ಸುಮಾರು 4,000 ಅಗ್ನಿವೀರ ಸಿಬ್ಬಂದಿಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಯನ್ನು ಹ್ಯಾಕ್ ಮಾಡಿ, ಅದನ್ನು ಡಾರ್ಕ್ ವೆಬ್ನಲ್ಲಿ 500 ಡಾಲರ್ಗೆ ಮಾರಾಟ ಮಾಡಲು ಯತ್ನಿಸಿದ ಆರೋಪದ ಮೇಲೆ ಹರಿಯಾಣದ ಬಲ್ಲಭಗಢದ 14 ವರ್ಷದ ಬಾಲಕನನ್ನು ದೆಹಲಿ ಪೊಲೀಸರ ವಿಶೇಷ ಘಟಕ ಬಂಧಿಸಿದೆ ಎಂದು ವರದಿಗಳು ತಿಳಿಸಿವೆ.
ಮಾಜಿ ಅಗ್ನಿವೀರರು ಇತರ ಸರ್ಕಾರಿ ಇಲಾಖೆಗಳಲ್ಲಿನ ಉದ್ಯೋಗಾವಕಾಶಗಳನ್ನು ಹುಡುಕಲು ಮತ್ತು ನೋಂದಣಿ ಮಾಡಿಕೊಳ್ಳಲು ನೆರವಾಗುವ ಉದ್ದೇಶದಿಂದ ರೂಪಿಸಲಾಗಿದ್ದ ಪರೀಕ್ಷಾರ್ಥ ವೆಬ್ಸೈಟ್ಗೆ ಬಾಲಕ ಅನಧಿಕೃತವಾಗಿ ಪ್ರವೇಶಿಸಿದ್ದಾನೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಬಳಿಕ ಅಲ್ಲಿದ್ದ ಮಾಹಿತಿಯನ್ನು ಪಡೆದುಕೊಂಡು, ಸುಮಾರು 4,000 ಸಿಬ್ಬಂದಿಯ ವೈಯಕ್ತಿಕ ವಿವರಗಳನ್ನು ಒಳಗೊಂಡಿರುವ ಡೇಟಾಬೇಸ್ ತನ್ನ ಬಳಿ ಇದೆ ಎಂದು ಹೇಳಿಕೊಂಡು ಡಾರ್ಕ್ ವೆಬ್ನಲ್ಲಿ ಮಾರಾಟಕ್ಕೆ ಜಾಹೀರಾತು ನೀಡಿದ್ದಾನೆ ಎನ್ನಲಾಗಿದೆ.
ವೆಬ್ಸೈಟ್ಗೆ ಅನಧಿಕೃತವಾಗಿ ಪ್ರವೇಶಿಸಲು ಕೃತಕ ಬುದ್ಧಿಮತ್ತೆ (ಎಐ) ಸಾಧನಗಳನ್ನು ಬಳಸಿರುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಆದರೆ, ಸೈಬರ್ ದಾಳಿಗೆ ಬಳಸಲಾದ ನಿಖರ ವಿಧಾನವೇನು ಎಂಬುದನ್ನು ಇನ್ನೂ ಪರಿಶೀಲಿಸಲಾಗುತ್ತಿದೆ.
ದೆಹಲಿ ಪೊಲೀಸರ ಇಂಟೆಲಿಜೆನ್ಸ್ ಫ್ಯೂಷನ್ ಆ್ಯಂಡ್ ಸ್ಟ್ರಾಟೆಜಿಕ್ ಆಪರೇಷನ್ಸ್ ಘಟಕವು ಬಾಲಕನ ಡಿಜಿಟಲ್ ಸಾಧನಗಳಿಂದ ಮಾಹಿತಿಯನ್ನು ವಶಪಡಿಸಿಕೊಂಡಿದೆ. ವಶಪಡಿಸಿಕೊಂಡಿರುವ ಮಾಹಿತಿಯಲ್ಲಿ ನಿಜವಾದ ಅಗ್ನಿವೀರರ ದಾಖಲೆಗಳಿವೆಯೇ ಮತ್ತು ಈ ಡೇಟಾ ಸೋರಿಕೆಯ ವ್ಯಾಪ್ತಿ ಎಷ್ಟಿದೆ ಎಂಬುದನ್ನು ಪತ್ತೆಹಚ್ಚಲು ತನಿಖಾಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ವಶಪಡಿಸಿಕೊಂಡ ಮಾಹಿತಿಯ ಸತ್ಯಾಸತ್ಯತೆಯನ್ನು ಪರಿಶೀಲಿಸಲು, ಕೇಂದ್ರ ಗೃಹ ಸಚಿವಾಲಯದಿಂದ ಅಧಿಕೃತ ಅಗ್ನಿವೀರರ ಡೇಟಾಬೇಸ್ ಒದಗಿಸುವಂತೆ ಪೊಲೀಸರು ಕೋರಿದ್ದಾರೆ. ಅಲ್ಲದೆ, ಡಾರ್ಕ್ ವೆಬ್ನಲ್ಲಿ ಮಾರಾಟಕ್ಕೆ ಇಡಲಾಗಿದ್ದ ಮಾಹಿತಿಯನ್ನು ಯಾರಾದರೂ ಪ್ರವೇಶಿಸಿದ್ದಾರೆಯೇ ಅಥವಾ ಖರೀದಿಸಿದ್ದಾರೆಯೇ ಮತ್ತು ಬಾಲಕನ ಸಾಧನಗಳಲ್ಲಿ ಪತ್ತೆಯಾದ ಮಾಹಿತಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಡೇಟಾ ಸೋರಿಕೆಯಾಗಿದೆಯೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ.
ಕಾನೂನು ಪ್ರಕ್ರಿಯೆಯಂತೆ ಬಾಲಕನನ್ನು ವಿಚಾರಣೆ ನಡೆಸಿದ ಬಳಿಕ ಆತನ ಕುಟುಂಬದವರಿಗೆ ಒಪ್ಪಿಸಲಾಗಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.
ಸೇನಾ ನೇಮಕಾತಿಗೆ ಸಂಬಂಧಿಸಿದ ವೈಯಕ್ತಿಕ ಮಾಹಿತಿಯನ್ನು ಹೊಂದಿರುವ ಡಿಜಿಟಲ್ ವೇದಿಕೆಗಳ ಭದ್ರತೆಯ ಕುರಿತು ಈ ಘಟನೆ ಆತಂಕಗಳನ್ನು ಹುಟ್ಟುಹಾಕಿದೆ. ಕೇಂದ್ರ ಸರ್ಕಾರವು 2022ರ ಜೂನ್ನಲ್ಲಿ ಅಗ್ನಿಪಥ್ ಯೋಜನೆಯನ್ನು ಆರಂಭಿಸಿದ್ದು, ಇದರಡಿ ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಗಳಿಗೆ ನಾಲ್ಕು ವರ್ಷಗಳ ಸೇವಾವಧಿಗಾಗಿ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗುತ್ತದೆ.


