ಗುಜರಾತ್‌ನಾದ್ಯಂತ ನಡೆಯುತ್ತಿರುವ ನವರಾತ್ರಿ ಗರ್ಬಾ ಉತ್ಸವಗಳಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಸೇರಿದಂತೆ ಬಲಪಂಥೀಯ ಹಿಂದುತ್ವ ಸಂಘಟನೆಗಳು ಮುಸ್ಲಿಮರು ಹಾಗೂ ಮುಸ್ಲಿಮೇತರರನ್ನು ಪ್ರವೇಶಿಸದಂತೆ ತಡೆಯಲು ಹೊಸ ನಿಯಮಗಳನ್ನು ಜಾರಿಗೆ ತರುತ್ತಿವೆ ಎಂದು ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ. ವಿವಿಧ ಗರ್ಬಾ ಮೈದಾನಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮುಸ್ಲಿಂ ಕಾರ್ಮಿಕರು ಮತ್ತು ಸಂಗೀತಗಾರರ ಜೊತೆ ಸಂಘಟನೆಗಳ ಕಾರ್ಯಕರ್ತರು ನೇರ ಮುಖಾಮುಖಿಯಾಗಿ, ಅವರನ್ನು ಮೈದಾನದಿಂದ ಹೊರಹಾಕುತ್ತಾ ಕಿರುಕುಳ ಮತ್ತು ಬೆದರಿಕೆಗಳನ್ನು ಒಡ್ಡುತ್ತಿರುವ ಸಾಲು ಸಾಲು ಘಟನೆಗಳು ನಡೆದಿವೆ ಎಂದು ಹೇಳಲಾಗಿದೆ.
ಅಕ್ಟೋಬರ್ 14 ರಂದು ಪ್ರಸಿದ್ಧ ಜನಪದ ಗಾಯಕ ಆದಿತ್ಯ ಗಧ್ವಿ ಅವರ ಗರ್ಬಾ ಕಾರ್ಯಕ್ರಮ ನಡೆದ ‘ರಂಗ್ ಮೋರ್ಲೋ’ ವೇದಿಕೆಯಲ್ಲಿ ಆಂಕರ್ ಮೈಕ್‌ನಲ್ಲಿ ಬಹಿರಂಗವಾಗಿ ಮಾತನಾಡಿ, ‘ವಿಧರ್ಮಿಗಳು’ ಹಾಗೂ ‘ಮುಸ್ಲಿಮರು’ ಸ್ವಯಂಪ್ರೇರಿತವಾಗಿ ಮೈದಾನದಿಂದ ಹೊರಹೋಗಬೇಕು ಎಂದು ಆದೇಶಿಸಿದ್ದಾರೆ ಎನ್ನಲಾಗಿದೆ. “ಹಿಂದೂಗಳ ರಕ್ಷಣೆಗಾಗಿ ವಿಶ್ವ ಹಿಂದೂ ಪರಿಷತ್ ಇಲ್ಲಿದೆ” ಎಂದು ಘೋಷಿಸಿದ ನಿರೂಪಕ, ವೇದಿಕೆಯಿಂದಲೇ ಹೆಲ್ಪ್‌ಲೈನ್ ಸಂಖ್ಯೆಯೊಂದನ್ನು ಪ್ರಕಟಿಸಿದ್ದಾರೆ ಎಂದು ವರದಿಯಾಗಿದೆ. ಈ ಘಟನೆ ವ್ಯಾಪಕ ಆಕ್ರೋಶಕ್ಕೆ ಕಾರಣವಾದ ಬೆನ್ನಲ್ಲೇ, ‘ಖಲಾಸಿ’ ಹಾಡಿನ ಪ್ರಸಿದ್ಧ ಗಾಯಕ ಆದಿತ್ಯ ಗಧ್ವಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸ್ಪಷ್ಟನೆ ನೀಡಿ, ಈ ಘಟನೆಗೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ದೂರವಿದ್ದಾರೆ. ಕೆಲವು ವ್ಯಕ್ತಿಗಳು ಬ್ಯಾಕ್‌ಸ್ಟೇಜ್‌ಗೆ ನುಗ್ಗಿ ತಾವು ಎಂದಿಗೂ ಬೆಂಬಲಿಸದ ಕೃತ್ಯವನ್ನು ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಇನ್ನು ರೂ. 1,000 ದಿಂದ 7,500 ವರೆಗೆ ಟಿಕೆಟ್ ದರ ಹೊಂದಿದ್ದ ಈ ಕಾರ್ಯಕ್ರಮದ ನಿರೂಪಕ ಆಕಾಶ್ ತ್ರಿವೇದಿ ಕೂಡ ಸ್ಪಷ್ಟನೆ ನೀಡಿ, ತಾವು ಆಯೋಜಕರ ಪರವಾಗಿ ಮಾತನಾಡಿದ್ದಾಗಿಯೂ, ಅದು ತಮ್ಮ ವೈಯಕ್ತಿಕ ಅಭಿಪ್ರಾಯವಲ್ಲ ಎಂದೂ ಹೇಳಿದ್ದಾರೆ. ಈ ಕುರಿತು ಆಯೋಜಕರಿಂದ ದೂರು ಬಂದಿದ್ದು, ತನಿಖೆ ನಡೆಸಲಾಗುತ್ತದೆ ಎಂದು ಅಹಮದಾಬಾದ್ ಗ್ರಾಮಾಂತರ ಎಸ್‌ಪಿ ಓಂ ಪ್ರಕಾಶ್ ಜಾಟ್ ತಿಳಿಸಿದ್ದಾರೆ.
2023ರಲ್ಲಿ ಯುನೆಸ್ಕೋ ಗರ್ಬಾ ನೃತ್ಯಕ್ಕೆ ‘ಅಮೂರ್ತ ಸಾಂಸ್ಕೃತಿಕ ಪರಂಪರೆ’ ಮಾನ್ಯತೆ ನೀಡುವಾಗ, ಗರ್ಬಾ ನೃತ್ಯವು ವೈವಿಧ್ಯತೆಯಲ್ಲಿ ಏಕತೆಯನ್ನು ಉತ್ತೇಜಿಸುತ್ತದೆ ಹಾಗೂ ಲಿಂಗ, ಧರ್ಮ ಮತ್ತು ಸಾಮಾಜಿಕ ಹಿನ್ನೆಲೆಯನ್ನು ಬದಿಗೊತ್ತಿ ಎಲ್ಲರನ್ನೂ ಒಂದೆಡೆ ತರುವ ಮೂಲಕ ಸಾಮಾಜಿಕ ಸಮಾನತೆಯನ್ನು ಬೆಳೆಸುತ್ತದೆ ಎಂದು ಉಲ್ಲೇಖಿಸಿತ್ತು. ಆದರೆ ಪ್ರಸ್ತುತ ಬಲಪಂಥೀಯ ಸಂಘಟನೆಗಳು ಪೊಲೀಸರಿಗೆ ಮನವಿ ಸಲ್ಲಿಸಿ ಮುಸ್ಲಿಮೇತರರನ್ನು ಹೊರಗಿಡಲು ಒತ್ತಾಯಿಸುತ್ತಿರುವುದರಿಂದ ಧಾರ್ಮಿಕ ಅಂತರ ಹೆಚ್ಚಾಗುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಗುಜರಾತ್‌ನಾದ್ಯಂತ ಇಂತಹ ಹಲವು ಘಟನೆಗಳು ವರದಿಯಾಗುತ್ತಿವೆ. ಅಕ್ಟೋಬರ್ 16 ರಂದು ವಡೋದರಾದ ಯುನೈಟೆಡ್ ವೇ ಗರ್ಬಾ ಮೈದಾನದಲ್ಲಿ ಪಾಸ್ ಸ್ಕ್ಯಾನ್ ಮಾಡುತ್ತಿದ್ದ ರಜ್ಜಾಕ್ ಪಠಾಣ್ ಎಂಬುವವರ ಐಡಿ ಕಾರ್ಡ್‌ನಲ್ಲಿ ‘ಆಯುಷ್ ಪಟೇಲ್’ ಎಂದಿತ್ತು ಎಂದು ಆರೋಪಿಸಿ ವಿಎಚ್‌ಪಿ ಕಾರ್ಯಕರ್ತರು ಅವರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ ಎನ್ನಲಾಗಿದೆ. ರಜ್ಜಾಕ್ ಅವರ ಗುರುತಿನ ಚೀಟಿ ಹಾಗೂ ದಾಖಲೆಗಳಲ್ಲಿ ವ್ಯತ್ಯಾಸವಿದೆಯೇ ಎಂಬ ಬಗ್ಗೆ ವಡೋದರಾದ ಅಟ್ಲಾದರಾ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇದೇ ವೇಳೆ ವಡೋದರಾದ ನವಲಖಿ ಮೈದಾನದಲ್ಲಿ ಆಯೋಜಕರು ಗರ್ಬಾ ಆರಂಭಕ್ಕೂ ಮುನ್ನವೇ “ತಿಲಕವಿಲ್ಲದಿದ್ದರೆ ಪ್ರವೇಶವಿಲ್ಲ” ಎಂಬ ಫಲಕಗಳನ್ನು ಅಳವಡಿಸಿದ್ದಾರೆ ಎಂದು ವರದಿಯಾಗಿದೆ. ಸೂರತ್‌ನ ಕಿರಣ್ ಮೆಡಿಕಲ್ ಕಾಲೇಜಿನಲ್ಲಿ ಆಂತರಿಕ ಸಿಬ್ಬಂದಿಗಾಗಿ ಆಯೋಜಿಸಿದ್ದ ಗರ್ಬಾ ಕಾರ್ಯಕ್ರಮಕ್ಕೆ ವಿಎಚ್‌ಪಿ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದಾಗ, ಪೊಲೀಸರು ಮಧ್ಯಪ್ರವೇಶಿಸಿ ಸಂಘಟಕರಿಗೆ ರಕ್ಷಣೆ ನೀಡಿದ್ದಾರೆ.
ಅಷ್ಟೇ ಅಲ್ಲದೆ, ಸೂರತ್‌ನ ‘ರಾಸ್‌ಲೋಕ್ ನವರಾತ್ರಿ’ ಆಯೋಜಕ ಹರ್ಷಲ್ ಮಿಸ್ಟ್ರಿ ಎಂಬುವವರು ತಮ್ಮ ಕಾರ್ಯಕ್ರಮದ ಭದ್ರತೆ, ಸಂಗೀತ ತಂಡ ಹಾಗೂ ಇತರ ಯಾವುದೇ ವಿಭಾಗಗಳಲ್ಲಿ ಮುಸ್ಲಿಮರಿಗೆ ಅವಕಾಶ ನೀಡುವುದಿಲ್ಲ ಎಂದು ಸಾರ್ವಜನಿಕವಾಗಿ ಪ್ರಕಟಿಸಿದ್ದಾರೆ. ಇನ್ನೊಂದೆಡೆ, ಅಕ್ಟೋಬರ್ 13 ರಂದು ಭಾವನಗರದ ರಂಗೋಲಿ ಪಾರ್ಟಿ ಪ್ಲಾಟ್‌ನಲ್ಲಿ ಮುಸ್ಲಿಂ ಸಂಗೀತಗಾರರ ತಂಡವನ್ನು ನೇಮಿಸಿಕೊಂಡಿದ್ದಕ್ಕಾಗಿ ಪ್ರತಿಭಟನೆ ನಡೆಸಿದ ‘ಅಂತರರಾಷ್ಟ್ರೀಯ ಹಿಂದೂ ಪರಿಷತ್’ ಸಂಘಟನೆಯ 40ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು, ನಂತರ ಬಿಡುಗಡೆ ಮಾಡಿದ್ದಾರೆ ಎಂದು ವರದಿಯಾಗಿದೆ.


