Homeಕರ್ನಾಟಕಆರೋಗ್ಯ ಇಲಾಖೆಗೆ ಬೇಕಾದ ಅನುದಾನವನ್ನು SCSP, TSP ನಿಧಿಯಿಂದ ಪಡೆಯಲು ಪ್ರಸ್ತಾಪ: ತೀವ್ರ ವಿರೋಧ

ಆರೋಗ್ಯ ಇಲಾಖೆಗೆ ಬೇಕಾದ ಅನುದಾನವನ್ನು SCSP, TSP ನಿಧಿಯಿಂದ ಪಡೆಯಲು ಪ್ರಸ್ತಾಪ: ತೀವ್ರ ವಿರೋಧ

ಎಸ್‌ಇಪಿ ಟಿಎಸ್‌ಪಿ ಕಾಯ್ದೆಯಲ್ಲಿನ 7ಡಿ ಸೆಕ್ಷನ್ ಬಳಸಿ ಹಣವನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ಹಾಗಾಗಿ ಈ 7ಡಿ ರದ್ದುಪಡಿಸಬೇಕೆಂಬುದು ನಮ್ಮ ಆಗ್ರಹವಾಗಿದೆ - ಮಾವಳ್ಳಿ ಶಂಕರ್

- Advertisement -
- Advertisement -

ನೂತನ ಕಾಂಗ್ರೆಸ್ ಸರ್ಕಾರವು ಆರೋಗ್ಯ ಇಲಾಖೆಯನ್ನು ಬಲವರ್ಧನೆಗೊಳಿಸಲು ಮುಂದಾಗಿದೆ. ಅದಕ್ಕಾಗಿ ಹೆಚ್ಚುವರಿಯಾಗಿ 1,118 ರೂಗಳ ಅನುದಾನ ಅಗತ್ಯವಿದ್ದು, ಅದನ್ನು SCSP, TSP ನಿಧಿಯಿಂದ ಪಡೆಯಲು ಪ್ರಸ್ತಾಪಿಸಲಾಗಿದೆ ಎಂದು ದಿ.ಫೈಲ್ ವಿಶೇಷ ವರದಿ ಪ್ರಕಟಿಸಿದೆ.

ಮೂರು ಹಂತದಲ್ಲಿ ಆರೋಗ್ಯ ಇಲಾಖೆಯನ್ನು ಬಲವರ್ಧನೆಗೊಳಿಸಲು ಹೆಚ್ಚುವರಿ ಅನುದಾನ ಒದಗಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಪ್ರಸ್ತಾವನೆ ಸಲ್ಲಿಸಿದೆ. ಅದೇ ರೀತಿ ಪ್ರಣಾಳಿಕೆಯಲ್ಲಿ ಘೋಷಿಸಿರುವ ಕೆಲ ಕಾರ್ಯಕ್ರಮಗಳಿಗೆ ಹೆಚ್ಚುವರಿ ರಾಜ್ಯ ಅನುದಾನದ ಅವಶ್ಯಕತೆ ಇಲ್ಲ ಎಂದು ಹೇಳಿರುವ ಆರೋಗ್ಯ ಇಲಾಖೆಯು, ಈ ಕಾರ್ಯಕ್ರಮಗಳಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉಪ ಯೋಜನೆ ಮತ್ತು 15ನೇ ಹಣಕಾಸು ಆಯೋಗದಲ್ಲಿ ಲಭ್ಯವಿರುವ ಅನುದಾನವನ್ನು ಬಳಸಿಕೊಳ್ಳಲು ಮುಂದಾಗಿದೆ ಎನ್ನಲಾಗಿದೆ.

ಜೂನ್ 13 ರಂದು ಸಿಎಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಆರೋಗ್ಯ ಇಲಾಖೆಯು 2023-24ನೇ ಸಾಲಿನ ಆರ್ಥಿಕ ವರ್ಷಕ್ಕೆ ಅವಶ್ಯವಿರುವ ಮತ್ತು ಹೆಚ್ಚುವರಿ ಅನುದಾನದ ವಿವರಗಳ ಪ್ರಾತ್ಯಕ್ಷಿಕೆಯನ್ನು ಒದಗಿಸಿದೆ. ಇದರ ಪ್ರತಿಯನ್ನು ‘ದಿ ಫೈಲ್‌’ ಪ್ರಕಟಿಸಿದ್ದು, ಆಶಾ ಕಾರ್ಯಕರ್ತೆಯರ ಮಾಸಿಕ ಗೌರವ ಧನ ಹೆಚ್ಚಳಕ್ಕೆ 430 ಕೋಟಿ ರೂ, ನೂತನ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸ್ಥಾಪನೆಗೆ 172 ಕೋಟಿ ರೂ, ಡಾ ಪುನೀತ್‌ ರಾಜ್‌ಕುಮಾರ್ ಹೃದಯ ಜ್ಯೋತಿ ಯೋಜನೆಗೆ 13.02 ಕೋಟಿ ರೂ ಸೇರಿದಂತೆ ಇದುವರೆಗೂ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ನಿಧಿಯಲ್ಲಿ ಒಟ್ಟಾರೆ 1,013.85 ಕೋಟಿ ರೂ ಅನುದಾನ ಲಭ್ಯವಿದೆ ಎಂದು ಉಲ್ಲೇಖಿಸಲಾಗಿದೆ.

ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ 50 ಸಂಚಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಎಸ್‌ಸಿಸಿಪಿ ಮತ್ತು ಎಸ್‌ಟಿಪಿ ಅನುದಾನದಡಿಯಲ್ಲಿ 34 ಕೇಂದ್ರಗಳನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದಡಿಯಲ್ಲಿ ಕಾರ್ಯಗತಗೊಳಿಸಲು ಉದ್ದೇಶಿಸಿದೆ. ಪ್ರತೀ ಸಂಚಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ವಹಣೆಗೆ ಪ್ರತಿ ತಿಂಗಳಿಗೆ 2.82 ಲಕ್ಷ ರು.ನಂತೆ ಒಟ್ಟಾರೆ ವಾರ್ಷಿಕವಾಗಿ 28.42 ಕೋಟಿ ರು.ಗಳನ್ನು ಎಸ್‌ಸಿಎಸ್‌ಪಿ ಟಿಎಸ್‌ಪಿ ಅನುದಾನಗಳಡಿಯಲ್ಲಿ ಭರಿಸಲಾಗುತ್ತದೆ. ಇದಕ್ಕಾಗಿ ಹೆಚ್ಚುವರಿ ಅನುದಾನದ ಅವಶ್ಯವಿರುವುದಿಲ್ಲ ಎಂದು ವಿವರಿಸಲಾಗಿದೆ.

SCSP, TSP ಹಣ ದುರ್ಬಳಕೆ ನಿಲ್ಲಲಿ: ಮಾವಳ್ಳಿ ಶಂಕರ್ ಆಗ್ರಹ

ಎಸ್‌ಸಿಎಸ್‌ಪಿ ಟಿಎಸ್‌ಪಿ ಹಣವನ್ನು ಯಾವುದೇ ಕಾರಣಕ್ಕೂ ಇತರೆ ಕೆಲಸಗಳಿಗೆ ಬಳಸಬಾರದು. ಕಾನೂನಿನಲ್ಲಿ ಏನಿದೆಯೋ ಅದನ್ನು ಪಾಲಿಸಬೇಕು. ದಲಿತರ ಕಲ್ಯಾಣಕ್ಕಾಗಿ ಮಾತ್ರ ಆ ಹಣ ಬಳಕೆಯಾಗಬೇಕು. ಇಲ್ಲದಿದ್ದಲ್ಲಿ ದಲಿತರಿಗೆ ಮಾಡುವ ಮಹಾ ಅನ್ಯಾಯವಾಗುತ್ತದೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿಯ ಮುಖಂಡರಾದ ಮಾವಳ್ಳಿ ಶಂಕರ್ ಆಕ್ರೋಶ ವ್ಯಕ್ತಪಡಿಸಿದರು.

ಎಸ್‌ಸಿ, ಎಸ್‌ಟಿ ಡೆವೆಲೆವ್‌ಮೆಂಟ್‌ ಕಾರ್ಪೋರೇಷನ್ ಬೋರ್ಡ್‌ಗಳಲ್ಲಿ ಲಕ್ಷಾಂತರ ಜನ ಅರ್ಜಿ ಸಲ್ಲಿಸಿದ್ದಾರೆ. ಆದರೆ ಅವರ್ಯಾರಿಗೆ ಈ ಹಣ ಬಳಕೆಯಾಗಿಲ್ಲ. ಸ್ವ ಉದ್ಯೋಗ ಮಾಡುವವರಿಗೆ ಈ ನಿಧಿಯಿಂದ ನೇರ ಸಾಲ ಕೊಡಬಹುದಲ್ಲವೇ? ಈ ಹಣವನ್ನು ಬಳಸಬಹುದಲ್ಲವೇ? ಅದನ್ನು ಬಿಟ್ಟು ಬ್ಯಾಂಕಿನ ಬಳಿ ಏಕೆ ಕಳಿಸುತ್ತಾರೆ? ಉತ್ತರ ಕರ್ನಾಟಕದ ದಲಿತ ಯುವಕರು ಉದ್ಯೋಗ ಅರಸಿ ಬೆಂಗಳೂರಿಗೆ ಬಂದು ಅಲೆಯುತ್ತಿದ್ದಾರೆ. ಇದೆಲ್ಲವೂ ಸರ್ಕಾರದ ಗಮನಕ್ಕಿಲ್ಲವೇ ಎಂದು ಪ್ರಶ್ನಿಸಿದರು.

ಕಾಯ್ದೆಯು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಶೈಕ್ಷಣಿಕ ಮತ್ತು ಆರ್ಥಿಕ ಸಬಲೀಕರಣಕ್ಕೆ ಮಾತ್ರ ಈ ಹಣವನ್ನು ಬಳಸಬೇಕೆಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಆದರೂ ಕಾಯ್ದೆಯಲ್ಲಿನ 7ಡಿ ಸೆಕ್ಷನ್ ಬಳಸಿ ಹಣವನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ಈ 7ಡಿ ರದ್ದು ಪಡಿಸಬೇಕೆಂಬುದು ನಮ್ಮ ಆಗ್ರಹವಾಗಿದೆ ಎಂದರು.

ನಿಧಿಯಲ್ಲಿ ಹಣವಿದೆ ಎಂದು ಪಿಡಬ್ಲೂಡಿ, ನೀರಾವರಿ, ಆರೋಗ್ಯ ಇಲಾಖೆಗೆ ಅನುದಾನ ನೀಡುವುದು ಸರಿಯಲ್ಲ. ಇದನ್ನು ತಡೆಯಲು ಏಕಗವಾಕ್ಷಿ ಏಜೆನ್ಸಿ ಮಾಡಿ ಹಣ ನೇರವಾಗಿ ಅಲ್ಲಿಗೆ ಹೋಗುವಂತೆ ಮಾಡಬೇಕು. ಮಧ್ಯಪ್ರದೇಶ ರಾಜ್ಯದಲ್ಲಿ ಈ ವ್ಯವಸ್ಥೆ ಇದ್ದು, ಅದಕ್ಕಾಗಿ ಒಂದು ಸಚಿವಾಲಯ ಸ್ಥಾಪಿಸಲಾಗಿದೆ. ಈ ಮಾದರಿಯನ್ನು ರಾಜ್ಯದಲ್ಲಿಯೂ ಅಳವಡಿಸಬೇಕು ಎಂದರು.

ಸಿಎಂರವರನ್ನು ಭೇಟಿ ಮಾಡಿ ಮನವಿ ಮಾಡುತ್ತೇವೆ: ಧರ್ಮಸೇನಾ

ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಎಸ್‌ಸಿ ವಿಭಾಗದ ಅಧ್ಯಕ್ಷ ಆರ್ ಧರ್ಮಸೇನಾರವರು ಮಾತನಾಡಿ, “ಸಂವಿಧಾನ ಜಾರಿಯಾದಾಗಿನಿಂದಲೂ ಮೀಸಲಾತಿ ಜಾರಿಯಾಗಿದೆ. 2013ರಲ್ಲಿ ಎಸ್‌ಇಪಿ ಟಿಎಸ್‌ಪಿ ಯೋಜನೆ ಜಾರಿಗೆ ಬಂದಿದೆ. ಆದರೂ ಎಲ್ಲಾ ದಲಿತರಿಗೆ ಸರ್ಕಾರದ ಸೌಲಭ್ಯಗಳು ದೊರಕಿಲ್ಲ. ಕೇವಲ 9% ದಲಿತರಿಗೆ ಮಾತ್ರ ಕೆಲ ಯೋಜನೆಗಳು ತಲುಪಿವೆ ಎಂದು ರಾಷ್ಟ್ರೀಯ ಎಸ್‌ಸಿ, ಎಸ್‌ಟಿ ಆಯೋಗ ಹೇಳಿದೆ. ಹೀಗಿರುವಾಗ ಎಸ್‌ಇಪಿ ಟಿಎಸ್‌ಪಿ ನಿಧಿಯನ್ನು ದಲಿತರನ್ನು ಹೊರತುಪಡಿಸಿ ಇತರ ಯೋಜನೆಗಳಿಗೆ ಬಳಸುವುದನ್ನು ತೀವ್ರವಾಗಿ ವಿರೋಧಿಸುತ್ತೇವೆ. ಈ ಕುರಿತು ನಮ್ಮ ನಿಯೋಗವು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವರಿಕೆ ಮಾಡುತ್ತೇವೆ” ಎಂದರು.

ಬಿಜೆಪಿ ಸರ್ಕಾರ ಮಾಡಿದ ತಪ್ಪನ್ನು ಕಾಂಗ್ರೆಸ್ ಕೂಡ ಮಾಡಬಾರದು: ಶ್ರೀನಾಥ್ ಪೂಜಾರಿ

ವಕೀಲರು ಮತ್ತು ಕೆಪಿಸಿಸಿ ಪ್ರಚಾರ ಸಮಿತಿಯ ಉಪಾಧ್ಯಕ್ಷರಾದ ಶ್ರೀನಾಥ್ ಪೂಜಾರಿಯವರು ಮಾತನಾಡಿ, “ಆರೋಗ್ಯ ಇಲಾಖೆ ಅನುದಾನಕ್ಕಾಗಿ ಎಸ್‌ಇಪಿ ಟಿಎಸ್‌ಪಿ ನಿಧಿ ಬಳಸುವುದಾದರೆ, ನಾಳೆ ಎಲ್ಲಾ ಇಲಾಖೆಗಳು ಇದೇ ರೀತಿ ಕೇಳುತ್ತವೆ. ರಸ್ತೆ ಹಾಕಿಸುತ್ತೇವೆ, ಬೋರ್‌ವೆಲ್ ಹಾಕಿಸುತ್ತೇವೆ ಎಂದು ದಲಿತರ ಹಣ ಬಳಸಲಾಗುತ್ತದೆ. ಈ ಕೆಲಸಗಳಿಗೆ ಜನರಲ್ ಫಂಡ್ ಬಳಸಬೇಕೆ ಹೊರತು ಎಸ್‌ಇಪಿ ಟಿಎಸ್‌ಪಿ ನಿಧಿ ಬಳಸುವುದು ತಪ್ಪು. ಈ ಹಣವನ್ನು ದಲಿತ ಯುವಜನರ ಸಬಲೀಕರಣಕ್ಕಾಗಿ ಬಳಸಬೇಕು. ಆರೋಗ್ಯ ಇಲಾಖೆಯಲ್ಲಿಯೂ ದಲಿತರ ಆರೋಗ್ಯ ವೃದ್ದಿಸಲು ಬಳಸಬೇಕು. ಅದನ್ನು ಬಿಟ್ಟು ಬೇರೆ ಕೆಲಸಗಳಿಗೆ ಬಳಸುವುದು ದೊಡ್ಡ ತಪ್ಪು. ಬಿಜೆಪಿ ಸರ್ಕಾರ ಮಾಡಿದ ತಪ್ಪನ್ನು ಕಾಂಗ್ರೆಸ್ ಕೂಡ ಮಾಡಬಾರದು. ಇದನ್ನು ಪಕ್ಷದಲ್ಲಿದ್ದುಕೊಂಡೇ ತೀವ್ರವಾಗಿ ವಿರೋಧಿಸುತ್ತೇವೆ” ಎಂದು ತಿಳಿಸಿದರು.

ದಲಿತರ ಹಣವನ್ನು ದಲಿತರ ಕಲ್ಯಾಣಕ್ಕಾಗಿ ಮಾತ್ರ ಬಳಸಬೇಕು – ಹನುಮೇಶ್ ಗುಂಡೂರು

ಎಸ್‌ಇಪಿ ಟಿಎಸ್‌ಪಿ ಕಾಯ್ದೆಯನ್ನು ಜಾರಿಗೆ ತಂದಿದ್ದು ಕಾಂಗ್ರೆಸ್ ಸರ್ಕಾರ. ಯಾವುದೇ ಕಾರಣಕ್ಕೂ ಆ ನಿಧಿಯನ್ನು ಇತರ ಉದ್ದೇಶಗಳಿಗೆ ಬಳಸಬಾರದು. ಏಕೆಂದರೆ ತಾನು ತಂದ ಕಾನೂನಿಗೆ ತಾನೇ ವಿರುದ್ಧವಾಗಿ ನಡೆದುಕೊಂಡಂತೆ ಆಗುತ್ತದೆ. ಹಾಗಾಗಿ ದಲಿತರ ಹಣವನ್ನು ದಲಿತರ ಕಲ್ಯಾಣಕ್ಕಾಗಿ ಮಾತ್ರ ಬಳಸಬೇಕೆಂದು ವಕೀಲರಾದ ಹನುಮೇಶ್ ಗುಂಡೂರು ಒತ್ತಾಯಿಸಿದರು.

ಇದನ್ನೂ ಓದಿ: ವಿಶೇಷ ವರದಿ: ವರ್ಷ ವರ್ಷವೂ ಎಸ್‌ಸಿ, ಎಸ್‌ಟಿಗಳ ಅನುದಾನ ಗೋತಾ; ಸರ್ಕಾರಕ್ಕಿಲ್ಲ ದಲಿತರ ಮೇಲೆ ಕಾಳಜಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ಬಾಂಬ್ ಸ್ಫೋಟ: ಬಾಲಕ ಮೃತ್ಯು, ಇಬ್ಬರಿಗೆ ಗಂಭೀರ ಗಾಯ

0
ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ಕಚ್ಚಾ ಬಾಂಬ್ ಸ್ಫೋಟ ಸಂಭವಿಸಿ ಏಳು ವರ್ಷದ ಬಾಲಕ ಸಾವನ್ನಪ್ಪಿದ್ದು, ಇತರ ಇಬ್ಬರು ಅಪ್ರಾಪ್ತ ಬಾಲಕರಿಗೂ ತೀವ್ರ ಗಾಯಗಳಾಗಿದೆ. ಮೃತ ಬಾಲಕನನ್ನು ರಾಜ್ ಬಿಸ್ವಾಸ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ...