ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಹ-ಸಂಚಾಲಕ ಮತ್ತು ವಕ್ತಾರ ಸೌರವ್ ದಾಸ್ ಅವರನ್ನು ಬ್ರಿಟನ್ಗೆ ಪ್ರಯಾಣಿಸದಂತೆ ದೆಹಲಿ ವಿಮಾನ ನಿಲ್ದಾಣದಲ್ಲಿ ತಡೆಯಲಾಗಿದೆ.
ಸೋಮವಾರ (ನ.23) ರಾತ್ರಿ ಲಂಡನ್ಗೆ ತೆರಳುವ ವಿಮಾನವನ್ನು ಏರಲು ಸಿದ್ಧರಾಗಿದ್ದಾಗ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಲಸೆ (Immigration) ಕೌಂಟರ್ನಲ್ಲಿ ಈ ಘಟನೆ ನಡೆದಿದೆ.
ಆಕ್ಸ್ಫರ್ಡ್ ಯೂನಿಯನ್ನ (Oxford Union) ವಿದ್ಯಾರ್ಥಿ ಸಂಘವು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಕಾಕ್ರೋಚ್ ಚಳವಳಿ’ ಕುರಿತು ಉಪನ್ಯಾಸ ನೀಡಲು ಮತ್ತು ಸಂವಾದದಲ್ಲಿ ಭಾಗವಹಿಸಲು ಸೌರವ್ ದಾಸ್ ಲಂಡನ್ಗೆ ತೆರಳುತ್ತಿದ್ದರು. ಡಿಸೆಂಬರ್ 1ರಂದು ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ಮತ್ತು ಸೌರವ್ ದಾಸ್ ಪಾಲ್ಗೊಳ್ಳಬೇಕಿತ್ತು.
ವಲಸೆ ತಪಾಸಣೆಯ (Immigration check) ವೇಳೆ ತಮ್ಮ ಪಾಸ್ಪೋರ್ಟ್ ಅನ್ನು ‘ಫ್ಲ್ಯಾಗ್’ (Flag) ಮಾಡಲಾಗಿದೆ ಎಂದು ತಿಳಿಸಿದ ಅಧಿಕಾರಿಗಳು, ದೇಶ ಬಿಟ್ಟು ತೆರಳದಂತೆ ತಡೆದಿದ್ದಾರೆ ಎಂದು ಸೌರವ್ ದಾಸ್ ಸಾಮಾಜಿಕ ಜಾಲತಾಣ ‘ಎಕ್ಸ್’ ಮತ್ತು ಇನ್ಸ್ಟಾಗ್ರಾಮ್ ವಿಡಿಯೋ ಮೂಲಕ ತಿಳಿಸಿದ್ದಾರೆ.
ಈ ಕ್ರಮವನ್ನು ಖಂಡಿಸಿರುವ ಸೌರವ್ ದಾಸ್ ಮತ್ತು ಸಿಜೆಪಿ, “ಬೌದ್ಧಿಕ ಚರ್ಚೆಗಳಿಗೆ ಹೆದರುವ ಹೇಡಿ ಮೋದಿ ಸರ್ಕಾರವು ವಿದ್ಯಾವಂತ ಯುವಕರ ಧ್ವನಿಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಆಕ್ಸ್ಫರ್ಡ್, ಕೇಂಬ್ರಿಡ್ಜ್, ಎಲ್ಎಸ್ಇ, ಮತ್ತು ಎಡಿನ್ಬರ್ಗ್ನಂತಹ ಪ್ರತಿಷ್ಠಿತ ವಿಶ್ವವಿದ್ಯಾಲಯಗಳು 'ಕಾಕ್ರೋಚ್ ಚಳವಳಿ'ಯ ಕುರಿತು ಉಪನ್ಯಾಸ ನೀಡಲು ನನ್ನನ್ನು ಆಹ್ವಾನಿಸಿದ್ದವು. ಆದರೆ, ಈ ಹೇಡಿ ಸರ್ಕಾರ ನನ್ನನ್ನು ಲಂಡನ್ ವಿಮಾನ ಏರಲು ಬಿಟ್ಟಿಲ್ಲ. ಭಾರತೀಯ ವಿದ್ಯಾರ್ಥಿಗಳು ತಮ್ಮ ಹೃದಯ ಮತ್ತು ಆತ್ಮವನ್ನೇ ಧಾರೆಯೆರೆದು ಈ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು. ಆದರೆ, ಬೌದ್ಧಿಕ ವಿರೋಧಿ ಧೋರಣೆ ಹೊಂದಿರುವ ಈ ಸರ್ಕಾರಕ್ಕೆ ನಾನು ಇಂತಹ ಪ್ರತಿಷ್ಠಿತ ಸಂಸ್ಥೆಗಳಿಗೆ ಭೇಟಿ ನೀಡುವುದನ್ನು ಕಂಡು ಭಯವಾಗಿದೆ" ಎಂದು ಸೌರವ್ ದಾಸ್ ಎಕ್ಸ್ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
ಈ ಘಟನೆಯ ಕುರಿತು ದೆಹಲಿ ವಿಮಾನ ನಿಲ್ದಾಣದ ಅಧಿಕಾರಿಗಳಿಂದ ಇದುವರೆಗೆ ಯಾವುದೇ ಅಧಿಕೃತ ಸ್ಪಷ್ಟನೆ ಹೊರಬಿದ್ದಿಲ್ಲ. ತಮಗೆ ಈ ಬಗ್ಗೆ ಮಾಹಿತಿ ಇಲ್ಲ, ಇದು ವಲಸೆ ಅಧಿಕಾರಿಗಳ ವ್ಯಾಪ್ತಿಗೆ ಬರುವ ವಿಚಾರ ಎಂದು ದೆಹಲಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾಗಿ ವರದಿಯಾಗಿದೆ.
ಕಳೆದ ಎರಡು ತಿಂಗಳ ಅವಧಿಯಲ್ಲಿ ಸೌರವ್ ದಾಸ್ ವಿಮಾನ ನಿಲ್ದಾಣದಲ್ಲಿ ತಡೆಗೊಳಗಾಗುತ್ತಿರುವುದು ಇದು ಎರಡನೇ ಬಾರಿ. ಇದಕ್ಕೂ ಮುನ್ನ ಅಕ್ಟೋಬರ್ 10ರಂದು, ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ವಿರುದ್ಧ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸಲು ಮುಂಬೈನಿಂದ ದೆಹಲಿಗೆ ಬಂದಿಳಿದಾಗ, ವಿಮಾನದ ಒಳಗೇ ಸೌರವ್ ದಾಸ್, ಅಭಿಜೀತ್ ದಿಪ್ಕೆ ಮತ್ತು ಆಶುತೋಷ್ ರಂಕಾ ಅವರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದರು.


