ಗಾಯಕಿ ಹಾಗೂ ಹೋರಾಟಗಾರ್ತಿ ನೇಹಾ ಸಿಂಗ್ ರಾಥೋರ್ ಬಗ್ಗೆ ಎಬಿಪಿ ನ್ಯೂಸ್ ಸುಳ್ಳು ಹಾಗೂ ಅವಹೇಳನಕಾರಿ ಸುದ್ದಿ ಪ್ರಸಾರ ಮಾಡಿರುವುದಕ್ಕೆ ಸಂಬಂಧಪಟ್ಟಂತೆ ರಾಷ್ಟ್ರೀಯ ಮಹಿಳಾ ಆಯೋಗ (ಎನ್ಸಿಡಬ್ಲ್ಯು) ಸ್ವಯಂಪ್ರೇರಿತವಾಗಿ ಪ್ರಕರಣ ಕೈಗೆತ್ತಿಕೊಂಡಿದೆ.
ಎಬಿಪಿ ನ್ಯೂಸ್ ಇತ್ತೀಚೆಗೆ ನೇಹಾ ಸಿಂಗ್ ಅವರ ಹೆಸರನ್ನು ವೇಶ್ಯಾವಾಟಿಕೆ ಜಾಲದೊಂದಿಗೆ ಲಿಂಕ್ ಮಾಡಿ ಸುಳ್ಳು ಸುದ್ದಿಯೊಂದನ್ನು ಪ್ರಸಾರ ಮಾಡಿತ್ತು. ಈ ವರದಿಯು ಮಹಿಳೆಯ ಘನತೆಗೆ ಧಕ್ಕೆ ತರುವಂತಹದ್ದಾಗಿದ್ದು, ನೇಹಾ ಅವರ ಚಾರಿತ್ರ್ಯ ಹರಣಕ್ಕೆ ಯತ್ನಿಸಲಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
ನೇಹಾ ಸಿಂಗ್ ಕೂಡ ಎಬಿಪಿ ನ್ಯೂಸ್ ಸಂಪಾದಕನಿಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡ ವಿಡಿಯೋ ಹಂಚಿಕೊಂಡಿದ್ದರು. ಸುಳ್ಳು ಸುದ್ದಿ ಹಬ್ಬಿದ್ದಕ್ಕೆ ಎಬಿಪಿ ಕ್ಷಮೆ ಕೋರಿದ್ದ ಬಗ್ಗೆ ಪ್ರತಿಕ್ರಿಯಿಸಿದ್ದ ನೇಹಾ, “ಕ್ಷಮೆ ಕೇಳುವುದರಿಂದ ಏನು ಪ್ರಯೋಜನ, ದಲ್ಲಾಳಿ ಎಬಿಪಿ ನ್ಯೂಸ್? ನೀವು ಹರಡಿದ ವದಂತಿಗಳು ಹಾಗೆಯೇ ಮಾಯವಾಗಿಬಿಡುತ್ತವೆಯೇ? ಎಂದು ಪ್ರಶ್ನಿಸಿದ್ದರು. “ನನ್ನ ಘನತೆಗೆ ಆದ ಅವಮಾನಕ್ಕೆ ಯಾವುದೇ ಕ್ಷಮೆ ಇಲ್ಲ. ನ್ಯಾಯಾಲಯದಲ್ಲಿ ನೋಡೋಣ” ಎಂದು ಹೇಳಿದ್ದರು.
ತನ್ನ ವಿರುದ್ದ ಸುಳ್ಳು ಸುದ್ದಿ ಘನತೆಗೆ ಚ್ಯುತಿ ತಂದ ಎಬಿಪಿ ನ್ಯೂಸ್ ವಿರುದ್ದ ಕ್ರಮ ಕೈಗೊಳ್ಳುವಂತೆ ನೇಹಾ ಸಾಮಾಜಿಕ ಜಾಲತಾಣಗಳ ಮೂಲಕ ರಾಷ್ಟ್ರೀಯ ಮಹಿಳಾ ಆಯೋಗವನ್ನು ಒತ್ತಾಯಿಸಿದ್ದರು.
ಸೋಮವಾರ (ಅ.19) ಸಾಮಾಜಿಕ ಜಾಲತಾಣಗಳ ಮೂಲಕ ಈ ಕುರಿತು ಪ್ರತಿಕ್ರಿಯಿಸಿರುವ ಮಹಿಳಾ ಆಯೋಗ, “ಗಾಯಕಿ ನೇಹಾ ಸಿಂಗ್ ರಾಥೋರ್ ಅವರನ್ನು ವೇಶ್ಯಾವಾಟಿಕೆ ಜಾಲದೊಂದಿಗೆ ಲಿಂಕ್ ಮಾಡಿ ಸುದ್ದಿ ಸಂಸ್ಥೆಯೊಂದು ಅವಹೇಳನಕಾರಿ ವಿಷಯವನ್ನು ಪ್ರಸಾರ ಮಾಡಿರುವುದರ ವಿರುದ್ಧ ರಾಷ್ಟ್ರೀಯ ಮಹಿಳಾ ಆಯೋಗವು ಸ್ವಯಂಪ್ರೇರಿತವಾಗಿ ಪ್ರಕರಣ ಕೈಗೆತ್ತಿಕೊಂಡಿದೆ. ಸಾರ್ವಜನಿಕ ವಲಯದಿಂದ ತೀವ್ರ ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ, ಆ ವರದಿಯು ತಪ್ಪು ಮತ್ತು ಸತ್ಯಕ್ಕೆ ದೂರವಾಗಿದೆ ಎಂದು ಒಪ್ಪಿಕೊಂಡಿರುವ ಸುದ್ದಿ ವಾಹಿನಿಯು ಅಧಿಕೃತವಾಗಿ ಕ್ಷಮೆಯಾಚಿಸಿದೆ” ಎಂದು ಹೇಳಿದೆ.
ಮುಂದುವರಿದು, “ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷರಾದ ವಿಜಯಾ ರಹಾಟ್ಕರ್ ಅವರು, ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಪತ್ರ ಬರೆದಿದ್ದು, ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ (PCI) ನಂತಹ ನಿಯಂತ್ರಕ ಸಂಸ್ಥೆಗಳು; ಎಲೆಕ್ಟ್ರಾನಿಕ್ ಮೀಡಿಯಾ ಮಾನಿಟರಿಂಗ್ ಸೆಂಟರ್ (EMMC) ನಂತಹ ಆಡಳಿತಾತ್ಮಕ ಸಂಸ್ಥೆಗಳು; ಹಾಗೂ ನ್ಯೂಸ್ ಬ್ರಾಡ್ಕಾಸ್ಟರ್ಸ್ ಅಂಡ್ ಡಿಜಿಟಲ್ ಅಸೋಸಿಯೇಷನ್ (NBDA) ಮತ್ತು ಡಿಜಿಟಲ್ ಪಬ್ಲಿಷರ್ಸ್ ಕಂಟೆಂಟ್ ಗ್ರೀವೆನ್ಸ್ ಕೌನ್ಸಿಲ್ (DPCGC) ನಂತಹ ಮಾಧ್ಯಮ ಉದ್ಯಮದ ಸ್ವ-ನಿಯಂತ್ರಕ ಸಂಸ್ಥೆಗಳಿಗೆ ಅಗತ್ಯ ನಿರ್ದೇಶನಗಳನ್ನು ನೀಡುವಂತೆ ಕೋರಿದ್ದಾರೆ. ಮಾಹಿತಿ ತಂತ್ರಜ್ಞಾನ (ಮಧ್ಯಸ್ಥಗಾರರ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮೀಡಿಯಾ ನೀತಿ ಸಂಹಿತೆ) ನಿಯಮಗಳು, 2021ರ ಅಡಿಯಲ್ಲಿ ತಕ್ಷಣದ ಮತ್ತು ಕಾಲಮಿತಿಯ ಕ್ರಮವನ್ನು ಖಚಿತಪಡಿಸಿಕೊಳ್ಳಲು ಅವರು ಸಚಿವಾಲಯಕ್ಕೆ ಸೂಚನೆ ನೀಡಿದ್ದಾರೆ” ಎಂದು ಆಯೋಗ ತಿಳಿಸಿದೆ.
ಈ ಕುರಿತು 15 ದಿನಗಳ ಒಳಗಾಗಿ ಆಕ್ಷನ್ ಟೇಕನ್ ರಿಪೋರ್ಟ್ (ATR) ಅಂದರೆ ಕೈಗೊಂಡ ಕ್ರಮಗಳ ವರದಿಯನ್ನು ಸಲ್ಲಿಸುವಂತೆ ಆಯೋಗವು ಕೋರಿದೆ. ಇದರೊಂದಿಗೆ ಲಿಂಗ ಆಧಾರಿತ ಚಾರಿತ್ರ್ಯ ಹರಣ ಮತ್ತು ಮಹಿಳೆಯರ ವಿರುದ್ಧ ನಡೆಯುವ ಡಿಜಿಟಲ್ ಕಿರುಕುಳದ ವಿರುದ್ಧ ಕಠಿಣ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಮಹಿಳಾ ಆಯೋಗವು ಕರೆ ನೀಡಿದೆ. ಮಾಧ್ಯಮ ಸ್ವಾತಂತ್ರ್ಯವನ್ನು ಜವಾಬ್ದಾರಿಯುತವಾಗಿ ಚಲಾಯಿಸಬೇಕು ಹಾಗೂ ಸುದ್ದಿ ಪ್ರಸಾರ ಮಾಡುವಾಗ ಸತ್ಯಾಸತ್ಯತೆ, ಮಹಿಳೆಯರ ಘನತೆ, ಗೌರವ ಮತ್ತು ಅವರ ಖಾಸಗಿತನವನ್ನು ಕಡ್ಡಾಯವಾಗಿ ಗೌರವಿಸಬೇಕು ಎಂದು ಆಯೋಗವು ಸೂಚಿಸಿದೆ.


