Homeಮುಖಪುಟಕಾರ್ಮಿಕನ ಪುತ್ರರಾದ ಖರ್ಗೆ ಕಾಂಗ್ರೆಸ್‌ ಅಧ್ಯಕ್ಷ ಹುದ್ದೆಯವರೆಗೆ ಬೆಳೆದ ಯಶೋಗಾಥೆ

ಕಾರ್ಮಿಕನ ಪುತ್ರರಾದ ಖರ್ಗೆ ಕಾಂಗ್ರೆಸ್‌ ಅಧ್ಯಕ್ಷ ಹುದ್ದೆಯವರೆಗೆ ಬೆಳೆದ ಯಶೋಗಾಥೆ

- Advertisement -
- Advertisement -

ಕರ್ನಾಟಕದಲ್ಲಿ ಸುಮಾರು 350 ಭಾರತೀಯ ಪೊಲೀಸು ಸೇವೆ ಅಧಿಕಾರಿಗಳು ಹಾಗೂ ಸುಮಾರು 300 ಭಾರತೀಯ ಆಡಳಿತ ಸೇವೆ ಅಧಿಕಾರಿಗಳು ಇದ್ದಾರೆ. ಅವರಲ್ಲಿ ಅನೇಕರು ರಾಜ್ಯದ ಎಲ್ಲಾ ಕಂದಾಯ ವಿಭಾಗಗಳಲ್ಲಿ ಕೆಲಸ ಮಾಡಿದ್ದಾರೆ. ಇನ್ನು ಕೆಲವರು ಬರೀ ರಾಜಧಾನಿ ಸೇವೆಗೆ ಸೀಮಿತ ಆಗಿದ್ದಾರೆ. ಬೆಂಗಳೂರು ಮೆಟ್ರೊ ಲೈನ್ ಎಲ್ಲಿಗೆ ಮುಗಿಯುತ್ತದೋ ಅಲ್ಲಿಗೆ ಅವರ ಕಲ್ಪನೆಯ ಕರ್ನಾಟಕ ಮುಕ್ತಾಯವಾಗುತ್ತದೆ.

ಆದರೆ ಅವರು ಆಗಾಗ ತುಮಕೂರು, ಕೋಲಾರಗಳಂತಹ ದೂರದ ಊರುಗಳಿಗೆ ಇನ್ಸ್ಪೆಕ್ಷನ್ ಹಾಕಿಕೊಂಡು, ಬೆಳಿಗ್ಗೆ ಹೋಗಿ ಸಂಜೆ ಹಿಂತಿರುಗಿ ಬರುತ್ತಾರೆ. ತಡೆಯಲಾರದ ಒತ್ತಡ ಬಂದು, ಜೀವನ ಮರಣದ ಪ್ರಶ್ನೆ ಉಂಟಾದರೆ ಮಾತ್ರ ಅವರು ಹುಬ್ಬಳ್ಳಿ, ಕಲಬುರ್ಗಿ, ನಿಪ್ಪಾಣಿ, ಹೊಸಪೇಟೆಯಂತಹ ‘ದೇವರೂ ಕೂಡ ಆಸೆ ಕೈ ಬಿಟ್ಟ’ (ಗಾಡ್ ಫಾರ್ಸೇಕನ್) ಜಾಗಗಳಿಗೆ ಹೋದಾರು.

ರಾಜ್ಯದ ಹಿರಿಯ ಅಧಿಕಾರಿಯೊಬ್ಬರ ಜೀವನದಲ್ಲಿ ಈ ರೀತಿಯ ಪ್ರಸಂಗ ಒಂದು ಉಂಟಾಗಿತ್ತು. ಕರ್ನಾಟಕದ ಘನ ಸರ್ಕಾರ ಹಿಂದೊಮ್ಮೆ ಕಲಬುರ್ಗಿಯಲ್ಲಿ ಸಚಿವ ಸಂಪುಟ ಸಭೆ ಕರೆಯುವ ಯೋಜನೆ ಹಾಕಿಕೊಂಡಿತು. ಅಲ್ಲಿನ ಕೆಲ ಸ್ಥಳೀಯ ನಾಯಕರ ದೆಸೆಯಿಂದ ಇದು ಕೆಲವು ವರ್ಷ ನಡೆದೂ ನಡೆಯಿತು. ಇಂತಹ ಒಂದು ಮೀಟಿಂಗ್‌ಗೆ ಅಂತ ಸದರಿ ಅಧಿಕಾರಿ ಬಂದಿದ್ದರು. ಅತ್ಯಂತ ತೂಕದ ವ್ಯಕ್ತಿ ಆಗಿದ್ದ ಇವರು, “ಇಲ್ಲೆಲ್ಲಾ ಹೆಂಗಪ್ಪ ಜನ?” ಅಂತ ತಮ್ಮ ಕಿರಿಯ ಅಧಿಕಾರಿಯೊಬ್ಬರನ್ನು ಕೇಳಿದರು. ಅದರ ಗೂಡಾರ್ಥ ಏನೆಂದರೆ ಇಲ್ಲಿನ ರಾಜಕಾರಣಿಗಳು ಹೆಂಗೆ? ಅಂತ.

ಆ ಪ್ರಶ್ನೆಗೆ ಉತ್ತರ ನೀಡುವ ಸೌಭಾಗ್ಯ ತಮ್ಮದಾಗಿದ್ದಕ್ಕೆ ಪುಳಕಿತರಾದ ಆ ಕೆಳಗಿನ ಅಧಿಕಾರಿ “ಇವರೆಲ್ಲ ಸುಮಾರು ಸಾರ್ ಅಂದ್ರು”. “ಮತ್ತೆ ಆ ಧರಂ ಸಿಂಗ್-ಖರ್ಗೆ ಅವರೆಲ್ಲ ತುಂಬಾನೇ ಕೆಲಸ ಮಾಡಿದಾರೆ ಅಂತ ಅಂತಾರಲ್ಲಪ್ಪಾ”, ಅಂತ ಹಿರಿಯರು ಅಂದ್ರು. “ಅಯ್ಯೋ ಅದೆಲ್ಲಾ ಸುಮ್ನೆ ಸಾ. ಧರಂ ಸಿಂಗ್ ಅವರು ಮಾಡಿ ಕೊಡೋದು ಏನ್ ಇದ್ರೂ ಜನರ ಪರ್ಸನಲ್ ಕೆಲ್ಸಗಳು. ಖರ್ಗೆ ಅಲ್ಪ-ಸ್ವಲ್ಪ ಮಾಡಿದ್ದಾರೆ. ಆದರೆ ಇಲ್ಲಿನ ಜನ ಹೇಳೋದು ಏನು ಅಂದರೆ, ಅವರು ಏನು ಮಾಡಿದರೆ ಅಂತ ಹೇಳೋಕೆ ಒಂದು ಗಂಟೆ ಬೇಕು. ಆದರೆ ಏನು ಮಾಡಬೇಕಾಗಿತ್ತು, ಆದರೆ ಮಾಡಿಲ್ಲ ಅಂತ ಹೇಳೋಕೆ ಒಂದು ದಿನ ಬೇಕು ಅಂತ. ಅಲ್ವಾ ಸಾ” ಅಂತ ಹೇಳಿ ಆಕಡೆ ಈಕಡೆ ನೋಡಿದರು. ಗಣಿತದ ಪೀರಿಯಡ್‌ನಲ್ಲಿ ಜಾಣತನದ ಉತ್ತರ ಕೊಟ್ಟ ಚೂಟಿ ಹುಡುಗನೊಬ್ಬ ಮಾಸ್ತರರ ಮೆಚ್ಚುಗೆಯ ಮಾತನ್ನು ನಿರೀಕ್ಷಿಸುವಂತೆ ಅವರತ್ತ ನೋಡುವಂತೆ. “ಅಯ್ಯೋ ಗೊತ್ತಿಲ್ಲಪ್ಪ, ನಾನಂತೂ ಆ ವಯ್ಯನ ಹತ್ರ ಇನ್ನಾವರಗೂ ಕೆಲಸ ಮಾಡಿಲ್ಲ, ಮುಂದೇನೂ ಮಾಡಲ್ಲ. ಇದು ಮಾತ್ರಾ ಗ್ಯಾರಂಟಿ” ಅಂದ ನಿವೃತ್ತಿಯ ಅಂಚಿಗೆ ಬಂದಿದ್ದ ಹಿರಿಯ ಅಧಿಕಾರಿ ನಕ್ಕರು; ವಿಷಯ ಬದಲಾಯಿಸಿದರು.

ಖರ್ಗೆ ಅವರ ಬಗ್ಗೆ ಸದಾಕಾಲ ಕೇಳಿ ಬರುವ ಟೀಕೆಗಳಲ್ಲಿ ಇದು ಅತ್ಯಂತ ಮೃದುವಾದದ್ದು ಅಂತ ಅನ್ನಿಸುತ್ತದೆ. ನಾನು ಕೆಲಸ ಮಾಡುತ್ತಿದ್ದ ಸುದ್ದಿ ಮನೆಯೊಂದರ ಹಿರಿಯ ಸಂಪಾದಕರೊಬ್ಬರು ಖರ್ಗೆ ಅವರನ್ನು ಯಾವಾಗಲೂ ‘ಮಲ್ಲಿಕಾರ್ಜುನ ಕರ್ರ…. ಗೆ’ ಅಂತ ತಮಾಷೆ ಮಾಡುತ್ತಿದ್ದರು. ಪ್ರತಿ ಬಾರಿ ಯಾರಾದರೂ ವರದಿಗಾರರು ಖರ್ಗೆ ಬಗ್ಗೆ ಸುದ್ದಿ ತಂದಾಗಲೂ ‘ಏನಪ್ಪಾ ಕರ್ರ…. ಗೆ ಸುದ್ದಿ ತಂದೆಯಾ’ ಅಂತ ಮುಸಿಮುಸಿ ನಗುತ್ತಿದ್ದರು. ಅವರ ಮೀಸೆಯ ಅಡಿಯಲ್ಲಿ ನೀವೂ ನಗಬೇಕು ಎನ್ನುವ ಸೂಚನೆ ಇರುತ್ತಿತ್ತು. ತಲೆ ತಲಾಂತರದಿಂದ ಪತ್ರಿಕೋದ್ಯಮದ ಅನ್ನ ಉಂಡಿದ್ದ ಆ ಖಾನದಾನಿ ಪತ್ರಕರ್ತರು ಖರ್ಗೆ ಅವರ ಕಾರ್ಯ ವೈಖರಿಯ ಬಗ್ಗೆ, ಕೆಲಸದ ಬಗ್ಗೆ, ಸ್ವಭಾವದ ಬಗ್ಗೆ ಮಾತನಾಡಿದ್ದು ನಾನು ಕಾಣಲಿಲ್ಲ. ಅವರ ಹುಸಿ ನಗೆ ಖರ್ಗೆ ಅವರ ಮೈ ಬಣ್ಣದ ಬಗ್ಗೆ ಮಾತ್ರ ಇರುತ್ತಿತ್ತು. ಹಾಗೆಂದು ನಕ್ಕವರೇನೂ ಭಾಳ ಬೆಳ್ಳಗೆ ಇರಲಿಲ್ಲ.

ಕೋಲಾರದ ಕಡೆ ಬಡ ಜನರ ಜಮೀನನ್ನು ಕಿತ್ತು ತಿಂದ ಯುವ ಕಾಂಗ್ರೆಸ್ ನಾಯಕರೊಬ್ಬರು ಒಮ್ಮೆ ತಮ್ಮ ಪಕ್ಷದ ಬಗ್ಗೆ ಮಾತಾಡಿದ್ದರು. “ನಮ್ಮ ಪಕ್ಷಕ್ಕೆ ಅರ್ಜೆಂಟ್ ಚಿಕಿತ್ಸೆ ಅಗತ್ಯ ಇದೆ. ನಮ್ಮಲ್ಲಿ ಒಂದು ನೂರು-ಎರಡು ನೂರು ಕೆಜಿ ತೂಕದ ನಾಯಕರು ಇದ್ದಾರೆ. ಅವರಿಗೆ ಅವರ ಪಂಚೆ ಸಹಿತಾ ಬೇರೆಯವರು ಕಟ್ಟಿ ಕೊಡಬೇಕು. ಅಂತವರು ಎಲ್ಲಾ ಇರೋ ತನಕ ಇಲ್ಲಿ ಏನೂ ಬದಲಾಗಲ್ಲ” ಅಂತ. ಇದು ಯಾರನ್ನು ಕುರಿತು ಹೇಳಿದ್ದು ಅಂತ ಎಲ್ಲರಿಗೂ ಗೊತ್ತಾಗಿಬಿಟ್ಟಿತು. ಎಂಥಾ ಓಪನ್ ಸೀಕ್ರೆಟ್‌ಅನ್ನು ಈ ಕ್ರಾಂತಿಕಾರಿ ಯುವಕ ಹೇಳಿದ್ದಾನೆ ಅಂತ ಎಲ್ಲರೂ ಅವನನ್ನು ಕೊಂಡಾಡಿದರು. ಆ ನಾಯಕರನ್ನು ಹೀಯಾಳಿಸಿ ನಕ್ಕರು. ಹೀಗೆ ಆಡಿಕೊಂಡು ನಕ್ಕವರಲ್ಲಿ ಬಹುತೇಕರು ಕಾಂಗ್ರೆಸ್‌ನಲ್ಲಿ ಇದ್ದವರು.

ಈಗ ಆ ಕ್ರಾಂತಿಕಾರಿ ಯುವ ನಾಯಕರು ಆಳುವ ಬಿಜೆಪಿಯಲ್ಲಿ ಇದ್ದಾರೆ. ಕಾಂಗೈ ಹೈ ಕಮಾಂಡ್ ಖರ್ಗೆ ಅವರನ್ನು ಕೈಬಿಟ್ಟು ಎಸ್.ಎಂ ಕೃಷ್ಣ ಅವರನ್ನು ಆಯ್ಕೆ ಮಾಡಿದಾಗ ಹಿರಿಯ ಪತ್ರಕರ್ತರೊಬ್ಬರು ಪ್ರಮುಖ ಪತ್ರಿಕೆಯಲ್ಲಿ ಖರ್ಗೆ ಅವರ ಸಂದರ್ಶನ ಮಾಡಿದರು. ಅದರಲ್ಲಿ ಖರ್ಗೆ “ನನಗೆ ಮುಖ್ಯಮಂತ್ರಿ ಸ್ಥಾನ ಸಿಕ್ಕಿಲ್ಲ ಅಂತ ಏನೂ ಬೇಸರ ಇಲ್ಲ. ‘ವ್ಯಕ್ತ ಸೇ ಪೆಹಲೆ, ತಕದೀರ್ ಸೇ ಜ್ಯಾದಾ ಕುಛ ನಹಿ ಮಿಲತಾ’ (ಸೂಕ್ತ ಸಮಯಕ್ಕೆ ಮುನ್ನ, ಹಣೆಬರಹಕ್ಕೂ ಹೆಚ್ಚು ಏನೂ ಸಿಗಲಾರದು)” ಅಂತ ಪ್ರತಿಕ್ರಯಿಸಿದರು.

ಇದು ರಾಜ್ಯ ಪತ್ರಿಕೋದ್ಯಮದಲ್ಲಿಯೇ ಬಹುಚರ್ಚಿತ ಸಂದರ್ಶನಗಳಲ್ಲಿ ಒಂದಾಗಿ ಪರಿಣಮಿಸಿತು. ಪ್ರೆಸ್ ಕ್ಲಬ್‌ನಲ್ಲಿ ಮರು ದಿನ ಭಾರಿ ಚರ್ಚೆ ಆಯಿತು. ಅಲ್ಲಿನ ಒಳಕೋಣೆಯಲ್ಲಿ ಕುಳಿತ ಒಬ್ಬರು “ಪರ್ವಾಗಿಲ್ಲಾರಿ ಈ ಮನುಷ್ಯ, ನಾನು ಏನೋ ಅಂತ ತಿಳ್ಕೊಂಡಿದ್ದೇ. ಕೆಟಗರಿ ಜನಾ ಆದರೂ ಸುಮಾರು ಬುದ್ಧಿವಂತ ಇದ್ದಾನೆ” ಅಂತ ಸ್ವ-ವಿಮರ್ಶಾತ್ಮಕ ಉದ್ಘಾರ ತೆಗೆದರು.

ಇದನ್ನೂ ಓದಿ: ಖರ್ಗೆ ಮತ್ತು ಥರೂರು: ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯ ದೇಸೀ ಹಾಗೂ ಮಾರ್ಗ

ತಮ್ಮ ಕೈ ನಡೆಯುವಾಗ ಖರ್ಗೆ ಅವರು ಹೈದರಾಬಾದು ಕರ್ನಾಟಕ ಹಾಗೂ ಗುಲ್ಬರ್ಗದ ಬೆಳವಣಿಗೆಗೆ ತಮ್ಮ ಕೈಲಾದ ಕೊಡುಗೆ ನೀಡಿದ್ದಾರೆ. ಇದು ಅದೇ ಪ್ರದೇಶದಿಂದ ಬಂದ ಇತರ ನಾಯಕರಿಗಿಂತ ಹೆಚ್ಚು. ಇದರಲ್ಲಿ 371-ಜೆ ಅಡಿಯಲ್ಲಿ ಆ ಏಳು ಜಿಲ್ಲೆಗಳ ರಹವಾಸಿಗಳಿಗೆ ದೊರೆತ ಪ್ರಾದೇಶಿಕ ಮೀಸಲು ಸೌಲಭ್ಯ, ಪಶು ವೈದ್ಯ ವಿವಿ, ಹೈ ಕೋರ್ಟು ಬೆಂಚು, ಇಎಸ್‌ಐ ಆಸ್ಪತ್ರೆ ಹಾಗೂ ವೈದ್ಯ ಕಾಲೇಜು, ರಾಜ್ಯ ಸರಕಾರದ ವೈದ್ಯ ಕಾಲೇಜು, ಜಯದೇವ ಆಸ್ಪತ್ರೆ, ಕೇಂದ್ರ ಸರಕಾರದ ಕೆಲವು ಕಚೇರಿಗಳು, ರೈಲ್ವೆ ಸೌಲಭ್ಯ, ಇತ್ಯಾದಿ.

“ಉಳಿದಿದ್ದೆಲ್ಲಾ ಓಕೆ, ಆದರೆ ಇಎಸ್‌ಐ ಆಸ್ಪತ್ರೆ ಹಾಗೂ ವೈದ್ಯ ಕಾಲೇಜು ಮಾಡಿದ್ದು ಮಾತ್ರ ತಪ್ಪು. ಅದು ಕಂಪ್ಲೀಟ್ ರಾಂಗ್ ಮೊವ್, ಐ ಸೇ” ಅಂತ ಒಬ್ಬರು ಸರ್ಕಾರಿ ವೈದ್ಯ ಕಾಲೇಜು ಪ್ರೊಫೆಸರ್ ನನ್ನ ಬಳಿ ಹೇಳಿದರು. “ಯಾಕೆ ಹಾಂಗ್ ಅಂತೀರಿ ಸಾರ್” ಅಂತ ನಾನು ಕೇಳಿದಾಗ, “ಅದು ಕೇವಲ ತಮ್ಮ ಅಠಾರ ಪರ್ಸೆಂಟ್ ಜನರಿಗೆ ನೌಕರಿ ಕೊಡಬೇಕು ಅಂತ ಮಾಡಿದ್ದು. ಇದು ಭಾಳ ತಪ್ಪು ಕೆಲಸ” ಅಂತ ಅವರು ಅಂದ್ರು. ನೀವು ಈ ಮಾತು ಹೇಳಬಾರದು. ಯಾವ ಜಾತಿಯ ಎಷ್ಟು ಜನ ಅಲ್ಲಿ ಕೆಲಸಕ್ಕೆ ಇದ್ದರೆ ಅನ್ನುವ ಲೆಕ್ಕ-ಪಟ್ಟಿ ಇಟ್ಟುಕೊಂಡು ನೀವು ಮಾತಾಡುತ್ತಾ ಇದ್ದೀರಾ? ನಿಮಗೆ ಸರ್ಕಾರಿ ಕಾಲೇಜು ಅಲ್ಲದೆ ಖಾಸಗಿ ಕಾಲೇಜಿನಲ್ಲಿ ಕೆಲಸ ಇದ್ದರೆ ಎಷ್ಟು ಸಂಬಳ ಬರುತ್ತಿತ್ತು? ಅಂತ ಕೇಳಿದೆ. ಮನುಷ್ಯನ ಮೈ ಎಲ್ಲಾ ಜಾತಿ ದ್ವೇಷದ ರಕ್ತ ಹರಿಯುತ್ತಾ ಇದ್ದಾಗ ಮಾತ್ರ ಈ ರೀತಿ ಮಾತಾಡಲು ಸಾಧ್ಯ ಅಂತ ಅನ್ನಿಸಿತು.

ಇನ್ನು ಖರ್ಗೆ ಅವರ ಬಗ್ಗೆ ಬಹು ಚರ್ಚಿತ ಅಲ್ಲದ ಕೆಲ ವಿಷಯಗಳನ್ನು ನೋಡೋಣ.

ಕೆಲವು ವರ್ಷಗಳ ಹಿಂದಿನ ಮಾತು. ಹುಮ್ನಾಬಾದ್ ಹಾಗೂ ಬೀದರ್ ನಡುವೆ ಹೊಸದಾಗಿ ನಿರ್ಮಿಸಿದ ರೈಲ್ವೆ ಹಳಿಯ ಮೇಲೆ ಹೊಸ ಡೆಮು ಟ್ರೇನ್ ಉದ್ಘಾಟನೆ ಕಾರ್ಯಕ್ರಮ ನಡೆಯುತ್ತಿತ್ತು. ಅಂದಿನ ರೇಲ್ವೆ ಕ್ಯಾಬಿನೆಟ್ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ವೇದಿಕೆಯ ಬಲ ಬದಿಗೆ ಕುಳಿತಿದ್ದರು. ಎಡ ಬದಿಗೆ ಕುಳಿತಿದ್ದ ಕಾಂಗ್ರೆಸ್ ನಾಯಕರೊಬ್ಬರು ತಮ್ಮ ಎದುರಿಗೆ ಇದ್ದ ಮೈಕ್‌ನಲ್ಲಿ ಭಾಷಣ ಬಿಗಿಯುತ್ತಿದ್ದರು. ನಮ್ಮ ಜಿಲ್ಲೆಯವರೆ ಆದ ಖರ್ಗೆ ಅವರು ನಮಗೆ ಬಹಳ ಕೊಡುಗೆ ಕೊಟ್ಟಿದಾರು. ಅವರು ಬೀದರ್ ಬೆಂಗಳೂರು ನಡುವೆ ಅತಿ ವೇಗದ ಟ್ರೇನ್ ಶುರು ಮಾಡಿದ್ದಾರ.

ಅವರು ಬೀದರ್-ಹೈದರಾಬಾದ್ ನಡುವೆ ಇಂಟರ್ ಸಿಟಿ ಎಕ್ಸ್‌ಪ್ರೆಸ್ ಟ್ರೇನ್ ಬಿಟ್ಟಾರ, ನಿಜಾಮರು- ಬ್ರಿಟಿಷರ ಕಾಲದ ನಂತರ ನಮ್ಮ ಪ್ರದೇಶದೊಳಗ ಹೊಸ ಹಳಿ ಹಾಕಲಿಕ್ಕೆ ಯಾರಿಂದಲೂ ಆಗಿರಲಿಲ್ಲ. ಆ ಕೆಲಸ ಖರ್ಗೆ ಸಾಹೇಬರು ಮಾಡಿದ್ದಾರ” ಇತ್ಯಾದಿ ಇತ್ಯಾದಿ.

ಖರ್ಗೆ ಅವರು ಭಾಷಣಕಾರರ ಕಡೆ ಕೈ ಸನ್ನೆ ಮಾಡಿ ಅವರನ್ನು ನಿಲ್ಲಿಸಿದರು. ವೇದಿಕೆಯ ಆ ಕಡೆಯಿಂದ ಈ ಕಡೆಗೆ ಎದ್ದು ಬಂದರು. ಭಾಷಣ ಮಾಡುತ್ತಿದ್ದ ಅವರ ಶಿಷ್ಯರಿಗೆ ಸಂತೋಷವಾಯಿತು. ಸಾಹೇಬರ ಒಳ್ಳೆ ಕೆಲಸಗಳ ಬಗ್ಗೆ ನಾನು ಹೇಳುವುದರಲ್ಲಿ ಏನೋ ಕಡಿಮೆ ಆಗಿರಬೇಕು. ಅದಕ್ಕೆ ಸೇರಿಸಲು ಬರುತ್ತಿದ್ದಾರೆ ಎಂದು ಹೇಳಿ ಅವರು ಪಕ್ಕಕ್ಕೆ ಸರಿದು ನಿಂತರು. ಮೈಕ್ ಕಡೆಗೆ ಬಂದ ಖರ್ಗೆ “ಇವರು ಹೇಳುವುದರಲ್ಲಿ ಒಂದು ಮಾಹಿತಿ ಸರಿ ಇಲ್ಲ. ಹೈದರಾಬಾದು ಇಂಟರ್ ಸಿಟಿ ಎಕ್ಸ್‌ಪ್ರೆಸ್ ನಾನು ಶುರು ಮಾಡಿದ್ದು ಅಲ್ಲ. ನಮ್ಮದೇ ಸರಕಾರದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕರಾಗಿದ್ದ ದಿನೇಶ್ ತ್ರಿವೇದಿ ಅವರು ಆ ಟ್ರೇನ್ ಅನ್ನು ಶುರುಮಾಡಿದರು. ಭಾರತೀಯ ವಾಯುಸೇನೆಯಲ್ಲಿ ಪೈಲಟ್ ಆಗಿದ್ದ ಅವರು ಬೀದರನಲ್ಲಿ ಕೆಲ ಕಾಲ ಕೆಲಸ ಮಾಡಿದ್ದರು. ಆ ಕರಳುಬಳ್ಳಿ ಸಂಬಂಧ ಆ ಕೆಲಸ ಮಾಡಿಸಿತು” ಎಂದು ಹೇಳಿ ಮತ್ತೆ ಹೋಗಿ ತಮ್ಮ ಕುರ್ಚಿಯ ಮೇಲೆ ಕೂತರು.

ತಮ್ಮ ಜೀವಿತ ಕಾಲದಲ್ಲಿ ನಡೆದ ಎಲ್ಲಾ ಒಳ್ಳೆ ಕೆಲಸಗಳನ್ನು ಮಾಡಿದವನು ತಾನೇ ಎಂದೂ, ಇಂದಿನ ಹಾಗೂ ಹಿಂದಿನ ಎಲ್ಲಾ ಕೆಟ್ಟ ಕೆಲಸ ಗಳನ್ನು ಮಾಡಿದವರು ವಿರೋಧ ಪಕ್ಷದವರು ಎಂದು ರೈಲು ಬಿಡುತ್ತಲೇ ಇರುವ ರಾಜಕಾರಣಿಗಳ ನಡುವೆ ಖರ್ಗೆ ಅಪರೂಪದ ನಾಯಕ. ನಮ್ಮ ನಡುವಿನ ಅಪರೂಪದ ಶ್ರೀಸಾಮಾನ್ಯ .

ಇಂತಹುದೇ ಇನ್ನೊಂದು ಪ್ರಸಂಗ ನೆನಪಿಗೆ ಬರುತ್ತದೆ. ಎಸ್.ಎಂ ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದಾಗ ಮಹಾರಾಷ್ಟ್ರದ ಗಡಿಯ ಔರಾದ ತಾಲೂಕಿನ ಕೆಲ ಹಳ್ಳಿಗಳಲ್ಲಿ ಪ್ರವಾಹ ಬಂದಿತ್ತು. ಮನೆ ಮಾರು ಕಳೆದುಕೊಂಡ ಅನೇಕ ಬಡವರು ಗಂಜಿ ಕೇಂದ್ರಗಳಲ್ಲಿ ನೆಲೆಸಿದ್ದರು. ಆಗ ಅಲ್ಲಿನ ಸ್ಥಳೀಯ ನಾಯಕರೊಬ್ಬರು ’ನಾವು ನಮ್ಮ ಪಕ್ಷದ ವತಿಯಿಂದ ನಿಮಗೆ ಉಚಿತವಾಗಿ ಜೋಳ ಹಂಚುತ್ತೇವೆ. ಅದಕ್ಕಾಗಿ ಒಂದು ಟ್ರಕ್ ಜೋಳ ತರಿಸಿದ್ದೇವೆ’ ಅಂತ ಹೇಳಿದರು. ಅದೇ ಮಾತನ್ನು ಅಂದಿನ ಮುಖ್ಯಮಂತ್ರಿ ಪುನರ್ ಉಚ್ಚರಿಸಿದರು. ಅದನ್ನು ಮರಾಠಿಯಲ್ಲಿ ಭಾಷಾಂತರಿಸುವ ಜವಾಬುದಾರಿ ಖರ್ಗೆ ಅವರದು ಆಗಿತ್ತು. “ಈ ಊರಿಗೆ ಒಂದು ಟ್ರಕ್ ಜೋಳ ತರುವುದಾಗಿ ನಿಮ್ಮ ನಾಯಕರು ಹೇಳುತ್ತಿದ್ದಾರೆ” ಅಂತ ಖರ್ಗೆ ಹೇಳಿದರು. “ಇಲ್ಲ ಸಾರ್. ಅದು ಆಗಲೇ ಊರ ಅಗಸಿಗೆ ಬಂದುಬಿಟ್ಟೆತಿ. ಇನ್ನೇನು ಕೊಟ್ಟೆ ಬಿಡ್ತೇವಿ” ಅಂತ ಆ ಊರಿನ ನಾಯಕರು ಸಮಜಾಯಿಶಿ ಕೊಡಲು ಹೋದರು. ‘ಮೀ ತರ ಬಗೀತಲಸ ನಾಹಿ’ (ನಾನಂತೂ ನೋಡಿಲ್ಲ ) ಅಂತ ಖರ್ಗೆ ಅಂದ್ರು.

ಒರಿಸ್ಸಾ ಕೇಡರ್‌ನ ಯುವ ಐಎಎಸ್ ಅಧಿಕಾರಿಯೊಬ್ಬರು ಕರ್ನಾಟಕದ ಐಪಿಎಸ್ ಅಧಿಕಾರಿಣಿಯೊಬ್ಬರನ್ನು ಮದುವೆಯಾಗಿ ಕರ್ನಾಟಕಕ್ಕೆ ಬಂದರು. ಅವರ ಮೊದಲ ಕೆಲಸ ಸಾರಿಗೆ ಸಂಸ್ಥೆಯಲ್ಲಿ. ಕಂಠ ಪೂರ್ತಿ ಕುಡಿದು ಹೊಡೆದಾಡಿಕೊಂಡ ಡ್ರೈವರ್-ಕಂಡಕ್ಟರ್ ಇಬ್ಬರನ್ನು ಅವರು ವಿಚಾರಣೆ ನಂತರ ವಜಾ ಮಾಡಿದರು. ಸಾರಿಗೆ ಸಂಸ್ಥೆ ಅಧ್ಯಕ್ಷರಾದ ಮುಖ್ಯಮಂತ್ರಿ ಆ ಆದೇಶವನ್ನು ತಳ್ಳಿ ಹಾಕಿ ಅವರನ್ನು ಪುನರ್ ನೇಮಕ ಮಾಡಿದರು. ಆ ನೇಮಕಾತಿ ಆದೇಶವನ್ನು ಕೈಯಲ್ಲಿ ಇಟ್ಟುಕೊಂಡು ಈ ಐಎಎಸ್ ಅಧಿಕಾರಿ ಸಾರಿಗೆ ಸಚಿವರಾಗಿದ್ದ ಖರ್ಗೆ ಅವರನ್ನು ಭೇಟಿ ಮಾಡಲು ಹೋದರು. “ಇವರನ್ನು ವಾಪಸ್ ಕೆಲಸಕ್ಕೆ ತೆಗೆದುಕೊಳ್ಳುವುದರಿಂದ ಸಾರಿಗೆ ನಿಗಮಕ್ಕೆ ಲಾಭವೇ?” ಎಂದು ಖರ್ಗೆ ಇವರನ್ನು ಕೇಳಿದರು. “ಇಲ್ಲ ಸಾರ್. ಅವರು ಇಬ್ಬರೂ ಕೆಲಸಕ್ಕೆ ಬಾರದವರು. ಹಿಂದೆಯೂ ಈ ರೀತಿ ಮಾಡಿದ್ದಾರೆ. ಏನಾದರೂ ಹೇಳಲು ಹೋದರೆ ನಮಗೆ ರಾಜಕಾರಣಿಗಳ ಬೆಂಬಲ ಇದೆ ಎಂದು ಇತರರನ್ನು ಹೆದರಿಸುತ್ತಾರೆ” ಎಂದು ಅಧಿಕಾರಿ ಉತ್ತರಿಸಿದರು. “ಹಾಗಾದರೆ ಅವರನ್ನು ಕೆಲಸಕ್ಕೆ ತೆಗೆದು ಕೊಳ್ಳುವುದು ಬೇಡ. ನಿಮಗೆ ಯಾರಾದರೂ ಮುಖ್ಯಮಂತ್ರಿಯವರ ಕಚೇರಿಯಿಂದ ಫೋನು ಮಾಡಿದರೆ ಸಾರಿಗೆ ಸಚಿವರ ಹತ್ತಿರ ಮಾತಾಡುವಂತೆ ಹೇಳಿ” ಎಂದರು. ಖರ್ಗೆ ಅವರ ವ್ಯಕ್ತಿತ್ವದ ಪರಿಚಯ ಇದ್ದ ಮುಖ್ಯಮಂತ್ರಿಯ ಕಚೇರಿಯಿಂದ ಆ ಫೋನು ಬರಲಿಲ್ಲ. ಹೊಸದಾಗಿ ರಾಜ್ಯಕ್ಕೆ ಬಂದ ಐಎಎಸ್ ಅಧಿಕಾರಿಯ ಮನೋಬಲ ಗಟ್ಟಿಯಾಯಿತು.

ಕರ್ನಾಟಕದ ಪೊಲೀಸ್ ಇತಿಹಾಸದಲ್ಲಿ ದಂತಕತೆಯಾಗಿರುವ ಐಪಿಎಸ್ ಅಧಿಕಾರಿಯೊಬ್ಬರು ಪೊಲೀಸ್ ಅಧಿಕಾರಿಗಳನ್ನು ಲಿಖಿತ ಪರೀಕ್ಷೆ ನಂತರ ನೇಮಕ ಮಾಡಿಕೊಳ್ಳಬೇಕು ಎನ್ನುವ ನಿಯಮ ಜಾರಿಗೆ ತಂದರು. ಪೊಲೀಸ್ ಪೇದೆ ಯಾರಾದರೂ ಪದವೀಧರರಾಗಿದ್ದರೆ ಅವರಿಗೂ ಒಂದು ಪರೀಕ್ಷೆ ನಡೆಸಿ ಪದೋನ್ನತಿ ಮಾಡಬಹುದು ಎನ್ನುವ ನಿಯಮ ಜಾರಿಗೊಳಿಸಿದರು.

ಆಗ ಗೃಹ ಸಚಿವರಾಗಿದ್ದ ಖರ್ಗೆ ಅವರ ಗನ್ ಮ್ಯಾನ್ ಪದವೀಧರ ಪೊಲೀಸ್ ಪೇದೆಯಾಗಿದ್ದರು. ಅವರಿಗೆ ಪದೋನ್ನತಿ ಆಸೆ ಇತ್ತು. ಅವರಿಗೆ ‘ಹೇಗಾದರೂ ಮಾಡಿ ಬಡ್ತಿ ಕೊಡಿ’ ಅಂತ ಆಗಿನ ಮುಖ್ಯಮಂತ್ರಿ ಹಾಗೂ ಈಗಿನ ಕಾಂಗ್ರೆಸ್ ಅಧ್ಯಕ್ಷರೂ ಸೇರಿದಂತೆ ಅನೇಕ ನಾಯಕರು, ಅಧಿಕಾರಿಗಳು ಆ ಐಪಿಎಸ್ ಅಧಿಕಾರಿಯವರಿಗೆ ಹೇಳಿದರು. ಆದರೆ ಆ ಗನ್ ಮ್ಯಾನ್ ನೇಮಕಾತಿ ಪರೀಕ್ಷೆ ಪಾಸಾಗಲಿಲ್ಲ. ಅವರ ಬಡ್ತಿ ಆಗಲಿಲ್ಲ. ಆ ನಂತರವೂ ಎರಡು – ಮೂರು ವರ್ಷ ಆ ಅಧಿಕಾರಿ ಅದೇ ಸ್ಥಾನದಲ್ಲಿ ಮುಂದುವರಿದರು. “ಖರ್ಗೆ ಅವರು ನನ್ನ ಮುಂದೆ ಆ ವಿಷಯವನ್ನು ಒಂದು ದಿನವೂ ಪ್ರಸ್ತಾಪ ಮಾಡಲಿಲ್ಲ” ಅಂತ ಈಗ ನಿವೃತ್ತರಾಗಿರುವ ಆ ಐಪಿಎಸ್ ಅಧಿಕಾರಿ ಹೇಳುತ್ತಾರೆ.

ಇದನ್ನೂ ಓದಿ: ಕಾಂಗ್ರೆಸ್ ಪಕ್ಷದ ಅಧ್ಯಕ್ಷೀಯ ಚುನಾವಣೆ ಮತ್ತು ಮಲ್ಲಿಕಾರ್ಜುನ ಖರ್ಗೆ

ಬೀದರ್ ಜಿಲ್ಲೆ ಭಾಲ್ಕಿ ತಾಲೂಕು ವರವಟ್ಟಿ ಎಂಬ ಕುಗ್ರಾಮದ ಭೂರಹಿತ ಕೃಷಿ ಕೂಲಿ ಕಾರ್ಮಿಕ ಮಾಪಣ್ಣನ ಮನೆಯಲ್ಲಿ ಖರ್ಗೆ ಹುಟ್ಟಿದವರು. ಒಂದು ಅಂಕಣದ ತೆಂಗಿನ ಸೂರಿನ ಆ ಮನೆ ಈಗಲೂ ಇದೆ. ಆ ಊರಿನ ದೈವದ ನೆನಪಿನಲ್ಲಿ ಅವರ ತಂದೆ ಅವರಿಗೆ ಹೆಸರು ಇಟ್ಟರು ಅಂತ ಅವರ ಊರಲ್ಲಿ ಇರುವ ಅವರ ಸಂಬಂಧಿಕರು ಹೇಳುತ್ತಾರೆ.

ತನ್ನ ಮೊದಲ ಹೆಂಡತಿ ಸಾಬವ್ವ ಹಾಗೂ ಇಬ್ಬರು ಮಕ್ಕಳನ್ನು ದಂಗೆಯೊಂದರಲ್ಲಿ ಕಳೆದುಕೊಂಡ ಮಾಪಣ್ಣ ಖರ್ಗೆ, ಪುಟ್ಟ ಕೂಸಾಗಿದ್ದ ಮಲ್ಲಿಕಾರ್ಜುನನನ್ನು ಎತ್ತಿಕೊಂಡು ಗುಲ್ಬರ್ಗಕ್ಕೆ ಓಡಿ ಹೋದರು. ಅಲ್ಲಿನ ಎಂಎಸ್‌ಕೆ ಮಿಲ್‌ನಲ್ಲಿ ಕೂಲಿ ಕೆಲಸ ಮಾಡಿ ಮಗನನ್ನು ವಕೀಲನನ್ನಾಗಿಸಿದರು. ಕಾರ್ಮಿಕ ನಾಯಕರಾಗಿ, ಅಂಬೇಡ್ಕರ್‌ವಾದಿಯಾಗಿ, ಬುದ್ಧನ ಧಮ್ಮದಲ್ಲಿ ನಂಬಿಕೆ ಇಟ್ಟುಕೊಂಡು ಬೆಳೆದರು. ಅಂಬೇಡ್ಕರ್ ಅವರ ಆರ್‌ಪಿಐ ಪಕ್ಷದ ವತಿಯಿಂದ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಗೆದ್ದು ನಂತರ ಮೂರನೇ ಸಾರ್ವತ್ರಿಕ ಚುನಾವಣೆ ಯಲ್ಲಿ ಕಾಂಗ್ರೆಸ್ ಶಾಸಕರಾದರು.

ನಮ್ಮ ದೂರದ ಸಂಬಂಧಿಯೊಬ್ಬರು ಕೇಂದ್ರ ಸರಕಾರದ ಹಿರಿಯ ಅಧಿಕಾರಿಯಾಗಿ ನಿವೃತ್ತಿ ಹೊಂದಿದ ಮೇಲೆ ಹತ್ತಿರದ ಆಶ್ರಮಕ್ಕೆ ಹೋಗಿ ಸನ್ಯಾಸ ಪಡೆದರು. ಆ ನಂತರ ಅನೇಕ ವರ್ಷ ಮಹಾರಾಷ್ಟ್ರದ ಹಳ್ಳಿಯೊಂದರಲ್ಲಿ ಸರ್ವೋದಯ ಕಾರ್ಯಕರ್ತರಾಗಿ ಸೇವೆ ಮಾಡಿದರು. ಕೆಲವು ದಶಕಗಳ ಕಾಲ ಅವಿಭಜಿತ ಕರ್ನಾಟಕ-ಮಹಾರಾಷ್ಟ್ರಗಳಲ್ಲಿ ಕೆಲಸ ಮಾಡಿದ್ದ ಅವರು ಇಲ್ಲಿನ-ಅಲ್ಲಿನ ರಾಜಕೀಯ ಬಲ್ಲವರಾಗಿದ್ದರು. ತಮ್ಮ ತಿಳಿ ಹಾಸ್ಯ ಭರಿತ ಕಠೋರ ಮಾತುಗಳಿಗೆ ಹೆಸರಾಗಿದ್ದ ಅವರು ಆಗಾಗ ಒಂದು ಮಾತು ಹೇಳುತ್ತಿದ್ದರು: “ಈ ಅಂತುಲೆ ದೇಶ ಭಕ್ತ, ಖರ್ಗೆ ಪ್ರಾಮಾಣಿಕ, ಸಿದ್ದರಾಮಯ್ಯ ಬುದ್ಧಿವಂತ ಅಂತ ಹೇಳಿದರ ಯಾರರ ನಂಬತಾರೇನು”? ಇದು ದೊಡ್ಡ ಜೋಕು ಅಂತ ಭಾವಿಸಿದ ಮಿತ್ರ ಮಂಡಳಿ ಜೋರಾಗಿ ನಗುತ್ತಿತ್ತು. ಇದು ಜೋಕು ಇರಲಿಕ್ಕಿಲ್ಲ ಅಂತ ಅವರ್‍ಯಾರಿಗೂ ಅನ್ನಿಸುತ್ತಿರಲಿಲ್ಲ. ಹೌದೇ, ಹಾಗೂ ಇರಬಹುದೇ ಅಂತ ಎಲ್ಲರೂ ವಿಚಾರ ಮಾಡಿದ್ದರೆ ಇಂದು ನಾವು ಇದನ್ನೆಲ್ಲಾ ಮಾತಾಡುವ ಪ್ರಶ್ನೆಯೇ ಇರುತ್ತಿರಲಿಲ್ಲ, ಅನ್ನಿಸುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...