ಸಂವಿಧಾನದ ವಿಚಾರಗಳು ಮತ್ತು ಅದರ ಆಶಯಗಳು ಕಲೆಯಲ್ಲಿ ಅಭಿವ್ಯಕ್ತಿಗೊಳ್ಳುವುದೇ ಅಪರೂಪ. ಹೀಗಿರುವಾಗ ಸಂವಿಧಾನದ ಆತ್ಮ ಎಂದೇ ಕರೆಯುವ ಅನುಚ್ಛೇದಗಳಲ್ಲಿ ಒಂದನ್ನು ಸಿನಿಮಾದ ಶೀರ್ಷಿಕೆಯಾಗಿ ಇಟ್ಟುಕೊಂಡಿರುವುದೇ ಸಿನಿಮಾ ನೋಡಲು ಪ್ರೆರೇಪಿಸುತ್ತದೆ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು ಇಂದಿಗೆ 75 ವರ್ಷ. ಸ್ವತಂತ್ರ ಭಾರತ ಹೇಗೆ ಮುನ್ನಡೆಯಬೇಕು ಎಂಬುದಕ್ಕೆ ಬೃಹತ್ ಆದ ಸಂವಿಧಾನವನ್ನು ರಚಿಸಿಕೊಂಡು 73 ವರ್ಷಗಳಾಗಿವೆ. ಸಂವಿಧಾನದ ಯಾವ ಆಶಯಗಳು ನಮ್ಮ ದಿನನಿತ್ಯದ ಚರ್ಚೆ, ಕಲೆ, ಸಾಹಿತ್ಯ, ಸಂಶೋಧನೆಗಳಲ್ಲಿ ಪ್ರತಿಫಲಿಸಬೇಕಿತ್ತೊ ಅದಕ್ಕೆ ಬದಲಾಗಿ ಅದರ ವಿರುದ್ಧವಾದ ಸಂಗತಿಗಳೆ ಹೆಚ್ಚು ಅಭಿವ್ಯಕ್ತಿಗೊಳ್ಳುತ್ತಿರುವುದನ್ನು ಇತ್ತೀಚಿನ ದಿನಗಳಲ್ಲಿ ನಾವು ಹೆಚ್ಚು ಕಾಣುತ್ತಿದ್ದೇವೆ. ಸಂವಿಧಾನದ ಆಶಯಗಳನ್ನು ಪ್ರತಿಪಾದಿಸುವ ಧ್ವನಿಗಳನ್ನು ದಬ್ಬಾಳಿಕೆಯ ಮೂಲಕ ಹತ್ತಿಕ್ಕುವುದೂ ಸಾಮಾನ್ಯವಾಗಿದೆ.
ಸಂವಿಧಾನ ಗಟ್ಟಿ ಧ್ವನಿಗಳಲ್ಲಿ ಒಬ್ಬರಾಗಿದ್ದ ಗೌರಿ ಲಂಕೇಶರ ಹತ್ಯೆಯ ಘಟನೆಯೇ ಮಲೆಯಾಳಂನ ’19(1)(a)’ ಸಿನಿಮಾಗೆ ಪ್ರೇರಣೆ ಎಂಬುದು ಮೇಲ್ನೋಟಕ್ಕೇ ಕಾಣುತ್ತದೆ. ಬರವಣಿಗೆ ಎಂಬುದು ತನ್ನ ಆತ್ಮದ ಅನುಸಂಧಾನ ಎಂದು ನಂಬಿದ್ದ, ತನ್ನ ಸುತ್ತಲು ನಡೆಯುವ ದೌರ್ಜನ್ಯವನ್ನು ಬರವಣಿಗೆ ಮೂಲಕ ಅಭಿವ್ಯಕ್ತಿಸುತ್ತಿದ್ದ ಮತ್ತು ಬಾಬಾಸಾಹೇಬರ ಅಲೋಚನೆಗಳ ಪ್ರಭಾವವಿದ್ದ ಗೌರಿ ಶಂಕರ್ ಎಂಬ ಲೇಖಕನನ್ನು ಆತನ ಅಭಿಪ್ರಾಯದ ಕಾರಣಕ್ಕಾಗಿಯೇ ಕೊಲೆ ಮಾಡಲಾಗುತ್ತದೆ. ಒಂದು ಸಣ್ಣ ಊರಿನಲ್ಲಿ ಜೆರಾಕ್ಸ್ ಅಂಗಡಿ ಇಟ್ಟುಕೊಂಡು ತಂದೆಯೊಡನೆ ಸಾಧಾರಣ ಬದುಕನ್ನು ಕಟ್ಟಿಕೊಂಟು ಬದುಕುತ್ತಿರುವ ಯುವತಿ (ಈ ಪಾತ್ರಕ್ಕೆ ಹೆಸರಿಲ್ಲ) ಈ ಸಿನಿಮಾದ ಪ್ರಧಾನ ಪಾತ್ರ. ಒಂದು ದಿನ ವ್ಯಕ್ತಿಯೊಬ್ಬ ಈ ಯುವತಿಯ ಅಂಗಡಿಗೆ ಬಂದು ಕೈ ಬರಹದ ಒಂದಷ್ಟು ಪುಟಗಳಿದ್ದ ಕಟ್ಟನ್ನು ಕೊಟ್ಟು, ಅದರ ಪ್ರತಿ ಮಾಡಿ ಬೈಡಿಂಗ್ ಮಾಡಲು ಹೇಳಿ, ನಂತರ ಮರಳಿ ಪಡೆಯುತ್ತೇನೆ, ಸ್ವಲ್ಪ ತಡವಾದರೂ ಕಾಯುತ್ತಿರಿ ಎಂದು ಹೇಳಿಹೋಗುತ್ತಾನೆ. ತಡ ರಾತ್ರಿ ಎಷ್ಟು ಸಮಯವಾದರೂ ಆ ವ್ಯಕ್ತಿ ಅದನ್ನು ಪಡೆಯಲು ಬರುವುದಿಲ್ಲ. ಸ್ವಲ್ಪ ದಿನದ ನಂತರ ಟಿ.ವಿ.ಯಲ್ಲಿ ಪ್ರಸಾರವಾಗುತ್ತಿದ್ದ ಕಾರ್ಯಕ್ರಮದ ಮುಖಾಂತರ ಯುವತಿಗೆ ತಿಳಿಯುವುದು, ತನಗೆ ಜೆರಾಕ್ಸ್ ಮಾಡಲು ಕೊಟ್ಟ ವ್ಯಕ್ತಿ ಪ್ರಸಿದ್ಧ ಬರಹಗಾರ ಗೌರಿ ಶಂಕರ್ ಮತ್ತು ಆತನನ್ನು ತನ್ನ ಅಭಿಪ್ರಾಯದ ರಾಜಕೀಯ ಕಾರಣಕ್ಕಾಗಿ ಕೊಲೆ ಮಾಡಲಾಗಿದೆಯೆಂದು.
ಗೌರಿ ಶಂಕರ್ ಹತ್ಯೆಯ ಸುದ್ದಿ ಆ ಯುವತಿಯನ್ನು ಅಲುಗಾಡಿಸಿಬಿಡುತ್ತದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬುದು ಎಷ್ಟು ಮುಖ್ಯ ಎಂಬುದರ ಬಗ್ಗೆ ಒಮ್ಮೆಯೂ ಯೋಚಿಸದ, ತನ್ನ ಪಾಲಿಗೆ ಬಂದ ಬದುಕನ್ನು ಬದುಕುವುದಷ್ಟೆ ತನ್ನ ಕರ್ತವ್ಯ ಎಂದು ನಂಬಿದ್ದ ಈಕೆಗೆ ಗೌರಿ ಶಂಕರ್ ಹತ್ಯೆ ಮತ್ತು ಅದಕ್ಕೆ ಕಾರಣವಾಗುವ ಸಂಗತಿಯಿಂದ ಅವಳ ಅಲೋಚನೆ ಮತ್ತು ವ್ಯಕ್ತಿತ್ವ ಸ್ಥಿತ್ಯಂತರವಾಗುವುದನ್ನು ಬಹಳ ಸಾವಧಾನವಾಗಿ ಕಟ್ಟಿಕೊಡಲಾಗಿದೆ.
ನಿಧಾನಗತಿಯಲ್ಲಿ ಚಲಿಸುವ ಈ ಸಿನಿಮಾದಲ್ಲಿ, ಗೌರಿ ಶಂಕರ್ ಹತ್ಯೆಯ ನಂತರ ಏನಾದರು ಘಟನೆ ಘಟಿಸಬಹುದು ಈ ಕೊಲೆಗೆ ಪ್ರತಿಯಾಗಿ ಯಾವುದಾದರು ಹೋರಾಟ ಮತ್ತು ಪ್ರತಿರೋಧದ ಘಟನೆಗಳನ್ನು ತರಬಹುದು ಎಂಬ ನಿರೀಕ್ಷೆಯ ಜೊತೆ ಕಾಯುವುದು ಸಹಜ. ಆದರೆ ಆ ತರದ ಘಟನೆಗಳಾವುದನ್ನು ನಿರ್ದೇಶಕಿ ಇಂದು ತರುವುದಿಲ್ಲ. ಆದರೆ ಈ ಸಿನಿಮಾದಲ್ಲಿ ಗೌರಿ ಶಂಕರ್ ಪಾತ್ರ ಮತ್ತು ಆ ಪಾತ್ರದ ಘಟನೆ ನೆಪ ಮಾತ್ರ. ಇದನ್ನ ಹಿನ್ನೆಲೆಯಾಗಿಸಿಕೊಂಡು ಹೇಗೆ ಒಬ್ಬ ಸಾಧಾರಣ ಯುವತಿ ತನ್ನ ಸಾಧಾರಣ ಬದುಕು, ಸುತ್ತಲಿನ ಪರಿಸರ ಮತ್ತು ಸಮುದಾಯವನ್ನ ಹೊಸ ಕಣ್ಣೋಟದಲ್ಲಿ ನೋಡುವುದಕ್ಕೆ ಪ್ರಾರಂಭಿಸುತ್ತಾಳೆ ಹಾಗು ಗೌರಿಶಂಕರ್ ಎಂಬ ವ್ಯಕ್ತಿತ್ವಕ್ಕೆ, ಆತನ ಅಲೋಚನೆಗೆ, ಮುಂದುವರೆದು ಅವನ ಬದುಕಿಗೆ ಹೇಗೆ ಸ್ಪಂದಿಸುತ್ತಾಳೆ ಎಂಬುದನ್ನು ಬಹಳ ಸವಾಕಾಶವಾಗಿ ಸಿನಿಮಾದಲ್ಲಿ ಕಟ್ಟಿಕೊಡಲಾಗಿದೆ.
c
ತನ್ನ ಬರವಣಿಗೆಗಿಂತ ತನ್ನ ಬದುಕು ದೊಡ್ಡದಲ್ಲ, ನನ್ನ ನಂತರ ನನ್ನ ಬರವಣಿಗೆ ಮಾತನಾಡುತ್ತದೆ ಎಂದು ನಂಬಿದ್ದ ಗೌರಿಶಂಕರನ ಕೊನೆಯ ಕೃತಿಯನ್ನು ಹೇಗಾದರೂ ಮಾಡಿ ಸರಿಯಾದ ವಾರಸುದಾರರಿಗೆ ತಲುಪಿಸಬೇಕು ಎಂದು ಶ್ರಮಿಸುವ ಈ ಯುವತಿ ತನ್ನ ಆ ಜರ್ನಿಯಲ್ಲಿ ಗೌರಿ ಶಂಕರ ಜೀವಿಸಿದ್ದ ಬದುಕಿಗೆ ಹತ್ತಿರವಾಗುವುದರ ಜೊತೆಜೊತೆಯಲ್ಲಿಯೇ ತನ್ನ ಬದುಕನ್ನು ಹೊಸದಾಗಿ ನೋಡಲು ಪ್ರಾರಂಭಿಸುತ್ತಾಳೆ. ತನ್ನ ತಂದೆಯೊಟ್ಟಿಗಿನ ಅಂತರಕ್ಕೆ ಕಾರಣಕಂಡುಕೊಂಡು ಬಗೆಹರಿಸಿಕೊಳ್ಳಲು ಪ್ರಯತ್ನಿಸುತ್ತಾಳೆ. ಮನೆಯಲ್ಲಿ ಯಾವುದೇ ಅಭಿಪ್ರಾಯ ಕೇಳದೆ ಮದುವೆ ನಿಶ್ಚಯ ಮಾಡುವ ತನ್ನ ಸ್ನೇಹಿತೆಗೆ ’ನಿನ್ನ ಒಪ್ಪಿಗೆಯಂತೆ’ ಬದುಕು ಎಂದು ಸಲಹೆ ನೀಡುತ್ತಾಳೆ.
ಭಾರತ ಸಂವಿಧಾನದಲ್ಲಿ ಈ ದೇಶದ ಪ್ರತಿಯೊಬ್ಬ ನಾಗರಿಕನಿಗೂ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯವನ್ನು ಖಾತರಿಪಡಿಸಲು ಇರುವ ಒಂದು ಕಲಂನನ್ನೆ ಸಿನಿಮಾದ ಶೀರ್ಷಿಕೆಯಾಗಿ ಇಟ್ಟುಕೊಂಡು ತನ್ನ ಚೊಚ್ಚಲ ಸಿನಿಮಾದಲ್ಲಿ ಭರವಸೆ ಮೂಡಿಸಿರುವ ನಿರ್ದೇಶಕಿ ವಿ.ಎಸ್ ಇಂದು. ಯಾರಾದರೂ ಉಪೇಕ್ಷೆ ಮಾಡುವಂತಹ ಸಣ್ಣ ಊರು, ಸಣ್ಣ ಬದುಕು, ಸಣ್ಣ ವ್ಯಕ್ತಿತ್ವ, ಇವರುಗಳು ಸಮಾಜ ಘಾತುಕ ಘಟನೆಗಳಿಗೆ ಹೇಗೆ ಸ್ಪಂದಿಸುತ್ತಾರೆ ಮತ್ತು ಆ ಘಟನೆಗಳು ಅವರನ್ನು ಹೇಗೆ ಪ್ರಭಾವಿಸುತ್ತವೆ ಎಂಬುದನ್ನು ಇಂದು ಬಹಳ ಪರಿಣಾಮಕಾರಿಯಾಗಿ ಕಟ್ಟಿಕೊಡುತ್ತಾರೆ. ಹೆಸರೆ ಇಲ್ಲದ ಯುವತಿಯ ಪಾತ್ರದಲ್ಲಿನ ನಿತ್ಯ ಮೆನನ್ ಅಭಿನಯ ಸದಾ ಕಾಲ ನೆನಪಿನಲ್ಲಿ ಉಳಿಯುವಂತದ್ದು.

ಯದುನಂದನ್ ಕೀಲಾರ
ಜಗತ್ತಿನ ಸಿನಿಮಾಗಳ ವೀಕ್ಷಣೆ ಮತ್ತು ಅವುಗಳು ಬೀರುವ ಸಾಮಾಜಿಕ ಪ್ರಭಾವದ ಸಾಧ್ಯತೆಗಳ ಬಗ್ಗೆ ಅಪಾರ ಉತ್ಸಾಹ ಇರುವ ಯದುನಂದನ್ ಸಿನಿಮಾಗಳ ರಾಜಕೀಯ ನಿಲುವುಗಳನ್ನು ತೀಕ್ಷ್ಣವಾಗಿ ಶೋಧಿಸುತ್ತಾರೆ.
ಇದನ್ನೂ ಓದಿ: ಹಿಪೊಕ್ರಸಿ ಜಗತ್ತಿನಲ್ಲಿ ಮತ್ತೊಂದು ಎದೆಯ ದನಿ ಸಾಯಿ ಪಲ್ಲವಿ


