Homeಕರ್ನಾಟಕಉದ್ದೇಶಪೂರ್ವಕ ಜಾತಿನಿಂದನೆ ಮಾತ್ರ ಅಪರಾಧವಾ?; ಅಟ್ರಾಸಿಟಿ ಕಾನೂನು ನಿಷ್ಕ್ರಿಯೆ ಮಾಡಲಾಗುತ್ತಿದೆಯೇ?

ಉದ್ದೇಶಪೂರ್ವಕ ಜಾತಿನಿಂದನೆ ಮಾತ್ರ ಅಪರಾಧವಾ?; ಅಟ್ರಾಸಿಟಿ ಕಾನೂನು ನಿಷ್ಕ್ರಿಯೆ ಮಾಡಲಾಗುತ್ತಿದೆಯೇ?

- Advertisement -
- Advertisement -

“ಕೇವಲ ಜಾತಿ ಹಿಡಿದು ಬೈದಾಕ್ಷಣ ಅದನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯಡಿಯ ಅಪರಾಧ ಎಂದು ಪರಿಗಣಿಸಲು ಆಗದು. ಉದ್ದೇಶಪೂರ್ವಕ ಮತ್ತು ಅಪಮಾನ ಮಾಡುವುದಕ್ಕಾಗಿಯೇ ಜಾತಿ ನಿಂದನೆ ಮಾಡಿದರಷ್ಟೇ ಅಪರಾಧ” ಎಂದು ಕರ್ನಾಟಕ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಈ ‘ಉದ್ದೇಶಪೂರ್ವಕ’ ಎನ್ನುವ ಪದವನ್ನು ಬಳಸುವ ಮೂಲಕ ನ್ಯಾಯಾಧೀಶರು ಇಡೀ ಅಟ್ರಾಸಿಟಿ ಕಾಯ್ದೆಯನ್ನೇ ನಿಷ್ಟ್ರಿಯೆ ಮಾಡಲು ಹೊರಟಿದ್ದಾರಾ ಎನ್ನುವ ಅನುಮಾನಗಳು ಮೂಡುತ್ತಿವೆ. ದೇಶದಲ್ಲಿ ದಿನಬೆಳಗಾದರೆ ಒಂದಿಲ್ಲೊಂದು ದಲಿತರ ಮೇಲಿನ ದೌರ್ಜನ್ಯಗಳ ಬಗ್ಗೆ ಸುದ್ದಿಗಳನ್ನು ಕೇಳುತ್ತಿದ್ದೆವೆ. ಇದೀಗ ಇಂತಹ ಪದ ಪ್ರಯೋಗದಿಂದ ದೌರ್ಜನ್ಯ ತಡೆಯಲು ಹೇಗೆ ಸಾಧ್ಯ ಎನ್ನುವ ಪ್ರಶ್ನೆ ಮೂಡುತ್ತದೆ.

ದೇಶದಲ್ಲಿ ಸಂವಿಧಾನ ಜಾರಿಯಾಗಿ ಏಳು ದಶಕಗಳೇ ಕಳೆದಿವೆ. ಜಾತಿಯ ತಾರತಮ್ಯ ಇನ್ನೂ ಕಡಿಮೆಯಾಗಿಲ್ಲ. ದೇವರ ಕೋಲು ಮುಟ್ಟಿದ ಎನ್ನುವ ಕಾರಣಕ್ಕೆ ಅಪ್ರಾಪ್ತ ಬಾಲಕನೊರ್ವನಿಗೆ ಸಾರ್ವಜನಿಕವಾಗಿ ಥಳಿಸಿ 60 ಸಾವಿರ ದಂಡ ಕಟ್ಟದಿದ್ದರೆ ಗ್ರಾಮದಿಂದ ಬಹಿಷ್ಕಾರ ಹಾಕುತ್ತೇವೆ ಎನ್ನುವ ಘಟನೆ ಇತ್ತೀಚೆಗೆ ರಾಜ್ಯದಲ್ಲೇ ನಡೆಯಿತು. ಪರೀಕ್ಷೆ ಬರೆದು ತನ್ನ ಗ್ರಾಮಕ್ಕೆ ಹೋಗುವುದಕ್ಕೆ ಬಸ್ಸು ಸಿಗಲಿಲ್ಲ ಎನ್ನುವ ಕಾರಣಕ್ಕೆ ಅಲ್ಲಿಯೇ ಇದ್ದ ಒಂದು ದೇವಸ್ಥಾನದ ಒಳಗೆ ಒಬ್ಬ ದಲಿತ ಯುವಕ ಮಲಗಿಕೊಂಡಿದ್ದ ಎನ್ನುವ ಕಾರಣಕ್ಕೆ ಆತನನ್ನು ಬೆತ್ತಲೆ ಮಾಡಿ ಥಳಿಸಿ ಮೆರವಣಿಗೆ ಮಾಡಿದಂತಹ ಘಟನೆ ಚಾಮರಾಜನಗರದ ಬಳಿ ನಡೆಯಿತು. ಈ ರೀತಿಯ ಘಟನೆಗಳು ಬೆಳಕಿಗೆ ಬರುವುದು ಬೆರಳೆಣಿಕೆಯಷ್ಟು ಮಾತ್ರ, ಬೆಳಕಿಗೆ ಬಾರದೆಯೇ ಮುಚ್ಚಿಹೋಗುವುದು ಸಾವಿರಾರು ಸಂಖ್ಯೆಯಲ್ಲಿವೆ.

ಜಾತಿ ಹಿಡಿದು ಬೈಯ್ದರೆ ಸಾಲದು ಉದ್ದೇಶಪೂರ್ವಕ ಮತ್ತು ಅಪಮಾನ ಮಾಡುವುದಕ್ಕಾಗಿಯೇ ಜಾತಿ ನಿಂದನೆ ಮಾಡಿದರಷ್ಟೇ ಅದನ್ನು ಅಟ್ರಾಸಿಟಿ ಪ್ರಕರಣ ಎಂದು ಕರೆಯುವುದಾದರೆ ಜಾತಿಯ ಹೆಸರಿನಲ್ಲಿ ದೂರ ಇಡುವ, ದೇವಸ್ಥಾನಕ್ಕೆ ನಿಷೇಧ ಹೇರುವ ಅಸಹ್ಯ ಪದ್ದತಿಯ ಬಗ್ಗೆ ನ್ಯಾಯಾಧೀಶರ ಅಭಿಪ್ರಾಯ ಏನಾಗಿರುತ್ತದೆ?

ಇದನ್ನೂ ಓದಿ: ಕೋಲಾರದ ದಲಿತ ಯುವಕನ ಮೇಲಿನ ದೌರ್ಜನ್ಯ: ನಿರ್ದಾಕ್ಷಿಣ್ಯ ಕ್ರಮಕ್ಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಆದೇಶ

ಪ್ರಬಲನೊಬ್ಬ ದುರ್ಬಲನ ಮೇಲೆ ದೌರ್ಜನ್ಯ ನಡೆಸುತ್ತಿದ್ದಾನೆ ಎಂದಾಗ ಆತನ ಮನಸ್ಸಿನಲ್ಲಿ ತಾನು ಸವರ್ಣೀಯ, ಈತ ದಲಿತ ಎನ್ನುವ ಮನಸ್ಥಿತಿಯಲ್ಲಿಯೇ ದೌರ್ಜನ್ಯ ಮಾಡಿರುತ್ತಾನೆ. ಅಲ್ಲಿ ತಾನು ಸವರ್ಣೀಯ ನೀನು ದಲಿತ ಎಂದು ಹೇಳಬೇಕಿಲ್ಲ, ಅದು ಆತ ಅದೇ ಮನಸ್ಥಿಯಲ್ಲಿ ದೌರ್ಜನ್ಯ ನಡೆಸಿರುತ್ತಾನೆ. ಇದು ಎಸ್‌ಸಿ, ಎಸ್‌ಟಿ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿಯ ಅಪರಾಧ ಆಗುವುದಿಲ್ಲವೇ? ಇಲ್ಲಿ ಜಾತಿಯ ಹೆಸರಿಸಿ ದೌರ್ಜನ್ಯ ನಡೆಸಿದರೆ ಮಾತ್ರವೇ ಆ ಕಾಯ್ದೆಯಡಿಯ ಅಪರಾಧ ಆಗುತ್ತದೆಯೇ? ಎನ್ನುವ ಪ್ರಶ್ನೆಗಳು ಮೂಡುತ್ತಿವೆ.

ಈ ಬಗ್ಗೆ ನಾನುಗೌರಿ.ಕಾಂ ಜೊತೆ ಮಾತನಾಡಿದ ಲೇಖಕ ರುದ್ರು ಪುನೀತ್ .ಆರ್.ಸಿ ಅವರು, “ಉದ್ದೇಶಪೂರ್ವಕವಾಗಿ ಜಾತಿನಿಂದನೆ ಮಾಡಿದ್ದಾರೆ, ಅಸ್ಪೃಶ್ಯತೆ ಆಚರಣೆ ಮಾಡಿದ್ದಾರೆ ಎನ್ನುವುದನ್ನು ಮಾನ್ಯ ನ್ಯಾಯಾಲಯ ಯಾವ ಮಾನದಂಡದಮೇಲೆ ನಿರ್ಧಾರ ಮಾಡುತ್ತೆ ಅನ್ನೋದನ್ನ ತಿಳಿಸಬೇಕಿತ್ತು” ಎಂದರು.

“ಮೀಸಲಾತಿ ಅಂದ್ರೆ ಸಾಕು ಅದು ಕೇವಲ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಮಾತ್ರ ದೊರೆಯುತ್ತಿದೆ, ಅವರಿಗೆ ಸರ್ಕಾರಿ ನೌಕರಿ ಆರಾಮಾಗಿ ಸಿಗುತ್ತದೆ ಎನ್ನುವ ಕೆಟ್ಟ ಅಭಿಪ್ರಾಯವೊಂದು ಸವರ್ಣೀಯರ ತಲೆಯಲ್ಲಿ ಕೂತಿದೆ. ಆದರೆ EWS ಮೂಲಕ ಸವರ್ಣೀಯರಿಗೆ ಮೀಸಲಾತಿ ನೀಡಲಾಯಿತು, PTCL ಕಾಯ್ದೆ ತಿದ್ದುಪಡಿ ಮಾಡಲಾಯಿತು, ಲೇಬರ್ ಕೋಡ್ ಕಾಯ್ದೆಗಳನ್ನು ತಿದ್ದುಪಡಿ ಮಾಡಲಾಯಿತು, SC/ST ಗಳಿಗೆ ಪೋಸ್ಟ್ ಮೆಟ್ರಿಕ್ ಸ್ಕಾಲರ್‌ಶಿಪ್ ಕಡಿತಗೊಳಿಸಲಾಯಿತು, SCP/TSP ಹಣವನ್ನು ದುರ್ಬಳಕೆ ಮಾಡಲು ಸೆಕ್ಷನ್ 7D ಜಾರಿಗೊಳಿಸಲಾಯಿತು, 51 ಸಾವಿರ ಸರ್ಕಾರಿ ಶಾಲೆಗಳನ್ನು ಮುಚ್ಚಲಾಯಿತು (ಸರ್ಕಾರಿ ಶಾಲೆಯಲ್ಲಿ 90% SC/ST ವಿದ್ಯಾರ್ಥಿಗಳೆ ಇರುವುದು), 1 ರಿಂದ 8 ನೇ ತರಗತಿಯವರೆಗೆ SC/ST ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ನಿಲ್ಲಿಸಲಾಯಿತು, SC/STಗಳಿಗೆ IIT, IIM, AIIMS,NIT,JNU, DUಗಳಲ್ಲಿ ಶುಲ್ಕವನ್ನು ಹತ್ತುಪಟ್ಟು ಹೆಚ್ಚಿಸಲಾಯಿತು, NEET ಜಾರಿಗೊಳಿಸಿ SC/ST ಮಕ್ಕಳು ಡಾಕ್ಟರ್ ಆಗದಂತೆ ತಡೆಯಲಾಯಿತು, ಸರ್ಕಾರಿ ಸಂಸ್ಥೆಗಳನ್ನು ಖಾಸಗೀಕರಣಗೊಳಿಸಿ ಮೀಸಲಾತಿ ಇಲ್ಲದಂತೆ ಮಾಡಲಾಯಿತು, ಈಗ ಅಟ್ರಾಸಿಟಿ ಮೇಲೆ ಕಣ್ಣು ಬಿದ್ದಿದೆ. ಇವೆಲ್ಲವೂ ಪರಿಶಿಷ್ಟರನ್ನ ಸಂವಿಧಾನ ಬರುವ ಮುನ್ನ ಇದ್ದಂತಹ ವ್ಯವಸ್ಥೆಗೆ ಹಿಂದೂಡುವ ಕುತಂತ್ರವಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ದುರುದ್ದೇಶದಿಂದ ಅಟ್ರಾಸಿಟಿ ಕಾಯ್ದೆಯನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತದೆ ಎಂದು ಹೇಳುವವರು ಇದ್ದಾರೆ. ಅದು ತುಂಬಾ ಬಾಲಿಷವಾದಂತಹ ಮಾತು, ಹಾಗೊಂದು ವೇಳೆ ದುರುಪಯೋಗವಾದರೂ ಅದರ ಸಂಖ್ಯೆ ಬಹಳ ಕಡಿಮೆ. prevention of atrocities act ಅಡಿಯಲ್ಲಿ 2020ರ ಅಂಕಿಅಂಶಗಳನ್ನು ತೆಗೆದುಕೊಂಡರೆ ಕರ್ನಾಟಕದಲ್ಲಿ SC (1263) ST (269) ಕೇಸುಗಳು ಒಟ್ಟು 1,532 ಕೇಸ್‌ಗಳು ದಾಖಲಾಗಿದ್ದವು. ಅವುಗಳಲ್ಲಿ ಶಿಕ್ಷೆ ಆಗಿರುವುದು ಕೇವಲ 18 (SC 17, ST 1) ಜನರಿಗೆ ಮಾತ್ರ. ಈಗ ‘ಉದ್ದೇಶಪೂರ್ವಕ ಜಾತಿನಿಂದನೆ’ ಎನ್ನುವ ಹೊಸ ನಿಯಮವೊಂದು ಜಾರಿಯಾದರೆ ಒಬ್ಬನೇ ಒಬ್ಬ ಅಪರಾಧಿಗೂ ಶಿಕ್ಷೆ ಆಗುವುದಿಲ್ಲ” ಎಂದು ಅವರು ಅಭಿಪ್ರಾಯಪಟ್ಟರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮತದಾನ ನಡೆದ 48 ಗಂಟೆಗಳಲ್ಲಿ ಅಂಕಿಅಂಶಗಳ ಬಿಡುಗಡೆ: ಚು.ಆಯೋಗದಿಂದ ಪ್ರತಿಕ್ರಿಯೆ ಕೇಳಿದ ಸುಪ್ರೀಂಕೋರ್ಟ್‌

0
ಮತದಾನ ಮುಗಿದ 48 ಗಂಟೆಗಳ ಒಳಗೆ ಮತದಾನ ಕೇಂದ್ರವಾರು ಮತದಾರರ ಅಂಕಿಅಂಶಗಳನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲು ನಿರ್ದೇಶನ ನೀಡುವಂತೆ ಕೋರಿ ಎನ್‌ಜಿಒ ಎಡಿಆರ್ ಸಲ್ಲಿಸಿದ ಮನವಿಗೆ ಸುಪ್ರೀಂಕೋರ್ಟ್ ಶುಕ್ರವಾರ ಒಂದು ವಾರದೊಳಗೆ ಭಾರತೀಯ...