ಯಾಲಕ್ಕಿ ಸೀಮೆ ಎಂದೇ ಖ್ಯಾತವಾದ ಹಾವೇರಿಯಲ್ಲಿ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜ.6ರಿಂದ 8ರವರೆಗೆ ಆಯೋಜನೆಗೊಂಡಿದೆ. ಉತ್ತರ ಕರ್ನಾಟಕದ ಹೆಬ್ಬಾಗಿನಂತೆ ಮಲೆನಾಡು, ಅರೆ ಮಲೆನಾಡು ಹಾಗೂ ಬಿಸಿಲು ಸೀಮೆಯ ನಡುವೆ, ಕರ್ನಾಟಕದ ಮಧ್ಯಭಾಗದಲ್ಲಿನ ಹಾವೇರಿ ಜಿಲ್ಲೆ ವೈಶಿಷ್ಟ್ಯತೆಯ ತವರೂರು.
ಧಾರವಾಡದ ದಕ್ಷಿಣ ದಿಕ್ಕಿನ ಏಳು ತಾಲೂಕುಗಳನ್ನು ಒಳಗೊಂಡು 1997ರಲ್ಲಿ ರಚನೆಗೊಂಡ ಹಾವೇರಿ ಜಿಲ್ಲೆಯು, ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ರಾಜಕೀಯ ತವರು ಕೂಡ. ಪ್ರಾಕೃತಿಕವಾಗಿ, ಸಾಂಸ್ಕೃತಿಕವಾಗಿ, ಸಾಹಿತ್ಯಿಕವಾಗಿ ಹಾಗೂ ರಾಜಕೀಯವಾಗಿ ಗುರುತರ ಚಹರೆಗಳನ್ನು ಹೊಂದಿರುವ ಈ ಜಿಲ್ಲೆಯು ಹಲವು ದಾರ್ಶನಿಕರು, ಚಿಂತಕರು, ಹೋರಾಟಗಾರರ ಕರ್ಮಭೂಮಿಯೂ ಹೌದು.
ಸ್ಥಳನಾಮ ಪುರಾಣಗಳ ಪ್ರಕಾರ- ‘ಹಾವು’ ಮತ್ತು ’ಕೆರಿ’ ಪದಗಳಿಂದ ‘ಹಾವೇರಿ’ ಎಂಬುದಾಗಿದೆ. ಈ ಪ್ರದೇಶವು ಅಸಂಖ್ಯ ಹಾವುಗಳಿಂದ ತುಂಬಿದ ಕೆರೆಯಾಗಿತ್ತೆಂದು ಇಲ್ಲಿನ ಜನ ನಂಬುತ್ತಾರೆ. ಪುರಾತನ ಕಾಲದಿಂದಲೂ ಈ ಪ್ರದೇಶ ಯಾಲಕ್ಕಿ ಮಾರಾಟಕ್ಕೆ ಪ್ರಸಿದ್ಧಯಾದ ಕಾರಣ ‘ಯಾಲಕ್ಕಿ ನಾಡು’ ಎಂಬ ಖ್ಯಾತಿಗೂ ಪಾತ್ರವಾಯಿತು.
ಚಾಲುಕ್ಯರು, ರಾಷ್ಟ್ರಕೂಟರ ಕಾಲದ 1,300 ಶಿಲಾ ಬರಹಗಳು ಹಾವೇರಿಯಲ್ಲಿ ಪತ್ತೆಯಾಗಿವೆ. ಕಲ್ಯಾಣಿ ಚಾಲುಕ್ಯರು, ವಿಜಯನಗರ ಅರಸರು, ಬಹುಮನಿ ಸುಲ್ತಾನರು, ಪೇಶ್ವೆಗಳು, ಸವಣೂರಿನ ನವಾಬರ ಇತಿಹಾಸದ ಹೆಜ್ಜೆ ಗುರುತುಗಳು ಈ ನೆಲದಲ್ಲಿವೆ. ಪ್ರಾಚೀನ ಕಾಲದಲ್ಲಿ 1,000 ಮಠಗಳು ಈ ಭಾಗದಲ್ಲಿದ್ದವು ಎಂದು ಚರಿತ್ರೆಯಲ್ಲಿ ದಾಖಲಾಗಿದೆ. ಹಾವೇರಿ ತಾಲೂಕಿನ ದೊಡ್ಡ ಗ್ರಾಮ ‘ಗುತ್ತಲ’ವನ್ನು ರಾಜಧಾನಿ ಮಾಡಿಕೊಂಡು ಗುತ್ತರು ಆಡಳಿತ ನಡೆಸಿದ್ದರು. ಬ್ರಿಟಿಷ್ ಆಳ್ವಿಕೆಯ ಕಾಲದಲ್ಲೂ ‘ಗುತ್ತಲ’ ಗ್ರಾಮ ಮಹತ್ವ ಪಡೆದಿತ್ತು.
ಇದನ್ನೂ ಓದಿ: ಸಮುದಾಯವನ್ನು ದೂರವಿಟ್ಟ ಸಮ್ಮೇಳನದ ಸಂಭ್ರಮ ಸೂತಕವಿದ್ದಂತೆ: ಕ.ಸಾ.ಪ ಕವಿಗೋಷ್ಟಿಯಿಂದ ಹಿಂದೆ ಸರಿದ ಚಾಂದ್ ಪಾಷ
ಸ್ವಾತಂತ್ರ್ಯ ಹೋರಾಟ ಮತ್ತು ಕರ್ನಾಟಕ ಏಕೀಕರಣಕ್ಕೆ, ಸಾಹಿತ್ಯ ಕ್ಷೇತ್ರಕ್ಕೆ ಹಾವೇರಿಯ ಜನತೆ ನೀಡಿದ ಕೊಡುಗೆ ಅಪಾರ. ಸ್ವಾತಂತ್ರ್ಯ ಹೋರಾಟಗಾರ ಗುದ್ಲೆಪ್ಪ ಹಳ್ಳಿಕೇರಿಯವರು ಗಾಂಧಿ ಗ್ರಾಮೀಣ ಗುರುಕುಲ ಹೆಸರಿನ ವಸತಿ ಶಾಲೆಯನ್ನು ಸ್ಥಾಪಿಸಿ ಮನೆಮಾತಾಗಿದ್ದರು. ಸಂತ ಶಿಶುನಾಳ ಷರೀಫ, ತ್ರಿಪದಿಗಳ ಕವಿ ಸರ್ವಜ್ಞ, ಸೂಫಿ ಸಂತರು, ಶರಣರು ಇಲ್ಲಿ ನಡೆದಾಡಿ, ಸಾಹಿತ್ಯ ಕೃಷಿ ಮಾಡಿದ್ದಾರೆ. ಸಾಹಿತ್ಯ ಕೃಷಿಯ ಜೊತೆಗೇ ಸಾಮರಸ್ಯವನ್ನು ಉಸಿರಾಡಿದ್ದಾರೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮೈಲಾರ ಮಹದೇವಪ್ಪ, ಹಳ್ಳಿಕೇರಿ ಗುದ್ಲೆಪ್ಪ, ತಿರಕಪ್ಪ ಮಡಿವಾಳ, ಕನ್ನಡಕ್ಕಾಗಿ ಅವಿಶ್ರಾಂತ ಹೋರಾಟ ನಡೆಸಿದ ಪಾಟೀಲ ಪುಟ್ಟಪ್ಪ, ಮಹಾದೇವ ಬಣಕಾರ್, ಕನ್ನಡ ಕಾದಂಬರಿ ಪಿತಾಮಹ ಗಳಗನಾಥರು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ವಿ.ಕೃ.ಗೋಕಾಕ್, ಬಂಡಾಯ ಸಾಹಿತಿ ಚಂದ್ರಶೇಖರ ಪಾಟೀಲ, ಸಂಗೀತ ಕ್ಷೇತ್ರದ ದಿಗ್ಗಜರಾದ ಪಂಚಾಕ್ಷರಿ ಗವಾಯಿ, ಪುಟ್ಟರಾಜ ಗವಾಯಿ, ಗಂಗೂಬಾಯಿ ಹಾನಗಲ್‌ನಂತಹ ಮೇರು ವ್ಯಕ್ತಿತ್ವಗಳ ತವರು ಹಾವೇರಿ. ಹಿಂದುಳಿದ ವರ್ಗಗಳ ಮೀಸಲಾತಿ ವರದಿ ತಯಾರಿಸಿದ ಕಾನೂನು ತಜ್ಞ ಎಲ್.ಜಿ.ಹಾವನೂರು, ಖ್ಯಾತ ನಟ ಶ್ರೀನಿವಾಸ ಹಾವನೂರು ಇದೇ ಜಿಲ್ಲೆಯವರು. ಇಂತಹ ನೆಲದಲ್ಲಿ, ಕೋವಿಡ್ ಬಿಕ್ಕಟ್ಟಿನ ನಂತರದಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನದ ಮೇಲೆ ಅಪಾರ ನಿರೀಕ್ಷೆಯನ್ನು ಕನ್ನಡಿಗರು ಹೊಂದಿದ್ದರು. ನಾಡಿನ ನಿಜದ ಅಸ್ಮಿತೆಯ ಪ್ರತಿರೂಪವಾದ ಜಿಲ್ಲೆಯಲ್ಲಿ ಸಮ್ಮೇಳನ ಜರುಗುತ್ತಿರುವುದರಿಂದ ಕುತೂಹಲಗಳಿದ್ದವು. ಆದರೆ ಸದರಿ ಸಮ್ಮೇಳನ ಆರಂಭಕ್ಕೂ ಮೊದಲೇ ವಿವಾದಕ್ಕೆ ಗುರಿಯಾಗಿದೆ. ಪ್ರತಿ ಸಮ್ಮೇಳನದ ಸಂದರ್ಭದಲ್ಲಿ ಕೆಲವು ಸಣ್ಣಪುಟ್ಟ ವಿವಾದಗಳು ತಲೆದೋರಿದರೂ, ಈ ಬಾರಿ ಉಂಟಾಗಿರುವ ಪ್ರಮಾದ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಅಚ್ಚಳಿಯದೆ ದಾಖಲಾಗುವುದಂತೂ ಖಚಿತ.
ಮುಸ್ಲಿಂ ಲೇಖಕರನ್ನು ಬದಿಗೆ ಸರಿಸಿ ಕನ್ನಡ ಸಾಹಿತ್ಯ ಪರಿಷತ್ (ಕಸಾಪ) ಸಮ್ಮೇಳನವನ್ನು ಆಯೋಜಿಸಿರುವುದು ಆತಂಕಕಾರಿ ನಡೆ. ಕಸಾಪ ಅಧ್ಯಕ್ಷರಾದ ಮಹೇಶ ಜೋಶಿಯವರು ಈ ತಪ್ಪನ್ನು ತಿದ್ದಿಕೊಳ್ಳುವುದಕ್ಕೂ ಮುಂದಾಗದಿರುವುದು, ಸಮ್ಮೇಳನದ ಸರ್ವಾಧ್ಯಕ್ಷರಾದ ದೊಡ್ಡರಂಗೇಗೌಡರು ಮೌನ ತಾಳಿರುವುದು ನಿಜಕ್ಕೂ ಈ ಸಮ್ಮೇಳನ ಹಾವೇರಿ ನೆಲದ ಬಹುತ್ವ ಸಂಸ್ಕೃತಿಯನ್ನು ಪ್ರತಿನಿಧಿಸುತ್ತಿದೆಯೇ ಎಂದು ಪ್ರಶ್ನಿಸಲು ಅವಕಾಶ ನೀಡಿದೆ. ಜೋಶಿಯವರು ಒಂದು ವರ್ಗವನ್ನು ಬೇಕಂತಲೇ ಹೊರಗಿಟ್ಟಿದ್ದಾರೆ. ಪ್ರಧಾನವಲ್ಲದ ಕೆಲವು ಗೋಷ್ಠಿಗಳಲ್ಲಿ ಮುಸ್ಲಿಂ ಬರಹಗಾರರಿದ್ದಾರೆ. ಪ್ರೊಟೋಕಾಲ್ ಅನ್ವಯ ಕಾರ್ಯಕ್ರಮಗಳ ನಿರ್ವಹಣೆಗಿರುವ ಕೆಲವು ಮುಸ್ಲಿಂ ಜನಪ್ರತಿನಿಧಿಗಳ ಹೆಸರುಗಳು ಸೇರಿದಂತೆ ಆಹ್ವಾನ ಪತ್ರಿಕೆಯಲ್ಲಿ 13ಮಂದಿ ಮುಸ್ಲಿಮರ ಹೆಸರಿದೆ. ಅದನ್ನೇ ಸಾಮರಸ್ಯವೆಂದು ಕಸಾಪ ಅಧ್ಯಕ್ಷರು ಬಿಂಬಿಸಲು ಹೊರಟಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಇದೆಲ್ಲದರ ಪರಿಣಾಮ ತಕ್ಷಣದ ಪ್ರತಿಕ್ರಿಯೆಯಾಗಿ ‘ಜನ ಸಾಹಿತ್ಯ ಸಮ್ಮೇಳನ’ ಆಯೋಜನೆಗೊಂಡಿದೆ. ಹಾವೇರಿ ಸಾಹಿತ್ಯ ಸಮ್ಮೇಳನಕ್ಕೆ ಪ್ರತಿರೋಧವಾಗಿ ‘ಜನ ಸಾಹಿತ್ಯ ಸಮ್ಮೇಳನ’ವನ್ನು ಜ.8ರಂದು ಬೆಂಗಳೂರಿನ ಕೆ.ಆರ್.ಸರ್ಕಲ್ ಅಲುಮ್ನಿ ಹಾಲ್‌ನಲ್ಲಿ ನಡೆಸಲು ಹೆಚ್ಚಿನ ಸಂಖ್ಯೆಯ ಯುವ ತಲೆಮಾರನ್ನು ಒಳಗೊಂಡ ಚಿಂತಕ ವಲಯ ಸಿದ್ಧವಾಗಿದೆ. ಸಮ್ಮೇಳನದ ಕುರಿತು ಎತ್ತಿರುವ ತಾತ್ವಿಕ ಪ್ರಶ್ನೆಗಳಿಗೆ ಉತ್ತರಿಸದ ಮಹೇಶ ಜೋಶಿಯವರು “ಪೆಂಡಾಲ್ ಪುರಾಣ” ಶುರು ಮಾಡಿದ್ದು ಕೀಳು ಮಟ್ಟದ ರಾಜಕಾರಣವೆನಿಸುತ್ತದೆ. ಮುಸ್ಲಿಮ್ ಲೇಖಕರನ್ನು ಕಡೆಗಣಿಸಿದ್ದನ್ನು ಮೊದಲು ಪ್ರಶ್ನಿಸಿದವರಾದ ಪ್ರೊ.ಪುರುಷೋತ್ತಮ ಬಿಳಿಮಲೆಯವರ ಮೇಲೆ ಆರೋಪಗಳನ್ನು ಹೊರಿಸಿದ ಜೋಶಿಯವರು, “ತಮ್ಮ ಕಡೆಯವರಿಗೆ ಪೆಂಡಾಲ್ ಹಾಕುವುದಕ್ಕೆ ಟೆಂಡರ್ ನೀಡದ ಕಾರಣ ಬಿಳಿಮಲೆಯವರು ಈ ರೀತಿ ಮಾತನಾಡಿದ್ದಾರೆ” ಎಂದು ಕ್ಷುಲ್ಲಕವಾಗಿ ಪ್ರತಿಕ್ರಿಯೆ ನೀಡಿರುವುದು ನಗೆಪಾಟಲಿಗೀಡಾಗಿದೆ.
ಸಾಹಿತ್ಯ ಸಮ್ಮೇಳನದಲ್ಲಿ ತಪ್ಪುಗಳಾದಾಗ ಪ್ರತಿರೋಧಗಳು ಹುಟ್ಟಿದ್ದು ಇದೇ ಮೊದಲೂ ಅಲ್ಲ, ಕೊನೆಯೂ ಆಗುವುದಿಲ್ಲ. ದೊಡ್ಡ ಸ್ವರೂಪದ ಯಾವುದೇ ಸಾರ್ವಜನಿಕ ಸಮಾವೇಶ ಆಯೋಜನೆಗೊಂಡಾಗ ಹತ್ತುಹಲವು ವಿವಾದಗಳು ಸಾಮಾನ್ಯವಾಗಿ ಇದ್ದೇ ಇರುತ್ತವೆ. ಆದರೆ ವಿಷಯ ವಸ್ತುವಿನ ಪ್ರಾಮುಖ್ಯತೆಯ ಆಧಾರದಲ್ಲಿ ಅದು ವಿರಾಟ್ ಸ್ವರೂಪ ಪಡೆಯತ್ತದೆ. ಈಗ ಆಗಿರುವ ಪ್ರಮಾದ ದೊಡ್ಡ ಮಟ್ಟದ ಪ್ರತಿರೋಧಕ್ಕೆ ಪ್ರಚೋದಿಸಿರುವುದಂತೂ ಸುಳ್ಳಲ್ಲ. ಆಗಿರುವ ತಪ್ಪುಗಳನ್ನು ತಿದ್ದಿಕೊಳ್ಳುವುದಕ್ಕೂ ಇಂತಹ ಪ್ರತಿರೋಧ ಕಾರಣವಾಗುತ್ತದೆ. ಈ ನಿಟ್ಟಿನಲ್ಲಿ ಸಾಹಿತ್ಯ ಸಮ್ಮೇಳನಗಳನ್ನು ವಿರೋಧಿಸಿ ನಾಡಿನಲ್ಲಿ ನಡೆದ ಚಾರಿತ್ರಿಕ ಕಾರ್ಯಕ್ರಮಗಳು ಹಾಗೂ ಅವುಗಳು ಉಂಟು ಮಾಡಿದ ಸಾಂಸ್ಕೃತಿಕ ಪರಿವರ್ತನೆಯನ್ನು ಮರು ಅವಲೋಕನ ಮಾಡಿಕೊಳ್ಳಬೇಕಿದೆ.
ಕೆಲವು ವರ್ಷಗಳ ಹಿಂದೆ ಬರೆದಿದ್ದ ‘ಸಾಹಿತ್ಯ ಸಮ್ಮೇಳನಗಳು ಹಾಗೂ ವಿವಾದಗಳು’ ಎಂಬ ಲೇಖನದಲ್ಲಿ ಹಿರಿಯ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಅವರು ಮೂರು ಸ್ವರೂಪದ ವಿವಾದಗಳನ್ನು ದಾಖಲಿಸಿದ್ದಾರೆ. (ಅವರ ಮಾತುಗಳನ್ನು ಹಲವು ಕಡೆಗೆ ಇಲ್ಲಿ ಮುಕ್ತವಾಗಿ ಬಳಸಿಕೊಳ್ಳಲಾಗಿದೆ.)
1. ಸಮ್ಮೇಳನಾಧ್ಯಕ್ಷರ ಆಯ್ಕೆ ಬಗೆಗಿನ ವಿವಾದ
2. ವಿಚಾರಗೋಷ್ಠಿಗಳ ಸ್ವರೂಪ ಮತ್ತು ವ್ಯಕ್ತಿಗಳ ಆಯ್ಕೆ ಕುರಿತ ವಿವಾದ
3. ತಾತ್ವಿಕ ಭಿನ್ನಾಭಿಪ್ರಾಯಗಳ ವಿವಾದ
1. ಸಮ್ಮೇಳನಾಧ್ಯಕ್ಷರ ಆಯ್ಕೆ ಬಗೆಗಿನ ವಿವಾದ: ಎಷ್ಟು ಜನ ಮಹಿಳೆಯರಿಗೆ, ಅಲ್ಪಸಂಖ್ಯಾತರಿಗೆ, ದಲಿತರಿಗೆ ಸಮ್ಮೇಳನದ ಅಧ್ಯಕ್ಷತೆ ದೊರೆತಿದೆ ಎಂಬ ಪ್ರಶ್ನೆ ಆಗಾಗ್ಗೆ ಕೇಳಿಬರುತ್ತದೆ. ಇದಕ್ಕೆ ತಾತ್ವಿಕವಾದ ಬಲವಿದೆ. ಆದರೆ “ತಾತ್ವಿಕ ನೆಲೆಯಿಲ್ಲದಿದ್ದರೂ ಅಧ್ಯಕ್ಷರ ಆಯ್ಕೆ ವಿವಾದಾಸ್ಪದವಾದ ಸಂದರ್ಭಗಳೂ ನಮ್ಮಲ್ಲಿವೆ” ಎನ್ನುತ್ತಾರೆ ಬರಗೂರರು. ಕಸಾಪ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ನಡೆದ ಸಮ್ಮೇಳನ ವಿವಾದದ ಕೇಂದ್ರವಾಗಿತ್ತು. ಕಿರಿಯ ವಯಸ್ಸಿನಲ್ಲಿಯೇ ಅಧ್ಯಕ್ಷತೆಗೆ ದೇ.ಜವರೇಗೌಡರನ್ನು ಆಯ್ಕೆ ಮಾಡಿದ್ದಕ್ಕೆ ಗೋಪಾಲಕೃಷ್ಣ ಅಡಿಗರು ಸಿಟ್ಟಾಗಿದ್ದರು. ಕಸಾಪ ಅಧ್ಯಕ್ಷರಾಗಿದ್ದ ಜಿ.ನಾರಾಯಣ ಅವರು ‘ದೇಜಗೌ’ ಅವರ ಆಯ್ಕೆಯ ಹಿಂದಿದ್ದಾರೆ ಎಂದು ಆರೋಪಿಸಲಾಗಿತ್ತು. ಮೊದಲು ಒಪ್ಪಿಕೊಂಡಿದ್ದ ಕವಿಗೋಷ್ಠಿ ಅಧ್ಯಕ್ಷತೆಯನ್ನೇ ಅಡಿಗರು ನಿರಾಕರಿಸಿದ್ದರು. ತುಮಕೂರಿನಲ್ಲಿ ನಡೆದ 86ನೇ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲೂ ಅಧ್ಯಕ್ಷತೆಯನ್ನು ವಿರೋಧಿಸುವ ಬೆಳವಣಿಗೆಯಾಗಿತ್ತು. ಡಾ.ಯು.ಆರ್. ಅನಂತಮೂರ್ತಿಯವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದನ್ನು ಪ್ರಶ್ನಿಸಲಾಗಿತ್ತು.
2. ವಿಚಾರಗೋಷ್ಠಿಗಳ ಸ್ವರೂಪ ಮತ್ತು ವ್ಯಕ್ತಿಗಳ ಆಯ್ಕೆ ಕುರಿತು ವಿವಾದ: ಪ್ರಾದೇಶಿಕತೆಗೆ ಆದ್ಯತೆ ನೀಡಿಲ್ಲ, ಸ್ಥಳೀಯರಿಗೆ ಪ್ರಾಮುಖ್ಯತೆ ದೊರೆತ್ತಿಲ್ಲ ಎಂಬ ರೀತಿಯ ವಿವಾದಗಳು ದಾಖಲಾಗಿವೆ. 1979ರಲ್ಲಿ ಅಡಿಗರ ಅಧ್ಯಕ್ಷತೆಯಲ್ಲಿ ಸಮ್ಮೇಳನ ನಡೆಯುವುದಿತ್ತು. ಸದರಿ ಸಮ್ಮೇಳನದಲ್ಲಿ ದಲಿತ ಗೋಷ್ಠಿ (ವಿಶೇಷವಾಗಿ ಸಾಹಿತ್ಯಕ್ಕೆ ಸಂಬಂಧಿಸಿ) ಇರಬೇಕು ಎಂದು ಚೆನ್ನಣ್ಣ ವಾಲೀಕಾರ ಹಾಗೂ ಮತ್ತಿತರ ಸ್ನೇಹಿತರು ಆಗ್ರಹಿಸಿದ್ದರು. ಆಗ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಡಾ.ಹಂಪ ನಾಗರಾಜಯ್ಯ, ‘ಸಾಹಿತ್ಯದಲ್ಲಿ ದಲಿತ, ಬಲಿತ, ಕಲಿತ ಎಂಬುದಿಲ್ಲ’ ಎಂದು ಕುಹಕವಾಡಿದ್ದರು. ಆ ನಂತರ ಪ್ರತಿರೋಧ ಹುಟ್ಟಿಕೊಂಡಿತ್ತು. ಈಗ ಹಂಪನಾ ಅವರು ಬದಲಾಗಿದ್ದಾರೆ ಎಂಬುದು ಬೇರೆಯ ಮಾತು. ಆದರೆ ಅಂದು ದಲಿತ, ಪ್ರಗತಿಪರ ಯುವ ಸಾಹಿತಿಗಳು ತೋರಿದ ಪ್ರತಿಕ್ರಿಯೆ ಒಂದು ರೀತಿಯ ಹೊಸ ಸಂಚಲನಕ್ಕೆ ಕಾರಣವಾಗಿದ್ದು ಸುಳ್ಳಲ್ಲ. ಗೋಷ್ಠಿಗೆ ಸಂಬಂಧಿಸಿದಂತೆ ಶಿವಮೊಗ್ಗ ಸಾಹಿತ್ಯ ಸಮ್ಮೇಳನದಲ್ಲಿ ಇಂತಹದ್ದೇ ವಿವಾದ ತಲೆದೋರಿತ್ತು. ಪತ್ರಕರ್ತೆ ಗೌರಿ ಲಂಕೇಶ್ ಹಾಗೂ ಕಲ್ಕುಳಿ ವಿಠ್ಠಲ ಹೆಗಡೆಯವರನ್ನು ಒಂದು ಗೋಷ್ಠಿಗೆ ಆಹ್ವಾನಿಸಿರುವುದಕ್ಕೆ ಬಲಪಂಥೀಯರು ಕಣ್ಣು ಕೆಂಪಗಾಗಿಸಿಕೊಂಡರು. ಈ ಇಬ್ಬರೂ ನಕ್ಸಲೀಯರ ಪರವಾಗಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು. ಆದರೆ ಅಂದಿನ ಕಸಾಪ ಅಧ್ಯಕ್ಷರಾದ ಪ್ರೊ.ಚಂದ್ರಶೇಖರ ಪಾಟೀಲರು ದಿಟ್ಟ ನಿಲುವು ತಾಳಿ, ಗೋಷ್ಠಿ ನಡೆಸಿದರು. ವೇದಿಕೆಗೆ ನುಗ್ಗಿದ ಸಂಘಪರಿವಾರದವರು ಧಾಂದಲೆ ಎಬ್ಬಿಸಿದ್ದರು. “ಗೌರಿ ಲಂಕೇಶ್, ವಿಠಲ ಹೆಗಡೆಯವರ ನಿಲುವನ್ನು ಒಪ್ಪದೇ ಇರಬಹುದು. ಆದರೆ ಅವರು ಸಮ್ಮೇಳನದಲ್ಲಿ ಭಾಗವಹಿಸಿ ಮಾತಾಡಲೇಬಾರದು ಎಂಬ ಹಠಮಾರಿ ನಿಲುವು ಅನರ್ಥಕಾರಿಯಾದುದು” ಎಂದು ಭಿನ್ನಮತದ ಬಹುತ್ವವನ್ನು ಚಂಪಾ ಪ್ರತಿಪಾದಿಸಿದ್ದರು.
3. ತಾತ್ವಿಕ ಭಿನ್ನಾಭಿಪ್ರಾಯಗಳ ಸ್ವರೂಪದಲ್ಲಿನ ವಿವಾದ: ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಹೊಸ ತಿರುವುಗಳಿಗೆ ಕಾರಣವಾದದ್ದು- ತಾತ್ವಿಕ ಭಿನ್ನಾಭಿಪ್ರಾಯಗಳು. ಈಗ ಎದ್ದಿರುವ ವಿವಾದವೂ ಕೂಡ ತಾತ್ವಿಕ ನೆಲೆಯದ್ದೇ ಆಗಿದೆ. ಬರಗೂರರು ಅಂತಹ ಕೆಲವು ಉದಾಹರಣೆಗಳನ್ನು ತಮ್ಮ ಲೇಖನದಲ್ಲಿ ಉಲ್ಲೇಖಿಸುತ್ತಾರೆ. 1943ರಲ್ಲಿ ಶಿವಮೊಗ್ಗದಲ್ಲಿ ನಡೆದ 86ನೇ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಪ್ರಗತಿಶೀಲ ಲೇಖಕರು ಒಗ್ಗೂಡಿ ಒಂದು ಒಕ್ಕೂಟವನ್ನು ರಚಿಸಿಕೊಂಡರು. ಸಮ್ಮೇಳನದ ಅಧ್ಯಕ್ಷರಾಗಿದ್ದ ದ.ರಾ.ಬೇಂದ್ರೆಯವರ ಕುರಿತು ಭಿನ್ನಾಭಿಪ್ರಾಯವಿಲ್ಲದಿದ್ದರೂ ಪ್ರಗತಿಶೀಲ ಸಾಹಿತ್ಯದ ಚರ್ಚೆಗಳು ಬೆಳೆಯುತ್ತಿದ್ದವು. ಕಸಾಪದ ನಿಲುವುಗಳಿಗೆ ಭಿನ್ನವಾಗಿ ಯೋಚಿಸುವ ಸಾಹಿತಿಗಳ ಒಕ್ಕೂಟ ರಚನೆಯಾಯಿತು. ಶ್ರೀರಂಗ, ಅ.ನ.ಕೃ., ನಿರಂಜನ, ಬಸವರಾಜ ಕಟ್ಟಿಮನಿ, ಕೃಷ್ಣಕುಮಾರ ಕಲ್ಲೂರ, ಇನಾಂದಾರ್ ಮೊದಲಾದವರು ಇದ್ದ ಒಕ್ಕೂಟ, 1952ನೇ ಇಸವಿಯಲ್ಲಿ ಪ್ರಗತಿಶೀಲ ಲೇಖಕರ ಸಮಾವೇಶ ನಡೆಯಲು ಕಾರಣವಾಯಿತು. ಇದಕ್ಕಿಂತ ಹೆಚ್ಚು ಸದ್ದು ಮಾಡಿದ್ದು 1957ರಲ್ಲಿ ನಡೆದ ಧರ್ಮಸ್ಥಳ ಸಮ್ಮೇಳನ ವಿರೋಧಿಸಿ ನಡೆದ ಬಂಡಾಯ ಸಾಹಿತ್ಯ ಸಮ್ಮೇಳನ. ಆ ವೇಳೆಗಾಗಲೇ ಸಂಘಪರಿವಾರದೊಂದಿಗೆ ಗುರುತಿಸಿಕೊಂಡಿದ್ದ ಗೋಪಾಲಕೃಷ್ಣ ಅಡಿಗರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಕಸಾಪ ಅಧ್ಯಕ್ಷರಾಗಿದ್ದ ಹಂಪನಾ ‘ದಲಿತ, ಬಲಿತ, ಕಲಿತ ಎಂಬುದೆಲ್ಲ ಸಾಹಿತ್ಯದಲ್ಲಿ ಇಲ್ಲ’ ಎಂದು ಲೇವಡಿ ಮಾಡಿದ್ದರು. ಹೀಗಾಗಿ ಸಮ್ಮೇಳನದ ದಿನಗಳಂದೇ ಬೆಂಗಳೂರಲ್ಲಿ ಬಂಡಾಯ ಸಾಹಿತ್ಯ ಸಮ್ಮೇಳನ ಜರುಗಿತ್ತು. ಅಂದು ಬೆಳವಣಿಗೆ ಕಾಣುತ್ತಿದ್ದ ಪ್ರಗತಿಪರ, ಎಡಪಂಥೀಯ ಚಿಂತನಧಾರೆ ಬಲಗೊಳ್ಳಲು ಈ ಸಮ್ಮೇಳನ ಕಾರಣವಾಯಿತು. 1990ರಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನವನ್ನು ವಿರೋಧಿಸಿ ಬೆಂಗಳೂರಿನಲ್ಲಿ ಜಾಗೃತ ಸಾಹಿತ್ಯ ಸಮ್ಮೇಳನ ಜರುಗಿತ್ತು. ‘ಶ್ರೇಷ್ಟತೆ’ಯ ಪ್ರಶ್ನೆಗೆ ಒಳಗಾದ ಕೆಲವು ಸಾಹಿತಿಗಳು ಹುಬ್ಬಳ್ಳಿ ಸಮ್ಮೇಳನವನ್ನು ವಿರೋಧಿಸಿದ್ದರು. ನವ್ಯ ಪರಂಪರೆಯಲ್ಲಿ ಗುರುತಿಸಿಕೊಂಡ, ವ್ಯಕ್ತಿನಿಷ್ಟ ಶ್ರೇಷ್ಟತೆಯನ್ನು ಪ್ರತಿಪಾದಿಸತೊಡಗಿದ್ದ ಸಾಹಿತಿಗಳು ಇಲ್ಲಿ ಪ್ರಧಾನವಾಗಿದ್ದರು. ಸಂಘಪರಿವಾರದವರೇ ತುಂಬಿಕೊಂಡಿದ್ದಾರೆಂಬ ಆರೋಪಕ್ಕೆ ಉಡುಪಿಯಲ್ಲಿ ನಡೆದ 74ನೇ ಸಾಹಿತ್ಯ ಸಮ್ಮೇಳನ ಗುರಿಯಾಯಿತು. ಕೋಮು ಸೌಹಾರ್ದ ವೇದಿಕೆಯ ವತಿಯಿಂದ ‘ಸೌಹಾರ್ದ ಸಾಹಿತ್ಯ ಸಮ್ಮೇಳನ’ ಜರುಗಿತ್ತು. ಈ ಅಂಶಗಳಿಂದ ವೇದ್ಯವಾಗುವ ಸಂಗತಿ ಎಂದರೆ- ‘ಸಾಹಿತ್ಯ ಸಮ್ಮೇಳನ ಮತ್ತು ಪ್ರತಿರೋಧ’ಕ್ಕೆ ಅವಿನಾಭಾವ ಸಂಬಂಧವಿದೆ.

ಪ್ರತಿರೋಧದ ಕುರಿತು ಪ್ರಶ್ನೆಗಳು: ಪ್ರೊ.ಬಿಳಿಮಲೆ ಪ್ರತಿಕ್ರಿಯೆ
ಹಾವೇರಿ ಸಮ್ಮೇಳನವನ್ನು ವಿರೋಧಿಸಿ ನಡೆಯುತ್ತಿರುವ ‘ಜನ ಸಾಹಿತ್ಯ ಸಮ್ಮೇಳನ’ ಯಶಸ್ಸಿಯಾಗುತ್ತದೆಯೇ? ಈ ಹಿಂದೆ ನಡೆದ ಇಂತಹ ಕಾರ್ಯಕ್ರಮಗಳು ತಮ್ಮ ನಿಶ್ಚಿತ ಗುರಿಗಳನ್ನು ಮುಟ್ಟಿವೆಯೇ? ಜನರ ತೆರಿಗೆಯಲ್ಲಿ ನಡೆಯುವ ಬೃಹತ್ ಸಮ್ಮೇಳನವನ್ನು ವಿರೋಧಿಸಿ ಹೊರಗುಳಿಯುವುದು ಸರಿಯಲ್ಲ, ಇದರಿಂದ ಸಂಘಪರಿವಾರ ಮತ್ತ? ಬಲಗೊಳ್ಳಲು ಅವಕಾಶ ನೀಡಿದಂತಾಗುತ್ತದೆಯಲ್ಲವೇ? ಎಂಬ ಪ್ರಶ್ನೆಗಳೂ ಹುಟ್ಟಿಕೊಂಡಿವೆ.
‘ನ್ಯಾಯಪಥ’ ಪತ್ರಿಕೆಯೊಂದಿಗೆ ಮಾತನಾಡಿದ ಹಿರಿಯ ವಿದ್ವಾಂಸರಾದ ಪ್ರೊ.ಪುರುಷೋತ್ತಮ ಬಿಳಿಮಲೆಯವರು, “ಒಮ್ಮೆ ಒಂದು ವ್ಯವಸ್ಥೆಯೊಳಗೆ ಪ್ರವೇಶಿಸಿದ ಬಳಿಕ ನಾವು ಕೂಡ ಅದರ ಭಾಗವಾಗುತ್ತೇವೆ. ಅಲ್ಲಿ ಎತ್ತುವ ವಿರೋಧದ ಸ್ವರಗಳು ಗೌಣವಾಗುತ್ತವೆ. ಬಿಜೆಪಿಯೊಳಗೆ ಹೋಗಿ ನೀವು ಬಿಜೆಪಿಯನ್ನು ವಿರೋಧಿಸಲು ಸಾಧ್ಯವಿಲ್ಲ. ಆ ವ್ಯವಸ್ಥೆ ಬಹಳ ಬಲವಾಗಿರುತ್ತದೆ. ಅವರಿಗೆ ಹಣಬಲ, ಜನಬಲ, ಪೊಲೀಸ್ ಬಲ ಇರುತ್ತದೆ. ನೀವು ಅಲ್ಲಿ ಏನೂ ಮಾಡಲು ಸಾಧ್ಯವಿಲ್ಲ. ಸಮ್ಮೇಳನದ ಒಳಗೆ ನಿಂತು ಪ್ರತಿಭಟನೆ ಮಾಡಿ ಎಂಬುದು ಜನರನ್ನು ದಾರಿ ತಪ್ಪಿಸುವ ಮಾತಾಗುತ್ತದೆ” ಎಂದು ಎಚ್ಚರಿಸಿದರು.
“ಕಾಲಕಾಲಕ್ಕೆ ಸಂವೇದನಾಶೀಲ ಲೇಖಕರು ಸಮ್ಮೇಳನಗಳನ್ನು ಪ್ರತಿಭಟಿಸುತ್ತಾ ಬಂದಿದ್ದಾರೆ. ಸಾಹಿತಿಗಳ ಪ್ರತಿಭಟನೆಗೆ ಚರಿತ್ರೆ ಇದೆ, ಅದು ಈಗಲೂ ಮುಂದುವರಿಯುತ್ತಿದೆ. ಧರ್ಮಸ್ಥಳ ಸಮ್ಮೇಳನವನ್ನು ವಿರೋಧಿಸಿ ಪ್ರತಿಭಟನೆಯಾಯಿತು. ಆ ನಂತರ ಎಷ್ಟು ಸಾಹಿತಿಗಳು ಪರಿಷತ್ತಿಗೆ ಹೋಗುವುದನ್ನೇ ನಿಲ್ಲಿಸಿದರು. ಅದು ಅನುಪಯುಕ್ತ ಸಂಸ್ಥೆ ಎಂಬ ನಿಲುವು ತಾಳಿದರು. ಆದರೆ ಹಂಪನಾ ಅವರ ಕಾಲದವರೆಗೂ ಕಸಾಪದಲ್ಲಿ ಹೆಚ್ಚಿನ ಸಂಖ್ಯೆಯ ಸಾಹಿತಿಗಳಿದ್ದರು ಎಂಬುದು ನಿಜ. ಒಂದು ಕಾಲದವರೆಗೆ ಸಾಹಿತ್ಯದ ವಾತಾವರಣ ಕಸಾಪದಲ್ಲಿತ್ತು. ಚಂಪಾ ಅವರನ್ನು ಹೊರತುಪಡಿಸಿ ಆ ನಂತರ ಬಂದ ಬಹುತೇಕ ಕಸಾಪ ಅಧ್ಯಕ್ಷರು ಒಳ್ಳೆಯ ಸಂಘಟಕರಾದರೂ ಸಾಹಿತಿಗಳಾಗಿರಲಿಲ್ಲ. ಮಹೇಶ ಜೋಶಿಯವರು ಹಣಬಲ, ಜನಬಲ, ರಾಜಕೀಯ ಬಲದಿಂದ ಅಧ್ಯಕ್ಷರಾದರು. ಅಂಥವರ ಬಳಿ ಕಾಲು ಹಿಡಿದು ಮುಸ್ಲಿಂ ಲೇಖಕರ ಹೆಸರನ್ನು ಸಮ್ಮೇಳನದ ಆಹ್ವಾನಪತ್ರಿಕೆಯಲ್ಲಿ ಸೇರಿಸಬೇಕೇ? ಲೇಖಕರನ್ನು ಗುರುತಿಸುವ ಶಕ್ತಿ ಅಧ್ಯಕ್ಷರಾದವರಿಗೆ ಇರಬೇಕಲ್ಲವೇ? ಇದನ್ನು ಖಂಡಿಸಿ ಸಾಹಿತ್ಯ ಸಮ್ಮೇಳನದಲ್ಲಿ ನಾವ್ಯಾರಾದರೂ ಪ್ರತಿಭಟಿಸಿದರೆ, ದೈಹಿಕ ಹಲ್ಲೆಗಳಾದರೂ ಆಶ್ಚರ್ಯಪಡಬೇಕಿಲ್ಲ” ಎಂದು ಅಭಿಪ್ರಾಯಪಟ್ಟರು.
“ಕಸಾಪ ಬೈಲಾ ಬದಲಿಸಿಕೊಂಡು ಸರ್ವಾಧಿಕಾರಿಯಂತೆ ಈಗಿನ ಕಸಾಪ ಅಧ್ಯಕ್ಷರು ವರ್ತಿಸುತ್ತಿದ್ದಾರೆ. ಕಸಾಪದೊಳಗಿನ ಭಿನ್ನದನಿಗಳನ್ನು ಹತ್ತಿಕ್ಕುವ ಕೆಲಸ ನಡೆಯುತ್ತಿದೆ ಎಂಬ ಆರೋಪಗಳಿವೆ. ಕಸಾಪದೊಳಗಿನವರು ನಿಜವಾಗಿ ಪ್ರತಿಭಟಿಸಬೇಕಿತ್ತು. ಆದರೆ ಸಾಧ್ಯವಾಗುತ್ತಿಲ್ಲ ಏಕೆ?” ಎಂದು ಪ್ರಶ್ನಿಸಿದರು.
“ಬಿಜೆಪಿಯೇತರ ಪಕ್ಷಗಳು ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಕಸಾಪ ಇಷ್ಟು ವಿವಾದವಾಗಿದ್ದು ಕಾಣುವುದಿಲ್ಲ. ಆದರೆ ಬಿಜೆಪಿ ಅಧಿಕಾರದಲ್ಲಿದ್ದಾಗ ಸ್ವಾಯತ್ತ ಸಂಸ್ಥೆಗಳಲ್ಲಿ ಮೂಗು ತೂರಿಸುವ ಕೆಲಸಗಳಾಗಿವೆ. ಚಂಪಾ ಅವರು ಕಸಾಪ ಅಧ್ಯಕ್ಷರಾಗಿದ್ದಾಗ ಬಿಜೆಪಿ ಆಡಳಿತ ನಡೆಸುತ್ತಿತ್ತು. ಆದರೆ ಪ್ರಭುತ್ವಕ್ಕೆ ಚಂಪಾ ತಲೆಬಾಗಲಿಲ್ಲ” ಎಂದ ಅವರು, “ಸರ್ಕಾರಕ್ಕೆ ಪರಿಷತ್ತು ತಲೆಬಾಗಬೇಕಿಲ್ಲ. ಅದರದ್ದೇ ಆದ ಪರಿನಿಯಮಗಳ ಅನ್ವಯ ನಡೆದುಕೊಂಡು ಹೋಗಬೇಕು. ಆದರೆ ಜೋಶಿಯವರು ರಾಜಕೀಯ ಆಕಾಂಕ್ಷಿಯಾಗಿದ್ದಾರೆಂದು ತೋರುತ್ತದೆ. ಹೀಗಾಗಿ ಈ ರೀತಿಯ ನಿಲುವುಗಳನ್ನು ತಾಳುತ್ತಿದ್ದಾರೆಂದು ಅನಿಸುತ್ತಿದೆ” ಎಂದು ಟೀಕಿಸಿದರು.
ಇದನ್ನೂ ಓದಿ: ಸಾಹಿತ್ಯ ಸಮ್ಮೇಳನದಲ್ಲಿ ಮುಸ್ಲಿಂ ಲೇಖಕರ ಕಡೆಗಣನೆ: ಪರ್ಯಾಯ ಸಮ್ಮೇಳನಕ್ಕೆ ಸಾಹಿತಿಗಳ ಚಿಂತನೆ
“ಸರ್ಕಾರ ಅನುದಾನ ಕೊಟ್ಟ ತಕ್ಷಣ ಕಸಾಪದ ಸ್ವಾಯತ್ತತೆ ನಾಶವಾಗುವುದಿಲ್ಲ. ಕಸಾಪದ ಪರಿನಿಯಮಗಳಿಗೆ ಅನುಗುಣವಾಗಿ ಅಧ್ಯಕ್ಷರು ಕೆಲಸ ಮಾಡಬೇಕೇ ಹೊರತು ರಾಜಕಾರಣಿಗಳ ಆಜ್ಞೆಯಂತಲ್ಲ. ಪಕ್ಷ ರಾಜಕಾರಣ ಮೂಗು ತೂರಿಸಿದರೆ ಕಸಾಪದಂತಹ ಸ್ವಾಯತ್ತ ಸಂಸ್ಥೆಗಳು ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವುದಿಲ್ಲ” ಎಂದು ತಿಳಿಸಿದರು.
“ಈಗ ಕಸಾಪವನ್ನು ನಾಗಪುರ ಕಂಟ್ರೋಲ್ ಮಾಡುತ್ತಿದೆ. ಯಾರನ್ನು ಕರೆಸಬೇಕು, ಯಾವ ಗೋಷ್ಠಿ ಇರಬೇಕು ಎಂದೆಲ್ಲ ಆರ್‌ಎಸ್‌ಎಸ್ ನಿರ್ಧರಿಸುತ್ತಿದೆ. ಸಚಿವರುಗಳು ಮೂಗು ತೂರಿಸುತ್ತಿದ್ದಾರೆ. ಚಂಪಾ ಅವರು ಕಸಾಪ ಅಧ್ಯಕ್ಷರಾಗಿದ್ದಾಗ ಸರ್ಕಾರ ಮೂಗು ತೂರಿಸಿತ್ತು. ಶಿವಮೊಗ್ಗ ಸಾಹಿತ್ಯ ಸಮ್ಮೇಳನಕ್ಕೆ ಗೌರಿ ಲಂಕೇಶ್ ಮತ್ತು ಕಲ್ಕುಳಿ ವಿಠ್ಠಲ ಹೆಗಡೆಯವರನ್ನು ಕರೆಸಬಾರದು ಎಂದಿತ್ತು. ಚಂಪಾ ಸರ್ಕಾರದ ಮಾತಿಗೆ ಕಿವಿಗೊಡಲಿಲ್ಲ. ‘ನೀವ್ಯಾರ್ ರೀ ಅದನ್ನು ಕೇಳೋದಕ್ಕೆ?’ ಎಂದು ತಿರುಗೇಟು ನೀಡಿದ್ದರು. ದುರಾದೃಷ್ಟವಶಾತ್ ಇಂದಿನ ಅಧ್ಯಕ್ಷರು ಸರ್ಕಾರದ ಪರವಾಗಿ ನಿಲ್ಲುತ್ತಾರೆಯೇ ಹೊರತು, ಸಾಹಿತಿಗಳ ಪರವಾಗಿ ಅಲ್ಲ” ಎಂದು ವಿಷಾಧಿಸಿದರು.
ಇಂದಿನ ಅಧ್ಯಕ್ಷರ ಆಯ್ಕೆ ಸಂವಿಧಾನಾತ್ಮಕವಾಗಿಲ್ಲ: ಎಸ್.ಜಿ.ಸಿದ್ದರಾಮಯ್ಯ
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರು ಹಾಗೂ ಹಿರಿಯ ಸಾಹಿತಿ ಎಸ್.ಜಿ.ಸಿದ್ದರಾಮಯ್ಯ ಅವರು ಮಾತನಾಡಿ, “ಇಂದಿನ ಕಸಾಪ ಅಧ್ಯಕ್ಷರ ಆಯ್ಕೆಯೇ ಸಂವಿಧಾನಾತ್ಮಕವಾಗಿ ನಡೆದಿಲ್ಲ. ಕಸಾಪದ ಸ್ವಾಯತ್ತತೆಯನ್ನು ನಾಶ ಮಾಡುವ ರೀತಿಯಲ್ಲಿ ಇಂದಿನ ಅಧ್ಯಕ್ಷರ ಆಯ್ಕೆಯಾಯಿತು. ಒಂದು ಪಕ್ಷದ ಬೆಂಬಲ ಪಡೆದು ಅನೈತಿಕ ಮಾರ್ಗದಲ್ಲಿ ಅವರು ಆಯ್ಕೆಯಾದರು. ಈ ವ್ಯಕ್ತಿ ಇರುವ ತನಕ ಕಸಾಪದ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಹಾಗೂ ಅದರ ಪ್ರಶಸ್ತಿ ಪುರಸ್ಕಾರಗಳನ್ನು ಸ್ವೀಕರಿಸುವುದಿಲ್ಲ ಎಂದು ಈ ಹಿಂದೆಯೇ ನಾನು ಘೋಷಿಸಿದ್ದೇನೆ. ಅಧಿಕಾರ ಹಿಡಿದ ನಂತರದಲ್ಲೂ ಈ ವ್ಯಕ್ತಿಯ ನಡವಳಿಕೆಗಳು ಪ್ರಜಾಸತ್ತಾತ್ಮಕವಾಗಿ ಇಲ್ಲ” ಎಂದು ಆರೋಪಿಸಿದರು.
“ಬೈಲಾ ತಿದ್ದುಪಡಿಯಿಂದ ಹಿಡಿದು ಈವರೆಗೂ ಸರ್ವಾಧಿಕಾರಿಯಂತೆ ಮಹೇಶ ಜೋಶಿ ವರ್ತಿಸಿದ್ದಾರೆ. ಜಿಲ್ಲೆಯ ಯಾವ ಅಧ್ಯಕ್ಷರನ್ನೂ ಗಮನಕ್ಕೆ ತೆಗೆದುಕೊಳ್ಳದ ರೀತಿಯಲ್ಲಿ ಅಧಿಕಾರ ನಡೆಸುತ್ತಿದ್ದಾರೆ. ಇದು ಕಸಾಪಕ್ಕೆ ಅನುಗುಣವಾದದ್ದಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.
“ಬೆಂಗಳೂರಿನಲ್ಲಿ ಆಯೋಜನೆಗೊಂಡಿರುವ ಜನ ಸಾಹಿತ್ಯ ಸಮ್ಮೇಳನ ಪರ್ಯಾಯ ಸಮ್ಮೇಳನವಲ್ಲ. ಇದು ಪ್ರತಿರೋಧವಷ್ಟೇ. ನಮ್ಮ ಕಸಾಪ ಒಳಗೊಳ್ಳುವಿಕೆಯನ್ನು ಅನುಸರಿಸುತ್ತಾ ಬಂದಿದೆಯೇ ಹೊರತು, ಹೊರಗಿಡುವಿಕೆಯನ್ನಲ್ಲ. ರಾಜಕಾರಣಿಗಳು ಈ ಹಿಂದೆ ಕಸಾಪ ಅಧ್ಯಕ್ಷ ಪದವಿಯನ್ನು ವಹಿಸಿದ್ದುಂಟು. ಅವರು ಯಾರೂ ತಮ್ಮ ಪಕ್ಷದ ಸಿದ್ಧಾಂತವನ್ನು ಮುನ್ನೆಲೆಗೆ ತರುವಂತೆ ನಡೆದುಕೊಳ್ಳಲಿಲ್ಲ. ಪರಿಷತ್ತಿನ ಸಾಹಿತ್ಯಿಕ ಅಸ್ಮಿತೆಯನ್ನು ಕಾಪಾಡಿಕೊಳ್ಳುತ್ತಲೇ ಅವರೆಲ್ಲ ಅಧಿಕಾರ ನಡೆಸಿದರು. ಆದರೆ ಈ ವ್ಯಕ್ತಿ ಅಸಾಹಿತ್ಯಿಕವಾದ ಧೋರಣೆಯನ್ನು ಇಟ್ಟುಕೊಂಡಂತೆ, ಪಕ್ಷ ರಾಜಕಾರಣವನ್ನು ಕಸಾಪದೊಳಗೆ ತಂದುಕೊಂಡಂತೆ ಕಾರ್ಯಕ್ರಮವನ್ನು ನಡೆಸುತ್ತಿದ್ದಾರೆ. ಇದು ಖಂಡನೀಯ. ಅದಕ್ಕಾಗಿ ಈ ಪ್ರತಿರೋಧ ಹುಟ್ಟಿಕೊಂಡಿದೆ” ಎಂದು ವಿವರಿಸಿದರು.
“ಕಸಾಪ ಅಧ್ಯಕ್ಷರು ಪ್ರಸ್ತಾಪಿಸುತ್ತಿರುವ ಬಹುತೇಕ ಮುಸ್ಲಿಮರ ಹೆಸರುಗಳು ಪ್ರೊಟೋಕಾಲ್ ಪ್ರಕಾರ ಆಹ್ವಾನ ಪತ್ರಿಕೆಯಲ್ಲಿ ಸೇರಿದವುಗಳಾಗಿವೆ. ಆದರೆ ನಾಡಿನ ಪ್ರಸಿದ್ಧ ಮುಸ್ಲಿಂ ಲೇಖಕರನ್ನು ದೂರ ಇಡಲಾಗಿದೆ. ಕವಿಗೋಷ್ಠಿ, ಪ್ರಶಸ್ತಿ ಪುರಸ್ಕಾರ ಎಲ್ಲ ಕಡೆಯೂ ಮುಸ್ಲಿಮರನ್ನು ಕಡೆಗಣಿಸಲಾಗಿದೆ. ಇದು ಢಾಳಾಗಿ ಕಾಣುತ್ತಿದೆ. ಸಾಹಿತ್ಯ ಪರಿಷತ್ತಿನೊಳಗೆ ಎಂದಿಗೂ ಕೋಮು ಅಂಶ ಪ್ರವೇಶಿಸಿರಲಿಲ್ಲ. ಇದೇ ಮೊಟ್ಟಮೊದಲು ಪ್ರವೇಶಿಸಿದೆ. ದಲಿತ-ಬಲಿತ ಚರ್ಚೆ ಈ ಹಿಂದೆ ಬಂದಾಗ ಅದರ ವಿರುದ್ಧ ಹುಟ್ಟಿಕೊಂಡ ಸಂಘಟನೆ ಗೆಲುವನ್ನು ಸಾಧಿಸಿದೆ. ಒಂದು ಸಾಹಿತ್ಯಿಕ ಪಂಥವನ್ನು, ಚಿಂತನೆಯನ್ನು ಬೆಳೆಸಿದೆ. ಸಾಹಿತ್ಯ ಪರಿಷತ್ ಈ ಬಂಡಾಯವನ್ನು ಮುಂದಿನ ದಿನಗಳಲ್ಲಿ ಒಳಗೊಂಡು ಮುಂದುವರಿಯಿತು. ನಮ್ಮ ಪ್ರಜಾಸತ್ತಾತ್ಮಕ ವ್ಯವಸ್ಥೆಯೊಳಗೆ ಪ್ರತಿರೋಧಗಳು ಅನಾರೋಗ್ಯಕ್ಕೆ ಚಿಕಿತ್ಸೆ ಕೊಡುವ ದೃಷ್ಟಿಯಿಂದ ಹುಟ್ಟಿಕೊಳ್ಳುತ್ತವೆ. ದಾರಿ ತಪ್ಪಿರುವ ಕಸಾಪವನ್ನು ಸರಿದಾರಿಗೆ ತರುವ ಪ್ರಯತ್ನಗಳಿವು. ಈ ಕಾರಣಕ್ಕೆ ಜನಸಾಹಿತ್ಯ ಸಮ್ಮೇಳನ ಆಯೋಜನೆಗೊಂಡಿದೆ” ಎಂದರು.
“ಎಷ್ಟು ಜನ ಜಿಲ್ಲಾಧ್ಯಕ್ಷರು ಈ ಆಯ್ಕೆಯೊಳಗೆ ಪಾಲ್ಗೊಂಡಿದ್ದರು? ತಕರಾರು ಇದ್ದವರು ಯಾಕೆ ಬಾಯಿಮುಚ್ಚಿಕೊಂಡು ಸುಮ್ಮನಿದ್ದಾರೆ?” ಎಂದು ಪ್ರಶ್ನಿಸಿದ ಅವರು, “ಇಂದು ಹುಟ್ಟಿರುವುದು ಗಟ್ಟಿನೆಲೆಯ ಪ್ರತಿರೋಧವಾಗಿದೆ. ಯುವಜನರೇ ಮುಂಚೂಣಿಯಲ್ಲಿದ್ದಾರೆ. ಅದರ ಹಿಂದೆ ಹಿರಿಯರು ಎನಿಸಿಕೊಂಡವರು ನಿಂತಿದ್ದೇವೆ. ಕಿರಿಯರು ಮುಂದುವರಿಸುತ್ತಿದ್ದಾರೆ” ಎಂದು ಸಂತಸ ವ್ಯಕ್ತಪಡಿಸಿದರು.
ಹಿರಿಯ ಚಿಂತಕರಾದ ಕೋಟಿಗಾನಹಳ್ಳಿ ರಾಮಯ್ಯ ಪ್ರತಿಕ್ರಿಯಿಸಿ, “ನಮ್ಮ ಪ್ರತಿರೋಧ ದೀರ್ಘಕಾಲೀನ ಚಳಿವಳಿಯ ಸ್ವರೂಪದ್ದಾಗಿರಬೇಕು” ಎಂದು ಅಭಿಪ್ರಾಯ ತಾಳಿದರು. “ಈ ಹಿಂದೆ ಡಿ.ಆರ್.ನಾಗರಾಜ್, ಕಿ.ರಂ.ನಾಗರಾಜ್ ತರಹದ ಚಿಂತಕರು ಸಾಮೂಹಿಕತೆಯನ್ನು ಬೆಳೆಸಿದರು. ಇಂದಿನ ಪ್ರತಿಕ್ರಿಯೆಗಳು ಬೇರುಮಟ್ಟದಲ್ಲಿರುವಂತೆ ಕಂಡು ಬರುತ್ತಿಲ್ಲ. ತಕ್ಷಣದ ಪ್ರತಿಕ್ರಿಯೆಯಷ್ಟೆ ಕಾಣುತ್ತಿದೆ. ಯಾವುದೇ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬೇಕು. ಪಠ್ಯಪುಸ್ತಕ ವಿರೋಧ ಹೋರಾಟ ಒಮ್ಮೆಲೇ ನಿಂತುಹೋಗಿದ್ದೇಕೆ? ಬಂಡಾಯದ ಗುರುತುಗಳು ಇಂದು ಕಾಣುತ್ತಿಲ್ಲ. ಈ ಕುರಿತು ನಾವು ಎಚ್ಚರವಹಿಸಬೇಕು” ಎಂದು ಭಿನ್ನ ನಿಲುವು ತಾಳಿದರು.
ಯತಿರಾಜ್ ಬ್ಯಾಲಹಳ್ಳಿ
ನಾನುಗೌರಿ.ಕಾಂ
ಇದನ್ನೂ ಓದಿ: ಜ.8ರಂದು ಜನಸಾಹಿತ್ಯ ಸಮ್ಮೇಳನ: ವೇದಿಕೆ ಕಾರ್ಯಕ್ರಮದ ರೂಪುರೇಷೆ ಹೀಗಿದೆ…


