2024ರಲ್ಲಿ ನಡೆದ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ಮಹಾರಾಷ್ಟ್ರ, ಹರಿಯಾಣ ಹಾಗೂ ಜಮ್ಮು ಮತ್ತು ಕಾಶ್ಮೀರದ ಒಟ್ಟು 200 ಕ್ಷೇತ್ರಗಳಲ್ಲಿ ಸಂಜೆ 5 ಗಂಟೆಯ ನಂತರ ಎಷ್ಟು ಮಂದಿ ಮತದಾನ ಮಾಡಿದ್ದಾರೆ ಎಂಬುದರ ಅಧಿಕೃತ ದಾಖಲೆಯೇ ಭಾರತೀಯ ಚುನಾವಣಾ ಆಯೋಗದ (ಇಸಿಐ) ಬಳಿಯಿಲ್ಲ ಎಂಬ ರಿಪೋಟರ್ಸ್ ಕಲೆಕ್ಟಿವ್ನ ಇತ್ತೀಚಿನ ವರದಿಗೆ, ಮೂರೂ ರಾಜ್ಯಗಳ ಚುನಾವಣಾ ಅಧಿಕಾರಿಗಳು ಸಮಜಾಯಿಸಿಗಳನ್ನು ನೀಡಿದ್ದು, ಇದಕ್ಕೆ ವರದಿಗಾರ್ತಿ ಸುಮೇಧಾ ಮಿತ್ತಲ್ ತಿರುಗೇಟು ಕೊಟ್ಟಿದ್ದಾರೆ.
ಮಹಾರಾಷ್ಟ್ರ, ಹರಿಯಾಣ ಮತ್ತು ಜಮ್ಮು-ಕಾಶ್ಮೀರದಲ್ಲಿ 2024ರಲ್ಲಿ ಚುನಾವಣೆ ನಡೆದ 467 ವಿಧಾನಸಭಾ ಹಾಗೂ 63 ಲೋಕಸಭಾ ಕ್ಷೇತ್ರಗಳ (ಒಟ್ಟು 530 ಕ್ಷೇತ್ರಗಳ) ಚುನಾವಣಾಧಿಕಾರಿಗಳ ಆಂತರಿಕ ವರದಿಗಳು ಮತ್ತು 4,212 ಭೌತಿಕ ದಾಖಲೆಗಳನ್ನು ಪರಿಶೀಲಿಸಲಾಗಿದೆ. ಈ ಪೈಕಿ 200 ಕ್ಷೇತ್ರಗಳಲ್ಲಿ ಸಂಜೆ 5 ಗಂಟೆಯ ನಂತರ ಮತದಾನದ ಮಾಡಿದವರ ಲೆಕ್ಕವೇ ನಮೂದಾಗಿಲ್ಲ ಎಂದು ರಿಪೋಟರ್ಸ್ ಕಲೆಕ್ಟಿವ್ ತನ್ನ ವರದಿಯಲ್ಲಿ ಹೇಳಿತ್ತು.
ಈ ವರದಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಪ್ರತಿಕ್ರಿಯೆ ಕೊಟ್ಟಿರುವ ಮೂರು ರಾಜ್ಯಗಳ ಮುಖ್ಯ ಚುನಾವಣಾ ಅಧಿಕಾರಿಗಳು, ಫಾರ್ಮ್ 17C, ಇಂಡೆಕ್ಸ್ ಕಾರ್ಡ್ ಮತ್ತು ರಿಟರ್ನಿಂಗ್ ಆಫೀಸರ್ ವರದಿಯ ಬಗ್ಗೆ ವಿವರಣೆ ಕೊಟ್ಟು ಜಾರಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. 5 ಗಂಟೆಯ ನಂತರದ ದಾಖಲೆ ಇಲ್ಲ ಎಂದರೆ, ‘ಅಣ್ಣ ಕೇಳಿದಾಗ ಸುಣ್ಣ ಕೊಟ್ಟಂತೆ’ ಬೇರೆಯದ್ದೇ ಉತ್ತರಗಳನ್ನು ನೀಡಿದ್ದಾರೆ.
ಇದಕ್ಕೆ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ದಾಖಲೆ ಸಹಿತ ತಿರುಗೇಟು ಕೊಟ್ಟಿರುವ ವರದಿಗಾರ್ತಿ ಸುಮೇಧಾ ಮಿತ್ತಲ್ ಅವರು, “ಚುನಾವಣಾ ಅಧಿಕಾರಿಗಳು ತಮ್ಮ ಪ್ರತ್ಯುತ್ತರವನ್ನು (ರಿಜಾಯಿಂಡರ್) ಇಂಡೆಕ್ಸ್ ಕಾರ್ಡ್ಗಳು ಮತ್ತು ಫಾರಂ- 17C ಎಂಬ ಎರಡು ದಾಖಲೆಗಳ ಆಧಾರದ ಮೇಲೆ ನೀಡಿದ್ದಾರೆ. ಇವಿಎಂ ಮೂಲಕ ಚಲಾವಣೆಯಾದ ಮತಗಳನ್ನು ಚುನಾವಣಾ ಆಯೋಗದ ಅಧಿಕಾರಿಗಳು ಈ ದಾಖಲೆಗಳಲ್ಲಿ ನಮೂದಿಸುತ್ತಾರೆ ಎಂದು ಅವರು ತಿಳಿಸಿದ್ದಾರೆ.”
“ಎರಡು ಗಂಟೆಗಳಿಗೊಮ್ಮೆ ನೀಡಲಾಗುವ ದತ್ತಾಂಶದ (ಡೇಟಾ) ಮೊದಲ ಮೂಲವೆಂದರೆ ಪ್ರಿಸೈಡಿಂಗ್ ಆಫೀಸರ್ (ಮತಗಟ್ಟೆ ಅಧ್ಯಕ್ಷಾಧಿಕಾರಿ) ಅವರ ಡೈರಿ. ಪ್ರತಿ ಎರಡು ಗಂಟೆಗಳಿಗೊಮ್ಮೆ, ಮತಗಟ್ಟೆಯ ಉಸ್ತುವಾರಿ ವಹಿಸಿರುವ ಅಧಿಕಾರಿಯು ಇವಿಎಂನಲ್ಲಿ ಚಲಾವಣೆಯಾದ ಮತಗಳ ಸಂಖ್ಯೆಯನ್ನು ಇದರಲ್ಲಿ ದಾಖಲಿಸುತ್ತಾರೆ.”

Document Courtesy : reporters-collective.in
“ಮತಗಟ್ಟೆಯೊಳಗೆ ಪ್ರವೇಶಿಸಿದ ಮತದಾರರ ಸಂಖ್ಯೆಯೊಂದಿಗೆ ಚಲಾವಣೆಯಾದ ಮತಗಳ ಅಂಕಿಅಂಶವನ್ನು ತಾಳೆ ನೋಡಲು ಅನುಕೂಲವಾಗುವಂತೆ, ಮತಗಟ್ಟೆ ಅಧಿಕಾರಿಯು ಪ್ರತಿ ಎರಡು ಗಂಟೆಗಳಿಗೊಮ್ಮೆ ಚಲಾವಣೆಯಾದ ಮತಗಳನ್ನು ಡೈರಿಯಲ್ಲಿ ದಾಖಲಿಸಬೇಕೆಂದು ಚುನಾವಣಾ ಆಯೋಗದ ನಿಯಮಗಳು ಸೂಚಿಸುತ್ತವೆ. ಮತಗಟ್ಟೆಯೊಳಗೆ ಬರುವ ಮತದಾರರ ಆ ಎರಡನೇ ದಾಖಲೆಯನ್ನು ಮತಗಟ್ಟೆ ಅಧಿಕಾರಿಯೊಬ್ಬರು ‘ಮತದಾರರ ನೋಂದಣಿ ಪುಸ್ತಕ’ದಲ್ಲಿ (Register of Voters) ನಿರ್ವಹಿಸುತ್ತಾರೆ.”
“ಮತದಾನ ಮುಗಿಯುವ ಮೊದಲೇ ಮತಗಟ್ಟೆಯಲ್ಲಿ ನಡೆಯಬಹುದಾದ ಯಾವುದೇ ಚುನಾವಣಾ ಅಕ್ರಮಗಳನ್ನು ಪತ್ತೆಹಚ್ಚಲು ಹೀಗೆ ಮಾಡಲಾಗುತ್ತದೆ. ಮತಗಟ್ಟೆ ಅಧಿಕಾರಿಯ ಡೈರಿಯನ್ನು ನೇರವಾಗಿ ಚುನಾವಣಾ ಆಯೋಗದ ಕೇಂದ್ರ ಕಚೇರಿಗೆ ಸಲ್ಲಿಸದ ಕಾರಣ, ಈ ದಾಖಲೆಗಳನ್ನು ಚುನಾವಣಾಧಿಕಾರಿಯ ವರದಿಯಲ್ಲಿ ಒಟ್ಟುಗೂಡಿಸಿ ಚುನಾವಣಾ ಆಯೋಗದ ಕೇಂದ್ರ ಕಚೇರಿಗೆ ಸಲ್ಲಿಸಲಾಗುತ್ತದೆ.”

Document Courtesy : reporters-collective.in
“ಮಹಾರಾಷ್ಟ್ರ, ಹರಿಯಾಣ ಮತ್ತು ಜಮ್ಮು ಮತ್ತು ಕಾಶ್ಮೀರದ 530 ಕ್ಷೇತ್ರಗಳಿಗೆ (ಸೀಟುಗಳಿಗೆ) ಸಂಬಂಧಿಸಿದಂತೆ ಚುನಾವಣಾಧಿಕಾರಿಗಳ ಈ ವರದಿಗಳನ್ನು ನಾವು ಪಡೆದುಕೊಂಡಿದ್ದೇವೆ. ಅವುಗಳಲ್ಲಿ 200 ಕ್ಷೇತ್ರಗಳ ವರದಿಗಳಲ್ಲಿ, ಮತದಾನದ ಕೊನೆಯ ಗಂಟೆಯಲ್ಲಿ ಚಲಾವಣೆಯಾದ ಮತಗಳ ದಾಖಲೆಯು ಕಾಣೆಯಾಗಿರುವುದು (ಲಭ್ಯವಿಲ್ಲದಿರುವುದು) ನಮಗೆ ಕಂಡುಬಂದಿದೆ” ಎಂದು ಹೇಳಿದ್ದಾರೆ.
“ಎರಡು ಗಂಟೆಗಳಿಗೊಮ್ಮೆ ಮತದಾನದ ಪ್ರಮಾಣವನ್ನು ದಾಖಲಿಸಿರುವುದಕ್ಕೆ ಮಹಾರಾಷ್ಟ್ರದ ಘಾಟ್ಕೋಪರ್ ಪೂರ್ವ (Ghatkopar East) ವಿಧಾನಸಭಾ ಕ್ಷೇತ್ರವು ಒಂದು ಉತ್ತಮ ಉದಾಹರಣೆಯಾಗಿದೆ. ಇಲ್ಲಿ ಚುನಾವಣಾಧಿಕಾರಿಯು ಎರಡು ಗಂಟೆಗಳಿಗೊಮ್ಮೆ ನೀಡುವ ಮತ ಎಣಿಕೆಯಲ್ಲಿ ಲಿಂಗವಾರು (ಪುರುಷ ಮತ್ತು ಮಹಿಳಾ ಮತದಾರರ) ವಿವರವನ್ನೂ ನೀಡಿದ್ದಾರೆ.”

Document Courtesy : reporters-collective.in
“ಮತದಾನದ ಕೊನೆಯ ಗಂಟೆ ಏಕೆ ಮುಖ್ಯವಾಗಿದೆ? ರಾಜಕೀಯ ಪಕ್ಷಗಳ ಮತಗಟ್ಟೆ ಏಜೆಂಟರು ಆ ಸಮಯದ ವೇಳೆಗೆ ಮತಗಟ್ಟೆಯನ್ನು ಅನಾಥವಾಗಿ ಬಿಟ್ಟು ಹೊರಟುಹೋಗುವುದರಿಂದ, ಕೊನೆಯ ಗಂಟೆಯು ನಕಲಿ ಮತದಾನಕ್ಕೆ (ಬೋಗಸ್ ವೋಟಿಂಗ್) ಅತ್ಯಂತ ಹೆಚ್ಚು ತುತ್ತಾಗುವ ಸಾಧ್ಯತೆಯಿರುತ್ತದೆ ಎಂದು ತಜ್ಞರು ಹೇಳುತ್ತಾರೆ.”
“ಚುನಾವಣಾ ಆಯೋಗದ ಸ್ವಂತ ಅಧಿಕಾರಿಗಳೇ ಆಯೋಗದ ನಿಯಮಾವಳಿಗಳನ್ನು (ಪ್ರಕ್ರಿಯೆಯನ್ನು) ಪಾಲಿಸದೆ ಬಿಟ್ಟರೆ, ಆಯೋಗವು ಚುನಾವಣಾ ಅಕ್ರಮಗಳನ್ನು ಪತ್ತೆಹಚ್ಚುವುದಾದರೂ ಹೇಗೆ? ಅಥವಾ ತನ್ನ ಅಧಿಕಾರಿಗಳು ಸಲ್ಲಿಸುವ ಈ ವರದಿಗಳನ್ನು ಚುನಾವಣಾ ಆಯೋಗವು ಪರಿಶೀಲಿಸುವುದೇ ಇಲ್ಲವೇ? ಇದಕ್ಕೆ ಚುನಾವಣಾ ಆಯೋಗವು ಉತ್ತರಿಸಬೇಕಾಗಿದೆ” ಎಂದು ಸುಮೇಧಾ ಮಿತ್ತಲ್ ಹೇಳಿದ್ದಾರೆ.
“2024ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ, ಸಂಜೆ 5 ಗಂಟೆಯ ನಂತರ ನಕಲಿ ಮತದಾನ (ಬೋಗಸ್ ವೋಟಿಂಗ್) ನಡೆದಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿದ್ದವು. ಸಂಜೆ 5 ಗಂಟೆಯ ನಂತರ 76 ಲಕ್ಷ ಮತಗಳು ಚಲಾವಣೆಯಾಗಿವೆ ಎಂದು ಅವು ಪ್ರತಿಪಾದಿಸಿದ್ದವು.”
“ಚುನಾವಣಾ ಆಯೋಗವು ತನ್ನದೇ ಆದ ನಿಯಮಾವಳಿಗಳನ್ನು (ಪ್ರಕ್ರಿಯೆಯನ್ನು) ಉಲ್ಲೇಖಿಸಿ ಅವರ ಆರೋಪಗಳನ್ನು ತಳ್ಳಿಹಾಕಿತ್ತು. ಸಂಜೆ 5 ಗಂಟೆಯ ವೇಳೆಗೆ ಮಹಾರಾಷ್ಟ್ರದಾದ್ಯಂತ ಮತಗಟ್ಟೆಗಳಲ್ಲಿ ಜನರು ಸರತಿ ಸಾಲಿನಲ್ಲಿ ನಿಂತಿದ್ದರಿಂದ ಅಂತಿಮ ಮತದಾನದ ಪ್ರಮಾಣ ಹೆಚ್ಚಾಗಿದೆ ಎಂದು ಮಹಾರಾಷ್ಟ್ರದ ಮುಖ್ಯ ಚುನಾವಣಾಧಿಕಾರಿ ಎಸ್. ಚೊಕ್ಕಲಿಂಗಂ ಪ್ರತಿಪಾದಿಸಿದ್ದರು.”
“ಮಹಾರಾಷ್ಟ್ರದ 288 ಕ್ಷೇತ್ರಗಳ ಪೈಕಿ ಕೇವಲ 174 ಕ್ಷೇತ್ರಗಳಲ್ಲಿ ಮಾತ್ರ ಕೊನೆಯ ಗಂಟೆಯ ಮತದಾನದ ಅಂಕಿಅಂಶವನ್ನು ದಾಖಲಿಸಲಾಗಿದೆ ಎಂಬುದು ನಮಗೆ ಕಂಡುಬಂದಿದೆ. ಉಳಿದ 114 ಕ್ಷೇತ್ರಗಳಲ್ಲಿ, ಸಂಜೆ 5 ಗಂಟೆಯ ನಂತರ ಎಷ್ಟು ಮತಗಳು ಚಲಾವಣೆಯಾಗಿವೆ ಎಂಬುದರ ಕುರಿತು ಚುನಾವಣಾ ಆಯೋಗದ ಬಳಿ ಯಾವುದೇ ದಾಖಲೆ ಇಲ್ಲ. ಹಾಗಾದರೆ, ಮಹಾರಾಷ್ಟ್ರದ ಮುಖ್ಯ ಚುನಾವಣಾಧಿಕಾರಿ ಯಾವ ಆಧಾರದ ಮೇಲೆ ವಿರೋಧ ಪಕ್ಷಗಳ ಆರೋಪಗಳನ್ನು ತಳ್ಳಿಹಾಕಿದರು?” ಎಂದು ಸುಮೇಧಾ ಮಿತ್ತಲ್ ಕೇಳಿದ್ದಾರೆ.
“ಮಹಾರಾಷ್ಟ್ರ, ಹರಿಯಾಣ ಮತ್ತು ಜಮ್ಮು ಮತ್ತು ಕಾಶ್ಮೀರದ 23 ಕ್ಷೇತ್ರಗಳಲ್ಲಿ ಸಂಜೆ 6 ಗಂಟೆಗೆ ವಿತರಿಸಲಾದ ವೋಟರ್ ಸ್ಲಿಪ್ಸ್ ಬಗ್ಗೆಯೂ ಚುನಾವಣಾ ಆಯೋಗದ ಬಳಿ ಯಾವುದೇ ದಾಖಲೆ ಇಲ್ಲ ಎಂಬುದು ನಮಗೆ ತಿಳಿದುಬಂದಿದೆ.”
“ವೆಂಕಟೇಶ್ ನಾಯಕ್ ಅವರು ಸಲ್ಲಿಸಿದ್ದ ಮಾಹಿತಿ ಹಕ್ಕು (ಆರ್ಟಿಐ) ಅರ್ಜಿಗೆ ಉತ್ತರಿಸಿರುವ ಚುನಾವಣಾ ಆಯೋಗವು, 2024ರ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳ ಸಂದರ್ಭದಲ್ಲಿ ಮಹಾರಾಷ್ಟ್ರ ರಾಜ್ಯದಲ್ಲಿ ಸಂಜೆ 6 ಗಂಟೆಗೆ ವಿತರಿಸಲಾದ ವೋಟರ್ ಸ್ಲಿಪ್ಗಳ ಸಂಖ್ಯೆಯ ಬಗ್ಗೆ ತನ್ನ ಬಳಿ ಯಾವುದೇ ದಾಖಲೆ ಇಲ್ಲ ಎಂದು ತಿಳಿಸಿದೆ.”

“ಮತದಾನವು ಅಧಿಕೃತವಾಗಿ ಸಂಜೆ 6 ಗಂಟೆಗೆ ಮುಕ್ತಾಯಗೊಳ್ಳುತ್ತದೆ. ಆ ಸಮಯಕ್ಕೆ ಸರಿಯಾಗಿ, ಸರತಿ ಸಾಲಿನಲ್ಲಿ ಇನ್ನೂ ನಿಂತಿರುವ ಪ್ರತಿಯೊಬ್ಬರಿಗೂ ಚುನಾವಣಾ ಅಧಿಕಾರಿಗಳು ಸ್ಲಿಪ್ಗಳನ್ನು ವಿತರಿಸುತ್ತಾರೆ. ನಿಗದಿತ ಸಮಯದೊಳಗೆ ಈಗಾಗಲೇ ಸಾಲಿನಲ್ಲಿ ನಿಂತಿದ್ದ ಮತದಾರರು ಮಾತ್ರ ಮತ ಚಲಾಯಿಸುವುದನ್ನು ಮತ್ತು ಗಡುವು ಮುಗಿದ ನಂತರ ಯಾರೂ ಹೊಸದಾಗಿ ಸಾಲಿಗೆ ಸೇರುವುದಿಲ್ಲ ಎಂಬುದನ್ನು ಈ ಸ್ಲಿಪ್ಗಳು ಖಚಿತಪಡಿಸುತ್ತವೆ.”
“ಸಂಜೆ 6 ಗಂಟೆಗೆ ಎಷ್ಟು ಮತದಾರರಿಗೆ ಸ್ಲಿಪ್ಗಳನ್ನು ನೀಡಲಾಗಿದೆ ಎಂಬುದರ ಬಗ್ಗೆ ಚುನಾವಣಾ ಆಯೋಗವು ಯಾವುದೇ ದಾಖಲೆಯನ್ನು ಇಟ್ಟುಕೊಂಡಿಲ್ಲ. ಹಾಗಾದರೆ, ಚುನಾವಣೆಯ ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆಯನ್ನು (ಸಮಗ್ರತೆಯನ್ನು) ಆಯೋಗವು ಯಾವ ಆಧಾರದ ಮೇಲೆ ದೃಢೀಕರಿಸಲು ಸಾಧ್ಯ?” ಎಂದು ಸುಮೇಧಾ ಮಿತ್ತಲ್ ಕೇಳಿದ್ದಾರೆ.
“ನಮ್ಮ ‘ಚುನಾವಣಾ ಆಡಿಟ್’ (Election Audit) ಸರಣಿಯಲ್ಲಿ, ಚುನಾವಣಾ ಆಯೋಗವು ಯಾರೊಂದಿಗೂ ಹಂಚಿಕೊಳ್ಳದ ತನ್ನದೇ ಆದ ಆಂತರಿಕ ದಾಖಲೆಗಳನ್ನು ನಾವು ಪರಿಶೀಲಿಸುತ್ತಿದ್ದೇವೆ. ಚುನಾವಣಾ ಆಯೋಗದ ಹೊರಗಿನವರು ಈ ದಾಖಲೆಗಳನ್ನು ಪರಿಶೀಲಿಸುತ್ತಿರುವುದು ಇದೇ ಮೊದಲು” ಎಂದು ಸುಮೇಧಾ ಮಿತ್ತಲ್ ಹೇಳಿದ್ದಾರೆ.
ಸುಮೇಧಾ ಮಿತ್ತಲ್ ಅವರ ಎಕ್ಸ್ ಪೋಸ್ಟ್ ಅನ್ನು ಈ ಕೆಳಗೆ ನೋಡಬಹುದು


