“ಕರ್ನಾಟಕ ರಾಜ್ಯದಲ್ಲಿ ಹೂಡಿಕೆ ಆಕರ್ಷಸಿ, ಬೆಂಗಳೂರಿನಿಂದ ಹೊರಗೂ ಕೈಗಾರಿಕಾ ಬೆಳವಣಿಗೆಗೆ ಬದ್ಧವಾಗಿದ್ದೇವೆ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.
ರಾಜ್ಯ ಸರ್ಕಾರದ ಹೂಡಿಕೆ ಆಕರ್ಷಣೆ ಅಭಿಯಾನದ ಭಾಗವಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಮತ್ತು ವಾಣಿಜ್ಯ ಸಚಿವ ಎಂ.ಬಿ. ಪಾಟೀಲ್ ಹಾಗೂ ನಿಯೋಗದೊಂದಿಗೆ ಜಪಾನ್ನ ಮೊತೊಮಚಿ ಘಟಕದಲ್ಲಿ ಟೊಯೊಟಾ ಮೋಟಾರ್ ಕಾರ್ಪೊರೇಷನ್ ನ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿದರು.
ಇದೇ ವೇಳೆ ಟೊಯೊಟಾದ ‘ಗ್ಲೋಬಲ್ ಸ್ಕಿಲ್-ಅಪ್’ ಕಾರ್ಯಕ್ರಮದಡಿ ಜಪಾನ್ ನಲ್ಲಿ ವಿಶೇಷ ತರಬೇತಿ ಪಡೆಯುತ್ತಿರುವ ಟೊಯೊಟಾ ಬಿಡದಿ ಘಟಕದ 20ಕ್ಕೂ ಹೆಚ್ಚು ಐಟಿಐ ಪ್ರಶಿಕ್ಷಣಾರ್ಥಿಗಳೊಂದಿಗೆ ಸೋಮವಾರ ಸಂವಾದ ನಡೆಸಿದರು.
ಈ ಸಂದರ್ಭದಲ್ಲಿ ಸಿಎಂ ತರಬೇತಿದಾರರ ಅನುಭವಗಳ ಬಗ್ಗೆ ಮಾಹಿತಿ ಪಡೆದರು. ಜಪಾನ್ ನಲ್ಲಿ ದೊರೆತಿರುವ ಈ ಸದಾವಕಾಶವನ್ನು ಸದುಪಯೋಗಪಡಿಸಿಕೊಂಡು ತಮ್ಮ ತಾಂತ್ರಿಕ ಕೌಶಲ್ಯ ಹಾಗೂ ಪರಿಣತಿಯನ್ನು ಹೆಚ್ಚಿಸಿಕೊಳ್ಳುವ ಮೂಲಕ ಕರ್ನಾಟಕದ ಅಭಿವೃದ್ಧಿಗೆ ಕೊಡುಗೆ ನೀಡುವಂತೆ ತರಬೇತಿ ಪಡೆಯುತ್ತಿರುವವರಿಗೆ ಬೆನ್ನು ತಟ್ಟಿ ಪ್ರೋತ್ಸಾಹಿಸಿದರು.

ಕರ್ನಾಟಕಕ್ಕೆ ಹೊಸ ಹೂಡಿಕೆಗಳನ್ನು ಆಕರ್ಷಿಸುವುದು, ರಾಜ್ಯದ ಯುವಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಹಾಗೂ ವಿದೇಶಿ ನೇರ ಹೂಡಿಕೆಯ (ಎಫ್ಡಿಐ) ಪ್ರಮುಖ ತಾಣವಾಗಿರುವ ಕರ್ನಾಟಕದ ಸ್ಥಾನವನ್ನು ಮತ್ತಷ್ಟು ಬಲಪಡಿಸುವುದರ ಕುರಿತು ಈ ಚರ್ಚೆಗಳು ನಡೆಸಿದರು.
“ಕರ್ನಾಟಕ ಸರ್ಕಾರದ ‘ಬಿಯಾಂಡ್ ಬೆಂಗಳೂರು’ ಯೋಜನೆಯ ಮೂಲಕ ಕೈಗಾರಿಕಾ ಅಭಿವೃದ್ಧಿ, ಹೂಡಿಕೆಗಳು ಮತ್ತು ಉದ್ಯೋಗಾವಕಾಶಗಳನ್ನು ರಾಜ್ಯ ರಾಜಧಾನಿ ಬೆಂಗಳೂರಿನಿಂದ ಹೊರಗೂ ಕೊಂಡೊಯ್ಯಲು ಮತ್ತು ಎಲ್ಲಾ ಪ್ರದೇಶಗಳಲ್ಲಿ ಸಮತೋಲಿತ ಕೈಗಾರಿಕಾ ಬೆಳವಣಿಗೆಯನ್ನು ಖಚಿತಪಡಿಸಿಕೊಳ್ಳಲು ಕರ್ನಾಟಕ ಬದ್ಧವಾಗಿದೆ” ಎಂದು ಹೇಳಿದರು.
“ಕೈಗಾರಿಕೆಗಳನ್ನು ಆಕರ್ಷಿಸಿ ಉದ್ಯೋಗಗಳನ್ನು ಸೃಷ್ಟಿಸುವುದು ಮತ್ತು ಬೆಂಗಳೂರಿನಿಂದ ಹೊರಗೆ ಆರ್ಥಿಕ ಅವಕಾಶಗಳನ್ನು ವಿಸ್ತರಿಸುವ ಮೂಲಕ ಕರ್ನಾಟಕದ ಪ್ರತಿಯೊಂದು ಪ್ರದೇಶವನ್ನೂ ರಾಜ್ಯದ ಬೆಳವಣಿಗೆಯ ಪಯಣದಲ್ಲಿ ಪಾಲುದಾರರನ್ನಾಗಿ ಮಾಡುವುದು ಸರ್ಕಾರದ ಹೂಡಿಕೆ ಅಭಿಯಾನದ ಗುರಿಯಾಗಿದೆ” ಎಂದು ತಿಳಿಸಿದರು.


