ಮೋದಿ ಪ್ರಧಾನಿಯಾಗಿ ಮೆರೆದಿದ್ದು ಹೇಗೆಂಬುಂವುದನ್ನು ಅರ್ಥ ಮಾಡಿಕೊಳ್ಳಲು ಅದರ ಹಿಂದಿನ ಆಡಳಿತ ನೋಡಬೇಕು. ಹತ್ತು ವರ್ಷ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅರ್ಥಶಾಸ್ತ್ರಜ್ಞನಾಗಿ ಹೆಚ್ಚು ವರ್ತಿಸಿದರೇ ಹೊರತು, ಪ್ರಧಾನಿಯ ಕುರ್ಚಿಯ ವರ್ಚಸ್ಸಿಗೆ ಆತುಕುಳಿತವರಲ್ಲ. ಜನಮೆಚ್ಚಿಸುವ ಮಾತನಾಡಲಿಲ್ಲ. ಸುಳ್ಳುಗಳನ್ನು ಹೇಳಲಿಲ್ಲ. ಪ್ರಪಂಚವೇ ಗೌರವಿಸುವ ಪ್ರಧಾನಿಯಾಗಿದ್ದರು. ಅವರು ಕೂಡ ಕೆಲವೊಂದು ವಿಷಯಗಳಿಗೆ ಪ್ರತಿಕ್ರಿಯಿಸದೆ ಮೌನವಾಗಿದ್ದರು; ಅವರೆದುರು ಬಾಯಿಗೆ ಬಂದಂತೆ ಮೋಹಕವಾಗಿ ಮಾತನಾಡುವ ಮೋದಿಯನ್ನು ಪ್ರಧಾನಿಯಾಗಿ ಮೆರೆಸಲಾಯ್ತು. ಏನೇನೋ ಕಾರಣಗಳಿಂದ ದೇಶ ಆರ್ಥಿಕವಾಗಿ ಹಳ್ಳ ಹಿಡಿಯುವಾಗಲೂ ಮನಮೋಹನ್ ಸಿಂಗ್ ಗಟ್ಟಿಯಾಗಿ ಮಾತನಾಡಲಿಲ್ಲ. ಸಂಘಟಿತ ಲೂಟಿ ಎಂದು ಗೊಣಗಿಕೊಂಡರು. ಆದರೆ ಮೋದಿಯವರಂತೂ, ಕೆಲವು ಭೀಕರ ಘಟನೆಗಳಿಗೂ ಪ್ರತಿಕ್ರಿಯಿಸಲಿಲ್ಲ; ಭಾರತವನ್ನೇ ಅಲ್ಲಾಡಿಸಿದ ಕರಾಳ ಕೃಷಿ ಕಾಯ್ದೆ ವಿರೋಧೀ ಚಳವಳಿಗೆ ಪ್ರತಿಕ್ರಿಯಿಸಲಿಲ್ಲ. 750 ಜನ ರೈತರು ಸತ್ತಾಗಲೂ ತುಟಿ ಬಿಚ್ಚಲಿಲ್ಲ. ಈಗಲೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯರಾಗಿರುವ ಕುಸ್ತಿಪಟುಗಳ ಮೇಲೆ ಬೆಚ್ಚುವಂತಹ ಲೈಂಗಿಕ ಹಗರಣ ನಡೆದಿದ್ದರೂ, ಪ್ರಧಾನಿ ಆರೋಪಿಯ ಜೊತೆಯಲ್ಲೇ ಮೌನವಾಗಿ ನಿಂತಿರುವುದಲ್ಲದೆ, ಬ್ರಿಜ್ ಭೂಷಣ್ ಶಕ್ತಿ ಪ್ರದರ್ಶನದ ಬಗ್ಗೆ ಕೂಡ ಮೌನವಾಗಿದ್ದಾರೆ. ಸೂಕ್ಷ್ಮವಾಗಿ ನೋಡಿದರೆ ಬಿಜೆಪಿಗಳು ಮಾಡುವ ಅಪರಾಧಗಳ ಆರೋಪದ ವಿಷಯದಲ್ಲಿ ಈವರೆಗೆ ಬಾಯಿ ಬಿಡದೆ ಮೋದಿ ಮೌನವಾಗಿದ್ದಾರಲ್ಲಾ, ಥೂತ್ತೇರಿ.
****
ಮಂಡ್ಯದ ಕರ್ನಾಟಕ ಸಂಘದ ಜಯಪ್ರಕಾಶ್ ಗೌಡರು ಹೊಸದಾಗಿ ಗೆದ್ದು ಬಂದ ಶಾಸಕ ಮಂತ್ರಿಗಳಿಗೆ ಅಭಿನಂದನಾ ಸಭೆ ಮಾಡಿದರು. ಪಿ.ಇ.ಎಸ್ ಕಾಲೇಜಿನ ನಿವೃತ್ತ ಪ್ರಿನ್ಸಿಪಾಲ್ ಶಂಕರೇಗೌಡರು ಮಾತನಾಡುತ್ತ ರಸ್ತೆಗಳು ನಮ್ಮ ಕಾಲ ಕೆಳಗೆ ಇರಬೇಕು, ಅದುಬಿಟ್ಟು ತಲೆಯಮೇಲೆ ಇರಬಾರದು, ಮಂಡ್ಯದಲ್ಲಿ ಹೀಗಾಗಿದೆ ಎಂದರು. ಇದಕ್ಕುತ್ತರವಾಗಿ ಮಳವಳ್ಳಿ ಶಾಸಕ ನರೇಂದ್ರ ಸ್ವಾಮಿ, ಶಂಕರೇಗೌಡರು ಅಭಿವೃದ್ಧಿ ಕೆಲಸಗಳನ್ನ ಟೀಕಿಸದೆ ಮೆಚ್ಚಿಕೊಳ್ಳಬೇಕೆಂದರು. ಈ ನರೇಂದ್ರ ಸ್ವಾಮಿಗೆ ಸ್ವಲ್ಪ ತಿಳಿವಳಿಕೆ ಹೇಳುವುದಾದರೆ, ಅಭಿವೃದ್ಧಿ ಎಂದರೆ ಏನು? ಅದು ಯಾರಿಗೆ ಬೇಕಾಗಿದೆ? ಅದರಿಂದ ಆಗುತ್ತಿರುವ ಅನಾಹುತಗಳೇನು? ಎಂಬುದೇ ಅವರಿಗೆ ತಿಳಿದಿಲ್ಲವಲ್ಲ, ಥೂತ್ತೇರಿ.
****
ಮಂಡ್ಯವನ್ನ ಸೀಳಿಕೊಂಡು ಹೋಗಿರುವ ಬೈಪಾಸ್ ರಸ್ತೆಯಲ್ಲಿ, ಬೆಂಗಳೂರು ಮೈಸೂರ ನಡುವೆ ಕೇವಲ ಒಂದೂವರೆ ಗಂಟೆ ಜರ್ನಿಯಾಗಿದೆ. ಆಯ್ತು ಬೇಗ ಮೈಸೂರಿಗೆ ಹೋಗಿ ನೀವು ಮಾಡುವುದೇನು, ಅದೇನು ವಾಣಿಜ್ಯ ನಗರಿಯೇ ಅಥವಾ ಕೈಗಾರಿಕೆಯ ಬೀಡೆ ಇಲ್ಲ ಬಾಂಬೆ ತರದ ನಗರವೇ? ಬೆಂಗಳೂರಿಂದ ವೇಗದಲ್ಲಿ ಮೈಸೂರು ತಲುಪುವ ತವಕದಲ್ಲಿ ಹೋದವರ ಪೈಕಿ ಈಗಾಗಲೇ ನೂರಾರು ಜನ ಅಂತರ್ಧಾನವಾಗಿದ್ದಾರೆ! ಬೆಂಗಳೂರು ಮೈಸೂರು ನಡುವೆಯಿದ್ದ ಹೋಟೆಲುಗಳು ಡಲ್ಲಾಗಿವೆ. ಕೆಲವೆಡೆ ಇರುವ ರಸ್ತೆಯನ್ನ ಅಗಲಮಾಡಿ ನಗರಗಳು ಸಿಕ್ಕಾಗ ಹತ್ತು ಇಪ್ಪತ್ತು ಕಿ.ಮೀ ವೇಗ ನಿಯಮ ಮಾಡಿದ್ದಾರೆ. ಈ ಐತಿಹಾಸಿಕ ರಸ್ತೆ ಎಲ್ಲ ಊರುಗಳಿಗೂ ಒಂದು ’ಶೋಭೆ’ ತಂದಿರುವುದು, ನಮ್ಮ ಅಭಿವೃದ್ಧಿ ಜನಜೀವನವನ್ನು ಅಸಹನೀಯಗೊಳಿಸುವ ಮತ್ತು ಪರಿಸರನಾಶದ ಹಾಗೂ ಸಂಸ್ಕೃತಿ ನಾಶದ ಪ್ರತೀಕವಾಗಿ ಎಂಬರ್ಥದಲ್ಲಿ ಮಾತನಾಡಿದ ಶಂಕರೇಗೌಡರ ಇಂಗಿತ ನರೇಂದ್ರಸ್ವಾಮಿಯವರಿಗೆ ಅರ್ಥವಾಗಬೇಕಾದರೆ, ಶಂಕರೇಗೌಡರಿಂದ ಈ ಮೊದಲೇ ಪಾಠ ಹೇಳಿಸಿಕೊಳ್ಳಬೇಕಿತ್ತು. ಅಭಿವೃದ್ಧಿ ಕೆಲಸಗಳ ಕಮಿಶನ್ ಪಡೆವ ರಾಜಕಾರಣಿಗಳೆಲ್ಲಾ ಹೀಗೇ ಮಾತನಾಡುವುದಂತಲ್ಲಾ, ಥೂತ್ತೇರಿ.
ಇದನ್ನೂ ಓದಿ: ನಾನಂತೂ ನಿವೃತ್ತಿಯಾಗಲ್ಲ ಕಂಡ್ರೀ!
****
ನಮ್ಮ ನಡುವಿನ ಜಗದ್ಗುರುವೊಬ್ಬರು ಸಿದ್ದರಾಮಯ್ಯನವರ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಬಿಟ್ಟಿ ಸಲಹೆ ಕೊಟ್ಟಿದ್ದಾರಲ್ಲಾ. ಬುದ್ದಿಯವರು ಕೊಟ್ಟ ಬೋಧನೆ ಪ್ರಕಾರ ಜನರಿಗೆ ಬಿಟ್ಟಿ ಸವಲತ್ತಿಗಿಂತ ದುಡಿದು ತಿನ್ನುವ ಕಾಯಕ ಜೀವನ ರೂಪಿಸಬೇಕಿತ್ತು. ಈಗಿನ ಕಾರ್ಯಕ್ರಮಗಳಿಂದ ಜನ ಸೋಮಾರಿಗಳಾಗಿ ಕಾಯಕ ಜೀವನದಿಂದ ವಿಮುಖರಾಗುತ್ತಾರೆ ಎಂದಿದ್ದಾರೆ. ಸುವರ್ಣಾಕ್ಷರದಲ್ಲಿ ಬರೆದು ರಸ್ತೆ ಪಕ್ಕದಲ್ಲಿ ಅಂಟಿಸಬಹುದಾದ ಈ ಉಪದೇಶಾಮೃತ ನೀಡಿದೆ ಬುದ್ದಿಯವರು ಈವರೆಗೂ ಬದುಕಿದ್ದುದ್ದು ಮಠದ ಬಿಟ್ಟಿ ಸವಲತ್ತಿನಿಂದ ಅಲ್ಲವೆ? ಬಿಟ್ಟಿ ಸವಲತ್ತನ್ನು ಅನುಭವಿಸಿ ಪೂಜ್ಯರು ಸೋಮಾರಿಗಳಾದುದನ್ನ ನಾವಂತೂ ನೋಡಿಲ್ಲ. ಸಮಯಕ್ಕೆ ಸರಿಯಾಗಿ ಪ್ರಸಾದ ಸ್ವೀಕರಿಸಿ ಬೋಧನೆಗೆ ತಯಾರಾಗುವ ಜಗದ್ಗುರುಗಳು ಜನರಿಗೆ ದುಡಿದು ತಿನ್ನುವ ಕೆಲಸಗಳನ್ನ ರೂಪಿಸಿ ಅದನ್ನ ಸರಕಾರದ ಗಮನಕ್ಕೆ ತರಬೇಕಿತ್ತು. ಅದು ಈವರೆಗೆ ಆಗಿಲ್ಲ. ಅವರೂ ಕೂಡ ಸರಕಾರದ ಅನುದಾನಕ್ಕೆ ಕಾಯುವಂತಾಗಿದ್ದಾರೆ. ಈಗ ಸಿದ್ದರಾಮಯ್ಯನವರ ಸರಕಾರ ಮಾಡಬೇಕಾದ ತುರ್ತಿನ ಕೆಲಸ ಯಾವುದೆಂದರೆ ಈ ಮಠಗಳು ಅನಾಯಾಸವಾಗಿ ಪಡೆಯುತ್ತಿರುವ ಅನುದಾನದ ಭಿಕ್ಷೆಯನ್ನು ನಿಲ್ಲಿಸುವುದು. ಜಗದ್ಗುರುಗಳೂ ರಾಜಕಾರಣಿಗಳಾಗಿ ಪರಿವರ್ತನೆಯಾಗಿರುವ ಈ ಸಮಯದಲ್ಲಿ ಅದು ಅದಷ್ಟು ಸುಲಭವಲ್ಲವಂತಲ್ಲಾ, ಥೂತ್ತೇರಿ.
****
ಇದೇ ಹನ್ನೊಂದನೇ ತಾರೀಕಿನಿಂದ ಸರಕಾರ ಮಹಿಳೆಯರಿಗೆ ಸರಕಾರಿ ಬಸ್ಸಿನಲ್ಲಿ ಎಲ್ಲೆಂದರಲ್ಲಿ ಹೋಗಿ ಬರುವ ಉಚಿತ ಸವಲತ್ತನ್ನು ಕರುಣಿಸಿದೆಯಲ್ಲಾ. ನಮ್ಮ ಪುರಾಣ ಸದೃಶ ಧರ್ಮದಲ್ಲಿ ಹೆಣ್ಣನ್ನು ಎಂದೂ ಸಹಜವಾಗಿ ಮತ್ತು ಸಮಾನವಾಗಿ ಕಂಡಿಲ್ಲ. ಹೀಗೆ ಕಾಣದವರ ಹೊಟ್ಟೆಗೆ ಸುಣ್ಣ ಹುಯ್ದಂತೆ ಮಾಡುವ ಈ ಕಾರ್ಯಕ್ರಮ ಸಹಜವಾಗಿಯೇ ವಿಕೃತ ಮನಸ್ಸಿನವರಿಗೆ ಶಾನೆ ಸುದ್ದಿಯಾಗಿದೆಯಂತಲ್ಲಾ. ಮಹಿಳೆಯರಾಗಿ ಮಹಿಳಾ ಸವಲತ್ತನ್ನು ಟೀಕಿಸುವ ಕಮಲ ಪ್ರಿಯ ಮಹಿಳೆಯರು ಸಿದ್ದು ಸರಕಾರದ ವಿರುದ್ಧ ಸ್ವಾಭಿಮಾನ ಮೆರೆದು ಟಿಕೆಟ್ ತೆಗೆದುಕೊಂಡರೆ ಎಷ್ಟು ಚೆಂದ ಅಲ್ಲವೆ. ಇಂಥವರ ಬಾಯಿಗಳಿಂದಲೇ ಬಂದ ಮಾತುಗಳನ್ನು ದಾಖಲಿಸುವುದಾದರೆ, ’ಇನ್ನು ಹೆಂಗಸರು ಎಲ್ಲೆಂದರಲ್ಲಿ ತಿರುಗುತ್ತಾರೆ, ಮನೆಯನ್ನು ಸೇರುವುದಿಲ್ಲ, ಗಂಡನ ಮಾತು ಕೇಳುವುದಿಲ್ಲ’ ಎನ್ನತೊಡಗಿದ್ದಾರಲ್ಲ. ಸರಿಯಾಗಿ ಕಣ್ಣುಬಿಟ್ಟು ನೋಡಿದರೆ ಸಾಮಾನ್ಯವಾಗಿ ಯಾವ ಹೆಂಗಸೂ ವಿನಾಕಾರಣ ಎಲ್ಲೂ ಸುತ್ತುವುದಿಲ್ಲ. ಈ ಸಮಾಜ ಆಧಾರಸ್ಥಂಭಗಳೆಂದುಕೊಂಡು ಕುಟುಂಬವನ್ನು ನಿರ್ವಹಿಸುವ ಮಹಿಳೆ, ಮುಫತ್ತಾಗೆ ಪಡೆದ ಸವಲತ್ತು ಯಾವುದೆಂದರೆ ಈವರೆಗೆ ಗಂಡಂದಿರನ್ನು ತಿರುಗಲುಬಿಟ್ಟು ಗಾಣದ ಎತ್ತಿನಂತೆ ಮನೆ ನಿರ್ವಹಿಸಿದ್ದಷ್ಟೇ! ಇದೆಲ್ಲಕ್ಕಿಂತ ಬಸ್ಸಿನಲ್ಲಿ ಹೋಗುವ, ಅದೂ ಮೂರು ಬಸ್ಸು ಬದಲಾಯಿಸಿ ಕೂಲಿ ಮಾಡಿ ಬದುಕುತ್ತಿದ್ದ ಬೆಂಗಳೂರಿನ ಮಹಿಳೆಯರ ಕೂಲಿ ಹಣ ಹಾಗೇ ಉಳಿಯುತ್ತದೆ. ಆ ಹಣದಲ್ಲಿ ಕುಟುಂಬವನ್ನು ಕಟ್ಟುತ್ತಾಳೆ. ಎಲ್ಲಿಯಾದರೂ ಹೋಗಿ ಬರಲು ಗಂಡನ ಬಳಿ ಬಸ್ ಚಾರ್ಜಿಗಾಗಿ ಬೇಡುತ್ತಿದ್ದ ಮಹಿಳೆ ಇನ್ನು ಮುಂದೆ ಈ ತನ್ನ ದೈನೇಸಿ ಬದುಕನ್ನು ಬದಲಿಸಿಕೊಳ್ಳುತ್ತಾಳೆ. ಆದರೆ, ಈಗ ನೀಡಿರುವ ಈ ಸವಲತ್ತು, ಪುರೋಹಿತಶಾಹಿ ಭಟ್ಟರುಗಳಿಗೆ ಸಂಭ್ರಮ ಮತ್ತು ಆಶ್ಚರ್ಯವನ್ನು ಹುಟ್ಟಿಸಿದೆಯಂತಲ್ಲಾ. ಮುಂದೆ ಪುಣ್ಯಕ್ಷೇತ್ರಗಳ ಹುಂಡಿ, ಮಂಗಳಾರತಿ ತಟ್ಟೆ ತುಂಬಲಿವೆಯಂತಲ್ಲಾ. ಹಾಗಾಗಿ ಅವರೆಲ್ಲಾ ಸಿದ್ದರಾಮಯ್ಯನವರ ಈ ಕಾರ್ಯಕ್ರಮವನ್ನು ಕೊಂಡಾಡತೊಡಗಿದ್ದಾರಂತಲ್ಲಾ, ಥೂತ್ತೇರಿ.


