ಕ್ಷೇತ್ರ ಪುನರ್ವಿಂಗಡಣೆ (ಡಿಲಿಮಿಟೇಶನ್) ಮಸೂದೆಗೆ ಬೆಂಬಲ ಪಡೆಯುವ ಸಲುವಾಗಿ ಭಾರತೀಯ ಜನತಾ ಪಕ್ಷವು (ಬಿಜೆಪಿ) ಸಂಸದರಿಗೆ ತಲಾ 150 ಕೋಟಿ ರೂಪಾಯಿ ಆಫರ್ ಮಾಡುತ್ತಿದೆ ಎಂದು ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ ಬಣ) ನಾಯಕ ಸಂಜಯ್ ರಾವುತ್ ಗಂಭೀರ ಆರೋಪ ಮಾಡಿದ್ದಾರೆ.
ಭಾನುವಾರ (ನವೆಂಬರ್ 22) ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಬಳಿ ಈ ಕಾನೂನನ್ನು ಅಂಗೀಕರಿಸಲು ಬೇಕಾದ 40 ರಿಂದ 50 ಸಂಸದರ ಬೆಂಬಲ ಸದ್ಯಕ್ಕೆ ಇಲ್ಲ. ಹೀಗಾಗಿ ಇತರ ಪಕ್ಷಗಳ ಮೇಲೆ ಒತ್ತಡ ಹೇರಲು ಮತ್ತು ಸಂಸದರನ್ನು ಖರೀದಿಸಲು ಸಮಯಾವಕಾಶ ಪಡೆಯುವ ಉದ್ದೇಶದಿಂದ ಸಂಸತ್ತಿನ ಅಧಿವೇಶನವನ್ನು ಉದ್ದೇಶಪೂರ್ವಕವಾಗಿ ವಿಳಂಬಗೊಳಿಸಲಾಗುತ್ತಿದೆ ಎಂದು ದೂರಿದ್ದಾರೆ.
ಮಹಾರಾಷ್ಟ್ರದ ಸಚಿವರೊಬ್ಬರಿಗೆ ಹೊಣೆ :
ಬಿಜೆಪಿಯ ಈ ಯೋಜನೆಯನ್ನು ಕಾರ್ಯಗತಗೊಳಿಸುವ ಜವಾಬ್ದಾರಿಯನ್ನು ಮಹಾರಾಷ್ಟ್ರದ ಸಚಿವರೊಬ್ಬರು ವಹಿಸಿಕೊಂಡಿದ್ದು, ಇದಕ್ಕೆ ಅಗತ್ಯವಿರುವ ಹಣವನ್ನು ಒದಗಿಸುವ ಭರವಸೆಯನ್ನೂ ನೀಡಿದ್ದಾರೆ ಎಂದು ರಾವುತ್ ಆರೋಪಿಸಿದ್ದಾರೆ. ಅಲ್ಲದೆ, ತಮ್ಮ ಪಕ್ಷದಿಂದ ಹೊರಬಂದು ಡಿಲಿಮಿಟೇಶನ್ ಮಸೂದೆಗೆ ಬೆಂಬಲ ನೀಡುವ ಸಂಸದರಿಗೆ ತಲಾ 150 ಕೋಟಿ ರೂ. ನೀಡುವುದರ ಜೊತೆಗೆ, ಅವರು ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹಗೊಳ್ಳದಂತೆ ನೋಡಿಕೊಳ್ಳುವ ಭರವಸೆಯನ್ನೂ ನೀಡಲಾಗುತ್ತಿದೆ ಎಂದು ರಾವುತ್ ಹೇಳಿದ್ದಾರೆ. ಬಿಜೆಪಿಗೆ ದೇಶದ ಬಗ್ಗೆಯಾಗಲಿ ಅಥವಾ ಸಂಸತ್ತಿನ ಸಂವಿಧಾನದ ಬಗ್ಗೆಯಾಗಲಿ ಯಾವುದೇ ಕಾಳಜಿ ಇಲ್ಲ ಎಂದು ಕಿಡಿಕಾರಿದ್ದಾರೆ.
ಸಂಸತ್ತಿನ ಮುಂಗಾರು ಅಧಿವೇಶನವು ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟು 100 ದಿನಗಳು ಕಳೆದರೂ ಇನ್ನೂ ಅಧಿಕೃತವಾಗಿ ಮುಕ್ತಾಯಗೊಂಡಿಲ್ಲ (ಪ್ರೊರೋಗ್ ಆಗಿಲ್ಲ). ಇದು ಇತಿಹಾಸದಲ್ಲೇ ಅತ್ಯಂತ ಸುದೀರ್ಘ ಅವಧಿಯ ಮುಂದೂಡಿಕೆಯಾಗಿದೆ. ಲೋಕಸಭೆಯ ಸ್ಥಾನಗಳ ಸಂಖ್ಯೆಯನ್ನು 850ಕ್ಕೆ ಹೆಚ್ಚಿಸುವ ವಿವಾದಾತ್ಮಕ ಡಿಲಿಮಿಟೇಶನ್ ಮಸೂದೆಯನ್ನು ಮರುಮಂಡಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸುತ್ತಿದೆ ಎಂಬ ಊಹಾಪೋಹಗಳಿಗೆ ಇದು ಪುಷ್ಟಿ ನೀಡಿದೆ.
ಕಳೆದ ಏಪ್ರಿಲ್ನಲ್ಲಿ, ಮೋದಿ ಸರ್ಕಾರ ಮಂಡಿಸಿದ್ದ ಸಂವಿಧಾನದ (131ನೇ ತಿದ್ದುಪಡಿ) ಮಸೂದೆ, 2026ಕ್ಕೆ ಲೋಕಸಭೆಯಲ್ಲಿ ಮೂರನೇ ಎರಡರಷ್ಟು ಬಹುಮತ ಸಿಗದೆ ವಿಫಲವಾಗಿತ್ತು. 2027ರ ಜನಗಣತಿ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದರೂ, ಈ ಮಸೂದೆಯಲ್ಲಿ 2011ರ ಜನಗಣತಿಯ ಆಧಾರದ ಮೇಲೆ ಕ್ಷೇತ್ರ ಪುನರ್ವಿಂಗಡಣೆ ಮಾಡಲು ಉದ್ದೇಶಿಸಿರುವುದಕ್ಕೆ ವಿರೋಧ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.


