Homeಕರ್ನಾಟಕವಾರ್ತಾಭಾರತಿಗೆ ಎರಡು ದಶಕ

ವಾರ್ತಾಭಾರತಿಗೆ ಎರಡು ದಶಕ

- Advertisement -
- Advertisement -

ಕನ್ನಡ ದಿನಪತ್ರಿಕೆ ‘ವಾರ್ತಾಭಾರತಿ’ ಎರಡು ದಶಕಗಳನ್ನು ಪೂರೈಸಿದೆ. ವಾಣಿಜ್ಯಸುದ್ದಿ ಮತ್ತು ಮತೀಯ ನಾಯಕರ ಹೇಳಿಕೆಗಳಿಗೆ ಹೆಚ್ಚಿನ ಪತ್ರಿಕೆಗಳು ಕೊಡುವ ಆದ್ಯತೆಗೆ ಹೋಲಿಸಿದರೆ, ಇದು ಜನಸಾಮಾನ್ಯರ ಸಾಮಾಜಿಕ ರಾಜಕೀಯ ವಿಷಯಗಳಿಗೆ ಹೆಚ್ಚಿನ ಆದ್ಯತೆ ಕೊಡುತ್ತಾ ಬಂದಿದೆ. ಕರ್ನಾಟಕದ ಮುಖ್ಯ ಪತ್ರಿಕೆಗಳ ಮುಖಪುಟದ ತಲೆಬರೆಹಗಳನ್ನು ‘ವಾರ್ತಾಭಾರತಿ’ಯವುಗಳ ಜತೆಗಿಟ್ಟು ಗಮನಿಸಿದರೆ, ಇದರ ತಾತ್ವಿಕ ನಿಲುವು ಮತ್ತು ರಾಜಕಾರಣದ ದಿಸೆ ಸ್ಪಷ್ಟವಾಗುತ್ತದೆ. ಕಳೆದ ವರ್ಷ ಅಂಬೇಡ್ಕರ್ ಚಿತ್ರಪಟವನ್ನು ತೆಗೆಸಿದ ನ್ಯಾಯಾಧೀಶರ ವಿರುದ್ಧ ನಡೆದ ಚಳವಳಿಯನ್ನು ಇದು ವರದಿ ಮಾಡಿದ ಬಗೆಯನ್ನು ನೆನೆಯಬಹುದು. ‘ವಾರ್ತಾಭಾರತಿ’ ಇಲ್ಲದಿದ್ದರೆ, ಕರ್ನಾಟಕದಲ್ಲಿ ಮುಖ್ಯವಾಗಿ ಕರಾವಳಿಯಲ್ಲಿ ಜರುಗಿದ ಎಷ್ಟೊ ವಿದ್ಯಮಾನಗಳ ಇನ್ನೊಂದು ಮಗ್ಗುಲು ಓದುಗರಿಗೆ ಸಿಗುತ್ತಿರಲಿಲ್ಲ. ಅಡಗಿಸಲಾದ ಸುದ್ದಿಯನ್ನು ಅಥವಾ ಘಟನೆಯ ಇನ್ನೊಂದು ಮಗ್ಗುಲನ್ನು ಬಿಡಿಸಿ ತೋರಿಸುವುದು, ಭಿನ್ನಮತ ಹುಟ್ಟಿಸುವುದು, ಚಿಂತನಶೀಲತೆ ಬೆಳೆಸುವುದು ಸಾರ್ವಜನಿಕ ಚಿಂತಕರು ಮತ್ತು ಪತ್ರಿಕೆಗಳು ಮಾಡಬೇಕಾದ ಕೆಲಸ. ‘ವಾರ್ತಾಭಾರತಿ’ ಭಿನ್ನಮತವನ್ನು ಮತ್ತು ಸುದ್ದಿಯ ಭಿನ್ನಮಗ್ಗುಲನ್ನು ದಾಖಲಿಸುತ್ತ ಬಂದಿದೆ.

ಮತೀಯವಾದದ ಪ್ರಯೋಗಭೂಮಿಯಾಗಿರುವ ಕರಾವಳಿಯಲ್ಲಿದ್ದು ಇದು ರೂಪುಗೊಂಡಿತು ಮತ್ತು ಎರಡು ದಶಕ ದಾಟಿದೆ. ಈ ಸಂಗತಿಗೆ ಚಾರಿತ್ರಿಕ ಮಹತ್ವವಿದೆ. ಕರಾವಳಿಯಲ್ಲಿ ಹುಟ್ಟುವ ಜನಪರ ಪತ್ರಿಕೆಗಳು ಬೇರುಬಿಡದಂತೆ ಕೊರಳುಗೊಯ್ಕ ಸ್ಪರ್ಧೆಯನ್ನೊಡ್ಡುವ ಸನ್ನಿವೇಶವಿದೆ. ಜನಪರ ಪತ್ರಿಕೆಗಳಿಗೆ ಇದು ಔದ್ಯಮಿಕ ಸ್ಪರ್ಧೆ ಮಾತ್ರವಾಗಿರದೆ, ಸೈದ್ಧಾಂತಿಕ ಹೋರಾಟವೂ ಆಗಿದೆ. ‘ಮುಂಗಾರು’ ಹಾಗೆ ಜನ್ಮ ತಳೆದಿದ್ದು. ಅದನ್ನು ಓದುವುದು, ಅದಕ್ಕೆ ಬರೆಯುವುದು ಮತ್ತು ಚಂದಾ ಮಾಡಿಸುವುದು ನಮಗೆಲ್ಲ ಚಳವಳಿಯ ಕೆಲಸವಾಗಿತ್ತು. ಆದರೆ ನಾನಾ ಕಾರಣಗಳಿಂದ ‘ಮುಂಗಾರು’, ಬಳಿಕ ಬಂದ ‘ಜನವಾಹಿನಿ’ ಪತ್ರಿಕೆಗಳು ಸೋತು ನಿರ್ಗಮಿಸಿದವು. ಆದರೆ ಇವು ನಡೆದ ನಿಲ್ಲಿಸಿದ ಹಾದಿಯಲ್ಲಿ ಪ್ರಯಣ ಆರಂಭಿಸಿದ ‘ವಾರ್ತಾಭಾರತಿ’ ಕರಾವಳಿಯಲ್ಲಿರುವ ಪೈಪೋಟಿಯ ಕದನದಲ್ಲಿ ಬದುಕಿದೆ. ಇದು ಮತೀಯವಾದದ ವಿರುದ್ಧ ಕೆಲಸ ಮಾಡುವ ಚಳವಳಿ ಮತ್ತು ಸಂಗಾತಿಗಳಿಗೆ ವೇದಿಕೆಯಾಗಿದೆ. ಇಲ್ಲಿ ಪ್ರಕಟವಾದ ಸುದ್ದಿ ಮತ್ತು ಅಂಕಣ ಬರೆಹಗಳು, ಬಲಪಂಥೀಯ ರಾಜಕೀಯಕ್ಕೆ ಸಾಂಸ್ಕೃತಿಕ ಪ್ರತಿರೋಧವನ್ನು ಕಟ್ಟುವ ಕೆಲಸ ಮಾಡಿವೆ.

ಸಂಪಾದಕೀಯವು ಯಾವುದೇ ಪತ್ರಿಕೆಯ ದೃಷ್ಟಿಕೋನವನ್ನು ಪ್ರಕಟಪಡಿಸುವ ಹೃದಯ ಭಾಗ. ಆದರೆ ಕರ್ನಾಕಟದ ಕೆಲವು ಪತ್ರಿಕೆಗಳಿಗೆ ಸಂಪಾದಕೀಯಗಳೇ ಇಲ್ಲ. ಸಂಪಾದಕೀಯ ಇರುವ ಕೆಲವು ಪತ್ರಿಕೆಗಳಲ್ಲಿ ಅದು ಮಹತ್ವದ ಭಾಗವಾಗಿಲ್ಲ. ಸಂಪಾದಕೀಯ ಹೊಣೆಗಾರಿಕೆಯನ್ನು ಕಿರುಪತ್ರಿಕೆಗಳು ಅರ್ಥಪೂರ್ಣವಾಗಿ ನಿಭಾಯಿಸಿಕೊಂಡು ಬಂದ ಚರಿತ್ರೆಯಿದೆ. ‘ಜೀವನ’ ಪತ್ರಿಕೆಗೆ ಮಾಸ್ತಿ, ‘ರುಜುವಾತು’ಗೆ ಅನಂತಮೂರ್ತಿ, ‘ಸಂಕ್ರಮಣ’ಕ್ಕೆ ಚಂಪಾ, ‘ಪ್ರಪಂಚ’ಕ್ಕೆ ಪಾಪು, ‘ಲಂಕೇಶ್ ಪತ್ರಿಕೆ’ಗೆ ಲಂಕೇಶ್, ‘ಗೌರಿ ಲಂಕೇಶ್’ ಪತ್ರಿಕೆಗೆ ಗೌರಿಲಂಕೇಶ್ ಬರೆದ ಸಂಪಾದಕೀಯಗಳು ಪುಸ್ತಕಗಳಾಗಿ ಪ್ರಕಟವಾಗಿವೆ; ಕನ್ನಡ ಚಿಂತನ ಸಾಹಿತ್ಯದ ಭಾಗವಾಗಿವೆ. ತಿಂಗಳ ಅಥವಾ ವಾರದ ಪತ್ರಿಕೆಗಳಲ್ಲಿ ಚಿಂತನಶೀಲವಾದ ಧ್ಯಾನಸ್ಥ ಸಂಪಾದಕೀಯಗಳು ಸಾಧ್ಯ. ಆದರೆ ದಿನವೂ ಪ್ರಕಟವಾಗುವ ಧಾವಂತದ ದಿನಪತ್ರಿಕೆಗಳಲ್ಲಿ ಇವು ಕಷ್ಟ. ಆದರೂ ‘ಹಿಂದೂ’ ‘ಡೆಕ್ಕನ್‌ಹೆರಾಲ್ಡ್’ ಪತ್ರಿಕೆಗಳ, ಈಚೆಗೆ ‘ಪ್ರಜಾವಾಣಿ’ಯ ಸಂಪಾದಕೀಯಗಳು ತಮ್ಮ ಖಚಿತ ಮತ್ತು ಪ್ರಗತಿಪರ ನಾಡನ್ನು ಕಟ್ಟುವ ಕಾಳಜಿಯ ದೃಷ್ಟಿಕೋನಕ್ಕೆ ಸಾಕ್ಷಿಯಾಗಿವೆ. ರಘುರಾಮಶೆಟ್ಟರು ‘ಮುಂಗಾರು’ ಪತ್ರಿಕೆಗಳಿಗೆ ಬರೆಯುತ್ತಿದ್ದ ಸಂಪಾದಕೀಯಗಳು ಚಿಂತನೆಯಿಂದ ಕೂಡಿರುತ್ತಿದ್ದವು. ಅವು ಈಗ ಪುಸ್ತಕವಾಗಿ ಹೊರಬಂದಿವೆ.

ಈ ಹಿನ್ನೆಲೆಯಲ್ಲಿ ವಾರ್ತಾಭಾರತಿಯ ಸಂಪಾದಕೀಯಗಳಲ್ಲಿರುವ ಚಿಂತನಶೀಲತೆ, ರಾಜಕೀಯ ಪ್ರಜ್ಞೆ, ಅಂತಾರಾಷ್ಟ್ರೀಯ ರಾಜಕಾರಣದ ಅರಿವು, ಕೋಮುವಾದ ಮತ್ತು ಸಾಮ್ರಾಜ್ಯಶಾಹಿಯ ಬಗೆಗಿನ ಸೈದ್ಧಾಂತಿಕ ಪ್ರತಿರೋಧ, ಜನಪರ ಕಾಳಜಿ ಮತ್ತು ಬದ್ಧತೆ, ತಾತ್ವಿಕ ಖಚಿತತೆ ಮುಖ್ಯವಾಗಿವೆ. ಸಂಪಾದಕೀಯದ ಭಾಷೆಯಲ್ಲಿ ತಾರ್ಕಿಕ ಬಿಗಿಯಿರುತ್ತದೆ. ಹೊಣೆಗಾರಿಕೆ, ಬಿಕ್ಕಟ್ಟಿನ ಸನ್ನಿವೇಶದಲ್ಲಿ ವಿದ್ಯಮಾನವನ್ನು ಸೂಕ್ಷ್ಮವಾಗಿ ವಿಶ್ಲೇಷಿಸುವ ರೀತಿ, ಪರ್ಯಾಯಗಳನ್ನು ಹೊಳೆಸುವ ಬಗೆ, ನಾಡನ್ನು ಕಟ್ಟುವ ಕಾಣ್ಕೆ ಇರುತ್ತದೆ. ರಾಜಕೀಯವಾಗಿ ಸರಿತನಕ್ಕಾಗಿ ಅತಿ ಎಚ್ಚರವಹಿಸದೆ, ಚರ್ಚಿಸಲು ಹಿಂಜರಿಕೆ ಹುಟ್ಟಿಸುವ ಸಂಕೀರ್ಣ ವಿಷಯಗಳ ಬಗ್ಗೆ, ದಿಟ್ಟವಾದ ಸಂಪಾದಕೀಯಗಳು ಇಲ್ಲಿವೆ. ತಪ್ಪಾದ ಧೋರಣೆಯ ಸಂಪಾದಕೀಯ ಬಂದಾಗ ಓದುಗರು ಹೀಗಲ್ಲ ಎಂದು ಕಟುವಾಗಿ ಪ್ರತಿಕ್ರಿಯಿಸಿರುವುದೂ ಉಂಟು. ಉದಾಹರಣೆಗೆ ಆಫಘಾನಿಸ್ಥಾನದಲ್ಲಿ ಸಾಮ್ರಾಜ್ಯಶಾಹಿ ಅಮೆರಿಕದ ನಿರ್ಗಮನದ ಹೊತ್ತಲ್ಲಿ ಸಂಭವಿಸಿದ ಅಧಿಕಾರ ಬದಲಾವಣೆಯ ಕುರಿತು ಬರೆಯಲಾದ ಸಂಪಾದಕೀಯ. ವಾರ್ತಾಭಾರತಿಯ ಆಯ್ದ ಸಂಪಾದಕೀಯಗಳು ಪುಸ್ತಕ ರೂಪದಲ್ಲಿ ಪ್ರಕಟವಾದರೆ ಕನ್ನಡ ಚಿಂತನ ಸಾಹಿತ್ಯಕ್ಕೆ ಕೊಡುಗೆಯಾಗಬಲ್ಲವು; ಪತ್ರಿಕೋದ್ಯಮದ ವಿದ್ಯಾರ್ಥಿಗಳಿಗೆ ಕೈಪಿಡಿಯಾಗಬಲ್ಲವು.

ಕನ್ನಡದಲ್ಲಿ ಬಂಡವಾಳ ಹೂಡಿಕೆ, ಪ್ರಸರಣ ಸಂಖ್ಯೆ, ಗುಣಮಟ್ಟಗಳ ದೃಷ್ಟಿಯಿಂದ ಯಶಸ್ಸನ್ನು ಸಾಧಿಸಿದ ಪತ್ರಿಕೆಗಳು ಬಹಳಷ್ಟಿವೆ. ಆದರೆ ಸುದ್ದಿ ವಿಶ್ಲೇಷಣೆ ಮತ್ತು ವ್ಯಾಖ್ಯಾನ ಆ ಮೂಲಕ ಒಂದು ತಾತ್ವಿಕ ಚಿಂತನೆ ಮಂಡಿಸುವ ವಿಷಯ ಬಂದಾಗ, ಹೆಚ್ಚಿನವು ನಿರಾಶೆ ಹುಟ್ಟಿಸುತ್ತವೆ. ಕೆಲವಕ್ಕೆ ನಮ್ಮ ಕಣ್ಣೆದುರಿನ ಸಮಾಜ ಕುರಿತಂತೆ ಒಂದು ಆಳವಾದ ದಾರ್ಶನಿಕ ದೃಷ್ಟಿಕೋನವೇ ಇರುವುದಿಲ್ಲ. ಇದಕ್ಕೆ ಕಾರಣ, ಅಲ್ಲಿ ಬರೆಯುವ ಚಿಂತಕರ ಗುಣಮಟ್ಟವೂ ಕಾರಣ. ಆದರೆ ಕೆಲವು ಪತ್ರಿಕೆಗಳಲ್ಲಿ ಸುದ್ದಿಗಿಂತ ಸುದ್ದಿ ವಿಶ್ಲೇಷಣೆಗಳೇ ಅವುಗಳ ಹಿರಿಮೆಗೆ ಕಾರಣ. ಅಲ್ಲಿನ ಚಿಂತಕರು ಮಾಡುವ ವಿದ್ಯಮಾನಗಳ ವಿಶ್ಲೇಷಣೆ ಮತ್ತು ವ್ಯಾಖ್ಯಾನಗಳು ಓದುಗರ ಅರಿವನ್ನು ವಿಸ್ತರಿಸಿವೆ ಮತ್ತು ಚಿಂತಿಸುವ ದೃಷ್ಟಿಕೋನವನ್ನೆ ಬದಲಿಸಿವೆ. ‘ವಾರ್ತಾಭಾರತಿ’ಯಲ್ಲಿ ನಾಡಿನ ಅತ್ಯುತ್ತಮ ಚಿಂತಕರು ಬರೆಯುತ್ತಾ ಬಂದಿದ್ದಾರೆ.

ಪ್ರೊ. ರಹಮತ್ ತರೀಕೆರೆ

ಪ್ರೊ. ರಹಮತ್ ತರೀಕೆರೆ
ರಹಮತ್ ತರೀಕೆರೆ ಕನ್ನಡನಾಡಿನ ಖ್ಯಾತ ಚಿಂತಕರು. ನಾಥಪಂಥ, ಕರ್ನಾಟಕದ ಸೂಫಿಗಳು, ಗುರುಪಂಥಗಳು ಹೀಗೆ ನಾಡಿನ ಹಲವು ಬಹುತ್ವದ ಪಂಥಗಳು ಮತ್ತು ಸೌಹಾರ್ದ ಬದುಕಿನ ಬಗ್ಗೆ ವಿಶೇಷ ಅಧ್ಯಯನಗಳನ್ನು ಮಾಡಿ ಪುಸ್ತಕ ರಚಿಸಿದ್ದಾರೆ. ಇವರ ವಿಮರ್ಶಾ ಸಂಕಲನ ’ಕತ್ತಿಯಂಚಿನ ದಾರಿ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗೌರವ ಸಂದಿದೆ.


ಇದನ್ನೂ ಓದಿ: ಸೆ. 5ಕ್ಕೆ ಗೌರಿ ನೆನಪು ಕಾರ್ಯಕ್ರಮ: ಅರುಂಧತಿರಾಯ್, ಪ್ರಕಾಶ್ ರಾಜ್, ಮೊಹಮ್ಮದ್ ಝುಬೇರ್ ಭಾಗಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...