Homeಕರ್ನಾಟಕನಮ್ಮ ಸಚಿವರಿವರು; ಲಕ್ಷ್ಮೀ ಹೆಬ್ಬಾಳ್ಕರ್: ಗುರುವಿಗೆ ತಿರುಮಂತ್ರಹಾಕಿ ರಾಜಕಾರಣದಲ್ಲಿ ಬೆಳೆದ "ಕುಂದಾನಗರದ ರಾಣಿ"

ನಮ್ಮ ಸಚಿವರಿವರು; ಲಕ್ಷ್ಮೀ ಹೆಬ್ಬಾಳ್ಕರ್: ಗುರುವಿಗೆ ತಿರುಮಂತ್ರಹಾಕಿ ರಾಜಕಾರಣದಲ್ಲಿ ಬೆಳೆದ “ಕುಂದಾನಗರದ ರಾಣಿ”

- Advertisement -
- Advertisement -

ಕರ್ನಾಟಕದ ವರ್ತಮಾನ ರಾಜಕಾರಣದಲ್ಲಿ ಹಲವು ಕಾರಣಕ್ಕೆ ಲಕ್ಷ್ಮೀ ಹೆಬ್ಬಾಳ್ಕರ್ ಚಿರಪರಿಚಿತ ಹೆಸರು. ಕಾಂಗ್ರೆಸ್ ವಲಯದ ಖಾಸಗಿ ಮಾತುಕತೆಗಳಲ್ಲಿ “ಬೆಳಗಾವಿ ಕುಂದಾ ರಾಣಿ” ಎಂದೇ ಗುರುತಿಸಲ್ಪಡುವ ಲಕ್ಷ್ಮೀ ಹೆಬ್ಬಾಳ್ಕರ್ ಈಚೆಗೆ ಅಸ್ತಿತ್ವಕ್ಕೆ ಬಂದಿರುವ ಸಿದ್ದರಾಮಯ್ಯನವರ ಕಾಂಗ್ರೆಸ್ ಸರಕಾರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಂತ್ರಿಯಾಗಿದ್ದಾರೆ. ಸಂಪುಟದಲ್ಲಿ ಏಕೈಕ ಮಹಿಳಾ ಸಚಿವರು ಕೂಡ. ಜನಾಕರ್ಷಕ ಶೈಲಿಯ ನಿರರ್ಗಳ ಮಾತುಗಾರಿಕೆಯ ಲಕ್ಷ್ಮೀ ಎರಡು ದಶಕದ ರಾಜಕೀಯ ಜೀವನದಲ್ಲಿ ಹಲವು ಏಳುಬೀಳುಗಳನ್ನು ಹಾದು ಮಹತ್ವದ ಮಂತ್ರಿಪಟ್ಟಕ್ಕೆ ಬಂದು ತಲುಪಿದ್ದಾರೆ. ಮಹತ್ವಾಕಾಂಕ್ಷೆಯ ಗಟ್ಟಿಗಿತ್ತಿ ಎನ್ನಲಾಗುತ್ತಿರುವ ಲಕ್ಷ್ಮೀ ಗಾಡ್‌ಫಾದರ್‌ಗಳನ್ನು ಮೀರುತ್ತಾ ಬೆಳೆದುಬಂದ ದಾರಿ ರೋಚಕವಾಗಿದೆ.

ಖಾನಾಪುರ ಕಡೆಯ ಪ್ರಭಾವಿ ಪಂಚಮಸಾಲಿ ಲಿಂಗಾಯತ ಸಮುದಾಯದ ಹಟ್ಟಿಹೊಳಿ ಕುಟುಂಬದಲ್ಲಿ 1975 ಮೇ 28ರಂದು ಹುಟ್ಟಿದ ಹುಡುಗಿ ಲಕ್ಷ್ಮೀ ಚಿಕ್ಕವಳಿರುವಾಗಿನಿಂದಲೂ ಒಂಥರಾ “ವಾಚಾಳಿ”; ಕಾಲೇಜಿಗೆ ಹೋಗುವಾಗಲೆ ನಾಯಕತ್ವದ ಧರತಿ ಲಕ್ಷ್ಮೀಯಲ್ಲಿತ್ತು; ಕಾಲೇಜಿನ ವೇದಿಕೆಯಲ್ಲಿ ನಿಂತು ಮಾತಾಡಿದರೆಂದರೆ ಕೇಳುಗರು ಒಂದು ಕ್ಷಣ ಮಂತ್ರಮುಗ್ಧರಾಗುತ್ತಿದ್ದರು ಎಂದು ಲಕ್ಷ್ಮೀ ವಾರಿಗೆಯವರು ಹಳೆ ದಿನಗಳನ್ನು ನೆನಪು ಮಾಡಿಕೊಳ್ಳುತ್ತಾರೆ. ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಮಾಡಿಕೊಂಡಿರುವ ಲಕ್ಷ್ಮೀ ಅವರು ಗಿರಿಜಾ ಮತ್ತು ಬಸವರಾಜ ಹಟ್ಟಿಹೊಳಿ ಕಿರಿಯ ಪುತ್ರಿ. ಲಕ್ಷ್ಮೀ ಬೆಳಗಾವಿ ಕಾಂಗ್ರೆಸ್‌ನ ರಾಜಕಾರಣ ಪ್ರವೇಶಿಸಿದ್ದು 2000 ದಶಕದ ಮೊದಲಾರ್ಧದ ಅಂತ್ಯದಲ್ಲಿ. ಅಕಾಡೆಮಿಕ್ ಜಾಣ್ಮೆ ಮತ್ತು ಮುಂದೆ ಕುಳಿತವರನ್ನು ನಂಬುವಂತೆ ಮಾತಾಡುವ ಲಕ್ಷ್ಮೀ ಹೆಬ್ಬಾಳ್ಕರ್ ಅಂದು ಜಿಲ್ಲಾ ಕಾಂಗ್ರೆಸ್‌ನ ಆಯಕಟ್ಟಿನ ಸ್ಥಾನದಲ್ಲಿದ್ದ ರಮೇಶ್ ಜಾರಕಿಹೊಳಿ ಕಣ್ಣಿಗೆ ಬಿದ್ದರು.

ರಮೇಶ್ ಜಾರಕಿಹೊಳಿ

ಹಣ ಮತ್ತು ಸ್ನಾಯುಬಲದ ರಾಜಕಾರಣದಲ್ಲಿ “ಪ್ರಸಿದ್ಧ”ರಾಗಿದ್ದ ರಮೇಶ್ ಜಾರಕಿಹೊಳಿ ಲಕ್ಷ್ಮೀ ಹೆಬ್ಬಾಳ್ಕರ್‌ರ ಮೊಟ್ಟಮೊದಲ “ಗಾಡ್‌ಫಾದರ್” ಎಂಬುದು ಬೆಳಗಾವಿಯ ರಾಜಕೀಯ ಇತಿಹಾಸ ಬಲ್ಲವರೆಲ್ಲರಿಗೂ ಗೊತ್ತಿದೆ. ರಮೇಶ್ ಜಾರಕಿಹೊಳಿ ಅತ್ಯಾಪ್ತಕೂಟದಲ್ಲಿದ್ದ ಲಕ್ಷ್ಮೀ “ಗುರುಬಲ”ದಿಂದ ಚಿಕ್ಕ ವಯಸ್ಸಿನಲ್ಲೇ ಕಾಂಗ್ರೆಸ್ ಪಕ್ಷದ ಮುನ್ನಲೆಗೆ ಬಂದರು; ರಾಜ್ಯ ಮಹಿಳಾ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯಾದರು. 2010ರಲ್ಲಿ ಲಕ್ಷ್ಮೀಯನ್ನು ರಮೇಶ್ ಜಾರಕಿಹೊಳಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷೆಯನ್ನಾಗಿ ಮಾಡಿದರು. ಬೆಳಗಾವಿ ಡಿಸಿಸಿ ಪ್ರಥಮ ಮಹಿಳಾ ಅಧ್ಯಕ್ಷ ಎಂಬ ಹೆಗ್ಗಳಿಕೆಯ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಓಡಾಡಲು ಕಾರು ಕೊಡಿಸಿದ್ದ ರಮೇಶ್ ಜಾರಕಿಹೊಳಿ ಮತ್ತು ಸಕ್ಕರೆ ಕಾರ್ಖಾನೆ ಕಟ್ಟುವುದಕ್ಕೂ ಧನಸಹಾಯ ಮಾಡಿದ್ದರೆಂಬ ಪುಕಾರಿನ ಮಾತು ಬೆಳಗಾವಿಯ ರಾಜಕೀಯ ಕಟ್ಟೆಯಲ್ಲಿ ಇವತ್ತಿಗೂ ಆಗಾಗ ಚರ್ಚೆಗೆ ಬರುವ ಸಂಗತಿಯಾಗಿದೆ.

ರಮೇಶ್ ಜಾರಕಿಹೊಳಿಯ ಪ್ರಭಾವಳಿಯಲ್ಲಿ ಹರ್ಷ ಸಕ್ಕರೆ ಕಾರ್ಖಾನೆಯ ಒಡತಿ ಆಗುವುದರೊಂದಿಗೆ ಬೆಳಗಾವಿಯ ಸಕ್ಕರೆ ಲಾಬಿಯ ಉದ್ಯಮ ಮತ್ತು ರಾಜಕೀಯ ವಲಯದ ಆಯಕಟ್ಟಿನಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಗುರುತಿಸಿಕೊಂಡರೆನ್ನಲಾಗುತ್ತಿದೆ. ಲಕ್ಷ್ಮೀ ಹೆಬ್ಬಾಳ್ಕರ್‌ರವರನ್ನು ಮುಂದಿಟ್ಟುಕೊಂಡು ಜಿಲ್ಲಾ ಕಾಂಗ್ರೆಸ್ ಮೇಲೆ ರಮೇಶ್ ಜಾರಕಿಹೊಳಿ ಹಿಡಿತ ಸಾಧಿಸಿದ್ದರು. ರಮೇಶ್-ಲಕ್ಷ್ಮೀ “ಹಾವಳಿ” ಜಿಲ್ಲಾ ಕಾಂಗ್ರೆಸ್‌ನಲ್ಲಿ ಅದ್ಯಾವ ಮಟ್ಟದಲ್ಲಿತ್ತೆಂದರೆ ಈಗ ಲೋಕೋಪಯೋಗಿ ಮಂತ್ರಿಯಾಗಿರುವ ಸರಳ-ಸಜ್ಜನ ರಾಜಕಾರಣಿ ಸತೀಶ್ ಜಾರಕಿಹೊಳಿಯಂಥ ಪ್ರಭಾವಿಗಳೇ ಸುಸ್ತಾಗಿ ಕಾಂಗ್ರೆಸ್‌ಗೆ ಗುಡ್‌ಬೈ ಹೇಳಲು ಯೋಚಿಸಿದ್ದರೆಂಬ ಮಾತು ಕಾಂಗ್ರೆಸ್ ಬಿಡಾರದಲ್ಲಿ ಚಾಲ್ತಿಯಲ್ಲಿದೆ.

ರಮೇಶ್ ಜಾರಕಿಹೊಳಿ ಪ್ರಯತ್ನದಿಂದ 2013ರ ಚುನಾವಣೆಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಲಕ್ಷ್ಮೀಗೆ ಸುಲಭವಾಗಿ ಒಲಿಯಿತು. ಕೇಸರಿ ಮತ್ತು ಮರಾಠಿ ಸಮರ ತಂತ್ರಗಾರಿಕೆಯ ನಡುವೆ ತಿಣುಕಾಡಿದ ಲಕ್ಷ್ಮೀ ಮೂರನೆ ಸ್ಥಾನಕ್ಕೆ ತಳ್ಳಲ್ಪಟ್ಟರು; 2014ರಲ್ಲಿ ಲೋಕಸಭೆಗೆ ಸ್ಪರ್ಧಿಸುವ ಸಾಹಸ ಮಾಡಿದರೂ ಗೆಲ್ಲಲಾಗಲಿಲ್ಲ. ಆದರೆ ಎರಡು ಸತತ ಸೋಲಿನ ಬೆನ್ನಿಗೇ ಮುನ್ನುಗ್ಗುವ ಧಾಡಸಿ ಗುಣಲಕ್ಷಣದ ಮಹಿಳಾ ಮುಂದಾಳೆಂಬ ಇಮೇಜ್ ಲಕ್ಷ್ಮೀಗೆ ಬಂದಿತ್ತು; ಸಕ್ಕರೆ ದಂಧೆಯಿಂದ ಹಣಕಾಸಿನ ತಾಕತ್ತು ಪ್ರಾಪ್ತವಾಗಿತ್ತು. ರಾಜ್ಯ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾದ ಲಕ್ಷ್ಮೀಗೆ ಡಿಕೆಶಿಯಂಥ ರಾಜ್ಯ ಮಟ್ಟದ ಪ್ರಭಾವಿ ಕಾಂಗ್ರೆಸ್ ಲೀಡರ್‌ಗಳ ನಿಕಟ ಸಂಪರ್ಕ ಸಾಧ್ಯವಾಯಿತು. 2015ರಲ್ಲಿ ರಮೇಶ್ ಜಾರಕಿಹೊಳಿ ಮತ್ತು ಡಿಕೆಶಿ ಬೆಂಬಲದಿಂದ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಂಥ ತೂಕದ ಸ್ಥಾನಕ್ಕೇರಿಬಿಟ್ಟರು!

ಡಿ.ಕೆ ಶಿವಕುಮಾರ್

ರಾಜ್ಯಮಟ್ಟದಲ್ಲಿ ಡಿಕೆಶಿ ಮತ್ತು ಜಿಲ್ಲಾ ಸರಹದ್ದಿನಲ್ಲಿ ರಮೇಶ್ ಜಾರಕಿಹೊಳಿ ಜತೆ ಸಮಾನ ಸ್ನೇಹ ಕಾಯ್ದುಕೊಂಡಿದ್ದ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ 2018ರಲ್ಲಿ ಹಸ್ತ ಪಾಳೆಯದ ಅಸೆಂಬ್ಲಿ ಟಿಕೆಟ್ ಪಡೆಯುವುದು ಕಷ್ಟವಾಗಲಿಲ್ಲ; ಈ ನಡುವೆ ಮತದಾರರನ್ನು ಸೆಳೆಯುವ ತಂತ್ರಗಾರಿಕೆಯಲ್ಲಿ, ತಮ್ಮ ಹರ್ಷ ಶುಗರ್ ಫ್ಯಾಕ್ಟರಿಯ ಬ್ಯಾನರಿನಡಿ ಕುಕ್ಕರ್ ಗಿಫ್ಟ್, ಹೆಂಗಳೆಯರನ್ನು ಭಾವನಾತ್ಮಕವಾಗಿ ಮೋಡಿ ಮಾಡುವ ಹಳದಿ-ಕುಂಕುಮ ಮತ್ತು ರಂಗೋಲಿ ಸ್ಪರ್ಧೆಯಂಥ ಚಟುವಟಿಕೆಗಳಿಂದ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಲಕ್ಷ್ಮೀ “ಮನೆಮಾತು” ಆಗಿಹೋಗಿದ್ದರು. ಮರಾಠಿಯಲ್ಲಿ ಭಾಷಣ ಮಾಡುತ್ತಲೇ, ಶಿವಾಜೀ ಮಹಾರಾಜ್ ಕೀ ಜೈ ಎನ್ನುತ್ತ ಕ್ಷೇತ್ರದ ಬಹುಸಂಖ್ಯಾತ ಮರಾಠಿ ಭಾಷಿಕರ ಸೆಳೆಯುವ ಕಲೆ ಕರಗತವಾಗಿತ್ತು. ಈ ಚಾಕಚಕ್ಯತೆಯಿಂದಾಗಿ 2018ರಲ್ಲಿ ಲಕ್ಷ್ಮೀಗೆ ಬಿಜೆಪಿಯ ಮರಾಠಿ ಅಭ್ಯರ್ಥಿ ಸಂಜಯ್ ಪಾಟೀಲರನ್ನು 51,724ರಷ್ಟು ಆಗಾಧ ಅಂತರದಲ್ಲಿ ಹಿಮ್ಮೆಟ್ಟಿಸಲು ಸಾಧ್ಯವಾಯ್ತೆಂದು ರಾಜಕೀಯ ಪಂಡಿತರು ಹೇಳುತ್ತಾರೆ. ಈ ಚುನಾವಣೆಯಲ್ಲಿ ರಮೇಶ್ ಜಾರಕಿಹೊಳಿ ಲಕ್ಷ್ಮೀ ಪರವಾಗಿದ್ದರೆ, ಸತೀಶ್ ಜಾರಕಿಹೊಳಿ ವಿರುದ್ಧವಾಗಿದ್ದರು ಎನ್ನಲಾಗುತ್ತದೆ.

ಶಾಸಕಿ ಆಗುತ್ತಲೆ ಮಹತ್ವಾಕಾಂಕ್ಷಿ ಸ್ವಭಾವದ ಲಕ್ಷ್ಮೀ ಹೆಬ್ಬಾಳ್ಕರ್ ಆಕ್ರಮಣಶೀಲರಾದರು! ಯಜಮಾನಿಕೆ ಠೇಂಕಾರದ ರಮೇಶ್ ಜಾರಕಿಹೊಳಿಯ ಹಂಗಿನಿಂದ ಹೊರಬರಲು ಲಕ್ಷ್ಮೀ ಹೆಬ್ಬಾಳ್ಕರ್ ಒಳಗಿದ್ದ ಸ್ವಾಭಿಮಾನಿ ಲಕ್ಷ್ಮೀ ತವಕಿಸತೊಡಗಿದರು. ರಮೇಶ್ ಜಾರಕಿಹೊಳಿಗೆ ಸವಾಲಾಗುವ ಧೈರ್ಯ ತೋರಿಸಹತ್ತಿದರು; ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿದ್ದಾಗ ಡಿಕೆಶಿ ಅತ್ಯಾಪ್ತ ಬಳಗ ಸೇರಿದ್ದ ಲಕ್ಷ್ಮೀಗೆ ಈ ಹಂತದಲ್ಲಿ ಅಧಿಕಾರದಲ್ಲಿದ್ದ ಜೆಡಿಎಸ್-ಕಾಂಗ್ರೆಸ್ ಸರಕಾರದ ಸಂಪೂರ್ಣ ಸಹಕಾರ-ಸಹಾಯ ಸಿಕ್ಕಿತು. ಆ ಸರಕಾರದಲ್ಲಿ ’ಪವರ್’ಫುಲ್ ಮಂತ್ರಿಯಾಗಿದ್ದ ಡಿಕೆಶಿಯವರಲ್ಲಿ ’ಗಾಡ್‌ಫಾದರ್’ಅನ್ನು ಲಕ್ಷ್ಮೀ ಕಾಣಹತ್ತಿದರು! ಡಿಕೆಶಿ ಬಲದಿಂದಾಗಿ ಜಿಲ್ಲಾ ರಾಜಕಾರಣದಲ್ಲಿ ಲಕ್ಷ್ಮೀ ಕೈ ಮೇಲಾಗಲಾರಂಭಿಸಿತು; ರಮೇಶ್ ಜಾರಕಿಹೊಳಿ ನಾಮ್ ಕೆ ವಾಸ್ತೆ ಜಿಲ್ಲಾ ಉಸ್ತುವಾರಿ ಮಂತ್ರಿಯಂತಾದರು. ಪಿಎಲ್‌ಡಿ ಬ್ಯಾಂಕ್, ಸಕ್ಕರೆ ಕಾರ್ಖಾನೆ ಮತ್ತಿತರ ಸ್ಥಳೀಯ ಸಂಸ್ಥೆಗಳ ಜವಾರಿ ಜಿದ್ದಾಜಿದ್ದಿಯಲ್ಲಿ ಇಬ್ಬರು ಶತ್ರುಗಳಾಗಿ ಮುಖಾಮುಖಿಯಾದರು. ಕೈ-ಕೈ ಜೋಡಿಸಿ ರಾಜಕಾರಣ ಮಾಡುತ್ತಿದ್ದವರು ಕೈ-ಕೈ ಮಿಲಾಯಿಸುವ ಪರಿಸ್ಥಿತಿ ನಿರ್ಮಾಣವಾಯಿತು!

ಇದನ್ನೂ ಓದಿ: ನಮ್ಮ ಸಚಿವರಿವರು; ಮಗ್ಗಲು ಬದಲಿಸಿದ ಮಧು ಬಂಗಾರಪ್ಪನವರ ರಾಜಕೀಯ ಬದುಕು

ತಾನೆ ಸಾಕಿದ ಗಿಣಿ ಎಂದು ಭಾವಿಸಿದ ರಮೇಶ್‌ಗೆ ಅವಮಾನವಾದಂತಾಗಿ ಸಹಿಸಲಾಗಲಿಲ್ಲ; ಡಿಕೆಶಿ ಹೆಜ್ಜೆಹೆಜ್ಜೆಗೆ ಲಕ್ಷ್ಮೀ ಬೆನ್ನಿಗೆ ನಿಂತು ತನ್ನನ್ನು ಬೆಳಗಾವಿ ಜಿಲ್ಲಾ ರಾಜಕೀಯ ಭೂಮಿಕೆಯಲ್ಲಿ ಅಪ್ರಸ್ತುತ ಆಗಿಸುತ್ತಿರುವುದರಿಂದ ಕೆರಳಿದ ರಮೇಶ್ ಜಾರಕಿಹೊಳಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರ ಕೆಡವುವ ಹಠಕ್ಕೆ ಬಿದ್ದರು; ಆಪರೇಷನ್ ಕಮಲದ ಮಹತ್ವದ “ಸರ್ಜನ್” ಆಗುವ ಮೂಲಕ ಯಡಿಯೂರಪ್ಪರ ಆಪರೇಷನ್ ಕಮಲ-2 ಸರಕಾರ ಸ್ಥಾಪನೆಗೆ ಕಾರಣಪುರುಷರಾದರು! ಆದರೆ ಜಾರಕಿಹೊಳಿಗೆ ಹೆಚ್ಚು ದಿನ ಅಧಿಕಾರ ಅನುಭವಿಸಲು ಆಗಲಿಲ್ಲ. ಯಡಿಯೂರಪ್ಪರ ಸರಕಾರದಲ್ಲಿ ಆಯಕಟ್ಟಿನ ಮಂತ್ರಿಯಾಗಿದ್ದ ರಮೇಶ್ ಜಾರಕಿಹೊಳಿ ಸೆಕ್ಸ್ ಸಿಡಿ ಹಗರಣದಲ್ಲಿ ಸಿಕ್ಕಿಬಿದ್ದು ರಾಜೀನಾಮೆ ಕೊಡಬೇಕಾಗಿ ಬಂತು. ಹಾವು ಹೊಡೆದು ಹದ್ದಿಗೆ ಹಾಕಿದಂತಾಗಿತ್ತು ಜಾರಕಿಹೊಳಿ ಪಡಿಪಾಟಲು! ಹಲವು ವರ್ಷಗಳ ಕಾಲ ಜಾರಕಿಹೊಳಿಗೆ ತುಂಬಾ ಹತ್ತಿರದಲ್ಲಿದ್ದು ಅವರ ದೌರ್ಬಲ್ಯ ಗೊತ್ತುಮಾಡಿಕೊಂಡಿದ್ದ ಲಕ್ಷ್ಮೀ ಈ ಸಿಡಿ ಪುರಾಣದ ಹಿಂದಿದ್ದಾರೆಂಬ ಮಾತು ಆಗ ರಾಜಕೀಯ ಕಟ್ಟೆಯಲ್ಲಿ ಜೋರು ಚರ್ಚೆಗೆ ಗ್ರಾಸವಾಗಿತ್ತು. ಖುದ್ದು ರಮೇಶ್ ಜಾರಕಿಹೊಳಿಯೆ ಲಕ್ಷ್ಮೀ ಮತ್ತು ಡಿಕೆಶಿ ಸೇರಿ ತನ್ನ ವಿರುದ್ಧ ಷಡ್ಯಂತ್ರ ಹೆಣೆದಿದ್ದಾರೆಂದು ಹಲವು ಸಲ ಅಲವತ್ತುಕೊಂಡಿದ್ದೂ ಇದೆ. ಡಿಕೆಶಿ ಮೇಲೆ ಐಟಿ ರೇಡುಗಳಾದಾಗಲೂ ಲಕ್ಷ್ಮೀ ಹೆಬ್ಬಾಳ್ಕರ್ ಹೆಸರು ಕೇಳಿಬಂದಿತ್ತು.

ಚನ್ನರಾಜ್ ಹಟ್ಟಿಹೊಳಿ

ಈ ಮಧ್ಯೆ ಪಂಚಮಸಾಲಿ ಮೀಸಲಾತಿ ಹೋರಾಟದ ಮುಂಚೂಣಿಗೆ ಬಂದಿದ್ದ ಲಕ್ಷ್ಮೀ ಹೆಬ್ಬಾಳ್ಕರ್ ಲಿಂಗಾಯತರ ಕಣ್ಮಣಿಯಾಗಿ ಅವತರಿಸಿದ್ದರು. ಸ್ಥಳೀಯಾಡಳಿತ ಸಂಸ್ಥೆಗಳಿಂದ, ವಿಧಾನಪರಿಷತ್‌ವರೆಗೆ ನಡೆದ ಚುನಾವಣೆಗಳಲ್ಲಿ ಲಕ್ಷ್ಮೀ ತಮ್ಮ ಕೈಚಳಕ ತೋರಿಸಲಾರಂಭಿಸಿದರು; ಪರಿಷತ್ ಚುನಾವಣೆಯಲ್ಲಿ ತಮ್ಮ ಸಹೋದರ ಚನ್ನರಾಜ್ ಹಟ್ಟಿಹೊಳಿಗೆ ಕಾಂಗ್ರೆಸ್ ಟಿಕೆಟ್ ಕೊಡಿಸಿ ರಮೇಶ್ ಜಾರಕಿಹೊಳಿಗೆ ಸೆಡ್ಡುಹೊಡೆದರು. ರಮೇಶ್ ತಮ್ಮ ಸಹೋದರ ಲಖನ್ ಜಾರಕಿಹೊಳಿಯನ್ನು ಪಕ್ಷೇತರನಾಗಿ ಕಣಕ್ಕಿಳಿಸಿದರು. ಈ ಜಿದ್ದಾಜಿದ್ದಿಯಲ್ಲಿ ರಮೇಶ್ ಮತ್ತು ಲಕ್ಷ್ಮೀ ತಮ್ಮಂದಿರು ಎಮ್ಮೆಲ್ಸಿಯಾದರು. ಆದರೆ ಕೇಸರಿ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿದ್ದ ಮಹಾಂತೇಶ್ ಕವಟಗೀಮಠ ಸೋಲಿಗೆ ಕಾರಣರಾದರೆಂಬ ಆಕ್ಷೇಪ ಸಂಘೀ ಸರದಾರರಿಂದ ರಮೇಶ್ ಎದುರಿಸಬೇಕಾಯಿತು. ಆ ಬಳಿಕ ಬಿಜೆಪಿಯಲ್ಲಿ ರಮೇಶ್ ಜಾರಕಿಹೊಳಿ ಕಿಮ್ಮತ್ತು ಕಮ್ಮಿಯಾಯಿತೆಂದು ವಿಶ್ಲೇಷಿಸಲಾಗುತ್ತಿದೆ.

ರಮೇಶ್ ಜಾರಕಿಹೊಳಿ ಕಳೆಗುಂದಿದಂತೆ ಲಕ್ಷ್ಮೀ ಕಳೆಗಟ್ಟಿದರು! ತನ್ನ ವನವಾಸಕ್ಕೆ ಕಾರಣೀಭೂತಳಾದ ಲಕ್ಷ್ಮಿಯನ್ನು ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಸೋಲಿಸುತ್ತೇನೆಂದು ಕೊನೆಯ ಶಪಥವನ್ನು ರಮೇಶ್ ಮಾಡಿದ್ದರು. ಅದಕ್ಕೆ ಸಕಲ ಸಿದ್ಧತೆಗಳನ್ನೂ ಮಾಡಿಕೊಂಡಿದ್ದರು. ಆದರೆ ಚುನಾವಣೆಯ ಹೊಸ್ತಿಲಲ್ಲಿ ಬೆಳಗಾವಿ ಜಿಲ್ಲಾ ಅಖಾಡದ ವರಸೆಗಳು ಪ್ರತಿಕೂಲವಾಗಿ ಬದಲಾಗಿ ರಮೇಶ್ ಜಾರಕಿಹೊಳಿಯವರನ್ನು ತಬ್ಬಿಬ್ಬುಗೊಳಿಸಿತು! ಅಥಣಿಯ ಲಕ್ಷ್ಮಣ ಸವದಿ ಟಿಕಟ್ ಸಿಗದ ಸಿಟ್ಟಲ್ಲಿ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದು ಲಕ್ಷ್ಮೀಗೆ ಅನುಕೂಲಕರವಾಗಿ ಪರಿಣಮಿಸಿತು. ಲಕ್ಷ್ಮೀಯ ಬೆಳಗಾವಿ ಗ್ರಾಮೀಣಕ್ಕಿಂತ ಸವದಿಯ ಅಥಣಿ ರಮೇಶ್‌ಗೆ ಪ್ರತಿಷ್ಠೆಯ ಕಣವಾಯಿತು. ತಾನು ಪಟ್ಟುಹಿಡಿದು ಬಿಜೆಪಿ ಟಿಕೆಟ್ ಕೊಡಿಸಿದ ಕುಮಠಳ್ಳಿಯವರನ್ನು ಗೆಲ್ಲಿಸಲೇಬೇಕಾದ ಸಂದಿಗ್ಧಕ್ಕೆ ರಮೇಶ್ ಸಿಲುಕಿದರು. ಹೀಗಾಗಿ ರಮೇಶ್‌ಗೆ ಲಕ್ಷ್ಮೀಯ ಬೆಳಗಾವಿ ಗ್ರಾಮೀಣದತ್ತು ಲಕ್ಷವಹಿಸಲು ಸಾಧ್ಯವಾಗಲಿಲ್ಲ; ಇತ್ತ ಬೆಳಗಾವಿ ಗ್ರಾಮೀಣ ಅತ್ತ ಅಥಣಿ ಎರಡೂ ಕಡೆ ರಮೇಶ್ ಜಾರಕಿಹೊಳಿ ಮುಖಭಂಗ ಅನುಭವಿಸಬೇಕಾಯಿತು. ಲಕ್ಷ್ಮೀ 56,016 ಮತಗಳ ಭರ್ಜರಿ ಅಂತರದಿಂದ ಜಾರಕಿಹೊಳಿ ಕ್ಯಾಂಡಿಡೇಟ್ ನಾಗೇಶ್ ಮುನ್ನೋಳಕರ್‌ರನ್ನು ಹಿಮ್ಮೆಟ್ಟಿಸಿ ಜಯ ಸಾಧಿಸಿದರು; ಆದರೆ ಗೋಕಾಕ್‌ನಲ್ಲಿ ರಮೇಶ್ ಜಾರಕಿಹೊಳಿಯನ್ನು ಮಣಿಸಲು ಲಕ್ಷ್ಮೀ ಬಳಗ ಮಾಡಿದ ಲಿಂಗಾಯತ ರಾಜಕೀಯ ವಿಫಲವಾಯಿತು. ಒಟ್ಟಿನಲ್ಲಿ 2018-2023ರ ಐದು ವರ್ಷ ರಾಜಕೀಯ ಬೆಳಗಾವಿಯ ಕುಂದಾ ರಾಣಿ ಲಕ್ಷ್ಮೀ ಹೆಬ್ಬಾಳ್ಕರ್ ಸುತ್ತ ಪ್ರತ್ಯಕ್ಷ-ಪರೋಕ್ಷವಾಗಿ ಗಿರಕಿ ಹೊಡೆಯಿತೆಂಬುದು ಉತ್ಪ್ರೇಕ್ಷೆಯೇನಲ್ಲ.

“ಮುಂದಿನ ದಿನಗಳಲ್ಲಿ ಮಹಿಳಾ ಸಿಎಂ, ಡಿಸಿಎಂ ನೋಡಲು ಬಯಸಿದ್ದೇನೆ” ಎನ್ನುತ್ತಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಣ್ಣಲ್ಲಿ ರಾಜ್ಯದ ಸರ್ವೋಚ್ಚ ಕುರ್ಚಿಯ ಕನಸಿರುವುದನ್ನು ರಾಜಕೀಯ ವಿಶ್ಲೇಷಕರು ಗುರುತಿಸಿದ್ದಾರೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಹಜ. ಆದರೆ ರಾಜಕೀಯ ಮಹತ್ವಾಕಾಂಕ್ಷೆಯ ಲಕ್ಷ್ಮೀ ಹೆಬ್ಬಾಳ್ಕರ್‌ರಲ್ಲಿ ಸಹನೆ-ಹೊಂದಾಣಿಕೆ ಕಮ್ಮಿ; ಸೈದ್ಧಾಂತಿಕ-ಸಮಾಜಮುಖಿ ರಾಜಕಾರಣ ಮಾಡುತ್ತಿರುವ ಜಿಲ್ಲಾ ಉಸ್ತುವಾರಿ ಮಂತ್ರಿ ಸತೀಶ್ ಜಾರಕಿಹೊಳಿ ಮತ್ತು ಮೇಲ್ವರ್ಗದ ಜಾತಿ ಪ್ರತಿಷ್ಠೆಯ ರಾಜಕಾರಣದ ಲಕ್ಷ್ಮೀ ಹೆಬ್ಬಾಳ್ಕರ್ ಜಿಲ್ಲೆಯ ಹಿತಕ್ಕಾಗಿ ಹೊಂದಿಕೊಂಡು ಹೋಗುವರೇ? ಜಿಲ್ಲೆಯ ಪ್ರಗತಿಗೆ ಮಾರಕವಾದ ಹಿಂದಿನ ವ್ಯಕ್ತಿ ಕೇಂದ್ರಿತ ಸಂಘರ್ಷ ಮರುಕಳಿಸದಂತೆ ಎಚ್ಚರ ವಹಿಸುವರೆ? ಎಂಬ ಮಾತು ಜಿಲ್ಲೆಯಲ್ಲಿ ಕೇಳಿಬರುತ್ತಿದೆ. ಅಲ್ಲದೆ ಸಂಪುಟದ ಮಹತ್ವದ ಖಾತೆಯಾದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯನ್ನು ಪರಿಣಾಮಕಾರಿಯಾಗಿ ನಿಭಾಯಸುವ ಜವಾಬ್ದಾರಿ ಅವರ ಮೇಲಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೆನಡಾದ ಸಾರ್ವತ್ರಿಕ ಚುನಾವಣೆಗೆ ಭಾರತದಿಂದ ‘ಆಯ್ಧ ಅಭ್ಯರ್ಥಿಗಳಿಗೆ’ ರಹಸ್ಯವಾಗಿ ಹಣಕಾಸಿನ ನೆರವು: ವರದಿ

0
2021ರ ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ ಆಯ್ದ ಅಭ್ಯರ್ಥಿಗಳಿಗೆ ರಹಸ್ಯವಾಗಿ ಹಣಕಾಸಿನ ನೆರವು ನೀಡಲು ಭಾರತ ಸರ್ಕಾರವು ತನ್ನ ಪ್ರಾಕ್ಸಿ ಏಜೆಂಟ್‌ಗಳ ಮೂಲಕ ಪ್ರಯತ್ನಿಸಿರಬಹುದು ಎಂದು ಕೆನಡಾದಲ್ಲಿ ವಿದೇಶಿ ಹಸ್ತಕ್ಷೇಪದ ಕುರಿತು ತನಿಖೆ ನಡೆಸುತ್ತಿರುವ ಕೆನಡಾದ...