ಅಮೃತ ಮಹೋತ್ಸವದ ಪ್ರಚಾರಕ್ಕಾಗಿ ಸರಕಾರ ಕೊಟ್ಟ ಜಾಹೀರಾತಿನಲ್ಲಿ ನೆಹರು ಫೋಟೋನೇ ಇಲ್ಲದಂತೆ ಮಾಡಿ ಆ ಜಾಗಕ್ಕೆ ವೀರ ಸಾವರ್ಕರನ ಫೋಟೋವನ್ನ ಬೊಮ್ಮಾಯಿ ಹಾಕಿಸಿದ್ದಾರಂತಲ್ಲಾ. ಇದರಿಂದ ಕುಪಿತಗೊಂಡಿರುವ ಸ್ವಾತಂತ್ರ್ಯವೀರ ಲಿಂಗಾಯಿತರು, ಸಕಲರಿಗೂ ಲೇಸನ್ನ ಬಯಸುವ ದಯವೇ ಧರ್ಮದ ಮೂಲವೆಂದು, ಜಗತ್ತಿಗೆ ಸಾರಿದ ಬಸವಧರ್ಮದಲ್ಲಿ ಹುಟ್ಟಿದ ಈ ಬೊಮ್ಮಾಯಿ ಇತಿಹಾಸವನ್ನು ತಿರುಚಿ ಬಸವಕುಲಕೆ ಅವಮಾನ ಮಾಡಿಬಿಟ್ಟಿದ್ದಾರೆ. ನೆಹರು ಜೈಲಲ್ಲಿ ಇದ್ದಷ್ಟೇ ವರ್ಷ ಪ್ರಧಾನಿಯಾಗಿದ್ದರು. ಯೋಜನೆಗಳ ಮುಖಾಂತರ ಬಡ ಭಾರತವನ್ನ ಅಭಿವೃದ್ಧಿಪಥಕ್ಕೆ ತಂದು ನಿಲ್ಲಿಸಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ಪ್ರಜಾಪ್ರಭುತ್ವ ದೇಶದಲ್ಲಿ ಕಾಲೂರುವಂತೆ ಮಾಡಿದರು. ಲೋಕಸಭೆಯಲ್ಲಿ ಅವರನ್ನು ಟೀಕಿಸಿ ಮಾತನಾಡುವುದನ್ನ ಸಹಿಸಿಕೊಂಡರು; ತನ್ನ ಜನ್ಮದಿನವನ್ನ ಮಕ್ಕಳ ದಿನಾಚರಣೆಯನ್ನಾಗಿಸಿದರು; ಅವರು ಬದುಕಿದಷ್ಟೂ ದಿನ ಈ ದೇಶದ ಸರ್ವ ಜನಾಂಗಕ್ಕೂ ಪ್ರಧಾನಿಯಾಗಿದ್ದರೂ. ದಯಾಪರನಾದ ನೆಹರು ವ್ಯಕ್ತಿತ್ವವನ್ನ ದ್ವೇಷಿಸುವ ಬಿಜೆಪಿಗಳು ಎಂದಿನಂತೆ ತಮ್ಮ ಸಂಚಿನಿಂದ ಲಿಂಗಾಯಿತರ ಬೊಮ್ಮಾಯಿಯಿಂದ ನೆಹರುಗೆ ಅವಮಾನ ಮಾಡಿಸಿ ಆ ಮುಖಾಂತರ ಲಿಂಗಾಯಿತರಿಗೇ ಈ ಆರೆಸೆಸ್ಸಿಗರು ಅವಮಾನ ಮಾಡಿಸಿದ್ದಾರೆಂದು ಶರಣ ಸಮೂಹ ಸಿಟ್ಟಾಗಿದೆಯಂತಲ್ಲಾ, ಥೂತ್ತೇರಿ.
****
ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆಯುತ್ತಿರುವ ಸರಕಾರವನ್ನು ಮಾಧುಸ್ವಾಮಿ ಎಂಬ ಮಂತ್ರಿ ’ಇದು ತೆವಳಿಕೊಂಡು ನಡೆಯುತ್ತಿರುವ ಸರಕಾರ; ಅಂತೂ ಹೇಗೋ ದಡಮುಟ್ಟಿ ಮನೆಗೆ ಹೋಗುತ್ತೇವೆ’ ಎಂದು ಬಣ್ಣಿಸಿರುವ ಮಾತನ್ನು ಕರ್ನಾಟಕದ ಜನಸ್ತೋಮ ಇಡಿಯಾಗಿ ಸ್ವೀಕರಿಸಿ ಒಂದು ತಿದ್ದುಪಡಿ ಮಾಡಿಕೊಂಡಿದೆಯಂತಲ್ಲಾ. ಆ ತಿದ್ದುಪಡಿ ಯಾವುದೆಂದರೆ ಇದು ತೆವಳುತ್ತಿರುವ ಸರಕಾರವಲ್ಲಾ, ಕುಂಟುತ್ತಿರುವ ಸರಕಾರ ಎಂದರೆ ಸರಿಯಾಗುತ್ತಿತ್ತು ಎಂದು. ಸದರಿ ಮಾಧುಸ್ವಾಮಿ ಮಾತು ಈವರೆಗೂ ವಿರೋಧಪಕ್ಷಗಳಿಗೇ ಹೊಳೆದಿರಲಿಲ್ಲವಂತಲ್ಲಾ. ಅದಕ್ಕೆ ಕಾರಣ ಸರಕಾರ ತೆವಳುತ್ತಿದೆಯೋ ಕುಂಟುತ್ತಿದೆಯೋ ಎಂಬುದು ಆಡಳಿತದ ಭಾಗವಾಗಿದ್ದವರಿಗೆ ಹೊಳೆಯುತ್ತದೆಯೇ ಹೊರತು, ಹೊರಗಿನವರಿಗೆ ತಿಳಿಯಲಾರದು. ಇಂತಹ ಸರಕಾರ ಜತೆಗಿಟ್ಟುಕೊಂಡು ಸ್ವಾತಂತ್ರ್ಯದ ಅಮೃತೋತ್ಸವಕ್ಕಾಗಿ ಪಾರ್ಟಿಯ ನಿಷ್ಟಾವಂತ ಕಾರ್ಯಕರ್ತರು ಕೈತುಂಬಾ ಬಾವುಟ ಹಿಡಿದು ಮನೆಮನೆಗೆ ಹಂಚುತ್ತಾ ಹೋಗುತ್ತಿರುವಾಗ ಮಳೆಗೆ ಮನೆಬಿದ್ದ ಜಾಗಕ್ಕೆ ಹೋಗಿ, ಮನೆ ಕಳೆದುಕೊಂಡು ಅಳುತ್ತಿದ್ದ ಮಹಿಳೆಗೆ ಬಾವುಟಕೊಟ್ಟು “ಇದನ್ನ ನಿನ್ನ ಮನೆ ಮೇಲಕ್ಕೆ ಕಟ್ಟಕ್ಕ” ಎನ್ನಲಾಗಿ ಆ ಮಹಿಳೆ ಸಿಟ್ಟುಗೊಂಡು “ಅಯ್ಯಾ ನಿನ್ನ ಮನೆಹಾಳಾಗ ನಿನಿಗೇನು ಕಣ್ಣು ಇಂಗಿಹೋಗವಾ? ಮನೆ ಕಳಕಂಡು ಅಳುತಾಯಿದ್ರೆ ಬಾವುಟ ಹಾರಿಸು ಅಂತ ಬಂದಿದ್ದಯಲ್ಲಾ ಥೂ ನಿನ್ನ ಜನ್ಮಕ್ಕೆ” ಅಂದಾಗ ಸಾರಿ ಕಣಕ್ಕ ಎಂದು ಜಾಗ ಖಾಲಿಮಾಡಿದನಂರಲ್ಲಾ, ಥೂತ್ತೇರಿ.
****
ಸಂಘಿಗಳು ನಿಜ ಶ್ರದ್ಧೆಯನ್ನು ತೊರೆದು ಸಂಭ್ರಮವನ್ನ ಸೃಷ್ಟಿಮಾಡಿಕೊಂಡು ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವ ಸಮಯದಲ್ಲಿ ಹಿಂದೆಂದೂ ಕಂಡು ಕೇಳರಿಯದಿದ್ದ ಜಲ ಪ್ರಳಯಕ್ಕೆ ದೇಶ ತುತ್ತಾಗಿ ಹೋಗಿದೆ. ಮನೆಯ ಗೋಡೆಗಳು ಕುಸಿದಿವೆ; ಹಸುಗೂಸುಗಳೂ ಅಸುನೀಗಿವೆ; ಸೇತುವೆಗಳು ಕೊಚ್ಚಿಹೋಗಿವೆ; ಗುಡ್ಡಗಳು ಕುಸಿದು ಹೋಗಿವೆ; ಸಂತ್ರಸ್ತ ಜನರ ಕಣ್ಣೀರು ಮಳೆ ಹನಿಗಳೊಂದಿಗೆ ಸೇರಿಹೋಗಿವೆ. ಇಂತಹ ಮಳೆಯ ನಡುವೆ ಶಾಲೆಗೆ ಹೋದ ಹೆಣ್ಣು ಮಗುವೊಂದು ದಬ್ಬೆಯಿಂದ ಕಟ್ಟಿದ ಸೇತುವೆ ಮೇಲೆ ನಡೆದು ಬರುವಾಗ ಆಯತಪ್ಪಿ ಕೊಚ್ಚಿಕೊಂಡು ಹೋಗಿದೆ. ಇದರಿಂದ ಆ ಮನೆಯಲ್ಲಿ ದುಃಖ ಶಾಶ್ವತವಾಗಿಹೋಯ್ತು. ಈ ಸಂಬಂಧದಾಗಿ ಆ ಪ್ರದೇಶದ ಜನ ನಾಯಕನನ್ನ ಮಾತನಾಡಿಸಿದರೆ ನನ್ನ ಅವಧಿಯಲ್ಲಿ ಸೇತುವೆ ಆಗಿಲ್ಲ ನಿಜ ಆದರೆ ಎಪ್ಪತ್ತು ವರ್ಷ ದೇಶ ಆಳಿದವರು ಏನು ಮಾಡಿದ್ದಾರೆ. ಹೋಗಲಿ ಅವರ ಅವಧಿಯಲ್ಲಿ ಇಂತಹ ಮಳೆ ಬಂದಿತ್ತೆ ಎಂದು ಮಾತನಾಡಿದಾನಲ್ಲಾ. ಈ ಮೂರ್ಖ ಬಿಜೆಪಿ ಎಮ್ಮೆಲ್ಲೆ ಎಂಬುದರಲ್ಲಿ ಎರಡು ಮಾತಿಲ್ಲ. ಈ ದೇಶದ ಯಾವುದೇ ಸಮಸ್ಯೆಯನ್ನು ಮುಸುಡಿಗೆ ಹಿಡಿದರೂ ಕೂಡ ಎಪ್ಪತ್ತು ವರ್ಷ ಆಳಿದವರು ಏನು ಮಾಡುತ್ತಿದ್ದರು ಎನ್ನುತ್ತವೆ. ಇದೇ ಮೋದಿ ಕಾಂಗ್ರೆಸ್ಸಿಗೆ ಅರವತ್ತು ವರ್ಷ ಅಧಿಕಾರ ಕೊಟ್ಟಿರಿ, ನೀವು ನನಗೆ ಕೇವಲ ಅರವತ್ತು ದಿವಸ ಕೊಡಿ ಎಂದಿದ್ದರು. ಇಲ್ಲಿ ಕಾಂಗ್ರೆಸ್ಸೇತರ ಮೊರಾರ್ಜಿ, ವಾಜಪೇಯಿ, ದೇವೇಗೌಡರು, ಗುಜ್ರಾಲ್ ಆಡಳಿತವಿದ್ದ ಲೆಕ್ಕ ಈ ಬಿಜೆಪಿಗಳಿಗೇ ಗೊತ್ತಿಲ್ಲವಂತಲ್ಲಾ, ಥೂತ್ತೇರಿ.
****

ಈ ಬಿಜೆಪಿಗಳು ಸಾವರ್ಕರ್ ಚಿತ್ರವನ್ನು ಸ್ವತಂತ್ರ ಹೋರಾಟಗಾರರ ಸಾಲಿಗೆ ತಂದು ಅಂಟಿಸತೊಡಗಿವೆ. ಅಂಡಮಾನ್ ದ್ವೀಪದ ಕೊಠಡಿಯಲ್ಲಿರಲಾಗದೆ ಬ್ರಿಟಿಷರಿಗೆ ಕ್ಷಮಾಪಣಾ ಪತ್ರ ಬರೆದು ಕೊಟ್ಟು ಭಾರತಕ್ಕೆ ಬಂದು ಪುರೋಹಿತಶಾಹಿ ಧರ್ಮದ ಪುನರುತ್ಥಾನ ಕೈಂಕರ್ಯದಲ್ಲಿ ನಿರತರಾದ ಸಾವರ್ಕರ್ ಮಾನ ಉಳಿಸಲು ಆರೆಸೆಸ್ಸಿಗರು ವೀರ ಪದವನ್ನ ಸೇರಿಸಿದರು. ಅಂಡಮಾನ್ ಜೈಲಿನ ಕೊಠಡಿಯಲ್ಲೇ ಆಯಸ್ಸು ಮುಗಿಸಿ ನೀರು ಪಾಲಾದ ಅಸಂಖ್ಯಾತ ಜನರ್‍ಯಾರು ವೀರರಲ್ಲ. ಸೋತು ಶರಣಾದ ಸಾವರ್ಕರ್ ವೀರ! ಇಂತಹ ವೀರನ ಚಿತ್ರ ತಂದು ಹದಿನೇಳು ವರ್ಷ ಪ್ರಧಾನಿಯಾಗಿದ್ದ ನೆಹರು ಚಿತ್ರದ ಜಾಗದಲ್ಲಿ ಅಂಟಿಸಿವೆ ಮತ್ತು ತಮ್ಮ ಕೃತ್ಯವನ್ನ ಸಮರ್ಥಿಸಿವೆ. ಇತಿಹಾಸವನ್ನೇ ಅಳಿಸಿಹಾಕುವ ಈ ಕಾರ್ಯದ ವಿರುದ್ಧ ಕನ್ನಡದ ಯಾವ ಸಾಹಿತಿಯೂ ತುಟಿಬಿಚ್ಚಿಲ್ಲ. ಬಹುಶಃ ಈ ರಣಮಳೆಯಲ್ಲಿ ಒಳಸೇರಿಕೊಂಡು ಕೃತಿ ರಚನೆಯಲ್ಲಿ ತೊಡಗಿರಬಹುದು. ಇನ್ನ ಪಠ್ಯಪುಸ್ತಕ ತಿದ್ದಿ ದಕ್ಕಿಸಿಕೊಂಡ ತಿಪಟೂರಿನ ನಾಗೇಶ್ ಎಂಬ ಸಚಿವನ ಹಿಂಬಾಲಕರು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಜಾಥಾದಲ್ಲಿ ರಾಷ್ಟ್ರಧ್ವಜಕ್ಕಿಂತ ತಮ್ಮ ಸಂಘದ ಧ್ವಜವನ್ನೇ ಎತ್ತರದಲ್ಲಿ ಹಾರಿಸುತ್ತ ಹೋಗಿದ್ದು ನೋಡಿದ ತಿಪಟೂರಿನ ಜನ ಮನುಷ್ಯನಿಗೆ ಹುಚ್ಚು ಕೆರಳಿದರೆ ಏನಾಗುತ್ತವೆ ಎಂಬುದಕ್ಕೆ ಈ ಜನಗಳೇ ಉದಾಹರಣೆಯೆಂದು ಉದ್ಘಾರ ತೆಗೆದರಂತಲ್ಲಾ, ಥೂತ್ತೇರಿ.
ಇದನ್ನೂ ಓದಿ: ಮುರುಘಾ ಶರಣರ ಮರುಳು ಮಾತು ನಿಜವೆ?


