ಒಬ್ಬ ವ್ಯಕ್ತಿಯ ವಿರುದ್ಧ ‘ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ’ (UAPA) ಯಂತಹ ಕಠಿಣ ಕಾಯಿದೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂಬ ಒಂದೇ ಕಾರಣಕ್ಕೆ, ಅವರ ವಿದೇಶ ಪ್ರಯಾಣದ ಮೂಲಭೂತ ಹಕ್ಕನ್ನು ಸಂಪೂರ್ಣವಾಗಿ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ದೆಹಲಿ ಹೈಕೋರ್ಟ್ ಸ್ಪಷ್ಟಪಡಿಸಿದೆ.
2020ರ ದೆಹಲಿ ಗಲಭೆ ಸಂಚಿನ ಪ್ರಕರಣದಲ್ಲಿ ಆರೋಪಿಯಾಗಿರುವ ‘ಪಿಂಜ್ರಾ ತೋಡ್’ ಚಳವಳಿಯ ಕಾರ್ಯಕರ್ತೆ ಹಾಗೂ ವಾರ್ವಿಕ್ ವಿಶ್ವವಿದ್ಯಾಲಯದ ಪಿಎಚ್ಡಿ ಸಂಶೋಧಕಿ ನತಾಶಾ ನರ್ವಾಲ್ ಅವರಿಗೆ ಶೈಕ್ಷಣಿಕ ಕಾರಣಗಳಿಗಾಗಿ ಯುಕೆಗೆ ತೆರಳಲು ನ್ಯಾಯಮೂರ್ತಿ ಅಮಿತ್ ಬನ್ಸಲ್ ಅವರಿದ್ದ ಪೀಠ ಅನುಮತಿ ನೀಡಿ ಆದೇಶ ಹೊರಡಿಸಿದೆ ಎಂದು ‘ಲೈವ್ ಲಾ’ ವರದಿ ಮಾಡಿದೆ. ನತಾಶಾ ನರ್ವಾಲ್ ಅವರ ವಿದೇಶ ಪ್ರಯಾಣದ ಅರ್ಜಿಯನ್ನು ವಜಾಗೊಳಿಸಿದ್ದ ವಿಚಾರಣಾ ನ್ಯಾಯಾಲಯದ ಅಕ್ಟೋಬರ್ 6ರ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ.
ನತಾಶಾ ನರ್ವಾಲ್ ಅವರು ಲಂಡನ್ನ SOASನಲ್ಲಿ ನಡೆಯಲಿರುವ 23ನೇ ವಾರ್ಷಿಕ ‘ಹಿಸ್ಟಾರಿಕಲ್ ಮೆಟೀರಿಯಲಿಸಂ’ ಸಮಾವೇಶದಲ್ಲಿ “ಜೆಂಡರ್ಡ್ ಕಾರ್ಸರಲ್ ಲೇಬರ್ ಆಸ್ ಸೋಷಿಯಲ್ ರಿಪ್ರೊಡಕ್ಷನ್” (Gendered Carceral Labour as Social Reproduction) ಎಂಬ ತಮ್ಮ ಸಂಶೋಧನಾ ಪ್ರಬಂಧವನ್ನು ಪ್ರಸ್ತುತಪಡಿಸಲು ಹಾಗೂ ವಾರ್ವಿಕ್ ವಿಶ್ವವಿದ್ಯಾಲಯದಲ್ಲಿ ತಮ್ಮ ಪಿಎಚ್ಡಿ ಮಾರ್ಗದರ್ಶಕರನ್ನು ಭೇಟಿಯಾಗಲು ಯೋಜಿಸಿದ್ದಾರೆ.
ಪ್ರಯಾಣದ ಅನುಮತಿ ನೀಡಬಾರದೆಂದು ದೆಹಲಿ ಪೊಲೀಸರ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ವಿ ರಾಜು, ನತಾಶಾ ಅವರು ಯುಕೆಯಲ್ಲಿ ರಾಜಕೀಯ ಆಶ್ರಯ ಕೋರುವ ಸಾಧ್ಯತೆ ಇದೆ ಎಂದು ವಾದಿಸಿದ್ದರು. ಆದರೆ ಈ ವಾದವನ್ನು ಹೈಕೋರ್ಟ್ ಸಂಪೂರ್ಣವಾಗಿ ತಳ್ಳಿಹಾಕಿದೆ. ವಿಚಾರಣೆ ವೇಳೆ ಮೌಖಿಕವಾಗಿ ಖಾರವಾಗಿ ಪ್ರತಿಕ್ರಿಯಿಸಿದ ನ್ಯಾಯಪೀಠ, ಸಂವಿಧಾನದ ವಿಧಿ 21ರ ಅಡಿಯಲ್ಲಿ ಸಿಗುವ ವಿದೇಶ ಪ್ರಯಾಣದ ಹಕ್ಕನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿತು. ಅಲ್ಲದೆ, ಈ ಪ್ರಕರಣದ ವಿಚಾರಣೆ ಪೂರ್ಣಗೊಳ್ಳಲು 20 ವರ್ಷಗಳೇ ತಗಲಬಹುದು ಮತ್ತು ಅಲ್ಲಿಯವರೆಗೆ ಒಬ್ಬ ವ್ಯಕ್ತಿಯ ಶೈಕ್ಷಣಿಕ ಹಾಗೂ ವೃತ್ತಿಪರ ಜೀವನವನ್ನು ತಡೆಹಿಡಿಯಲು ಸಾಧ್ಯವಿಲ್ಲ ಎಂದು ಕಳವಳ ವ್ಯಕ್ತಪಡಿಸಿತು.
ಪ್ರಸಿದ್ಧ ‘ಮೇಕಾ ಗಾಂಧಿ ವಿರುದ್ಧ ಯೂನಿಯನ್ ಆಫ್ ಇಂಡಿಯಾ’ ಪ್ರಕರಣದ ಸುಪ್ರೀಂ ಕೋರ್ಟ್ ತೀರ್ಪನ್ನು ಉಲ್ಲೇಖಿಸಿದ ಹೈಕೋರ್ಟ್, ಸಂವಿಧಾನದ 21ನೇ ವಿಧಿಯಡಿ ಜೀವಿಸುವ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕಿನಲ್ಲಿ ವಿದೇಶ ಪ್ರಯಾಣದ ಹಕ್ಕು ಕೂಡ ಸೇರಿದೆ ಎಂದು ಪುನರುಚ್ಚರಿಸಿತು. ಅಲ್ಲದೆ, 2021ರಲ್ಲಿ ಜಾಮೀನು ಪಡೆದ ನಂತರ ನತಾಶಾ ನರ್ವಾಲ್ ಅವರು ಯಾವುದೇ ಜಾಮೀನು ಷರತ್ತುಗಳನ್ನು ಉಲ್ಲಂಘಿಸಿಲ್ಲ ಎಂಬುದನ್ನು ನ್ಯಾಯಾಲಯ ಗಮನಿಸಿದೆ.
ಈ ಆದೇಶದನ್ವಯ ನತಾಶಾ ನರ್ವಾಲ್ ಅವರು ನವೆಂಬರ್ 2 ರಿಂದ ಡಿಸೆಂಬರ್ 1, 2026ರವರೆಗೆ ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅನುಮತಿ ನೀಡಲಾಗಿದೆ. ನ್ಯಾಯಾಲಯವು ಕೆಲವು ಕಟ್ಟುನಿಟ್ಟಿನ ಷರತ್ತುಗಳನ್ನು ವಿಧಿಸಿದ್ದು, ಒಟ್ಟು 1 ಲಕ್ಷ ರೂಪಾಯಿ ಮೊತ್ತದ ವೈಯಕ್ತಿಕ ಬಾಂಡ್ ಹಾಗೂ ಶೂರಿಟಿ ಒದಗಿಸಬೇಕು. ಜತೆಗೆ, ಡಿಸೆಂಬರ್ 2ರ ಒಳಗೆ ಭಾರತಕ್ಕೆ ಹಿಂತಿರುಗುವುದಾಗಿ ಮತ್ತು ಯುಕೆಯಲ್ಲಿ ಯಾವುದೇ ರಾಜಕೀಯ ಆಶ್ರಯ ಕೋರುವುದಿಲ್ಲ ಎಂದು ಲಿಖಿತ ಮುಚ್ಚಳಿಕೆ ನೀಡಬೇಕು. ವಿದೇಶದಲ್ಲಿದ್ದಾಗ ತಮ್ಮ ಮೇಲಿರುವ ಪ್ರಕರಣದ ಕುರಿತು ಯಾವುದೇ ಸಾರ್ವಜನಿಕ ಕಾಮೆಂಟ್ ಮಾಡಬಾರದು ಮತ್ತು ಭಾರತಕ್ಕೆ ಹಿಂತಿರುಗಿದ 48 ಗಂಟೆಗಳ ಒಳಗೆ ಪಾಸ್ಪೋರ್ಟ್ ಒಪ್ಪಿಸಬೇಕು ಎಂದು ಕೋರ್ಟ್ ಸೂಚಿಸಿದೆ.


