ಎಸ್ಐಆರ್ ರದ್ದುಪಡಿಸುವಂತೆ ಆಗ್ರಹಿಸಿ ಹಾಗೂ ನವದೆಹಲಿಯ ‘ಜಂತರ್ ಮಂತರ್’ ಮೈದಾನದಲ್ಲಿ ಪ್ರತಿಭಟನೆ ಮಾಡದಂತೆ ನಿರ್ಬಂಧಿಸಿರುವ ದೆಹಲಿ ಪೊಲೀಸರ ಪ್ರಜಾಪ್ರಭುತ್ವ ವಿರೋಧಿ ನಿಲುವು ಖಂಡಿಸಿ ದೇಶದಾದ್ಯಂತ ಜನಪರ ಸಂಘಟನೆಗಳು ಏಕಕಾಲದಲ್ಲಿ ‘ಪ್ರಜಾಪ್ರಭುತ್ವ ಉಳಿವಿಗಾಗಿ ಜನತೆಯ ಮೆರವಣಿಗೆ’ಗೆ ಕರೆ ನೀಡಿದ್ದು, ಅಕ್ಟೋಬರ್ 23 ರಂದು ಏಕಕಾಲದಲ್ಲಿ ಪ್ರತಿಭಟನೆ ನಡೆಯುವ ಸ್ಥಳದ ಮಾಹಿತಿ ನೀಡುವ ವೆಬ್ಸೈಟ್ ಲೋಕಾರ್ಪಣೆಗೊಂಡಿದೆ.
ಕರ್ನಾಟಕದಲ್ಲಿಯೂ ದಲಿತ ಸಂಘಟನೆಗಳು, ರೈತ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು, ಮಹಿಳಾ ಸಂಘಟನೆಗಳು ಹಾಗೂ ಅಲ್ಪಸಂಖ್ಯಾತ ಸಂಘಟನೆಗಳು ಒಟ್ಟುಗೂಡಿ ಪ್ರತಿ ಜಿಲ್ಲೆ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ “ಪ್ರಜಾಪ್ರಭುತ್ವ ಉಳಿವಿಗಾಗಿ ಜನತೆಯ ಮೆರವಣಿಗೆ”ಗೆ ಕರೆ ನೀಡಿದ್ದು, ಎಸ್ಐಆರ್ ವಿರೋಧಿ ಪ್ರತಿಭಟನೆ ನಿಮ್ಮೂರು ಹಾಗೂ ನಿಮ್ಮ ಜಿಲ್ಲೆಯ ಯಾವ ಸ್ಥಳದಲ್ಲಿ ನಡೆಯಲಿದೆ ಎಂಬುದರ ಮಾಹಿತಿಯನ್ನು www.peopleagainstsir.org ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ.
“ಅವರು ನಮ್ಮನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುತ್ತಿದ್ದಾರೆ. ನಮ್ಮದೇ ಧ್ವಜವನ್ನು ಪ್ರದರ್ಶಿಸಿದ್ದಕ್ಕಾಗಿ ನಮ್ಮನ್ನು ಬಂಧಿಸುತ್ತಿದ್ದಾರೆ. ಅಕ್ಟೋಬರ್ 23 ರಂದು, ನಾವು ಪ್ರತಿಯೊಂದು ನಗರದಲ್ಲಿಯೂ, ಪ್ರತಿಯೊಂದು ಬೀದಿಯಲ್ಲಿಯೂ ಜಮಾಯಿಸುತ್ತಿದ್ದೇವೆ. ಇದು ಕೇವಲ ಮನವಿಯಲ್ಲ, ಪ್ರತಿ ಬೀದಿಯೂ ಒಂದು ‘ಜಂತರ್ ಮಂತರ್’ ಆಗಲಿದೆ. ನಿಮಗೆ ಹತ್ತಿರವಿರುವ ಸ್ಥಳವನ್ನು ಕಂಡುಕೊಳ್ಳಿ ಮತ್ತು ನಿಮ್ಮ ಸ್ನೇಹಿತರನ್ನೂ ಜೊತೆಗೆ ಕರೆತನ್ನಿ” ಎಂದು ವೆಬ್ಸೈಟ್ನಲ್ಲಿ ಮನವಿ ಮಾಡಲಾಗಿದೆ.
ಬೇಡಿಕೆಗಳೇನು?
‘ಎಸ್ಐಆರ್’ (SIR) ಅನ್ನು ರದ್ದುಗೊಳಿಸಿ. 2025ರ ಜೂನ್ನಿಂದೀಚೆಗೆ ತಪ್ಪಾಗಿ ಮತದಾರರ ಪಟ್ಟಿಯಿಂದ ತೆಗೆದುಹಾಕಲಾದ ಪ್ರತಿಯೊಬ್ಬ ಮತದಾರರ ಹೆಸರನ್ನು ಮರುಸೇರಿಸಿ.
ಮುಖ್ಯ ಚುನಾವಣಾ ಆಯುಕ್ತರನ್ನು (ಸಿಇಸಿ) ಹೊಣೆಗಾರರನ್ನಾಗಿಸಿ. ಗ್ಯಾನೇಶ್ ಕುಮಾರ್ ಅವರ ಅಧಿಕಾರಾವಧಿಯಲ್ಲಿ ನಡೆದಿರುವ ಘಟನೆಗಳಿಗೆ ಅವರು ಉತ್ತರಿಸಲೇಬೇಕು.
‘ಚುನಾವಣಾ ಆಯುಕ್ತರ ಕಾಯಿದೆ’ಗೆ 2023ರಲ್ಲಿ ತಂದ ತಿದ್ದುಪಡಿಯನ್ನು ರದ್ದುಗೊಳಿಸಿ ಮತ್ತು ಸ್ವತಂತ್ರ ನೇಮಕಾತಿ ಪ್ರಕ್ರಿಯೆಯನ್ನು ಪುನಃಸ್ಥಾಪಿಸಿ.


