ಉತ್ತರ ಪ್ರದೇಶದ ಹಪುರ್‌ನಲ್ಲಿರುವ ಹಿಂದಿ ದಿನಪತ್ರಿಕೆ ‘ದೈನಿಕ್ ಜನ್ವಾಣಿ’ಯ ಪತ್ರಕರ್ತರೊಬ್ಬರು ಹಿಟ್ಟಿನ ಗಿರಣಿಯಲ್ಲಿ ಭಾಣುವಾರ ನಡೆದ ಹಲ್ಲೆಯಿಂದಾಗಿ ಮೃತಪಟ್ಟಿದ್ದಾರೆ. ಜಾಹೀರಾತು ಕೇಳಲು ತೆರಳಿದ್ದ ವೇಳೆ ಅವರನ್ನು ನಕಲಿ ಪತ್ರಕರ್ತ ಎಂದು ಆರೋಪಿಸಿ ಹಲ್ಲೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.
60 ವರ್ಷದ ನಸೀಮ್ ಅಹ್ಮದ್ ಅವರನ್ನು ಗಂಭೀರ ಸ್ಥಿತಿಯಲ್ಲಿ ಗರ್ಹ್ ರಸ್ತೆಯಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತರಲಾಗಿದ್ದು, ಅಲ್ಲಿ ಅವರು ಮೃತಪಟ್ಟಿರುವುದಾಗಿ ಘೋಷಿಸಲಾಯಿತು. ಈ ಘಟನೆಗೆ ಸಂಬಂಧಿಸಿದಂತೆ ವಿಚಾರಣೆಗಾಗಿ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ.
ಹಪುರ್ ದೇಹಾತ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜಾಹೀರಾತು ಕೇಳುವ ಸಂದರ್ಭದಲ್ಲಿ ನಡೆದ ಹಲ್ಲೆಯಿಂದ ‘ದೈನಿಕ್ ಜನ್ವಾಣಿ’ ಪತ್ರಕರ್ತ ನಸೀಮ್ ಮೃತಪಟ್ಟಿದ್ದಾರೆ ಎಂದು ಹಪುರ್ ಪೊಲೀಸ್ ಇಲಾಖೆ ತಿಳಿಸಿದೆ. ಇಬ್ಬರನ್ನು ವಿಚಾರಣೆ ನಡೆಸುತ್ತಿದ್ದು, ಸಂಗ್ರಹಿಸಿದ ಸಂಗತಿಗಳ ಆಧಾರದ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ವಿಷಯ ತಿಳಿದ ತಕ್ಷಣವೇ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಮಧುಬನ್ ಕುಮಾರ್ ಸಿಂಗ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸತ್ಯಾಂಶ ಹೊರಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಪಿ ತಿಳಿಸಿದ್ದಾರೆ.
ಬುಲಂದ್‌ಶಹರ್ ರಸ್ತೆಯ ಆವಾಸ್ ವಿಕಾಸ್ ಕಾಲೋನಿಯ ನಿವಾಸಿಯಾದ ಅಹ್ಮದ್ ಅವರು ಜಾಹೀರಾತು ವಿಚಾರವಾಗಿ ಜರೋಥಿ ರಸ್ತೆಯಲ್ಲಿರುವ ಹಿಟ್ಟು ಗಿರಣಿಗೆ ತೆರಳಿದ್ದಾಗ ವಾಗ್ವಾದ ನಡೆಯಿತು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಗಿರಣಿಯಲ್ಲಿದ್ದವರು ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಅವರು ಪತ್ರಕರ್ತರೆಂಬ ಕುಟುಂಬದವರ ಮಾತನ್ನು ಪೊಲೀಸರು ಆರಂಭದಲ್ಲಿ ಖಚಿತಪಡಿಸಿರಲಿಲ್ಲ. ಆದರೆ, ಪ್ರಸ್ತುತ ಪೊಲೀಸರ ಹೇಳಿಕೆಯಲ್ಲಿ ಅವರನ್ನು ಪತ್ರಕರ್ತ ಎಂದೇ ಉಲ್ಲೇಖಿಸಲಾಗಿದೆ.
ಪತ್ರಿಕೆಗೆ ಜಾಹೀರಾತು ನೀಡಲು ಉದ್ಯಮಿಯೊಬ್ಬರು ನಿರಾಕರಿಸಿದ ನಂತರ ಈ ಹಿಂಸಾಚಾರ ಆರಂಭವಾಯಿತು ಎಂದು ಪ್ರತ್ಯಕ್ಷದರ್ಶಿ ಸಲಾವುದ್ದೀನ್ ಆರೋಪಿಸಿದ್ದಾರೆ.
ಸಲಾವುದ್ದೀನ್ ಅವರ ಪ್ರಕಾರ, ನಸೀಮ್ ಅವರು ಜಾಹೀರಾತು ಕೋರಿ ಉದ್ಯಮಿಯ ಬಳಿಗೆ ಹೋಗಿದ್ದರು. ನಿರಾಕರಣೆಯ ಬಳಿಕ ಇಬ್ಬರೂ ಅಲ್ಲಿಂದ ಹೊರಡುತ್ತಿದ್ದಾಗ, ಅವರನ್ನು ತಡೆದು ನಕಲಿ ಪತ್ರಕರ್ತರೆಂದು ಆರೋಪಿಸಿ ಹಲ್ಲೆ ನಡೆಸಲಾಗಿದೆ. ತನ್ನ ಮೇಲೂ ತೀವ್ರ ಹಲ್ಲೆ ನಡೆಸಲಾಗಿದೆ ಎಂದು ‘ದಿ ಅಬ್ಸರ್ವರ್ ಪೋಸ್ಟ್’ ವರದಿ ಮಾಡಿದೆ.


