ಕಾಂಗ್ರೆಸ್, ಟಿಎಂಸಿ ಮತ್ತು ಎನ್ಸಿಪಿ (ಎಸ್ಪಿ) ಸೇರಿದಂತೆ ವಿರೋಧ ಪಕ್ಷದ ನಾಯಕರು, ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ ಅನ್ನು ಭೇಟಿಯಾಗಿರುವ ಫೋಟೋ ಹಂಚಿಕೊಂಡಿದ್ದು, ಈ ‘ಖಾಸಗಿ ಭೇಟಿ’ ಕುರಿತು ಉತ್ತರ ನೀಡಬೇಕೆಂದು ಒತ್ತಾಯಿಸಿದ್ದಾರೆ.
ವಿರೋಧ ಪಕ್ಷದ ನಾಯಕರು ತಾವು ‘ನಿಯೋಗದ ಭಾಗವಾಗಿ’ ಎಪ್ಸ್ಟೀನ್ ಅವರನ್ನು ಭೇಟಿಯಾಗಿದ್ದಾಗಿ ಪುರಿ ಈ ಹಿಂದೆ ನೀಡಿದ್ದ ಹೇಳಿಕೆಯನ್ನು ಗುರಿಯಾಗಿಸಿಕೊಂಡಿದ್ದಾರೆ.
ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರಿನೇಟ್, “ತಾವು ಎಪ್ಸ್ಟೀನ್ ಅನ್ನು ಎಂದಿಗೂ ‘ಏಕಾಂಗಿಯಾಗಿ’ (ಒನ್-ಆನ್-ಒನ್) ಭೇಟಿಯಾಗಿಲ್ಲ ಎಂಬ ಪುರಿ ಅವರ ಹೇಳಿಕೆಯನ್ನು ಪ್ರಶ್ನಿಸಿದ್ದಾರೆ.
“ಹರ್ದೀಪ್ ಪುರಿ ಅವರು ತಾವು ಎಪ್ಸ್ಟೀನ್ ಅನ್ನು ಎಂದಿಗೂ ಏಕಾಂಗಿಯಾಗಿ ಭೇಟಿಯಾಗಿಲ್ಲ ಎಂದು ಹೇಳಿರಲಿಲ್ಲವೇ? ಮೋದಿ ಅವರು ಎಂತಹ ಜನರನ್ನು ಇಷ್ಟಪಡುತ್ತಾರೆ ಮತ್ತು ತಮ್ಮ ಸುತ್ತಲೂ ಇರಿಸಿಕೊಳ್ಳಲು ಆಯ್ಕೆ ಮಾಡುತ್ತಾರೆ? ಆರ್ಎಸ್ಎಸ್ ಮತ್ತು ಬಲಪಂಥೀಯರು ಮಹಿಳೆಯರನ್ನು ಎಂದಿಗೂ ಗೌರವಿಸಲು ಮತ್ತು ಸಮಾನವಾಗಿ ಕಾಣಲು ಸಾಧ್ಯವಿಲ್ಲ ಎಂಬುದಕ್ಕೆ ನಿಮಗೇನಾದರೂ ಹೆಚ್ಚಿನ ಪುರಾವೆ ಬೇಕೇ?” ಎಂದು ಶ್ರಿನೇಟ್ ಕೇಳಿದ್ದಾರೆ.
“ಎಪ್ಸ್ಟೀನ್ ಪಾಜಿ ತಾವು ಎಪ್ಸ್ಟೀನ್ ಅವರನ್ನು ಕೇವಲ ಒಂದು ನಿಯೋಗದ ಭಾಗವಾಗಿ 3-4 ಬಾರಿ ಮಾತ್ರ ಭೇಟಿಯಾಗಿದ್ದಾಗಿ ನಮಗೆ ತಿಳಿಸಿದ್ದರು. ಈ ಎರಡು ಫೋಟೋಗಳಲ್ಲಿ ಉಳಿದ ಪ್ರತಿನಿಧಿಗಳು ಬಹುಶಃ ಮೇಜಿನ ಕೆಳಗೆ ಅಡಗಿಕೊಂಡಿರಬೇಕು ಎಂದು ಕಾಣುತ್ತದೆ, ಪಾಜಿ,” ಎಂದು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರು ಈ ವರ್ಷದ ಆರಂಭದಲ್ಲಿ ಸಚಿವರು ನೀಡಿದ್ದ ವಿಡಿಯೋ ಹೇಳಿಕೆಯನ್ನು ಹಂಚಿಕೊಳ್ಳುತ್ತಾ ವ್ಯಂಗ್ಯವಾಡಿದ್ದಾರೆ.
ಈ ಫೋಟೋಗಳನ್ನು ‘ಘೋರ ಸಾಕ್ಷ್ಯ’ (ಡ್ಯಾಮ್ನಿಂಗ್) ಎಂದು ಕರೆದಿರುವ ಎನ್ಸಿಪಿ (ಎಸ್ಪಿ) ವಕ್ತಾರ ಅನೀಶ್ ಗಾವಂಡೆ, ಈ ವಿಷಯದ ಕುರಿತು ಸ್ಪಷ್ಟನೆಯನ್ನು ನೀಡಬೇಕೆಂದು ಒತ್ತಾಯಿಸಿದ್ದಾರೆ.
“ಇವು ಅತ್ಯಂತ ಘೋರ ಸಾಕ್ಷ್ಯ ನುಡಿಯುವ ಫೋಟೋಗಳಾಗಿವೆ (ಡ್ಯಾಮ್ನಿಂಗ್ ಫೋಟೋಸ್). ಮಾಜಿ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ರಾಯಭಾರಿಯಾಗಿದ್ದ ಸಾಮರ್ಥ್ಯದಲ್ಲಾಗಿದ್ದರೂ ಸಹ, ಜೆಫ್ರಿ ಎಪ್ಸ್ಟೀನ್ ಅವರನ್ನು ಏಕೆ ಭೇಟಿಯಾಗುತ್ತಿದ್ದರು ಎಂಬುದಕ್ಕೆ ಉತ್ತರ ನೀಡಬೇಕು” ಎಂದು ಗಾವಂಡೆ ಬರೆದುಕೊಂಡಿದ್ದಾರೆ.
“ಭಾರತ ಸರ್ಕಾರವು ಈ ಭೇಟಿಯನ್ನು ‘ರಾಜತಾಂತ್ರಿಕ ಅನಿವಾರ್ಯತೆ’ ಎಂದು ಸಮರ್ಥಿಸಿಕೊಳ್ಳಲು ಪ್ರಯತ್ನಿಸಲಿದೆ ಎಂಬುದನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಆದರೆ, ಈ ಚರ್ಚೆಗಳ ಷರತ್ತುಗಳು ಮತ್ತು ವಿಷಯಗಳನ್ನು ಈಗ ಸಾರ್ವಜನಿಕಗೊಳಿಸಲೇಬೇಕು. ರಾಯಭಾರಿ ಪುರಿ ಅವರಿಗೆ ಎಪ್ಸ್ಟೀನ್ ದ್ವೀಪದ ಯಾವುದೇ ಭೀಕರತೆಗಳ ಬಗ್ಗೆ ತಿಳಿದಿರಲಿಲ್ಲ ಎಂದು ನಾನು ಖಂಡಿತವಾಗಿಯೂ ಆಶಿಸುತ್ತೇನೆ. ಈ ವಿಷಯದಲ್ಲಿ ಅವರು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕೆಂದು ನಾನು ಒತ್ತಾಯಿಸುತ್ತೇನೆ” ಎಂದು ಗಾವಂಡೆ ಹೇಳಿದ್ದಾರೆ.
ಶಿವಸೇನಾ (ಯುಬಿಟಿ) ಸಂಸದ ಸಂಜಯ್ ರಾವತ್ ಅವರು ಪೋಟೋ ಹಂಚಿಕೊಳ್ಳುತ್ತಾ, “ಅವರು (ಪುರಿ) ಈ ಮೀಟಿಂಗ್ನಲ್ಲಿ ಯಾರ ಸಂದೇಶವನ್ನು ಕೊಂಡೊಯ್ಯುತ್ತಿದ್ದಾರೆ?” ಎಂದು ಪ್ರಶ್ನಿಸಿದ್ದಾರೆ.
“ಮೋದಿಜೀ, ಸಚಿವ ಹರ್ದೀಪ್ ಪುರಿ ಅವರು ಜೆಫ್ರಿ ಎಪ್ಸ್ಟೀನ್ ಅವರನ್ನು ಏಕಾಂಗಿಯಾಗಿ ಭೇಟಿಯಾಗುತ್ತಿರುವುದೇಕೆ? ಈ ಸಭೆಯಲ್ಲಿ ಅವರು ಯಾರ ಸಂದೇಶವನ್ನು ಕೊಂಡೊಯ್ಯುತ್ತಿದ್ದಾರೆ? ಇದು ಕೇವಲ ಆರಂಭವಷ್ಟೇ, ಮುಂದೆ ಏನಾಗಲಿದೆಯೋ ನೋಡಿ? ಆರ್ಎಸ್ಎಸ್ ಆಡಳಿತದ ಬದಲಾವಣೆ (ರೆಜೀಮ್ ಚೇಂಜ್) ಖಂಡಿತಾ ಆಗಲಿದೆ! ಜೈ ಹಿಂದ್!” ಎಂದು ಅವರು ರಾವತ್ ಬರೆದುಕೊಂಡಿದ್ದಾರೆ.
ಸಚಿವ ಪುರಿ ಹೇಳಿದ್ದೇನು?
ಐಸಿಎಂ (ಇಂಟರ್ನ್ಯಾಷನಲ್ ಪೀಸ್ ಇನ್ಸ್ಟಿಟ್ಯೂಟ್ನಲ್ಲಿ ಸ್ಥಾಪಿಸಲಾದ ಒಂದು ಯೋಜನೆ) ಸಂಸ್ಥೆಗೆ ಸಂಬಂಧಿಸಿದ ನಿಯೋಗದ ಭಾಗವಾಗಿ, ವೃತ್ತಿಪರ ಸಾಮರ್ಥ್ಯದಲ್ಲಿ ತಾವು ಜೆಫ್ರಿ ಎಪ್ಸ್ಟೀನ್ ಅವರನ್ನು ‘ಮೂರು ಅಥವಾ ಗರಿಷ್ಠ ನಾಲ್ಕು’ ಬಾರಿ ಭೇಟಿಯಾಗಿದ್ದಾಗಿ ಪುರಿ ಅವರು ಫೆಬ್ರವರಿಯಲ್ಲಿ ತಿಳಿಸಿದ್ದರು.
ತಾವು ವಿಶ್ವಸಂಸ್ಥೆಗೆ ಭಾರತದ ರಾಯಭಾರಿಯಾಗಿದ್ದ ಹುದ್ದೆಗೆ ರಾಜೀನಾಮೆ ನೀಡಿದ ನಂತರ ಮತ್ತು 2017ರಲ್ಲಿ ಕೇಂದ್ರ ಸಚಿವ ಸಂಪುಟವನ್ನು ಸೇರುವ ಮೊದಲು ಈ ಭೇಟಿಗಳು ನಡೆದಿದ್ದವು ಎಂದು ಪುರಿ ತಿಳಿಸಿದ್ದಾರೆ. ಎಪ್ಸ್ಟೀನ್ ಅವರೊಂದಿಗಿನ ತಮ್ಮ ಒಡನಾಟವು ಸಂಪೂರ್ಣವಾಗಿ ವೃತ್ತಿಪರವಾಗಿದ್ದು, ಆ ಅಪಖ್ಯಾತ ಉದ್ಯಮಿಯ ಮೇಲಿರುವ ಅಪರಾಧ ಆರೋಪಗಳಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಅವರು ಹೇಳಿದ್ದಾರೆ.
“ಐಪಿಐನಲ್ಲಿ ನನ್ನ ಬಾಸ್ ಆಗಿದ್ದ ಟೆರ್ಜೆ ರೋಡ್-ಲಾರ್ಸೆನ್ ಅವರು ಈ ಅಪಖ್ಯಾತ ವ್ಯಕ್ತಿ ಮಿಷ್ಟರ್ ಎಪ್ಸ್ಟಿನ್ ಅವರನ್ನು ಬಲ್ಲವರಾಗಿದ್ದರು. ಐಪಿಐ ಅಥವಾ ಐಸಿಎಂನ ನಿಯೋಗದ ಭಾಗವಾಗಿಯೇ ನಾನು ಕೆಲವು ಸಂದರ್ಭಗಳಲ್ಲಿ, ಅಂದರೆ ಮೂರು ಅಥವಾ ಗರಿಷ್ಠ ನಾಲ್ಕು ಬಾರಿ ಎಪ್ಸ್ಟೀನ್ ಅವರನ್ನು ಭೇಟಿಯಾಗಿದ್ದೆ” ಎಂದು ಪುರಿ ಹೇಳಿಕೊಂಡಿದ್ದಾರೆ.


