Homeಮುಖಪುಟಫ್ಯಾಕ್ಟ್‌ಚೆಕ್ ನೆಪದಲ್ಲಿ ಸತ್ಯಕ್ಕೆ ಮೂಗುದಾರ; ಇದು ಕೇಂದ್ರ ಸರ್ಕಾರದ ಹೊಸತಂತ್ರ

ಫ್ಯಾಕ್ಟ್‌ಚೆಕ್ ನೆಪದಲ್ಲಿ ಸತ್ಯಕ್ಕೆ ಮೂಗುದಾರ; ಇದು ಕೇಂದ್ರ ಸರ್ಕಾರದ ಹೊಸತಂತ್ರ

- Advertisement -
- Advertisement -

ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮುಖಂಡ ಸಾಕೇತ್ ಗೋಖಲೆ ಇತ್ತೀಚೆಗೆ ಸರಣಿ ಬಂಧನಗಳಿಗೆ ಒಳಪಟ್ಟರು. ಪದೇಪದೇ ಗುಜರಾತ್ ಪೊಲೀಸರಿಂದ ವಿಚಾರಣೆಯನ್ನು ಅವರು ಎದುರಿಸಬೇಕಾಯಿತು. ಸಾಕೇತ್ ಹಂಚಿಕೊಂಡಿರುವ ಮಾಹಿತಿ ಸುಳ್ಳೆಂದು ’ಪ್ರೆಸ್ ಇನ್ಫರ್ಮೇಷನ್ ಬ್ಯೂರೋ (ಪಿಐಬಿ) ಫ್ಯಾಕ್ಟ್‌ಚೆಕ್’ ಟ್ವಿಟರ್ ಖಾತೆಯಲ್ಲಿ ಮಾಡಿದ ಒಂದು ಟ್ವೀಟ್‌ನಿಂದಾಗಿ ಸಾಕೇತ್ ಸಮಸ್ಯೆ ಎದುರಿಸಬೇಕಾಯಿತು.

“ಮೊರ್ಬಿ ಸೇತುವೆ ದುರಂತದ ನಂತರ ಪ್ರಧಾನಿ ನರೇಂದ್ರ ಮೋದಿಯವರು ಮೊರ್ಬಿಗೆ ನೀಡಿದ ಕೆಲವೇ ಗಂಟೆಗಳ ಭೇಟಿಗೆ 30 ಕೋಟಿ ರೂಪಾಯಿ ಖರ್ಚಾಗಿದೆ ಎಂದು ಆರ್‌ಟಿಐ ಮಾಹಿತಿ ಬಹಿರಂಗಪಡಿಸಿದೆ” ಎಂದು ಆರೋಪಿಸಿದ್ದರು ಸಾಕೇತ್. ಅದರ ಕುರಿತ ಕೆಲವು ಸುದ್ದಿ ತುಣುಕುಗಳನ್ನು 2022ರ ಡಿಸೆಂಬರ್ 1ರಂದು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು. ಈ ಸುದ್ದಿ ಸುಳ್ಳೆಂದು ’ಪಿಐಬಿ ಫ್ಯಾಕ್ಟ್‌ಚೆಕ್’ ಟ್ವಿಟರ್ ಖಾತೆಯು ಹೇಳಿತು. ನಂತರ ಸಾಕೇತ್ ಬಂಧನದ ಪ್ರಹಸನ ಶುರುವಾಯಿತು.

ಸಾಕೇತ್ ಅವರನ್ನು ಮೊದಲ ಬಾರಿಗೆ ಡಿಸೆಂಬರ್ 5ರಂದು ರಾಜಸ್ಥಾನದ ಜೈಪುರದಲ್ಲಿ ಗುಜರಾತ್ ಪೊಲೀಸರು ಬಂಧಿಸಿದರು. ಅವರನ್ನು ಅಹಮದಾಬಾದ್‌ಗೆ ಕರೆತಂದು ಔಪಚಾರಿಕವಾಗಿ ಅರೆಸ್ಟ್ ಮಾಡಲಾಯಿತು. ನಂತರ ಡಿಸೆಂಬರ್ 8ರವರೆಗೆ ಪೊಲೀಸ್ ಕಸ್ಟಡಿಗೆ ಕಳುಹಿಸಲಾಯಿತು. “ರಾಜಕೀಯ ಮೈಲೇಜ್ ಪಡೆಯುವುದಕ್ಕಾಗಿ ಮೋದಿಯವರ ಕುರಿತು ಸುಳ್ಳು ಸುದ್ದಿಯನ್ನು ಟ್ವೀಟ್ ಮಾಡಿದ್ದಾರೆ” ಎಂದು ಗುಜರಾತ್ ಪೊಲೀಸರು ಆರೋಪಿಸಿದರು. ಜಾಮೀನು ದೊರೆತ ಕೆಲವೇ ಗಂಟೆಗಳಲ್ಲಿ ಅವರನ್ನು ಮತ್ತೆ ಬಂಧಿಸಲಾಯಿತು. ಡಿಸೆಂಬರ್ 9ರಂದು ಸಾಕೇತ್ ಎರಡನೇ ಪ್ರಕರಣದಲ್ಲೂ ಜಾಮೀನು ಪಡೆಯುವಲ್ಲಿ ಯಶಸ್ವಿಯಾದರು. ಆದರೆ ಕ್ರೌಡ್ ಫಂಡಿಂಗ್ ಮೂಲಕ ಸಂಗ್ರಹಿಸಿದ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಮತ್ತೆ ಅವರನ್ನು ಅಹಮದಾಬಾದ್ ಸೈಬರ್ ಕ್ರೈಂ ಬ್ರಾಂಚ್ ಮೂರನೇ ಬಾರಿಗೆ ಬಂಧಿಸಿತು. ಸುಳ್ಳುಸುದ್ದಿಯ ಆರೋಪವೊಂದು- ಹಣ ದುರುಪಯೋಗ ಆರೋಪದವರೆಗೆ ಸಾಗಿದ್ದು ಹೀಗೆ…

ಸಾಕೇತ್ ಗೋಖಲೆ

ಪಿಐಬಿ ಫ್ಯಾಕ್ಟ್‌ಚೆಕ್ ಮಾಡಿದ್ದನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಿಂದ ಅಳಿಸಿಹಾಕುವ ನಿಟ್ಟಿನಲ್ಲಿ ಕಾನೂನು ರೂಪಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯದ ’ಮಾಹಿತಿ ತಂತ್ರಜ್ಞಾನ ಕರಡು ತಿದ್ದುಪಡಿ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮಗಳು, 2021’ ಈಗ ಪತ್ರಕರ್ತರಲ್ಲಿ ಆತಂಕ ಉಂಟುಮಾಡಿವೆ. ಯಾಕೆಂದರೆ ಸರ್ಕಾರಿ ಸಂಸ್ಥೆಯಾದ ಪಿಐಬಿ, ಯಾವುದನ್ನು ನಕಲಿ ಎನ್ನುತ್ತದೆಯೋ ಅದನ್ನು ಸಾಮಾಜಿಕ ಮಾಧ್ಯಮಗಳಿಂದ ತೆಗೆದುಹಾಕಲಾಗುತ್ತದೆ. ಈ ಮೂಲಕ ನಮ್ಮ ಸಂವಿಧಾನವು ಆರ್ಟಿಕಲ್ 19(1)(ಎ) ಮೂಲಕ ಕೊಟ್ಟಿರುವ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿನ ಮೇಲೆ ಸರ್ಕಾರ ಪ್ರಹಾರ ಮಾಡಲು ಹೊರಟಿದೆ.

ಪಿಐಬಿಗೆ ಈ ಮಟ್ಟದ ಅಧಿಕಾರವನ್ನು ನೀಡಲು ಸರ್ಕಾರ ಹೊರಟಿರುವ ಬೆನ್ನಲ್ಲೇ ಟೀಕೆಗಳು ವ್ಯಕ್ತವಾಗಿವೆ. ಈ ಪ್ರಸ್ತಾವನೆಯನ್ನು ಕಾರ್ಯಗತಗೊಳಿಸುವ ಮೊದಲು ’ಪ್ರತ್ಯೇಕ ಸಮಾಲೋಚನೆ’ ನಡೆಸಲಾಗುವುದು ಎಂದು ಮಾಹಿತಿ ತಂತ್ರಜ್ಞಾನ ಖಾತೆಯ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಹೇಳಿರುವುದಾಗಿಯೂ ವರದಿಯಾಗಿದೆ. ಆದರೆ ಆನ್‌ಲೈನ್ ಮಾಧ್ಯಮಗಳ ಮೇಲೆ ಸರ್ಕಾರ ಹಿಡಿತ ಸಾಧಿಸಲು ಯತ್ನಿಸುತ್ತಿರುವುದನ್ನು ಸ್ವತಂತ್ರ ಮಾಧ್ಯಮಗಳ ಪತ್ರಕರ್ತರು ನಿಚ್ಚಳವಾಗಿ ಗುರುತಿಸುತ್ತಿದ್ದಾರೆ.

ಆನ್‌ಲೈನ್ ಮಾಧ್ಯಮಗಳ ಮೇಲೆ ಸರ್ಕಾರದ ಕಣ್ಣು: ಪೂಜಾ ಪ್ರಸನ್ನ

’ನ್ಯಾಯಪಥ’ ಪತ್ರಿಕೆಯೊಂದಿಗೆ ಮಾತನಾಡಿದ ’ದಿ ನ್ಯೂಸ್ ಮಿನಿಟ್’ ಜಾಲತಾಣದ ಸಂಪಾದಕೀಯ ಮುಖ್ಯಸ್ಥರಾದ (ವರದಿಗಾರಿಕೆ) ಪೂಜಾ ಪ್ರಸನ್ನ ಅವರು, “ಮುಖ್ಯವಾಹಿನಿ ದೃಶ್ಯ ಹಾಗೂ ಮುದ್ರಣ ಮಾಧ್ಯಮಗಳಿಗೆ ಹೋಲಿಸಿದರೆ ಆನ್‌ಲೈನ್ ಮಾಧ್ಯಮಗಳಲ್ಲಿ ಈವರೆಗೆ ಹೆಚ್ಚಿನ ಸ್ವತಂತ್ರವಿತ್ತು. ಜಾಹೀರಾತು ಸೇರಿದಂತೆ ಇತ್ಯಾದಿ ಹಲವು ಸಂಗತಿಗಳನ್ನು ಮುಂದುಮಾಡಿ ಆ ಮಾಧ್ಯಮಗಳನ್ನು ನಿಯಂತ್ರಿಸುವ ಕೆಲಸವನ್ನು ಸರ್ಕಾರ ಮಾಡುತ್ತದೆ. ಆದರೆ ಆನ್‌ಲೈನ್ ಮೀಡಿಯಾಗಳನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವುದು ಅವುಗಳಿಗೆ ಕಷ್ಟವಾಗಿದೆ. ಐಟಿ ಕಾಯ್ದೆ ತಿದ್ದುಪಡಿಯ ಮೂಲಕ ಆನ್‌ಲೈನ್ ಮಾಧ್ಯಮಗಳ ಮೇಲೂ ಸರ್ಕಾರ ಪ್ರಹಾರ ಮಾಡಲು ಚಿಂತಿಸಿದೆ” ಎಂದು ಎಚ್ಚರಿಸಿದರು.

ಮುಂದುವರಿದು, “ಪಿಐಬಿಯೇ ಯಾವುದು ಸತ್ಯ ಮತ್ತು ಯಾವುದು ಸುಳ್ಳು ಎಂದು ನಿರ್ಧರಿಸಿ ಸಾಮಾಜಿಕ ಮಾಧ್ಯಮಗಳನ್ನು ನಿಯಂತ್ರಿಸುವುದು ಅಪಾಯಕಾರಿ. ಸರ್ಕಾರ ರೂಪಿಸುವ ನೀತಿ ನಿರೂಪಣೆಗಳನ್ನು, ಸದನದಲ್ಲಿ ಆಗುವ ಚರ್ಚೆಗಳನ್ನು ವಿರೋಧಿಸಿ ಮಾಧ್ಯಮಗಳು ವರದಿ ಮಾಡುತ್ತವೆ. ಸರ್ಕಾರದ ವಿರುದ್ಧ ಮಾಡಿರುವ ಸುದ್ದಿಯನ್ನು ಫೇಕ್ ನ್ಯೂಸ್ ಎಂದು ಹೇಳಿ ನೋಟೀಸ್ ಕಳುಹಿಸಿದರೆ, ಸುದ್ದಿ ನಿಜವಾದರೂ ಅದನ್ನು ಸೋಷಿಯಲ್ ಮೀಡಿಯಾಗಳಿಂದ ತೆಗೆದುಹಾಕಬೇಕಾಗುತ್ತದೆ. ಈ ವಿಚಾರದಲ್ಲಿ ಆಯ್ಕೆಯೇ ಇಲ್ಲವಾಗಿದೆ” ಎಂದು ವಿಷಾದಿಸಿದರು.

“ನಾನು ಮಾಡುತ್ತಿರುವುದು ಸರಿಯೋ ಅಲ್ಲವೋ ಎಂದು ನಾನಾಗಿಯೇ ಸರ್ಟಿಫಿಕೇಟ್ ಪಡೆದುಕೊಂಡಂತೆ ಇದೆ ಸರ್ಕಾರದ ನಡೆ. ಆಗಿರುವ ವರದಿ ಸರಿ ಇದೆಯೇ, ಅದರಲ್ಲಿ ನ್ಯಾಯವಿದೆಯೇ? ಎಂದು ಪರಿಶೀಲಿಸುವ ಪ್ರಕ್ರಿಯೆ ಇಲ್ಲಿ ಇಲ್ಲವಾಗಿದೆ. ಫೇಕ್‌ನ್ಯೂಸ್ ಎಂಬುದನ್ನು ನಿರ್ಧರಿಸುವ ಮಾನದಂಡವೇನು ಎಂಬುದನ್ನು ಸರ್ಕಾರ ತಿಳಿಸಿಲ್ಲ. ವಿಮರ್ಶೆ ಯಾವುದು? ಸುಳ್ಳು ಸುದ್ದಿ ಯಾವುದು? ಎಂಬುದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ತಮ್ಮ ವಿರುದ್ಧ ಸುದ್ದಿ ಮಾಡಿದರೆ, ಅದನ್ನು ತೆಗೆದುಹಾಕುವ ಅಧಿಕಾರವನ್ನು ಸರ್ಕಾರ ಪಡೆದುಕೊಳ್ಳುತ್ತದೆ” ಎಂದು ಅಭಿಪ್ರಾಯಪಟ್ಟರು.

“ಸುದ್ದಿ ಹರಡುವ ಮುನ್ನವೇ, ಅವುಗಳನ್ನು ತೆಗೆದು ಹಾಕುವ ಕೆಲಸಕ್ಕೆ ಸರ್ಕಾರ ಕೈ ಹಾಕಿದೆ. ನರೇಂದ್ರ ಮೋದಿಯವರು 2002ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಆದ ಗುಜರಾತ್ ಗಲಭೆಯ ಕುರಿತು ಬಿಬಿಸಿ ಮಾಡಿದ ಸಾಕ್ಷ್ಯಚಿತ್ರವನ್ನು ಆನ್‌ಲೈನ್‌ನಲ್ಲಿ ನಿರ್ಬಂಧಿಸಿದ್ದು ಇತ್ತೀಚಿನ ಉದಾಹರಣೆ. ’ಐಟಿ ನಿಯಮಗಳು, 2021’ರ ನಿಯಮ 16 ಈವರೆಗೆ ಸಮಸ್ಯಾತ್ಮಕವಾಗಿತ್ತು. ತುರ್ತು ಸಂದರ್ಭದಲ್ಲಿ ಮಾಹಿತಿಯನ್ನು ನಿರ್ಬಂಧಿಸುವ ಅಧಿಕಾರವನ್ನು ಈ ನಿಯಮ ಸರ್ಕಾರಕ್ಕೆ ನೀಡಿದೆ. ರಾಷ್ಟ್ರೀಯ ಮತ್ತು ಸಾರ್ವಜನಿಕ ಹಿತಾಸಕ್ತಿಯ ವಿರುದ್ಧ ಇದ್ದಾಗ ವಿಷಯವನ್ನು ಬ್ಲಾಕ್ ಮಾಡಲು ಅವಕಾಶವಿದೆ. ಆದರೆ ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಯನ್ನೇ ಆಧರಿಸಿ ಬಿಬಿಸಿ ಸಾಕ್ಷ್ಯಚಿತ್ರವನ್ನು ಮಾಡಿದೆ. ಬಿಬಿಸಿ ಹೇಳುತ್ತಿರುವ ವಿಚಾರಗಳಲ್ಲಿ ಯಾವುದೇ ಹೊಸತಿಲ್ಲ. ಆಡಳಿತಾತ್ಮಕವಾಗಿ ಸರ್ಕಾರ ಮುಂದುವರಿಯಬಹುದಿತ್ತು. ಆದರೆ ಡಾಕ್ಯುಮೆಂಟರಿಯನ್ನು ಸಾರ್ವಜನಿಕರು ನೋಡದಂತೆಯೇ ಬ್ಲಾಕ್ ಮಾಡಲಾಗಿದೆ. ಬಿಬಿಸಿ ಸುಳ್ಳು ಹೇಳಿದೆಯೋ ಸತ್ಯ ಹೇಳಿದೆಯೋ ಎಂದು ಜನರು ನಿರ್ಧರಿಸಲು ಈಗ ಅವಕಾಶವಿಲ್ಲವಾಗಿದೆ” ಎಂದು ಟೀಕಿಸಿದರು.

ಪೂಜಾ ಪ್ರಸನ್ನ

“ಚೀನಾದಂತೆಯೇ ಭಾರತವೂ ಹೆಜ್ಜೆ ಇಡುತ್ತಿದೆ. ಸರ್ಕಾರಕ್ಕೆ ಅಗತ್ಯವಿರುವುದನ್ನು ಮಾತ್ರ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರದರ್ಶಿಸಬೇಕು, ತಮ್ಮ ವಿರುದ್ಧ ಯಾರೂ ಮಾತನಾಡಬಾರದು ಎಂದು ಚೀನಾ ಸರ್ಕಾರ ಹೇಳುತ್ತಿದೆ. ಭಾರತವೂ ಚೀನಾದಂತೆ ಆಗಬಾರದು. ಐಟಿ ನಿಯಮಗಳಿಗೆ ತರಲು ಹೊರಟಿರುವ ತಿದ್ದುಪಡಿಯನ್ನು 11 ಡಿಜಿಟಲ್ ಸುದ್ದಿ ಮಾಧ್ಯಮಗಳ ಸಂಘವಾದ ಡಿಜಿಪಬ್ ನ್ಯೂಸ್ ಇಂಡಿಯಾ ಫೌಂಡೇಶನ್ ಖಂಡಿಸಿದೆ” ಎಂದು ತಿಳಿಸಿದರು.

“ಕಳೆದ ಆರೇಳು ವರ್ಷಗಳಿಂದ ಫ್ಯಾಕ್ಟ್‌ಚೆಕ್ ಪತ್ರಕರ್ತರಿಗೆ ಸರ್ಕಾರ ವಿವಿಧ ರೀತಿಯಲ್ಲಿ ತೊಂದರೆ ಕೊಡಲಾರಂಭಿಸಿದೆ. ’ಆಲ್ಟ್ ನ್ಯೂಸ್’ ಸಹ ಸಂಸ್ಥಾಪಕ ಮಹಮ್ಮದ್ ಜುಬೇರ್ ಅವರ ಮೇಲೆ ಕ್ಷುಲ್ಲಕ ಆರೋಪ ಹೊರಿಸಿ ಅವರನ್ನು ಬಂಧಿಸಲಾಗಿತ್ತು. ಸುಳ್ಳು ಸುದ್ದಿಗಳನ್ನು ಹರಡುತ್ತಿರುವವರ ಮೇಲೆ ಸರ್ಕಾರ ಯಾವುದೇ ಕ್ರಮ ಜರುಗಿಸುತ್ತಿಲ್ಲ. ಸರ್ಕಾರದ ಪರವಾಗಿ, ವಿರೋಧ ಪಕ್ಷಗಳು ಮತ್ತು ಹೋರಾಟಗಾರರ ವಿರುದ್ಧವಾಗಿ ಸುಳ್ಳಿನ ಪ್ರಹಾರ ನಡೆಯುತ್ತಿದೆ” ಎಂದರು.

“ಸಂವಿಧಾನ ವಿರೋಧಿಯಾದ ಈ ತಿದ್ದುಪಡಿಯನ್ನು ಜಾರಿಗೊಳಿಸಬಾರದು. ದುರದೃಷ್ಟವಶಾತ್ ಸರ್ಕಾರದ ಆಣತಿಯಲ್ಲಿರುವ ಕೆಲವು ಮಾಧ್ಯಮಗಳು ಈ ತಿದ್ದುಪಡಿಯನ್ನು ಸ್ವಾಗತಿಸುತ್ತಿವೆ” ಎಂದು ಆಘಾತ ವ್ಯಕ್ತಪಡಿಸಿದರು.

ಎಮರ್ಜೆನ್ಸಿ ಕಾಲದಲ್ಲಿ ಇಂತಹ ಕಾನೂನು ಜಾರಿಯಲ್ಲಿತ್ತು: ರಾಜಾರಾಮ್ ತಲ್ಲೂರು

ಹಿರಿಯ ಪತ್ರಕರ್ತರಾದ ರಾಜಾರಾಮ್ ತಲ್ಲೂರು ಪತ್ರಿಕೆಯೊಂದಿಗೆ ಮಾತನಾಡಿ, “ಎಮರ್ಜೆನ್ಸಿ ಕಾಲದಲ್ಲಿ ಈ ರೀತಿಯ ಸೆನ್ಸಾರ್ ಕಾನೂನು ಜಾರಿಯಲ್ಲಿತ್ತು” ಎಂದು ವಿವರಿಸಿದರು.

“ಫ್ಯಾಕ್ಟ್‌ಚೆಕ್ ಮೇಲ್ವಿಚಾರಣೆ ಮಾಡುವಷ್ಟು ಪಿಐಬಿ ಸಮರ್ಥವಾಗಿದೆಯೋ ಇಲ್ಲವೋ ತಿಳಿಯದು. ಹೀಗಾಗಿಯೇ ತಿದ್ದುಪಡಿ ಮಸೂದೆಯಲ್ಲಿ ಪಿಐಬಿಯವರು ಮತ್ತೊಂದು ಖಾಸಗಿ ಸಂಸ್ಥೆಯವರಿಗೆ ಈ ಜವಾಬ್ದಾರಿಯನ್ನು ವಹಿಸಲು ಅವಕಾಶ ನೀಡಲಾಗಿದೆ. ಜವಾಬ್ದಾರಿ ಹೊತ್ತವರು ಗುರುತಿಸಿದ್ದನ್ನು ತೆರವು ಮಾಡಲು ಪಿಐಬಿ ಕ್ರಮವಹಿಸಬಹುದು. ಇಲ್ಲಿ ಸುಳ್ಳನ್ನು ಗುರುತಿಸುತ್ತಿರುವವರು ಯಾರು ಎಂಬುದು ಮುಖ್ಯವಾಗುತ್ತದೆ. ಕಾನೂನು ರಚಿಸುವಾಗ ತಾರತಮ್ಯ ಇರಬಾರದು. ಸರ್ಕಾರ ಬದಲಾದರೂ ಕಾನೂನು ಉಳಿದಿರುತ್ತದೆ ಎಂಬುದನ್ನು ಮರೆಯಬಾರದು. ಇಂಥದ್ದನ್ನು ತೆಗೆಯಿರಿ, ಇಂಥದ್ದನ್ನು ಪ್ರಕಟಿಸಿ ಎಂದು ಎಮರ್ಜೆನ್ಸಿ ಸಮಯದಲ್ಲಿ ಸರ್ಕಾರ ಹೇಳುತ್ತಿತ್ತು. ವಿಶೇಷ ಸಂದರ್ಭದಲ್ಲಿ ಸೆನ್ಸಾರ್ ಇದ್ದದ್ದನ್ನು ಈಗ ನಿತ್ಯದ ಕಾನೂನಾಗಿ ಮಾರ್ಪಡಿಸಲು ಹೊರಟಿದ್ದಾರೆ” ಎಂದು ಆತಂಕ ವ್ಯಕ್ತಪಡಿಸಿದರು.

ರಾಜಾರಾಮ್ ತಲ್ಲೂರು

“ಕೋವಿಡ್ ಬಿಕ್ಕಟ್ಟು ತಲೆದೋರಿದ ಬಳಿಕ ಸರ್ಕಾರದ ವತಿಯಿಂದ ಫ್ಯಾಕ್ಟ್‌ಚೆಕ್ ಮಾಡುವ ವ್ಯವಸ್ಥೆ ಹುಟ್ಟಿಕೊಂಡಿತು. ಅದಕ್ಕಿಂತ ಮೊದಲು ಖಾಸಗಿಯವರು ಫ್ಯಾಕ್ಟ್‌ಚೆಕ್ ವೆಬ್‌ಸೈಟ್‌ಗಳನ್ನು ನಡೆಸುತ್ತಿದ್ದರು. ಅಮೆರಿಕದಲ್ಲಿ ಟ್ರಂಪ್ ಅಧಿಕಾರಕ್ಕೆ ಬಂದ ಬಳಿಕ ಫ್ಯಾಕ್ಟ್‌ಚೆಕ್ ಪತ್ರಿಕೋದ್ಯಮ ಕ್ಷಿಪ್ರಗತಿಯಲ್ಲಿ ಬೆಳವಣಿಗೆಯಾಯಿತು. ಅದಕ್ಕಿಂತ ಮೊದಲು ಮಾಧ್ಯಮಗಳಲ್ಲಿ ಬಂದಿದ್ದೇ ನಿಜವೆಂದು ಜನರು ನಂಬುತ್ತಿದ್ದರು” ಎಂದರು.

ಪಿಐಬಿ ಫ್ಯಾಕ್ಟ್‌ಚೆಕ್ ನಂಬಲರ್ಹವೇ?

ಸರ್ಕಾರ ಮಾಡುವ ಫ್ಯಾಕ್ಟ್‌ಚೆಕ್ ಪಕ್ಷಪಾತಿಯಾಗಿರುತ್ತವೆ ಎಂಬ ಆತಂಕವಂತೂ ಇದ್ದೇ ಇರುತ್ತದೆ. ಅದರ ಜೊತೆಗೆ ಧರ್ಮ ಮತ್ತು ಜಾತಿಗಳ ನಡುವೆ ದ್ವೇಷವನ್ನು ಬಿತ್ತುವುದಕ್ಕಾಗಿ ಕೆಲಸ ಮಾಡುತ್ತಿರುವ ಜಾಲತಾಣಗಳಿಗೆ ಸರ್ಕಾರ ಕಡಿವಾಣ ಹಾಕುತ್ತಿಲ್ಲ. ’ಒಪಿ ಇಂಡಿಯಾ’ ಎಂಬ ಸಂಸ್ಥೆ ಹರಡಿರುವ ಸುಳ್ಳು ಸುದ್ದಿಗಳಿಗೆ ಲೆಕ್ಕವೇ ಇಲ್ಲ. ಆದರೆ ಪ್ರಭುತ್ವವೇ ಇಂತಹ ಸಂಸ್ಥೆಗಳನ್ನು ಪೊರೆಯುತ್ತದೆ.

ಪಿಐಬಿ ಫ್ಯಾಕ್ಟ್‌ಚೆಕ್ಕಿಂಗ್ ಸಂಬಂಧ ಮೇ 2020ರಲ್ಲಿ ವರದಿ ಮಾಡಿದ್ದ ’ನ್ಯೂಸ್‌ಲಾಂಡ್ರಿ’ ಜಾಲತಾಣ, “ಪಿಐಬಿ ಫ್ಯಾಕ್ಟ್‌ಚೆಕ್ ವಾಸ್ತವವಾಗಿ ಸತ್ಯದ ಜೊತೆಗಿಲ್ಲ, ಬದಲಿಗೆ ಸರ್ಕಾರಕ್ಕೆ ಅಂಟಿಕೊಂಡಿದೆ” ಎಂದು ಕುಟುಕಿತ್ತು.

ಇದನ್ನೂ ಓದಿ: ಬಿಬಿಸಿ ಸಾಕ್ಷ್ಯಾಚಿತ್ರ: ಭಾಗ ಎರಡರಲ್ಲಿ ಪ್ರಧಾನಿ ಮೋದಿ ಕುರಿತು ಹೇಳಿರುವುದೇನು?

2020ರ ಮೇನಲ್ಲಿ ನಡೆದ ಘಟನೆ. ’ದಿ ವೈರ್’ ಜಾಲತಾಣವು ’ಧಮನ್-1’ ವೆಂಟಿಲೇಟರ್‌ಗೆ ಸಂಬಂಧಿಸಿದಂತೆ ಮಾಡಿದ ವರದಿಯನ್ನು ಪಿಐಬಿ ಸುಳ್ಳು ಎಂದಿತ್ತು. ರಾಜ್‌ಕೋಟ್ ಮೂಲದ ಧಮನ್-1 ವೆಂಟಿಲೇಟರ್‌ಗಳನ್ನು ಕೇಂದ್ರ ಸರ್ಕಾರಕ್ಕೆ ದಾನ ಮಾಡಿದ ’ಜ್ಯೋತಿ ಸಿಎನ್‌ಸಿ’ ಕಂಪನಿಗೂ ಬಿಜೆಪಿ ಉನ್ನತ ನಾಯಕರಿಗೂ ಇರುವ ಸಂಬಂಧವನ್ನು ಈ ವರದಿ ಪ್ರಶ್ನಿಸಿತ್ತು. ಈ ಕಂಪನಿಯ ಯಂತ್ರಗಳನ್ನು ಗುಜರಾತ್ ಮತ್ತು ಪುದುಚೇರಿ ಸರ್ಕಾರಗಳು ಕಳಪೆ ಗುಣಮಟ್ಟದ ಕಾರಣಕ್ಕೆ ದೂರವಿಟ್ಟಿದ್ದವು.

ಪ್ರಧಾನಿ ನರೇಂದ್ರ ಮೋದಿ, ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಮತ್ತು ಧಮನ್-1 ವೆಂಟಿಲೇಟರ್‌ಗಳನ್ನು ತಯಾರಿಸುವ ಕಂಪನಿಯಾದ ಜ್ಯೋತಿ ಸಿಎನ್‌ಸಿಯಲ್ಲಿ ಪಾಲನ್ನು ಹೊಂದಿರುವ ಪ್ರಭಾವಿ ವಜ್ರ ವ್ಯಾಪಾರಿ ರಮೇಶ್‌ಕುಮಾರ್ ವಿರಾನಿ ನಡುವೆ ಬಾಂಧವ್ಯವಿದೆ ಎಂದು ವರದಿ ಉಲ್ಲೇಖಿಸಿತ್ತು. ವರದಿ ಪ್ರಕಟವಾದ ಒಂದು ದಿನದ ಬಳಿಕ ಪಿಐಬಿ ಫ್ಯಾಕ್ಟ್‌ಚೆಕ್ಕಿಂಗ್, ’ದಿ ವೈರ್’ ವರದಿಯನ್ನು ಸುಳ್ಳೆಂದು (#ಫೇಕ್‌ನ್ಯೂಸ್ ಹ್ಯಾಶ್‌ಟ್ಯಾಗ್‌ನೊಂದಿಗೆ) ಘೋಷಿಸಿತ್ತು. ಪಿಐಬಿ ಎರಡು ಆರೋಪಗಳನ್ನು ಮಾಡಿತ್ತು. ಮೊದಲನೆಯದಾಗಿ, ಗುಜರಾತ್ ಸರ್ಕಾರವು ವೆಂಟಿಲೇಟರ್‌ಗಳನ್ನು ಖರೀದಿಸದೆ, ಜ್ಯೋತಿ ಸಿಎನ್‌ಸಿಯಿಂದ ದೇಣಿಗೆಯಾಗಿ ಸ್ವೀಕರಿಸಿದ ಕಾರಣ ವರದಿಯನ್ನು ತಪ್ಪಾಗಿ ಮಾಡಲಾಗಿದೆ. ಎರಡನೆಯದಾಗಿ, ಧಮನ್-1 ವೆಂಟಿಲೇಟರ್ ಘಟಕಗಳು ’ಅಗತ್ಯವಿರುವ ವೈದ್ಯಕೀಯ ಮಾನದಂಡಗಳನ್ನು ಆಧರಿಸಿವೆ’ ಎಂದಿತ್ತು ಪಿಐಬಿ.

ಆದರೆ ಈ ಎರಡೂ ಹೇಳಿಕೆಗಳೂ ಸುಳ್ಳು ಎಂದು ’ನ್ಯೂಸ್‌ಲಾಂಡ್ರಿ’ ವರದಿ ಹೇಳಿತು. ಮೊದಲನೆಯದಾಗಿ, “ವೆಂಟಿಲೇಟರ್‌ಗಳನ್ನು ಜ್ಯೋತಿ ಸಿಎನ್‌ಸಿಯಿಂದ ಅಹಮದಾಬಾದ್ ಸಿವಿಲ್ ಆಸ್ಪತ್ರೆಗೆ ಉಚಿತವಾಗಿ ಸರಬರಾಜು ಮಾಡಲಾಗಿದೆ” ಎಂದು ವರದಿಯು ಸ್ಪಷ್ಟವಾಗಿ ಉಲ್ಲೇಖಿಸಿತ್ತು. ಧಮನ್-1ರ ಗುಣಮಟ್ಟದ ವಿವಾದವು ಸ್ಫೋಟಗೊಂಡಾಗ, ಗುಜರಾತ್ ಸರ್ಕಾರವು ವೆಂಟಿಲೇಟರ್‌ಗಳನ್ನು ಸಮರ್ಥಿಸಿಕೊಂಡಿತ್ತು ಮತ್ತು “ಕೇಂದ್ರ ಸರ್ಕಾರದ ಎಚ್‌ಎಲ್‌ಎಲ್ ಲೈಫ್‌ಕೇರ್, ಧಮನ್-1ರ 5000 ವೆಂಟಿಲೇಟರ್‌ಗಳನ್ನು ಕೊಳ್ಳಲು ಬೇಡಿಕೆಯಿಟ್ಟಿತ್ತು” ಎಂದು ಬಹಿರಂಗಪಡಿಸಿತ್ತು.

ಎರಡನೆಯದಾಗಿ, “ಧಮನ್-1ರ ಘಟಕಗಳು ಸುರಕ್ಷತಾ ಮಾನದಂಡಗಳನ್ನು ಪೂರೈಸುತ್ತವೆ ಎಂಬ ಹೇಳಿಕೆಗಳಿಗೆ ವಿರುದ್ಧವಾಗಿ, ’ಅಹಮದಾಬಾದ್ ಮಿರರ್’ ವರದಿಯನ್ನು ಪ್ರಕಟಿಸಿತ್ತು. ವೈದ್ಯರು ಮತ್ತು ಅಧಿಕಾರಿಗಳ ಹೇಳಿಕೆಗಳನ್ನು ಅದು ಉಲ್ಲೇಖಿಸಿತ್ತು. “ಈ ವೆಂಟಿಲೇಟರ್‌ಗಳು ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದಿಂದ ಕಡ್ಡಾಯ ಪರವಾನಗಿಯನ್ನು ಪಡೆದಿಲ್ಲ ಮತ್ತು ಅದರ ಪ್ರಯೋಗವನ್ನು ಒಬ್ಬ ರೋಗಿಯ ಮೇಲೆ ಮಾತ್ರ ನಡೆಸಲಾಗಿದೆ” ಎಂದು ದಿನಪತ್ರಿಕೆ ಬೆಳಕು ಚೆಲ್ಲಿತ್ತು. ಇದಲ್ಲದೆ, ಉಪಕರಣಗಳನ್ನು ಮೇಲ್ವಿಚಾರಣೆ ಮಾಡಲು ಅಗತ್ಯವಿರುವ ನೈತಿಕ ಸಮಿತಿಯನ್ನು ’ವೈದ್ಯಕೀಯ ಸಾಧನಗಳ ನಿಯಮಗಳು, 2017’ರ ಪ್ರಕಾರ ರಚಿಸಲಾಗಿಲ್ಲ ಎಂದು ಆರೋಪಿಸಿತ್ತು. ಹೀಗಿರುವಾಗ ಪಿಐಬಿ ಫ್ಯಾಕ್ಟ್‌ಚೆಕ್‌ಅನ್ನು ನಂಬುವುದಾದರೂ ಹೇಗೆ?

ಆಲ್ಟ್‌ನ್ಯೂಸ್‌ನ ಸಂಸ್ಥಾಪಕ ಪ್ರತೀಕ್ ಸಿನ್ಹಾ, “ಪಿಐಬಿ ಫ್ಯಾಕ್ಟ್‌ಚೆಕ್ ಘಟಕವು ಏನನ್ನು ಪರಿಶೀಲಿಸುತ್ತದೆ ಎಂಬುದು ಸಮಸ್ಯಾತ್ಮಕವಾಗಿದೆ. ಪಿಐಬಿ ಮಾಡುವ ಫ್ಯಾಕ್ಟ್‌ಚೆಕ್‌ಗಳನ್ನು ನೀವು ಗಮನಿಸಿದರೆ, ಕೆಲವು ವಿನಾಯಿತಿಗಳನ್ನು ಹೊರತುಪಡಿಸಿ ಸರ್ಕಾರದ ಇಮೇಜ್ ಉಳಿಸುವುದೇ ಅದರ ಗುರಿಯಾಗಿರುವುದು ಸ್ಪಷ್ಟವಾಗುತ್ತದೆ. ರಾಜಕೀಯ ಸ್ವಭಾವದ ಮತ್ತು ಆಡಳಿತಾರೂಢ ಬಿಜೆಪಿಯನ್ನು ಟೀಕಿಸುವ ವಿಷಯಗಳನ್ನು ಆಯ್ದು ಅವರು ಫ್ಯಾಕ್ಟ್‌ಚೆಕ್ ಮಾಡುತ್ತಾರೆ” ಎಂದಿದ್ದರು.

ಪಿಐಬಿ ಫ್ಯಾಕ್ಟ್ ಚೆಕ್ ಮಾಡಿದ ಸಂಗತಿಗಳನ್ನು ಜಾಲತಾಣಗಳಿಂದ ತೆಗೆಯಬೇಕೆಂಬ ನಿಯಮ ಪ್ರಜಾಪ್ರಭುತ್ವ ವಿರೋಧಿಯಾದದ್ದು ಎಂಬ ಕೂಗು ಎಲ್ಲ ವಲಯಗಳಿಂದ ಏಳುತ್ತಿದೆ. ಇದು ಸರ್ಕಾರಕ್ಕೆ ಕೇಳಿಸುತ್ತದೆಯೇ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...