Homeಕರ್ನಾಟಕಚುನಾವಣಾ ರಾಜಕಾರಣದಿಂದ ನಿವೃತ್ತಿ ಘೋಷಿಸಿದ ಎಚ್ ವಿಶ್ವನಾಥ್!

ಚುನಾವಣಾ ರಾಜಕಾರಣದಿಂದ ನಿವೃತ್ತಿ ಘೋಷಿಸಿದ ಎಚ್ ವಿಶ್ವನಾಥ್!

- Advertisement -
- Advertisement -

ಬಿಜೆಪಿ ತೊರೆದು ಮತ್ತೆ ಕಾಂಗ್ರೆಸ್ ಪಕ್ಷ ಸೇರುತ್ತಾರೆ ಎನ್ನುವ ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲೇ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಅವರು ಚುನಾವಣಾ ರಾಜಕಾರಣದಿಂದ ನಿವೃತ್ತಿಯಾಗುತ್ತೇನೆ ಎಂದು ಹೇಳಿದ್ದಾರೆ.

ಈ ಬಗ್ಗೆ ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು,”ನಾನು ಆರ್ಥಿಕವಾಗಿ ಸ್ಥಿತಿವಂತನಲ್ಲ, ಹೀಗಾಗಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಈಗ ಚುನಾವಣೆಗೆ ಸ್ಪರ್ಧಿಸಬೇಕೆಂದರೆ ಹಣ ಎಷ್ಟಿದೆ ಎಂದು ಕೇಳುತ್ತಾರೆ. ರಾಜಕೀಯ ಪಕ್ಷಗಳಿಗಿಂತ ಅದರ ನಾಯಕರು ಪ್ರಬಲರಾಗಿದ್ದಾರೆ” ಎಂದು ವಿಶ್ವನಾಥ್ ಹೇಳಿದರು.

”ಈ ಬೆಳವಣಿಗಳನ್ನು ಗಮನಿಸಿದರೆ, ಇನ್ನು ಮುಂದೆ ರಿಯಲ್ ಎಸ್ಟೇಟ್ ಉದ್ಯಮಿಗಳ ಚುನಾವಣೆ ನಡೆಯುತ್ತದೆ. ಅವರು ಟಿಕೆಟ್‌ಗಾಗಿ 10 ಕೋಟಿ ರೂ. ನೀಡಲು ಸಹ ಸಿದ್ಧರಿದ್ದಾರೆ. ಇಂದು ದುಡ್ಡು ಮತ್ತು ಜಾತಿಯ ರಾಜಕಾರಣವೇ ವಿಜೃಂಭಿಸುತ್ತಿದೆ. ಇವರ ನಡುವೆ ಸಿದ್ಧಾಂತ, ಮೌಲ್ಯ ರಾಜಕಾರಣ ನಡೆಯುವುದಿಲ್ಲ, ಈ ಕಾರಣದಿಂದಾಗಿ ನಾನು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ, ಸೇವಾ ರಾಜಕಾರಣದಲ್ಲಿ ಸಕ್ರಿಯವಾಗಿರುತ್ತೇನೆ” ಎಂದ ತಿಳಿಸಿದರು.

ಜೆಡಿಎಸ್ ತೊರೆದು, ಬಿಜೆಪಿ ಸೇರಿದ್ದ ಅವರು ಇದೀಗ ಬಿಜೆಪಿ ವಿರುದ್ಧವೇ ವಾಗ್ದಾಳಿ ನಡೆಸಿದ್ದು, ”ಏನೋ ಒಂದು ದೊಡ್ಡ ಬದಲಾವಣೆಯಾಗಬಹುದು ಎನ್ನುವ ಕಾರಣಕ್ಕೆ ಬಿಜೆಪಿ ಸೇರಿದ್ದೆನು. ಆದರೆ ಅಲ್ಲಿಗೆ ಹೋದಾಗಲೇ ಅವರ ಬಣ್ಣ ಬಯಲಾಗಿದ್ದು. ಇವರಂತಹ ಎಡವಟ್ಟು ಗಿರಾಕಿಗಳು ಯಾರೂ ಇಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.

”ಬಿಜೆಪಿಯವರು ಎಲ್ಲದರಲ್ಲೂ ರಾಜಕೀಯ ಮಾಡುತ್ತಾರೆ. ಶಾಲೆಗಳಲ್ಲಿನ ಪರೀಕ್ಷಾ ವ್ಯವಸ್ಥೆ, ಅಲ್ಲಿನ ಸೌಕರ್ಯ ಅಭಿವೃದ್ಧ ವಿಚಾರ ಬಗ್ಗೆ ಗಮನ ಹರಿಸುವ ಬದಲು, ಕೇಸರಿ ಬಣ್ಣ ಬಳಿದು ರಾಜಕಾರಣ ಮಾಡಲು ಹೊರಟಿದ್ದಾರೆ. ಎಲ್ಲ ಹುದ್ದೆಗಳ ಭರ್ತಿಗೆ ದುಡ್ಡು ಕೇಳುತ್ತಿದ್ದಾರೆ. ಇದೇ ಇವರ ಆಡಳಿತ. ಇದನ್ನು ಸರ್ಕಾರ ಎನ್ನಲಾಗುತ್ತದೆಯೇ?” ಎಂದು ಕಿಡಿಕಾರಿದರು.

ಇದನ್ನೂ ಓದಿ: ಬಿಜೆಪಿ ಸರ್ಕಾರದ ವಿರುದ್ಧ ಬೆಂಗಳೂರಿನ 300 ಕಡೆಗಳಲ್ಲಿ ಪ್ರತಿಭಟನೆ ನಡೆಸಲಿರುವ ಕಾಂಗ್ರೆಸ್

”ಚುನಾವಣೆ ಪ್ರಜಾಪ್ರಭುತ್ವದ ಆತ್ಮವಿದ್ದಂತೆ, ಆದರೆ ಈಗ ಎಲ್ಲ ಬದಲಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತರುವಂತೆ ಎಲ್ಲ ಪಕ್ಷದ ಮುಖಂಡರು ಮ್ಯಾಜಿಕ್ ನಂಬರ್ ಹೇಳಿಕೊಂಡು ಸರ್ಕಾರ ರಚನೆ ಮಾಡುತ್ತಿದ್ದಾರೆ. ಇದನ್ನು ಸಾಧ್ಯವಾಗಿಸುವವರು ಮತದಾರರು. ಆದರೆ ದುರಂತದ ವಿಚಾರ ಎಂದರೆ, ಬಿಜೆಪಿಗೆ ಯಾರು ಮತ ನೀಡುವುದಿಲ್ಲವೋ, ಅವರ ಹೆಸರನ್ನು ಮತದಾರರ ಪಟ್ಟಿಯಿಂದಲೇ ಕೈಬಿಡುವ ಕೆಲಸ ನಡೆಯುತ್ತಿದೆ. ಇಂತಹ ಅಯೋಗ್ಯ ರಾಜಕೀಯವನ್ನು ನನ್ನ ಜೀವನದಲ್ಲಿ ಕಂಡಿಲ್ಲ. ಮತದಾರರ ಹಕ್ಕನ್ನೇ ಕಸಿಯುವ ಕೆಲಸ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ. ಇದು ಜನತಂತ್ರ ವ್ಯವಸ್ಥೆಗೆ ಮಾಡಿದ ದೊಡ್ಡ ಅಪಮಾನ” ಎಂದು ಬಿಜೆಪಿ ವಿರುದ್ಧ ವಿಶ್ವನಾಥ್ ಆಕ್ರೋಶ ವ್ಯಕ್ಯಪಡಿಸಿದರು.

ಈ ವೇಳೆ ಹಾಲಿ, ಮಾಜಿ ಮುಖ್ಯಮಂತ್ರಿಗಳ ವಾಕ್ಸಮರದ ಬಗ್ಗೆ ಮಾತನಾಡಿದ ಅವರು, ”ಜವಾಬ್ದಾರಿಯುತ ಜಾಗದಲ್ಲಿರುವವರು ತಾವಾಡುವ ಮಾತಿನ ಮೇಲೆ ಸದಾ ಎಚ್ಚರಿಕೆ ವಹಿಸಬೇಕು. ಆದರೆ ನಮ್ಮ ಹಾಲಿ ಮತ್ತು ಮಾಜಿ ಮುಖ್ಯಮಂತ್ರಿಗಳಿಬ್ಬರೂ ಇದರ ಪರಿಜ್ಞಾನವಿಲ್ಲದೆ ನಡೆದುಕೊಳ್ಳುತ್ತಿದ್ದಾರೆ” ಎಂದು ವಿಶ್ವನಾಥ್ ಬೇಸರ ವ್ಯಕ್ತಪಡಿಸಿದರು.

”ಧಮ್ ಇದ್ದರೆ, ತಾಕತ್ತಿದ್ದರೆ ಎನ್ನುವ ಮಾತುಗಳನ್ನು ಬಳಿಸಿ ರಾಜಕಾರಣಿಗಳು ನೈತಿಕ ಮೌಲ್ಯಗಳನ್ನು ಕಳೆದುಕೊಳ್ಳುವಂತೆ ಇವರುಗಳು ಮಾಡಿದ್ದಾರೆ. ಹೀಗಿದ್ದಾಗ ಮತದಾರರ ಬಳಿ ಯಾವ ಮುಖ ಇಟ್ಟುಕೊಂಡು ಹೋಗುತ್ತಾರೆ? ಇವರ ಮಾತನಾಡುವ ಈ ಮಾತುಗಳು, ಯುವಕರಿಗೆ, ಮತದಾರರಿಗೆ, ರಾಜಕಾರಣ, ಆಡಳಿತಕ್ಕೆ ಆದರ್ಶವೇ? ಇವರುಗಳ ನಡೆ ನೋಡಿದರೆ ಗಲ್ಲಿಯ ಪುಡಿ ರೌಡಿಗಳಂತೆ ಮಾತನಾಡುತ್ತಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕ” ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಗುರಿಯಾಗಿಸಿಕೊಂಡು ವಿಶ್ವನಾಥ್ ಕಿಡಿಕಾರಿದರು.

ಆಡಳಿತ ಪಕ್ಷದ ವಿರುದ್ಧ ವಿಪಕ್ಷದವರು ಭ್ರಷ್ಟಾಚಾರದ ವಿಚಾರವಾಗಿ ಗುರುತರ ಆರೋಪ ಮಾಡಿದಾಗ, ಆ ಬಗ್ಗೆ ಸರ್ಕಾರ ಗೌರವಯುತವಾಗಿ ನಡೆದುಕೊಳ್ಳಬೇಕು. ಹಿಂದಿನಿಂದಲೂ ಈ ವ್ಯವಸ್ಥೆ ಹಾಗೆಯೇ ನಡೆದುಕೊಂಡು ಬಂದಿದೆ. ಆದರೆ, ಬಿಜೆಪಿ 40 ಪರ್ಸೆಂಟ್ ಆರೋಪ ಕುರಿತು ತೆಗೆದುಕೊಂಡ ನಿಲುವನ್ನು ನಾನು ಖಂಡಿಸುತ್ತೇನೆ. ನೀವು ಮಾಡಿದ್ದೀರಿ, ನಾವು ಮಾಡುತ್ತಿದ್ದೇವೆ ಎಂದು ಆಡಳಿತ ಪಕ್ಷದವರು ಪರೋಕ್ಷವಾಗಿ ಹೇಳುವಂತಿದೆ ಎಂದು ಸರ್ಕಾರವನ್ನು ತಿವಿದಿದ್ದಾರೆ.

ವೈಯುಕ್ತಿಕ ಚಾರಿತ್ರ್ಯವಧೆ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ನಡುವಿನ ವಿಚಾರಕ್ಕೆ ಪ್ರತಿಕ್ರಿಯಿಸಿದ ವಿಶ್ವನಾಥ್, ”ಯಾರನ್ನು ಯಾರು ಮುಗಿಸಲು ಸಾಧ್ಯವಿಲ್ಲ, ಡಿ ಕೆ ಶಿವಕುಮಾರ್ ಅವರನ್ನು ಮುಗಿಸುವವರೆಗೂ ನಾನು ರಾಜಕೀಯದಿಂದ ನಿವೃತ್ತಿಯಾಗಲಾರೆ ಎಂದು ಅವರು ಹೇಳಿರುವುದು ಸರಿಯಲ್ಲ. ಇದು ಅವರ ಕುಟುಂಬಕ್ಕೆ ಶೋಭೆ ತರುವ ವಿಚಾರವಲ್ಲ. ಸಿ ಡಿ ಬಿಡುಗಡೆ ಮೂಲಕ ಯಾರನ್ನು ಯಾರೂ ಮುಗಿಸಲು ಸಾಧ್ಯವಿಲ್ಲ. ರಾಜಕಾರಣಿಗಳ ಭವಿಷ್ಯ ನಿರ್ಧರಿಸುವವರು ಮತದಾರರು. ಅವರೇ ಎಳಿಸಬೇಕು, ಅವರೇ ಬೀಳಿಸಬೇಕೇ ಹೊರತು ರಾಜಕಾರಣಿಗಳೇನೂ ಮಾಡಲಾರರು” ಎಂದು ವಿಶ್ವನಾಥ್ ಹೇಳಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ರೇವಣ್ಣ ಸಹಚರ ಸತೀಶ್ ಬಾಬಣ್ಣಗೆ ನ್ಯಾಯಾಂಗ ಬಂಧನ

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣ ಬಯಲಾದ ಬೆನ್ನಲ್ಲಿ ಮೈಸೂರಿನಲ್ಲಿ ಮಹಿಳೆಯನ್ನು ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿ ಪ್ರಕರಣದ ಎರಡನೇ ಆರೋಪಿ ಸತೀಶ್ ಬಾಬಣ್ಣ ಬಂಧನವಾಗಿದ್ದು, ಅವರನ್ನು ನ್ಯಾಯಾಲಯ 14...