ಕಳೆದ ವಾರ ಪಂಜಾಬ್ನ ಮಾನಸಾ ಜಿಲ್ಲೆಯಲ್ಲಿ ಮೆಡಿಕಲ್ ಶಾಪ್ ಮಾಲೀಕನೊಬ್ಬ 42 ವರ್ಷದ ಮಾದಕವಸ್ತು ವಿರೋಧಿ ಕಾರ್ಯಕರ್ತ (Anti-Drugs Activist’s) ಪರ್ವಿಂದರ್ ಸಿಂಗ್ ಝೋಟಾ ಅವರನ್ನು ಹತ್ಯೆ ಮಾಡಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಮುಖ್ಯಮಂತ್ರಿ ಭಗವಂತ್ ಮಾನ್ ನೇತೃತ್ವದ ಆಮ್ ಆದ್ಮಿ ಪಕ್ಷದ (ಎಎಪಿ) ಸರ್ಕಾರದ ವಿರುದ್ಧದ ರಾಜ್ಯದಾದ್ಯಂತ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿದ್ದು, ಇದನ್ನು ಸರಿಯಾಗಿ ಬಳಸಿಕೊಂಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಂಗಳವಾರ (ಅ.20) ಮಾನಸಾಗೆ ಭೇಟಿ ನೀಡಿ ಮೃತ ಝೋಟಾ ಅವರ ಕುಟುಂಬಸ್ಥರನ್ನು ಭೇಟಿಯಾಗಿದ್ದಾರೆ. ಇತ್ತೀಚೆಗೆ ಗುರುದಾಸ್ಪುರ ಮತ್ತು ಸಂಗ್ರೂರ್ ಜಿಲ್ಲೆಗಳಲ್ಲಿ ಪ್ರಾಣ ಕಳೆದುಕೊಂಡ ಮಾದಕವಸ್ತು ವಿರೋಧಿ ಕಾರ್ಯಕರ್ತರ ಕುಟುಂಬಸ್ಥರನ್ನೂ ಶಾ ಅವರು ಭೇಟಿಯಾಗಿದ್ದಾರೆ.
ಪ್ರತಿಭಟನಾನಿರತ ಜನರು ಮುಖ್ಯಮಂತ್ರಿ ಮಾನ್ ಮತ್ತು ಅವರ ಸರ್ಕಾರದ ಕಲ್ಯಾಣ ಯೋಜನೆಗಳ ಹೋರ್ಡಿಂಗ್ಗಳನ್ನು (ಬ್ಯಾನರ್ಗಳನ್ನು) ಹರಿದು ಹಾಕಿದ್ದಾರೆ. ಎಎಪಿ ಸರ್ಕಾರದ 92 ಶಾಸಕರಿಗೆ ‘ಖಂಡನಾ ಪತ್ರಗಳನ್ನು’ ಹಸ್ತಾಂತರಿಸಲು ಯೋಜಿಸಿದ್ದಾರೆ.
ಮಾನಸಾದಲ್ಲಿ ‘ಶಹೀದ್ ಭಾಯಿ ಪರ್ವಿಂದರ್ ಸಿಂಗ್ ಝೋಟಾ ಇನ್ಸಾಫ್ ಮೋರ್ಚಾ’ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸ್ಥಳೀಯರು, ರೈತ ಸಂಘಟನೆಗಳು, ಗ್ರಾಮ ಪಂಚಾಯತಿಗಳು, ಸಿಖ್ ಸಂಸ್ಥೆಗಳು, ಯುವ ಸಂಘಟನೆಗಳು, ಸಾಮಾಜಿಕ ಗುಂಪುಗಳು, ಎನ್ಜಿಒಗಳು ಮತ್ತು ಪ್ರದೇಶದ ನಿವೃತ್ತ ಸೈನಿಕರು ಸೇರಿದಂತೆ ನಾಗರಿಕ ಸಮಾಜದ ಸದಸ್ಯರು ಭಾಗವಹಿಸಿದ್ದರು. ಝೋಟಾ ಅವರ ತಂದೆ ಭೀಮ್ ಸಿಂಗ್ ಕೂಡ ಒಬ್ಬ ನಿವೃತ್ತ ಸೈನಿಕರಾಗಿದ್ದಾರೆ.
ಝೋಟಾ ಅವರು ಜನಪ್ರಿಯ ಮಾದಕವಸ್ತು ವಿರೋಧಿ ಕಾರ್ಯಕರ್ತರಾಗಿದ್ದರು. ಅವರ ಕೊಲೆಗಾರ, ಮೆಡಿಕಲ್ ಶಾಪ್ ಮಾಲೀಕ ಅಶ್ವನಿ ಕುಮಾರ್ನನ್ನು ರಾಜಸ್ಥಾನದಲ್ಲಿ ಬಂಧಿಸಲಾಗಿದೆ. ಝೋಟಾ ಅವರ ಕುಟುಂಬದವರು ಇನ್ನು ಕೂಡ ಅವರ ಅಂತ್ಯಸಂಸ್ಕಾರವನ್ನು ಮಾಡಿಲ್ಲ, ಮತ್ತು ಮುಖ್ಯಮಂತ್ರಿ ಮಾನ್ ಹಾಗೂ ಪಂಜಾಬ್ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಗೌರವ್ ಯಾದವ್ ಅವರು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಮುಖ್ಯಮಂತ್ರಿ ಮಾನ್, ಝೋಟಾ ಅವರ ಕೊಲೆ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಲು ಶಿಫಾರಸು ಮಾಡಿದ್ದಾರೆ. ಇದು ಝೋಟಾ ಕುಟುಂಬಸ್ಥರ ಪ್ರಮುಖ ಬೇಡಿಕೆಗಳಲ್ಲಿ ಒಂದಾಗಿತ್ತು.
ಆರಂಭದಲ್ಲಿ, ಝೋಟಾ ಅವರ ತಂದೆ ಭೀಮ್ ಸಿಂಗ್ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಭೇಟಿಯನ್ನು ಸ್ವಾಗತಿಸಿದ್ದರು. “ತಮ್ಮ ಕುಟುಂಬ ಮತ್ತು ಬೆಂಬಲಿಗರು ಅಮಿತ್ ಶಾ ಅವರ ಭೇಟಿಯನ್ನು ವಿರೋಧಿಸುವುದಿಲ್ಲ ಎಂದು ಅಕ್ಟೋಬರ್ 19ರಂದು ಭೀಮ್ ಸಿಂಗ್ ಹೇಳಿದ್ದರು. ‘ಕೇಂದ್ರ ಗೃಹ ಸಚಿವರ ಭೇಟಿಯನ್ನು ಯಾರೂ ವಿರೋಧಿಸುವುದಿಲ್ಲ, ಆದರೆ ನನ್ನ ಮಗನ ಪ್ರಕರಣದಲ್ಲಿ ನಾವು ನ್ಯಾಯವನ್ನು ನಿರೀಕ್ಷಿಸುತ್ತೇವೆ’ ಎಂದು ಅವರು ತಿಳಿಸಿದ್ದರು.
ಆದರೆ, ‘ಶಹೀದ್ ಭಾಯಿ ಪರ್ವಿಂದರ್ ಸಿಂಗ್ ಝೋಟಾ ಇನ್ಸಾಫ್ ಮೋರ್ಚಾ’ದ ಸದಸ್ಯರ ಜೊತೆಗೆ ನಾಗರಿಕ ಸಮಾಜದ ಅನೇಕರು ಈ ನಿರ್ಧಾರವನ್ನು ವಿರೋಧಿಸಿದ್ದರು. ಮಾದಕವಸ್ತುಗಳ ಒಳಹರಿವಿಗೆ ಹೆಸರಾಗಿರುವ ಭಾರತ-ಪಾಕಿಸ್ತಾನ ಗಡಿಯ 50 ಕಿಲೋಮೀಟರ್ ಪ್ರದೇಶವು ಗಡಿ ಭದ್ರತಾ ಪಡೆ (ಬಿಎಸ್ಎಫ್) ಮತ್ತು ಕೇಂದ್ರ ಗೃಹ ಸಚಿವಾಲಯದ ನಿಯಂತ್ರಣದಲ್ಲಿದೆ ಎಂದು ಅವರು ಹೇಳಿದ್ದರು.
“ಹರಿಯಾಣ, ರಾಜಸ್ಥಾನ ಮತ್ತು ಗುಜರಾತ್ನಲ್ಲಿ ಬಿಜೆಪಿ ಸರ್ಕಾರಗಳಿವೆ. ಹಾಗಿದ್ದ ಮೇಲೆ ಮಾದಕವಸ್ತುಗಳು ಎಲ್ಲಿಂದ ಬರುತ್ತಿವೆ? ನಾವು ಪಂಜಾಬ್ನಲ್ಲಿ ಮಾದಕವಸ್ತುಗಳನ್ನು ತಯಾರಿಸುತ್ತಿದ್ದೇವಾ?” ಎಂದು ಮೋರ್ಚಾದ ಸದಸ್ಯರೊಬ್ಬರು ಪ್ರಶ್ನಿಸಿದ್ದಾರೆ.
ಸೆಪ್ಟೆಂಬರ್ 20ರಂದು ಜಲಂಧರ್ನಲ್ಲಿ ನಡೆದ ತಮ್ಮ ರ್ಯಾಲಿಯಲ್ಲಿ ಅಮಿತ್ ಶಾ ಅವರು, “ಮುಂಬರುವ 2027ರ ಪಂಜಾಬ್ ವಿಧಾನಸಭೆ ಚುನಾವಣೆಯನ್ನು ಬಿಜೆಪಿ ಕೇವಲ ಮಾದಕವಸ್ತುಗಳ ಸಮಸ್ಯೆಯನ್ನೇ ಪ್ರಮುಖ ಅಸ್ತ್ರವಾಗಿಸಿಕೊಂಡು ಸ್ಪರ್ಧಿಸಲಿದೆ” ಎಂದು ಘೋಷಿಸಿದ್ದರು.
ಈ ಹಿಂದಿನವರಂತೆಯೇ.. ಅಮಿತ್ ಶಾ ಕೂಡ ಎರಡು ವರ್ಷಗಳಲ್ಲಿ ಪಂಜಾಬ್ನಿಂದ ಮಾದಕವಸ್ತುಗಳನ್ನು ನಿರ್ಮೂಲನೆ ಮಾಡುವುದಾಗಿ ಘೋಷಿಸಿದ್ದರು. “ನಾವು ಡಿಸೆಂಬರ್ 2029ರ ವೇಳೆಗೆ ಪಂಜಾಬ್ನಿಂದ ಮಾದಕವಸ್ತುಗಳನ್ನು ಸಂಪೂರ್ಣವಾಗಿ ತೊಡೆದುಹಾಕುತ್ತೇವೆ. ನಮಗೆ ಒಂದು ಅವಕಾಶ ಕೊಡಿ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಾವು ಅಧಿಕಾರಕ್ಕೆ ಬಂದರೆ, ಪ್ರತಿಯೊಬ್ಬ ಮಾದಕವಸ್ತು ದಂಧೆಕೋರನನ್ನು ಜೈಲಿಗಟ್ಟುತ್ತೇವೆ ಮತ್ತು ಪಂಜಾಬ್ ಅನ್ನು ಮಾದಕವಸ್ತು ಮುಕ್ತ ರಾಜ್ಯವನ್ನಾಗಿ ಮಾಡುತ್ತೇವೆ” ಎಂದು ಹೇಳಿದ್ದರು.
ಮಾರ್ಚ್ 2025ರಲ್ಲಿ ಮಾನ್ ಸರ್ಕಾರ ಪ್ರಾರಂಭಿಸಿದ ಮಾದಕವಸ್ತು ವಿರೋಧಿ ಅಭಿಯಾನವಾದ ‘ಯುದ್ಧ್ ನಶೆಯಾ ವಿರುಧ್’ ಅನ್ನು ನಕಲಿ ಮತ್ತು ವಿಫಲ ಅಭಿಯಾನ ಎಂದು ಕರೆದ ಎಡಪಂಥೀಯ ಯುವ ಸಂಘಟನೆ ‘ನೌಜವಾನ್ ಭಾರತ್ ಸಭಾ’ದ ರಾಜ್ಯಾಧ್ಯಕ್ಷ ಮಂಗಾ ಸಿಂಗ್ ಆಜಾದ್, ಮಾನ್ ಮತ್ತು ಅವರ ಎಎಪಿ ಸರ್ಕಾರ ಸಾರ್ವಜನಿಕ ಹಣವನ್ನು ಪೋಲು ಮಾಡಿ ಹೋರ್ಡಿಂಗ್ಗಳನ್ನು ಹಾಕುತ್ತಿದ್ದಾರೆ ಎಂದು ಹೇಳಿದ್ದಾರೆ.
“ಹೊಸದಾಗಿ ಅಳವಡಿಸಲಾದ ಗೋಡೆ ಗಾತ್ರದ ಹಲವು ಹೋರ್ಡಿಂಗ್ಗಳಲ್ಲಿ ‘ಇಮಾನ್ದಾರ್ ಸಿಎಂ’ (ಪ್ರಾಮಾಣಿಕ ಮುಖ್ಯಮಂತ್ರಿ) ಎಂದು ಬರೆಯಲಾಗಿದ್ದು, ಅವುಗಳಲ್ಲಿದ್ದ ಮಾನ್ ಅವರ ಮುಖಗಳಿಗೆ ಮಸಿ ಬಳಿಯಲಾಗಿದೆ. ಕೆಲವು ಹೋರ್ಡಿಂಗ್ಗಳಲ್ಲಿ ಪ್ರತಿಭಟನಾಕಾರರು ‘ಇಮಾನ್ದಾರ್’ ಎಂಬ ಪದವನ್ನು ಅಳಿಸಿ ಅದರ ಜಾಗದಲ್ಲಿ ‘ಬೇಮಾನ್’ (ಅಪ್ರಾಮಾಣಿಕ) ಎಂದು ಬರೆದಿದ್ದಾರೆ ಎಂದು ಆಜಾದ್ ಹೇಳಿದ್ದಾರೆ. ಈ ಸಂಬಂಧ ಪಂಜಾಬ್ ಪೊಲೀಸರು ಫರೀದ್ಕೋಟ್ನಲ್ಲಿ ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
“ಅವರು ಎಫ್ಐಆರ್ ದಾಖಲಿಸಲಿ, ನಾವು ಅವರ ಪೋಸ್ಟರ್ಗಳನ್ನು ತೆಗೆದುಹಾಕುವುದನ್ನು ಮತ್ತು ಅವರ ಮುಖವಾಡ ಕಳಚುವುದನ್ನು ಮುಂದುವರಿಸುತ್ತೇವೆ” ಎಂದು ಆಜಾದ್ ಹೇಳಿದ್ದಾರೆ.
“ಯುವ ಮಾದಕವಸ್ತು ವಿರೋಧಿ ಕಾರ್ಯಕರ್ತನನ್ನು ಹಗಲೊತ್ತಿನಲ್ಲೇ ಕೊಲೆ ಮಾಡಲಾಗಿದೆ. ಆದರೆ ಮುಖ್ಯಮಂತ್ರಿ ಮಾನ್ ಅವರು ಅಗಲಿದ ಕುಟುಂಬಕ್ಕೆ ಸಾಂತ್ವನ ಹೇಳುವ ಬದಲು ತಮ್ಮ ಪ್ರಚಾರದ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಎಎಪಿ ಪಕ್ಷವು ಸಾರ್ವಜನಿಕರಿಂದ ಮತ್ತಷ್ಟು ಆಕ್ರೋಶವನ್ನು ಎದುರಿಸಬೇಕಾಗುತ್ತದೆ” ಎಂದು ಆಜಾದ್ ಹೇಳಿರುವುದಾಗಿ thewire.in ವರದಿ ಮಾಡಿದೆ.
ಬ್ಯಾನರ್ ಹರಿದ ಸಂಬಂಧ ಪಂಜಾಬ್ ವಿದ್ಯಾರ್ಥಿ ಒಕ್ಕೂಟದ ನೌನಿಹಾಲ್ ಸಿಂಗ್ ಮತ್ತು ಹರ್ವೀರ್ ಕೌರ್ ಗಂಡಲ್ ಹಾಗೂ ಫರೀದ್ಕೋಟ್ನ ಸುಖ್ದೀಪ್ ಸಿಂಗ್ ಭಾಮ್ ವಿರುದ್ಧ ‘ಪಂಜಾಬ್ ಸಾರ್ವಜನಿಕ ಮತ್ತು ಖಾಸಗಿ ಆಸ್ತಿ ಹಾನಿ ತಡೆ ಕಾಯ್ದೆ 2014’ ರ ಸೆಕ್ಷನ್ 4 ಮತ್ತು ‘ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) 2023’ ರ ಸೆಕ್ಷನ್ 324(4) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ತಮ್ಮ ವಿರುದ್ಧವೂ ಎಫ್ಐಆರ್ ದಾಖಲಿಸುವಂತೆ ಝೋಟಾ ಅವರ ತಂದೆ ಭೀಮ್ ಸಿಂಗ್ ಎಎಪಿ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ನಾನು ಮಾನಸಾದಲ್ಲಿ ಎಎಪಿ ಪಕ್ಷದ ಹೋರ್ಡಿಂಗ್ಗಳನ್ನು ಹರಿದು ಹಾಕುತ್ತೇನೆ. ನನ್ನ ಮೇಲೂ ಎಫ್ಐಆರ್ ದಾಖಲಿಸುವಂತೆ ಮುಖ್ಯಮಂತ್ರಿ ಮಾನ್ ಅವರಿಗೆ ಸವಾಲು ಹಾಕುತ್ತೇನೆ. ಈ ಎಫ್ಐಆರ್ಗಳನ್ನು ರದ್ದುಗೊಳಿಸುವವರೆಗೆ ನಮ್ಮ ಪ್ರತಿಭಟನೆ ಮುಂದುವರಿಯುತ್ತದೆ” ಎಂದು ಹೇಳಿದ್ದಾರೆ.
ಪಂಜಾಬ್ ವಿದ್ಯಾರ್ಥಿ ಒಕ್ಕೂಟದ ಜಿಲ್ಲಾಧ್ಯಕ್ಷೆ ಹರ್ವೀರ್ ಕೌರ್ ಗಂಡಲ್ ಅವರು ಫರೀದ್ಕೋಟ್ನ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್ಪಿ) ತರ್ಲೋಚನ್ ಸಿಂಗ್ ಅವರೊಂದಿಗೆ ವಾಗ್ವಾದ ನಡೆಸುತ್ತಿರುವ ವೀಡಿಯೊ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆ ವೀಡಿಯೊದಲ್ಲಿ, ಕರ್ತವ್ಯದಲ್ಲಿದ್ದ ಡಿಎಸ್ಪಿಯವರು ಹರ್ವೀರ್ ಮತ್ತು ಇತರ ಯುವಕರು ಹೋರ್ಡಿಂಗ್ಗಳನ್ನು ಹರಿದು ಹಾಕದಂತೆ ತಡೆಯುತ್ತಿರುವುದು ಕಂಡುಬಂದಿದೆ.
ನಾವು ಎಫ್ಐಆರ್ಗಳಿಗೆ ಮತ್ತು ಎಎಪಿ ಸರ್ಕಾರದ ಬೆದರಿಕೆ ತಂತ್ರಗಳಿಗೆ ಹೆದರುವುದಿಲ್ಲ ಎಂದು ಗಂಡಲ್ ಹೇಳಿದ್ದಾರೆ.
ಅ.19ರಂದು, ಶಹೀದ್ ಭಾಯಿ ಪರ್ವಿಂದರ್ ಸಿಂಗ್ ಝೋಟಾ ಇನ್ಸಾಫ್ ಮೋರ್ಚಾ, ರೈತ ಸಂಘಟನೆಗಳು ಮತ್ತು ನಾಗರಿಕ ಸಮಾಜದ ಸದಸ್ಯರು ಪಂಜಾಬ್ನ ಎಎಪಿ ಸರ್ಕಾರದ ಎಲ್ಲಾ 92 ಶಾಸಕರಿಗೆ ‘ಖಂಡನಾ ಪತ್ರಗಳನ್ನು’ ಹಸ್ತಾಂತರಿಸಲು ಅವರ ಮನೆಗಳ ಹೊರಗೆ ಜಮಾಯಿಸಿದ್ದರು.
ಖಂಡನಾ ಪತ್ರದಲ್ಲಿ, ಭೀಮ್ ಸಿಂಗ್ ನೇತೃತ್ವದ ಮೋರ್ಚಾ ಸದಸ್ಯರು, “ನೀವು ಜನರ ಮತಗಳನ್ನು ಪಡೆದು ವಿಧಾನಸಭೆಯನ್ನು ತಲುಪಿದ್ದೀರಿ. ಜನರು ನಿಮ್ಮನ್ನು ತಮ್ಮ ಧ್ವನಿಯನ್ನಾಗಿ ಅಲ್ಲಿಗೆ ಕಳುಹಿಸಿಕೊಟ್ಟಿದ್ದರೇ ಹೊರತು, ಮಾದಕವಸ್ತು ದಂಧೆಕೋರರಿಗೆ ಆಶ್ರಯ ನೀಡಲು ಮತ್ತು ಅವರನ್ನು ರಕ್ಷಿಸುತ್ತಿರುವವರ ಮುಂದೆ ಮೌನವಾಗಿರಲು ಅಲ್ಲ. ಮಾದಕವಸ್ತು ವಿರೋಧಿ ಕಾರ್ಯಕರ್ತನ ಭೀಕರ ಹತ್ಯೆಯಾಗಿದ್ದರೂ ತನ್ನದೇ ಸರ್ಕಾರವನ್ನು ಹೊಣೆಗಾರರನ್ನಾಗಿ ಮಾಡಲು ಸಾಧ್ಯವಾಗದ ಶಾಸಕನು, ಜನರ ಪ್ರತಿನಿಧಿಯಾಗಲು ಅರ್ಹನಲ್ಲ. ನಿಮ್ಮ ಈ ಮೌನವನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ” ಎಂದು ಬರೆದಿದ್ದಾರೆ.
“ಖಂಡನಾ ಪತ್ರವು “ನೀವು ಹುತಾತ್ಮನ ಕುಟುಂಬ ಮತ್ತು ಮಾದಕವಸ್ತು ಪೀಡಿತ ಪಂಜಾಬ್ನ ಜನರೊಂದಿಗೆ ನಿಂತಿದ್ದೀರಾ ಅಥವಾ ಮಾದಕವಸ್ತು ಪೂರೈಕೆದಾರರು ಮತ್ತು ಅವರ ರಕ್ಷಕರೊಂದಿಗೆ ನಿಂತಿದ್ದೀರಾ?” ಎಂಬ ಪ್ರಶ್ನೆಯೊಂದಿಗೆ ಕೊನೆಗೊಂಡಿದೆ.
“ನಿಮ್ಮ ನಿಲುವನ್ನು ಸಾರ್ವಜನಿಕವಾಗಿ ಸ್ಪಷ್ಟಪಡಿಸಿ” ಎಂದು ಪತ್ರದಲ್ಲಿ ಆಗ್ರಹಿಸಲಾಗಿದೆ ಹಾಗೂ ತಮ್ಮ ಬೇಡಿಕೆಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ವಿಧಾನಸಭೆಯಲ್ಲಿ ಅಂಗೀಕರಿಸಬೇಕೆಂದು ಒತ್ತಾಯಿಸಲಾಗಿದೆ. “ನೀವು ಈಗಲೂ ಮೌನವಾಗುಳಿದರೆ, ಪಂಜಾಬ್ನ ಜನರು ನಿಮ್ಮ ಈ ಮೌನವನ್ನು ಇತಿಹಾಸದಲ್ಲಿ ಒಂದು ಅಪರಾಧ ಎಂದು ದಾಖಲಿಸುತ್ತಾರೆ. ಮತ್ತು ನಮ್ಮ ಪ್ರತಿಭಟನೆ ಮತ್ತಷ್ಟು ತೀವ್ರಗೊಳ್ಳಲಿದೆ” ಎಂದು ಖಂಡನಾ ಪತ್ರದಲ್ಲಿ ಬರೆಯಲಾಗಿದೆ.
ಸಿಬಿಐ ತನಿಖೆಯಲ್ಲದೆ ಇತರ ಬೇಡಿಕೆಗಳ ಪೈಕಿ, ಝೋಟಾ ಅವರ ಶವಪರೀಕ್ಷೆಯನ್ನು (ಪೋಸ್ಟ್ಮಾರ್ಟಮ್) ಚಂಡೀಗಢದ ಪೋಸ್ಟ್ ಗ್ರಾಜುಯೇಟ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (PGIMER) ನಲ್ಲಿ ನಡೆಸಬೇಕು ಎಂಬುದು ಒಂದಾಗಿದೆ. ಇದರೊಂದಿಗೆ, ಫಾಸ್ಟ್ ಟ್ರ್ಯಾಕ್ (ಶೀಘ್ರ ಗತಿ) ನ್ಯಾಯಾಲಯದ ಮೂಲಕ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಮೋರ್ಚಾ ಒತ್ತಾಯಿಸಿದೆ.
ಎಎಪಿ ಪಕ್ಷದ ಯಾವುದೇ ಶಾಸಕರು ಅಥವಾ ಸಚಿವರು ಖಂಡನಾ ಪತ್ರಗಳನ್ನು ಸ್ವೀಕರಿಸಲು ತಮ್ಮ ಮನೆಗಳಿಂದ ಹೊರಗೆ ಬಂದಿಲ್ಲ. ಶಾಸಕರ ಮನೆಗಳ ಹೊರಗೆ ಭಾರಿ ಪ್ರಮಾಣದ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿತ್ತು. ಮುಖ್ಯಮಂತ್ರಿ ಮಾನ್ ಅವರ ಸ್ವಂತ ಕ್ಷೇತ್ರವಾದ ಸಂಗ್ರೂರ್ ಸೇರಿದಂತೆ ರೋಪರ್, ಪಟಿಯಾಲ ಮತ್ತು ಫಿರೋಜ್ಪುರದ ಜಿರಾಗಳಲ್ಲಿ ನಾಗರಿಕ ಸಮಾಜದ ಸದಸ್ಯರು ಮತ್ತು ಪೊಲೀಸರ ನಡುವೆ ಸಂಘರ್ಷ ನಡೆದಿರುವುದಾಗಿ ವರದಿಯಾಗಿದೆ.
ಉದ್ರಿಕ್ತ ಪ್ರತಿಭಟನಾಕಾರರು ಪಂಜಾಬ್ ವಿಧಾನಸಭೆಯ ಸ್ಪೀಕರ್ ಕುಲ್ತಾರ್ ಸಿಂಗ್ ಸಂಧ್ವಾನ್ ಅವರ ಮನೆಯ ಹೊರಗೆ ಖಂಡನಾ ಪತ್ರಗಳ ಪ್ರತಿಗಳನ್ನು ಅಂಟಿಸಿದ್ದಾರೆ.
ಬಟಿಂಡಾದ ಮೌರ್ ಕ್ಷೇತ್ರದ ಅಮಾನತುಗೊಂಡ ಎಎಪಿ ಶಾಸಕ ಸುಖ್ವೀರ್ ಸಿಂಗ್ ಮೈಸೇರಖಾನಾ ಅವರು ಖಂಡನಾ ಪತ್ರವನ್ನು ಸ್ವೀಕರಿಸಿದ್ದಲ್ಲದೆ, ತಮ್ಮ ಪಕ್ಷದ ತಪ್ಪನ್ನು ಒಪ್ಪಿಕೊಂಡಿದ್ದಾರೆ.
ತಮ್ಮ ಕ್ಷೇತ್ರದಲ್ಲಿ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯ ವಿರುದ್ಧ ಧ್ವನಿ ಎತ್ತಿದ ನಂತರ, ಎಎಪಿ ಪಕ್ಷವು ಅ. 3ರಂದು ಮೈಸೇರಖಾನಾ ಅವರನ್ನು ಪಕ್ಷ ವಿರೋಧಿ ಚಟುವಟಿಕೆಯ ಕಾರಣ ನೀಡಿ ಉಚ್ಚಾಟಿಸಿತ್ತು. ಮೈಸೇರಖಾನಾ ಅವರು ಪಂಜಾಬ್ನಲ್ಲಿ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಯಲ್ಲಿ ಓದಿಸುತ್ತಿರುವ ಏಕೈಕ ಶಾಸಕರಾಗಿದ್ದಾರೆ.
ಮಾನಸಾದಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಿರುವ ಬಿಕೆಯು ಏಕತಾ (ಉಗ್ರಹನ್) ರೈತ ಸಂಘಟನೆಯು, ನ್ಯಾಯವನ್ನು ಖಾತ್ರಿಪಡಿಸಲು ಕೆಲವು ಕ್ರಮಗಳನ್ನು ಸೂಚಿಸಿದೆ.
ಎಎಪಿ ಸರ್ಕಾರದ ‘ಯುದ್ಧ್ ನಶೆಯಾ ವಿರುಧ್’ ಅಭಿಯಾನವನ್ನು ‘ಯುದ್ಧ್ ಲೋಕಾ ವಿರುಧ್’ (ಜನರ ವಿರುದ್ಧದ ಯುದ್ಧ) ಎಂದು ಕರೆದಿರುವ ಬಿಕೆಯು ಏಕತಾ (ಉಗ್ರಹನ್) ಸಂಘಟನೆಯು ಮತ್ತು ಅದರ ಅಧ್ಯಕ್ಷ ಜೋಗಿಂದರ್ ಸಿಂಗ್ ಉಗ್ರಹನ್, ಸರ್ಕಾರವು ಈ ಅಭಿಯಾನವನ್ನು ತಕ್ಷಣವೇ ನಿಲ್ಲಿಸಬೇಕು ಮತ್ತು ಮಾದಕವಸ್ತು ಪೂರೈಕೆದಾರರ ಜಾಲವನ್ನು ಬಯಲಿಗೆಳೆಯಲು ಕೆಲಸ ಮಾಡಬೇಕು ಎಂದು ಹೇಳಿದ್ದಾರೆ. “ಆರೋಪಿಗಳಿಂದ ಮಾದಕವಸ್ತುವಿನ ಕಪ್ಪು ಹಣವನ್ನು ವಶಪಡಿಸಿಕೊಂಡು, ಅಂತಹ ಮಾದಕವಸ್ತು ದಂಧೆಕೋರರ ಕೈಯಿಂದ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ಅದನ್ನು ಹಸ್ತಾಂತರಿಸಬೇಕು” ಎಂದು ಉಗ್ರಹನ್ ಆಗ್ರಹಿಸಿದ್ದಾರೆ.
ಬಿಕೆಯು ಏಕತಾ (ಉಗ್ರಹನ್) ಮುಖಂಡರು ಮಾತನಾಡಿ, ಝೋಟಾ ಅವರ ಕೊಲೆಗಾರರಿಗೆ ಮಾದರಿ ಶಿಕ್ಷೆಯನ್ನು ವಿಧಿಸಬೇಕೆಂದು ಒತ್ತಾಯಿಸುವುದರ ಜೊತೆಗೆ, ಮಾದಕವಸ್ತುಗಳ ಪಿಡುಗನ್ನು ನಿಯಂತ್ರಿಸುವ ಉದ್ದೇಶವನ್ನೂ ಈ ಪ್ರತಿಭಟನೆ ಹೊಂದಿದೆ ಎಂದು ಹೇಳಿದ್ದಾರೆ. “ಝೋಟಾ ಅವರ ಕುಟುಂಬಕ್ಕೆ 2 ಕೋಟಿ ರೂಪಾಯಿ ಪರಿಹಾರ ನೀಡಬೇಕು” ಎಂದು ಅವರು ಒತ್ತಾಯಿಸಿದ್ದಾರೆ.
ಮಾದಕವಸ್ತು ವ್ಯಸನಕ್ಕೆ ಬಲಿಯಾದ ಸಂತ್ರಸ್ತರನ್ನು ಗುರಿ ಮಾಡುವುದನ್ನು ನಿಲ್ಲಿಸುವಂತೆ ಮತ್ತು ಅವರ ಪುನರ್ವಸತಿಗಾಗಿ ಸೂಕ್ತ ನೀತಿಯನ್ನು ರೂಪಿಸುವಂತೆ ಅವರು ಎಎಪಿ ಸರ್ಕಾರವನ್ನು ಆಗ್ರಹಿಸಿದ್ದಾರೆ.
ತಮ್ಮ ಕಲ್ಯಾಣ ಯೋಜನೆಗಳ ಪೋಸ್ಟರ್ಗಳನ್ನು ಹರಿದು ಹಾಕುವವರ ವಿರುದ್ಧ ಎಫ್ಐಆರ್ ದಾಖಲಿಸುವ ಎಎಪಿ ಪಕ್ಷದ ಕ್ರಮದ ಕುರಿತು ಪ್ರತಿಕ್ರಿಯಿಸಿದ ರಾಜಕೀಯ ವಿಶ್ಲೇಷಕ ಮಾಲ್ವಿಂದರ್ ಜಿತ್ ಸಿಂಗ್ ಮಾಲಿ, ಎಎಪಿ ಪಕ್ಷವು ಬೆಂಕಿಯೊಂದಿಗೆ ಸರಸವಾಡುತ್ತಿದೆ ಎಂದು ಹೇಳಿದ್ದಾರೆ. “ಎಎಪಿ ತಪ್ಪು ವಿಧಾನವನ್ನು ಅನುಸರಿಸುತ್ತಿದೆ. ಈ ಬಿಕ್ಕಟ್ಟನ್ನು ತಾಳ್ಮೆಯಿಂದ ನಿಭಾಯಿಸುವ ಬದಲು, ಮುಖ್ಯಮಂತ್ರಿ ಮಾನ್ ನೇತೃತ್ವದ ಎಎಪಿ ಸರ್ಕಾರವು ರಾಜ್ಯದಲ್ಲಿ ಅರಾಜಕತೆಯನ್ನು ಹರಡುತ್ತಿದೆ” ಎಂದು ಅವರು ಟೀಕಿಸಿದ್ದಾರೆ.
“ಎಎಪಿ ಸರ್ಕಾರವು ಮಾದಕವಸ್ತು ಸಮಸ್ಯೆಯನ್ನು ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಯಾಗಿ ನಿಭಾಯಿಸುತ್ತಿದೆ, ಆದರೆ ವಾಸ್ತವವಾಗಿ ಇದು ಒಂದು ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಸಮಸ್ಯೆಯಾಗಿದೆ. ಎಎಪಿ ಪಕ್ಷವು ಸಾರ್ವಜನಿಕರ ಆಕ್ರೋಶವನ್ನು ಎದುರಿಸುತ್ತಿದೆ, ಆದರೆ ಇದನ್ನು ಅರ್ಥಮಾಡಿಕೊಳ್ಳುವ ಬದಲು ಅವರು ಅದರ ಪ್ರಚಾರದಲ್ಲೇ ಬ್ಯುಸಿಯಾಗಿದ್ದಾರೆ” ಎಂದು ಮಾಲಿ ಹೇಳಿದ್ದಾರೆ.


