಿದ್ಯಾ ಇಲಾಖೆಯಿಂದ ರಾಜ್ಯದ ಎಲ್ಲಾ 20 ಜಿಲ್ಲೆಗಳಿಗೂ ಮಂಜೂರಾಗಿದೆ’ ಎಂದು ನಮೂದಿಸಲಾಗಿದೆ. ವಿದ್ಯಾಭೂಷಣ ಪಂಡಿತ ಪ್ರಕಾಶ ಚಕ್ರವರ್ತಿ ಅನಂತಾಚಾರ್ ಅವರು ರಚಿಸಿರುವ ಈ ಪಠ್ಯಪುಸ್ತಕದ ಮೊದಲ ಅಧ್ಯಾಯ ’ಬಸವಣ್ಣನವರು’. ಅದರಲ್ಲಿ ಒಂದು ಸಾಲು ಇಂತಿದೆ: “ಸಂಪ್ರದಾಯದಂತೆ ಉಪನಯನ ಮಾಡಬೇಕೆಂದು ತಂದೆತಾಯಿಗಳು ಪ್ರಯತ್ನಿಸಿದರು. ಬಸವಣ್ಣನವರು ಒಪ್ಪಲಿಲ್ಲ. ಅವರು ಕಪ್ಪಡಿ ಸಂಗಮಕ್ಕೆ ಹೋದರು”. ಹೀಗೆ ಮುಂದುವರೆದು ಬಸವಣ್ಣನವರ ಸುಧಾರಣೆಗಳನ್ನು ಬಹಳ ಸೌಮ್ಯವಾದಿ ಭಾಷೆಯಲ್ಲಿಯೇ ಸಣ್ಣಮಕ್ಕಳಿಗೆ ತಿಳಿಹೇಳುವ ಪಾಠವದು. ಇದು 70ರ ದಶಕದಲ್ಲಿ ಬರೆದದ್ದು. 12ನೇ ಶತಮಾನದ ಕ್ರಾಂತಿಕಾರಿ ಬಸವಣ್ಣನವರ ಚರಿತ್ರೆಯನ್ನು, ಅವರ ವಚನಗಳಿಂದ ಅವರ ಬಗ್ಗೆ ಬರೆದ ಕಾವ್ಯಗಳು ಕಟ್ಟಿಕೊಡುವ ಐತಿಹ್ಯದಿಂದ ಕಟ್ಟಿಕೊಳ್ಳಲಾಗಿದೆ. ವೈದಿಕ ಧರ್ಮದಿಂದ ಸಿಡಿದೆದ್ದ ಬಸವಣ್ಣನವರ ಚಿಂತನೆಗಳನ್ನು, ಅವರು ರೂಪಿಸಲು ಪ್ರಯತ್ನಪಟ್ಟ ಜಾತಿರಹಿತ ಸಮಾಜವನ್ನು ಕಾಲಾನುಘಟ್ಟದಲ್ಲಿ ಅರಿತು ಶೋಧಿಸುವ ಕೆಲಸ ಇನ್ನೂ ನಡೆಯುತ್ತಲೇ ಇದೆ.
2022ರಲ್ಲಿ, ಪಠ್ಯಪುಸ್ತಕ ಪರಿಷ್ಕರಣೆ ಹೆಸರಿನಲ್ಲಿ 9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿ ನಡೆದಿರುವ ಈ ತಿದ್ದುಪಡಿಯನ್ನು ಗಮನಿಸಿ: (ಭಾರತದ ಮತ ಪ್ರವರ್ತಕರು ಎಂಬ ಪಾಠದಲ್ಲಿ); “ಬಸವೇಶ್ವರರು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯ ಮಾದರಸ ಮತ್ತು ಮಾದಲಾಂಬಿಕೆಯ ಪುತ್ರರು. ಸಂಸ್ಕೃತ ಮತ್ತು ಕನ್ನಡಗಳನ್ನು ಕಲಿತು ತಮ್ಮ ಉಪನಯನವಾದ ನಂತರ ಕೂಡಲ ಸಂಗಮಕ್ಕೆ ನಡೆದರು. ಅಲ್ಲಿ ಶೈವ ಗುರುಗಳ ಸಾನ್ನಿಧ್ಯದಲ್ಲಿ ಲಿಂಗದೀಕ್ಷೆಯನ್ನು ಪಡೆದು ಧ್ಯಾನ ಸಾಧನೆ ಮಾಡಿದರು. ಇವರು ವೀರಶೈವ ಮತವನ್ನು ಅಭಿವೃದ್ಧಿಪಡಿಸಿದರು”. ಯಾವ ವೈದಿಕ-ಸನಾತನ ಧರ್ಮದ ಜಾತಿ ಪದ್ಧತಿ, ಮೇಲು-ಕೀಳು, ಅನಿಷ್ಠ ಕಂದಾಚಾರಗಳನ್ನು ಧಿಕ್ಕರಿಸಿ ಎಲ್ಲರೂ ಸಮಾನರಾಗಿ ಇಷ್ಟಲಿಂಗವನ್ನು ಪೂಜಿಸುವಂತಹ ಲಿಂಗಾಯತ ಸಮಾಜವನ್ನು ಸ್ಥಾಪಿಸಿದರೋ ಅಷ್ಟನ್ನೂ ಕಡೆಗಣಿಸುವ ಮತ್ತು ಮಕ್ಕಳಿಗೆ ಅದನ್ನು ಮರೆಮಾಚಿಸುವಂತಿರುವ ಈ ಪರಿಷ್ಕರಣೆಯ ವೈದಿಕ ಹುನ್ನಾರ ಯಾರಿಗಾದರೂ ಅರ್ಥವಾಗುವುದಿಲ್ಲವೇ?
ಇದೊಂದು ಸಣ್ಣ ಝಳಕ್ ಅಷ್ಟೇ. ಅಂಬೇಡ್ಕರ್ ಅವರು ’ಜಾತಿವ್ಯವಸ್ಥೆಯಿಂದ ಬೇಸತ್ತು ಹಿಂದೂ ಧರ್ಮವನ್ನು ತೊರೆದು ಭಾರತೀಯ ಸಂಸ್ಕೃತಿಯ ಭಾಗವಾಗಿದ್ದ ಜಾತಿ ಮತ್ತು ಸಾಮಾಜಿಕ ಶ್ರೇಣೀಕರಣವನ್ನು ವಿರೋಧಿಸಿ ಬೌದ್ಧ ಧರ್ಮವನ್ನು ಸ್ವೀಕರಿಸಿದರು’ ಎಂಬ ಸಾಲನ್ನು ತಿರುಚುವುದು, ಆರ್‌ಎಸ್‌ಎಸ್ ಸಂಸ್ಥೆಯನ್ನು ಮಕ್ಕಳಿಗೆ ಪರಿಚಯಿಸಲು ಅದರ ಸಂಸ್ಥಾಪಕ ಮತ್ತು ವಿನಾಶಕಾರಿ ಚಿಂತನೆಗಳನ್ನು ಪಸರಿಸಿದ ಹೆಡಗೇವಾರ್ ಪಾಠವನ್ನು ಸೇರಿಸುವುದು, ’ಅನ್ಯರಾಷ್ಟ್ರಗಳೊಂದಿಗೆ ಭಾರತದ ಸಂಬಂಧ’ ಎಂಬ ಪಾಠದಲ್ಲಿ, ಭಾರತ-ಚೀನಾದ ಬಗೆಗಿನ ವಿಭಾಗದಲ್ಲಿ “ಮಾವೋವಾದಿಗಳು ಭಾರತದಲ್ಲಿ ನಕ್ಸಲವಾದವನ್ನು ಪಸರಿಸುವುದರಿಂದ ಈ ಎರಡು ರಾಷ್ಟ್ರಗಳ ಮಧ್ಯೆ ಮನಸ್ತಾಪವಿದೆ” ಎಂಬ ತಪ್ಪು ಮಾಹಿತಿಯ ಮತ್ತು ಅತಾರ್ಕಿಕ ಸಾಲನ್ನು ತುರುಕುವುದು, ಹಣವನ್ನು ಹೆಣ್ಣಿಗೆ ಹೋಲಿಸಿ ಬರೆದ ಬನ್ನಂಜೆ ಗೋವಿಂದಾಚಾರ್ಯರ ಪುರುಷಪ್ರಧಾನ ಪಾಠವನ್ನು ಸೇರಿಸುವುದು ಹೀಗೆ ಸಾಗಿರುವ ಪ್ರತಿಗಾಮಿ ಪರಿಷ್ಕರಣೆಯನ್ನು ಪಟ್ಟಿ ಮಾಡುತ್ತಾಹೋದರೆ ಅದೇ ಪುಸ್ತಕವಾಗಬಹುದು. ಇಂತಹ ಪ್ರತಿಗಾಮಿ ಪಠ್ಯ ಪರಿಷ್ಕರಣೆ ಮತ್ತು ಪ್ರತಿ ಸಂಗತಿಯನ್ನೂ ಬ್ರಾಹ್ಮಣ್ಯದ ಚೌಕಟ್ಟಿನಲ್ಲಿ ಮರು ನಿರೂಪಿಸುವ ಕುತಂತ್ರಕ್ಕೆ ಕನ್ನಡ ನಾಡು ಎಚ್ಚೆತ್ತಿರುವುದು ಕಳೆದ ಎರಡು ವಾರಗಳ ಮಹತ್ವದ ಬೆಳವಣಿಗೆ ಅನ್ನಬಹುದು.
ಈ ಹಿಂದೆಯೂ ಹಲವು ಬಾರಿ ಬಿಜೆಪಿ ಸರ್ಕಾರಗಳು ಪಠ್ಯಪುಸ್ತಕಗಳ ವಿಷಯದಲ್ಲಿ ಬಲಪಂಥೀಯ ಕೋಮುವಾದಿ ಚಿಂತನೆಗಳನ್ನು ಪ್ರಚುರಪಡಿಸುವ ಕೆಲಸ ಮಾಡಿದ್ದವು. ಹಿಂದೆ ಕೇಂದ್ರ ಸರ್ಕಾರದಲ್ಲಿ ಮುರಳಿ ಮನೋಹರ ಜೋಷಿ ಮಾನವ ಸಂಪನ್ಮೂಲ ಸಚಿವರಾಗಿದ್ದಾಗ, ಎನ್‌ಸಿಇಆರ್‌ಟಿ ಪಠ್ಯಗಳನ್ನು ಕೋಮುವಾದೀಕರಣಗೊಳಿಸುವ ಕೆಲಸ ನಡೆದಿತ್ತು. ಆಗಲೂ ದೇಶದ ವಿವಿಧ ಮೂಲಗಳ ಚಿಂತಕರಿಂದ, ಶಿಕ್ಷಣ ತಜ್ಞರಿಂದ ವಿರೋಧ ವ್ಯಕ್ತವಾಗಿತ್ತು. ಇತ್ತೀಚೆಗೆ ಕೂಡ ಕೆಲವು ದಿನಗಳ ಹಿಂದೆ ಸಿಬಿಎಸ್‌ಸಿ ಪಠ್ಯಗಳಲ್ಲಿ ಜನಕವಿ ಫೈಜ್ ಅಹ್ಮದ್ ಫೈಜ್ ಕವನ ಕೈಬಿಡುವ ಮತ್ತಿತರ ಜಾತ್ಯತೀತ ಧೋರಣೆಯ ಪಾಠಗಳಿಗೆ ಕತ್ತರಿ ಹಾಕುವ ಪ್ರಯೋಗ ನಡೆದಿತ್ತು. ಆದರೆ ಕರ್ನಾಟಕದ ಮಟ್ಟದಲ್ಲಿ ಆಗುತ್ತಿರುವ ಈ ಪರಿಷ್ಕರಣೆ ಒಂದು ಹಂತವನ್ನು ದಾಟಿ, ಕೆಲವು ತಿಂಗಳುಗಳಿಂದ ಇಲ್ಲಿ ನಡೆಯುತ್ತಿರುವ ಬಹುಸಂಖ್ಯಾತ ಮತೀಯವಾದದ ಹೇರಿಕೆಯ ಮುಂದುವರಿಕೆಯಂತೆ ಆಗಿದೆ. ಮತ್ತೆ ಈ ಪರಿಷ್ಕರಣೆಗೆ ಯಾವುದಾದರೂ ’ಕಾರಣ’ವನ್ನಾದರೂ ನೀಡಬೇಕು ಎನ್ನುವ ನಿಯಮವನ್ನೂ ಗಾಳಿಗೆ ತೂರಿ ಮನಬಂದಂತೆ (ಜಾತ್ರೆಗಳಲ್ಲಿ ಮುಸ್ಲಿಮರಿಗೆ ಅಂಗಡಿ ಹಾಕಲು ಅವಕಾಶ ನೀಡಬಾರದು ಎಂಬ ಕರೆಯಂತೆಯೇ) ಪಠ್ಯಗಳನ್ನು ಬಿಡುವ, ತಮ್ಮ ರಾಜಕೀಯ ಸಿದ್ಧಾಂತವನ್ನು ಹಸಿಹಸಿಯಾಗಿ ಸೇರಿಸುವ ಹುನ್ನಾರದಲ್ಲಿ ಎಂತಹ ಕೊಳಕು ಪಾಠವನ್ನಾದರೂ ಸೇರಿಸುವ ಹಂತಕ್ಕೆ ಬಂದುನಿಂತಿದೆ.
ಬಿಜೆಪಿ ಮತ್ತು ಸಂಘ ಪರಿವಾರದವರು ಮುಖ್ಯವಾಹಿನಿ ರಾಜಕಾರಣದಲ್ಲಿ ನೆಲೆಯೂರುವುದಕ್ಕೆ ಮುಂಚಿನಿಂದಲೂ, ಮಕ್ಕಳ ಶಿಕ್ಷಣದಲ್ಲಿ ತಮ್ಮ ಅಜೆಂಡಾವನ್ನು ನೆಲೆಯೂರಿಸುವ ಕೆಲಸವನ್ನು ಪರೋಕ್ಷವಾಗಿ ಮಾಡಿಕೊಂಡು ಬಂದಿದ್ದಾರೆ. ಇದಕ್ಕೆ ಒಂದು ಸಣ್ಣ ಉದಾಹರಣೆಯಾಗಿ, ರಾಷ್ಟ್ರೋತ್ಥಾನ ಪರಿಷತ್ತು, ಕಡಿಮೆ ಬೆಲೆಯ, ಕಡಿಮೆ ಪದಗಳ ಪುಸ್ತಕಗಳನ್ನು ಬರೆಸಿ ಮುದ್ರಿಸಿ ಶಾಲಾ ಗ್ರಂಥಾಲಯಗಳಿಗೆ ಹೋಗುವಂತೆ ಮಾಡಿ, ಮಕ್ಕಳ ಮನಸ್ಸಿನಲ್ಲಿ ಪ್ರತಿಗಾಮಿ ವ್ಯಕ್ತಿಗಳ ವಿಷಯಗಳನ್ನು ತುಂಬುವಂತೆ ಮಾಡಿದ್ದು. ಈ ವ್ಯವಸ್ಥಿತ ತಂತ್ರಗಾರಿಕೆ ಇಂದು ಕಡ್ಡಾಯ ಎಂಬಂತೆ ಮುಖ್ಯವಾಹಿನಿಗೆ ಬಂದು ವಕ್ಕರಿಸಿರುವುದು ಆತಂಕದ ಸಂಗತಿಯಾಗಿದೆ. ಇಂತಹ ಪ್ರಕಾಶಕರ ಸಂಚುಗಳ ಬಗ್ಗೆ ಕುವೆಂಪು 1974ರ ಒಂದು ಭಾಷಣದಲ್ಲಿಯೇ ಎಚ್ಚರಿಸಿದ್ದರು. (ಸಂಸ್ಕೃತಿ ಕ್ರಾಂತಿಗೆ ಕಹಳೆನಾಂದಿ! ಎಂಬ ಭಾಷಣ ಪ್ರಕಟವಾಗುವ ಹೊತ್ತಿಗೆ ಕುವೆಂಪು ಅವರು ಇನ್ನಷ್ಟು ವಿಷಯಗಳನ್ನು ಅದರಲ್ಲಿ ವಿಷಾದಪಡಿಸಿದ್ದಾರೆ). ಕುವೆಂಪು ಮಾತುಗಳಲ್ಲೇ ಕೇಳಿ: “ಅಂದು ಜಯತೀರ್ಥರು ಎಂಬ ಪುಸ್ತಕವನ್ನು ಟೀಕಿಸಿದ್ದೆ ಮಾತ್ರ. ಆದರೆ ರಾಷ್ಟ್ರೋತ್ಥಾನದವರು ಅವರ ಪುಸ್ತಕಗಳನ್ನೆಲ್ಲ ಕಳಿಸಿದ ಮೇಲೆ ನೋಡುತ್ತೇನೆ: ನನ್ನ ಟೀಕೆ ’ಜಯತೀರ್ಥ’ರಿಗಿಂತಲೂ ’ವಾದಿರಾಜ’ರಿಗೆ ಅನ್ವಯವಾಗುವಂತೆ ತೋರಿತು. ಅಂದರೆ ಏನು ತೋರುತ್ತದೆ? ನಿಜವಾಗಿಯೂ ಲೋಕಕ್ಕೂ ದೇಶಕ್ಕೂ ಸರ್ವಜನರಿಗೂ ಸೇವೆ ಮಾಡಿರುವ ವಿಭೂತಿ ವ್ಯಕ್ತಿಗಳ ವಿಚಾರದಲ್ಲಿ ಬರೆಯಲು ಬೇಕಾದಷ್ಟು ವಾಸ್ತವವಾದ ಸತ್ಯ ಸಂಗತಿಗಳೆ ಇರುವುದರಿಂದ ಅಲ್ಲಿ ಲೇಖಕ ಕಾಗಕ್ಕ ಗುಬ್ಬಕ್ಕನ ಕಟ್ಟುಕತೆಗೆ ಶರಣಾಗುವ ಅವಶ್ಯಕತೆಯೂ ಇರುವುದಿಲ್ಲ, ಅವಕಾಶವೂ ಇರುವುದಿಲ್ಲ. ಹಾಗಲ್ಲದೆ ಬರಿಯ ಒಂದು ಕೋಮಿಗೆ ಸೇರಿ, ಸಾರ್ವಜನಿಕ ಸೇವೆಯ ಸ್ವರೂಪದ ಯಾವ ಕೆಲಸವನ್ನೂ ಮಾಡದ ಸ್ಥಳೀಯ ಮಾತ್ರದವರನ್ನು ಅಟ್ಟಕ್ಕೇರಿಸುವ ಅಥವಾ ಅಕಾಶಕ್ಕೇರಿಸುವ ಸ್ವಜಾತಿ ಸ್ತೋತ್ರಕ್ಕೆ ಹೊರಟರೆ ಬರಿಯ ಸುಳ್ಳುಸುಳ್ಳು ಪವಾಡಗಳನ್ನೂ ಅಲ್ಲದ ಸಲ್ಲದ ಹೊಗಳಿಕೆಗಳನ್ನೂ ಬರೆದು ಸ್ವಮತ ಪ್ರಚಾರ ಮಾಡಬೇಕಾಗುತ್ತದೆ. ಈ ಜಯತೀರ್ಥ ಮತ್ತು ವಾದಿರಾಜರಂಥವರು ಬರಿಯ ಒಂದು ಕೋಮಿಗೆ ಪೂಜ್ಯರೂ ಗೌರವಾರ್ಹರೂ ಆಗುತ್ತಾರೆಯೆ ಹೊರತು ಉಳಿದವರಿಗೆ ನಗೆಪಾಟಲಾಗುತ್ತಾರೆ.”
ಮುಂದುವರಿದು ಹೇಳುತ್ತಾರೆ: “ಆದ್ದರಿಂದ ಈ ಪ್ರಕಾಶನ ಸಂಸ್ಥೆಗಳಿಗೆ ನನ್ನ ಸಲಹೆ: ಧಾರ್ಮಿಕ ಮತ್ತು ಅಧ್ಯಾತ್ಮಿಕ ವರ್ಗದ ವ್ಯಕ್ತಿಗಳನ್ನು ಕುರಿತು ಬರೆಯಿಸುವಾಗ ಕುದ್ರ ಕೋಮುವ್ಯಕ್ತಿಗಳನ್ನು ಆರಿಸಿಕೊಳ್ಳಬೇಡಿ: ವಿಶ್ವವ್ಯಕ್ತಿಗಳನ್ನೂ ರಾಷ್ಟ್ರವ್ಯಕ್ತಿಗಳನ್ನೂ ಮಾತ್ರ ಆರಿಸಿಕೊಳ್ಳಿ. ಮೌಢ್ಯ ಪ್ರಚೋದಕವಾಗುವಂತಹ ತೀರ್ಥಕ್ಷೇತ್ರಗಳ ಪವಾಡದ ಸುಳ್ಳುಸುಳ್ಳು ಕತೆಗಳನ್ನೆಲ್ಲ ನಿಜ ಎಂದು ಹೇಳಿ ಮಕ್ಕಳನ್ನೂ ಮೂಢರನ್ನಾಗಿ ಮಾಡಬೇಡಿ, ವೈಜ್ಞಾನಿಕ ದೃಷ್ಟಿಯ ವಿಚಾರವಂತರನ್ನಾಗಿ ಮಾಡಿ”.
ಮಕ್ಕಳ ಓದಿನ ಬಗ್ಗೆ ಸಂಘ ಪರಿವಾರದ ಪ್ರಕಾಶಕರಿಗೆ ಇಂತಹ ಕಿವಿಹಿಂಡುವ ಮಾತುಗಳನ್ನಾಡಿದ್ದ ವಿಶ್ವ ಕವಿ ಕುವೆಂಪು ಅವರ ಮೇಲೆ ಬ್ರಾಹ್ಮಣಶಾಹಿಯ ಕೆಲವು ಶಕ್ತಿಗಳು ದಾಳಿ ಮಾಡಿದ್ದವು. ಅದರ ಮುಂದುವರಿಕೆಯ
ಭಾಗವಾಗಿಯೇ ಸದರಿ ಪಠ್ಯಪುಸ್ತಕದ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಕುವೆಂಪು ಅವರು ರಚಿಸಿದ ನಾಡಗೀತೆಯ ಸಾಲುಗಳನ್ನು ತಿರುಚಿ ಅವರಿಗೆ ಅವಮಾನಿಸುವ ಬರಹವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು! ಇದು ಕೂಡ ಪಠ್ಯ ಪರಿಷ್ಕರಣೆಯ ಸಮಯದಲ್ಲಿ ಆಕ್ರೋಶವೆಬ್ಬಿಸಿದೆ. ಶಿಕ್ಷಣ ಕ್ಷೇತ್ರದಲ್ಲಾಗಲೀ, ಮಕ್ಕಳ ಕಲಿಕೆಯಲ್ಲಾಗಲೀ ಯಾವುದೇ ಅನುಭವವಿಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ಗಳಿಗೆ ಹೆಸರುವಾಸಿಯಾಗಿದ್ದ ವ್ಯಕ್ತಿಯೊಬ್ಬನನ್ನು ಕೋಟ್ಯಂತರ ಮಕ್ಕಳು ಕಲಿಯುವ ಪಠ್ಯ ಪುಸ್ತಕಗಳನ್ನು ಪರಿಷ್ಕರಣೆ ಮಾಡುವುದಕ್ಕೆ ಅಧ್ಯಕ್ಷ ಸ್ಥಾನದಲ್ಲಿ ಕೂರಿಸಿ, ಬಹುತೇಕ ಒಂದೇ ಸಮುದಾಯದವರನ್ನು ಅದರ ಸದಸ್ಯರನ್ನಾಗಿಸಿ ರಾಜ್ಯ ಸರ್ಕಾರ ಮಕ್ಕಳ ಭವಿಷ್ಯದ ಜೊತೆಗೆ ಆಟ ಆಡುತ್ತಿರುವುದು ಅಕ್ಷಮ್ಯ.
ಈ ನಡೆಗಳನ್ನು ವಿರೋಧಿಸಿ ತಮ್ಮ ಪಾಠಕ್ಕೆ ನೀಡಿದ್ದ ಅನುಮತಿಯನ್ನು ಮೊದಲು ಹಿಂತೆಗೆದುಕೊಂಡ ಖ್ಯಾತ ಬರಹಗಾರ ದೇವನೂರ ಮಹದೇವ ಅವರನ್ನು ಸಂಘ ಪರಿವಾರದ ಟ್ರೋಲ್ ಪಡೆಗಳು ಗುರಿಯಾಗಿಸಿಕೊಂಡಿವೆ. ಬಸವಣ್ಣ, ಕುವೆಂಪುರವರ ನಂತರ ದೇವನೂರ ಮಹದೇವರನ್ನು ತಮ್ಮ ದಾಳಿಗೆ ಆಯ್ಕೆ ಮಾಡಿಕೊಂಡಿರುವುದು ಜನರನ್ನು ಇನ್ನಷ್ಟು ಕೋಪೋದ್ರಿಕ್ತಗೊಳಿಸಿದೆ. ಈ ಲೇಖನ ಬರೆಯುವ ಹೊತ್ತಿಗೆ ಇನ್ನೂ ಹತ್ತಾರು ಲೇಖಕರು ತಮ್ಮ ಪಾಠಗಳಿಗೆ ನೀಡಿದ ಅನುಮತಿಯನ್ನು ಹಿಂಪಡೆದು ಸಚಿವರಿಗೆ ಪತ್ರ ಬರೆದಿದ್ದಾರೆ. ಲಕ್ಷಾಂತರ ನಾಗರಿಕರು ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರದ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೀದಿಯಲ್ಲಿ ಪ್ರತಿಭಟಿಸುತ್ತಿದ್ದಾರೆ.
ಸರ್ಕಾರ ಎಚ್ಚೆತ್ತುಕೊಂಡು, ಮಾಡಿರುವ ಪರಿಷ್ಕರಣೆಯನ್ನು ರದ್ದುಗೊಳಿಸಿ ಹಿಂದಿನ ಪಠ್ಯವನ್ನು ಯಥಾಸ್ಥಿತಿಯಲ್ಲಿ ಮುಂದುವರೆಸುವುದು ಯುಕ್ತ ಮತ್ತು ನ್ಯಾಯವಾದ ನಡೆಯಾಗಿದೆ.
ಇದನ್ನೂ ಓದಿ: ವಿಶೇಷ ವರದಿ: ಬಿಜೆಪಿ ಅವಧಿಯಲ್ಲಿ ಪರೀಕ್ಷಾ ಅಕ್ರಮ, ಎಡವಟ್ಟುಗಳು & ಶೈಕ್ಷಣಿಕ ಅವ್ಯವಸ್ಥೆ