ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ಆಂತರಿಕ ದೂರುಗಳ ಸಮಿತಿಯು (ಐಸಿಸಿ), ಸುಮಾರು ಹನ್ನೊಂದು ವಿದ್ಯಾರ್ಥಿನಿಯರು ಪ್ರೊಫೆಸರ್ ಒಬ್ಬರ ವಿರುದ್ಧ ಮಾಡಿರುವ ಲೈಂಗಿಕ ಕಿರುಕುಳದ ಆರೋಪಗಳ ಕುರಿತು ಪ್ರಸ್ತುತ ತನಿಖೆ ನಡೆಸುತ್ತಿದೆ ಎಂದು ವರದಿಯಾಗಿದೆ.
deccanchronicle.com ವರದಿಯ ಪ್ರಕಾರ, ಆಕ್ಷೇಪಾರ್ಹ ನಡವಳಿಕೆ, ಲೈಂಗಿಕ ಪ್ರಚೋದಕ ಕಾಮೆಂಟ್‌ಗಳು ಮತ್ತು ವೈವಾ (ಮೌಖಿಕ ಪರೀಕ್ಷೆ) ಸಮಯದಲ್ಲಿ ಲೈಂಗಿಕ ಅನುಕೂಲಗಳಿಗೆ ಪ್ರತಿಯಾಗಿ ಹೆಚ್ಚಿನ ಅಂಕಗಳನ್ನು ನೀಡುವ ಆಮಿಷಗಳನ್ನು ಒಡ್ಡಲಾಗಿದೆ ಎಂದು ವಿದ್ಯಾರ್ಥಿಗಳು ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ. ಅಲ್ಲದೆ, ಪ್ರೊಫೆಸರ್‌ನ ಕ್ಯಾಂಪಸ್ ನಿವಾಸದಲ್ಲಿ ನಡೆದ ಕೂಟಗಳಿಗೆ ತಮ್ಮನ್ನು ಆಹ್ವಾನಿಸಲಾಗಿತ್ತು ಮತ್ತು ಅಲ್ಲಿ ಮತ್ತಷ್ಟು ಲೈಂಗಿಕ ದೌರ್ಜನ್ಯದ ಯತ್ನಗಳು ನಡೆದಿದ್ದವು ಎಂದು ಆರೋಪ ಮಾಡಿದ್ದಾರೆ. ಸಾಮಾನ್ಯ ತರಗತಿಗಳ ಅವಧಿಯಲ್ಲೂ ಅಶ್ಲೀಲ ಕಾಮೆಂಟ್‌ಗಳನ್ನು ಮಾಡಲಾಗಿದೆ ಎಂದು ಹೇಳಿಕೊಂಡಿದ್ದಾರೆ.
ಒಬ್ಬ ವಿದ್ಯಾರ್ಥಿನಿ ತಾನು ಅನುಭವಿಸಿದ ಕಿರುಕುಳವನ್ನು ಕೇವಲ ವಿದ್ಯಾರ್ಥಿಗಳಿಗಷ್ಟೇ ಸೀಮಿತವಾಗಿದ್ದ ವಾಟ್ಸಾಪ್ ಗ್ರೂಪ್‌ನಲ್ಲಿ ಹಂಚಿಕೊಂಡ ಬಳಿಕ ಈ ವಿಷಯ ಬೆಳಕಿಗೆ ಬಂದಿದೆ. ನಂತರ, ಇತರ ವಿದ್ಯಾರ್ಥಿನಿಯರೂ ಕೂಡ ತಾವು ಅನುಭವಿಸಿದ ಕಿರುಕುಳದ ಬಗ್ಗೆ ಹೇಳಿಕೊಂಡಿದ್ದಾರೆ. ಇದಾದ ಬಳಿಕ, ಸುಮಾರು 45 ದಿನಗಳ ಸೆಮಿಸ್ಟರ್ ರಜೆಯ ಇತ್ತು. ಜುಲೈನಲ್ಲಿ ತರಗತಿಗಳು ಪುನರಾರಂಭಗೊಂಡಾಗ ಪ್ರೊಫೆಸರ್ ಕಿರುಕುಳ ಮುಂದುವರಿದೆ. ಈ ವೇಳೆ ಹಿರಿಯ ವಿದ್ಯಾರ್ಥಿಗಳು ಸೇರಿದಂತೆ ಮತ್ತಷ್ಟು ಮಂದಿ ದೂರು ನೀಡಿದ್ದಾರೆ.
ಐಸಿಸಿ ಈಗಾಗಲೇ ವಿದ್ಯಾರ್ಥಿನಿಯರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲು ಪ್ರಾರಂಭಿಸಿದೆ. ತನಿಖೆಯಲ್ಲಿ ಆರೋಪಗಳಿಗೆ ಪೂರಕವಾದ ಪುರಾವೆಗಳು ಕಂಡುಬಂದರೆ, ಜೆಎನ್‌ಯು ಆಡಳಿತ ಮಂಡಳಿಯು ದೆಹಲಿ ಪೊಲೀಸರ ಬಳಿ ಎಫ್‌ಐಆರ್ ದಾಖಲಿಸಲಿದೆ ಎಂದು ವರದಿಗಳು ತಿಳಿಸಿವೆ. ಪ್ರಕರಣ ಸಂಬಂಧ ವಿಶ್ವವಿದ್ಯಾಲಯದಿಂದ ಇದುವರೆಗೆ ಯಾವುದೇ ಅಧಿಕೃತ ಹೇಳಿಕೆಯನ್ನು ಹೊರಡಿಸಲಾಗಿಲ್ಲ.
ವರದಿಗಳ ಪ್ರಕಾರ, ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿದ್ದ ಹಿರಿಯ ಪ್ರೊಫೆಸರ್ ಸೇರಿದಂತೆ ಜೆಎನ್‌ಯು ಕಾರ್ಯಕಾರಿ ಮಂಡಳಿಯು (ಎಕ್ಸಿಕ್ಯೂಟಿವ್ ಕೌನ್ಸಿಲ್) ವಿಭಿನ್ನ ಪ್ರಕರಣಗಳಲ್ಲಿ ನಾಲ್ಕು ಜನ ಉದ್ಯೋಗಿಗಳನ್ನು ವಜಾಗೊಳಿಸಿದೆ.


