Homeಮುಖಪುಟಹಿಪೊಕ್ರಸಿ ಜಗತ್ತಿನಲ್ಲಿ ಮತ್ತೊಂದು ಎದೆಯ ದನಿ ಸಾಯಿ ಪಲ್ಲವಿ

ಹಿಪೊಕ್ರಸಿ ಜಗತ್ತಿನಲ್ಲಿ ಮತ್ತೊಂದು ಎದೆಯ ದನಿ ಸಾಯಿ ಪಲ್ಲವಿ

- Advertisement -
- Advertisement -

2015ರ ’ಪ್ರೇಮಂ’ ಸಿನಿಮಾದ ’ಮಲರ್’ ಪಾತ್ರದ ಮುಖಾಂತರ ಇಡೀ ದಕ್ಷಿಣ ಭಾರತದ ಚಿತ್ರಜಗತ್ತಿಗೆ ಪರಿಚಯವಾಗಿ ನಂತರ ಚಿರಪರಿಚಿತವಾದ ನಟಿ ಸಾಯಿ ಪಲ್ಲವಿ. ನಟಿಸಿದ ಚೊಚ್ಚಲ ಸಿನಿಮಾದಲ್ಲೆ ಭಾಷೆಯ ಗಡಿ ದಾಟಿ ಸಿನಿ ರಸಿಕರನ್ನು ತಲುಪಿದ ಕೆಲವೇಕೆಲವು ಕಲಾವಿದರಲ್ಲಿ ಸಾಯಿ ಪಲ್ಲವಿ ಕೂಡ ಒಬ್ಬರು. ಮೂರು ಹಂತಗಳ ಕಥೆ ಇರುವ ಪ್ರೇಮಂ ಸಿನಿಮಾದಲ್ಲಿ ಕೊನೆ ಸೆಗ್ಮೆಂಟ್‌ನಲ್ಲಿ ಬರುವ ಮಲರ್ ಪಾತ್ರವನ್ನು ನೋಡುವ ಸಲುವಾಗಿ ಮತ್ತೆಮತ್ತೆ ಸಿನಿಮಾವನ್ನು ನೋಡಿದ ಅಸಂಖ್ಯ ಪ್ರೇಕ್ಷಕರಿದ್ದಾರೆ. ಅದರಲ್ಲೂ ವಿಜಯ್ ಯೇಸುದಾಸ್ ಹಾಡಿದ ’ಮಲರೇ’ ಎಂಬ ಹಾಡು ಮತ್ತು ಅದರ ದೃಶ್ಯಗಳನ್ನು ಮತ್ತೆಮತ್ತೆ ನೋಡಿದವರಲ್ಲಿ ನಾನೂ ಕೂಡ ಒಬ್ಬ. ತಮಿಳುನಾಡಿನಲ್ಲೇ ಈ ಸಿನಿಮಾ 200ಕ್ಕೂ ಹೆಚ್ಚು ದಿನ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡಿದೆ. ತೆಲುಗಿನಲ್ಲಿ ಈ ಸಿನಿಮಾವನ್ನು ರೀಮೇಕ್ ಕೂಡ ಮಾಡಲಾಯಿತು. ನಂತರ ಮೂಲ ಮಲಯಾಳಂನಲ್ಲಿ ಬಂದ ಸಮೀರ್ ನಿರ್ದೇಶನದ ’ಕಲಿ’(2016) ಸಿನಿಮಾದಲ್ಲಿನ ’ಅಂಜಲಿ’ ಪಾತ್ರ ಕೂಡ ಮೆಚ್ಚುಗೆಯನ್ನು ಪಡೆಯಿತು. ಡುಲ್ಕರ್ ಸಲ್ಮಾನ್ ಪಾತ್ರವೇ ಪ್ರಧಾನವಾಗಿದ್ದರೂ ಸಾಯಿ ಪಲ್ಲವಿಯ ಸಹಜ ಅಭಿನಯ ಮೆಚ್ಚುಗೆ ಪಡೆಯಿತು.

ಗ್ಲಾಮರ್ ಅನ್ನೋದೆ ಪ್ರಧಾನ ಮಾನದಂಡವಾದ ಇವತ್ತಿನ ಸಿನಿಮಾ ರಂಗದಲ್ಲಿ ತನ್ನ ಸಹಜ ಅಭಿನಯದಿಂದಲೇ ಖ್ಯಾತಿ ಪಡೆದು ದಕ್ಷಿಣದ ಅತ್ಯಂತ ಬೇಡಿಕೆಡಯ ನಟಿ ಎನಿಸಿಕೊಂಡಿರುವ ಸಾಯಿ ಪಲ್ಲವಿಗೆ ಅವರನ್ನು ಅಭಿಮಾನದಿಂದ ನೋಡುವ ದೊಡ್ಡ ಬಳಗವಿರುವುದು ಅಪರೂಪದ ಸಂಗತಿ. ಸಾಯಿ ಪಲ್ಲವಿ ಅದ್ಭುತವಾದ ನೃತ್ಯ ಕಲಾವಿದೆಯೂ ಹೌದು. ತೆಲುಗಿನ ಹಿರಿಯ ಮತ್ತು ಖ್ಯಾತ ನಟ ಚಿರಂಜೀವಿ ಒಂದು ವೇದಿಕೆಯಲ್ಲಿ ’ನಾನು ಒಮ್ಮೆಯಾದರೂ ತೆರೆಯ ಮೇಲೆ ಸಾಯಿ ಪಲ್ಲವಿ ಜೊತೆ ನೃತ್ಯ ಮಾಡುವ ದೃಶ್ಯದಲ್ಲಿ ಕಾಣಿಸಿಕೊಳ್ಳಬೇಕು’ ಎಂಬ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಜನಪ್ರಿಯ ತೆಲುಗು ಸಿನಿಮಾಗಳಲ್ಲಿನ ಕಥಾ ನಾಯಕಿ ಪಾತ್ರಗಳಷ್ಟು ಅದ್ವಾನದವು ಮತ್ತಾವು ಇಲ್ಲ. ಅಷ್ಟರಮಟ್ಟಿಗೆ ಅವರ ಪಾತ್ರಗಳ ಪ್ರಾಮುಖ್ಯತೆ ಕಡಿಮೆ ಇರುತ್ತೆ. ಹೆಚ್ಚು ಸಂದರ್ಭಗಳಲ್ಲಿ ಕಥಾನಾಯಕನ ಹಿರೋಯಿಸಂನ್ನು ಮೆರೆಸುವುದಕ್ಕೆ ಮಾತ್ರವೇ ಕಥಾನಾಯಕಿ ಪಾತ್ರ ಇದೆಯೇನೊ ಅನಿಸುವಷ್ಟು. ಆದರೆ ಸಾಯಿ ಪಲ್ಲವಿ ನಟಿಸಿದ ಪಾತ್ರಗಳು ಇದಕ್ಕೆ ಅಪವಾದ. ಸಾಯಿ ಪಲ್ಲವಿ ಸಲುವಾಗಿಯೇ ತೆಲುಗಿನ ಸಿನಿಮಾ ನಿರ್ದೇಶಕರು ಗಟ್ಟಿಯಾದ ಮತ್ತು ಸತ್ವವಿರುವ ಕಥಾ ನಾಯಕಿ ಪಾತ್ರಗಳನ್ನು ಸೃಷ್ಟಿಸುತ್ತಿದ್ದಾರೆ ಅನಿಸುತ್ತದೆ. ಇವರ ಮೊದಲ ತೆಲುಗು ಸಿನಿಮಾ ’ಫಿದಾ’ದಲ್ಲೆ ಇದನ್ನ ಕಾಣಬಹುದು. ಈ ಸಿನಿಮಾದಲ್ಲಿ ಒಬ್ಬ ಸ್ಟಾರ್ ನಟನನ್ನೆ ಮಂಕು ಮಾಡುವಷ್ಟು ಸಿನಿಮಾ ಪೂರ್ಣ ಅವರು ಆವರಿಸಿಕೊಳ್ಳುತ್ತಾರೆ. ಸಾಯಿ ಪಲ್ಲವಿ ಅವರಿಂದಲೇ ಈ ಚಿತ್ರ ಅಷ್ಟು ಯಶಸ್ಸು ಕಾಣಲು ಸಾಧ್ಯವಾಯಿತು ಅನ್ನುವ ಮಾತನ್ನು ಯಾರು ತೆಗೆದುಹಾಕುವುದಿಲ್ಲ. ಸ್ವತಃ ಈ ಸ್ಟಾರ್ ನಟ (ವರುಣ್ ತೇಜ್) ತನ್ನ ತಂದೆ (ದೊಡ್ಡಪ್ಪ) ಚಿರಂಜೀವಿಯನ್ನು ಈ ಸಿನಿಮಾದಲ್ಲಿ ನನ್ನ ನಟನೆ ಹೇಗಿದೆ ಎಂದು ಕೇಳಿದಾಗ ’ಸಾರಿ ಕಣೊ, ನಾನು ಸಿನಿಮಾ ಪೂರ್ಣ ಸಾಯಿ ಪಲ್ಲವಿಯನ್ನು ನೋಡುವುದರಲ್ಲೇ ಕಳೆದುಹೋದೆ, ನಿನ್ನನ್ನು ಗಮನಿಸಲು ಆಗಲಿಲ್ಲ’ ಎಂದು ಹೇಳುವಷ್ಟು ಸಾಯಿ ಪಲ್ಲವಿ ಅಲ್ಲಿನ ಪ್ರೇಕ್ಷಕರನ್ನಷ್ಟೇ ಅಲ್ಲ, ಅಲ್ಲಿನ ಕಲಾವಿದರನ್ನು ಪ್ರಭಾವಿಸಿದ್ದಾರೆ. ಕಳೆದ ವರ್ಷ ತೆರೆಕಂಡ ಮತ್ತೊಂದು ತೆಲುಗು ಸಿನಿಮಾ ’ಲವ್ ಸ್ಟೋರಿ’ಯಲ್ಲೂ ಇದೇ ಕಥೆ. ಒಬ್ಬ ಸೂಕ್ಷ್ಮ ನಿರ್ದೇಶಕನ ಸಿನಿಮಾದಲ್ಲಿ ಸಾಯಿ ಪಲ್ಲವಿ ಹೇಗೆ ನಟಿಸಬಹುದು ಎಂಬುದಕ್ಕೆ ವೆಟ್ರಿ ಮಾರನ್‌ರ ’ಊರ್ ಇರವು’ನಲ್ಲಿನ (ಪಾವ ಕದೈಗಳ್ ಸಿನಿಮಾದ ಕೊನೆಯ ಭಾಗ) ’ಸುಮತಿ’ ಪಾತ್ರದ ನಟನೆಯೇ ಸಾಕ್ಷಿ. 2021ರ ’ಶ್ಯಾಮ್ ಸಿಂಗ ರಾಯ್’ ಸಿನಿಮಾದಲ್ಲಿಯೂ ಪಲ್ಲವಿಯದು ಉತ್ತಮ ಪಾತ್ರ. ಸಿನಿಮಾದಲ್ಲಿ ಕಥಾನಾಯಕಿಗೆ ಹೆಚ್ಚು ಸ್ಕೋಪ್ ಇಲ್ಲ ಅನ್ನುವ ಪಾತ್ರದಲ್ಲೂ ಸಾಯಿ ಪಲ್ಲವಿ ಮಿಂಚಿದ್ದಾರೆ. ಇದಕ್ಕೆ ಉದಾಹರಣೆ, ಧನುಷ್ ಎದುರಾಗಿ ನಟಿಸಿದ ’ಮಾರಿ-2’. ಈ ಸಿನಿಮಾದಲ್ಲಿನ ’ರೌಡಿ ಬೇಬಿ’ ಎಂಬ ಹಾಡಿನ ಪಲ್ಲವಿ ನೃತ್ಯ, ಸೋಜಿಗಪಡುವಷ್ಟು ಪ್ರಸಿದ್ಧಿಯನ್ನು ಪಡೆಯಿತು. ಮೊನ್ನೆ ತೆರೆಕಂಡ ನಕ್ಸಲ್ ಚಳವಳಿ ಹಿನ್ನೆಲೆಯ ’ವಿರಾಟಪರ್ವಂ’ ಸಿನಿಮಾದಲ್ಲಿ ಸಾಯಿ ಪಲ್ಲವಿಯದು ಬಹಳ ಮುಖ್ಯವಾದ ಪಾತ್ರ ಮತ್ತು ಅತ್ಯದ್ಭುತವಾದ ನಟನೆ ಎಂಬ ಮಾತುಗಳು ಕೇಳಿಬರುತ್ತಿವೆ.

ಕಳೆದ ಮೂರುವರೆ ದಶಕಗಳಿಂದ ಕನ್ನಡ, ತಮಿಳು, ತೆಲುಗು, ಹಿಂದಿಯ ಜನಪ್ರಿಯ ಸಿನಿಮಾಗಳನ್ನು ನೋಡಿಕೊಂಡು ಬರುತ್ತಿರುವ ನನಗೆ ಅವು ಕೆಲವು ವರ್ಷಗಳ ಹಿಂದಿನ ತನಕವೂ ಸಮಕಾಲಿನ ವಾಸ್ತವಗಳ ವಿಷಯದಲ್ಲಿ ಒಂದು ರೀತಿಯ ಅವಜ್ಞೆಯನ್ನೇ ಬೆಳೆಸಿಬಿಟ್ಟಿದ್ದವು; ಸಮಕಾಲಿನ ಸಂಗತಿಗಳಿಗೆ ಮುಖಾಮುಖಿ ಆಗಿಸಲೇ ಇಲ್ಲ. ಇಂದು ಹಿಂತಿರುಗಿ ನೋಡಿದರೆ ಇವುಗಳಿಂದ ಪಡೆದದ್ದಕ್ಕಿಂತ ಕಳೆದುಕೊಂಡಿದ್ದೆ ಹೆಚ್ಚು. ಆದರೆ, ನಮ್ಮಲ್ಲಿ ಸಣ್ಣ ಮಕ್ಕಳಿಂದ ವೃದ್ಧರವರೆಗೆ ನೀನು ಯಾರ ಅಭಿಮಾನಿ ಎಂದು ಪ್ರಶ್ನಿಸಿದರೆ ಅವರ ಬಾಯಿಂದ ತಕ್ಷಣದಲ್ಲೆ ಬರುವ ಉತ್ತರ ಯಾವುದಾದರು ಸಿನಿಮಾ ನಟ/ನಟಿಯರ ಹೆಸರು. ಅದರಲ್ಲೂ ನಟರದ್ದೇ ಸಿಂಹಪಾಲು ಮತ್ತು ಅಭಿಮಾನಿಗಳ ಪಾಲಿಗೆ ಬಹುತೇಕ ನಡೆದಾಡುವ ದೇವರುಗಳು ಅವರು. ಸಮಾಜದಲ್ಲಿ ಇಷ್ಟು ಪ್ರಭಾವ ಹೊಂದಿರುವ ಮತ್ತು ಅದರಿಂದ ದೊರಕುವ ಹಣ, ಪ್ರಸಿದ್ಧಿ, ಪ್ರಶಸ್ತಿಗಳೆಲ್ಲವನ್ನೂ ಅನುಭವಿಸುತ್ತಿರುವ ಈ ಸಿನಿಮಾ ತಾರೆಗಳು ಎಂದಾದರೂ ಸಾಮಾಜಿಕ ಜವಾಬ್ದಾರಿಯಿಂದ ವರ್ತಿಸಿದ್ದಾರಾ, ವ್ಯವಸ್ಥೆ/ಪ್ರಭುತ್ವ ಇನ್ನಾವುದೇ ಅಧಿಕಾರ ಕೇಂದ್ರಗಳಿಂದ ದೌರ್ಜನ್ಯಕ್ಕೆ ಒಳಗಾಗುವಾಗ ಸಮುದಾಯದ ಪರವಾಗಿ ಧ್ವನಿಯಾಗಿದ್ದಾರಾ ಎಂದು ಯೋಚಿಸಿದರೆ ನಿರಾಸೆಯಾಗುತ್ತದೆ. ಅಂತಹವರ ಸಂಖ್ಯೆ ಅಷ್ಟು ಕಡಿಮೆಯಿದೆ.

ಬೂಟಾಟಿಕೆಯನ್ನೆ ಮೈದುಂಬಿಸಿಕೊಂಡಂತಿರುವ ನಮ್ಮ ದೇಶದ ಚಿತ್ರರಂಗದಲ್ಲಿ ಅಪರೂಪಕ್ಕೆ ಒಮ್ಮೊಮ್ಮೆ ಸಾಮುದಾಯಿಕ ಪ್ರಜ್ಞೆಯಿಂದ ಕೂಡಿದ ಮಾನವೀಯ ಧ್ವನಿಗಳು ಕೇಳಿಬರುತ್ತವೆ. ಅದಕ್ಕೆ ಇತ್ತೀಚಿನ ಉದಾಹರಣೆ ಸಾಯಿ ಪಲ್ಲವಿ. ತಾನು ಇತ್ತೀಚೆಗೆ ನಟಿಸಿದ ನಕ್ಸಲ್ ಚಳವಳಿ ಕಥೆ ಆಧರಿಸಿದ ’ವಿರಾಟ ಪರ್ವಂ’ ಸಿನಿಮಾಗೆ ಸಂಬಂಧಿಸಿದಂತೆ ತೆಲುಗಿನ ಒಂದು ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ, ಸಂದರ್ಶಕ ’ನೀವು ಎಡಪಂಥದ ಬಗ್ಗೆ ಸಿಂಪಥಿ ಹೊಂದಿದ್ದೀರಾ?’ ಎಂಬ ಪ್ರಶ್ನೆಗೆ ಸಾಯಿಪಲ್ಲವಿ ’ನನಗೆ ಯಾವ ಪಂಥದ ಬಗ್ಗೆನೂ ಸಿಂಪಥಿಯಾಗಲಿ, ಒಲವು ಆಗಲಿ ಇಲ್ಲ; ನಾನು ಬೆಳೆದ ಪರಿಸರವೇ ನ್ಯೂಟ್ರಲ್ ಆದದ್ದು. ನಾನು ಯಾವತ್ತಿಗೂ ಹಿಂಸೆಯನ್ನು ವಿರೋಧಿಸುತ್ತೇನೆ. ಉದಾ: ಕಾಶ್ಮೀರ್ ಫೈಲ್ಸ್ ಸಿನಿಮಾದಲ್ಲಿ ತೋರಿಸಿದ ಹಿಂಸೆಗೂ, ಮೊನ್ನೆಮೊನ್ನೆ ಒಬ್ಬ ಬಡ ಮುಸ್ಲಿಂನನ್ನು ಕೆಲವು ಹಿಂದೂ ಸಂಘಟನೆಯವರು ’ಜೈ ಶ್ರೀರಾಮ್’ ಎಂದು ಕೂಗು ಎಂದು ಹೇಳಿ ಹೊಡೆದು ಕೊಂದ ಹಿಂಸೆಗೂ ವ್ಯತ್ಯಾಸ ಎಲ್ಲಿದೆ’ ಎಂದರು. ಇದನ್ನೇ ಗುರಿಯಾಗಿಸಿ ಕೆಲವು ಮಾರಿಕೊಂಡ ಟಿವಿ ಮಾಧ್ಯಮಗಳು, ಸಾಯಿ ಅವರ ಪ್ರತಿಕ್ರಿಯೆಯನ್ನು ದೇಶ ವಿರೋಧಿ ಹೇಳಿಕೆ ಎಂಬ ರೀತಿಯಲ್ಲಿ ಟ್ರೋಲ್ ಮಾಡಿದ್ದಲ್ಲದೆ, ತುಂಬಾ ಅಸಭ್ಯವಾದ ಕೀಳುಮಟ್ಟದ ಭಾಷೆ ಬಳಸಿ ಅವರನ್ನು ಜರಿಯಲಾಯಿತು. ಸಾಮಾಜಿಕ
ಮಾಧ್ಯಮಗಳಲ್ಲಿ ಕೆಲವರು ಕೆಟ್ಟದಾಗಿ ಟ್ರೋಲ್ ಮಾಡಿದರೆ, ಸಾಯಿ ಪಲ್ಲವಿ ಪರವಾದ ಧ್ವನಿಗಳು ಕೂಡ ಹೆಚ್ಚುಹೆಚ್ಚಾಗಿ ಕೇಳಿಬಂದದ್ದು ಸಮಾಧಾನದ ಸಂಗತಿ.

2006ರಲ್ಲಿ ಗುಜರಾತಿನ ಸರ್ದಾರ್ ಸರೋವರ್ ಅಣೆಕಟ್ಟಿನ ಎತ್ತರವನ್ನು ವಿರೋಧಿಸಿ ನಡೆಯುತ್ತಿದ್ದ ’ನರ್ಮದಾ ಬಚಾವ್’ ಆಂದೋಲನವನ್ನ ಬೆಂಬಲಿಸಿ ಹಿಂದಿ ಚಿತ್ರರಂಗದ ಖ್ಯಾತ ನಟ ಅಮೀರ್ ಖಾನ್ ನೀಡಿದ ಹೇಳಿಕೆ ಕಾರಣದಿಂದ ತಾನು ನಟಿಸಿದ ’ಫ್ಹನಾ’ ಸಿನಿಮಾ ಪ್ರದರ್ಶನಕ್ಕೆ ಗುಜರಾತಿನಲ್ಲಿ (ಪ್ರಭುತ್ವದ ಬೆಂಬಲದೊಂದಿಗೆ) ವಿರೋಧ ವ್ಯಕ್ತಪಡಿಸಲಾಯಿತು. ಇದೇ ಅಮೀರ್ ಖಾನ್ ಪ್ರಭುತ್ವ ನಡೆಸುತ್ತಿರುವ ಹಿಂಸೆಯ ಹಿನ್ನೆಲೆಯಲ್ಲಿ ’ಒಮ್ಮೊಮ್ಮೆ ಈ ದೇಶ ಬಿಡಬೇಕು ಅನಿಸುತ್ತಿದೆ’ ಎಂಬ ಹೇಳಿಕೆಯನ್ನು ನೀಡಿದ್ದಕ್ಕೆ ಇನ್ನಿಲ್ಲದಂತೆ ಟ್ರೋಲ್ ಮಾಡಿ, ಅಮೀರ್ ಖಾನ್‌ನನ್ನು ಭಯೋತ್ಪಾದಕ ಎಂದು ಸುಳ್ಳುಸುಳ್ಳೇ ಬಿಂಬಿಸಲಾಯಿತು. ನಂತರದಲ್ಲಿ ಅಮೀರ್ ಖಾನ್ ಈ ಗೊಡವೆಯೇ ಬೇಡ ಎಂದು ಪ್ರಭುತ್ವ ನಡೆಸುವ ಔತಣಕೂಟದಲ್ಲಿ ಭಾಗವಹಿಸಿ ಕೈ ಕುಲುಕ್ಕಿದ್ದು ಆಯಿತು.

2010ರಲ್ಲಿ ಬಿಡುಗಡೆಗೊಂಡ ಶಾರುಕ್ ಖಾನ್ ನಟನೆಯ ’ಮೈ ನೇಮ್ ಈಶ್ ಖಾನ್, ಐ ಯಾಮ್ ನಾಟ್ ಎ ಟೆರರಿಸ್ಟ್’ ಸಿನಿಮಾಗೆ ಸಂಬಂಧಿಸಿದಂತೆ ಮತ್ತು ಶಾರುಕ್ ಖಾನ್ ಹೇಳಿಕೆಗಳನ್ನು ಖಂಡಿಸಿ ಮಹಾರಾಷ್ಟ್ರದ ಶಿವಸೇನೆ ಪಕ್ಷದ ಕಾರ್ಯಕರ್ತರು ಸಿನಿಮಾ ಪ್ರದರ್ಶನಕ್ಕೆ ಅಡ್ಡಿ ಪಡಿಸಿದರು. ಶಾರುಕ್ ಖಾನ್ ಯಾವತ್ತಿದ್ದರೂ ಪಾಕಿಸ್ತಾನಿ, ಅವನು ಈ ದೇಶದ ವಿರೋಧಿ ಎಂದೆಲ್ಲಾ ಹೀಗಳೆಯಲಾಯಿತು. ತಕ್ಷಣದಲ್ಲೆ ಶಾರುಕ್ ತನ್ನ ಹೇಳಿಕೆಯನ್ನ ತಪ್ಪು ಗ್ರಹಿಸಲಾಗಿದೆ ಎಂದು ಕ್ಷಮಾಪಣೆ ಕೇಳಿಕೊಂಡಿದ್ದಾಯಿತು.

ಈ ಮೇಲಿನ ಇಬ್ಬರು ಸುಪ್ರಸಿದ್ಧ ಸ್ಟಾರ್ ನಟರ ನಡವಳಿಕೆ ಬಗ್ಗೆ ಕೊಂಚ ಅಸಮಾಧಾನವಾದರೂ ಈ ದೇಶದಲ್ಲಿ ಅಲ್ಪಸಂಖ್ಯಾತ ಸಮುದಾಯ ಎಷ್ಟೇ ದೊಡ್ಡ ಮಟ್ಟದ ಸಾಧನೆ, ಪ್ರಸಿದ್ಧಿ, ಪ್ರಶಸ್ತಿಗಳನ್ನು ಸಂಪಾದಿಸಿದ್ದರೂ, ಅವರನ್ನು ಅವರ ಸಮುದಾಯದಿಂದಲೇ ಗುರುತಿಸಿ ಬೆದರಿಸಲಾಗುತ್ತದೆ, ಹೀಗಳೆಯಲಾಗುತ್ತದೆ ಮತ್ತು ಬಾಯಿ ಮುಚ್ಚಿಸಲಾಗುತ್ತದೆ ಎಂಬುದು ಸತ್ಯ. ನಿಜವಾಗಿಯೂ ಸಾಯಿ ಪಲ್ಲವಿ ಮೆಚ್ಚುಗೆಯಾಗಿದ್ದು ಮತ್ತು ಇವರು ಒಬ್ಬ ಸೂಕ್ಷ್ಮ ಕಲಾವಿದೆ ಎಂದು ಅನಿಸಿದ್ದು, ಯಾವುದೇ ಟ್ರೋಲ್, ಟೀಕೆ, ಅಸಭ್ಯವಾದ ಭಾಷೆ, ಬೆದರಿಕೆ, ಹೀಗಳಿಕೆಗೆ ಕೊಂಚವೂ ಧೃತಿಗೆಡದೆ ಅಷ್ಟೇ ಸಾವಧಾನದಿಂದ ತಾನು ಮೊದಲು ನೀಡಿದ ಹೇಳಿಕೆಗೆ ಬದ್ಧವಾಗಿದ್ದುದು. ’ನಾನು ವೈದ್ಯ ಪದವೀಧರೆಯಾಗಿ ನನಗೆ ಜೀವಗಳ ಬಗ್ಗೆ ಭೇದ ಇಲ್ಲ. ಎಲ್ಲಾ ಮನುಷ್ಯರ ಪ್ರಾಣವು ಒಂದೇ.. ನಾನು ಯಾವ ಹಿಂಸೆಯನ್ನು ಒಪ್ಪುವುದಿಲ್ಲ’ ಎಂದು ಹೇಳಿದ್ದು.

ಸಾಯಿ ಪಲ್ಲವಿ ವೆಟ್ರಿ ಮಾರನ್ ನಿರ್ದೇಶನದಲ್ಲಿ ನಟಿಸಿದ ಹಾಗೆಯೇ, ಮುಂದಿನ ದಿನಗಳಲ್ಲಿ ಪ. ರಂಜಿತ್, ಮಾರಿ ಸೆಲ್ವರಾಜ್, ಲೆನಿನ್ ಭಾರತಿ, ರಾಜೀವ್ ರವಿ, ಅನುಭವ್ ಸಿನ್ಹಾ ಮುಂತಾದ ಸಾಮಾಜಿಕ ವಾಸ್ತವಗಳನ್ನು ತಮ್ಮ ಸಿನಿಮಾಗಳಲ್ಲಿ ಪ್ರತಿಬಿಂಬಿಸುವ ನಿರ್ದೇಶಕರ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಬೇಕೆಂಬ ನಿರೀಕ್ಷೆಯೊಂದಿಗೆ ಸಾಯಿ ಪಲ್ಲವಿಯವರಿಗೆ ವಂದನೆಗಳು.

ಯದುನಂದನ್ ಕೀಲಾರ

ಯದುನಂದನ್ ಕೀಲಾರ
ಜಗತ್ತಿನ ಸಿನಿಮಾಗಳ ವೀಕ್ಷಣೆ ಮತ್ತು ಅವುಗಳು ಬೀರುವ ಸಾಮಾಜಿಕ ಪ್ರಭಾವದ ಸಾಧ್ಯತೆಗಳ ಬಗ್ಗೆ ಅಪಾರ ಉತ್ಸಾಹ ಇರುವ ಯದುನಂದನ್ ಸಿನಿಮಾಗಳ ರಾಜಕೀಯ ನಿಲುವುಗಳನ್ನು ತೀಕ್ಷ್ಣವಾಗಿ ಶೋಧಿಸುತ್ತಾರೆ


ಇದನ್ನೂ ಓದಿ: ಅಧಿಕಾರಕ್ಕೆ ಸವಾಲೆಸೆದ ತಮಿಳುನಾಡಿನ ಇಬ್ಬರು ಯುವಪ್ರತಿಭೆಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದ್ವೇಷ ರಾಜಕಾರಣವನ್ನು ಹಿಮ್ಮೆಟ್ಟಿಸುವ ಕೆಲಸ ಕರ್ನಾಟಕದಿಂದ ಆರಂಭವಾಗಬೇಕಿದೆ: ಯೋಗೇಂದ್ರ ಯಾದವ್‌ | Naanu Gauri

ದ್ವೇಷ ರಾಜಕಾರಣವನ್ನು ಹಿಮ್ಮೆಟ್ಟಿಸುವ ಕೆಲಸ ಕರ್ನಾಟಕದಿಂದ ಆರಂಭವಾಗಬೇಕಿದೆ: ಯೋಗೇಂದ್ರ ಯಾದವ್‌

0
ದೇಶದ ತುಂಬ ಹರಡಿರುವ ದ್ವೇಷ ರಾಜಕಾರಣವನ್ನು ಹಿಮ್ಮೆಟ್ಟಿಸುವ ಕೆಲಸ ಕರ್ನಾಟಕದಿಂದ ಆರಂಭವಾಗಬೇಕಿದೆ ಎಂದು ಸ್ವರಾಜ್ ಪಕ್ಷದ ಮುಖ್ಯಸ್ಥ, ರೈತ ಹೋರಾಟಗಾರ ಯೋಗೇಂದ್ರ ಯಾದವ್‌ ಬುಧವಾರ ಬೆಂಗಳೂರಿನಲ್ಲಿ ಹೇಳಿದ್ದಾರೆ. ಅವರು ‘ಕರ್ನಾಟಕದ ಜನ ಯಾಕೆ...