Homeರಾಜಕೀಯಜಯಮಾಲ ಮೇಡಂಗೆ ಮಂತ್ರಿಗಿರಿ ಒಲಿದ ಮರ್ಮವೇನು?

ಜಯಮಾಲ ಮೇಡಂಗೆ ಮಂತ್ರಿಗಿರಿ ಒಲಿದ ಮರ್ಮವೇನು?

- Advertisement -
- Advertisement -

ಸಿಕ್ಕಾಪಟ್ಟೆ ಸರ್ಕಸ್ ತರುವಾಯ ಸಮ್ಮಿಶ್ರ ಸರ್ಕಾರದ ಅರೆಬೆಂದ ಸಚಿವ ಸಂಪುಟ ಅಣಿಯಾಗಿದೆ. ಸಚಿವಗಿರಿ ಸಿಗದೆ ಬಂಡಾಯದ ಬಾವುಟ ಹಾರಾಡಿಸಿಕೊಂಡು ದಿಲ್ಲಿಗೂ, ಬೆಂಗ್ಳೂರಿಗೂ ಅಲೆದಾಡಿದ ಪುಣ್ಯಾತ್ಮರೂ ದಿನದಿಂದ ದಿನಕ್ಕೆ ತಣ್ಣಗಾಗುತ್ತಿದ್ದಾರೆ. ಇನ್ನು ಸಿಕ್ಕ ಖಾತೆಗಳ ಬಗ್ಗೆ ಕ್ಯಾತೆ ತೆಗೆದವರೂ, ಪಾಲಿಗೆ ಬಂದ ಪಂಚಾಮೃತದ ಮುಂದೆ ಚಕ್ಕಮಕ್ಕಳ ಹಾಕಿ ಕೂತು, ಕೈ-ಬಾಯಿ ಅಣಿಯಾಗಿಸಿಕೊಳ್ಳುತ್ತಿರುವ ಹೊತ್ತಿನಲ್ಲೇ ಕುಮಾರಣ್ಣನ ಸಂಪುಟದ ರೈಲು ನಿಧಾನಕ್ಕೆ ಹಳಿಗಳಿಗೆ ಕುದುರಿಕೊಳ್ಳಲು ಶುರುವಾಗಿದೆ. ಒಂದು ಸರ್ಕಾರ ಅಂತ ರಚನೆಯಾದಾಗ, ಅದರಲ್ಲೂ ಬಣ್ಣಬಣ್ಣದ ಕೌದಿಯಂತಹ ಸಮ್ಮಿಶ್ರ ಸರ್ಕಾರ ಅಂದಮೇಲೆ ಇಂತದ್ದೆಲ್ಲ ಮಾಮೂಲಿ. ಈ ಸಲದ ಸಂಪುಟ ಕಸರತ್ತಿನಲ್ಲಿ ಎಚ್.ಕೆ.ಪಾಟೀಲ್, ಎಂ.ಬಿ.ಪಾಟೀಲ್, ಬಸವರಾಜ್ ಹೊರಟ್ಟಿಯಂತಹ ಘಟಾನುಘಟಿಗಳಿಗೆ ಮಂತ್ರಿಗಿರಿ ಮಿಸ್ ಆಗಿರೋದು ಎಷ್ಟು ಶಾಕ್‍ನ ಸಂಗತಿಯೋ, ಗಿರಿಕನ್ಯೆ ಜಯಮಾಲಾ ಮೇಡಂಗೆ ಮಂತ್ರಿಗಿರಿ ಸಿಕ್ಕಿರೋದೂ ಅಷ್ಟೇ ದಿಗ್ಬ್ರಾಂತಿಯ ವಿಷಯವಾಗಿದೆ. ಯಾಕೆಂದರೆ ಯಾರೊಬ್ಬರೂ ಜಯಮಾಲಾ ಮಿನಿಸ್ಟರ್ ಆಗಲಿದ್ದಾರೆ ಅಂತ ಎಣಿಸಿರಲಿಲ್ಲ. ಮಹಿಳಾ ಕೋಟಾದ ಪ್ರಶ್ನೆ ಬಂದಾಗಲೂ ಡಿಕೇಶಿ ಬಳಗದ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಮರಾಠಾ ಬ್ರ್ಯಾಂಡಿನ ಖಾನಾಪುರದ ಅಂಜಲಿ ನಿಂಬಾಳ್ಕರ್ ನಡುವೆಯೇ ಹಗ್ಗಜಗ್ಗಾಟ ನಡೆದಿತ್ತು. ಪಾಪದ ಮೋಟಮ್ಮ ನನ್ನನ್ನ ಮಂತ್ರಿ ಮಾಡಿ ಅಂತ ಕೇಳಿದಾಗಲೂ `ಏಯ್ ಸುಮ್ನೇ ಇರಮ್ಮ, ಗೆದ್ದ ಶಾಸಕರನ್ನೇ ಬಿಜೆಪಿಯವರ ಬಕಾಸುರ ಬಾಯಿಂದ ಕಾಪಾಡಿಕೊಳ್ಳಲು ಹೆಣಗಾಡ್ತಿದೀವಿ. ಹಾಗಾಗಿ ಅವ್ರನ್ನ ತೃಪ್ತಿ ಪಡಿಸ್ಲಿಕ್ಕೇ ಸಾಕುಸಾಕಾಗಿ ಹೋಗ್ತಿದೆ. ಅದಕ್ಕೋಸ್ಕರ ಈ ಸಲ ಎಂಎಲ್‍ಸಿಗಳಿಗೆ ಮಂತ್ರಿ ಮಾಡುವ ಪ್ರಸ್ತಾಪ ನಮ್ಮ ಮುಂದಿಲ್ಲ. ನಂತ್ರ ನೋಡೋಣ’ ಅನ್ನೋ ಉತ್ತರ ಬಿಸಾಕಿದ ದಿಲ್ಲಿ ದಲ್ಲಾಳಿಗಳು ಆಯಮ್ಮನನ್ನು ಗದರಿಕೊಂಡಿದ್ದರಂತೆ.
ಆದರೆ ಕೊನೇ ಘಳಿಗೆಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್‍ರನ್ನು ಹಿಂದಿಕ್ಕಿದ್ದಲ್ಲದೇ, ಎಂಎಲ್‍ಸಿಗಳಿಗೆ ಮಂತ್ರಿಭಾಗ್ಯ ಇಲ್ಲ ಎಂಬ ಅಡ್ಡಗೋಡೆಯನ್ನೂ ಜಿಗಿದುಬಂದ ಜಯಮಾಲ ಮೇಡಂ ಮಂತ್ರಿಣಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದು ಎಲ್ಲರ ಹುಬ್ಬೇರುವಂತೆ ಮಾಡಿತ್ತು. ಮಂತ್ರಿಗಿರಿ ಮಿಸ್ ಮಾಡಿಕೊಂಡ `ಪುಣ್ಯಾತ್ಮ’ರು ಅಂಟಿಸುವ `ನಿಷ್ಠಾವಂತರಿಗೆ ಬೆಲೆ ಇಲ್ಲದಂತಾಗಿದೆ. ಪಕ್ಷಕ್ಕೆ ದುಡಿದವರಿಗೆ ಸ್ಥಾನ ಕೊಡದೆ, ಬಕೇಟು ಹಿಡಿದ ಲಾಬಿ ಗಿರಾಕಿಗಳನ್ನು ಮಂತ್ರಿ ಮಾಡಿದ್ದಾರೆ. ನನ್ನ ಬೆಂಬಲಿಗರ ಜೊತೆ ಚರ್ಚಿಸಿ ಸೂಕ್ತ ನಿರ್ಧಾರಕ್ಕೆ ಬರ್ತೀನಿ’ ಅನ್ನೋ ಠುಸ್ ಪಟಾಕಿಗೆ ಪ್ರತಿಯಾಗಿ ಮಂತ್ರಿಗಿರಿ ಸಿಕ್ಕ `ಮಹಾತ್ಮ’ರು `ನನ್ನ ನಿಷ್ಠೆ ನೋಡಿ ಪಕ್ಷ ಈ ಸ್ಥಾನ ನೀಡಿದೆ. ನಾನು ಸಚಿವ ಸ್ಥಾನಕ್ಕೆ ಲಾಬಿ ಮಾಡಿದವನೇ/ಳೇ ಅಲ್ಲ. ನನ್ನ ಗೆಲ್ಲಿಸಿದ ಜನರ ಸೇವೆಗೆ ಇದನ್ನು ಸದುಪಯೋಗ ಮಾಡಿಕೊಳ್ತೀನಿ’ ಅನ್ನೋ ಢಂಢಂ ಪಟಾಕಿ ಅಂಟಿಸೋದು ಸಹಜ. ಜಮಯಾಲ ಮೇಡಂ ಕೂಡಾ ಅಂತದ್ದೇ ಒಂದು ಢಂಢಂ ಪಟಾಕಿ ಅಂಟಿಸಿದ್ದಾರಾದರು ಅವರ ಮಂತ್ರಿಗಿರಿಯ ಹಿಂದೆ ಒಂದು ಪೊಲಿಟಿಕಲ್ ಲಾಬಿ ಇದ್ದೇ ಇದೆ ಅನ್ನೋದು ಮಾತ್ರ ಸುಳ್ಳಲ್ಲ.
ಬಣ್ಣದ ಲೋಕದಿಂದ ಬಂದ ಬೇರೆಬೇರೆ ಪಾರ್ಟ್‍ಟೈಂ ರಾಜಕಾರಣಿಗಳಿಗೆ ಹೋಲಿಸಿದರೆ ಜಯಮಾಲ ಮೇಡಮ್ಮು ಹೆಚ್ಚು ದಕ್ಷ, ದಿಟ್ಟ ರಾಜಕಾರಣಿ ಅನ್ನೋದ್ರಲ್ಲಿ ಸಂಶಯವಿಲ್ಲ. ಆದರೆ, ಇರೋ ಒಂದು ರೊಟ್ಟಿಯನ್ನೇ ಹರಿದು, ಹಸಿವಿನಿಂದ ರಂಪಾಟ ಮಾಡುತ್ತಿರುವ ತನ್ನ ಸಂತಾನ ಸೈನ್ಯಕ್ಕೆ ಹಂಚಬೇಕಾದ ನಿಕೃಷ್ಟ ಬರಗಾಲಕ್ಕೆ ಸಿಲುಕಿರುವ ಕಾಂಗ್ರೆಸ್ ಅನ್ನೋ ಶತಮಾನದ ಪಾರ್ಟಿ ಯಾವ ಲಾಬಿಯೂ ಇಲ್ಲದೆ, ದಕ್ಷತೆಯ ಮೈಲೇಜಿನ ಮೇಲೆ ಜಯಮಾಲರನ್ನು ಮಂತ್ರಿ ಮಾಡುತ್ತೆ ಅನ್ನೋದನ್ನು ನಂಬಲು ಕಷ್ಟ; ಅದೂ, ಮ್ಯಾನ್ ಆಫ್ ದಿ ಮ್ಯಾಚ್ ಡಿಕೇಶಿ ಬೆಟಾಲಿಯನ್ನಿನ ವಿಕೆಟನ್ನೇ ರನ್‍ಔಟ್ ಮಾಡಿಸಿ! ಜಯಮಾಲರನ್ನು ಮಂತ್ರಿ ಮಾಡಲೇಬೇಕು ಅಂತ ಪಟ್ಟು ಹಿಡಿದು, ಲಾಬಿ ಮಾಡಿದ್ದು ಮಾಜಿ ಸಿಎಂ ಸಿದ್ರಾಮಯ್ಯನವರು ಅನ್ನೋ ಮಾತುಗಳು ಕಾಂಗ್ರೆಸ್ ಪಡಸಾಲೆಯಿಂದಲೇ ಕೇಳಿಬರುತ್ತಿವೆ. ಜಯಮಾಲ ಮೊದಲಿನಿಂದಲೂ ಸಿದ್ರಾಮಯ್ಯನವರ ಅತ್ಯಾಪ್ತ ವಲಯದ ರಾಜಕೀಯ ಪಟು. ಸಿದ್ದು ಸಿಎಂ ಆಗಿದ್ದಾಗ, ಲೈಂಗಿಕ ಕಾರ್ಯಕರ್ತೆಯರ ಸ್ಥಿತಿಗತಿ ಕುರಿತು ಅಧ್ಯಯನ ನಡೆಸಲು 16 ಜನರ ಒಂದು ಸಮಿತಿ ರಚಿಸಿದ್ದರು. ಆ ಸಮಿತಿಗೆ ಅಧ್ಯಕ್ಷೆಯನ್ನಾಗಿ ಸಿದ್ದು ಆಯ್ಕೆ ಮಾಡಿದ್ದು ಇದೇ ಜಯಮಾಲ ಮೇಡಂರನ್ನು. ಇನ್ನು ಮೊನ್ನೆಯ ಎಲೆಕ್ಷನ್ ವೇಳೆ, ಸಿದ್ದುವಿಗೆ ಚಾಮುಂಡೇಶ್ವರಿಯಲ್ಲಿ ಕಂಟಕವಿರುವ ಮುನ್ಸೂಚನೆ ಸಿಕ್ಕಾಗ ಜಯಮಾಲ ಮೇಡಂ, ಒಂದು ಕಾಲದ ಬಿಜೆಪಿ ಒಡನಾಡಿ ಮುಖ್ಯಮಂತ್ರಿ ಚಂದ್ರುರಂತಹ ಸಹೋದ್ಯೋಗಿಯನ್ನೇ ಕರಕೊಂಡು ಬಂದು ಸಿದ್ದು ಪರ ಅದ್ದೂರಿ ಪ್ರಚಾರ ಮಾಡಿದ್ದರು. ಅಷ್ಟರಮಟ್ಟಿಗೆ ಅವರಿಬ್ಬರ ನಡುವೆ ಆಪ್ತತೆ ಇದೆ, ಅಭಿಮಾನವಿದೆ. ಸಿದ್ದು, ಜಯಮಾಲರ ಮೇಲಿಟ್ಟಿರುವ ಆ ಅಭಿಮಾನವೇ ಇವತ್ತು ಅವರನ್ನು ಮಂತ್ರಿ ಮಾಡಿದೆ. ಅಂದಹಾಗೆ, ಸಿದ್ದು ಬಗ್ಗೆ ಜಯಮಾಲ ಮೇಡಂಗೆ ಅಭಿಮಾನ ತುಂಬಿ ಬಂದು, ಅಂತರಾಳದಿಂದ ಹೆಮ್ಮೆ ಎನಿಸಿದಾಗ ಏನಂತ ಹೊಗಳ್ತಾರೆ ಗೊತ್ತುಂಟಾ, `ನಂ ಸಿದ್ರಾಮಯ್ಯನೋರು ಗಂಡು ಹುಲಿ ಕಣ್ರೀ!’.
ಸಂಪುಟ ರಚನೆಯಲ್ಲಿ ಸಿದ್ರಾಮಯ್ಯರನ್ನು ಹೈಕಮಾಂಡ್ ಮೂಲೆಗುಂಪು ಮಾಡಿದೆ, ಅವರ ಆಪ್ತರಿಗೆ ಸಚಿವಗಿರಿ ತಪ್ಪಿಸಲಾಗಿದೆ ಅಂತ ಬೊಬ್ಬಿಡುವ ಖಾಲಿ ಡಬ್ಬಗಳಿಗೆ ಜಯಮಾಲ ಆಯ್ಕೆಯೇ ಒಂದು ದೊಡ್ಡ ಉತ್ತರ. ಕಾಂಗ್ರೆಸ್‍ನೊಳಗೆ ಸಿದ್ದು ಈಗಲೂ ಡಿಗ್ನಿಫೈಡ್ ರೋಲ್ ನಿಭಾಯಿಸುತ್ತಿದ್ದಾರೆ ಅನ್ನೋದಕ್ಕೆ ಲಕ್ಷ್ಮಿ ಹೆಬ್ಬಾಳ್ಕರ್‍ರನ್ನ ಓವರ್‍ಟೇಕ್ ಮಾಡಿ ಜಯಮಾಲ ಮಂತ್ರಿಯಾಗಿರೋದು ಸಾಕ್ಷಿ. ಇದೆಲ್ಲ ಆಯ್ಕೆ ಹಿಂದಿನ ಕಸರತ್ತಾಯ್ತು. ಇನ್ನು ದಕ್ಷತೆ ವಿಚಾರಕ್ಕೆ ಬಂದರೆ, ಈ ಸಮ್ಮಿಶ್ರ ಸಂಪುಟದಲ್ಲಿರುವ ಕೆಲವೇ ಕೆಲವು ಅರ್ಹ ಮಂತ್ರಿಗಳಲ್ಲಿ ಜಯಮಾಲ ಕೂಡಾ ಒಬ್ಬರು ಅನ್ನೋದ್ರಲ್ಲಿ ತಪ್ಪಿಲ್ಲ. ಸಿದ್ದು ಲಾಬಿಯಿಂದ ಸಿಕ್ಕಿದೆಯೋ, ಬಿಲ್ಲವ ಕೋಟಾದಡಿ ದಕ್ಕಿದೆಯೋ, ಒಟ್ಟಿನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಒಬ್ಬ ಸಮರ್ಥ ಸಾರಥಿಯೇ ಸಿಕ್ಕಂತಾಗಿದೆ. ಯಾಕೆಂದರೆ ಜಯಮಾಲ ಗ್ರಾಮೀಣ ಮಹಿಳೆಯರ ಪುನರ್ವಸತಿ ವಿಷಯದ ಮೇಲೆ ಅಧ್ಯಯನ ಮಾಡಿಯೇ ಡಾಕ್ಟರೇಟ್ ಪದವಿ ಪಡೆದುಕೊಂಡಂತವರು. ಮೊದಲೇ ಹೇಳಿದಂತೆ ಕಳೆದ ಸರ್ಕಾರದಲ್ಲಿ ಲೈಂಗಿಕ ಕಾರ್ಯಕರ್ತೆಯರ ಸ್ಥಿತಿಗತಿ ಕುರಿತು ಅಧ್ಯಯನ ನಡೆಸಿದ ಸಮಿತಿಯ ಅಧ್ಯಕ್ಷೆಯಾಗಿಯೂ ಮಹಿಳಾ ಸವಾಲುಗಳನ್ನು ಕಂಡ ಅನುಭವವಿದೆ. ಈ ಹಿಂದೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷೆಯಾಗಿ ಕನ್ನಡ ಸಿನಿರಂಗದ ಬಿಕ್ಕಟ್ಟುಗಳನ್ನು ಬಗೆಹರಿಸಿದ ಗಟ್ಟಿತನವಿರುವ ಜಯಮಾಲರಿಗೆ ಮಂತ್ರಿಯಾಗುವ ಸಾಮಥ್ರ್ಯ ಉಳಿದ ಬಣ್ಣದ ಮಂದಿಗಿಂತ ಹೆಚ್ಚಿದೆ ಅನ್ನೋದ್ರಲ್ಲಿ ತಪ್ಪಿಲ್ಲ. ಅಂದಹಾಗೆ, 1993ರಲ್ಲಿ ಸಕ್ರಿಯ ರಾಜಕಾರಣಕ್ಕೆ ಕಾಲಿಟ್ಟ ಘಳಿಗೆಯಿಂದ ಇಲ್ಲಿಯವರೆಗು ಕಾಂಗ್ರೆಸ್‍ನಲ್ಲೇ ಗುರುತಿಸಿಕೊಂಡು ಬಂದಿದ್ದಾರೆ. ಇತರರಂತೆ ಪಕ್ಷಾಂತರ ಮಾಡಿದವರಲ್ಲ.
ತನ್ನ 13ನೇ ವಯಸ್ಸಿಗೇ ಬಣ್ಣ ಹಚ್ಚಿ, 16ನೇ ವಯಸ್ಸಿಗೆ ಡಾ.ರಾಜ್ ಎದುರು ಪ್ರೇಮದ ಕಾಣಿಕೆಯಲ್ಲಿ ನಾಯಕಿಯಾಗಿ ಮಿಂಚಿದ ಈ ಗಿರಿಕನ್ಯೆ ತನ್ನ ವೈಯಕ್ತಿಕ ಬದುಕಿನಲ್ಲಿ ಸಾಕಷ್ಟು ಏಳುಬೀಳು ಕಂಡುಬಂದಂತವರು. ಪ್ರತಿಭಾವಂತ ನಟನಾಗಿದ್ದರೂ, ತನ್ನ ಚಟಗಳಿಗೆ ಮಿತಿ ಹೇರಿಕೊಳ್ಳದೆ ಮರೆಯಾಗಿ ಹೋದ ಟೈಗರ್ ಪ್ರಭಾಕರ್ ಜೊತೆ ಜಯಮಾಲ ಇಟ್ಟ ಮೊದಲ ದಾಂಪತ್ಯ ದೀರ್ಘಕಾಲ ಉಳಿಯಲಿಲ್ಲ. ಯಾವ ಮುಲಾಜುಗಳಿಗೂ ಕಟ್ಟುಬೀಳದೆ ಡೈವೋರ್ಸ್ ಪಡೆದು ಆ ದಾಂಪತ್ಯದಿಂದ ಹೊರಬಂದ ಅವರು ನಂತರ ಛಾಯಾಗ್ರಾಹಕ ರಾಮಚಂದ್ರರವರನ್ನು ಮದುವೆಯಾಗಿ ಮತ್ತೊಮ್ಮೆ ದಿಟ್ಟತೆ ತೋರಿದ್ದರು. ಮಹಿಳೆಯರಿಗೆ ಪ್ರವೇಶವಿಲ್ಲದ ಅಯ್ಯಪ್ಪಸ್ವಾಮಿ ದೇಗುಲಕ್ಕೆ ಭೇಟಿ ನೀಡಿದ್ದ ವಿವಾದ ಭುಗಿಲೆದ್ದಾಗಲೂ ಜಯಮಾಲ ಬಲು ದಿಟ್ಟತೆಯಿಂದಲೇ ಎದುರಿಸಿದ್ದರು. ಕಮರ್ಷಿಯಲ್ ಚಿತ್ರಗಳಲ್ಲಿ ಹೀರೋಯಿನ್ ಆಗಿ ಮಿಂಚುತ್ತಲೇ `ತಾಯಿ ಸಾಹೇಬ’ದಂತಹ ರಾಷ್ಟ್ರಪ್ರಶಸ್ತಿ ವಿಜೇತ ಕಲಾತ್ಮಕ ಚಿತ್ರವನ್ನೂ ನಿರ್ಮಿಸಿ ಸೈ ಅನ್ನಿಸಿಕೊಂಡಿದ್ದ ಅವರು ಮಹಿಳಾ ಕಲ್ಯಾಣ ಹಾಗೂ ಕನ್ನಡ, ಸಂಸ್ಕøತಿ ಇಲಾಖೆಗಳಿಗೆ ನ್ಯಾಯ ಸಲ್ಲಿಸುತ್ತಾರೆಂಬ ವಿಶ್ವಾಸವಿದೆ. ಕಾದು ನೋಡಬೇಕು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸನಾತನ ಧರ್ಮದ ಅನುಯಾಯಿಗಳಿಗೆ ಮಾತ್ರ ದೇವಿ ವಿಗ್ರಹಗಳನ್ನು ಸ್ಪರ್ಶಿಸಲು ಅನುಮತಿ: ಪಶ್ಚಿಮ ಬಂಗಾಳ ಸಿಎಂ ಸುವೇಂದು ಅಧಿಕಾರಿ

ಹುಗ್ಲಿ ನದಿಯಲ್ಲಿ ದುರ್ಗಾ ವಿಸರ್ಜನೆಯ ಸಮಯದಲ್ಲಿ ಸನಾತನ ಧರ್ಮದ ಅನುಯಾಯಿಗಳಿಗೆ ಮಾತ್ರ ದೇವಿಯ ವಿಗ್ರಹಗಳನ್ನು ಸ್ಪರ್ಶಿಸಲು ಅನುಮತಿ ನೀಡಲಾಗುವುದು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಬುಧವಾರ ಹೇಳಿದ್ದಾರೆ. ಸುರಕ್ಷತಾ ಕಾಳಜಿಗಳು ಮತ್ತು...

ಮಹಾರಾಷ್ಟ್ರ ಸಿಇಒ ಮನವಿಗೆ ಸ್ಪಂದಿಸಿದ ಚುನಾವಣಾ ಆಯೋಗ: ‘ಇಸಿಐನೆಟ್’ ಸಾಫ್ಟ್‌ವೇರ್‌ನಲ್ಲಾಯಿತು 4 ಪ್ರಮುಖ ಬದಲಾವಣೆ!

ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ತಾಂತ್ರಿಕ ಸಾಫ್ಟ್‌ವೇರ್‌ನ ಅತಿಯಾದ ನಿಯಂತ್ರಣವು ಸ್ಥಳೀಯ ನೋಂದಣಿ ಅಧಿಕಾರಿಗಳ ಶಾಸನಬದ್ಧ ಅಧಿಕಾರವನ್ನೇ ಕಸಿದುಕೊಳ್ಳುತ್ತಿದೆ ಎಂಬ ತೀವ್ರ ಕಳವಳದ ಬೆನ್ನಲ್ಲೇ, ಭಾರತೀಯ ಚುನಾವಣಾ ಆಯೋಗವು ತನ್ನ 'ಇಸಿಐನೆಟ್' (ECINet)...

ಮಸೀದಿಯಲ್ಲಿ ಚುಂಬಿಸಿದ್ದಕ್ಕೆ ಮರಣದಂಡನೆ? ಸೌದಿ ಅಮಾನವೀಯ ತೀರ್ಪಿಗೆ ತೀವ್ರ ಆಕ್ರೋಶ

ಮುಸ್ಲಿಂ ಸಮುದಾಯದ ಪವಿತ್ರ ನಗರವಾದ ಮೆಕ್ಕಾದ ಮಸೀದಿಯೊಂದರಲ್ಲಿ ಅನೈತಿಕ ಕೃತ್ಯ ಎಸಗಿದ್ದಾರೆ ಎಂಬ ಆರೋಪದ ಮೇಲೆ ಸೌದಿ ಅರೇಬಿಯಾ ಇಬ್ಬರು ಬಾಂಗ್ಲಾದೇಶಿ ಪ್ರಜೆಗಳಿಗೆ ಮರಣದಂಡನೆ ವಿಧಿಸಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಮರಣದಂಡನೆಗಳು...

ಯೂಸುಫ್ ಪಠಾಣ್‌ಗೆ ವಡೋದರಾದ ವಿವಾದಿತ ನಿವೇಶನ ಹಂಚಿಕೆ ಮಾಡಿದ ಗುಜರಾತ್ ಬಿಜೆಪಿ ಸರ್ಕಾರ : ಟಿಎಂಸಿ ತೊರೆದು ಎನ್‌ಡಿಎ ಬೆಂಬಲಿಸಿದ್ದಕ್ಕೆ ಗಿಫ್ಟ್?

ಲೋಕಸಭಾ ಸಂಸದ ಮತ್ತು ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ ಅವರಿಗೆ ವಡೋದರಾದಲ್ಲಿರುವ 978 ಚದರ ಮೀಟರ್ ವಿಸ್ತೀರ್ಣದ ವಿವಾದಿತ ನಿವೇಶನವನ್ನು ಹಂಚಿಕೆ ಮಾಡಲು ಗುಜರಾತ್‌ನ ಬಿಜೆಪಿ ಸರ್ಕಾರವು ಅನುಮೋದನೆ ನೀಡಿದೆ. ಈ ಸಂಬಂಧ...

‘ಒಬ್ಬರೇ ಭೇಟಿಯಾಗಿದ್ದು ಯಾಕೆ?’ : ಎಪ್‌ಸ್ಟೀನ್ ಜೊತೆಗಿನ ಸಚಿವ ಹರ್ದೀಪ್ ಸಿಂಗ್ ಪುರಿ ಪೋಟೋ ಹಂಚಿಕೊಂಡು ಪ್ರತಿಪಕ್ಷ ನಾಯಕರ ಪ್ರಶ್ನೆ, ಉತ್ತರ ನೀಡಲು ಆಗ್ರಹ

ಕಾಂಗ್ರೆಸ್, ಟಿಎಂಸಿ ಮತ್ತು ಎನ್‌ಸಿಪಿ (ಎಸ್‌ಪಿ) ಸೇರಿದಂತೆ ವಿರೋಧ ಪಕ್ಷದ ನಾಯಕರು, ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಲೈಂಗಿಕ ಅಪರಾಧಿ ಜೆಫ್ರಿ ಎಪ್‌ಸ್ಟೀನ್ ಅನ್ನು ಭೇಟಿಯಾಗಿರುವ ಫೋಟೋ...

ಸಿಎಂಆರ್‌ಎಲ್-ಎಕ್ಸಾಲಾಜಿಕ್ ಪ್ರಕರಣ: ಪಿಣರಾಯಿ ವಿಜಯನ್ ವಿರುದ್ಧದ ತನಿಖೆಗೆ 7 ದಿನಗಳ ತಡೆ ನೀಡಿದ ಸುಪ್ರೀಂ ಕೋರ್ಟ್: ಹೈಕೋರ್ಟ್‌ನಲ್ಲಿ ಮೇಲ್ಮನವಿಗೆ ಅವಕಾಶ

ಖಾಸಗಿ ಕಂಪನಿಯಿಂದ ಅಕ್ರಮ ಹಣಕಾಸು ವ್ಯವಹಾರ ನಡೆಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ 'ಸಿಎಂಆರ್‌ಎಲ್-ಎಕ್ಸಾಲಾಜಿಕ್' ಪ್ರಕರಣದಲ್ಲಿ ಕೇರಳದ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಅವರ ಪುತ್ರಿ ವೀಣಾ ಟಿ. ಹಾಗೂ ಅಳಿಯ, ಮಾಜಿ ಸಚಿವ...

ನ್ಯಾಯಾಂಗ ಬಂಧನ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಹಿಂಪಡೆದ ಸಿಜೆಪಿಯ ಸೌರವ್ – ಅಶುತೋಷ್

ಪ್ರತಿಭಟನಾ ಸ್ಥಳವಲ್ಲ ಎಂದು ಅಧಿಸೂಚನೆ ಹೊರಡಿಸಲಾಗಿರುವ ಜಂತರ್ ಮಂತರ್‌ನಲ್ಲಿ ರಾಷ್ಟ್ರಧವಜ ಹಾರಿಸಿ ಬಂಧನಕ್ಕೊಳಗಾಗಿದ್ದ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಮುಖಂಡರಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ, ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ (ಎಸ್‌ಇಎಂ)...

ಆಂಧ್ರ ಪ್ರದೇಶ ಮುನ್ಸಿಪಲ್ ಚುನಾವಣೆ: ವೈಎಸ್‌ಆರ್‌ಸಿಪಿ ಅರ್ಜಿ ಪರಿಶೀಲಿಸಿ ನಾಳೆಯೊಳಗೆ ತೀರ್ಮಾನಿಸಿ; ರಾಜ್ಯ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಕಟ್ಟುನಿಟ್ಟಿನ ನಿರ್ದೇಶನ!

ಆಂಧ್ರಪ್ರದೇಶದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ವೇಳೆ ವ್ಯಾಪಕ ಹಿಂಸಾಚಾರ ನಡೆಸಿ, ತಮ್ಮ ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸದಂತೆ ತಡೆಯಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ನೇತೃತ್ವದ ಪ್ರಮುಖ...

ಸಿಜೆಪಿ ನಾಯಕರು – ನೇಹಾ ಬೋರಾ ಅರ್ಜಿಗಳ ತುರ್ತು ವಿಚಾರಣೆಗೆ ಒಪ್ಪಿದ ದೆಹಲಿ ಹೈಕೋರ್ಟ್‌

ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ (ಎಸ್‌ಇಎಂ) ತಮ್ಮ ನ್ಯಾಯಾಂಗ ಬಂಧನವನ್ನು ವಿಸ್ತರಿಸಿರುವುದನ್ನು ಪ್ರಶ್ನಿಸಿ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಮುಖಂಡರಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ಸಲ್ಲಿಸಿರುವ ಅರ್ಜಿಯನ್ನು ಬುಧವಾರ (ಅ.21) ವಿಚಾರಣೆ...

ಬೇಡಿಕೆಗಳ ಈಡೇರಿಕೆಗೆ ಒಪ್ಪಿದ ಜೆಎನ್‌ಯು : ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೈಬಿಟ್ಟ ವಿದ್ಯಾರ್ಥಿಗಳು

ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘದ (JNUSU) ಸದಸ್ಯರು ಮಂಗಳವಾರ (ಅಕ್ಟೋಬರ್ 20) ತಮ್ಮ 17 ದಿನಗಳ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸಿದ್ದಾರೆ. ವಿದ್ಯಾರ್ಥಿ ಪ್ರತಿನಿಧಿಗಳು ಮತ್ತು ವಿಶ್ವವಿದ್ಯಾಲಯದ ಡೀನ್ ನೇತೃತ್ವದ ಸಮಿತಿಯ ನಡುವೆ...