ಸ್ಥಳೀಯ ಸಂಸ್ಥೆಗಳ ಚುನಾವಣೆಯ ನಾಮಪತ್ರ ಸಲ್ಲಿಕೆಯ ಎರಡನೇ ದಿನವಾದ ಶನಿವಾರ (ಅಕ್ಟೋಬರ್ 17) ಆಂಧ್ರ ಪ್ರದೇಶದಲ್ಲಿ ರಾಜಕೀಯ ಸಂಘರ್ಷಗಳು ಮುಂದುವರಿದಿವೆ. ವೈಎಸ್ಆರ್ ಕಾಂಗ್ರೆಸ್ ಪಕ್ಷದ (ವೈಎಸ್ಆರ್ಸಿಪಿ) ಭದ್ರಕೋಟೆಯಾಗಿರುವ ವೈಎಸ್ಆರ್ ಕಡಪ ಜಿಲ್ಲೆಯ ಪುಲಿವೆಂದುಲದಲ್ಲಿ ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ಗಾಳಿಯಲ್ಲಿ ಆರು ಸುತ್ತು ಗುಂಡು ಹಾರಿಸಿದ್ದಾರೆ.
ಅ.16ರಂದು ರಾಯಚೋಟಿ ಮತ್ತು ಪುಂಗನೂರಿನಲ್ಲಿ ಭುಗಿಲೆದ್ದು, ಮರುದಿನ ರಾಜ್ಯದ ಇತರ ಭಾಗಗಳಿಗೂ ಹರಡಿದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ, ತೆಲುಗು ದೇಶಂ ಪಕ್ಷ (ಟಿಡಿಪಿ) ಮತ್ತು ವೈಎಸ್ಆರ್ಸಿಪಿ ಪರಸ್ಪರ ದೋಷಾರೋಪಣೆ ಮಾಡಿಕೊಂಡಿವೆ.
ಪುಲಿವೆಂದುಲದಲ್ಲಿ ಟಿಡಿಪಿ ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಸಲ್ಲಿಸುತ್ತಿದ್ದಾಗ, ವೈಎಸ್ಆರ್ಸಿಪಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಕೇಂದ್ರದ ಹೊರಗೆ ಕಾಯುವಂತೆ ಸೂಚಿಸಲಾಗಿತ್ತು. ಈ ವೇಳೆ ವೈಎಸ್ಆರ್ಸಿಪಿ ಅಭ್ಯರ್ಥಿಗಳು ಕೇಂದ್ರದೊಳಗೆ ಪ್ರವೇಶಿಸಲು ಪ್ರಯತ್ನಿಸಿದಾಗ ಪೊಲೀಸರೊಂದಿಗೆ ಸಂಘರ್ಷ ಉಂಟಾಯಿತು ಎಂದು ವರದಿಯಾಗಿದೆ.
ಕಡಪ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಶೆಲ್ಕೆ ನಾಚಿಕೇತ್ ವಿಶ್ವನಾಥ್ ಅವರು ಮಾತನಾಡಿ, “ಕೆಲವು ವ್ಯಕ್ತಿಗಳು ಪೊಲೀಸರ ವಿರುದ್ಧ ಆಕ್ರಮಣಕಾರಿಯಾಗಿ ವರ್ತಿಸಿ, ಕಲ್ಲು ತೂರಾಟ ನಡೆಸಲು ಪ್ರಾರಂಭಿಸಿದರು” ಎಂದು ತಿಳಿಸಿದ್ದಾರೆ. ಕಲ್ಲು ತೂರಾಟ ಮುಂದುವರಿದ ಹಿನ್ನೆಲೆಯಲ್ಲಿ ಪೊಲೀಸರು ಲಾಠಿ ಪ್ರಹಾರ ಮತ್ತು ಅಶ್ರುವಾಯು ಪ್ರಯೋಗದ ಮೂಲಕ ಪ್ರತಿಕ್ರಿಯಿಸಿದ್ದಾರೆ ಹಾಗೂ ಆ ನಂತರ ಗಾಳಿಯಲ್ಲಿ ಹಲವು ಸುತ್ತು ಗುಂಡು ಹಾರಿಸಿದ್ದಾರೆ ಎಂದು ಹೇಳಿದ್ದಾರೆ.
ಅನ್ನಮಯ್ಯ ಜಿಲ್ಲೆಯ ಪುಂಗನೂರು ಪಟ್ಟಣದಲ್ಲಿ ಅ. 16ರಂದು ವೈಎಸ್ಆರ್ಸಿಪಿ ಸಂಸದ ಪಿ. ವಿ. ಮಿಥುನ್ ರೆಡ್ಡಿ ಅವರ ಬೆಂಗಾವಲು ವಾಹನಗಳ ಮೇಲೆ ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಹೋಗುತ್ತಿದ್ದಾಗ ಕಲ್ಲು, ಲಾಠಿ ಮತ್ತು ಕಬ್ಬಿಣದ ರಾಡ್ಗಳಿಂದ ದಾಳಿ ನಡೆಸಲಾಗಿದೆ. ಟಿಡಿಪಿ ಕಾರ್ಯಕರ್ತರೇ ಈ ದಾಳಿ ನಡೆಸಿದ್ದಾರೆ ಎಂದು ವೈಎಸ್ಆರ್ಸಿಪಿ ಆರೋಪಿಸಿದ್ದರೆ, ಟಿಡಿಪಿ ಕಾರ್ಯಕರ್ತರು ಹಿಂಸಾಚಾರಕ್ಕೆ ವೈಎಸ್ಆರ್ಸಿಪಿ ಕಾರ್ಯಕರ್ತರೇ ಪ್ರಚೋದನೆ ನೀಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಆಂಧ್ರಪ್ರದೇಶ ಪೊಲೀಸರು ಈ ಘಟನೆಗೆ ಸಂಬಂಧಿಸಿದಂತೆ ಮಿಥುನ್ ರೆಡ್ಡಿ ಮತ್ತು ಇತರರ ವಿರುದ್ಧ ಪ್ರಕರಣಗಳನ್ನು ದಾಖಲಿಸಿದ್ದಾರೆ. ಅ.16 ರಂದು ಹಲವಾರು ವಾಹನಗಳಿಗೆ ಬೆಂಕಿ ಹಚ್ಚಲಾಗಿದ್ದ ರಾಯಚೋಟಿ ಬಳಿ, ಪರವಾನಗಿ ಇಲ್ಲದ ಬಂದೂಕುಗಳನ್ನು ಹೊಂದಿದ್ದ ಆರೋಪದ ಮೇಲೆ ಪಂಜಾಬ್ನ 10 ಜನರನ್ನು ಪೊಲೀಸರು ಬಂಧಿಸಿದ್ದಾರೆ. ರಾಜ್ಯದಲ್ಲಿ ಅಶಾಂತಿ ಸೃಷ್ಟಿಸಲು ವೈಎಸ್ಆರ್ಸಿಪಿ ಪಕ್ಷವು ಈ ಜನರನ್ನು ಆಂಧ್ರಪ್ರದೇಶಕ್ಕೆ ಕರೆತಂದಿದೆ ಎಂದು ಟಿಡಿಪಿ ಆರೋಪಿಸಿದೆ.
ರಾಜ್ಯ ಚುನಾವಣಾ ಆಯುಕ್ತ ಅನಿಲ್ ಚಂದ್ರ ಪುನೇಠಾ ಅವರು ಈ ಉದ್ವಿಗ್ನತೆಯ ನಡುವೆ, ಅಭ್ಯರ್ಥಿಗಳು ಅ.18ರ ಗಡುವಿನೊಳಗೆ ತಮ್ಮ ನಾಮಪತ್ರಗಳನ್ನು ಸಲ್ಲಿಸಲು ಅನುಕೂಲವಾಗುವಂತೆ ನಾಮಪತ್ರ ಸಲ್ಲಿಕೆ ಕೇಂದ್ರಗಳಲ್ಲಿ ಸಾಕಷ್ಟು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ವೈಎಸ್ಆರ್ಸಿಪಿ ಮುಖ್ಯಸ್ಥ ಹಾಗೂ ಮಾಜಿ ಮುಖ್ಯಮಂತ್ರಿ ವೈ. ಎಸ್. ಜಗನ್ ಮೋಹನ್ ರೆಡ್ಡಿ ಅವರು, ತಮ್ಮ ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವುದನ್ನು ತಡೆಯಲು ಟಿಡಿಪಿ ಕಾರ್ಯಕರ್ತರು ಹಿಂಸಾಚಾರಕ್ಕೆ ಇಳಿದಿದ್ದಾರೆ. ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತಮ್ಮ ಪಕ್ಷದ ಗುಂಪುಗಳಿಗೆ ಮುಕ್ತ ಅವಕಾಶ ನೀಡಿದ್ದಾರೆ ಮತ್ತು ಅವರನ್ನು ರಕ್ಷಿಸಲು ಪೊಲೀಸರನ್ನು ಬಳಸಿಕೊಳ್ಳುತ್ತಿದ್ದಾರೆ. ಟಿಡಿಪಿ ಬೆಂಬಲಿಗರು ವೈಎಸ್ಆರ್ಸಿಪಿ ಅಭ್ಯರ್ಥಿಗಳನ್ನು ಚಾಕು ಮತ್ತು ಲಾಠಿಗಳಿಂದ ಅಟ್ಟಾಡಿಸಿದ್ದಾರೆ ಮತ್ತು ಅವರ ನಾಮಪತ್ರಗಳನ್ನು ಹರಿದು ಹಾಕಿದ್ದಾರೆ ಎಂದು ಜಗನ್ ಆರೋಪಿಸಿದ್ದಾರೆ.
ಕಡಪ, ಪುಲಿವೆಂದುಲ, ಕಮಲಾಪುರಂ, ಜಮ್ಮಲಮಡುಗು, ರಾಜಂಪೇಟೆ, ರಾಯಚೋಟಿ, ಪುಂಗನೂರು, ತಿರುಪತಿ, ದರ್ಶಿ, ದಾಚೇಪಲ್ಲಿ ಮತ್ತು ಗುರಾಜಾಲ ಸೇರಿದಂತೆ ರಾಜ್ಯದಾದ್ಯಂತ ನಡೆದಿರುವ ಘಟನೆಗಳು, ಚಂದ್ರಬಾಬು ನಾಯ್ಡು ಅವರ ಆಡಳಿತದಲ್ಲಿ ಪ್ರಜಾಪ್ರಭುತ್ವ ಎಷ್ಟು ಕೆಟ್ಟದಾಗಿ ದುರ್ಬಲಗೊಂಡಿದೆ ಎಂಬುದನ್ನು ತೋರಿಸುತ್ತವೆ. ಪುಲಿವೆಂದುಲದಲ್ಲಿ ನಡೆದ ಪೊಲೀಸ್ ಗುಂಡಿನ ದಾಳಿಯು ಪ್ರಜಾಪ್ರಭುತ್ವದ ಮೇಲೆಯೇ ಹಾರಿಸಿದ ಗುಂಡಾಗಿದೆ. ಈ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕು ಮತ್ತು ಆಂಧ್ರಪ್ರದೇಶದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕು ಎಂದು ಜಗನ್ ಮೋಹನ್ ರೆಡ್ಡಿ ಒತ್ತಾಯಿಸಿದ್ದಾರೆ.
Courtesy :livelaw.in


