ಉತ್ತರ ಪ್ರದೇಶದ ಮತದಾರರ ಪಟ್ಟಿಯಿಂದ ಸುಮಾರು 1.27 ಕೋಟಿ ಹಿಂದೂ ಮತದಾರರ ಹೆಸರುಗಳು ಕೈಬಿಟ್ಟುಹೋಗಿವೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ನೀಡಿರುವ ಹೇಳಿಕೆಗೆ ಸಂಬಂಧಿಸಿದ ಪೂರಕ ದಾಖಲೆಗಳು ಮತ್ತು ದತ್ತಾಂಶಗಳನ್ನು ಸಲ್ಲಿಸುವಂತೆ ಸ್ವತಂತ್ರ SIR ಆಯೋಗವು ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆದಿದೆ.
ಲಾಯರ್ಸ್ ಅಸೋಸಿಯೇಷನ್ ಫಾರ್ ಕಾನ್‌ಸ್ಟಿಟ್ಯೂಷನ್ (LAFC) ಎಂಬ ವಕೀಲರ ಸಂಸ್ಥೆಯು ರಚಿಸಿರುವ, ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಮದನ್ ಬಿ. ಲೋಕೂರ್ ನೇತೃತ್ವದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಕುರಿತ ಸ್ವತಂತ್ರ ಆಯೋಗವು ನವೆಂಬರ್ 21ರಂದು ಈ ಪತ್ರವನ್ನು ಕಳುಹಿಸಿದೆ ಎಂದು ಕಾನೂನು ಸುದ್ದಿ ಸಂಸ್ಥೆ ಲೈವ್ ಲಾ ವರದಿ ಮಾಡಿದೆ. ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಅರ್ಹ ಮತದಾರರನ್ನು ಅನ್ಯಾಯವಾಗಿ ಪಟ್ಟಿಯಿಂದ ಹೊರಹಾಕಲಾಗಿದೆಯೇ ಎಂಬುದನ್ನು ಪರಿಶೀಲಿಸುವ ತನ್ನ ಅಧಿಕಾರ ವ್ಯಾಪ್ತಿಗೆ ಮುಖ್ಯಮಂತ್ರಿಗಳ ಹೇಳಿಕೆಯು ನೇರವಾಗಿ ಸಂಬಂಧಿಸಿದೆ ಎಂದು ಆಯೋಗ ಸ್ಪಷ್ಟಪಡಿಸಿದೆ.
SIR ಪ್ರಕ್ರಿಯೆಯ ಸಂದರ್ಭದಲ್ಲಿ ಅನುಸರಿಸಲಾದ ವಿಧಾನದಲ್ಲಿನ ಸಂಭವನೀಯ ಲೋಪಗಳನ್ನು ತೋರಿಸಬಹುದಾದ ಯಾವುದೇ ಮಹತ್ವದ ದತ್ತಾಂಶ ಅಥವಾ ಪೂರಕ ಮಾಹಿತಿಯನ್ನು ಹಂಚಿಕೊಳ್ಳುವಂತೆ ಆಯೋಗವು ಉತ್ತರ ಪ್ರದೇಶ ಮುಖ್ಯಮಂತ್ರಿಗಳನ್ನು ಕೋರಿದೆ. ಮುಖ್ಯಮಂತ್ರಿಗಳು ಒದಗಿಸುವ ಯಾವುದೇ ಮಾಹಿತಿಯನ್ನು ಸಂಪೂರ್ಣ ಸ್ವಾಯತ್ತತೆ ಮತ್ತು ನಿಷ್ಪಕ್ಷಪಾತದಿಂದ ಪರಿಶೀಲಿಸಲಾಗುವುದು ಎಂದು ಆಯೋಗ ಭರವಸೆ ನೀಡಿದೆ.
ಮುಂಬರುವ ಚುನಾವಣೆಗಳು ಹಾಗೂ ಲಕ್ಷಾಂತರ ಮತದಾರರು ತಮ್ಮ ಮತದಾನದ ಹಕ್ಕಿನಿಂದ ವಂಚಿತರಾಗುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಈ ಪತ್ರವನ್ನು ಹೊರಡಿಸಲಾಗಿದ್ದು, ಆದಷ್ಟು ಬೇಗ ಅಗತ್ಯ ಮಾಹಿತಿಯನ್ನು ನೀಡುವಂತೆ ಆಯೋಗ ಮನವಿ ಮಾಡಿದೆ. ಭಾರತೀಯ ಚುನಾವಣಾ ಆಯೋಗ ನಡೆಸುತ್ತಿರುವ SIR ಪ್ರಕ್ರಿಯೆಯ ವಿನ್ಯಾಸ, ಅನುಷ್ಠಾನ ಮತ್ತು ಪರಿಣಾಮಗಳ ಕುರಿತ ಕಳವಳಗಳನ್ನು ಪರಿಶೀಲಿಸಲು LAFC ಈ ಸ್ವತಂತ್ರ ಆಯೋಗವನ್ನು ರಚಿಸಿದೆ.
ನ್ಯಾಯಮೂರ್ತಿ ಮದನ್ ಬಿ. ಲೋಕೂರ್ ಅವರಲ್ಲದೆ, ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎ.ಕೆ. ಪಟ್ನಾಯಕ್, ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಬದರ್ ದುರ್ರೆಜ್ ಅಹ್ಮದ್, ದೆಹಲಿ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ರೇಖಾ ಶರ್ಮಾ ಮತ್ತು ಪಾಟ್ನಾ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಅಂಜನಾ ಪ್ರಕಾಶ್ ಅವರು ಈ ಆಯೋಗದ ಸದಸ್ಯರಾಗಿದ್ದಾರೆ. ಈ ಪತ್ರದ ಪ್ರತಿಯನ್ನು ಭಾರತೀಯ ಚುನಾವಣಾ ಆಯೋಗಕ್ಕೂ ಕಳುಹಿಸಲಾಗಿದೆ.


