Homeಮುಖಪುಟನ್ಯಾಯಾಂಗದ ಶಿಥಿಲೀಕರಣ: ಪ್ರಜಾಪ್ರಭುತ್ವದ ಹತ್ಯೆಯೆ ಸಂಚು

ನ್ಯಾಯಾಂಗದ ಶಿಥಿಲೀಕರಣ: ಪ್ರಜಾಪ್ರಭುತ್ವದ ಹತ್ಯೆಯೆ ಸಂಚು

- Advertisement -
- Advertisement -

ಒಂದು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದುರ್ಬಲಗೊಳಿಸಲು ಇಲ್ಲ ಹಾಳುಗೆಡವಲು ಕೇವಲ ಚುನಾವಣಾ ರಾಜಕೀಯದಿಂದ ಮಾತ್ರ ಸಾಧ್ಯ ಎಂಬುದು ಸುಳ್ಳು. ವ್ಯವಸ್ಥೆಯ ಒಳಗೇ ಇದ್ದು ಗೆದ್ದಲಿನಂತೆ ತಿಂದು ಅದನ್ನು ಕೆಲಸಕ್ಕೆ ಬಾರದಂತೆ ಮಾಡುವುದೂ ಒಂದು ಉಪಾಯ. ಆಗಬೇಕಾದದ್ದಿಷ್ಟೇ; ಪ್ರತಿಯೊಂದು ಕ್ಷೇತ್ರದಲ್ಲೂ ಗೆದ್ದಲುಗಳನ್ನು ತಂದು ಹಾಕುವುದು; ಅವಕ್ಕೆ ಪ್ರಶಸ್ತವಾದ ಪರಿಸ್ಥಿತಿಯನ್ನು ಸೃಷ್ಟಿಸಿಕೊಡುವುದು; ಮುಂದಿನ ಕೆಲಸವನ್ನು ಅವೇ ಮಾಡುತ್ತವೆ. ಇವತ್ತು ದೇಶದ ಪ್ರಜಾಪ್ರಭುತ್ವ ಒಳಗಿಂದೊಳಗೇ ಹೀಗೆಯೇ ಪೊಳ್ಳಾಗುತ್ತಿದೆ; ಸಂವಿಧಾನದ ವಿವಿಧ ಪೀಠಗಳಲ್ಲಿ ಕುಳಿತಿರುವ ವ್ಯಕ್ತಿಗಳು ಹೇಗೆ ಅದರ ರೆಂಬೆಕೊಂಬೆಗಳನ್ನು ಕಡಿದುಹಾಕುವ ಹುನ್ನಾರದಲ್ಲಿದ್ದಾರೆ ಎಂಬುದು ಸಂವಿಧಾನದಲ್ಲಿ ನಂಬಿಕೆ ಇಟ್ಟಿರುವ ಪ್ರತಿಯೊಬ್ಬ ವ್ಯಕ್ತಿಗೂ ಕಾಣಿಸುತ್ತಿದೆ.

ಕಳೆದ ಕೆಲವು ತಿಂಗಳುಗಳಿಂದ ಒಂದಾದ ಮೇಲೆ ಒಂದಂತೆ ದೇಶದ ಸರ್ವೋಚ್ಚ ನ್ಯಾಯಾಲಯದ ಮೇಲೆ ವಾಗ್ದಾಳಿಗಳು ನಡೆಯುತ್ತಲೇ ಇವೆ. ಆದರೆ ಅದ್ಯಾಕೋ ಬೆರಳೆಣಿಕೆಯ ಕೆಲವರನ್ನು ಬಿಟ್ಟು, ಇದರ ಬಗ್ಗೆ ತಲೆ ಕೆಡಿಸಿಕೊಂಡಿದ್ದಾಗಲೀ, ಚರ್ಚಿಸಿದ್ದಾಗಲಿ ಅಥವಾ ಆತಂಕ ವ್ಯಕ್ತಪಡಿಸಿದ್ದಾಗಲಿ ದೊಡ್ಡ ಮಟ್ಟದಲ್ಲಿ ಕಾಣಲಿಲ್ಲ. ಧರ್ಮದ ವಿಷಯಗಳಲ್ಲಿ ಅಥವಾ ಲವ್‌ಜಿಹಾದ್‌ದಂತಹ ಸಂಗತಿಗಳಲ್ಲಿ ಹೆಚ್ಚಿನ ಜನ ತೋರುವ ಆಸಕ್ತಿ, ಉತ್ಸಾಹ ಅಥವಾ ಚರ್ಚೆಯಲ್ಲಿ ಭಾಗವಹಿಸುವಿಕೆ, ದೇಶದ ಪ್ರಜಾಪ್ರಭುತ್ವದ ಉಳಿವಿನ ಪ್ರಶ್ನೆಗಳನ್ನು ಎದುರಾದಾಗ ಕುಂಠಿತವಾಗಿರುವ ಅನುಮಾನ ಕಾಡುತ್ತದೆ.

ಸುಪ್ರೀಂಕೋರ್ಟಿನ ಕೊಲಿಜಿಯಂ ವ್ಯವಸ್ಥೆಯಲ್ಲಿ ನ್ಯಾಯಾಧೀಶರೇ ನ್ಯಾಯಾಧೀಶರನ್ನು ನೇಮಿಸುವ ಪದ್ಧತಿಯ ಬಗ್ಗೆ ಅನೇಕ ದಶಕಗಳಿಂದ ಶಾಸಕಾಂಗ ಮತ್ತು ಕಾರ್ಯಾಂಗಕ್ಕೆ ಅತೃಪ್ತಿ ಇದ್ದೇ ಇದೆ. ಒಂದಲ್ಲಒಂದು ಕಾರಣಕ್ಕೆ ವಿವಿಧ ಸರ್ಕಾರಗಳು ಈ ಪ್ರಶ್ನೆಯನ್ನು ಎತ್ತುತ್ತಲೇ ಬಂದಿವೆ. ಅದಕ್ಕೆ ಪೂರಕವಾಗಿ ಸುಪ್ರೀಂಕೋರ್ಟ್ ಕೂಡ ತನ್ನ 3 ಪ್ರಮುಖ ತೀರ್ಮಾನಗಳಾದ 1982ರ ಎಸ್.ಪಿ ಗುಪ್ತಾ ಕೇಸ್, 1993ರ ಸುಪ್ರೀಂಕೋರ್ಟ್ ಅಡ್ವೋಕೇಟ್ ಆನ್ ರೆಕಾರ್ಡ್ ಅಸೋಸಿಯೇಶನ್ ಕೇಸ್ ಹಾಗೂ 1998ರಲ್ಲಿ ಅಂದಿನ ರಾಷ್ಟ್ರಪತಿಗಳು ಈ ವಿಷಯದ ಕುರಿತು ಕೇಳಿದ ವಿವರಣೆ ಹಾಗೂ ಅದಕ್ಕೆ ಪ್ರತಿಕ್ರಿಯಿಸುವ ಮೂಲಕ ನ್ಯಾಯಾಂಗ ತನ್ನ ಸ್ವಾತಂತ್ರ್ಯವನ್ನು ಕಾಯ್ದುಕೊಂಡು ಬಂದಿದೆ.

ಕಿರಣ್ ರಿಜೆಜು

ಕೊಲಿಜಿಯಂ ವ್ಯವಸ್ಥೆಯಲ್ಲಿ ಅನೇಕ ಲೋಪದೋಷಗಳು ಇರುವುದು ನಿಜ. ಆದರೆ ಅದಕ್ಕಿಂತ ಉತ್ತಮವಾದ, ದೋಷಮುಕ್ತವಾದ, ಜಾರಿಗೊಳಿಸಲು ಸುಲಭ ಸಾಧ್ಯವಾದ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಪಾರದರ್ಶಕವಾಗಿ, ಸ್ವತಂತ್ರವಾಗಿ ಹಾಗೂ ನಿರ್ಭಿತಿಯಿಂದ ಕೆಲಸ ಮಾಡುವ ಪರ್ಯಾಯ ವ್ಯವಸ್ಥೆಯ ರಚನೆ ಆಗಿದೆಯೇ? ಅಂತಹ ಪರ್ಯಾಯಗಳು ಇನ್ನೂ ಕಲ್ಪಿಸಿಕೊಂಡಿಲ್ಲವಾದರೆ, ಇರುವುದರಲ್ಲೇ ಸ್ವಲ್ಪ ನೆಟ್ಟಗೆ ಕೆಲಸ ಮಾಡುತ್ತಿರುವ ಮತ್ತು ಭರವಸೆ ಉಳಿಸಿಕೊಂಡಿರುವ ನ್ಯಾಯಾಂಗದ ಮೇಲೆ ಈ ಮಟ್ಟಿಗೆ ನಡೆಯುತ್ತಿರುವ ದಾಳಿಗಳ ಹಿಂದಿನ ಉದ್ದೇಶವೇನು?

ಉತ್ತರ ಬಹಳ ಸರಳವಾಗಿದೆ: ನ್ಯಾಯಾಂಗ ವ್ಯವಸ್ಥೆಗೆ ಗೆದ್ದಲು ಹಿಡಿಸುವುದೇ ಈ ದಾಳಿಯ ಮುಖ್ಯ ಉದ್ದೇಶ. ಎಲ್ಲ ಕ್ಷೇತ್ರಗಳಲ್ಲಿ ಇರುವಂತೆಯೇ ನ್ಯಾಯಾಂಗ ವ್ಯವಸ್ಥೆಯಲ್ಲೂ ಭ್ರಷ್ಟ, ಪೂರ್ವಾಗ್ರಹಪೀಡಿತ, ಅಸಮರ್ಥ ನ್ಯಾಯಾಧೀಶರು ಇರುವುದು ಸಹಜ. ಆದರೆ ಇಂದಿಗೂ ದೇಶದ ನಾಗರಿಕರು ಎಂಥದೇ ಸಮಸ್ಯೆ ಬಂದಾಗ, ಹತಾಶರಾದಾಗ ನ್ಯಾಯಾಂಗದತ್ತ ಆಶಾಭಾವನೆಯಿಂದ ನೋಡುವುದು ನಿಜ. ಆದರೆ ಅದರ ಪತನದ ಪ್ರಯತ್ನಗಳ ಬಗ್ಗೆ ಜನರಿಗೆ ತಿಳಿವಳಿಕೆ ಮೂಡದಂತೆ ನೋಡಿಕೊಳ್ಳುತ್ತಿರುವುದು ದುರಂತ.

ಇದನ್ನೂ ಓದಿ: ಸಲಿಂಗಾಸಕ್ತ ಸೌರಭ್‌ರನ್ನು ನ್ಯಾಯಾಧೀಶರನ್ನಾಗಿಸುವ ನಿರ್ಧಾರಕ್ಕೆ ಸುಪ್ರೀಂ ಕೋರ್ಟ್ ಕೊಲಿಜಿಯಂ ಬೆಂಬಲ

ಕೇಂದ್ರ ಕಾನೂನು ಮಂತ್ರಿ ಕಿರಣ್ ರಿಜೆಜು ಇತ್ತೀಚೆಗೆ ಅವಕಾಶ ಸಿಕ್ಕಾಗಲೆಲ್ಲಾ ಸುಪ್ರೀಂಕೋರ್ಟಿನ ಕಾರ್ಯವೈಖರಿಯನ್ನು ಪ್ರಶ್ನಿಸುತ್ತಿದ್ದಾರೆ. ಸಾರ್ವಜನಿಕ ಸಭೆಗಳಲ್ಲಿ, ಭಾಷಣಗಳಲ್ಲಿ ಎಲ್ಲ ಕಡೆಗಳಲ್ಲೂ ನ್ಯಾಯಾಂಗವನ್ನು ಟೀಕಿಸುತ್ತಿದ್ದಾರೆ ಮತ್ತು ಆ ಮಾತುಗಳೆಲ್ಲವನ್ನೂ ವಿವಿಧ ಮಾಧ್ಯಮಗಳು ದೇಶದ ಮೂಲೆಮೂಲೆಗೆ ಪ್ರಚಾರ ಮಾಡುತ್ತಿವೆ. ಆದರೆ ಅದಕ್ಕೆ ಪ್ರತಿಯಾಗಿ ಮಾತಾಡುವವರ ಯಾವ ಮಾತುಗಳೂ ಜನರಿಗೆ ಮುಟ್ಟುತ್ತಿಲ್ಲ. ಸುಪ್ರೀಂಕೋರ್ಟ್ ದೇಶದ ವಿವಿಧ ಹೈಕೋರ್ಟ್‌ಗಳಿಗೆಂದು ಆಯ್ಕೆ ಮಾಡಿದ ನ್ಯಾಯಾಧೀಶರ ಪಟ್ಟಿ ಕೇಂದ್ರ ಸರ್ಕಾರದ ಎದುರು ಪರಿಶೀಲನೆಗಾಗಿ ಕಳುಹಿಸಿ ಒಂದೂವರೆ ವರ್ಷಕ್ಕೂ ಅಧಿಕ ಅವಧಿಯಾಗಿದೆ. ಖಾಲಿ ಇರುವ ನ್ಯಾಯಾಧೀಶರ ಹುದ್ದೆಗಳು ಹಾಗೂ ಬಾಕಿ ಇರುವ ಪ್ರಕರಣಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಸುಪ್ರೀಂಕೋರ್ಟ್‌ನ ಮೊರೆ ಕೇಂದ್ರಕ್ಕೆ ಕೇಳಿಸುವುದಿಲ್ಲ ಏಕೆ? ಅದು ಗೊತ್ತಾಗಲು ನ್ಯಾಯಾಂಗ ನೀಡಿದ ಪಟ್ಟಿಯಲ್ಲಿರುವ ಸಂಭಾವ್ಯ ನ್ಯಾಯಾಧೀಶರ ಹೆಸರುಗಳು ಮತ್ತು ಅವರ ಹಿನ್ನಲೆಯನ್ನು ತಿಳಿಯುವುದು ಮುಖ್ಯವಾಗಬಹುದು.

ಒಂದು ಸಣ್ಣ ಲೇಖನದಲ್ಲಿ ಆ ಎಲ್ಲ ವಿವರಗಳನ್ನು ನೀಡಲು ಸಾಧ್ಯವಾಗುವುದಿಲ್ಲವಾದರೂ, ಸಂಕ್ಷಿಪ್ತವಾಗಿ “ದ ವೈರ್”ನ ವಿಶ್ಲೇಷಣಾತ್ಮಕ ವರದಿ ಹೇಳುವುದಿಷ್ಟು: ’ಒಬ್ಬ ಪ್ರತಿಭಾವಂತ ಸಲಿಂಗಿ, ಒಬ್ಬ ಮುಸ್ಲಿಂ, ಇನ್ನು ಹಲವರು ಕಾಲಕಾಲಕ್ಕೆ ಕೇಂದ್ರಸರ್ಕಾರದ ಧೋರಣೆಗಳನ್ನು ಪ್ರಶ್ನಿಸಿದವರು’. ಹಾಗಾದರೆ ಎಂತಹ ಜನರನ್ನು ನ್ಯಾಯಾಧೀಶರನ್ನಾಗಿ ಆಯ್ಕೆ ಮಾಡಲು ಕೇಂದ್ರ ಬಯಸುತ್ತದೆ ಎಂಬುದು ನಿಚ್ಚಳವಾಗಿದೆ.

ಮಂತ್ರಿಗಳು ಸರ್ಕಾರದ ಪರವಾಗಿ ಮಾತಾಡುವುದು ಸಹಜ. ಇನ್ನು ಸಂವಿಧಾನಬದ್ಧ ಹುದ್ದೆಗಳಿಗೆ ಏರಿರುವ ರಾಷ್ಟ್ರಪತಿ, ಉಪರಾಷ್ಟ್ರಪತಿ ಮತ್ತು ರಾಜ್ಯಪಾಲರುಗಳು ತಮ್ಮನ್ನು ನಿಯೋಜಿಸಿದ ಸರ್ಕಾರಗಳ ಸಮರ್ಥನೆ ಮಾಡುವುದೂ ಸಹಜ ಆದರೆ ತಮ್ಮ ಸ್ಥಾನಗಳ ಘನತೆಯನ್ನು ಪಕ್ಕಕ್ಕಿಟ್ಟು ಸರ್ಕಾರದ ಏಜೆಂಟರುಗಳಂತೆ ವರ್ತಿಸುವುದು ಸಂವಿಧಾನಕ್ಕೆ ಮಾಡುವ ದ್ರೋಹ ಎನ್ನಬಹುದು.

ಜಗದೀಶ್ ಧನಕರ್

ದೇಶದ ಉಪರಾಷ್ಟ್ರಪತಿಗಳಾದ ಜಗದೀಶ್ ಧನಕರ್ ಅವರು ಸುಪ್ರೀಂಕೋರ್ಟ್‌ಅನ್ನು ಟೀಕೆ ಮಾಡುತ್ತ ’1973ರಲ್ಲಿ ಕೇಶವಾನಂದ ಭಾರತಿ ಕೇಸಿನಲ್ಲಿ ಸಂವಿಧಾನದ ಮೂಲ ಚೌಕಟ್ಟಿಗೆ ಧಕ್ಕೆ ಆಗಬಾರದು ಎಂದು ಹೇಳುವ ಮೂಲಕ ಒಂದು ಕೆಟ್ಟ ತೀರ್ಮಾನವನ್ನು ನೀಡಿದೆ’ ಎಂದಿದ್ದಾರೆ. ಈ ಮಾತು ಸಂವಿಧಾನದ ಮೂಲ ಚೌಕಟ್ಟಿನ ಕಲ್ಪನೆ ಇರದ ಯಾರಿಗೂ ತಪ್ಪಾಗಿ ಕಾಣುವುದಿಲ್ಲ. ಆದರೆ 13 ಜನರ ಸಂವಿಧಾನ ಪೀಠ ನೀಡಿದ, ದೇಶದ ಅತ್ಯಂತ ಉದಾತ್ತ ಧ್ಯೇಯಗಳನ್ನು ಎತ್ತಿಹಿಡಿದ ತೀರ್ಮಾನವನ್ನು ಸಾರಾಸಗಟಾಗಿ ತಳ್ಳಿಹಾಕುವುದರ ಹಿಂದೆ ಸಂವಿಧಾನದ ಬೆನ್ನುಮೂಳೆ ಮುರಿಯುವ ಪ್ರಯತ್ನ ಸ್ಪಷ್ಟವಾಗಿ ಕಾಣುತ್ತದೆ.

ಕೇಶವಾನಂದ ಭಾರತಿ ಪ್ರಕರಣದ ತೀರ್ಪಿನಲ್ಲಿ ಅವರ ಪರವಾಗಿ ವಾದ ಮಾಡಿದ ದೇಶದ ಮೇಧಾವಿ ವಕೀಲರಾದ ನಾನಿ ಫಾಲ್ಕಿವಾಲಾ ’ಸಂವಿಧಾನದ ಮುನ್ನುಡಿಯಲ್ಲಿ ಸಂವಿಧಾನದ ನಿರ್ಮಾತೃಗಳು ವ್ಯಕ್ತಪಡಿಸಿದ ಆಶಯಗಳಾದ ಸಮಾಜವಾದಿ, ಜಾತ್ಯತೀತ, ಒಕ್ಕೂಟ, ಗಣರಾಜ್ಯ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ನ್ಯಾಯಾಂಗ ಪರಿಶೀಲನೆ, ಸಂವಿಧಾನದ ಶ್ರೇಷ್ಠತೆ ಮತ್ತು ಅಧಿಕಾರದ ವಿಂಗಡನೆಯ ಜೊತೆಗೆ ವ್ಯಕ್ತಿಗಳ ವೈಯಕ್ತಿಕ ಸ್ವಾತಂತ್ರ್ಯ ಮತ್ತು ಘನತೆ’ ಇವು ಸಂವಿಧಾನದ ಮೂಲ ಚೌಕಟ್ಟಿನ ಆಧಾರಗಳಾಗಿವೆ ಎಂದು ಅದ್ಭುತವಾಗಿ ವಾದ ಮಂಡಿಸಿದ್ದರು. ಸಂವಿಧಾನದ ಯಾವ ಭಾಗ ಅಥವಾ ಅನುಚ್ಛೇದವನ್ನು ಬೇಕಾದರೂ ಕಾರ್ಯಾಂಗ ತಿದ್ದುಪಡಿ ಅಥವಾ ಬದಲಾವಣೆ ಮಾಡಬಹುದು, ಏಕೆಂದರೆ ಬದಲಾವಣೆ ಕಾಲದ ನಿಯಮ. ಆದರೆ ಸಂವಿಧಾನದ ಮೂಲ ಆಶಯಗಳು ಮಾತ್ರ ಬದಲಾಗಬಾರದು, ಹಾಗೇನಾದರೂ ಆದರೆ ದೇಶದ ಸಾಮಾಜಿಕ ಸಮೀಕರಣವೇ ಹಾಳಾಗುತ್ತದೆ.

ಈಗಿನ ಕೇಂದ್ರ ಸರ್ಕಾರದ ಅತ್ಯಂತ ದೊಡ್ಡ ಅಡಚಣೆ ಅಥವಾ ಶತ್ರು ಎಂದರೆ ನಮ್ಮ ಸಂವಿಧಾನ; ಮುಖ್ಯವಾಗಿ ಅದರ ಮುನ್ನುಡಿ ಮತ್ತು ಅದರಲ್ಲಿ ವ್ಯಕ್ತಪಡಿಸಿದ ಆಶಯಗಳು.

ಕೇಂದ್ರದ ಬಿಜೆಪಿ ಸರ್ಕಾರ ಮೊದಲಿನಿಂದಲೂ ಸಮರ್ಥಿಸುತ್ತ ಬಂದಿರುವ ಏಕರೂಪ ನಾಗರಿಕ ಸಂಹಿತೆ, ಹಿಂದೂ ರಾಷ್ಟ್ರ ಮುಂತಾದ ಘೋಷಣೆಗಳಿಗೆ ದೊಡ್ಡ ಅಡೆತಡೆ ಬರುವುದೇ ಈ ಮೂಲ ಚೌಕಟ್ಟು ತೀರ್ಪಿನಿಂದ; ಹಾಗಾಗಿ ಆಗಾಗ ಅದರ ಬಗ್ಗೆ ಟೀಕೆ ಮಾಡುತ್ತಲೇ ಇರುವುದು ಅದರ ಚಾಳಿ.

ಸಂವಿಧಾನದ ಮೂಲ ಚೌಕಟ್ಟಷ್ಟೇ ಅಲ್ಲ; ಈ ಮೊದಲಿನ ಸರ್ಕಾರಗಳು, ಕಟ್ಟಿದ ಕಟ್ಟಡಗಳು, ಬರೆದ ಪುಸ್ತಕ, ಇತಿಹಾಸ, ರಚಿಸಿದ ಕಲಾಕೃತಿ ಏನೇ ಇರಲಿ ಎಲ್ಲವನ್ನೂ ಒಡೆದು, ಸತ್ಯದ ಬೆಂಬಲವಿಲ್ಲದ ತನ್ನ ಛಾಪನ್ನು ಮೂಡಿಸಲು ಪ್ರಸಕ್ತ ಸರ್ಕಾರ ಪ್ರಯತ್ನಿಸುತ್ತಿರುವುದು ಸ್ಪಷ್ಟವಾಗಿದೆ.

ಪ್ರಜಾಪ್ರಭುತ್ವದಲ್ಲಿ ಜನರೇ ಆರಿಸಿದ ಸರ್ಕಾರಕ್ಕೆ ಸರ್ವೋಚ್ಚ ಅಧಿಕಾರ ಇರಬೇಕೇ ಹೊರತು ನ್ಯಾಯಾಂಗಕ್ಕೆ ಅಲ್ಲ ಎಂದು ಉಪರಾಷ್ಟ್ರಪತಿಗಳು ಹೇಳಿದಾಗ ಪ್ರಜೆಗಳ ಹೆಸರಲ್ಲಿ ಪ್ರಜೆಗಳ ಕೈಯ್ಯಿಂದಲೇ ಪ್ರಜಾಪ್ರಭುತ್ವದ ಕೊಲೆ ಮಾಡಿಸುತ್ತಿರುವ ಹುನ್ನಾರದಂತೆ ಅದು ಭಾಸವಾಗುತ್ತಿದೆ.

ರಾಜಲಕ್ಷ್ಮಿ ಅಂಕಲಗಿ

ರಾಜಲಕ್ಷ್ಮಿ ಅಂಕಲಗಿ
ಹೈಕೋರ್ಟ್ ವಕೀಲರು, ಹಲವು ಜನಪರ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...