ಬೆಂಗಳೂರು ಮೆಟ್ರೋದಲ್ಲಿ ತನ್ನ ಹಲ್ಲೆ ನಡೆದಿದೆ ಎಂಬ ಸುದ್ದಿಯನ್ನು ಫ್ಯಾಕ್ಟ್ ಚೆಕ್ಕರ್ ಹಾಗೂ ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮೊಹಮ್ಮದ್ ಝುಬೈರ್ ತಳ್ಳಿಹಾಕಿದ್ದಾರೆ.
ಝುಬೈರ್ ಮೇಲೆ ಬೆಂಗಳೂರು ಮೆಟ್ರೋದಲ್ಲಿ ಸಹ ಪ್ರಯಾಣಿಕರು ಹಲ್ಲೆ ನಡೆಸಿದ್ದಾರೆ ಎಂದು ಹಲವು ಬಲಪಂಥೀಯ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿತ್ತು. ವಿಶೇಷವಾಗಿ @AjaySphere ಎಂಬ ಎಕ್ಸ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡು, “ಝುಬೈರ್ ಅವರ ಭಾರತ ವಿರೋಧಿ ಹೇಳಿಕೆಗಳು ಮತ್ತು ಪ್ರೊಪಗಂಡದಿಂದ ಆಕ್ರೋಶಿತರಾದ ಜನರು ಹಲ್ಲೆ ನಡೆಸಿದ್ದಾರೆ” ಎಂದು ಬರೆದುಕೊಳ್ಳಲಾಗಿತ್ತು.
ಕನ್ನಡದ ಪ್ರಮುಖ ಪತ್ರಿಕೆಯಾದ ಕನ್ನಡಪ್ರಭ ಕೂಡ ಪ್ರಶ್ನಾರ್ಥಕ ಚಿಹ್ನೆ ಹಾಕಿ, “ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗಾ ಥಳಿತ? Video Viral” ಎಂಬ ಶೀರ್ಷಿಕೆಯಲ್ಲಿ ಸುದ್ದಿ ಪ್ರಕಟಿಸಿತ್ತು.
ಆದರೆ, ವೈರಲ್ ವಿಡಿಯೋ ದೆಹಲಿ ಮೆಟ್ರೋದಲ್ಲಿ ನಡೆದ ಘಟನೆಯೊಂದರ ಹಳೆಯ ದೃಶ್ಯ ಎಂದು ಸ್ಪಷ್ಟನೆ ನೀಡಿರುವ ಝುಬೈರ್, ಕನ್ನಡಪ್ರಭ ಪತ್ರಿಕೆ ತನ್ನ ಸುಳ್ಳು ವರದಿಯನ್ನು ತೆಗೆದು ಹಾಕದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ. ಈ ಬೆನ್ನಲ್ಲೇ ಕನ್ನಡಪ್ರಭ ವೆಬ್‌ಸೈಟ್‌ನಿಂದ ವರದಿ ಮಾಯವಾಗಿದೆ.
ಈಗ ಗೂಗಲ್‌ನಲ್ಲಿ ಸರ್ಚ್ ಮಾಡಿದರೆ ವರದಿ ಶೀರ್ಷಿಕೆ ಕಾಣಿಸುತ್ತದೆ. ಆದರೆ, ಲಿಂಕ್ ಕ್ಲಿಕ್ ಮಾಡಿದಾಗ ವರದಿ ಲಭ್ಯವಿರುವುದಿಲ್ಲ.

“ಸುಳ್ಳು ಸುದ್ದಿ ಹರಡುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಬಯಸುತ್ತೀರಾ ಎಂದು ಕೇಳುತ್ತಾ ಬೆಂಗಳೂರು ಪೊಲೀಸರಿಂದ ನನಗೆ ಇದೀಗ ಕರೆ ಬಂದಿದೆ” ಎಂದು ಝುಬೈರ್ ಶುಕ್ರವಾರ (ಅ.9) ತನ್ನ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದರು.


