ಬೆಂಗಳೂರಿನ ‘ನಮ್ಮ ಮೆಟ್ರೋ’ ಗುಲಾಬಿ ಮಾರ್ಗದ (Pink Line) ‘ಬಿಳೇಕಹಳ್ಳಿ’ ನಿಲ್ದಾಣಕ್ಕೆ ಕೇವಲ ಐಐಎಂಬಿ (ಇಂಡಿಯನ್ ಇನ್ಸಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಬೆಂಗಳೂರು) ಎಂದು ಹೆಸರಿಟ್ಟಿರುವುದಕ್ಕೆ ಊರಿನ ಜನರು ತೀವ್ರ ಅಸಮಾಧಾನ, ಆಕ್ರೋಶ ವ್ಯಕ್ತಪಡಿಸಿದ್ದು, ಮರುನಾಮಕರಣಕ್ಕೆ ಆಗ್ರಹಿಸಿ ಹೋರಾಟ ಆರಂಭಿಸಿದ್ದಾರೆ.
ಬನ್ನೇರುಘಟ್ಟ ರಸ್ತೆಯ ‘ಬಿಳೇಕಹಳ್ಳಿ’ಯ ನಿಲ್ದಾಣಕ್ಕೆ ‘ಐಐಎಂಬಿ’ ಎಂದು ನಾಮಕರಣ ಮಾಡಲಾಗಿದೆ. ಐಐಎಂಬಿ ಪಕ್ಕದಲ್ಲೇ ಇರುವ ನಿಲ್ದಾಣವಾದ್ದರಿಂದ ಈ ಹೆಸರು ಇಡಲಾಗಿದೆ ಎನ್ನಲಾಗಿದೆ. ಆದರೆ, ಊರಿನ ಹೆಸರೇ ಕೈಬಿಟ್ಟು ಕೇವಲ ಐಐಎಂಬಿ ಎಂದು ನಾಮಕರಣ ಮಾಡಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.
‘ಐಐಎಂಬಿ’ ಎಂದು ಹೆಸರಿಟ್ಟಿರುವುದಕ್ಕೆ ತಮ್ಮ ತಕರಾರಿಲ್ಲ. ಆದರೆ, ಊರಿನ ಹೆಸರು ಕೈಬಿಟ್ಟಿರುವುದು ಸರಿಯಲ್ಲ. ತಕ್ಷಣ ಇದನ್ನು ಸರಿಪಡಿಸಿ ‘ಐಐಎಂಬಿ-ಬಿಳೇಕಹಳ್ಳಿ’ ಎಂಬುವುದಾಗಿ ಮರುನಾಮಕರಣ ಮಾಡಬೇಕೆಂದು ಊರಿನ ಜನರು ಆಗ್ರಹಿಸಿದ್ದಾರೆ.

‘ಬಿಳೇಕಹಳ್ಳಿ’ ಎನ್ನುವುದು ಕೇವಲ ಒಂದು ಊರಿನ ಹೆಸರಲ್ಲ. ನಮ್ಮ ಪೂರ್ವಜರ ನೆನಪು, ನಮ್ಮ ನೆಲದ ಇತಿಹಾಸ, ನಮ್ಮ ಅಸ್ತಿತ್ವ. ಮೆಟ್ರೋ ನಿಲ್ದಾಣಕ್ಕೆ ಕೇವಲ ‘ಐಐಎಂಬಿ’ ಎಂದು ಮಾತ್ರ ಹೆಸರಿಟ್ಟಿರುವುದು ನಮಗೆ ನೋವುಂಟುಮಾಡಿದೆ. ನಮಗೆ ‘ಐಐಎಂಬಿ’ ಹೆಸರಿನ ಬಗ್ಗೆ ಯಾವುದೇ ವಿರೋಧವಿಲ್ಲ. ಆದರೆ, ಶತಮಾನಗಳಿಂದ ಗುರುತಿಸಿಕೊಂಡಿರುವ ‘ಬಿಳೇಕಹಳ್ಳಿ’ ಎಂಬ ಹೆಸರೂ ಉಳಿಯಬೇಕು ಎನ್ನುವುದು ನಮ್ಮ ವಿನಮ್ರ ವಿನಂತಿ. ಮೆಟ್ರೋ ಯೋಜನೆಯ ಆರಂಭದ ದಿನಗಳಿಂದಲೇ ಈ ಬಗ್ಗೆ ನಾವು ಬಿಎಂಆರ್ಸಿಎಲ್ ಅಧಿಕಾರಿಗಳಿಗೆ ಹಾಗೂ ಮಾಜಿ ಸಂಸದ ದಿವಂಗತ ಅನಂತ್ ಕುಮಾರ್ ಅವರಿಗೂ ಮನವಿ ಸಲ್ಲಿಸಿದ್ದೆವು. ‘ಐಐಎಂಬಿ-ಬಿಳೇಕಹಳ್ಳಿ ಮೆಟ್ರೋ ನಿಲ್ದಾಣ’ ಎಂದು ಮರುನಾಮಕರಣ ಮಾಡಿ. ಅಭಿವೃದ್ಧಿಯ ಜೊತೆಗೆ ನಮ್ಮ ಗುರುತೂ ಉಳಿಯಲಿ. ಬಿಳೇಕಹಳ್ಳಿಯ ಐತಿಹಾಸಿಕ ಅಸ್ತಿತ್ವವೂ ಉಳಿಯಲಿ” ಎಂದು ಸ್ಥಳೀಯರು ಹೇಳಿದ್ದಾರೆ.
ವಿಸ್ತೃತ ಯೋಜನಾ ವರದಿಯಲ್ಲಿ (ಡಿಪಿಆರ್) ಪ್ರಸ್ತಾಪಿಸಿದಂತೆ ನಿಲ್ದಾಣಕ್ಕೆ ಹೆಸರಿಡಲಾಗಿದೆ. ತಿದ್ದುಪಡಿ ಮಾಡಲು ಅವಕಾಶವಿದೆ. ಅದಕ್ಕಾಗಿ ಸಮಿತಿ ರಚಿಸಲಾಗಿದೆ. ಈ ಸಮಿತಿ ಕೈಗೊಳ್ಳುವ ನಿರ್ಧಾರಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಪ್ಪಿಗೆ ನೀಡಬೇಕಾಗುತ್ತದೆ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ತಿಳಿಸಿರುವುದಾಗಿ ವರದಿಗಳು ತಿಳಿಸಿವೆ.
ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಸಿಎಂ ಪತ್ರ
ಮೆಟ್ರೋ ನಿಲ್ದಾಣದ ಮರುನಾಮಕರಣಕ್ಕೆ ಆಗ್ರಹಿಸಿ ಬಿಳೇಕಹಳ್ಳಿಯ ಸ್ಥಳೀಯ ಮುಖಂಡರು ಹಾಗೂ ನಿವಾಸಿಗಳ ನಿಯೋಗವೊಂದು ಕೆಲ ದಿನಗಳ ಹಿಂದೆ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತ್ತು. ಇದಕ್ಕೆ ತಕ್ಷಣವೇ ಸ್ಪಂದಿಸಿರುವ ಸಿಎಂ ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಿ.ಸಿ ಜಾಫರ್ ಅವರಿಗೆ ಅಧಿಕೃತ ಟಿಪ್ಪಣಿ ರವಾನಿಸಿದ್ದಾರೆ ಎಂದು ವರದಿಯಾಗಿದೆ.


