ಗದಗ ಭೌಗೋಳಿಕವಾಗಿ ಪುಟ್ಟ ಜಿಲ್ಲೆ; ಬಯಲು ಸೀಮೆಯಾದರೂ ಮಧ್ಯಮ ಹವಾಮಾನವುಳ್ಳ ಮತ್ತು ಸ್ವಲ್ಪ ಹಸಿರಾಗಿರುವ ಪ್ರದೇಶ. ನಿಸರ್ಗ ಸೌಂದರ್ಯದ ತಾಣಗಳಿರುವ ಜಿಲ್ಲೆಯ ಉತ್ತರದಲ್ಲಿ ಮಲಪ್ರಭೆ ಹರಿದರೆ ದಕ್ಷಿಣದ ಗಡಿಯಲ್ಲಿ ತುಂಗಭದ್ರಾ ನದಿಯ ಸೆಲೆಯಿದೆ. ಆದರೆ ಜಿಲ್ಲೆಯ ಮುಕ್ಕಾಲು ಪ್ರದೇಶಕ್ಕಿಂತ ಹೆಚ್ಚಿನೆಡೆ ಒಣ ಬೇಸಾಯ; ಕುಡಿಯುವ ನೀರಿಗೂ ತತ್ವಾರ! ಪ್ರಾಚೀನ ಕಾಲದಿಂದಲೂ ಗದಗ ಕಲೆ, ಸಂಸ್ಕೃತಿ, ಸಾಹಿತ್ಯ, ಕೋಮು ಸೌಹಾರ್ದ, ಶಿಕ್ಷಣ, ಅನ್ನ ದಾಸೋಹದ ಭವ್ಯ ಇತಿಹಾಸದ ಸೀಮೆ. 1997ರ ಅಗಸ್ಟ್‌ನಲ್ಲಿ ಜನ್ಮವೆತ್ತಿದ ಈ ಜಿಲ್ಲೆಯ ಕೇಂದ್ರ ಪ್ರದೇಶ ’ಗದಗ’ ಇನ್ನೂ ದೊಡ್ಡದೊಂದು ಹಳ್ಳಿಯಂತೆಯೇ ಇದೆ. ಜಿಲ್ಲೆ ರಚನೆಯಾದ ಈ ಎರಡೂವರೆ ದಶಕದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ಮತ್ತು ಮೆಡಿಕಲ್ ಕಾಲೇಜಿನಂಥ ಸರಕಾರಿ ಸ್ಥಾವರಗಳು ಕಾಣಿಸುವುದು ಬಿಟ್ಟರೆ ಮೂಲಭೂತ ಸೌಕರ್ಯಗಳಿಗೂ ಗದಗದ ಮಂದಿ ಪರದಾಡುತ್ತಿದ್ದಾರೆ.
ಗದಗ ತಾಲೂಕು ಅಥವಾ ವಿಧಾನಸಭಾ ಕ್ಷೇತ್ರದ ಸಾಮಾಜಿಕ-ರಾಜಕೀಯ-ಆರ್ಥಿಕ-ಶೈಕ್ಷಣಿಕ- ಹೀಗೆ ಅಷ್ಟೂ ರಂಗಗಳಲ್ಲಿ ಲಿಂಗಾಯತರದೇ ಏಕಸ್ವಾಮ್ಯ. ಅದರಲ್ಲೂ ಪಂಚಮಸಾಲಿಗಳ ಹಿಡಿತ ಜಾಸ್ತಿ. ರಾಜಕೀಯ ಇಚ್ಛಾಶಕ್ತಿಯಿಲ್ಲದ ಮುಂದಾಳುಗಳ ಹೊಣೆಗೇಡಿತನದಿಂದ ಹಿಂದುಳಿದಿರುವ ಗದಗದಲ್ಲಿ ವ್ಯಕ್ತಿ ಮತ್ತು ಜಾತಿ ಪ್ರತಿಷ್ಠೆಯ ರಾಜಕಾರಣದ ಗ್ರಾಫು ಮಾತ್ರ ಏರುಗತಿಯಲ್ಲೇ ಸಾಗಿದೆ. ಗದಗಿನ ರಾಜಕೀಯ ದುರಂತ ಎಂತಹುದೆಂದರೆ, ಕುಡಿಯುವ ನೀರೊದಗಿಸುವ ಆಶ್ವಾಸನೆ ಮುಂದಿಟ್ಟೇ ಸಕಲ ಪಕ್ಷಗಳು ಚುನಾವಣಾ ಲಡಾಯಿ ನಡೆಸುತ್ತಾರೆ; ಕ್ಷೇತ್ರವಾಸಿಗಳ ಅಸಹಾಯಕತೆಯನ್ನು ಬಂಡವಾಳ ಮಾಡಿಕೊಂಡು ಗೆದ್ದವರದು ಯಥಾಪ್ರಕಾರ ಸ್ವಹಿತಾಸಕ್ತಿಯ ’ಒಣ ರಾಜಕಾರಣ’ ಎಂದು ನೀರಿನ ರಾಜಕೀಯದಿಂದ ರೋಸತ್ತ ಮಂದಿ ಬೇಸರ ಬೆರೆತ ಆಕ್ರೋಶದಿಂದ ಹೇಳುತ್ತಾರೆ.
ಇತಿಹಾಸ-ಸಂಸ್ಕೃತಿ
ಗದಗ ಎಂದೊಡನೆ ಥಟ್ಟನೆ ನೆನಪಾಗುವುದು ’ಕರ್ನಾಟಕ ಭಾರತ ಕಥಾಮಂಜರಿ’ ಅಥವಾ ’ಗದುಗಿನ ಮಹಾಭಾರತ’. ಕವಿ ಕುಮಾರವ್ಯಾಸ ಎಂದೇ ಹೆಸರುವಾಸಿಯಾಗಿದ್ದ ಗದುಗಿನ ನಾರಾಣಪ್ಪ ತನ್ನ ಇಷ್ಟ ದೇವರಾದ ಗದುಗಿನ ವೀರನಾರಾಯಣ ದೇಗುಲದ ಕಂಬವೊಂದರ ಬುಡದಲ್ಲಿ ಕುಳಿತು ಈ ಮಹಾಕಾವ್ಯ ರಚಿಸಿದರೆನ್ನುವುದು ಚಾರಿತ್ರಿಕ ದಾಖಲೆ. ಗದಗ ಹೆಸರಿನ ವ್ಯುತ್ಪತ್ತಿ ಬಗ್ಗೆ ಪೌರಾಣಿಕ-ಐತಿಹಾಸಿಕ ತರ್ಕಗಳಿವೆ. ಪುರಾಣ ಕಾಲದಲ್ಲಿ ಇದು ’ಕೃತಪುರ’ ಆಗಿತ್ತಂತೆ; ಬ್ರಹ್ಮನ ಮಗನಾದ ಕೃತು ಮಹರ್ಷಿ ಹಿಂದೆ ಕಪೋತವನ ಅಥವಾ ಕಪುತಗಿರಿ ಎನಿಸಿದ್ದ ಇಂದಿನ ಕಪ್ಪತಗುಡ್ಡದ ಮೇಲೆ ಕುಳಿತು ತಪಸ್ಸು ಮಾಡಿದ್ದನಂತೆ. ಹಾಗಾಗಿ ಕೃತಪುರ ಎಂಬ ಹೆಸರು ಬಂತೆನ್ನಲಾಗುತ್ತಿದೆ. ಅದು ಕಾಲಕ್ರಮೇಣ ರೂಢಿಯಲ್ಲಿ ಕೃತುಕ, ಕೃತುಪುರ, ಗರಡಗು, ಗಲದುಗು, ಗದಗು ಮತ್ತು ಗದಗ ಎಂದು ಬದಲಾಯಿತು ಎನ್ನಲಾಗುತ್ತಿದೆ.

ಚಾಲುಕ್ಯರು, ಹೊಯ್ಸಳರು ಮತ್ತು ವಿಜಯನಗರ ಅರಸರ ಆಳ್ವಿಕೆಗೆ ಒಳಪಟ್ಟಿದ್ದ ಗದಗದ ತುಂಬೆಲ್ಲ ಗತ ವೈಭವ ಸಾರುವ ಕಲಾತ್ಮಕ ದೇಗುಲ, ಬಸದಿ, ಸ್ಮಾರಕಗಳಿವೆ. 6-8ನೇ ಶತಮಾನದ ನಡುವಿನ ಚಾಲುಕ್ಯರ ಆಡಳಿತದಲ್ಲಿ ಚತುರ ಶಿಲ್ಪಿ ಜಕಣಾಚಾರಿ ನಿರ್ಮಿಸಿದ್ದೆನ್ನಲಾದ ತ್ರಿಕೂಟೇಶ್ವರ ದೇವಾಲಯ ಅತ್ಯದ್ಭುತ ವಾಸ್ತು ಶಿಲ್ಪ ಸೌಂದರ್ಯವನ್ನು ಹೊಂದಿದೆ. ಗದಗದಲ್ಲಿರುವ ವೀರನಾರಾಯಣ ದೇವಸ್ಥಾನ ಚಾಲುಕ್ಯ, ಹೊಯ್ಸಳ ಮತ್ತು ವಿಜಯನಗರ ಸಾಮ್ರಾಜ್ಯ ಸಂದರ್ಭದ ಶಿಲ್ಪ ಕಲೆಯ ಮಿಶ್ರಣ; ಹೊಯ್ಸಳ ದೊರೆ ಬಿಟ್ಟಿದೇವ ಗುರು ರಾಮಾನುಜಾಚಾರ್ಯರ ಸಲಹೆ ಮೇರೆಗೆ ಈ ದೇವಾಲಯ ಕಟ್ಟಿಸಿದ್ದನೆನ್ನಲಾಗಿದೆ. ದೇವಾಲಯದ ಗರ್ಭಗುಡಿ ಮತ್ತು ಅಗ್ರ ಗೋಪುರ ಚಾಲುಕ್ಯ ವಾಸ್ತುಶಿಲ್ಪ ಮಾದರಿಯಾದರೆ, ಗರುಡಗಂಬ ಮತ್ತು ರಂಗ ಮಂಟಪ ಹೊಯ್ಸಳ ವಾಸ್ತುಶಿಲ್ಪದಲ್ಲಿದೆ. ಕುಮಾರವ್ಯಾಸ ಗದುಗಿನ ಮಹಾಭಾರತ ರಚಿಸಿದ್ದು ಇದೇ ದೇಗುಲದಲ್ಲಿ. ಗದಗ ನಗರದಲ್ಲಿ ಪಾರ್ಶ್ವನಾಥ ತೀರ್ಥಂಕರ ಮತ್ತು ಮಹಾವೀರ ಬಸದಿಗಳಿವೆ.
ಗದಗದಿಂದ ಸುಮಾರು 11 ಕಿ.ಮೀ.ದೂರದಲ್ಲಿರುವ ಲಕ್ಕುಂಡಿ 5,000 ವರ್ಷಗಳ ಹಿಂದೆ ಪ್ರಸಿದ್ಧ ನಗರ; ಮತ್ತು ವೈದಿಕ ತರಬೇತಿಯ ಕೇಂದ್ರವಾಗಿತ್ತು ಎಂದು ಇತಿಹಾಸ ಹೇಳುತ್ತದೆ. ಚಾಲುಕ್ಯ ಶೈಲಿಯ ನೂರಾ ಒಂದು ದೇವಾಲಯ ಇಲ್ಲಿದ್ದವೆನ್ನಲಾಗುತ್ತಿದ್ದು, ಈಗ ಕೆಲವಷ್ಟೇ ಕಾಣಸಿಗುತ್ತವೆ. ಕಲ್ಯಾಣಿ ಎಂದು ಕರೆಯಲ್ಪಡುವ 101 ಮೆಟ್ಟಿಲುಗಳ ಬಾವಿಯಿರುವ ಇಲ್ಲಿ ಚಾಲುಕ್ಯ, ಕಳಚೂರಿ ಮತ್ತು ಹೊಯ್ಸಳ ಕಾಲದ ಹಲವು ಶಾಸನಗಳು ದೊರೆತಿವೆ. ಪ್ರಮುಖ ಜೈನ ಕೇಂದ್ರವಾಗಿದ್ದ ಲಕ್ಕುಂಡಿಯ ಮಹಾವೀರ ಜಿನಾಲಯ ಅತ್ಯಂತ ಪುರಾತನವಾದುದು. ಆಕಷಕ ಕಲಾ ಶಿಲ್ಪ ಗ್ಯಾಲರಿ, ದಾನ ಚಿಂತಾಮಣಿ ಅತ್ತಿಮಬ್ಬೆ ಕಟ್ಟಿಸಿದ ಬ್ರಹ್ಮ ಜಿನಾಲಯ ಮತ್ತು ಶಿಲೆ ಹಾಗೂ ಮರದ ಸುಂದರ ಕುಸುರಿ ಕೆತ್ತನೆಯ ಕಾಶಿ ವಿಶ್ವನಾಥ ದೇವಾಲಯ ಲಕ್ಕುಂಡಿಯಲ್ಲಿದೆ.
ಬೆಳವಲದ ಜವಾರಿ ಕನ್ನಡ ಸಂಸ್ಕೃತಿಯ ಗದಗದಲ್ಲಿ ಲಂಬಾಣಿ, ಉರ್ದು, ಕೊಂಕಣಿ, ಮರಾಠಿ ಮತ್ತು ವಲಸಿಗ ಮಾರ್ವಾಡಿಗಳ ಗುಜರಾತಿ ಭಾಷೆಯೂ ಕೇಳಿಬರುತ್ತದೆ. ಸಂಗ್ಯಾ-ಬಾಳ್ಯ, ದೊಡ್ಡಾಟ, ಸಣ್ಣಾಟ, ಬಯಲಾಟ, ವೃತ್ತಿ ರಂಗಭೂಮಿ ನಾಟಕ ಕಂಪನಿಗಳು, ರಗ್ಗಲಗಿ ಮೇಳಗಳಂಥ ಸಾಂಸ್ಕೃತಿಕ ಪರಂಪರೆ ಕ್ಷೀಣಿಸಿದೆ. ಯಕ್ಷಗಾನದಂತೆ ಈ ಕಲಾ ಪ್ರಕಾರಗಳಿಗೆ ಶಾಸ್ತ್ರೀಯ ಆದ್ಯತೆ ಕೊಟ್ಟು ಪೋಷಿಸುವ ಕೆಲಸವಾಗಲಿಲ್ಲ ಎಂಬ ಮಾತು ಕೇಳಿಬರುತ್ತದೆ. ಬದನೆಕಾಯಿ ಭಜ್ಜಿ, ಮೆಣಸಿನಕಾಯಿ ಮಿರ್ಚಿ ಮತ್ತು ಮಂಡಕ್ಕಿ ಗಿರ್ಮಿಟ್ ರುಚಿಯ ಗದಗದಲ್ಲಿ ಕೋಲಾಟ, ಕರಡಿ ಮಜಲು, ಡೊಳ್ಳು ಕುಣಿತ, ಹೆಜ್ಜೆ ಮೇಳ, ಭಜನೆ, ಜಾತ್ರೆ, ಕಬ್ಬಡ್ಡಿಯಂಥ ಜನಪದ ಕಲೆ-ಕ್ರೀಡೆಗಳು ಪ್ರಸಿದ್ಧ. ಅಪಾರ ಜನ ಸೇರುವ ತೋಂಟದಾರ್ಯ ಜಾತ್ರೆ ಒಂದು ತಿಂಗಳು ಕಾಲ ನಡೆಯುತ್ತದೆ.
ಧರ್ಮ ಸಹಿಷ್ಣುತೆಗೆ ಗದಗ ಇಡೀ ದೇಶಕ್ಕೇ ಮಾದರಿಯಾಗಿದೆ. ಸ್ಥಳೀಯವಾಗಿ ಮೂರು ವಿಭಿನ್ನ ಧಾರ್ಮಿಕ ಸಂಪ್ರದಾಯದ ವೈಷ್ಣವರ ವೀರನಾರಾಯಣ ದೇವಸ್ಥಾನ, ಶೈವರ ತ್ರಿಕೂಟೇಶ್ವರ ದೇಗುಲ ಮತ್ತು ಇಸ್ಲಾಮಿನ ಜುಮ್ಮಾ ಮಸೀದಿ ಆಡಳಿತ ಮಂಡಳಿಯವರು ಸೇರಿ ಟ್ರಸ್ಟ್ ರಚಿಸಿಕೊಂಡು ಸಮಾಜಮುಖಿ ಕೆಲಸ ಮಾಡುತ್ತಿದ್ದಾರೆ; ಗದಗದ ಸುತ್ತ ಅನೇಕ ಶೈಕ್ಷಣಿಕ -ಸಾಹಿತ್ಯಿಕ ಚಟುವಟಿಕೆಗಳಲ್ಲಿ ತೊಡಗಿರುವ ತೋಂಟದಾರ್ಯ ಮಠವಂತೂ ಸರ್ವಧರ್ಮಗಳ ಸಮನ್ವಯ ಸಾಮರಸ್ಯ ಕೇಂದ್ರ; ಶಿವಾನಂದ ಮಠವೂ ಧಾರ್ಮಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರಕ್ಕೆ ಅಪಾರ ಕೊಡುಗೆ ಕೊಟ್ಟಿದೆ.
ಗಾನ ಗಂಧರ್ವರ ತವರು ಗದಗ; ಹಿಂದೂಸ್ಥಾನಿ ಸಂಗೀತದ ಪ್ರಮುಖ ಪ್ರಮುಖ ನೆಲೆ. ’ಶ್ರೀ ವೀರೇಶ್ವರ ಪುಣ್ಯಾಶ್ರಮ’ ಎಂದೇ ಖ್ಯಾತವಾಗಿದ್ದ ಅಂಧ ಯೋಗಿ-ಶ್ರೇಷ್ಠ ಹಿಂದೂಸ್ಥಾನಿ ಸಂಗೀತ ದಿಗ್ಗಜ ಪಂಡಿತ್ ಪಂಚಾಕ್ಷರಿ ಗವಾಯಿಗಳ ಆಶ್ರಮ ಸಂಗೀತ ಶಾಲೆಯೂ ಆಗಿತ್ತು. ಪಂಚಾಕ್ಷರಿ ಗವಾಯಿಗಳು ಸ್ವತಃ ತಾವು ಕಣ್ಣು ಕಾಣದವರಾದರೂ ಅನೇಕ ಅಂಧರ ಬಾಳಿಗೆ ಕಣ್ಣಾಗಿದ್ದರು. ಗವಾಯಿಗಳ ಆಶ್ರಮ ಸಹಸ್ರಾರು ಅಂಧ ಮಕ್ಕಳಿಗೆ ಮತ್ತು ನಿರ್ಗತಿಕರಿಗೆ ಅನ್ನ, ಅರಿವೆ, ಅರಿವು, ಆಶ್ರಯ ಒದಗಿಸಿ ಪೋಷಿಸಿದೆ. ಪಂಚಾಕ್ಷರಿ ಗವಾಯಿ ಮತ್ತು ಉಭಯ ಗಾಯನ ಶ್ರೇಷ್ಠ-ಆಸ್ಥಾನ ಸಂಗೀತ ವಿದ್ವಾನ್ ಡಾ.ಪುಟ್ಟರಾಜ ಗವಾಯಿಗಳ ಬಳಿ ನಾಡಿನ ಹಲವು ಹೆಸರಾಂತ ಹಿಂದೂಸ್ಥಾನಿ ಗಾಯಕರು ತರಬೇತಿ ಪಡೆದಿದ್ದಾರೆ.
ಕನ್ನಡ ಸಾಹಿತ್ಯದ ಹಲವು ಶ್ರೇಷ್ಠ-ಮೌಲಿಕ ಕೃತಿಗಳ ಕರ್ತೃ, ಕವಿಗಳ ನೆಲೆವೀಡು ಗದಗ. ಇದು ಐದನೇ ಶತಮಾನದ ’ಪ್ರಭುಲಿಂಗ ಲೀಲೆ’ಯ ಚಾಮರಸರ ಜನ್ಮ ಭೂಮಿ; ಗದುಗಿನ ಮಹಾಭಾರತ ರಚಿಸಿದ ಮಹಾ ಕವಿ ಕುಮಾರವ್ಯಾಸರ ಕರ್ಮಭೂಮಿ. ಆಧುನಿಕ ಕನ್ನಡದ ಪ್ರಮುಖ ಲೇಖಕ-ಸ್ವಾತಂತ್ರ್ಯ ಹೋರಾಟಗಾರ ಹುಯಿಲಗೋಳ ನಾರಾಯಣರಾವ್, ಕವಿ ಚೆನ್ನವೀರ ಕಣವಿ, ಸಾಹಿತಿ ಎಂ.ಎಸ್.ಸುಂಕಾಪುರ್, ಮುಕ್ತಾಯಕ್ಕ, ಸಿದ್ದಮಲ್ಲಾರಾಯ, ನಾಟಕಕಾರ ಗರುಡ ಸದಾಶಿವರಾಯ, ಸಂಗ್ಯಾ-ಬಾಳ್ಯದ ಪತ್ತಾರ ಮಾಸ್ತರ್ ಮತ್ತು ಖ್ಯಾತ ಕ್ರಿಕೆಟಿಗ ಸುನಿಲ್ ಜೋಶಿ ಗದಗದ ಮಣ್ಣಿನ ಪ್ರತಿಭಾನ್ವಿತರಲ್ಲಿ ಕೆಲವರು. ಬೆಟಗೇರಿಯಲ್ಲಿ ಬಾಸೆಲ್ ಮಿಷನ್ ಚರ್ಚ್, ಕ್ಯಾಥೋಲಿಕ್ ಚರ್ಚ್ ಮತ್ತು ಎಸ್‌ಪಿಜಿ ಚರ್ಚ್ ಇವೆ. ಗದಗದ ಪುರಾತನ ಮತ್ತು ಅತಿ ದೊಡ್ಡ ಭೀಷ್ಮ ಕೆರೆಯ ದಡದಲ್ಲಿ 108 ಅಡಿ ಎತ್ತರದ ಬಸವೇಶ್ವರ ಪ್ರತಿಮೆಯಿದೆ; ಬಿಂಕಾಡಕಟ್ಟಿ ಮೃಗಾಲಯದಲ್ಲಿ ವಿವಿಧ ಪ್ರಭೇದದ ಪ್ರಾಣಿಗಳಿವೆ. ಸಹಕಾರ ಚಳವಳಿಗೆ ಗದಗ ಹೆಸರುವಾಸಿ; ಏಷ್ಯಾ ಖಂಡದಲ್ಲೇ ಮೊದಲು (1905) ಸಹಕಾರ ಸಂಘ ಸ್ಥಾಪನೆಯಾಗಿದ್ದು ಗದಗದ ಕಣಗಿನಹಾಳದಲ್ಲಿ.
ಕೃಷಿ-ಕಸಬು-ಆರ್ಥಿಕತೆ
ಫಲವತ್ತಾದ ಕಪ್ಪು ಮಣ್ಣಿನ ಗದಗ ವ್ಯವಸಾಯ ಪ್ರಧಾನ ತಾಲೂಕು. ಕೃಷಿ ಕಸುಬು ಆಧಾರಿತ ಆರ್ಥಿಕತೆ; ಕೃಷಿ ಮಳೆ ಅವಲಂಬಿತ. ಮುಂಗಾರು ಕೈ ಕೊಟ್ಟರೆ ಅರ್ಧ ಬರ; ಒಣ ಬೇಸಾಯವೇ ತಾಲೂಕಿನ ಜೀವ-ಜೀವಾಳ. ಹಂಗಾಮಿಗೆ ಅನುಗುಣವಾಗಿ ಶೇಂಗಾ, ಕಡಲೆ, ಗೋಧಿ, ಜೋಳ, ಹೆಸರು ಕಾಳು ಮುಂತಾದ ಕಾಳು-ಕಡಿ ಮತ್ತು ಈರುಳ್ಳಿ ಬೆಳೆಲಾಗುತ್ತಿದೆ. ಒಂದಿಷ್ಟು ಕುಟುಂಬಗಳು ಹೂ, ತರಕಾರಿ ಮತ್ತು ಹಣ್ಣು-ಹಂಪಲು ಬೆಳೆದು ಬದುಕುಕಟ್ಟಿಕೊಂಡಿವೆ. ಒಂದೇ ಒಂದು ನೀರಾವರಿ ಯೋಜನೆ ತಾಲೂಕಿನಲ್ಲಿಲ್ಲ; ಕೆಲವು ರೈತರು ಸಾಲ-ಸೂಲ ಮಾಡಿ ಬೋರ್ ಕೊರೆದು ಕೃಷಿ ಮಾಡುತ್ತಿದ್ದಾರೆ. ಅಲ್ಲಲ್ಲಿ ಕೆರೆ ತುಂಬಿಸಲಾಗಿದೆ. ಕಳೆದೆರಡು ವರ್ಷಗಳಿಂದ ಮಳೆ ಸಾಕಷ್ಟಾಗಿರುವುದರಿಂದ ಅಂತರ ಜಲದ ಮಟ್ಟ ಏರಿಕೆಯಾಗಿದೆ. ಹಾಗಾಗಿ ರೈತರು ಕೊಂಚ ನಿಟ್ಟುಸಿರುಬಿಡುವಂತಾಗಿದೆ ಎಂಬ ಮಾತು ಕೇಳಿಬರುತ್ತಿದೆ.
ಗದಗ ಸ್ವತಂತ್ರ ಜಿಲ್ಲೆಯಾಗಿ ಇಪ್ಪತ್ತೈದು ವರ್ಷ ಕಳೆದರೂ ಎಚ್.ಕೆ.ಪಾಟೀಲ್, ಡಿ.ಆರ್.ಪಾಟೀಲ್ ಮತ್ತು ಗದಗನ್ನು ತೆಕ್ಕೆಗೆ ತೆಗೆದುಕೊಳ್ಳುವ ದೂ(ದು)ರಾಲೋಚನೆಯಿಂದ ಹಲವು ವರ್ಷ ಜಿಲ್ಲಾ ಉಸ್ತುವಾರಿ ಮಂತ್ರಿಗಿರಿ ಅಧಿಕಾರ ಚಲಾಯಿಸಿದ್ದ ಪಕ್ಕದ ಬಳ್ಳಾರಿಯ ಶ್ರೀರಾಮಲುರಂಥ ಘಟಾನುಘಟಿಗಳಿಂದಲೂ ದುಡಿವ ಕೈಗೆ ಕೆಲಸ ಕೊಡುವ ಯೋಜನೆಗಳ್ಯಾವುದೂ ತರಲಾಗಲಿಲ್ಲ; ಸಿಂಗಟಾಲೂರು (ಹುಲಿಗುಡ್ಡ) ಏತ ನೀರಾವರಿ ಯೋಜನೆಯನ್ನು ಗದಗಿಗೆ ವಿಸ್ತರಿಸಿ ರೈತರಿಗೆ ನೆರವಾಗುವ ಕಳಕಳಿ-ಬದ್ಧತೆಯ ರಾಜಕಾರಣವನ್ನು ಯಾರೂ ಮಾಡಲಿಲ್ಲ; ಕೈಗಾರಿಕೀಕರಣದ ಯೋಚನೆಯೂ ಮಾಡಲಿಲ್ಲ. ತುಂಗಭದ್ರೆಯ ನೀರು ಹರಿದರೆ ತಾಲೂಕಿನ ರೈತರಿಗೆ ಒಂಚೂರು ನೆಮ್ಮದಿ ಸಿಗುತಿತ್ತು. ಜಲಸಂಪನ್ಮೂಲ ಇಲಾಖೆ ಮಂತ್ರಿಯಾಗಿದ್ದಾಗ ಎಚ್.ಕೆ.ಪಾಟೀಲ್ ಮನಸ್ಸು ಮಾಡಿದ್ದರೆ ತುಂಗಭದ್ರೆಯ ನೀರನ್ನು ಗದಗಕ್ಕೆ ಹರಿಸುವುದೇನೂ ದೊಡ್ಡ ಮಾತಾಗಿರಲಿಲ್ಲ.
ಅದೊಂದು ಕಾಲವಿತ್ತು; ಗದಗದಲ್ಲಿ ಎಲ್ಲಿ ನಿಂತು ಒಂದು ಕಲ್ಲು ಬೀಸಿದರೂ ಅದು ಮುದ್ರಣಾಲಯ ಇಲ್ಲವೆ ಕೈಮಗ್ಗದ ಮನೆ ಮೇಲೆ ಬೀಳುತ್ತದೆ ಎನ್ನಲಾಗುತ್ತಿತ್ತು. ಕಳೆದೆರಡು ದಶಕದಿಂದ ಗದಗ ಮತ್ತು ಬೆಟಗೇರಿಯ ಪ್ರಿಂಟಿಂಗ್ ಪ್ರೆಸ್ ಮತ್ತು ಕೈಮಗ್ಗ ಉದ್ಯಮಗಳು ಒಂದರ ಹಿಂದೊಂದರಂತೆ ಬಾಗಿಲು ಎಳೆದುಕೊಂಡಿವೆ. ಮುದ್ರಣಾಲಗಳಿಗೆ ಆಧುನೀಕರಣಕ್ಕೆ ಹೊಂದಿಕೊಳ್ಳಲು ಸಾಧ್ಯವಾಗಲಿಲ್ಲ; ಕೈಮಗ್ಗದ ಸೀರೆ-ಬಟ್ಟೆಗಳಿಗೆ ರಾಷ್ಟ್ರೀಯ-ಅಂತಾರಾಷ್ಟ್ರೀಯ ಮಾರುಕಟ್ಟೆ ಕುದುರಿಸಿಕೊಡಲು ಆಳುವವರಿಗೆ ಆಗಲಿಲ್ಲ. 101 ಕೈಮಗ್ಗ ಯೋಜನೆ ಬಂದಿತ್ತಾದರೂ ವಿಸ್ತರಣೆ ಆಗಲಿಲ್ಲ; ನೇಕಾರರಿಗೆ ಯಾರೂ ನೆರವಾಗಲಿಲ್ಲ. ಕೈಮಗ್ಗದಿಂದ ಹೊಟ್ಟೆಯ ಹಿಟ್ಟು ಗಿಟ್ಟದಿದ್ದಾಗ ನೇಕಾರಿಕೆ ಕಸುಬು ತಂತಾನೆ ನಶಿಸಿಹೋಯಿತು; ಕೆಲವರು ಪವರ್ ಲೂಮ್ ಹಾಕಿಕೊಂಡು ಹೆಣಗಾಡುತ್ತಿದ್ದಾರೆ.

ದೊಡ್ಡ ಪ್ರಮಾಣದಲ್ಲಿದ್ದ ಟೆಕ್ಸ್‌ಟೈಲ್ ಮತ್ತು ಖಾದ್ಯ ತೈಲ ತೆಗೆಯುವ ಮಿಲ್‌ಗಳು ಮುಚ್ಚಿಹೋಗಿವೆ. ಹುಲಕೋಟಿ ಭಾಗದಲ್ಲಿದ್ದ ಹತ್ತಿ ಗಿರಣಿಗಳು ಮತ್ತು ಗದಗ ಕಡೆಯಲ್ಲಿದ್ದ ಶೇಂಗಾ ಮುಂತಾದ ಕಾಳುಗಳಿಂದ ಎಣ್ಣೆ ತೆಗೆಯುವ ಮಿಲ್‌ಗಳು ಬಂದ್ ಆಗಿದ್ದರಿಂದ ಸಾವಿರಾರು ಮಂದಿ ಉದ್ಯೋಗ ಕಳೆದುಕೊಂಡರು. ನಿರುದ್ಯೋಗಿಗಳಿಗೆ ಸ್ಥಳೀಯವಾಗಿ ಬದುಕಲು ಅನುಕೂಲ ಕಲ್ಪಿಸುವ ಬದಲಿ ಕೈಗಾರಿಕೆಗಳು ಬರಲಿಲ್ಲ. ಅಗ್ರೋ ಬೇಸ್ಡ್ (ಕೃಷಿ ಆಧಾರಿತ) ಕೈಗಾರಿಕೆಗಳು ಮತ್ತು ಒಂದು ನಟ್-ಬೋಲ್ಟ್ ಫ್ಯಾಕ್ಟರಿ ಇದೆ. ಇಲ್ಲಿರುವುದು ನೂರರ ಲೆಕ್ಕದ ಸೀಮಿತ ಉದ್ಯೋಗಾವಕಾಶವಷ್ಟೆ.
ದುಡಿದು ತಿನ್ನುವ ಅವಕಾಶವಿಲ್ಲದೆ ಬಂಜಾರ ಮುಂತಾದ ತಳ ಸಮುದಾಯದ ಮಂದಿ ತಂಡೋಪತಂಡವಾಗಿ ದಕ್ಷಿಣ ಕನ್ನಡ, ಉಡುಪಿ, ಗೋವಾ ಮುಂತಾದೆಡೆ ಗುಳೆ ಹೋಗುತ್ತಿದ್ದಾರೆ. ಕ್ಷೇತ್ರದಲ್ಲಿ ಅಸಹನೀಯ ಬದುಕು ಮಡುಗಟ್ಟಿದೆ; ಜನಜೀವನದ ಮಟ್ಟ ಸುಧಾರಿಸುವ ದೂರದರ್ಶಿತ್ವದ ನಾಯಕತ್ವ ಇಲ್ಲದಾಗಿದೆ. ಶಾಸಕ ಎಚ್.ಕೆ.ಪಾಟೀಲ್‌ಗೆ ರಾಜ್ಯ-ರಾಷ್ಟ್ರ ರಾಜಕಾರಣದ ತಲೆ ಬಿಸಿಯಾದರೆ, ಸಂಸದ ಶಿವಕುಮಾರ್ ಉದಾಸಿಗೆ ಕ್ಷೇತ್ರದ ಬಗ್ಗೆ ಉದಾಸೀನ ಎಂದು ಸಾಮಾಜಿಕ ಕಾರ್ಯಕರ್ತರೋರ್ವರು ’ನ್ಯಾಯಪಥ’ಕ್ಕೆ ಕ್ಷೇತ್ರದ ಗೋಳು ವಿವರಿಸಿದರು!
ಅಖಾಡದ ಸೂತ್ರ-ಸಮೀಕರಣ
ಗದಗ ವಿಧಾನಸಭಾ ಕ್ಷೇತ್ರ ಲಿಂಗಾಯತ ’ಪ್ರಜ್ಞೆ’ಯ ಅಖಾಡ. ಜಾತಿ ಪ್ರತಿಷ್ಠೆಯ ಜತೆಯಲ್ಲಿಯೇ ಪಕ್ಷ ಪ್ರಭಾವ ಮತ್ತು ವ್ಯಕ್ತಿ ವರ್ಚಸ್ಸು ಗುಪ್ತಗಾಮಿಯಾಗಿ ಕೆಲಸ ಮಾಡುತ್ತದೆ. 1960ರ ದಶಕದಾರಂಭದಿಂದ 1980ರ ದಶಕದವರೆಗೆ ಲಿಂಗಾಯತೇತರ ನಾಮದ ರೆಡ್ಡಿ ಸಮುದಾಯದ ಕೆ.ಎಚ್.ಪಾಟೀಲ್ ಗದಗ ರಾಜಕಾರಣದ ಕೇಂದ್ರ ಬಿಂದುವಾಗಿದ್ದರು. ’ಹುಲುಕೋಟಿ ಹುಲಿ’ ಎಂದೆ ಜನಪ್ರಿಯರಾಗಿದ್ದ ಪಾಟೀಲ್ ಸಹಕಾರಿ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದರು. ತಮ್ಮ ರಾಜಕೀಯ ಮಹತ್ವಾಕಾಂಕ್ಷೆಯ ಒಳ ಉದ್ದೇಶದ ಒಂದಿಷ್ಟು ವಿಧಾಯಕ ಕೆಲಸಗಳಿಂದ ಜಾತಿ ಮೀರಿ ಬೆಳೆದಿದ್ದರು. ಕೈಮಗ್ಗ ನೇಕಾರರಿಗೆ ನೆರವಾಗಿದ್ದರು; ಶಿಕ್ಷಣ ಸಂಸ್ಥೆ ಕಟ್ಟಿದ್ದರು. ಆರಂಭದಲ್ಲಿ ಜಾತಿ-ಪಕ್ಷ ಮೀರಿ ಬೆಳೆದಿದ್ದ ಪಾಟೀಲ್ 1970 ದಶಕದಲ್ಲಿ ಸ್ವಯಂಕೃತ ಅಪರಾಧದಿಂದ ಲಿಂಗಾಯತ ವಿರೋಧಿ ಎಂಬಂತೆ ಬಿಂಬಿತರಾದರು; ಧಾಡಸಿ ಪಾಟೀಲ್ ಲಿಂಗಾಯತರ ವಿರೋಧವನ್ನು ಕೆಲಮಟ್ಟಿಗೆ ಅರಗಿಸಿಕೊಂಡಿದ್ದರಾದರೂ ಆ ’ಹಣೆಪಟ್ಟಿ’ಯನ್ನು ಮಗ-ಮಾಜಿ ಮಂತ್ರಿ-ಹಾಲಿ ಶಾಸಕ-ಕಾಂಗ್ರೆಸ್‌ನ ಮುಂಚೂಣಿ ಮುಖಂಡ ಎಚ್.ಕೆ.ಪಾಟೀಲರಿಗೆ ಬಳುವಳಿಯಾಗಿ ಬಿಟ್ಟುಹೋದರೆಂದು ಅಂದಿನ ರಾಜಕಾರಣ ಬಲ್ಲವರು ಹೇಳುತ್ತಾರೆ.
ಧರ್ಮಕಾರಣದ ಸೋಂಕಿಲ್ಲದ ಗದಗ ಚುನಾವಣೆಯಲ್ಲಿ ಕ್ಷೇತ್ರದ ಸಮಸ್ಯೆ, ಪ್ರಗತಿ, ಅಭಿವೃದ್ಧಿ ಅಂಶಗಳು ಹಿನ್ನಲೆಗೆ ಸರಿದು ವ್ಯಕ್ತಿ-ಜಾತಿ ಮೇಲಾಟ ಮುನ್ನಲೆಗೆ ಬರುತ್ತದೆ; ಜನರು ಸಮಸ್ಯೆಗಳಿಗೆ ಹೊಂದಿಕೊಂಡಿರುವುದರಿಂದಲೋ ಏನೋ ಹುಚ್ಚು ಪ್ರತಿಷ್ಠೆ ಪ್ರಧಾನವಾಗುತ್ತಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ. 2007ರಲ್ಲಾದ ವಿಧಾನಸಭಾ ಕ್ಷೇತ್ರಗಳ ಭೌಗೋಳಿಕ ಪರಿಧಿ ಪುನರ್ ನಿಗದಿ ಪ್ರಕ್ರಿಯೆಯಲ್ಲಿ ಗದಗದ ಕೆಲವು ಪ್ರದೇಶಗಳನ್ನು ನರಗುಂದ ಮತ್ತು ರೋಣ ಕ್ಷೇತ್ರಗಳಿಗೆ ಸೇರಿಸಲಾಗಿದೆ. ನಗರದ 35 ವಾರ್ಡ್‌ಗಳು ಮತ್ತು ಒಂದಿಷ್ಟು ಗ್ರಾಮೀಣ ಭಾಗವಷ್ಟೆ ಗದಗ ಕ್ಷೇತ್ರದಲ್ಲಿ ಉಳಿದುಕೊಂಡಿದೆ. ಪ್ರಭಾವಿ ರಾಜಕಾರಣಿ ಎಚ್.ಕೆ.ಪಾಟೀಲ್ ತಮಗೆ ಅನುಕೂಲಕರವಾಗಿ ಕ್ಷೇತ್ರ ರಚನೆಯಾಗುವಂತೆ ನೋಡಿಕೊಂಡಿದ್ದಾರೆ ಎನ್ನಲಾಗುತ್ತಿದೆ; ಆದರೆ ಪಿಚ್ ಪಾಟೀಲರಿಗೆ ಅಷ್ಟು ಸುಲಭವಾಗೇನೂ ಇಲ್ಲವೆಂಬ ಅನಿಸಿಕೆಯೂ ಇದೆ. ಕ್ಷೇತ್ರದಲ್ಲಿರುವ ಒಟ್ಟು 2,17,833 ಮತದಾರರಲ್ಲಿ ಎಲ್ಲ ಲಿಂಗಾಯತ ಒಳಪಂಗಡದವರು ಸೇರಿ 80 ಸಾವಿರ (ಇದರಲ್ಲಿ ಪಂಚಮಸಾಲಿಗಳು ಸುಮಾರು 40 ಸಾವಿರ), ಎಸ್‌ಸಿ 35 ಸಾವಿರ, ಮುಸ್ಲಿಮ್ 32 ಸಾವಿರ, ಕುರುಬ 30 ಸಾವಿರ, ಎಸ್‌ಟಿ 15 ಸಾವಿರ ಮತ್ತು ಇತರರು 20 ಸಾವಿರ ಇರಬಹುದೆಂದು ಅಂದಾಜಿಸಲಾಗಿದೆ.
’ಹುಲಿ’ ಹೆಜ್ಜೆ!
ಪ್ರಥಮ ಚುನಾವಣೆಯಲ್ಲಿ (1957) ಭಾರತ ರಾಷ್ಟ್ರೀಯ ಕಾಂಗ್ರೆಸ್‌ನ ಹುರಿಯಾಳು ಕೆ.ಪಿ.ಗದಗ್ 16,922 ಮತ ಪಡೆದು ಭಾರತೀಯ ಜನ ಸಂಘದ ಆರ್.ಎ.ಜಾಲಿಹಾಳ್‌ರನ್ನು 13,927 ಮತದಂತರದಿಂದ ಮಣಿಸಿ ದಿಗ್ವಿಜಯ ಸಾಧಿಸಿದರು! 1962ರಲ್ಲಿ ಶಾಸಕ ಗದಗ್‌ಗೆ ಚುನಾವಣಾ ಕಣ ತೀರಾ ಕಠಿಣವಾಯಿತು. ಜನರ ನಡುವೆ ಓಡಾಡಿಕೊಂಡಿದ್ದ ನಾಮದ ರೆಡ್ಡಿ ಸಮುದಾಯದ ಕ್ರಿಯಾಶೀಲ ತರುಣ ಕೆ.ಎಚ್.ಪಾಟೀಲ್ ಪಕ್ಷೇತರ ಅಭ್ಯರ್ಥಿಯಾಗಿ ಅಖಾಡಕ್ಕೆ ಧುಮುಕಿದ್ದರು. ನಿಕಟ ಹಣಾಹಣಿಯಲ್ಲಿ ಪಾಟೀಲ್ (17,234) ಕೇವಲ 1,305 ಮತದಿಂದ ವಿರೋಚಿತ ಸೋಲು ಅನುಭವಿಸಿದರು. ಗದಗ್ ಎರಡನೆ ಬಾರಿ ಎಮ್ಮೆಲ್ಲೆಯಾದರು.
ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಶಿಗ್ಗಾವಿ-ಸವಣೂರು: ಸಾಮ್ರಾಜ್ಯ ಉಳಿಸಿಕೊಳ್ಳುವರಾ ಸಿಎಂ ಬೊಮ್ಮಾಯಿ?!
1967ರಲ್ಲಿ ಮತ್ತೆ ಪಕ್ಷೇತರರಾಗಿ ಸ್ಪರ್ಧಿಸಿದ ಪಾಟೀಲ್ (27,759) ಕಾಂಗ್ರೆಸ್ ಪಕ್ಷದ ಹೊಸ ಅಭ್ಯರ್ಥಿ ರುದ್ರಪ್ಪ ಗೌಡರನ್ನು (22,609) ಸೋಲಿಸಿದರು. ಪಾಟೀಲ್ ಪಕ್ಷ, ಜಾತಿ ಕೋಟೆ ಭೇದಿಸಿ ಅಸೆಂಬ್ಲಿ ಪ್ರವೇಶಿಸಿದರು. ಆ ನಂತರ ಶಾಸಕ ಪಾಟೀಲ್ ಆಳುವ ಕಾಂಗ್ರೆಸ್ ಸೇರಿದರೆ, ಅವರ ಎದುರಾಳಿ ರುದ್ರಪ್ಪಗೌಡರು ಸಂಸ್ಥಾ ಕಾಂಗ್ರೆಸ್‌ನಲ್ಲಿ ಉಳಿದರು. 1972ರ ಕದನ ಕಣದಲ್ಲಿ ಇಬ್ಬರೂ ಮತ್ತೆ ಮುಖಾಮುಖಿಯಾದರು. 29,638 ಮತ ಗಳಿಸಿದ ಪಾಟೀಲ್ 6,929 ಮತದಿಂದ ರುದ್ರಪ್ಪಗೌಡರನ್ನು ಮತ್ತೆ ಸೋಲಿಸಿದರು.
ಲಿಂಗಾಯತ ’ಪ್ರಜ್ಞೆ’
ಕ್ಷೇತ್ರದ ಬಹುಸಂಖ್ಯಾತ ಲಿಂಗಾಯತರ ಬೆಂಬಲದಿಂದ ಎರಡು ಸಲ ಶಾಸಕರಾಗಿದ್ದ ಪಾಟೀಲ್ 1978ರ ಚುನಾವಣೆ ಬರುವ ಸಂದರ್ಭದಲ್ಲಿ ಲಿಂಗಾಯತ ವಿರೋಧಿ ಎಂಬಂತೆ ಬಿಂಬಿತರಾಗಿದ್ದರು. ಲಿಂಗಾಯತ ಮಠಕ್ಕೆ ಪರ್ಯಾಯವಾಗಿ ರೆಡ್ಡಿ ಮಠ ಸ್ಥಾಪನೆಗೆ ಪಾಟೀಲ್ ಹವಣಿಸಿದರೆಂಬುದು ಲಿಂಗಾಯತರನ್ನು ಕೆಣಕಿತ್ತು. ಲಿಂಗಾಯತರಲ್ಲಿನ ಅತಿ ಸಣ್ಣ ಒಳ ಪಂಗಡ ಜಂಗಮ ವಂಶಸ್ಥ ಸಿ.ಎಸ್.ಮುತ್ತಿಪೆಂಡಿಮಠ್ ಲಿಂಗಾಯತ ಲೀಡರಾಗಿ ಅವತರಿಸಿದರು. ಅತ್ತ ರಾಜಧಾನಿ ರಾಜಕಾರಣದಲ್ಲೂ ಪಾಟೀಲ್ ಸಿಎಂ ದೇವರಾಜ ಅರಸುರನ್ನು ಎದುರು ಹಾಕಿಕೊಂಡಿದ್ದರು. ಅದೇ ಹೊತ್ತಿಗೆ ರಾಷ್ಟ್ರ ರಾಜಕಾರಣದಲ್ಲಾದ ಸ್ಥಿತ್ಯಂತರದಲ್ಲಿ ಇಂದಿರಾ ಗಾಂಧಿ ವಿರೋಧಿ ರೆಡ್ಡಿ ಕಾಂಗ್ರೆಸ್ ಬಣದ ರಾಜ್ಯಾಧ್ಯಕ್ಷರಾದರು.

1978ರ ಗದಗ ಕದನದಲ್ಲಿ ಕಾಂಗ್ರೆಸ್ ಓಟ್ ಬ್ಯಾಂಕ್ ಒಡೆದು ಜನತಾ ಪಕ್ಷಕ್ಕೆ ಲಾಭವಾಯಿತು. ಲಿಂಗಾಯತರ ದೊಡ್ಡ ವರ್ಗ ಸ್ವಜಾತಿ ಪ್ರತಿಷ್ಠೆಯ ಹುರಿಯಾಳು ಜನತಾ ಪಕ್ಷದ ಸಿ.ಎಸ್.ಮುತ್ತಿನಪೆಂಡಿಮಠ್ ಬೆನ್ನಿಗೆ ನಿಂತಿತ್ತು. ಜನತಾ ಪಕ್ಷದ ಮುತ್ತಿನಪೆಂಡಿಮಠ (28,094), ರೆಡ್ಡಿ ಕಾಂಗ್ರೆಸ್‌ನ ಕೆ.ಎಚ್.ಪಾಟೀಲ್ (25,649) ಮತ್ತು ಕಾಂಗೈನ ಜಮಾದಾರ್ ಹುಸೇನ್‌ಸಾಬ್ (9,205) ನಡುವೆ ತ್ರಿಕೋನ ಕಾಳಗವಾಯಿತು. ಮುತ್ತಿನಪೆಂಡಿಮಠ್ ಹತ್ತಿರದ ಪ್ರತಿಸ್ಪರ್ಧಿ ಕೆ.ಎಚ್.ಪಾಟೀಲರನ್ನು 2,445 ಮತದಿಂದ ಮಣಿಸಿ ಚುನಾಯಿತರಾದರು. ದೇವರಾಜ ಅರಸು ಇಂದಿರಾ ಗಾಂಧಿ ಜತೆ ಮುನಿಸಿಕೊಂಡು ಅರಸು ಕಾಂಗ್ರೆಸ್ ಕಟ್ಟಿದಾಗಲೆ ಕೆ.ಎಚ್.ಪಾಟೀಲ್ ಇಂದಿರಾ ಕಾಂಗ್ರೆಸ್ ಸೇರಲು ಯೋಚಿಸಿದ್ದರು; ಆದರೆ ಅದಕ್ಕೂ ಮೊದಲೇ ಶಾಸಕ ಮುತ್ತಿನಪೆಂಡಿಮಠ್ ಕಾಂಗ್ರೆಸ್‌ಗೆ ಹಾರಿದರು. ಕ್ಷೇತ್ರದ ಮೇಲೆ ಹಿಡಿತ ಸಾಧಿಸಿದ್ದ ಕೆ.ಎಚ್.ಪಾಟೀಲ್ ನಿರ್ಗಮನದ ನಂತರದ ’ಖಾಲಿ’ತನ ತುಂಬಲು ಕಾಂಗ್ರೆಸ್‌ಗೆ ಜಾತಿ ಬಲದ ಮುತ್ತಿನಪೆಂಡಿಮಠ್ ಅನಿವಾರ್ಯವಾದರು ಎಂದು ರಾಜಕೀಯ ಪಂಡಿತರು ಹೇಳುತ್ತಾರೆ.
ರಾಜ್ಯ ಮತ್ತು ಕ್ಷೇತ್ರ ರಾಜಕೀಯದಲ್ಲಿ ಹಿನ್ನಡೆ ಅನುಭವಿಸಿದ್ದ ಕೆ.ಎಚ್.ಪಾಟೀಲ್ 1983ರ ಚುನಾವಣಾ ರಣಾಂಗಣವನ್ನು ಪ್ರವೇಶಿಸಲಿಲ್ಲ. ಕಾಂಗ್ರೆಸ್ ಅಭ್ಯರ್ಥಿ ಮತ್ತಿನಪೆಂಡಿಮಠ್ (25,104) ಮತ್ತು ಜನತಾ ಪಕ್ಷದ ಎಚ್.ವೈ.ದೇಸಾಯಿ (20,697) ಮಧ್ಯೆ ನೇರ ಕಾಳಗ ಏರ್ಪಟ್ಟಿತು. ಮುತ್ತಿನಪೆಂಡಿಮಠ್ 4,407 ಮತದಿಂದ ಗೆದ್ದು ಚುನಾಯಿತರಾದರು. ಬಿಜೆಪಿ ಆಗ 8,039 ಮತ ತೆಗೆದಿದ್ದು ಮುತ್ತಿನಪೆಂಡಿಮಠರನ್ನು ಎರಡನೆ ಬಾರಿಗೆ ಶಾಸಕರನ್ನಾಗಿಸಿತೆಂದು ವಿಶ್ಲೇಷಿಸಲಾಗುತ್ತಿದೆ.
ಪಾಟೀಲ್ ಪುನರಾಗಮನ
1985ರಲ್ಲಿ ಪಾಟೀಲ್ ಏಳು ವರ್ಷಗಳ ಅಜ್ಞಾತವಾಸದ ಬಳಿಕ ಪ್ರತ್ಯಕ್ಷರಾದರು. 1985ರ ಚುನಾವಣೆ ಸಂದರ್ಭದಲ್ಲಿ ಪಾಟೀಲ್ ಮರಳಿ ಗೂಡುಸೇರಿದರು; ಅಷ್ಟೆ ಅಲ್ಲ, ಶಾಸಕ ಮುತ್ತಿನಪೆಂಡಿಮಠ್‌ಗೆ ಕಾಂಗ್ರೆಸ್ ಟಿಕೆಟ್ ತಪ್ಪಿಸಿ ತಾವೇ ಅಭ್ಯರ್ಥಿಯಾದರು. ಪಳಗಿದ ಹಳೆಯ ರಾಜಕಾರಣಿ ಪಾಟೀಲ್‌ಗೆ ಲಿಂಗಾಯತ ಸಮುದಾಯದ ಗಂಗಾಧರಪ್ಪ ರೊಟ್ಟಿ (33,943) ಜನತಾ ಪಕ್ಷದ ಕ್ಯಾಂಡಿಡೇಟಾಗಿ ಪೈಪೋಟಿ ಕೊಟ್ಟರು. 5,283 ಮತದಂತರದಿಂದ ಗೆದ್ದು ಚುನಾಯಿತರಾದ ಪಾಟೀಲ್, ಲಿಂಗಾಯತರಲ್ಲಿನ ಕಾಂಗ್ರೆಸ್ ನಿಷ್ಠರ ಮತಗಳಿಂದ ಬಚಾವಾದರೆಂದು ಪಿಚ್ ಹಕೀಕತ್ ಬಲ್ಲವರು ಹೇಳುತ್ತಾರೆ.
1989ರ ಇಲೆಕ್ಷನ್‌ನಲ್ಲಿ ಉತ್ತರ ಕರ್ನಾಟಕದ ಲಿಂಗಾಯತರ ಸರ್ವೋಚ್ಚ ನಾಯಕರಾಗಿದ್ದ ವೀರೇಂದ್ರ ಪಾಟೀಲ್ ಕಾಂಗ್ರೆಸ್‌ನ ಸಿಎಂ ಅಭ್ಯರ್ಥಿಯೆಂದು ಬಿಂಬಿತವಾಗಿದ್ದು ಕೆ.ಎಚ್.ಪಾಟೀಲರಿಗೆ ಗದಗ ಅಖಾಡದಲ್ಲಿ ಹೋರಾಟವನ್ನು ಸುಲಭವಾಗಿಸಿತು. ವೀರೇಂದ್ರ ಪಾಟೀಲರ ನಾಮಬಲವೂ ಸೇರಿ ಕೆ.ಎಚ್.ಪಾಟೀಲ್ 44,155 ಮತ ಪಡೆದರು; ಜನತಾ ದಳದ ಮುತ್ತಿನಪೆಂಡಿಮಠ್‌ಗೆ 28,463 ಮತ ಪಡೆಯಲಷ್ಟೆ ಸಾಧ್ಯವಾಗಿ ಸೋಲಬೇಕಾಯಿತು. ಸಿಎಂ ವೀರೇಂದ್ರ ಪಾಟೀಲ್ ಲಿಂಗಾಯತರ ಬೆಂಬಲವಿಲ್ಲದ ಕೆ.ಎಚ್.ಪಾಟೀಲರನ್ನು ತುಂಬ ದಿನ ಕಾಯಿಸಿ ಮಂತ್ರಿ ಮಾಡಿದರು. ಮಂತ್ರಿಯಾಗಿದ್ದಾಗಲೆ ಕೆ.ಎಚ್.ಪಾಟೀಲ್ ನಿಧನರಾದರು.
ಡಿ.ಆರ್.ಪಾಟೀಲ್ ಪ್ರವೇಶ
ಕೆ.ಎಚ್.ಪಾಟಿಲರ ಗರಡಿಯಲ್ಲಿ ಪಳಗಿದ್ದ ಅವರ ಸೋದರನ ಪುತ್ರ ಡಿ.ಆರ್.ಪಾಟೀಲ್ 1994ರಲ್ಲಿ ಕಾಂಗ್ರೆಸ್ ಟಿಕೆಟ್ ಪಡೆದರು. ಬಹುಸಂಖ್ಯಾತ ಲಿಂಗಾಯತರು ಡಿಆರ್‌ಪಿಯವರನ್ನು ಸಾರಾಸಗಟಾಗಿ ಬೆಂಬಲಿಸಿದರು. ಭರ್ಜರಿ 44,388 ಮತ ಪಡೆದ ಡಿಆರ್‌ಪಿ ಜನತಾ ದಳದ ದುರ್ಬಲ ಹುರಿಯಾಳು ಬಿ.ಎಫ್.ದಂಡಿನ್‌ರನ್ನು 24,417 ಮತದಂತರದಿಂದ ಮಣಿಸಿ ಮೊದಲ ಪ್ರಯತ್ನದಲ್ಲೇ ಅಸೆಂಬ್ಲಿ ಪ್ರವೇಶ ಪಡೆದರು. ಕೆ.ಎಚ್.ಪಾಟೀಲರ ಕುಟುಂಬದ ಸಾಂಪ್ರದಾಯಿಕ ರಾಜಕೀಯ ಎದುರಾಳಿ ಮುತ್ತಿನಪೆಂಡಿಮಠ್ 1999ರಲ್ಲಿ ಜೆಡಿಯು ಅಭ್ಯರ್ಥಿಯಾಗಿ ಶಾಸಕ ಡಿಆರ್‌ಪಿಯವರಿಗೆ ಸೆಡ್ಡುಹೊಡೆದರು. ಆದರೆ ಪಕ್ಷಾಂತರ-ನಿಷ್ಠಾಂತರದಿಂದ ಬಣ್ಣಗೆಟ್ಟಿದ್ದ ಮುತ್ತಿನಪೆಂಡಿಮಠ್‌ರಿಗೆ ಸ್ವಜಾತಿ ಬಂಧುಗಳೆ ಬೆನ್ನಿಗೆನಿಲ್ಲಲಿಲ್ಲ; ಹಾಗಾಗಿ ಕಾಂಗ್ರೆಸ್‌ನ ಡಿಆರ್‌ಪಿಗೆ 20,631 ಮತಗಳ ಅರ್ಹ ಗೆಲುವು ಪ್ರಾಪ್ತವಾಯಿತು ಎಂದು ತರ್ಕಿಸಲಾಗುತ್ತಿದೆ. 2004ರಲ್ಲಿ ಶಾಸಕ ಡಿಆರ್‌ಪಿ ಮೂರನೆ ಬಾರಿ ಎಮ್ಮೆಲ್ಲೆಯಾದರು. ಆ ಹೊತ್ತಲ್ಲಿ ಲಿಂಗಾಯತ ವಲಯದಲ್ಲಿ ಯಡಿಯೂರಪ್ಪನವರ ಹವಾ ಎದ್ದಿದ್ದರಿಂದ ಕ್ಷೇತ್ರದಲ್ಲಿ ಜನತಾ ದಾಯಾದಿ ದಳಗಳು ಅಸ್ತಿತ್ವ ಕಳೆದುಕೊಂಡು ಬಿಜೆಪಿ ಪ್ರಬಲವಾಯಿತು. ಬಿಜೆಪಿಯ ಎಸ್.ಬಿ.ಸಂಕಣ್ಣವರ್‌ಗೆ 35,376 ಓಟು ಬಂತಾದರೂ 15,204 ಮತದಂತರದಿಂದ ಕಾಂಗ್ರೆಸ್‌ನ ಡಿಆರ್‌ಪಿಗೆ ಮಣಿಯುವಂತಾಯಿತು.
ಎಚ್ಕೆಪಿ ಏಳು-ಬೀಳು
ಸುಮಾರು ಎರಡೂವರೆ ದಶಕಗಳ ಕಾಲ ಅಂಗಿ ಧೂಳಾಗದ ಸುಲಭದ ವಿಧಾನ ಪರಿಷತ್ ರಾಜಕಾರಣ ಮಾಡಿಕೊಂಡಿದ್ದ ಕೆ.ಎಚ್.ಪಾಟೀಲ ಪುತ್ರ ಎಚ್.ಕೆ.ಪಾಟೀಲ್ (ಎಚ್ಕೆಪಿ) 2008ರಲ್ಲಿ ನೇರ ಚುನಾವಣಾ ಕಾಳಗಕ್ಕೆ ಇಳಿಯಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತೆಂದು ಗದುಗಿನ ರಾಜಕೀಯ ವಿಶ್ಲೇಷಕರು ಹೇಳುತ್ತಾರೆ. ಬುದ್ಧಿಮತ್ತೆಯ ಕಸರತ್ತಿನಿಂದ ಕಾಂಗ್ರೆಸ್ ಆಯಕಟ್ಟಿನ ಮುಂದಾಳಾಗಿ ರೂಪುಗೊಂಡ ಎಚ್ಕೆಪಿ ವೀರಪ್ಪ ಮೊಯ್ಲಿ, ಎಸ್.ಎಂ.ಕೃಷ್ಣ, ಧರ್ಮಸಿಂಗ್ ಸರಕಾರದಲ್ಲಿ ಮಹತ್ವದ ಇಲಾಖೆಗಳ ಮಂತ್ರಿ ಮತ್ತು ಎರಡು ಬಾರಿ ಪರಿಷತ್‌ನ ವಿರೋಧ ಪಕ್ಷದ ನಾಯಕರಾಗಿದ್ದರು. ಸತತ ನಾಲ್ಕು ಸಲ ಪಶ್ಚಿಮ ಪದವೀಧರ ಕ್ಷೇತ್ರದಿಂದ ಚುನಾಯಿತರಾಗಿದ್ದ ಎಚ್ಕೆಪಿ 2008ರಲ್ಲಿ ಕೇಸರಿ ಕರಾಮತ್ತು ಎದುರಿಸಲಾಗದೆ ವಿಧಾನ ಪರಿಷತ್ ಚುನಾವಣೆಯಲ್ಲಿ ಅನಿರೀಕ್ಷಿತ ಸೋಲು ಕಾಣಬೇಕಾಯಿತು. ಅದೇ ವರ್ಷ ನಡೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ದಾಯಾದಿ ಸೋದರ-ಶಾಸಕ ಡಿ.ಆರ್.ಪಾಟೀಲ್‌ರಿಗೆ ’ಕಡ್ಡಾಯ ನಿವೃತ್ತಿ’ ಮಾಡಿಸಿ ತಾನೇ ಅಖಾಡಕ್ಕಿಳಿದರು.
ಮೊದಲ ಮುಂಬಾಗಿಲ ಚುನಾವಣೆಯಲ್ಲೇ ಎಚ್ಕೆಪಿ ಪರಾಭವಗೊಂಡರು! 1994ರಲ್ಲಿ ರೋಣದ ಜನತಾ ದಳದ ಶಾಸಕರಾಗಿದ್ದ ಶ್ರೀಶೈಲಪ್ಪ ಬಿದರೂರು ಬಿಜೆಪಿ ಕ್ಯಾಂಡಿಡೇಟಾಗಿದ್ದರು. ಬಹುಸಂಖ್ಯಾತ ಪಂಚಮಸಾಲಿ ಪಂಗಡದ ಬಿದರೂರು ರಣಕಣದಲ್ಲಿ ಎಚ್ಕೆಪಿ ಲಿಂಗಾಯತೇತರ ಎಂಬ ಅಸ್ತ್ರ ಯಶಸ್ವಿಯಾಗಿ ಪ್ರಯೋಗಿಸಿ ಗೆದ್ದರೆಂಬ ತರ್ಕ ಗದುಗಿನ ರಾಜಕೀಯ ಕಟ್ಟೆಯಲ್ಲಿದೆ. ಬಿದರೂರು 54,414 ಮತ ಪಡೆದರೆ, ಎಚ್ಕೆಪಿ 45,798 ಓಟು ಪಡೆಯುಷ್ಟರಲ್ಲೇ ಸುಸ್ತಾಗಿ ಸೋಲೊಪ್ಪಿಕೊಳ್ಳಬೇಕಾಯಿತು.

2013ರಲ್ಲಿ 70,475 ಮತ ಗಳಿಸಿದ ಎಚ್ಕೆಪಿ ಎಮ್ಮೆಲ್ಲೆಯಾದರು. ಆ ’ಹಣಾ’ಹಣಿಯಲ್ಲಿ ಎಚ್ಕೆಪಿಗೆ ಹತ್ತಿರದ ಪ್ರತಿಸ್ಪರ್ಧಿಯಾಗಿದ್ದು ಮಂತ್ರಿ ಶ್ರೀರಾಮಲುರಿಂದ ರಾಜಕೀಯ ದೀಕ್ಷೆ ಪಡೆದಿದ್ದ ಅನಿಲ್ ಮೆಣಸಿಕಾಯಿ. ರೆಡ್ಡಿ-ರಾಮಲುಗಳ ಬಿಎಸ್‌ಆರ್‌ಸಿ ಪಕ್ಷದ ಅಭ್ಯರ್ಥಿಯಾಗಿದ್ದ ಮೆಣಸಿನಕಾಯಿಯವರಿಗೆ 36,748 ಮತ ಬಂದಿತ್ತು. ಮೊದಲ ಸಲ ಅಸೆಂಬ್ಲಿ ಪ್ರವೇಶಿದ ಎಚ್ಕೆಪಿಗೆ ಸಿಎಂ ಸಿದ್ದು ತೂಕದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆಯ ಮಂತ್ರಿ ಮಾಡಿದರು. 2018ರ ಇಲೆಕ್ಷನ್ ರಣ ಕಣದಲ್ಲಿ ಕಾಂಗ್ರೆಸ್‌ನ ಎಚ್ಕೆಪಿ ಮತ್ತು ಬಿಜೆಪಿ ಉಮೇದುವಾರನಾಗಿದ್ದ ಲಿಂಗಾಯತ ಬಣಜಿಗ ಪಂಗಡದ ಅನಿಲ್ ಮೆಣಸಿನಕಾಯಿ ನಡುವೆ ನೇರ ನಿಕಟ ರೋಚಕ ಕಾಳಗವೇ ನಡೆದುಹೋಯಿತು! ಕೇವಲ 1,868 ಮತದಂತರದಿಂದ ಎಚ್ಕೆಪಿ (77,699) ಬಚಾವಾಗಿ ನಿಟ್ಟುಸಿರುಬಿಟ್ಟರು.
ಕ್ಷೇತ್ರದ ಕತೆ-ವ್ಯಥೆ!
ಗದಗ ವಿಧಾನಸಭಾ ಕ್ಷೇತ್ರದ ಯಾವ ದಿಕ್ಕಿನಲ್ಲಿ ನಾಲ್ಕು ಹೆಜ್ಜೆ ಹಾಕಿದರೂ ಬವಣೆ-ಬೇಗುದಿ, ಸಮಸ್ಯೆ-ಸಂಕಷ್ಟಗಳೆ ಕಣ್ಣಿಗೆ ರಾಚುತ್ತವೆ. ಕೈಗಾರಿಕೀಕರಣ-ಕೃಷಿ ಉನ್ನತೀಕರಣದಂಥ ಅಭಿವೃದ್ಧಿಯ ಮಾತು ಒತ್ತಟ್ಟಿಗಿರಲಿ, ಕನಿಷ್ಠ ಮೂಲಭೂತ ಸೌಕರ್ಯಗಳೂ ಕ್ಷೇತ್ರದ ನಗರ-ಹಳ್ಳಿ ಎರಡೂ ಕಡೆಯಲ್ಲಿಲ್ಲ. ಗದಗ-ಬೆಟಗೇರಿ ಸಂಯೋಜಿತ ನಗರಾಡಳಿತದ ಪಟ್ಟಣದ ಯಾವ ವಾರ್ಡಿನಲ್ಲೂ ರಸ್ತೆ ಸಮರ್ಪಕವಾಗಿಲ್ಲ; ಕುಡಿಯುವ ನೀರು 15-20 ದಿನಕ್ಕೊಮ್ಮೆ ಪೂರೈಕೆಯಾಗುತ್ತದೆ. ಒಳ ಚರಂಡಿ ವ್ಯವಸ್ಥೆ ಇಲ್ಲದೆ ನಗರ ಗಬ್ಬು ನಾರುತ್ತಿದೆ. ಬೀದಿ ದೀಪಕ್ಕೂ ಹೋರಾಡಬೇಕಾಗಿದೆ ಎಂದು ಜನರು ಹೇಳುತ್ತಾರೆ.
ಗದಗ ಕ್ಷೇತ್ರದ ಭೀಕರ ಸಮಸ್ಯೆಯೆಂದರೆ ಕುಡಿಯುವ ನೀರಿನ ಅಲಭ್ಯತೆ! ಗದಗಕ್ಕೆ 36 ಮಿಲಿಯನ್ ಲೀಟರ್ ನೀರು ಬೇಕು; ಆದರೆ ಸಿಗುತ್ತಿರುವುದು ಕೇವಲ 16-18 ಮಿಲಿಯನ್ ಲೀಟರ್ ಅಷ್ಟೆ.
ಹುಲಿಗುಡ್ಡ ಡ್ಯಾಮ್‌ನಿಂದ ತರುವ ನೀರಿಗೆ 24X7 ಯೋಜನೆ ಎಂದು ಹೆಸರು ಕೊಟ್ಟಿರುವುದೇ ತಮಾಷೆ; ಇದೊಂದು ಅಪೂರ್ಣ ಮತ್ತು ಸಂಪೂರ್ಣವಾಗಿ ವಿಫಲವಾಗಿರುವ ಪ್ಲಾನ್; ಪೈಪುಗಳು ಒಡೆದು ನೀರು ವ್ಯರ್ಥವಾಗುತ್ತಿದೆ ಎಂದು ಜನರು ನೋವಿನಲ್ಲೂ ನಗುತ್ತಾರೆ. ಗದಗದ ಎರಡು ಅನಿವಾರ್ಯ ಅವಶ್ಯಕತೆಗಳಾದ ಶಾಶ್ವತ ಕುಡಿಯುವ ನೀರು ಮತ್ತು ಶಾಶ್ವತ ನೀರಾವರಿ ಬಗ್ಗೆ ಅಧಿಕಾರಸ್ಥರು ಉದಾಸೀನದಿಂದಿದ್ದಾರೆ ಎಂಬ ಆಕ್ರೋಶದ ಮಾತು ಸಾಮಾನ್ಯವಾಗಿದೆ. ಮಲಪ್ರಭಾ ಮತ್ತು ತುಂಗಭದ್ರಾ ನದಿಯಿಂದ ನೀರು ತಂದು ಕೃಷಿಗೆ ಒದಗಿಸಬಹುದು. ಆದರೆ ಇದರ ಬಗ್ಗೆ ಅಧಿಕಾರಸ್ಥರಿಗೆ ಆಸಕ್ತಿಯಿಲ್ಲ. ಹಳ್ಳಿಗಳಲ್ಲೂ ನೀರಿನ ಗೋಳು. ರಸ್ತೆ, ಸಾರಿಗೆ, ನೈರ್ಮಲ್ಯ, ಆರೋಗ್ಯ, ಶಿಕ್ಷಣದಂತಹ ಅನಿವಾರ್ಯ ವ್ಯವಸ್ಥೆಗಳೇ ಅಧ್ವಾನಗೊಂಡಿವೆ. ಅಣ್ಣಿಗೇರಿ-ಬೆಂತೂರು-ಲಕ್ಷ್ಮೇಶ್ವರ ಮಾರ್ಗದ ರಸ್ತೆಯನ್ನು ಅಭಿವೃದ್ಧಿಪಡಿಸಿಲ್ಲ. ಹಳ್ಳಿಗಳ ಬಸ್ ವ್ಯವಸ್ಥೆ ಅಸಮರ್ಪಕವಾಗಿದೆ. ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಶಾಲೆಗಳಲ್ಲಿ ಕೊಠಡಿಗಳಿಲ್ಲ. ಆಶ್ರಯ ಯೋಜನೆಯ ಮನೆಗಳು ಅನರ್ಹರ ಪಾಲಾಗುತ್ತಿವೆ ಎಂಬ ಅಳಲು ಕ್ಷೇತ್ರದಲ್ಲಿದೆ.
ಗದಗದಲ್ಲಿ ಬದುಕು ಕಟ್ಟಿಕೊಳ್ಳಲಾಗದೆ ಅಸಹಾಯಕ ಮಂದಿ ಗುಳೆ ಹೋಗುತ್ತಿದ್ದರೂ ಅದನ್ನು ತಪ್ಪಿಸಲು ಯೋಜನೆಗಳನ್ನು ರೂಪಿಸಬೇಕೆಂಬ ಕನಿಷ್ಠ ಕರ್ತವ್ಯ ಪ್ರಜ್ಞೆಯೂ ಆಳುವವರಲ್ಲಿಲ್ಲ. ನೇಕಾರಿಕೆ ಕಾರಿಡಾರ್ ಸ್ಥಾಪನೆಯ ಭರವಸೆ ನೀಡಲಾಗಿತ್ತು. ಈಗದರ ಸೊಲ್ಲೇ ಇಲ್ಲದಾಗಿದೆ. ಶಾಸಕ ಪಾಟೀಲ್ ತವರು ಹಳ್ಳಿ ಹುಲಕೋಟಿ ಸುತ್ತಲ ಪ್ರದೇಶಬಿಟ್ಟರೆ ಬೇರೆಡೆ ಗಮನ ಹರಿಸುತ್ತಿಲ್ಲ; ಮುಖ್ಯಮಂತ್ರಿ ಪೀಠದ ಮೇಲೆ ಕಣ್ಣಿಟ್ಟಿರುವ ಪಾಟೀಲರು ಜನರ ಕೈಗೆ ಸಿಗುವುದೇ ಅಪರೂಪ. ಕ್ಷೇತ್ರದಲ್ಲಿ ಐದೂವರೆ ದಶಕದಿಂದ ರಾಜಕಾರಣ ಮಾಡುತ್ತಿರುವ ’ಪಾಟೀಲ್ ಪರಿವಾರ’ ಸಮಗ್ರ ಅಭಿವೃದ್ಧಿಯ ದೂರದರ್ಶಿತ್ವದ ನಾಯಕತ್ವ ಕೊಡಲು ವಿಫಲವಾಯಿತು. ಉದ್ಯೋಗ ಸೃಷ್ಟಿಸಬಲ್ಲ ಕೈಗಾರಿಕೆ, ನೀರಾವರಿ ಮತ್ತು ನೇಕಾರಿಕೆ ಹಬ್ ಬಂದರೆ ಗದಗದ ದೆಸೆಯೆ ಬದಲಾಗುತ್ತದೆ. ಇದೆಲ್ಲ ಇನ್ನು 2-3 ತಿಂಗಳಲ್ಲಿ ಆಯ್ಕೆಯಾಗುವ ಶಾಸಕನ ಬದ್ಧತೆ, ನಿಯತ್ತು ಮತ್ತು ಕಾಳಜಿಯ ಕಾರ್ಯಸೂಚಿ ಆಗಬೇಕಾಗಿದೆ ಎಂದು ಪ್ರಜ್ಞಾವಂತ ಮತದಾರರೊಬ್ಬರು ’ನ್ಯಾಯಪಥ’ಕ್ಕೆ ಹೇಳಿದರು.
ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಹಾನಗಲ್: ಗುಳೆ ಹೊರಡುವವರ ಸೀಮೆಯಲ್ಲಿ ವ್ಯಕ್ತಿಪ್ರತಿಷ್ಠೆಯ ’ಹಣಾ’ಹಣಿ!!
ಗದಗ-ಶಿರಹಟ್ಟಿ ಮತ್ತು ಮುಂಡರಗಿ ತಾಲೂಕುಗಳಲ್ಲಿ ಹಬ್ಬಿರುವ ಅಪಾರ-ಅಮೂಲ್ಯ ಖನಿಜ, ಗಿಡಮೂಲಿಕೆ ಹಾಗೂ ಪ್ರಾಣಿ-ಪಕ್ಷಿ-ಕೀಟ ಸಂಕುಲದ ಕಪ್ಪತಗುಡ್ಡ ಗಣಿ ಧಣಿಗಳ ಕೆಂಗಣ್ಣಿಗೆ ತುತ್ತಾಗಿದೆ. ಅನೇಕ ಹೋರಾಟಗಳ ಬಳಿಕ ಉತ್ತರ ಕನಾಟಕದ ಸಹ್ಯಾದ್ರಿ ಎನ್ನಲಾಗುತ್ತಿರುವ ಈ ಗುಡ್ಡವನ್ನು ಪರಿಸರ ಸೂಕ್ಷ್ಮ ವಲಯವೆಂದು ಗುರುತಿಸಲಾಗಿದೆ. ಆದರೂ ಬಲ್ಡೋಟ, ಜಿಂದಾಲ್‌ನಂಥ ಕೆಲವು ಪ್ರಭಾವಿ ಕಂಪನಿಗಳು ಕಪ್ಪತಗುಡ್ಡದಲ್ಲಿ ಗಣಿಗಾರಿಕೆ ಲೈಸೆನ್ಸ್‌ಗೆ ಪ್ರಯತ್ನಿಸುತ್ತಿವೆ ಎನ್ನಲಾಗಿದೆ. ಹಾಗೇನಾದರೂ ಆದರೆ ಆರೋಗ್ಯಕರ ಹವಾಮಾನದಲ್ಲಿ ರಾಜ್ಯದಲ್ಲೇ ಎರಡನೆ ಸ್ಥಾನದಲ್ಲಿರುವ ಗದಗ ಜಿಲ್ಲೆಗೆ ಪ್ರಾಕೃತಿಕ ಗಂಡಾಂತರ ಖಂಡಿತ ಎಂದು ಪರಿಸರವಾದಿಗಳು ಆತಂಕಪಡುತ್ತಾರೆ.
ಒಳೇಟಿನ ಕದನ ಕುತೂಹಲ!
ಗದಗ ರಣಾಂಗಣದಲ್ಲಿ ಯುದ್ಧೋನ್ಮಾದ ಶುರುವಾಗಿದೆ. ಮತದಾರರನ್ನು ತಾತ್ಕಾಲಿಕವಾಗಿ ಉದ್ದೀಪನಗೊಳಿಸಿ ಯಾಮಾರಿಸುವ ವರಸೆಗಳನ್ನು ಪ್ರಬಲ ಎದುರಾಳಿ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಪ್ರಯೋಗಿಸುತ್ತಿವೆ. ಸಾಂಸ್ಕೃತಿಕ, ಕ್ರೀಡೆ ಮತ್ತು ವೈಯಕ್ತಿಕ ಕಾರ್ಯಕ್ರಮಗಳಿಗೆ ಶಾಸಕಾಕಾಂಕ್ಷಿಗಳು ಧಾರಾಳವಾಗಿ ಕಾಸು ಹಂಚುತ್ತಿದ್ದಾರೆ. ಸಂಘ ಪರಿವಾರ ಹಿಂದುತ್ವದ ರಹಸ್ಯ ಅಜೆಂಡಾದ ಜತೆಗೆ ಮತದಾರ ಪಟ್ಟಿಯ ಪ್ರತಿ ಪೇಜ್‌ಗೊಬ್ಬ ಲೀಡರ್ ಮಾಡಿ ಪ್ರಚಾರ ನಡೆಸಿದೆ. ಕಾಂಗ್ರೆಸ್ಸಿಗರು ಮಾಜಿ ಶಾಸಕ ಡಿ.ಆರ್.ಪಾಟೀಲ್‌ರ ವರ್ಚಸ್ಸನ್ನು ವರ್ಕ್‌ಔಟ್ ಮಾಡುತ್ತಿದ್ದಾರೆ. ತೆರೆಮರೆಯಲ್ಲಿ ಜಾತಿ ಹಾಗೂ ವ್ಯಕ್ತಿ ಪ್ರತಿಷ್ಠೆಯ ಜಿದ್ದಾಜಿದ್ದಿ ಬಿರುಸಾಗುತ್ತಿದೆ. ದುರಂತವೆಂದರೆ, ಈ ಬಾರಿಯೂ ಕ್ಷೇತ್ರದ ಪ್ರಗತಿಯ ಪ್ರಣಾಳಿಕೆ ಮೇಲೆ ಇಲೆಕ್ಷನ್ ಫೈಟ್ ಆಗುವ ಸಾಧ್ಯತೆಯಿಲ್ಲ ಎಂದು ಪ್ರಜ್ಞಾವಂತರು ಹೇಳುತ್ತಾರೆ.
ಹಾಲಿ ಶಾಸಕ-ಮುಖ್ಯ ಮಂತ್ರಿ ಮಟೀರಿಯಲ್ ಎಂಬ ಇಮೇಜಿನ ಎಚ್.ಕೆ.ಪಾಟೀಲ್‌ಗೆ ಕಾಂಗ್ರೆಸ್‌ನಲ್ಲಿ ಟಿಕೆಟ್‌ಗೆ ಎದುರಾಳಿಗಳಿಲ್ಲ. ಕಳೆದ ಚುನಾವಣೆ ಹೊತ್ತಲ್ಲಿ ಬಿಜೆಪಿ ಟಿಕೆಟ್ ತಪ್ಪಿದ ಸಿಟ್ಟಿನಿಂದ ಕಾಂಗ್ರೆಸ್ ಸೇರಿದ್ದ ಶ್ರೀಶೈಲಪ್ಪ ಬಿದರೂರು ಟಿಕೆಟ್ ಬಯಸಿದ್ದರು. ಆದರೆ ಕೆಲ ತಿಂಗಳ ಹಿಂದೆ ಬಿದರೂರು ನಿಧನರಾದರು. ಹಾಗಾಗಿ ಎಚ್ಕೆಪಿ ಕಾಂಗ್ರೆಸ್ ಕ್ಯಾಂಡಿಡೇಟಾಗುವುದು ಪಕ್ಕಾ. ಅವರೀಗ ಕ್ಷೇತ್ರದಲ್ಲಿ ಓಡಾಟವನ್ನೂ ಜೋರು ಮಾಡಿದ್ದಾರೆ. ಸತತ ಎರಡು ಬಾರಿ ಶಾಸಕರಾದ ಎಚ್ಕೆಪಿಗೆ ಆಂಟಿ ಇನ್‌ಕಂಬೆನ್ಸ್ ಸಮಸ್ಯೆಯಂತೂ ಇದೆ. ಕ್ಷೇತ್ರ ಕಡೆಗಣಿಸಿ ಬೆಂಗಳೂರು-ದಿಲ್ಲಿ ರಾಜಕಾರಣದಲ್ಲಿ ಬ್ಯುಸಿ ಆಗಿರುತ್ತಾರೆ; ಐವತ್ತೈದು ವರ್ಷದ ರಾಜಕಾರಣದಲ್ಲಿ ಪಾಟೀಲ್ ಪರಿವಾರದ ಕುಡಿಗಳು ಹುಲಕೋಟಿ ಭಾಗಕ್ಕಷ್ಟೆ ’ಹುಲಿ’ಗಳಾದರೆ ಹೊರತು ಇಡೀ ಗದಗ ಕ್ಷೇತ್ರದಲ್ಲಿ ಹೆಜ್ಜೆ ಗುರುತು ಮೂಡಿಸಲಿಲ್ಲ ಎಂಬ ಅಸಮಾಧಾನ ಜನಮಾನಸದಲ್ಲಿದೆ.
ಗದಗ ಕ್ಷೇತ್ರದಲ್ಲಿ ಎಚ್ಕೆಪಿಗಿಂತ ಅವರ ದಾಯಾದಿ ಅಣ್ಣ-ಸತತ ಮೂರು ಬಾರಿ ಎಮ್ಮೆಲ್ಲೆಯಾಗಿದ್ದ ಡಿ.ಆರ್.ಪಾಟೀಲ್‌ರಿಗೆ ಹಿಡಿತ ಹೆಚ್ಚಿದೆ. ನಗರಸಭೆ-ಗ್ರಾಪಂ, ಎಪಿಎಂಸಿ, ಸೊಸೈಟಿಯಂಥ ಲೋಕಲ್ ಬಾಡಿ ಮೆಂಬರ್‌ಗಳು ಮತ್ತು ದಲ್ಲಾಳಿ ಮಂಡಿ ಸಾಹುಕಾರರ, ಗೌಡಿಕೆ ಮನೆತನದ ಯಜಮಾನರ ನಿಕಟ ನಂಟಿದೆ. ಎಚ್ಕೆಪಿ ರಾಜ್ಯ ಕಾಂಗ್ರೆಸ್‌ನಲ್ಲಿ ಪ್ರಭಾವಿ ನಾಯಕರಾದರೂ ಡಿಆರ್‍ಪಿ ಇಲ್ಲದೆ ಅವರಿಗೆ ಕ್ಷೇತ್ರದಲ್ಲಿ ಅಸ್ತಿತ್ವವಿಲ್ಲ ಎನ್ನಲಾಗುತ್ತಿದೆ. ಆಡಳಿತ ವಿರೋಧಿ ಅಲೆ ಎದುರಿಸಬೇಕಾಗಿರುವ ಎಚ್ಕೆಪಿಗೆ ಇದು ಮಾಡು ಇಲ್ಲವೆ ಮಡಿ ಹೋರಾಟ. ಕಳೆದ ಬಾರಿ ಕೇವಲ 1,868 ಮತದಿಂದ ದಡ ತಲುಪಿದ ಎಚ್ಕೆಪಿಗೆ ಹಿಂದೆಂದಿಗಿಂತಲು ಇಂದು ಲಿಂಗಾಯತರನ್ನು ಒಲಿಸಿಕೊಳ್ಳುವ ಅನಿವಾರ್ಯತೆ ಹೆಚ್ಚಿದೆ. ರಾಜ್ಯ ಕಾಂಗ್ರೆಸ್ ನಾಯಕರೊಂದಿಗೂ ಅಷ್ಟಕ್ಕಷ್ಟೆ ಸಂಬಂಧ ಹೊಂದಿರುವ ಎಚ್ಕೆಪಿಗೆ ಒಳೇಟುಗಳು ಬೀಳುವ ಸಾಧ್ಯತೆಯಿದೆ ಎಂದು ರಾಜಕೀಯ ವಿಶ್ಲೇಷಕರು ಅಂದಾಜಿಸುತ್ತಾರೆ.
ಬಿಜೆಪಿಯಲ್ಲೂ ಒಳಸುಳಿಯ ಆತಂಕ ಕಾಡುತ್ತಿದೆ. ಕಳೆದ ಬಾರಿ ತೀರಾ ಸಣ್ಣ ಅಂತರದಲ್ಲಿ ಸೋತಿದ್ದ ಅನಿಲ್ ಮೆಣಸಿನಕಾಯಿ, ಸಚಿವ ಶ್ರೀರಾಮುಲು ಟಿಕೆಟ್ ಕೊಟ್ಟೆ ಕೊಡಿಸುತ್ತಾರೆಂಬ ಭರವಸೆಯಲ್ಲಿ ’ಹಣಾ’ಹಣಿ ನಡೆಸಿದ್ದಾರೆ. ವಿಜಯ್‌ಕುಮಾರ ಗಡ್ಡಿ ಮತ್ತು ರಾಜು ಕುರಡಗಿ ಟಿಕೆಟ್ ಪೈಪೋಟಿಯಲ್ಲಿದ್ದಾರೆ. ಮೆಣಸಿನಕಾಯಿ ಬೆಂಗಳೂರಲ್ಲಿ ಉದ್ಯಮ ನಿರತರು. ಗೆದ್ದರೂ ಜನರಿಗೆ ಸಿಗಲಾರರು. ಹಾಗಾಗಿ ಸ್ಥಳೀಯ ನಿವಾಸಿಗಳಿಗೆ ಟಿಕೆಟ್ ಕೊಡಬೇಕೆಂಬ ವಾದ ಬಿಜೆಪಿಯಲ್ಲಿದೆ. ಬಣಜಿಗ ಸಮುದಾಯದ ಅನಿಲ್ ಮೆನಸಿನಕಾಯಿಯವರಿಗೆ ಬಹುಸಂಖ್ಯಾತ ಪಂಚಮಸಾಲಿಗಳು ಒಲಿಯುವುದು ಕಷ್ಟ; ಕ್ಷೇತ್ರದಲ್ಲಿನ ಪಂಚಮಸಾಲಿ ವರ್ಸಸ್ ಬಣಜಿಗ ಮೇಲಾಟದ ಲಾಭ ಕಾಂಗ್ರೆಸ್‌ಗೆ ಆಗಲಿದೆ; ಜಿಲ್ಲಾ ಮಂತ್ರಿ ಸಿ.ಸಿ.ಪಾಟೀಲ್‌ರಿಗೂ ತನ್ನ ಪ್ರಾಮುಖ್ಯತೆಗೆ ಕುಂದುಬರುವುದರಿಂದ ಮೆಣಸಿನಕಾಯಿ ಗೆಲ್ಲುವುದು ಬೇಕಾಗಿಲ್ಲ. ಈ ವೈಷಮ್ಯದ ವ್ಯಾಧಿಗೆ ಮುಲಾಮೆಂದರೆ ಶ್ರೀರಾಮುಲು. ಅವರು ಅಭ್ಯರ್ಥಿಯಾದರೆ ಲಿಂಗಾಯತ ಒಳ ಪಂಗಡಗಳೆಲ್ಲ ಒಟ್ಟಾಗಿ ಬೆಂಬಲಿಸುತ್ತಾರೆ ಎಂಬ ಮಾತುಗಳು ಬಿಜೆಪಿ ಬಿಡಾರದಿಂದ ಕೇಳಿಬರುತ್ತಿದೆ. ಕ್ಷೇತ್ರದಲ್ಲಿ ಪ್ರಭಾವ ಹೊಂದಿರುವ ಪಕ್ಕದ ಬಳ್ಳಾರಿಯ ಶ್ರೀರಾಮುಲು ಬಿಜೆಪಿಯ ರಾಜಿ ಹುರಿಯಾಳಾಗುವ ಸಾಧ್ಯಾಸಾಧ್ಯತೆಯ ಚರ್ಚೆಗಳು ದಿನಕ್ಕೊಂದು ಆಯಾಮದಲ್ಲಿ ನಡೆಯುತ್ತಿದೆ.
ಸದ್ಯದ ಸಮೀಕ್ಷೆಗಳು ಕಾಂಗ್ರೆಸ್‌ನ ಎಚ್ಕೆಪಿ ಮತ್ತು ಬಿಜೆಪಿಯ ಅನಿಲ್ ಮೆಣಸಿನಕಾಯಿಗೆ ಗೆಲ್ಲುವ ಅವಕಾಶ ಫಿಪ್ಟಿ-ಫಿಪ್ಟಿ. ಮೆಣಸಿನಕಾಯಿ ಬಿಟ್ಟು ಬೇರೆ ಸ್ಥಳೀಯರಿಗೆ ಟಿಕೆಟ್ ಸಿಕ್ಕರೆ ಎಚ್ಕೆಪಿ ನಿರಾಳ; ಶ್ರಿರಾಮುಲು ಅಖಾಡಕ್ಕಿಳಿದರೆ ಎಚ್ಕೆಪಿಗೆ ಗಂಡಾಂತರ ಎನ್ನುತ್ತಿವೆ.


