ಕೇರಳ ಮೂಲದ ಪತ್ರಕರ್ತ ರೆಜಾಜ್ ಎಂ. ಶೀಬಾ ಸಿದ್ದೀಕ್ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ದಾಖಲಿಸಲಾಗಿದ್ದ ಎರಡು ಆರೋಪಗಳಿಂದ ನಾಗಪುರದ ಸೆಷನ್ಸ್ ನ್ಯಾಯಾಲಯ ಅವರನ್ನು ಬಿಡುಗಡೆಗೊಳಿಸಿದೆ. ಈ ಪ್ರಕರಣದಲ್ಲಿ ಅವರು 560 ದಿನಗಳಿಂದ ಜೈಲಿನಲ್ಲಿದ್ದಾರೆ. ಆದರೆ, ಜಾಮೀನು ಅರ್ಜಿಯ ವಿಚಾರಣೆ ಇನ್ನೂ ನಡೆಯದ ಕಾರಣ ಅವರು ಸದ್ಯಕ್ಕೆ ಜೈಲಿನಲ್ಲೇ ಮುಂದುವರಿದಿದ್ದಾರೆ ಎಂದು ವರದಿಗಳು ತಿಳಿಸಿವೆ.
ನವೆಂಬರ್ 20ರಂದು ನಾಗಪುರದ ಜಿಲ್ಲಾ ನ್ಯಾಯಾಧೀಶರು ಹಾಗೂ 6ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರು ಸಿದ್ದೀಕ್ ಸಲ್ಲಿಸಿದ್ದ ಅರ್ಜಿಯನ್ನು ಭಾಗಶಃ ಪುರಸ್ಕರಿಸಿದ್ದಾರೆ. ಯುಎಪಿಎ ಕಾಯ್ದೆಯ ಸೆಕ್ಷನ್ 38 ಮತ್ತು 39ರ ಅಡಿಯಲ್ಲಿದ್ದ ಆರೋಪಗಳನ್ನು ಕೈಬಿಟ್ಟಿದ್ದಾರೆ. ಅದೇ ವೇಳೆ, ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) 2023ರ ಸೆಕ್ಷನ್ 152 ಮತ್ತು 353(1)ರ ಅಡಿಯಲ್ಲಿ ಅವರ ವಿರುದ್ಧ ಆರೋಪಗಳನ್ನು ರೂಪಿಸುವಂತೆ ನ್ಯಾಯಾಲಯ ನಿರ್ದೇಶಿಸಿದೆ. ಮುಂದಿನ ವಿಚಾರಣೆಯನ್ನು ಡಿಸೆಂಬರ್ 4ಕ್ಕೆ ನಿಗದಿಪಡಿಸಲಾಗಿದೆ.
2025ರ ಮೇ 7ರಂದು ನಾಗಪುರದಲ್ಲಿ ಸಿದ್ದೀಕ್ ಅವರನ್ನು ವಶಕ್ಕೆ ಪಡೆಯಲಾಗಿತ್ತು. ಮರುದಿನ ಅವರ ಬಂಧನವನ್ನು ಅಧಿಕೃತವಾಗಿ ದಾಖಲಿಸಲಾಗಿತ್ತು. ಬಳಿಕ ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ತನಿಖೆಯ ಹೊಣೆ ವಹಿಸಿಕೊಂಡಿತ್ತು. ನಿಷೇಧಿತ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಸಂಘಟನೆಯೊಂದಿಗೆ ಅವರಿಗೆ ಸಂಪರ್ಕವಿದೆ ಎಂದು ತನಿಖಾ ಸಂಸ್ಥೆ ಆರೋಪಿಸಿತ್ತು. ಶೋಧ ಕಾರ್ಯಾಚರಣೆ ವೇಳೆ ಪತ್ತೆಯಾಗಿದೆ ಎನ್ನಲಾದ ಮಾರ್ಕ್ಸ್‌ವಾದಿ-ಲೆನಿನ್‌ವಾದಿ ಸಾಹಿತ್ಯ ಮತ್ತು ಎಲೆಕ್ಟ್ರಾನಿಕ್ ಸಾಧನಗಳನ್ನು ತನಿಖಾಧಿಕಾರಿಗಳು ಇದಕ್ಕೆ ಆಧಾರವಾಗಿ ಉಲ್ಲೇಖಿಸಿದ್ದರು.
ಸ್ವತಂತ್ರ ಪತ್ರಕರ್ತರಾಗಿರುವ ಸಿದ್ದೀಕ್, ಮಕ್ತೂಬ್ ಮೀಡಿಯಾ, ದಿ ಆಬ್ಸರ್ವರ್ ಪೋಸ್ಟ್ ಮತ್ತು ಕೌಂಟರ್‌ಕರೆಂಟ್ಸ್ ಸೇರಿದಂತೆ ಹಲವು ಸ್ವತಂತ್ರ ಮಾಧ್ಯಮ ವೇದಿಕೆಗಳಿಗೆ ಲೇಖನಗಳನ್ನು ಬರೆದಿದ್ದಾರೆ. ಮಾನವ ಹಕ್ಕುಗಳು, ಸಾಮಾಜಿಕ ನ್ಯಾಯ, ಅಲ್ಪಸಂಖ್ಯಾತರು ಮತ್ತು ಆದಿವಾಸಿ ಸಮುದಾಯಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಅವರು ವರದಿ ಮಾಡುತ್ತಿದ್ದರು.
ಬಸ್ತಾರ್‌ನಲ್ಲಿ ನಡೆದ ಭದ್ರತಾ ಕಾರ್ಯಾಚರಣೆಗಳು ಹಾಗೂ ಆದಿವಾಸಿ ಹೋರಾಟಗಾರರಾದ ಸುನೀತಾ ಪೊಟ್ಟಂ ಮತ್ತು ರಘು ಮಿಡಿಯಾಮಿ ಅವರ ಬಂಧನದ ಬಗ್ಗೆಯೂ ಅವರು ವರದಿ ಮಾಡಿದ್ದರು.
ಪತ್ರಿಕಾ ಸ್ವಾತಂತ್ರ್ಯಕ್ಕೆ ಸಂಬಂಧಿಸಿದಂತೆ ಪತ್ರಕರ್ತ ಸಿದ್ದೀಕ್ ಕಪ್ಪನ್ ಅವರ ಅನುಭವಗಳ ಬಗ್ಗೆಯೂ ಸಿದ್ದೀಕ್ ವರದಿ ಮಾಡಿದ್ದರು. ಅಲ್ಲದೆ, ಪ್ಯಾಲೆಸ್ತೀನ್ ಪರ ನಡೆದ ಪ್ರತಿಭಟನೆಗಳು ಮತ್ತು ಕಾಶ್ಮೀರದಲ್ಲಿ ಕಟ್ಟಡಗಳ ನೆಲಸಮ ಕಾರ್ಯಾಚರಣೆಗಳನ್ನು ವಿರೋಧಿಸಿ ನಡೆದ ಪ್ರತಿಭಟನೆಗಳ ಬಗ್ಗೆಯೂ ವರದಿ ಮಾಡಿದ್ದರು. ಪ್ರತಿಭಟನೆಗಳಿಗೆ ಸಂಬಂಧಿಸಿದಂತೆ ಕೇರಳದಲ್ಲಿ ಅವರ ವಿರುದ್ಧ ಐದು ಎಫ್‌ಐಆರ್‌ಗಳು ದಾಖಲಾಗಿದ್ದವು. ಅವರ ಬಂಧನ ಪ್ರಕರಣವು ಪತ್ರಿಕಾ ಸ್ವಾತಂತ್ರ್ಯದ ಕುರಿತಾಗಿ ಹಲವು ಆತಂಕಗಳನ್ನು ಹುಟ್ಟುಹಾಕಿತ್ತು.
ನ್ಯಾಯಾಲಯದ ಇತ್ತೀಚಿನ ಆದೇಶದಿಂದ ಅವರ ವಿರುದ್ಧದ ಯುಎಪಿಎ ಆರೋಪಗಳು ಕೈಬಿದ್ದಿದ್ದರೂ, ಭಾರತೀಯ ನ್ಯಾಯ ಸಂಹಿತೆಯ ಅಡಿಯಲ್ಲಿನ ಕ್ರಿಮಿನಲ್ ಪ್ರಕರಣದ ವಿಚಾರಣೆ ಮುಂದುವರಿಯಲಿದೆ.


